Saturday, June 23, 2018

ಶ್ರವಣ ಶಕ್ತಿಯನ್ನು ಕಸಿಯುತ್ತಿರುವ ಹೈ ವಾಲ್ಯೂಮ್!



           ಅದೊಂದು ಜೋಡಾಟ. ವೇಷಗಳು ಸ್ಪರ್ಧೆಯ ಜಿದ್ದಿಗೆ ಬಿದ್ದಂತೆ ದುಡಿಯುತ್ತಿವೆ, ದುಡಿಯಬೇಕು, ರಂಗವೇ ದುಡಿಸುತ್ತದೆ! ಕೊನೆಗೆ ದಣಿಸುತ್ತದೆ. ಅಂದಿನ ಜೋಡಾಟದಲ್ಲಿ ವೇಷಗಳು ದಣಿಯಲಿಲ್ಲ! ಆಟ ನೋಡಲು ಬಂದ ಸುಮಾರು ಐನೂರು ಸಭಾಸದರು ದಣಿದಿದ್ದರು! ಎರಡೂ ಮೇಳಗಳ ಧ್ವನಿವರ್ಧಕಗಳಲ್ಲಿ ಪೈಪೋಟಿ. ಅದರಿಂದ ಹೊರಹೊಮ್ಮುವ ಧ್ವನಿಯ ಧಾರಿಕೆಯ ಪರೀಕ್ಷೆ! ಮದ್ದಳೆಗೆ ಎರಡು, ಭಾಗವತರಿಗೆ ಎರಡು, ಚೆಂಡೆಗೊಂದು ಅಲ್ಲದೆ ಭಾಗವತರ ಪಡಿಮಂಚದಲ್ಲಿ ಮತ್ತೊಂದು, ಎಂದಿನಂತೆ ರಂಗದ ಮುಂಭಾಗ, ಮೇಲ್ಭಾಗಗಳಲ್ಲಿ ಮೈಕ್ರೋಫೋನ್ಗಳ ಅಲಂಕಾರ.
          ಆಟ ಶುರುವಾಯಿತು. ಒಂದರ್ಧ ಗಂಟೆಯಷ್ಟೇ. ಪ್ರೇಕ್ಷಕರ ಕಿವಿಗಳುಭಯಂಕರ ಧ್ವನಿಗೆ ಮುಷ್ಕರ ಹೂಡಿದುವು. ನಿಧಾನಕ್ಕೆ ಧ್ವನಿಯನ್ನು ತಾಳಲಾರದೆ ಕರಗಲಾರಂಭಿಸಿದರು. ಅವರೊಳಗಿನ ಅಂದಿನ ಆಟ ನೋಡುವ ಭಾವವೂ ಜತಜತೆಗೆ ಕರಗುತ್ತಿತ್ತು. ನಡುರಾತ್ರಿ ಕಳೆಯುವಾಗ ಬೆರಳೆಣಿಕೆಯ ಮಂದಿಯಷ್ಟೇ ಪ್ರೇಕ್ಷಕರಾಗಿ ಉಳಿದಿದ್ದರು. ಆಟಕ್ಕೆ ಬಂದ ಬಹುತೇಕರಿಗೆ ಮೈಕಾಸುರನ ಭಯವೂ ಅಂಟಿತ್ತು! ಪ್ರೇಕ್ಷಕರನ್ನು ಉಳಿಸಿಕೊಳ್ಳಲಾಗದಷ್ಟು ಧ್ವನಿವರ್ಧಕ ವ್ಯವಸ್ಥೆಗಳು ವರ್ತಮಾನದ ಪ್ರದರ್ಶನಗಳಲ್ಲಿ ಅನಿವಾರ್ಯ ಅನ್ನಿಸುವಷ್ಟು ಸ್ಥಾಪಿತವಾಗಿದೆ.
           ಧ್ವನಿವರ್ಧಕ ಪರಿಕರಗಳು ಮೊದಲಿನಂತೆ ಅಲ್ಲ, ಈಗ ತುಂಬಾ ಸುಧಾರಿಸಿವೆ. ಸ್ವರಗಳನ್ನು ಬೇಕಾದಂತೆ, ಬೇಕಾದಷ್ಟು ಪ್ರೇಕ್ಷಕರ ಕಿವಿಗಳಿಗೆ ಸುರಿಯುವ ತಂತ್ರಜ್ಞಾನಗಳು ಬಂದಿವೆ. ಇದನ್ನು ಬಳಸುವಲ್ಲಿ ಬಹುತೇಕ ಕಡೆ ಧ್ವನಿವರ್ಧಕದ ಯಜಮಾನರಿಗೆ ಜ್ಞಾನದ ತೊಡಕು ಕಾಣುತ್ತದೆ. ಯಾವ್ಯಾವ ಕಲಾಪಕ್ಕೆ ಎಷ್ಟೆಷ್ಟು ಧ್ವನಿಗಳನ್ನು ಸೆಟ್ ಮಾಡಬೇಕು, ಅಲ್ಲಿನ ರಂಗಾಳ್ತನದ ವಿಸ್ತಾರಕ್ಕೆ ಯಾವ ತರಹದ ಮೈಕ್ ವ್ಯವಸ್ಥೆಗಳು ಬೇಕೆನ್ನುವುದು ತಿಳಿದಿರಬೇಕು. ಲೋಪಗಳನ್ನು ತೋರಿಸಿದಾಗ ಒಬ್ಬರ ಕಣ್ಣಂತೂ ಕೆಂಪಗಾಯಿತು - “ಸಾಲ ಮಾಡಿ, ಲಕ್ಷಗಟ್ಟಲೆ ದುಡ್ಡನ್ನು ಮೈಕ್ಸೆಟ್ಟಿಗೆ ಹಾಕಿದ್ದೇನೆ. ನಮ್ಮ ಅವಸ್ಥೆ ನಿಮಗೇನು ಗೊತ್ತು....”
                ಅವರು ಮಾಡಿದ ಸಾಲಕ್ಕೂ, ಯಕ್ಷಗಾನ ಪ್ರದರ್ಶನಕ್ಕೂ ಎಲ್ಲಿಯ ಸಂಬಂಧ! ಸರಿ, ತಂತ್ರಜ್ಞರೇ ಇದ್ದಾರೆ ಎಂದಿಟ್ಟುಕೊಳ್ಳೋಣ. ಅವರ ಯೋಜನೆಗಳು, ಯೋಚನೆಗಳು ನಮ್ಮ ಕಲಾವಿದರಿಗೆ ಹೊಂದುವುದೇ ಇಲ್ಲ! ತನ್ನ ಸ್ವರಕ್ಕೆ ಮೈಕಿನ ವಾಲ್ಯೂಮ್ ಎಷ್ಟು ಬೇಕು ಎನ್ನುವ ಪರಿಜ್ಞಾನ ಭಾಗವತರಿಗೆ ಇಲ್ಲದಿದ್ದರೆ ಮೈಕಿನ ತಂತ್ರಜ್ಞ ಏನು ಮಾಡಿಯಾರು? ಪ್ರದರ್ಶನ ಪೂರ್ವದಲ್ಲಿ ವಿಚಾರದಲ್ಲಿ ಭಾಗವತರಿಗೂ ಮೈಕಿನವರಿಗೂ ಜಟಾಪಟಿ ಮಾಮೂಲಿಯಾಗಿದೆ. ಜತೆಗೆ ಮದ್ದಳೆಯ ಎಡ-ಬಲದ ಧ್ವನಿಯ ಏರಿಳಿತದಲ್ಲೂ ತಕರಾರು. ಈಗೀಗ ಅಲ್ಲಿಲ್ಲಿ ಚೆಂಡೆಗೂ ಮೈಕ್ರೋಫೋನ್ ಒದಗಿಸುವುದನ್ನು ನೋಡಿದ್ದೇನೆ. ವಾಲ್ಯೂಮ್, ಶಾರ್ಪ್, ಏರಿಳಿತಗಳೊಳಗೆ ಗುದ್ದಾಡುತ್ತಾ, ಪ್ರದರ್ಶನದ ಒಂದರ್ಧ ಗಂಟೆಯನ್ನು ಕಬಳಿಸಿದ್ದು ಗೊತ್ತಾಗುವಾಗ ಹೊತ್ತಾಗಿರುತ್ತದೆ.
                ಕಲಾವಿದರಿಗೆ ತೃಪ್ತಿಯಾಗುವಷ್ಟು ವ್ಯವಸ್ಥೆ ಆಯಿತೆನ್ನಿ. ಇವರ ಹಾಡನ್ನೋ, ಚೆಂಡೆ-ಮದ್ದಳೆಗಳ ಸುಖವನ್ನೋ ಅನುಭವಿಸೋಣ ಎಂದರೆ ಅತಿ ಧ್ವನಿಯು ಪ್ರೇಕ್ಷಕರ ಪಾಲಿಗೆ ಶಾಪವಾಗಿದೆ. ಎಲ್ಲರ ಕೈಯೂ ಕಿವಿಯನ್ನಾನಿಸಿಕೊಂಡಿರುತ್ತದೆ! ಅತಿ ಧ್ವನಿಯಿಂದ ಕಿವಿ ಮುಚ್ಚಿಕೊಳ್ಳುವ, ಎದ್ದು ಹೋಗುವ ಮನಃಸ್ಥಿತಿಯನ್ನು ಪ್ರೇಕ್ಷಕ ಹೊಂದಿರುವುದನ್ನು ಬಹಳ ಸಂದರ್ಭಗಳಲ್ಲಿ ನೋಡಿದ್ದೇನೆ. ಪ್ರೇಕ್ಷಕನೇ ಹೋಗಿ ಮೈಕಿನವರಲ್ಲಿ ಗೊಣಗಾಡಿದರೆ ಸ್ಟೇಜಿನತ್ತ ಬೆರಳು ತೋರುತ್ತಾರೆ! ಇಷ್ಟೊಂದುಭಯಾನಕಸಂದರ್ಭಗಳನ್ನು ಧ್ವನಿವರ್ಧಕಗಳು ಸೃಷ್ಟಿಸುತ್ತವೆ ಎಂದಾದರೆ ಕಾಯಕಲ್ಪ ಆಗಬೇಕಾದುದು ಎಲ್ಲಿ? ಮಾಡಬೇಕಾದವರು ಯಾರು? ಅತಿ ವ್ಯವಸ್ಥೆಗಳಿಂದ ಕಲಾವಿದರಿಗೆ ರಂಗಸುಖ ಪ್ರಾಪ್ತವಾಗುತ್ತದೆ ಎನ್ನೋಣವೇ?
                ಧ್ವನಿವರ್ಧಕ ತಂತ್ರಜ್ಞಾನವನ್ನು ಬಳಸುವುದು ಕೂಡಾ ವಿಜ್ಞಾನ. ಯಕ್ಷಗಾನದಂತಹ ಭಾವಪ್ರಧಾನ ಪ್ರಕಾರವು ಎಷ್ಟು ಪ್ರಮಾಣದ ಧ್ವನಿಯನ್ನು ಬಯಸುತ್ತದೆ? ಭಾಗವತರ ಸ್ವರದೊಂದಿಗೆ ಚೆಂಡೆ-ಮದ್ದಳೆಗಳು ವಿಲೀನಗೊಳ್ಳುವುದೋ ಅಥವಾ ಸ್ವರದೊಂದಿಗೆ ಪೈಪೋಟಿಯೋ? ಪೈಪೋಟಿಯಾದರೆ ಎಷ್ಟು ಪ್ರಮಾಣದಲ್ಲಿ? ತಾವು ಕೈಗೊಳ್ಳುವ ವೃತ್ತಿ-ಪ್ರವೃತ್ತಿಯ ಸುಖವನ್ನು ಧ್ವನಿಗಳು ಉದ್ದೀಪನಗೊಳಿಸುವುದೇ? ಅತೀ ಹೆಚ್ಚಿನ ವಾಲ್ಯೂಮ್ನಲ್ಲಿ ಪ್ರಸ್ತುತವಾದರೆ ತಾರಾಮೌಲ್ಯ ಅರಸಿ ಬರುವುದಿದೆಯೇ? ... ಹೀಗೆಲ್ಲಾ ಗೊಟಗಾಟದ ಪ್ರಶ್ನೆಗಳು ರಾಚುತ್ತವೆ. ಇದು ನನ್ನ ವೈಯಕ್ತಿವಾದ ಅಜ್ಞಾನವೂ ಇರಬಹುದು          
              ಸ್ವತ ಭಾಗವತರಾಗಿರುವ ಸುಬ್ರಾಯ ಸಂಪಾಜೆಯವರು ಒಂದೆಡೆ ವಿಶ್ಲೇಷಿಸುತ್ತಾರೆ -  ಭಾಗವತನ ಬಾಯಿಯಿಂದ ಮೈಕ್  ಕನಿಷ್ಠ ಐದರಿಂದ ಆರಿಂಚು ದೂರವಿರಲಿ. ಎಕೋ ಅನಿವಾರ್ಯವೇ? ಎಕೋ ಕೊಡುವುದರಿಂದ ಜನರಿಗೆ ಮುಟ್ಟುವುದು ಅಸಹಜ ಸ್ವರ. ಮದ್ದಳೆಗೆ ಮೈಕ್ ಬೇಕು. ಆದರೆ ವಾಲ್ಯೂಮ್ ಎಷ್ಟು ಬೇಕೋ ಅಷ್ಟೇ ಇರಲಿ. ಅದನ್ನು ಸೂತ್ರಧಾರ ನಿರ್ಣಯಿಸಲಿ. ಮದ್ದಳೆಯ ವಾಲ್ಯೂಮ್ ಹೆಚ್ಚಿಸುವುದರಿಂದ ಭಾಗವತನಿಗೆ ಕಿರಿಕಿರಿ. ಪ್ರಸಂಗ ಸಾಹಿತ್ಯ ಮುಚ್ಚಿಹೋಗುತ್ತದೆ. ಭಾಗವತನ ಮೈಕ್ ವಾಲ್ಯೂಮ್ ಹೆಚ್ಚಿಸಿ ಮುಮ್ಮೇಳದವರ ವಾಲ್ಯೂಮ್ ತಗ್ಗಿಸಿದರೆ ಸಂತುಲಿತ ಕೇಳುವಿಕೆಗೆ ಕೊಡಲಿಯೇಟು ಬಿದ್ದಂತೆ!”
            ವಿಮರ್ಶಕ ಡಾ.ಎಂ.ಪ್ರಭಾಕರ ಜೋಷಿಯವರು ಟೊರೆಂಟೋಗೆ ಪ್ರವಾಸ ಹೋಗಿದ್ದರು. ತಾಳಮದ್ದಳೆಯಲ್ಲಿ ಭಾಗವಹಿಸಿದ್ದರು. ಅಲ್ಲಿನ ಮತ್ತು ಇಲ್ಲಿನ ಧ್ವನಿವರ್ಧಕ ವ್ಯವಸ್ಥೆಗಳನ್ನೊಮ್ಮೆ ಮಾತಿನ ಮಧ್ಯೆ ವಿವರಿಸಿದ್ದರು - “ನಮ್ಮಲ್ಲಿ ಧ್ವನಿವರ್ಧಕದ ಬೊಬ್ಬಾಟದಿಂದಾಗಿ ಯಕ್ಷಗಾನವನ್ನು ವೀಕ್ಷಿಸುವುದು, ಆಲಿಸುವುದು ತೀರಾ ಹಿಂಸೆ! ಎಲ್ಲಿಯವರೆಗೆ ಅಂದರೆ ಧ್ವನಿಯ ಅಟ್ಟಹಾಸಕ್ಕೆ ಪ್ರೇಕ್ಷಕರೇ ಎದ್ದು ಹೋಗಿರುವುದನ್ನು ನೋಡಿದ್ದೇನೆ. ಕಲಾವಿದರಿಗೆ ವಾಲ್ಯೂಮ್ ಹೈ ಮತ್ತು ಶಾರ್ಪ್ ಕೊಟ್ಟಷ್ಟು ಸಂತೃಪ್ತಿ. ಎಷ್ಟೋ ಸಲ ಭಾಗವತಿಕೆಯನ್ನು ಚೆಂಡೆ, ಮದ್ದಳೆಗಳ ನುಡಿತಗಳು ನುಂಗಿಬಿಡುತ್ತವೆ! ಹೈ ವಾಲ್ಯೂಮ್ನಿಂದ ಬಹುತೇಕರ ಕಿವಿ ಸ್ತಬ್ಧವಾಗಿದೆ!”
            “ಟೊರೆಂಟೋದಲ್ಲಿ ಕಾರ್ಯಕ್ರಮಕ್ಕೆ ಒಂದರ್ಧ ಗಂಟೆ ಮೊದಲು ಮೈಕ್ ಬ್ಯಾಲೆನ್ಸ್ ಮಾಡಿಬಿಡುತ್ತಾರೆ. ಮಧ್ಯೆ ಮಧ್ಯೆ ಏರಿಸುವ, ಇಳಿಸುವ ಪ್ರಕ್ರಿಯೆ ಇಲ್ಲ. ಹೆಚ್ಚಿನವರು ಇಲೆಕ್ಟ್ರಾನಿಕ್ ಇಂಜಿನಿಯರ್ಗಳು. ಅವರಿಗೆ ಧ್ವನಿವರ್ಧಕದ ಬಳಕೆಯ ಜ್ಞಾನವಿದೆ. ಅದರ ಅಳವಡಿಕೆ, ನಿರ್ವಹಣೆಯ ವಿಧಾನ, ವಿಕಾರವಾಗಿ ಬೊಬ್ಬಿಡದಕೆಣಿಗಳನ್ನು ನಾವು ಅಲ್ಲಿಂದ ಕಲಿಯಬೇಕಾದುದು ಬೇಕಾದಷ್ಟಿದೆ. ಪ್ರೇಕ್ಷಕರ ಶ್ರವಣ ಶಕ್ತಿಯನ್ನು ಕಾರ್ಯಕ್ರಮಗಳು ಕಸಿದುಕೊಳ್ಳುವುದಿಲ್ಲ! ನಮ್ಮಲ್ಲೂ ಇಂತಹ ಪ್ರಕ್ರಿಯೆಗಳತ್ತ ಯೋಚಿಸಬೇಕು.”
           ಹೀಗೆಲ್ಲ ವಿಮರ್ಶಿಸಿದರೆ ಕಲಾವಿದ ಬಂಧುಗಳಿಂದ ಋಣಾತ್ಮಕವಾದ ಪ್ರತಿಕ್ರಿಯೆ ಬಂದು ಬಿಡುತ್ತದೆ. ಧ್ವನಿವರ್ಧಕದ ಸೂಕ್ಷ್ಮಗಳನ್ನು ಭಾಗವತರೊಬ್ಬರಲ್ಲಿ ವಿಷದೀಕರಿಸಿದೆ. ‘ಹಾಗಿದ್ದರೆ ಮೈಕ್ ಬೇಡ್ವೋ?’ ಎನ್ನುವ ತಕ್ಷಣದ ಅಡ್ಡ ಮಾತು ಬಂದಾಗ ನಾನು ಮೌನವಾದೆ. ಕೆಲವರು ಹೇಳುವುದನ್ನು ಕೇಳಿದ್ದೇನೆ, “ಮೈಕ್ ವಾಲ್ಯೂಮ್ ಹೆಚ್ಚು ಇದ್ದಷ್ಟೂ ಹಿಮ್ಮೇಳವು ಪ್ರೇಕ್ಷಕರ ಮನಸ್ಸನ್ನು ಕೆರಳಿಸುತ್ತದೆ!” ಯಕ್ಷಗಾನಕ್ಕೆ ಕೆರಳಿಸುವ ಹಿಮ್ಮೇಳ ದಯವಿಟ್ಟು ಬೇಡ, ಅರಳಿಸುವ ಹಿಮ್ಮೇಳ ಬೇಕು. ಹಿಮ್ಮೇಳವು ನಾದಸುಖವನ್ನು ನೀಡಿದಾಗ ಮಾತ್ರ ಪರಿಣಾಮ. ಹಿನ್ನೆಲೆಯಲ್ಲಿ ಹಿಮ್ಮೇಳ ಕಲಾವಿದರೇ ಧ್ವನಿವರ್ಧಕದ ಧ್ವನಿಯ ಸಾಂದ್ರತೆಯನ್ನು ತಾವೇ ನಿಶ್ಚಯಿಸಬೇಕಾಗಿದೆ. ಬೇಕಾದರೆ ರಂಗಕ್ಕೆ ತಾಗಿಕೊಂಡಿರುವ ಫೀಡ್ಬ್ಯಾಕ್ ಸ್ಪೀಕರ್ ಏನಿದೆಯೋ ಅದಕ್ಕೆ ಮಾತ್ರ ಗರಿಷ್ಠ ಧ್ವನಿಯನ್ನು ನೀಡಿ, ಉಳಿದಲ್ಲಾ ಸ್ಪೀಕರ್ಗಳಿಗೆ ಕರ್ಣಸುಖದಷ್ಟೇ ಧ್ವನಿಯನ್ನು ಫಿಕ್ಸ್ ಮಾಡಬಹುದೇನೋ? ಗೊತ್ತಿಲ್ಲ.
             ಯಕ್ಷಗಾನದ ಕುರಿತಾದ ಕಮ್ಮಟ, ವಿಚಾರಗೋಷ್ಠಿಗಳು ನಡೆಯುತ್ತಲೇ ಬಂದಿವೆ, ಇನ್ನೂ ನಡೆಯುತ್ತದೆ. ಧ್ವನಿವರ್ಧಕ, ಬೆಳಕು, ಆಡಂಬರ, ಗೌಜಿ ಇಂತಹ ಸೂಕ್ಷ್ಮ ವಿಚಾರಗಳತ್ತ ಮಾತುಕತೆ ನಡೆಯಬೇಕು. ಪ್ರಾತಿನಿಧಿಕ ಕಲಾವಿದರು, ತಂತ್ರಜ್ಞರು ಭಾಗವಹಿಸಿ ಪ್ರಾಯೋಗಿಕವಾದ ಹೆಜ್ಜೆಯೂರಬಹುದು. ಇದೇನೂ ಯಕ್ಷಗಾನಕ್ಕೆ ದೊಡ್ಡ ಕೊಡುಗೆಯಾಗದಿದ್ದರೂ, ಇರುವ ಒಂದಷ್ಟು ಮಂದಿ ಪ್ರೇಕ್ಷಕರನ್ನು ಉಳಿಸಿಕೊಳ್ಳುವಲ್ಲಿ ಸಹಕಾರಿಯಾದೀತು!

ಸಾಂದರ್ಭಿಕ ಚಿತ್ರ : ಅನಿಲ್ ಎಸ್. ಕರ್ಕೇರಾ
Prajavani / ದಧಿಗಿಣತೋ / 30-3-2018


No comments:

Post a Comment