“ಬೌದ್ಧಿಕ ಅಪಕ್ವತೆ, ಗ್ರಹಿಸುವ ಸಾಮಥ್ರ್ಯದಲ್ಲಿ ಇಳಿಕೆ, ಶಬ್ದಾರ್ಥದ ಅಪಾರ್ಥತೆ, ಅಸಹನೆ.. ಮೊದಲಾದ ಮಾನಸಿಕ ಸ್ತಿತ್ಯಂತರಗಳಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣಗಳನ್ನು ಕಾಣುತ್ತೇವೆ. ಇದಕ್ಕೆಲ್ಲಾ ಕಾರಣ ನಿತ್ಯದ ಬದುಕಿನಲ್ಲಿ ಪುಸ್ತಕಗಳ ಓದುವಿಕೆ ಇಲ್ಲದಿರುವುದು. ಪುಸ್ತಕದ ಓದು ಜ್ಞಾನದತ್ತ ಒಯ್ಯುವ ಉಪಾಧಿ. ಬೌದ್ಧಿಕ ಗಟ್ಟಿತನದ ಗುರು.”
ಕಾಂತಾವರ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಏರ್ಯ ಲಕ್ಷ್ಮೀನಾರಾಯಣ ಆಳ್ವರ ಅಭಿಮತವಿದು. ವರ್ತಮಾನದ ಸಾರಸ್ವತ ಲೋಕದ ಬೌದ್ಧಿಕ ಹರಹಿಗೆ ಏರ್ಯರು ದನಿ ನೀಡಿದ್ದಾರೆ. ನಾವಿಂದು ಅಭಿವೃದ್ಧಿ, ತಂತ್ರಜ್ಞಾನ ಎನ್ನುತ್ತಾ ಬೆನ್ನು ತಟ್ಟಿಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ಬೌದ್ಧಿಕವಾಗಿ ಪಕ್ವವಾಗದ ಹೊರತು ನಾಡು ಅಭಿವೃದ್ಧಿಯಾದೀತೆಂದು ಎನ್ನುವಂತಿಲ್ಲ. ಬೌದ್ಧಿಕ ಪಕ್ವತೆಯೆಂದರೆ ನೂರಕ್ಕೆ ನೂರು ಅಂಕ ತೆಗೆಯುವ ಉಪಾಧಿಯಲ್ಲ.
ಏರ್ಯರ ಮಾತು ನನ್ನನ್ನು ಆಗಾಗ್ಗೆ ಕಾಡುತ್ತಿದೆ, ಚುಚ್ಚುತ್ತಿದೆ. ಯಕ್ಷಗಾನವು ಬೌದ್ಧಿಕ ಸಂಪತ್ತಿನ ಆಗರ. ತಾಳಮದ್ದಳೆಯಲ್ಲಿ ಮಾತಿಗೆ ಮಹತ್ತು. ಪ್ರದರ್ಶನದಲ್ಲೂ ನೃತ್ಯಾಭಿನಯದೊಂದಿಗೆ ಮಾತಿಗೂ ತೂಕವಿದೆ. ತೂಕವಿಲ್ಲದ ಮಾತಿನಿಂದ ಪಾತ್ರಗಳು ಸೊರಗುತ್ತವೆ. ಈಚೆಗಿನ ಆಟ, ಕೂಟಗಳಲ್ಲಿ ತೂಕವಿಲ್ಲದ ಮಾತುಗಳು ಒಟ್ಟೂ ಯಕ್ಷಗಾನದ ತೂಕವನ್ನು ಅಣಕಿಸುತ್ತಿವೆ!
ಹವ್ಯಾಸಿ ಆಟ, ಕೂಟಗಳಲ್ಲಂತೂ ಗಮನಿಸುತ್ತಿದ್ದೇನೆ. ಓದುವಿಕೆಯು ದೂರದ ಮಾತು. ಅರ್ಥಗಳನ್ನು ಧ್ವನಿಸುರುಳಿ ಕೇಳಿ, ಉರು ಹೊಡೆದು ಒಪ್ಪಿಸುವ ಚಾಳಿ ಸರ್ವತ್ರವಾಗಿದೆ. ಸ್ವಂತಿಕೆಯಿಂದ ಕಳಚಿಕೊಂಡ ಒಂದೊಂದು ಪದಗಳೂ ನಮ್ಮದಾಗದ ಹೊರತು, ಆಡುವ ಮಾತಿನಲ್ಲಿ ಗಟ್ಟಿನತನವನ್ನು ನಿರೀಕ್ಷಿಸುವಂತಿಲ್ಲ. ಮುಖ್ಯವಾಗಿ ಹವ್ಯಾಸಿ ಆಟಗಳಲ್ಲಿ ಪ್ರಸಂಗ ಪುಸ್ತಕಗಳನ್ನು ಓದದವರು ಎಷ್ಟು ಮಂದಿ ಬೇಕು? ವೇಷ ಧರಿಸಿ ರಂಗಕ್ಕೆ ಇನ್ನೇನು ಪ್ರವೇಶ ಮಾಡಬೇಕು ಎನ್ನುವಷ್ಟರಲ್ಲಿ ಸಹ ಪಾತ್ರಧಾರಿಯೊಂದಿಗೆ ಸಮಾಲೋಚನೆಗೆ ಸಿದ್ಧನಾಗುತ್ತಾನಷ್ಟೇ. ಇದೇ ರೀತಿ ಅಭ್ಯಾಸಿ ಭಾಗವತರಲ್ಲೂ ಗೊಂದಲಗಳಿವೆ.
ಕಟೀಲು ಮೇಳದ ಹಾಸ್ಯಗಾರ ರವಿಶಂಕರ್ ವಳಕುಂಜರು ತನ್ನ ಮೂರು ಪುಸ್ತಕಗಳನ್ನು ಈಚೆಗೆ ನೀಡಿದ್ದರು. ಅದನ್ನು ಓದುತ್ತಿದ್ದಂತೆ ಅನೇಕ ಮಂದಿ ಹವ್ಯಾಸಿ, ವೃತ್ತಿ ಕಲಾವಿದರು ಕಣ್ಣ ಮುಂದೆ ಹಾದು ಹೋದರು. ಪ್ರಸಂಗದ ಪದ್ಯಗಳು, ಪಾತ್ರಗಳ ಬಯೋಡಾಟಗಳು, ಕಥಾ ಹಂದರಗಳ ಜ್ಞಾನವಿಲ್ಲದೆಯೂ ಪಾತ್ರಗಳನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದೇ ಚೋದ್ಯ! ಪೂರ್ತಿ ಕಥಾಭಾಗ ಬಿಡಿ, ತಾನು ನಿರ್ವಹಿಸುವ ಪಾತ್ರದ ಪೂರ್ತಿ ಪರಿಚಯವಿಲ್ಲದೆ ರಂಗದಲ್ಲಿ ಹೇಗೆ ಚಿತ್ರಿಸುತ್ತಾರೋ? ರಂಗ ಒದ್ದಾಟದ ಹಲವು ಕಲಾವಿದರ ರಂಗಕ್ಷಣಗಳಿಗೆ ಸಾಕ್ಷಿಯಾಗಿದ್ದೇನೆ!
ಯಕ್ಷಗಾನ ಪ್ರಸಂಗ ದೃಶ್ಯಾವಳಿ, ವಾಚಿಕ ಸಮಾರಾಧನೆ, ಯಕ್ಷಪಾತ್ರ ದೀಪಿಕಾ – ರವಿಶಂಕರ್ ವಳಕ್ಕುಂಜ ಅವರ ಪುಸ್ತಕಗಳು. ಹವ್ಯಾಸಿ, ವೃತ್ತಿ ಕಲಾವಿದರಲ್ಲಿ ಇರಲೇ ಬೇಕಾದ ಮತ್ತು ಓದಲೇ ಬೇಕಾದ ಪುಸ್ತಕಗಳು. ಪಾತ್ರ ನಿರ್ವಹಣೆಗಳಿಗೆ ಬೇಕಾದ ಕನಿಷ್ಠ ಒಳಸುರಿಗಳನ್ನು ಆತುಕೊಂಡ ಪುಸ್ತಕಗಳು ರವಿಶಂಕರರ ಬಹುಕಾಲದ ಶ್ರಮ. ಮೊದಲೆರಡು ಪುಸ್ತಕಗಳನ್ನು ವಳಕ್ಕುಂಜ ಪ್ರಕಾಶನ ಮಾಡಾವು ಇವರು ಪ್ರಕಾಶಿಸಿದರೆ, ಕೊನೆಯ ಪುಸ್ತಕವನ್ನು ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಪ್ರಕಾಶಿಸಿದೆ. ಬೆಲೆ ಅನುಕ್ರಮವಾಗಿ ರೂಪಾಯಿ ಮುನ್ನೂರೈವತ್ತು, ಮುನ್ನೂರು ಇಪ್ಪತ್ತು ಮತ್ತು ಮುನ್ನೂರು ಎಂಭತ್ತು.
ಯಕ್ಷಗಾನ ಪ್ರಸಂಗ ದೃಶ್ಯಾವಳಿ : ನೂರ ಮೂವತ್ತು ಪ್ರಸಂಗಗಳ ದೃಶ್ಯಾವಳಿಗಳನ್ನು ಪೋಣಿಸಿದ್ದಾರೆ. ಬಹುತೇಕ ಕವಿಗಳ ಹೆಸರೂ ಉಲ್ಲೇಖವಿದೆ. ಒಂದೊಂದು ದೃಶ್ಯದಲ್ಲಿ ಯಾವುದೆಲ್ಲಾ ಸಂಗತಿಗಳು ಬರುತ್ತವೆ, ಪಾತ್ರಗಳ ರಂಗಸಂಚಾರಗಳ ಸರಳ ನಿರೂಪಣೆಗಳಿವೆ. ಯಾವ ದೃಶ್ಯದ ಬಳಿಕ ಯಾವುದು ಎನ್ನುವುದಕ್ಕೆ ಪುಸ್ತಕವೊಂದು ಆಕರ. ಹೊಸ ಯಾ ಚಾಲ್ತಿಯಲ್ಲಿಲ್ಲದ ಪ್ರಸಂಗಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ವಳಕುಂಜರು ಪರಿಹಾರವನ್ನು ನೀಡಿದ್ದಾರೆ. ಪ್ರಸಂಗ ಪುಸ್ತಕಗಳನ್ನು ಓದಲು ಪುರುಸೊತ್ತಿಲ್ಲದ(!) ಮತ್ತು ಓದಲಾಗದವರಲ್ಲಿ ಪುಸ್ತಕ ಜತೆಗಿರಲಿ. ಕೊನೇಪಕ್ಷ ಪ್ರಸಂಗವೊಂದರಲ್ಲಿ ಯಾವುದೆಲ್ಲಾ ದೃಶ್ಯಗಳಿವೆ, ಯಾವ್ಯಾವ ಪಾತ್ರಗಳಿವೆ ಎನ್ನುವ ಕನಿಷ್ಠ ಜ್ಞಾನವನ್ನು ನಮ್ಮದಾಗಿಸುವಲ್ಲಿ ಯಶ ಕಾಣಬಹುದು.
ಯಕ್ಷಗಾನ ವಾಚಿಕ ಸಮಾರಾಧನೆ : ವಿವಿಧ ಪ್ರಸಂಗಗಳ ನೂರ ಇಪ್ಪತ್ತೊಂದು ಪಾತ್ರಗಳು ಇಲ್ಲಿ ಮಾತನಾಡಿವೆ. ಹವ್ಯಾಸಿಗಳಿಗೆ ಅದರಲ್ಲೂ ಅಭ್ಯಾಸಿಗಳಿಗೆ ತುಂಬಾ ಉಪಯುಕ್ತವಾದ ಕೃತಿ. ಪಾತ್ರವೊಂದು ತನ್ನ ಪದ್ಯಕ್ಕೆ ಎಷ್ಟು ಮಾತನಾಡಬೇಕು, ಆ ಪದ್ಯದೊಳಗೆ ಅರ್ಥದ ಹೂರಣಗಳು ಎಷ್ಟಿವೆ ಎನ್ನುವುದರ ದರ್ಶನವಿದೆ. ವಳಕುಂಜರು ತುಂಬಾ ಸರಳವಾಗಿ ಅರ್ಥಗಳನ್ನು ಕಟ್ಟಿಕೊಟ್ಟಿದ್ದಾರೆ. ಎಷ್ಟೋ ಸಲ ಪದ್ಯದ ಛಂದಸ್ಸಿನ ಬಂಧವು ಅರ್ಥಸ್ಫುರಣೆಗೆ ತೊಡಕನ್ನುಂಟುಮಾಡುವುದೂ ಉಂಟು ಅದು ರಚನೆಯ ಗಟ್ಟಿತನ. ಇಂತಹ ಸಂದರ್ಭಗಳಲ್ಲಿ ಪದ್ಯವು ಬಯಸುವ ಅರ್ಥಗಾರಿಕೆಯನ್ನು ಪ್ರಸ್ತುತಪಡಿಸಲು ವೇಷಧಾರಿ ವಿಫಲನಾಗುವುದಿದೆ. ಈ ತೊಡಕನ್ನು ಕೃತಿಯು ನಿವಾರಿಸಿದೆ.
ಯಕ್ಷಗಾನದ ಪೂರ್ಣಾವತಾರಿ ಕೆ. ಗೋವಿಂದ ಭಟ್ಟರು ಒಂದೆಡೆ ಹೇಳುತ್ತಾರೆ, “ಪುಂಡುವೇಷ, ಕಿರೀಟ ವೇಷ, ಸ್ತ್ರೀವೇಷ, ಬಣ್ಣದ ವೇಷ.. ಹೀಗೆ ವಿಭಾಗವನ್ನೂ ಮಾಡಿದ್ದಾರೆ. ಪದ್ಯಗಳ ಸರಳಾನುವಾದ ಇಲ್ಲಿದೆ. ತಾನು ವೇಷ ಮಾಡಬೇಕು ಎನ್ನುವ ಉತ್ಸಾಹಿಗಳಿಗೆ, ಅರ್ಥಾಭ್ಯಾಸಿಗಳಿಗೆ ಮಾರ್ಗದರ್ಶನ ಮಾಡಲು ಇದೊಂದು ಕೈದೀವಿಗೆ. ಇದನ್ನು ಓದಿ ಅರ್ಥ ಹೇಗಿರಬೇಕೆಂಬ ಕಲ್ಪನೆಯು ರಂಗವೇರುವ ಕಿರಿಯರಲ್ಲಿ ಮೂಡುವುದರಲ್ಲಿ ಸಂಶಯವಿಲ್ಲ.”
ಯಕ್ಷಪಾತ್ರ ದೀಪಿಕಾ : ಮೂರನೆಯ ಕೃತಿ. ಪ್ರಸಂಗಗಳಲ್ಲಿ ಬರುವ ಮುನ್ನೂರ ನಲವತ್ತೆರಡು ಪಾತ್ರಗಳ ಸಂಕ್ಷಿಪ್ತ ಬಯೋಡಾಟಗಳಿವೆ. ಎಷ್ಟೋ ಸಲ ಪಾತ್ರ ಪ್ರಸ್ತುತಿಯಲ್ಲಿ ಪಾತ್ರಗಳ ವಿವರಗಳನ್ನು ನೀಡುವಲ್ಲಿ ಕಲಾವಿದರು ಸೋಲುವುದಿದೆ. ಈ ಕೃತಿಯು ಪಾತ್ರಗಳ ಸ್ವಪರಿಚಯವನ್ನು ನೀಡುತ್ತದೆ. ಜತೆಗೆ ಅರುವತ್ತನಾಲ್ಕು ಪ್ರಸಂಗಗಳ ದೃಶ್ಯಾವಳಿಗಳನ್ನು ಸೇರಿಸಿದ್ದಾರೆ. ಮೊದಲ ಪುಸ್ತಕದ ಹೂರಣದ ಮುಂದುವರಿದ ಭಾಗ.
ಯಕ್ಷಗಾನ ವಿಮರ್ಶಕ, ವಿದ್ವಾಂಸ ಕೆ.ಎಂ.ರಾಘವ ನಂಬಿಯಾರ್ ಈ ಪುಸ್ತಕದ ಮುನ್ನುಡಿಯಲ್ಲಿ ವಳಕ್ಕುಂಜರ ಮೂರು ಪುಸ್ತಕಗಳ ಶ್ರಮವನ್ನು ನೇವರಿಸಿದ್ದಾರೆ – “ಬರಹಕ್ಕೆ ಮಹತ್ವ ಬರುವುದು ಕೃತಿಯ ಉಪಯೋಗದ ನೆಲೆಯಿಂದ. ಚಾಲ್ತಿಯ ಯಾವುದೇ ಪ್ರಸಂಗವನ್ನು ಆಡಿಸಿ ಗೊತ್ತಿಲ್ಲದ ಭಾಗವತ, ವಳಕ್ಕುಂಜ ಅವರ ‘ಯಕ್ಷಗಾನ ಪ್ರಸಂಗ ದೃಶ್ಯಾವಳೀ’ ಕೈಗೆ ಬಂದರೆ ಸಲೀಸಾಗಿ ಆಟ ಆಡಿಸಬಲ್ಲ. ಯಕ್ಷಗಾನ ರಂಗದ ಬರಹಗಾರಿಕೆಯಲ್ಲಿ ಹೊಸ ಕ್ಷಿತಿಜವನ್ನು ಎರೆದ ಕೃತಿಯಿದು. ಇನ್ನೊಂದು ‘ವಾಚಿಕ ಸಮಾರಾಧನೆ’ - ಹಿಂದೆ ಹಾಸ್ಯಗಾರರು ಎಳೆಯ ವೇಷಧಾರಿಗಳಿಗೆ ಬಿಡಿಯಾಗಿ ಅರ್ಥ ಹೇಳಿಕೊಡುವ ಪರಿಪಾಠವಿತ್ತು. ಈ ಪರಂಪರೆಯನ್ನು ರವಿಶಂಕರ್ ಪುಸ್ತಕ ರಚನೆ ಮೂಲಕ ಮುಂದುವರಿಸಿದ್ದಾರೆ. ‘ಯಕ್ಷಪಾತ್ರ ದೀಪಿಕಾ’ - ಯಕ್ಷಗಾನ ಪ್ರಸಂಗಗಳಲ್ಲಿ ಪರಾಮರ್ಶೆಗೆ ಬರುವ ಪೌರಾಣಿಕ ಪಾತ್ರಗಳ ವಿವರಗಳನ್ನು ಸಂಕ್ಷಿಪ್ತವಾಗಿ ನೀಡಿರುವುದು ಕಲಾವಿದರಿಗೆ ಉಪಯುಕ್ತ.”
ಹವ್ಯಾಸಿ ಕ್ಷೇತ್ರದ, ಕೆಲವೊಮ್ಮೆ ವೃತ್ತಿ ರಂಗದ ಕಲಾವಿದರಿಗೂ ಉಪಯುಕ್ತವಾಗುವಂತೆ – ರೆಡಿ ಟು ಯೂಸ್ – ಕೃತಿಗಳನ್ನು ವಳಕ್ಕುಂಜರು ರಚಿಸಿದ್ದಾರೆ. ಓರ್ವ ವೃತ್ತಿ ರಂಗದ ಕಲಾವಿದ ಆ ರಂಗದ ಬೌದ್ಧಿಕ ಅಭಿವೃದ್ಧಿಯತ್ತ ಯೋಚಿಸಿ ದೊಡ್ಡ ಹೆಜ್ಜೆಯೂರಿರುವುದು ಶ್ಲಾಘ್ಯ. ಪುಸ್ತಕದ ಹೂರಣಗಳು ಏನೋ ಯಶ ಕಂಡಿವೆ. ಕಲಾವಿದರು ಇದನ್ನು ಬಳಸಿದಾಗ ಮಾತ್ರ ಕೃತಿ ರಚನೆಗೆ ಸಾರ್ಥಕ್ಯ ಬರುವುದು. ಇಂದು ವಾಟ್ಸಾಪ್ಗಳು ಅಂಗೈಯಲ್ಲಿ ಭದ್ರವಾಗಿವೆ. ಪುಸ್ತಕಗಳ ಅಕ್ಷರಗಳು ಮಯಮಯವಾಗಿ ಕಾಣುತ್ತವೆ! ವೈಯಕ್ತಿಕವಾದ ಬೌದ್ಧಿಕ ಅಭಿವೃದ್ಧಿಗೆ ಯಕ್ಷಗಾನ ಕಲಾವಿದರು – ವೇಷಧಾರಿಗಳು, ಭಾಗವತರು - ಪುಸ್ತಕಗಳನ್ನು ಹಿಡಿಯದೆ ಅನ್ಯ ಮಾರ್ಗವಿಲ್ಲ. ಏರ್ಯ ಆಳ್ವರು ಹೇಳಿದಂತೆ ಪುಸ್ತಕದ ಓದು ನಿಜಾರ್ಥದಲ್ಲಿ ನಮ್ಮ ಬದುಕಿನ ಕೈತಾಂಗು.
ನಂಬಿಯಾರರು ಮುನ್ನುಡಿಯಲ್ಲಿ ಒಂದು ಮಾತನ್ನು ಹೇಳಿದ್ದಾರೆ. ರಂಗದ ಈಗಿನ ಅಗತ್ಯ ಮತ್ತು ಅನಿವಾರ್ಯತೆ ಎಲ್ಲಿದೆ ಎನ್ನುವುದನ್ನು ಸೂಕ್ಷ್ಮವಾಗಿ ಉಲ್ಲೇಖಿಸಿದ್ದಾರೆ – ರವಿಶಂಕರ್ ವಳಕ್ಕುಂಜರು ವಿದ್ಯಾವಂತರು ಮಾತ್ರವಲ್ಲ ವಿನಯವಂತರು ಕೂಡಾ. ಇವರಂತಹ ಹತ್ತು ಮಂದಿ ಯುವಕರು ರಂಗದ ಸ್ವರೂಪವನ್ನು ಸರಿಯಾಗಿ ಅರ್ಥಮಾಡಿಕೊಂಡು ಪ್ರಾಮಾಣಿಕವಾಗಿ ದುಡಿದರೆ ಯಕ್ಷಗಾನಕ್ಕೆ ನಷ್ಟವಾಗಿರುವ ಪ್ರಾಧಾನ್ಯವನ್ನು ಪುನಃ ಸ್ಥಾಪಿಸಬಹುದು.. ..ಇಂಥವರು ಇರುವವರೆಗೆ ಯಾವ ನಿರಾಸೆಗೂ ಅವಕಾಶವಿಲ್ಲ. ಯಕ್ಷಗಾನವು ಮುಂದಿನ ತಲೆಮಾರಿಗೆ ಸುರಕ್ಷಿತವಾಗಿ ತಲಪುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”
ಪ್ರಜಾವಾಣಿ / ದಧಿಗಿಣತೋ ಅಂಕಣ / 23-2-2018
No comments:
Post a Comment