Tuesday, June 26, 2018

ಬಣ್ಣದ ಮನೆಯ ಕಾಣದ ಬಣ್ಣಗಳು

ಸಾಂದರ್ಭಿಕ ಚಿತ್ರ : ಅನಿಲ್ ಎಸ್. ಕರ್ಕೇರಾ

          ಯಕ್ಷಗಾನ ರಮ್ಯಾದ್ಭುತ ಕಲೆ. ಒಮ್ಮೆ ಅದರ ಅಪ್ಪುಗೆಗೆ ಸಿಕ್ಕರೆ ಬಿಡಿಸಲಾಗದ ಬಂಧ. ನವರಸಭರಿತ ಭಾವಗಳ ಒಳಸುರಿಗಳನ್ನು ಹೊಂದಿರುವುದು ವೈಶಿಷ್ಟ್ಯ. ಹಲವು ಮಂದಿ ಹಿರಿಯ ಕಲಾವಿದರ ತ್ಯಾಗ, ಕೊಡುಗೆಗಳು ರಂಗದ ಜೀವಧಾತುಗಳು. ಕಾಲದ ಪಲ್ಲಟಕ್ಕೆ ಕಲೆಯು ಸಿಲುಕಿದರೂ, ಸಿಲುಕದಂತೆ ತಾಜಾ ಆಗಿರುವುದು ಯಕ್ಷಗಾನದ ತಾಕತ್ತು. ಕಲೆಗೆ ಕಲಾವಿದ, ಕಲಾವಿದನಿಗೆ ಕಲೆ ಎರಡೂ ಅವಶ್ಯ ಬೇಕುಗಳು. ಕೆಲವೊಮ್ಮೆ ಕಲೆಯು ಕಲಾವಿದನ ಹಂಗಿಗಿಂತ ದೂರ ನಿಲ್ಲಲೂಬಹುದು! ದೂರ ನಿಂತರೂ ಪಲ್ಲಟಗೊಳ್ಳದಷ್ಟು ಸದೃಢ. ಆದರೆ ಕಲಾವಿದನಿಗೆ ಕಲೆಯ ಹೊರತು ಅನ್ಯ ಬದುಕಿಲ್ಲ. ತನಗೆ ಕಲೆಯ ಹಂಗಿಲ್ಲ ಎನ್ನುವುದನ್ನು ಮರೆಯುವ, ಒಪ್ಪುವ ಕಲಾವಿದ ತನ್ನ ಹವ್ಯಾಸ/ವೃತ್ತಿಯನ್ನು ಬದಲಿಸಲು ಸೂಕ್ತಕಾಲ!
           ಕಲೆಯೊಂದರ ಸರ್ವಾಂಗ ಸುಂದರತೆಯು ಕಲಾವಿದನ ಬೌದ್ಧಿಕ ಸಾಮಥ್ರ್ಯದ ಹರಹಿಗೆ ತಕ್ಕಂತೆ ಅನಾವರಣಗೊಳ್ಳುವುದು. ಇಲ್ಲಿ ಬೌದ್ಧಿಕತೆ ಎಂದರೆ ಶೈಕ್ಷಣಿಕವಾಗಿ ಎಷ್ಟು ಓದಿದ್ದಾರೆ ಎಂದಲ್ಲ. ಕಡಿಮೆ ಓದಿದ ಹಿರಿಯರು ರಂಗದಲ್ಲಿ ಊರಿದ ದೊಡ್ಡ ಹೆಜ್ಜೆಯ ಮುಂದೆ, ಸಾಕ್ಷರರಾಗಿ ಬೆಳೆದಿದ್ದೇವೆ ಎಂದು ನಂಬಲಾದ ನಾವೀಗ ಚಿಕ್ಕ ಹೆಜ್ಜೆಯೂರಲೂ ಹಿಂದೆ ಮುಂದೆ ಯೋಚಿಸುತ್ತೇವೆ! ರಂಗದಲ್ಲಿ ವ್ಯವಸಾಯ ಮಾಡುತ್ತಾ ತಾನೂ ಬೆಳೆಯುತ್ತಾ, ರಂಗವನ್ನೂ ಬೆಳೆಸುತ್ತಾ ಸಾಗುವುದು ಇದೆಯಲ್ಲಾ ಅದು ಯಕ್ಷಗಾನ ಶೈಕ್ಷಣಿಕತೆ. ಅಲಿಖಿತ ಸಾಹಿತ್ಯದ ಅಸಾಮಾನ್ಯತೆ.
          ಯಕ್ಷಗಾನದಲ್ಲಿ ಕಲಾವಿದ ಹೇಗಿರಬೇಕು? ಯಾವುದೇ ಸಿದ್ಧ ಸಿಲೆಬಸ್ ಇಲ್ಲ. ಪುರಾಣ ಸಾರುವಂತೆ ಮಹಾ ಪುರುಷರು ಸಾಗಿದ್ದೇ ಹಾದಿ. ಅವರು ತೋರಿದ ದರ್ಶನವೇ ದಾರ್ಶನಿಕತೆ. ಯಕ್ಷಗಾನ ಕ್ಷೇತ್ರವೂ ಇದಕ್ಕಿಂತ ಹೊರತಲ್ಲ. ಹಿರಿಯ ಕಲಾವಿದರ ಕಲಾಯಾನವೇ ಮಾರ್ಗದರ್ಶಿ. ಅವರು ಬದುಕಿನಲ್ಲಿ ಅಂಟಿಸಿಕೊಂಡಿದ್ದ ಕಲಾಬದ್ಧತೆ, ರಂಗಶಿಸ್ತು, ಪ್ರೀತಿ.. ಜಾಡಿನಲ್ಲಿ ಸಾಗುತ್ತಿದ್ದಾಗ ಕಲಾವಿದನಿಗೆ ತಾನು ಕಲಾವಿದನಾಗಿ ರೂಪುಗೊಳ್ಳುತ್ತಿರುವ ಅರಿವು ಆಗುವುದೇ ಇಲ್ಲ! ತನಗರಿವಿಲ್ಲದೆ ತಾನು ಬೆಳೆಯುತ್ತಿರುವ ಸ್ಥಿತಿ ಇದೆಯಲ್ಲಾ, ಇದೇ ಬೆಳವಣಿಗೆ-ಅಭಿವೃದ್ಧಿ.
         ರಂಗದಲ್ಲಿ ಎಷ್ಟು ಹೊತ್ತು ಕುಣಿದ, ಒಂದು ಪದ್ಯಕ್ಕೆ ಎಷ್ಟು ತಾಸು ನಾಟ್ಯ ಮಾಡಿದ, ಏನೆಲ್ಲಾ ಗಿಮಿಕ್ ಮಾಡಿದ, ಎಷ್ಟು ಪ್ರಮಾಣದಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ.. ಇಂತಹ ಮಾನದಂಡಗಳು ಕಲಾವಿದನಾಗಿ ರೂಪುಗೊಳ್ಳಲು ಅರ್ಹತೆಯಲ್ಲ. ನೃತ್ಯ, ನೃತ್ತಗಳ ವ್ಯತ್ಯಾಸ ಎಷ್ಟು ಮಂದಿಗೆ ಗೊತ್ತಿದೆ! ಗೊತ್ತಿರುವಂತೆ ಫೋಸ್ ನೀಡಿದರೆ ಪ್ರಯೋಜನವಿಲ್ಲ. ಪಾತ್ರದ ಸರ್ವಾಂಗ ಸುಂದರತೆಗಿರುವ ನಾಟ್ಯ-ಭಾವಗಳ ಮಿತಿಗಳು ತಿಳಿದಿದ್ದರೆ ಅಭಿವ್ಯಕ್ತಿ ಸುಲಭ. ರಂಗದಲ್ಲಿ ಬೆಳೆಯಲು ಅನುಕೂಲ. ವೃತ್ತಿ ಯಾ ಹವ್ಯಾಸಿ ಕಲಾವಿದನೇ ಆಗಿರಲಿ ವರುಷ ಸರಿದಂತೆ ರಂಗದಲ್ಲಿ ತಾನು ಊರುವ ಹೆಜ್ಜೆ ಹಿರಿದಾಗುತ್ತಾ ಸಾಗಬೇಕು. ಅದು ರಂಗದಲ್ಲಿ ದುಡಿದದ್ದರ, ದುಡಿಯುತ್ತಿರುವುದರ ದ್ಯೋತಕ.
         ಡಾ.ಶೇಣಿಯವರ ಮಾತು ನೆನಪಾಗುತ್ತದೆ, “ತನಗೆ ಅನ್ನ ನೀಡುವ ಮನೆಗೆ ಒದೆಯುವ, ಹೆಜ್ಜೆಯೂರುವ ರಂಗಕ್ಕೆ ಅಪಮಾನ ಮಾಡುವ, ತನ್ನ ಮನೆಯಲ್ಲಿದ್ದು ಇನ್ನೊಂದು ಮನೆಯನ್ನು ವೈಭವೀಕರಿಸುವ ಚಾಳಿ ಇರುವ ಮಂದಿ ರಂಗದಲ್ಲಿ ಇರುವಷ್ಟು ದಿವಸ ಅವರಿಂದ ರಂಗಕ್ಕೆ ಏನೂ ಪ್ರಯೋಜನವಾಗದು. ಬರಿಗುಲ್ಲು, ನಿದ್ದೆಗೇಡು ಅಷ್ಟೇ.” ವಾಕ್ಯಗಳು ಮನಹೊಕ್ಕಾಗ ಇಂತಹ ಮನಸ್ಸು ಹೊಂದಿದ ಮಂದಿ ಮಿಂಚಿ ಮರೆಯಾದರು! ಇವರು ಯಾಕೆ ಹೀಗಿದ್ದಾರೆ? ಎನ್ನುವ ಒಗಟಿಗೆ ರಂಗದ ಒಳಗಿದ್ದ ನನಗೆ ಅರ್ಥೈಸಲು ಸುಲಭ. ಪ್ರದರ್ಶನವನ್ನಷ್ಟೇ ನೋಡಿ ಸಂತೋಷಪಡುವ ಮನಸ್ಸುಗಳಿಗೆ ಎಲ್ಲವೂ ಆಕಾರವಾಗಿಯೇ ಕಾಣುತ್ತದೆ!
          ವೈಯಕ್ತಿಕವಾದ ನಿಲುವುಗಳನ್ನು ಬದಿಗಿಡೋಣ. ತಾನು ದುಡಿಯುವ, ತೊಡಗಿಸಿಕೊಳ್ಳುವ ರಂಗಕ್ಕೆ ನ್ಯಾಯ ಒದಗಿಸಲು ಕಲಾವಿದ (ಯಾರನ್ನೂ ಉದ್ದೇಶಿಸಿ ಅಲ್ಲ) ಎಲ್ಲಿ ವಿಫಲನಾಗುತ್ತಾನೆ. ವ್ಯಕ್ತಿತ್ವ ರೂಪೀಕರಣದಲ್ಲಿಂದ ರಂಗದ ಅಭಿವ್ಯಕ್ತಿಯ ತನಕದ ಬದುಕಿನ ಸೂಕ್ಷ್ಮತೆಯತ್ತ ಕಲಾವಿದ ಎಚ್ಚರವಾಗಿರಬೇಕು. ಹಿಂದೆ ಹೇಗಿತ್ತು ಎನ್ನುವುದು ಸಮರ್ಥನೆಯಾದೀತಷ್ಟೇ. ನವಮಾಧ್ಯಮಗಳಜಾಲತಾಣಗಳ - ಭರಾಟೆಗಳ ಮಧ್ಯೆ  ಅಕರಾಳ-ವಿಕರಾಳ ಮನಸ್ಸುಗಳು ಕೇಕೆ ಹಾಕಲು ಕಾಯುತ್ತಿರುತ್ತವೆ! ಇವುಗಳಿಂದ ತಪ್ಪಿಸಲು ಸಾಧ್ಯವಿಲ್ಲ ಬಿಡಿ. ನೀವು ಎಷ್ಟೇ ಒಳ್ಳೆಯವರಾದರೂ ಕೆಟ್ಟವರೆಂದು ಬಿಂಬಿಸಲು ಬೇಕಾದ ವ್ಯವಸ್ಥೆಗಳು ಬೆರಳ ತುದಿಯಲ್ಲಿದೆ.
         ಇಂದು ಅನೇಕ ಕಲಾವಿದರು ವಿದ್ಯಾವಂತರಾಗಿದ್ದಾರೆ. ಪಾತ್ರಗಳಿಗೆ ನ್ಯಾಯ ಸಲ್ಲಿಸುತ್ತಿದ್ದಾರೆ. ನಿತ್ಯ ಓದಿನ ಹವ್ಯಾಸವನ್ನು ರೂಢಿಸಿಕೊಂಡವರಿದ್ದಾರೆ. ಸಾಮಾಜಿಕವಾಗಿ ಉತ್ತಮ ಬಾಂಧವ್ಯವನ್ನು ಹೊಂದಿದವರಿದ್ದಾರೆ. ಕಲೆಯ ಸಂಪರ್ಕದಿಂದ ಒಳ್ಳೆಯ ಜೀವನ ವಿಧಾನವನ್ನು ಹೊಂದಿದವರ ಸಂಖ್ಯೆ ತುಂಬಾ ದೊಡ್ಡದಲ್ಲವಾದರೂ ಚಿಕ್ಕದಲ್ಲ. ಸಮಾಜದ ಕುರಿತು ಎಚ್ಚರ ಹೊಂದಿದ್ದಾರೆ. ಪ್ರದರ್ಶನ, ಪ್ರಸಂಗದ ಯಶ, ಪ್ರೇಕ್ಷಕರ ವಿಮರ್ಶೆ.. ಎಲ್ಲಾ ವಿಚಾರಗಳನ್ನು ಸ್ವೀಕರಿಸುವ ಕಲಾವಿದರಿದ್ದಾರೆ.
          ಇಷ್ಟೆಲ್ಲಾ ಸಂಪನ್ಮೂಲವಿದ್ದರೂ ಕೆಲವು ಸಲ ವೈಯಕ್ತಿಕ ವೈಮನಸ್ಸುಗಳು ರಂಗದಲ್ಲಿ ವಿಜೃಂಬಿಸುತ್ತದೆ.  ರಂಗದ ಹೊರಗೂ ಪ್ರಕಟವಾಗುತ್ತದೆ. ಕೀಳು ಶಬ್ದಗಳ ಪ್ರಯೋಗದಲ್ಲೇಕೆಲವು ಮಂದಿ - ಅರ್ಹತೆಯನ್ನು ಸ್ಥಾಪಿಸುತ್ತಾರೆ. ಪ್ರದರ್ಶನ ನೋಡುವ ಸುಮನಸರು ರಂಗದ ಮುಂದೆ ಇದ್ದಾರೆನ್ನುವ ಪ್ರಜ್ಞೆ ಮಸುಕಾಗುತ್ತಿದೆ. ಪೌರಾಣಿಕ ಪಾತ್ರಗಳನ್ನು ಸಮಕಾಲೀನಗೊಳಿಸುತ್ತಲೋ, ವರ್ತಮಾನದ ವ್ಯಕ್ತಿ-ವಿಶೇಷಗಳನ್ನು ಎತ್ತಿ ಆಡುವುದರಿಂದಲೇ ಸಂತೋಷಪಟ್ಟು ಅದನ್ನೇ ಬೆಳವಣಿಗೆ, ಅಭಿವೃದ್ಧಿ ಎಂದು ತಿಳಿಯುವ ಮಂದಿಯಿಂದ ರಂಗದ ಉತ್ಕರ್ಷವನ್ನು ನಿರೀಕ್ಷಿಸುವುದು ತಪ್ಪಾದೀತೇನೋ.
            ಮೇಳದ ಚೌಕಿಯು ಕಲಾವಿದರ ಮನೆ. ಹತ್ತಾರು ಸು-ಮನಸ್ಸುಗಳು ಇರುವುದರಿಂದ ಅದು ಮನೆ. ಅದು ವಿಷವನ್ನು ಸೃಷ್ಟಿಸಲು ಇರುವ ತಾಣವಲ್ಲ. ಅಮೃತವನ್ನು (ಚೌಕಿ ಭಾಷೆಯಲ್ಲಿ ಅಮೃತಕ್ಕೆ ಬೇರೆ ಅರ್ಥವಿದೆ!) ಮೊಗೆಯಲು ಇರುವ ಸ್ಥಳ. ಪ್ರಸಂಗವೊಂದು ಬದುಕಿನಲ್ಲಿ ಅನುಷ್ಠಾನಿಸಬೇಕಾದ ಸಂದೇಶಗಳನ್ನು ನೀಡುತ್ತದೆ. ಕೆಲವೊಂದು ಪ್ರಸಂಗಗಳಲ್ಲಿ ಪಾತ್ರಗಳು ಕಲಾವಿದನ ಸಾಮಥ್ರ್ಯಕ್ಕೆ ಹೊಂದಿಕೊಂಡು ರಂಗದಲ್ಲಿ ಮಿಂಚುತ್ತವೆ. ಉಳಿದ ಪಾತ್ರಗಳ ನಿರ್ವಹಣೆ ಕಳಪೆ ಎಂದರ್ಥವಲ್ಲ. ಇದರಿಂದಾಗಿ ಪ್ರದರ್ಶನ ಜನಮೆಚ್ಚುಗೆ ಪಡೆಯುತ್ತದೆ ಎಂದಾದರೆ ಸಹ ಪಾತ್ರಧಾರಿಗಳಿಗೆ ಅದ್ಯಾವುದೋ ಸಂಕಟವು ಹೊಟ್ಟೆಯನ್ನು ಕಲಸಿಬಿಡುತ್ತದೆ! ಸಹ ಪಾತ್ರಧಾರಿಗೆ ಸಿಗುವ ಮನ್ನಣೆಯನ್ನು ಸ್ವೀಕರಿಸಲಾಗದಷ್ಟು ಸಣ್ಣವನಾಗಿ ಹೋಗುತ್ತಾನೆ.
          ಇಂತಹ ಸಂದರ್ಭಗಳಲ್ಲಿ ನವಮಾಧ್ಯಮಗಳಲ್ಲಿ ತನ್ನ ಮನಸ್ಸಿನ ಹುಳುಕನ್ನು ತಾನೇ ಸ್ವತಃ, ಕೆಲವೊಮ್ಮೆ ಬೇರೊಬ್ಬರ ಹೆಸರಿನಲ್ಲಿ ಪ್ರಕಟಿಸುತ್ತಾನೆ. ಇದನ್ನು ಅರ್ಹತೆ ಎಂದು ಬಿಂಬಿಸುವ ಮನಃಸ್ಥಿತಿ. ಚಾಳಿಗೆ ನಾನೂ ಬಲಿಯಾಗಿದ್ದೆ! ಸಂಬಂಧಪಟ್ಟ ವ್ಯಕ್ತಿಯನ್ನು ಸಂಪರ್ಕಿಸಿದಾಗ ನಂಬಿದ ಸಹಚರನ ಕಾಣದ ಮುಖ ಪ್ರಕಟವಾಯಿತು! ನವಮಾಧ್ಯಮಗಳಲ್ಲಿ ಬರುವಂತಹ ಕೀಳು ಅಭಿಪ್ರಾಯಗಳಿಗೆ ಮನ್ನಣೆಯನ್ನು ನೀಡಬೇಕಾಗಿಲ್ಲ. ಯಾರು ಅಭಿಪ್ರಾಯ ನೀಡಿದ್ದಾರೋ ಅಂತಹವರ ಜಾತಕಗಳು ಅಂಗೈಯಲ್ಲಿ ಇರುವುದರಿಂದ ಅದರ ಪ್ರಕಟಣೆಗೂ ಅಂಜಬೇಕಾಗಿದ್ದಿಲ್ಲ ಅಲ್ವಾ!
           ಮೇಳವೊಂದು ಕಲಾವಿದರನ್ನು ಸಲಹುವ ವ್ಯವಸ್ಥೆ. ತಾನಿದ್ದಷ್ಟೂ ಸಮಯ ಮೇಳವನ್ನು ಪ್ರೀತಿಸುವ ಗುಣ ಯಾಕಿಲ್ಲ? ತಾನು ದುಡಿಯುವ ಮೇಳದ ಹೊರತಾದ ಮೇಳಗಳ ವ್ಯವಸ್ಥೆಗಳನ್ನು - ಕೆಲವೊಮ್ಮೆ ಕಲ್ಪಿಸಿಕೊಂಡುವೈಭವೀಕರಿಸುವ ಮನಸ್ಸುಗಳು ಶುಭ್ರವಾಗುವುದು ಯಾವಾಗ? ತಾನಿದ್ದ ಮೇಳದಲ್ಲಿ ತನಗೆ ನಿಲ್ಲುವುದಕ್ಕೆ ಆಗುವುದಿಲ್ಲ ಎಂದಾಗ ಮೇಳ ಬಿಟ್ಟು ಅನ್ಯ ಹಾದಿಯನ್ನು ಹಿಡಿಯಬಹುದಲ್ಲಾ! ಅಭಿವ್ಯಕ್ತಿಯಲ್ಲಿ, ರಂಗಕ್ರಿಯೆಯಲ್ಲಿ, ಜನಮಾನ್ಯತೆಯಲ್ಲಿ ತನಗಿಂತ ಸಹಕಲಾವಿದ ಮೇಲ್ಮೆಯನ್ನು ಹೊಂದಿದ್ದಾನೆ, ಎಂದಾದರೆ ಅವನನ್ನು ಮೆಟ್ಟುವ, ತಟ್ಟುವ, ಅಪಪ್ರಚಾರ ಮಾಡುವ ಮನಃಸ್ಥಿತಿಯನ್ನು ಅಭಿಮಾನಿಗಳಲ್ಲಿ ಹೇರುತ್ತಾರೆ. ಇಂತಹವರೂ ಕಲಾವಿದರು ಎನ್ನಲು ನಾಚಿಕೆಯಾಗುತ್ತದೆ. ಮುಖ ನೋಡಲೂ ರೇಜಿಗೆಯಾಗುತ್ತದೆ. 
           ಓರ್ವ ಸಂಘಟಕ ಓರ್ವ ಕಲಾವಿದನಿಗೆ ಸಂಮಾನ ಮಾಡಿದರು ಎಂದಿಟ್ಟುಕೊಳ್ಳಿ. ಸಂಮಾನವನ್ನು ಸ್ವೀಕರಿಸಿ, ರಂಗದಲ್ಲಿಇದು ನನ್ನ ಭಾಗ್ಯಎಂದು ಗಂಟಲ ಮೇಲಿನ ಭಾಷಣ ಬಿಗಿಯುತ್ತಾರೆ. ಚೌಕಿಗೆ ಮರಳಿದಾಗ ಸ್ನೇಹಿತರೊಂದಿಗೆ ಹಗುರವಾಗಿ ಮಾತನಾಡುವ, ಮಾಡಿದ ಸಂಮಾನಕ್ಕೆ ಕೃತಜ್ಞತೆಯನ್ನೂ ಸೂಚಿಸದವರು ಎಷ್ಟು ಬೇಕು? ಸಮಾಜವು ಕಲಾವಿದನನ್ನು ಒಳ್ಳೆಯ ಕಣ್ಣುಗಳಿಂದ ಕಾಣುತ್ತದೆ. ಗೌರವಿಸುತ್ತದೆ. ವೈಯಕ್ತಿಕವಾದ ಭಿನ್ನಾಭಿಪ್ರಾಯವು ಸಾರ್ವತ್ರಿಕವಾಗಬಾರದು. ಮುಖಾಮುಖಿಯಲ್ಲಿ ಪರಿಹರಿಸಿಕೊಳ್ಳಲು ಯಾಕೆ ಹಿಂದೇಟು? ಮುಖ ತೋರಿಸಲು ನಾಚಿಕೆಯೇಕೆ? ಇಂತಹ ಹತ್ತಾರು ಮನಃಸ್ಥಿತಿಗಳು ಬಣ್ಣದ ಮನೆಯನ್ನು ಘಾಸಿಗೊಳಿಸುತ್ತಿವೆ.
           ಇದೇನೂ ಪರಿಹರಿಸಲಾಗದ ಸಮಸ್ಯೆಯಲ್ಲ. ಯಕ್ಷಗಾನವೆಂಬುದು ತನಗೆ ಹೊಟ್ಟೆಪಾಡು ಎನ್ನುವ ಜ್ಞಾನ ಸದಾ ಜಾಗೃತವಾಗಿದ್ದರೆ ಯಾವ ವಿಕಾರಗಳೂ ಬಣ್ಣದ ಮನೆಯಲ್ಲಾಗಲೀ, ರಂಗದಲ್ಲಾಗಲೀ ಪ್ರಕಟವಾಗದು. ಕಲಾವಿದನ ಸಾಧನೆಯು ಇಂತಿಷ್ಟು ವರುಷ ತಿರುಗಾಟ ಮಾಡಿದ್ದೇನೆ ಎನ್ನುವಲ್ಲಿಗೆ ನಿಲ್ಲಬಾರದು.

Prajavani / ದಧಿಗಿಣತೋ / 11-5-2018


No comments:

Post a Comment