ಯಕ್ಷಗಾನದ ಪೂರ್ಣಾವತಾರಿ ಸೂರಿಕುಮೇರು ಗೋವಿಂದ ಭಟ್ಟರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ. ಮಾನ್ಯ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕಾರ. ಭಾರತದ ರಾಷ್ಟ್ರಾಧ್ಯಕ್ಷರೊಂದಿಗೆ ಒಂದಷ್ಟು ಕ್ಷಣಗಳನ್ನು ಕಳೆಯುವ ಅವಕಾಶ. ತೆಂಕುತಿಟ್ಟಿಗೆ ಸಂದ ಮಾನ.
ರಾಷ್ಟ್ರಪತಿಗಳ ಉಪಸ್ಥಿತಿಯಲ್ಲಿ ಯಕ್ಷಗಾನ ಪ್ರದರ್ಶನ. ಪ್ರಸಂಗ : ಶ್ರೀ ಕೃಷ್ಣ ವಿವಾಹ. ಭಾಗವತ ಪುತ್ತಿಗೆ ರಘುರಾಮ ಹೊಳ್ಳರ ನಿರ್ದೇಶನ. ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಆಯೋಜನೆ. ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್ಟರ ಸಾರಥ್ಯ. ಒಂದೆಡೆ ಕುರಿಯ ಶಾಸ್ತ್ರಿಗಳ ನೆನಪಿನ ಪ್ರತಿಷ್ಠಾನ. ಮತ್ತೊಂದಡೆ ಶಾಸ್ತ್ರಿಯವರ ಶಿಷ್ಯನಿಗೆ ಪ್ರಶಸ್ತಿ. ಎರಡೂ ಯೋಗಾಯೋಗ.
ಒಂದು ಕಾಲಘಟ್ಟವನ್ನು ಜ್ಞಾಪಿಸಿಕೊಳ್ಳೋಣ. ಕೆರೆಮನೆ ಶಿವರಾಮ ಹೆಗಡೆಯವರ ಪರಂಪರೆಯಲ್ಲಿ ಮುಂದೆ ಶಂಭು ಹೆಗಡೆ, ಮಹಾಬಲ ಹೆಗಡೆ.. ಯವರಂತಹ ಉದ್ಧಾಮರು ರಂಗದಲ್ಲಿ ಸ್ವಂತಿಕೆಯ ಛಾಪು ಮತ್ತು ಹೊಸ ಆಯಾಮ-ಹಾದಿಯನ್ನು ಮೂಡಿಸಿದ್ದರು. ತೆಂಕುತಿಟ್ಟಿನಲ್ಲಿ ಕುರಿಯ ವಿಠಲ ಶಾಸ್ತ್ರಿಗಳಿಂದ ಅಭಿನಯ, ಭಾವನೆ, ವೇಷಭೂಷಣಗಳಲ್ಲೂ ಬದಲಾವಣೆಗಳು ಬಂದಿರುವುದು ಉಲ್ಲೇಖನೀಯ. ಶಾಸ್ತ್ರಿಗಳ ಪರಂಪರೆಯಲ್ಲಿ ಗೋವಿಂದ ಭಟ್ಟರಿಂದ ಕಲಾವಾಹಿನಿ ಹರಿದಿದೆ.
ಪ್ರಶಸ್ತಿ, ಸಂಮಾನ, ಪುರಸ್ಕಾರ ಅಂದಾಗ ಮೂಗು ಮುರಿಯುವ ಕಾಲಘಟ್ಟದಲ್ಲಿದ್ದೇವೆ. ಅದನ್ನು ಅಷ್ಟು ಕುಲಗೆಡಿಸಿದ್ದೇವೆ, ಕುಲಗೆಡಿಸಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯ ಹಿಂದೆ ಯಾವುದೇ ವಶೀಲಿಗಳಿಲ್ಲ, ಲಾಬಿಗಳಿಲ್ಲ. ಇವೆರಡನ್ನೂ ಮಾಡುವ ಮನಸ್ಥಿತಿ ಗೋವಿಂದ ಭಟ್ಟರದ್ದಲ್ಲ! ಕೇವಲ ಸಾಧನೆಯೇ ಮಾನದಂಡ. ಇಲ್ಲಿ ಲಿಖಿತ ಬಯೋಡಾಟ ಏನೂ ಕೆಲಸ ಮಾಡುವುದಿಲ್ಲ. ಎಲ್ಲದಕ್ಕೂ ದಾಖಲೆ ಬೇಕು. ಪ್ರಾಜ್ಞರ ತಂಡ ಅರ್ಹರನ್ನು ಆಯ್ಕೆ ಮಾಡುತ್ತದೆ.
ತಂಡವನ್ನು ದೆಹಲಿಗೆ ಒಯ್ಯುವುದರ ಹಿಂದೆ ಅಶೋಕ ಭಟ್ಟರ ಶ್ರಮ ಅಜ್ಞಾತ. “ಅಕಾಡೆಮಿಯು ಹದಿನಾರು ಕಲೆಗಳ ದಾಖಲೀಕರಣ ಮಾಡಿದೆ. ಒಂದೂಕಾಲು ಗಂಟೆಯಲ್ಲಿ ಜರುಗಿದ ನಮ್ಮ ಪ್ರದರ್ಶನವು ಮೆಚ್ಚುಗೆ ಪಡೆಯಿತು. ಮೊದಲೇ ಕಥಾಭಾಗವನ್ನು ಇಂಗ್ಲಿಷಿನಲ್ಲಿ ಕಳುಹಿಸಿದ್ದೆವು. ಒಟ್ಟೂ ಪ್ರಸಂಗದ ಯಶಸ್ಸಿನ ಹಿಂದೆ ಭಾಗವತ ಹೊಳ್ಳರ ಎಡಿಟಿಂಗ್ ಮರೆಯುವುಂತಹುದಲ್ಲ. ಗೋವಿಂದ ಭಟ್ಟರು ಅಭಿನಯದ ಸಮೃದ್ಧಿತನವನ್ನು ತೋರಿದ್ದಾರೆ,” ಎನ್ನುತ್ತಾರೆ ಅಶೋಕ ಭಟ್.
ಪ್ರಯಾಣ, ಆತಿಥ್ಯ ಎಲ್ಲವೂ ಸರಕಾರಿ ವ್ಯವಸ್ಥೆ. ಹಿಮ್ಮೇಳದವರಿಗೆ ಸಮವಸ್ತ್ರ. ಗೋವಿಂದ ಭಟ್ಟರಿಗೆ ಪ್ರಶಸ್ತಿ ಸ್ವೀಕಾರ ಮಾಡುವ ವಿಧಾನಕ್ಕೂ ಟ್ರೈನಿಂಗ್ ಇತ್ತು! ಕಲಾವಿದರು ಸ್ಟೇಜನ್ನು ಎಷ್ಟು ಆವರಿಸಬೇಕೆನ್ನುವ ಪೂರ್ವ ಪರೀಕ್ಷೆ ಮತ್ತು ಪೂರ್ವಸಿದ್ಧತೆ. ಎಲ್ಲಕ್ಕೂ ಮಿಗಿಲಾಗಿ ಹೊಸ ಪ್ರದೇಶದಲ್ಲಿ ಮತ್ತು ಗಣ್ಯಾತಿಗಣ್ಯರು ಸೇರುವಲ್ಲಿ ಕಲಾವಿದರ ಇರುವಿಕೆಗಳು ಹೇಗಿರಬೇಕು ಎನ್ನುವಲ್ಲಿ ಎಚ್ಚರ.
ತಂಡದಲ್ಲಿ ಪುತ್ತಿಗೆ ರಘುರಾಮ ಹೊಳ್ಳ (ಭಾಗವತರು), ಪಿ.ಜಿ.ಜಗನ್ನಿವಾಸ ರಾವ್ (ಚೆಂಡೆ), ಯೋಗೀಶ ಆಚಾರ್ಯ (ಮದ್ದಳೆ); ಕೆ.ಗೋವಿಂದ ಭಟ್ (ಜಾಂಬವ), ಉಜಿರೆ ಅಶೋಕ ಭಟ್ (ಬಲರಾಮ), ರಾಮಚಂದ್ರ ಭಟ್ (ಸಿಂಹ), ರಂಜಿತಾ ಎಲ್ಲೂರು (ಕೃಷ್ಣ), ಗೌತಮ ಶೆಟ್ಟಿ (ಪ್ರಸೇನ), ರಕ್ಷಿತ ಎಲ್ಲೂರು (ಜಾಂಬವತಿ). “ಭಾಗವತರ ಪ್ರಸಂಗ ಎಡಿಟಿಂಗ್ ನೋಡಿ ಬೆರಗಾದೆ. ಪ್ರದರ್ಶನದುದ್ದಕ್ಕೂ ರಂಗಜೀವಂತಿಕೆಯನ್ನು ಓರ್ವ ಭಾಗವತ ಹೇಗೆ ಕಾಪಾಡಬಹುದೆನ್ನುವ ಅರಿವು ಆಯಿತು.” ಎನ್ನುವ ವಾಟ್ಸಪ್ ಸಂದೇಶವನ್ನು ಪ್ರದರ್ಶನದಂದು ತಂಡದಲ್ಲಿದ್ದ ಪಿ.ಜಿ.ಜಗನ್ನಿವಾಸ ರಾವ್ ರವಾನಿಸಿದ್ದರು.
“ಎಪ್ಪತ್ತೊಂಭತ್ತು ವರುಷದ ಗೋವಿಂದ ಭಟ್ಟರ ಜಾಂಬವನಿಗೆ ಹದಿನೇಳರ ಹರೆಯದ ರಂಜಿತಾಳು ಕೃಷ್ಣನಾಗಿ ಸಮರ್ಥವಾಗಿ ತೊಡಗಿಸಿಕೊಂಡಿದ್ದಳು. ಕಲಾವಾಹಿನಿಯು ತಲೆಮಾರಿನಿಂದ ತಲೆಮಾರಿಗೆ ಹೇಗೆ ಮತ್ತು ಯಾವ ಸ್ವರೂಪದಲ್ಲಿ ಹರಿಯುತ್ತಿದೆ ಎನ್ನುವುದಕ್ಕಿದು ಸಾಕ್ಷಿ. ಬಹುಶಃ ಅತಿ ಕಡಿಮೆ ವಯಸ್ಸಿನ ಕಲಾವಿದೆಯೋರ್ವಳು ದಾಖಲಾತಿಗೆ ಒಳಗಾಗುತ್ತಿರುವುದು ಇದು ಮೊದಲೇನೋ?” – ಅಶೋಕ ಭಟ್ಟರ ಮನದ ಮಾತು.
ಸರಕಾರಿ ಆಯೋಜನೆಯ ಕಾರ್ಯಕ್ರಮ ಅಂದಾಗ ಮುಖ್ಯವಾಗಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಕಲಾವಿದರ ಸ್ಪಂದನ ಮತ್ತು ವ್ಯವಸ್ಥೆಯನ್ನು ನೋಡುವ ನೋಟದಲ್ಲಿ ಪ್ರತ್ಯೇಕತೆಯಿದೆ. ಅಲ್ಲಿ ಕಾಟಾಚಾರಕ್ಕೆ ಮೊದಲ ಮಣೆ! ಅಧಿಕಾರಿಗಳಿಗೆ ವೋಚರಿನಲ್ಲಿ ಸಹಿ ಬಿದ್ದರೆ ಆಯಿತು! ಮೊತ್ತವನ್ನು ಮತ್ತೆ ಬರೆದುಕೊಳ್ಳುತ್ತಾರೆ ಬಿಡಿ! ದೆಹಲಿಯ ಕಾರ್ಯಕ್ರಮದಲ್ಲಿ ಇಂತಹ ಯಾವ ವಿಕಾರಗಳಿಗೂ ಆಸ್ಪದವಿಲ್ಲ. ಎಲ್ಲವೂ ಅಚ್ಚುಕಟ್ಟು ಮತ್ತು ಪಾರದರ್ಶಕತೆ. ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕಾರ ಮತ್ತು ರಾಷ್ಟ್ರಪತಿಗಳೇ ಸ್ವತಃ ಪ್ರದರ್ಶನದಲ್ಲಿ ಉಪಸ್ಥಿತರಿರುವುದರಿಂದ ಎಲ್ಲವೂ ಬಿಗಿ. “ಸರಕಾರಿ ಕಾರ್ಯಕ್ರಮವೊಂದನ್ನು ಹೇಗೆ ಸಂಘಟಿಸಬಹುದೆನ್ನುವುದಕ್ಕೆ ಇದೊಂದು ಮಾದರಿ” ಎನ್ನುತ್ತಾರೆ ಅಶೋಕ ಭಟ್.
ದೆಹಲಿಯ ಕರ್ನಾಟಕ ಸಂಘ, ಯಕ್ಷಧ್ರುವ ಪಟ್ಲ ಫೌಂಡೇಶನ್, ಕೆ.ಎನ್.ಭಟ್ ಖಂಡಿಗ ಇವರ ಸಂಘಟನೆಗಳಲ್ಲಿ ಕೂಟ, ಆಟಗಳು ತಂಡಕ್ಕೆ ಬೋನಸ್. ದೆಹಲಿಯ ಕನ್ನಡಿಗರನ್ನು, ಕಲಾ ಮನಸ್ಸುಗಳನ್ನು ಹತ್ತಿರದಿಂದ ನೋಡುವ ಅವಕಾಶ. ಗೋವಿಂದ ಭಟ್ಟರಿಗೆ ಎಲ್ಲಾ ಕನ್ನಡ ಮನಸ್ಸುಗಳು ಗೌರವ ಮತ್ತು ಅಭಿನಂದನೆಗಳನ್ನು ನೀಡಿವೆ. ಭಟ್ಟರು ದೆಹಲಿಗೆ ಹೊಸಬರಲ್ಲವಾದರೂ ಪ್ರಶಸ್ತಿಯ ಹಿನ್ನೆಲೆಯಲ್ಲಿ ಹೊಸ ಹುಮ್ಮಸ್ಸು ಹೊಂದಿದ್ದರು. ಆರು ದಶಕಗಳ ಕಾಲ ಬಣ್ಣದ ಬದುಕನ್ನು ಪ್ರೀತಿಸಿದ್ದ ಕಲಾವಿದನ ಸಾಧನೆಯು ರಾಷ್ಟ್ರ ಮಟ್ಟದಲ್ಲಿ ದಾಖಲಾಗಿರುವುದು ಹೆಮ್ಮೆ ಪಡುವ ವಿಚಾರ.
ಗೋವಿಂದ ಭಟ್ಟರು ಪ್ರಶಸ್ತಿ ಸ್ವೀಕರಿಸಿ ಮರಳಿದ್ದಾರೆ. ಅವರಿಗೆ ಎಂದಿನಂತೆ ಮೇಳದ ಜೀವನ. ನಿಜ ಬದುಕಿನಲ್ಲಿ ನಿರ್ಲಿಪ್ತ ಭಾವ. ಮೇಳದ ಚೌಕಿಯೇ ಸರ್ವಸ್ವ. ಅದರ ಹೊರತಾದ ಆಕಾರ-ವಿಕಾರಗಳು ಅವರಿಗೆ ಬೇಕಾಗಿಲ್ಲ. ರಂಗದ ಪಲ್ಲಟಗಳನ್ನು ನೋಡುತ್ತಾ ಮೌನಿಯಾಗುವ ಗೋವಿಂದ ಭಟ್ಟರು ಯಕ್ಷಗಾನ ಕಂಡ ವಿಸ್ಮಯ. ಪ್ರಶಸ್ತಿಯ ವಿಚಾರ, ಸಂಭ್ರಮ, ಖುಷಿಗಳನ್ನು ಸದ್ದು-ಗದ್ದಲದಿಂದ ಹಂಚಿಕೊಳ್ಳರು. ಅದು ಅವರ ಮನಸ್ಥಿತಿ. ಆ ಖುಷಿಯನ್ನು ನಾವು ಅವರೊಂದಿಗೆ ಹಂಚಿಕೊಳ್ಳಬೇಕಲ್ವಾ.
ಅಕಾಡೆಮಿ ಪ್ರಶಸ್ತಿಯ ಬಾಗಿನದಿಂದ ಕಲಾವಿದರಾದ ನಾವು ಎಷ್ಟು ಸಂಭ್ರಮಿಸಿದ್ದೇವೆ? ಎಷ್ಟು ಮಂದಿ ಆಭಿಮಾನಿಗಳು ಗ್ರಹಿಸಿದ್ದಾರೆ? ಎಷ್ಟು ಮೇಳದ ಯಜಮಾನರು ಅಭಿನಂದಿಸಿದ್ದಾರೆ? ಮಾಧ್ಯಮಗಳಲ್ಲಿ ಎಷ್ಟು ಜಾಗ ಪಡೆದಿದೆ? ಮುಖಪುಟದಲ್ಲಿ ಸುದ್ದಿಯಾಗಬೇಕಾದ ಪ್ರಶಸ್ತಿಯ ವಿಚಾರ ಕಾಲಂಗಳಿಗೆ ಸೀಮಿತವಾಗಿತ್ತು ಅಲ್ವಾ. ಇಂತಹ ವಿಚಾರಗಳನ್ನು ಪ್ರಶಸ್ತಿ ಪುರಸ್ಕøತರು ಖಂಡಿತಾ ಅಪೇಕ್ಷಿಸರು. ಆದರೆ ಯಾವ ರಂಗದಿಂದ ನಾವು ರಂಗಸುಖವನ್ನು ಅನುಭವಿಸುತ್ತೇವೋ ಅದೇ ರಂಗದ ಕಲಾವಿದನಿಗೆ ಪ್ರಶಸ್ತಿ ಬಂದಾಗಲೂ ಉಪೇಕ್ಷಿಸುವುದು ಏನನ್ನು ಸೂಚಿಸುತ್ತದೆ?
ಈಚೆಗೆ ಮೇಳದ ಚೌಕಿಗೆ ಪ್ರವೇಶವಾದರೆ ಸಾಕು, ರಂಗ ಮತ್ತು ಪಾತ್ರಗಳ ಬಗ್ಗೆ ಹಗುರವಾಗಿ ಮಾತನಾಡುವ ಸಾಕಷ್ಟು ಮಂದಿಯ ಪರಿಚಯವಿದೆ. ಗೋವಿಂದ ಭಟ್ಟರ ವ್ಯಕ್ತಿತ್ವದಲ್ಲೇ ರಂಗದ ಕುರಿತು ವಿಷಾದವಿಲ್ಲದ ನಿಲುವನ್ನು ನೋಡಿ ಆಶ್ಚರ್ಯಪಟ್ಟಿದ್ದೇನೆ. ಬದುಕನ್ನು ಮತ್ತು ರಂಗವನ್ನು ಅಧ್ಯಯನ ಮಾಡುತ್ತಾ ಬೆಳೆದ ಭಟ್ಟರ ಅಧ್ಯಯನಶೀಲ ಚಿಕಿತ್ಸಕ ದೃಷ್ಟಿ ಅಜ್ಞಾತ. ಅದು ಎಂದಿಗೂ ಎಂದೆಂದಿಗೂ ಮೌನ. ಮಾತಾದರೆ ಬೊಗಸೆಯಷ್ಟು ಮೊಗೆಯಬಹುದಷ್ಟೇ.
‘ಕಲಾವಿದನಾಗಬೇಕಾದರೆ ತಾನು ಯಕ್ಷಗಾನವೇ ಆಗಬೇಕು. ಆಗ ಪಾತ್ರಗಳು ಮನದೊಳಗೆ ಇಳಿಯುತ್ತವಷ್ಟೇ,’ ಇದು ಗೋವಿಂದ ಭಟ್ಟರ ಸ್ವ-ರೂಢಿತ ವ್ಯಕ್ತಿತ್ವ. ಇಂತಹ ವ್ಯಕ್ತಿತ್ವ ರೂಢನೆಗೊಂಡಾಗ ಉಂಟಾಗುವುದೇ ನಿರ್ಲಿಪ್ತತೆ. ನಿಜ ಬದುಕು ನಿರ್ಲಿಪ್ತವಾಗದೆ ಕಲೆಯನ್ನು ಅನುಭವಿಸಲು ಸಾಧ್ಯವಿಲ್ಲ. ಇಂತಹ ಕಲಾಯೋಗಿಗೆ ಪ್ರಾಪ್ತವಾದ ಪ್ರಶಸ್ತಿಯು ಸದ್ದಾಗಬೇಕಿತ್ತು.
ಪ್ರಜಾವಾಣಿ / ದಧಿಗಿಣತೋ ಅಂಕಣ / 9-2-2018
No comments:
Post a Comment