Saturday, June 23, 2018

ಬೆರಗಿನ ಲೋಕ ತೋರಿದ ಶೇಣಿಗೆ ಸಾವಿಲ್ಲ!

 Dr. Sheni gopalakrishna bhat (photo : pradeep tholpadi, puttur)

          ಯಕ್ಷಗಾನದ ವಾಙ್ಮಯ ಲೋಕದಲ್ಲಿ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರ ಹೆಸರು ಚಿರ. ಅವರು ಬದುಕಿದ್ದರೆ ಈಗ ನೂರು ವರುಷ. ಯಕ್ಷಗಾನದ ಯಾವುದೇ ವಿಚಾರ ಮಾತನಾಡುವಾಗಲೂ ಶೇಣಿ, ಸಾಮಗರ ಉಲ್ಲೇಖವಿಲ್ಲದೆ ಮುಕ್ತಾಯವಾಗುವುದಿಲ್ಲ. ಮಾತಿನ ಲೋಕದಲ್ಲಿ ಸ್ಥಾಪಿಸಿದ ಸ್ವ-ಛಾಪಿನಿಂದಾಗಿ ವರ್ತಮಾನದಲ್ಲೂ ಪ್ರಸ್ತುತ.
                2003ರಲ್ಲಿ ಡಾ.ಶೇಣಿಯವರ ಚಿಂತನಗಳನ್ನು ದಾಖಲಿಸುವ ಉದ್ದೇಶದಿಂದ ನಿರಂತರ ಅವರ ಸಂಪರ್ಕದಲ್ಲಿದ್ದೆ. ಏನಿಲ್ಲವೆಂದರೂ ವರುಷಾರ್ಧದ ರವಿವಾರಗಳೆಲ್ಲವೂ ಕಾಸರಗೋಡಿನದಾಸನಿವಾಸದಲ್ಲೇ ಊಟೋಪಚಾರ, ಮಾತುಕತೆ. ಮಾತಿಗೆ ಹೊಸ ಮತಿಯನ್ನು, ಹೊಳಹುಗಳನ್ನು ನೀಡುತ್ತಾ ಬಂದ ಶೇಣಿಯವರ ಮಾತುಗಳನ್ನು ದಾಖಲಿಸಿದ ಕ್ಷಣದ ಸಾರ್ಥಕತೆಯ ತೇವ ಆರಿಲ್ಲ.
                ಹತ್ತಾರು ವಿಚಾರಗಳನ್ನು ಸುತ್ತುತ್ತಾ,  ವಿಚಾರಗಳ ಪೋಸ್ಟ್ ಮಾರ್ಟಂ ಮಾಡುತ್ತಾ, ಅದರೊಳಗೆ ಇಳಿದು-ಏರುತ್ತಾ ವೈಚಾರಿಕ ಮಂಥನಗಳನ್ನು ಮಾಡುತ್ತಿದ್ದ ಶೇಣಿಯವರ ಬೌದ್ಧಿಕತೆ ಬೆರಗು. ಹೀಗೆ ದಾಖಲಿಸಿದ ವಿಚಾರಗಳುಶೇಣಿ ಚಿಂತನಎನ್ನುವ ಕೃತಿಯಲ್ಲಿ ಅಕ್ಷರಕ್ಕಿಳಿಸಿದೆ. ಅದರಲ್ಲೊಂದುದಾಸ ಸಾಹಿತ್ಯಎನ್ನುವ ವಿಚಾರದ ಚಿಂತನೆ. ಪ್ರಕಟಣೆಯ ಹೊತ್ತಿಗೆ ಇದನ್ನು ಕೈಬಿಡಲು ಸೂಚಿಸಿದ್ದರು. ಕಾರಣ ಅವರು ಹೇಳಿಲ್ಲ, ನಾನೂ ಕೇಳಿಲ್ಲ! ಹದಿನೈದು ವರುಷದ ಬಳಿಕ ಕೈತಪ್ಪಿದ ಹಸ್ತ ಪ್ರತಿ ಕೈಸೇರಿತು. ಇದರ ಚಿಕ್ಕ ಸಿಹಿಗುಟುಕು ನಿಮಗಾಗಿ – 

                ****                                     ****                                     ****

                ...ಮನುಷ್ಯನು ಕೇವಲ ವಿಜ್ಞಾನಿಯಾಗಿ, ವಿಚಾರವಾದಿಯಾಗಿ ಬದುಕಲಾರನು. ಜೀವನದುದ್ದಕ್ಕೂ ಕನಸು ಕಾಣುತ್ತಾ ಇರುತ್ತಾನೆ. ಭವಿಷ್ಯದ ಜೀವನದ ಸೊಬಗನ್ನು ಸವಿಯುವುದಕ್ಕೆ, ಅಡ್ಡವಾಗಿ ಬರುವ ವಿಘ್ನವಿಡ್ಡೂರಗಳನ್ನು ತಪ್ಪಿಸುವುದಕ್ಕಾಗಿ ಔಷಧಿಯಾಗಿಕನಸುಪರಿಣಾಮ ಬೀರುತ್ತದೆ.
                ವೇದಾಂತಿಗಳು ಪ್ರಪಂಚ ಮಿಥ್ಯ, ದೇಹವೂ ಮಿಥ್ಯ, ಪ್ರಾಂಪಚಿಕವಾದ ಅನುಭವವೂ ಮಿಥ್ಯ ಎಂದು ಹೇಳಿದರು. ಸಾಧಿಸಬೇಕಾದ ಸಾಧನೆಗಳ ಸಿದ್ಧಿಗೆದುಡಿಯಿರಿಎಂದರು. ಇದೆಲ್ಲಾ ಕನಸು, ಮಿಥ್ಯೆ ಎಂದಾದರೆ ದುಡಿದದ್ದು ಮಿಥ್ಯವಲ್ಲವೇ? ದುಡಿಮೆಗೆ ಪ್ರತಿಫಲ ಪಡೆದುದು ಮಿಥ್ಯೆಯಲ್ಲವೇ? ಎನ್ನುವ ವಿಚಾರವಾದದ ಪ್ರಶ್ನೆ ಎದುರಾಗುತ್ತದೆ. ಇದನ್ನು ಬಗೆಹರಿಸಬೇಕು.
                ಕನಸಿನಲ್ಲಿ ನಮಗೆ ಹಸಿವು, ಬಾಯಾರಿಕೆ, ಸುಖ.. ಎಲ್ಲವೂ ಆಗುತ್ತದೆ. ಇದಕ್ಕೆ ಕನಸಿನಲ್ಲಿಯೇ ಪರಿಹಾರ ಕಾಣಬೇಕು, ಎಚ್ಚರದಲ್ಲಲ್ಲ. ಇದನ್ನು ಲಕ್ಷ್ಯದಲ್ಲಿಟ್ಟು ನಮ್ಮ ಹಿರಿಯರು ಕನಸು, ದರ್ಶನಗಳನ್ನು ನಾವು ಕಾಣಲೇಬೇಕು. ಇದು ಉಪಾಧಿ. ಇದು ಶಾಶ್ವತವಲ್ಲ. ಹಾಗಾಗಿ ಶಾಶ್ವತವಾದ, ಚಿರಂತನವಾದ ಯಾವುದೇ ಒಂದು ಸುಖ-ದುಃಖ ಇಲ್ಲದೇ ಇದ್ದ ಸಂತೃಪ್ತಿ ಮತ್ತು ಶಾಂತಿಯತ್ತ ಪ್ರಪಂಚದ ಬಂಧನದ ಬಿಡುಗಡೆ. ಲಕ್ಷ್ಯ ಸಾಧನೆಗೆ ಇದ್ದಂತಹ ಮಾರ್ಗ, ಉಪಾಧಿಗೆ ದ್ರವ್ಯವಾಗಿ ಕನಸನ್ನೇ ಉಪಯೋಗಿಸಬೇಕು. ಕನಸು ಇಲ್ಲದೇ ಇದ್ದಾವಾಗ ಎಚ್ಚರವಾಗುವುದು. ಕನಸು ಇಲ್ಲವಾಗಬೇಕಿದ್ದರೆ ಕನಸಿನಲ್ಲಿಯೂ ನಾವು ಬದುಕಬೇಕು. ಆವಾಗಲೇ ಕನಸಿನ ಹಸಿವೆಗೆ ಕನಸಿನ ಅನ್ನ, ಆಹಾರ. ಕನಸಿನಲ್ಲಿ ಬಂದ ರೋಗಕ್ಕೆ ಕನಸಿನ ಔಷಧಿ!
                ಇದನ್ನು ಜ್ಞಾನಿಗಳು ಹೇಳಿದರು. ಇಲ್ಲಿ ಬುದ್ಧಿಯಿರುವ ಜೀವಿಗಳಿಗೂ, ಜ್ಞಾನಿಗಳಿಗೂ ವ್ಯತ್ಯಾಸವಿದೆ. ಜ್ಞಾನಿಗಳು ಅನುಭವಿಸಿ ಹೇಳುತ್ತಾರೆ. ನಾವು ಓದಿ, ಕೇಳಿ ಹೇಳುತ್ತೇವಷ್ಟೇ. ಯಾವ ಪುಸ್ತಕವು ಮಸ್ತಕದಿಂದ ತಯಾರಾಗಿದೆಯೋ ಅವರು ಅಷ್ಟನ್ನು ಮಾತ್ರ ಹೇಳಬಲ್ಲರು. ಇಲ್ಲಿ ಅನುಭವದ ಕೊರತೆಯಿದೆ. ಯಾರ ಮಸ್ತಕವು ಪುಸ್ತಕವನ್ನು ತಯಾರಿಸುವುದೋ ಅವರು ಜ್ಞಾನಿಗಳು.
                ಧರ್ಮಎನ್ನುವ ಶಬ್ದ ಉಂಟು. ನಮ್ಮ ದ್ರಾವಿಡ ಭಾಷೆಯಲ್ಲಿ ಸರ್ವತ್ರವಾಗಿ ಶಬ್ದಕ್ಕೆ ಪರ್ಯಾಯ ಶಬ್ದವಿಲ್ಲ. ತರ್ಜುಮೆ ಇಲ್ಲ. ಉಚ್ಚಾರದಲ್ಲಿ ವ್ಯತ್ಯಾಸವಿರಬಹುದು. ಹಾಗೆಯೇಸಾಹಿತ್ಯಶಬ್ದ ಕೂಡಾ. ಎಲ್ಲಾ ಭಾಷೆಯಲ್ಲಿಯೂ ಒಂದೇ ರೀತಿ. ನನ್ನಂತಹವನಿಗೆ ಸಾಹಿತ್ಯದ ಬಗ್ಗೆ ಹೇಳುವಾಗ ಸಂಸ್ಕøತದ ಅರ್ಥವನ್ನೇ ಗ್ರಹಿಸಬೇಕಾಗುತ್ತದೆ.
           ಮನುಷ್ಯದ ಬದುಕಿನಲ್ಲಿ ಸಾಹಿತ್ಯವೂ ಒಂದು ಅನಿವಾರ್ಯ ಅಂಗ. ಸಾಹಿತ್ಯಕ್ಕೆ ಕೆಲವು ಲಕ್ಷಣಗಳಿವೆ. ಲಕ್ಷಣವಿರದ ಸಾಹಿತ್ಯವು ಸಾಹಿತ್ಯವೇ ಅಲ್ಲ. ಸಾಹಿತ್ಯದಲ್ಲಿ ಶಿಸ್ತು, ಪದ್ಧತಿ ಬೇಕು. ಸಾಹಿತ್ಯವು ವ್ಯವಸ್ಥಿತವಾಗಿ ಇರಬೇಕೆನ್ನುವುದು ನಿರ್ಣಯ. ನಮ್ಮ ಭಾಷಾ ಶಾಸ್ತ್ರಕಾರರು ಏನು ಹೇಳುತ್ತಾರೆ? ವಾಚ್ಯವು ಅರ್ಥಕ್ಕೆ ಸೇರಿದರೆ ಸಾಹಿತ್ಯವಾಗುತ್ತದೆ. ಹೇಳಿದ ವಾಕ್ಯಕ್ಕೆ ಅರ್ಥವಿಲ್ಲವೆಂದಾದರೆ ಅದು ಸಾಹಿತ್ಯ ಹೇಗಾದೀತು?
           ಈ ಪ್ರಪಂಚದಲ್ಲಿ ಅಖಂಡವಾದ ಅದ್ವೈತವು ನಮ್ಮ ವ್ಯವಹಾರಕ್ಕೆ ಆಗುವುದಿಲ್ಲ. ಇಲ್ಲಿ ದೈವವೇ ಬೇಕಾಗುತ್ತದೆ. ಪ್ರಪಂಚ ಸತ್ಯ. ಇಲ್ಲಿ ಹಗಲಿದೆ, ರಾತ್ರಿಯಿದೆ, ಸುಖವಿದೆ, ದುಃಖವಿದೆ. ಎರಡೂ ಜೊತೆಜೊತೆಯಾಗಿದೆ. ಪ್ರಪಂಚದ ಅಸ್ತಿತ್ವಕ್ಕೆ ಇವೆರಡೂ ಬೇಕು. ಇದು ಪ್ರಪಂಚದ ನಿಯಮ. ಹಾಗಾಗಿಸಾಹಿತ್ಯಎನ್ನುವ ಪ್ರತ್ಯೇಕ ಹೆಸರು ವಾಙ್ಮಯಕ್ಕೆ ಬರಲು ಕಾರಣವಾಕ್ಯದ ಜತೆಯಲ್ಲಿ ಅರ್ಥವುಂಟು, ಅರ್ಥವತ್ತಾದ ವಾಕ್ಯವುಂಟು.
           ಪ್ರಾದೇಶಿಕವಾಗಿ ಹಲವು ಕನ್ನಡ ಭಾಷೆಗಳು ಹುಟ್ಟಿಕೊಂಡಿವೆ. ಶುದ್ಧ ಕನ್ನಡ ಭಾಷೆಯು ಯಾವುದೆಂಬುದೇ ಗೊಂದಲವಾಗಿದೆ. ಅದಕ್ಕಾಗಿಗ್ರಾಂಥಿಕ ಭಾಷೆಎಂಬ ಹೊಸ ಶಬ್ದ ಚಲಾವಣೆಗೆ ಬಂದಿದೆ. ಗ್ರಾಂಥಿಕ ಭಾಷೆಯಲ್ಲಿ ಶುದ್ಧ ವ್ಯಾಕರಣವುಂಟು. ಲಕ್ಷಣವುಂಟು. ಲಕ್ಷಣವನ್ನು ಮೀರಿ ಯಾರು ಏನು ಹೇಳಿದರೂ ಅದು ಶಬ್ದ ಆದೀತಷ್ಟೆ. ಶಬ್ದಕ್ಕೆ ಅರ್ಥವೂ ಇದ್ದೀತು. ಆದರೆ ಅದು ನಿತ್ಯ ವ್ಯವಹಾರಕ್ಕೆ ಆಗಬಹುದೇ ಹೊರತು ನಾಲ್ಕು ಕಾಲ ಉಳಿಯುವಂತಹ, ಮುಂದಿನ ಪೀಳಿಗೆಗೆ ಉಳಿಸಿಡಬಹುದಾದ ಸಾಹಿತ್ಯವಾಗಲಾರದು. ಹೀಗೆ ಹೇಳುವಾಗ ನವ್ಯ ಸಾಹಿತ್ಯವನ್ನು ಆಕ್ಷೇಪಿಸುತ್ತೇನೆಂದು ತಿಳಿಯಬೇಡಿ.
          ನಮ್ಮ ಕವಿತೆಯ ಹುಟ್ಟಿನ ಬಗ್ಗೆ ಕವಿ ಗೋಪಾಲಕೃಷ್ಣ ಅಡಿಗರು ಒಂದು ಮಾತನ್ನು ಹೇಳಿದ್ದರು – “ಹಳತಿಗೆ ಆಯಾಯ ಕಾಲದ ಅವಶ್ಯಕತೆಯಿದೆ. ನಮ್ಮ ರಾಷ್ಟ್ರಕ್ಕೆ ಸಂವಿಧಾನ ಉಂಟು. ದೇಶ ಕಾಲಾನುಸಾರವಾಗಿ ತಿದ್ದುಪಡಿಯಾಗುತ್ತಾ ಬಂದಿದೆ. ಇಲ್ಲದಿದ್ದರೆ ಪ್ರಜಾಪ್ರಭುತ್ವದಲ್ಲಿ ಪಾರ್ಲಿಮೆಂಟಿಗೆ ಏನು ಅರ್ಥ? ತಿದ್ದುಪಡಿಗಳು ಮೂಲ ಸಂವಿಧಾನಕ್ಕೆ ವಿರೋಧವಾಗ ಕೂಡದು. ಅದನ್ನು ರಕ್ಷಿಸುವಲ್ಲಿ ತಿದ್ದುಪಡಿಗಳು ಪೂರಕವಾಗಬೇಕು. ನಮ್ಮ ಸಾಹಿತ್ಯವೂ ಕೂಡಾ ಹೀಗಿರಬೇಕು.
ನಿಟ್ಟಿನಲ್ಲಿ ಪುರಂದರದಾಸರ, ಕನಕದಾಸರ ಸಾಹಿತ್ಯ ಮುಖ್ಯವಾಗುತ್ತದೆ. ನಿಜಾರ್ಥದಲ್ಲಿ ಇದು ಸಾಹಿತ್ಯ. ನಾನು ಈವರೆಗೆ ಹೇಳಿದ ಎಲ್ಲವನ್ನೂ ಅದು ಪೂರೈಸುತ್ತದೆ. ಎಲ್ಲರೂ ಅಂಗೀಕರಿಸುವಾಗ ಸುಭಗತೆಯೂ ಬರುತ್ತದೆ. ಇದು ಮನಃಶಾಸ್ತ್ರ. ಮನಸ್ಸು ಇಲ್ಲದೇ ಇದ್ದವರು ಪ್ರಪಂಚದಲ್ಲಿ ಯಾರೂ ಇಲ್ಲ. ಅವರಿಗೆ ಭಾಷೆಯು ಮಾತ್ರ ಬಾಧಕವಾಗುತ್ತದೆ. ಪುರಂದರ ದಾಸರುಮನಸ್ಸುಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ. ಅವರುಮೈಂಡ್ (mind)  ಎಂದು ಹೇಳಲಿಲ್ಲ! ಮನಸ್ಸು ಎಂಬುದು ಕನ್ನಡದಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೆ ಕನ್ನಡದಲ್ಲಿ ಬೇರೆ ಶಬ್ದವಿಲ್ಲ. ತರ್ಜುಮೆ ಇಲ್ಲ....

                      ****                             ****                           ****

                ಸುಳ್ಯ ತಾಲೂಕಿನ ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಕಳೆದ ನವೆಂಬರಿನಲ್ಲಿ ಶೇಣಿ ಜನ್ಮಶತಮಾನೋತ್ಸವ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿತ್ತು. ನೂರು ಮಂದಿಗೆ ಶೇಣಿ ನೆನಪಿನ ಗೌರವವನ್ನು ಪ್ರದಾನಿಸಲಾಗಿತ್ತು. ಸುರತ್ಕಲ್ತಡಂಬೈಲಿನ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ (ರಿ) ಸಂಸ್ಥೆಯು ಪಿ.ವಿ.ರಾಯರ ನೇತೃತ್ವದಲ್ಲಿ ಜಿಲ್ಲೆಯ ಅನ್ಯಾನ್ಯ ಭಾಗದಲ್ಲಿ ಶೇಣಿ ಶತಮಾನೋತ್ಸವ ಕಲಾಪವನ್ನು ನಡೆಸಿದೆ. ಆಯಾಯ ಪ್ರದೇಶದ ಓರ್ವ ಅನುಭವಿ, ಹಿರಿಯ ಕಲಾವಿದರಿಗೆ ಸಂಮಾನ ಮತ್ತು ತಾಳಮದ್ದಳೆಗಳನ್ನು ಏರ್ಪಡಿಸಿತ್ತು.
                ಡಾ.ಶೇಣಿಯವರ ಮೊಮ್ಮಗ ವೇಣುಗೋಪಾಲ ಶೇಣಿ ಮತ್ತು ಸಹೋದರರ ಸಾರಥ್ಯದಲ್ಲಿ ಕಾಸರಗೋಡಿನಶೇಣಿ ರಂಗಜಂಗಮ ಟ್ರಸ್ಟ್ (ರಿ)’ ನಿರಂತರವಾಗಿ ಶೇಣಿಯವರ ನೆನಪಿನ ಕಾರ್ಯಕ್ರಮಗಳನ್ನು ತನ್ನ ಮಿತಿಯಲ್ಲಿ ನಡೆಸುತ್ತಾ ಬಂದಿದೆ. 2018 ಎಪ್ರಿಲ್ 7ರಂದು ಕಾಸರಗೋಡಿನ ನಗರಸಭಾ ಸಭಾಂಗಣ ಮತ್ತು 8ರಂದು ಕುತ್ಯಾಳ (ಕೂಡ್ಲು) ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶೇಣಿ ಜನ್ಮಶತಮಾನೋತ್ಸವ ಸಮಾರೋಪ ಸಂಭ್ರಮಕ್ಕೆ ವೇದಿಕೆ ಸಜ್ಜಾಗಿದೆ. ದಿನಪೂರ್ತಿ ನಡೆಯುವ ಕಲಾಪದಲ್ಲಿ ಶೇಣಿ ನೆನಪು, ತಾಳಮದ್ದಳೆ, ಶೇಣಿ ಪ್ರಸಂಗ ಗಾಯನ, ಪ್ರಸಂಗ ದರ್ಶನ.. ಹೀಗೆ ಅನ್ಯಾನ್ಯ ಹೂರಣಗಳು ತುಂಬಿವೆ.  
Prajavani / ದಧಿಗಿಣತೋ / 6-4-2018


No comments:

Post a Comment