ಯಕ್ಷಗಾನದ ನಿವೃತ್ತ, ನಿವೃತ್ತಿಯಂಚಿಗೆ ವಾಲುತ್ತಿರುವ ಮತ್ತು ಬದುಕಿನರ್ಧ ಸೆಂಚುರಿ ಪೂರೈಸಿದ ಕಲಾವಿದರನ್ನು ಮಾತನಾಡಿಸಿ. ಒಬ್ಬೊಬ್ಬನ ಹಿಂದೆ 'ಕಲಿಸಿದ ಗುರುಗಳ, ಕಲಿತ ಕೇಂದ್ರ'ದ ಕ್ಷಣಗಳ ರೋಚಕ ಅನುಭವಗಳಿವೆ. ಹೊಸ ತಲೆಮಾರಿನ ಕಲಾವಿದರನ್ನು ಸಂದರ್ಶಿಸಿ. ಕಲಿಸಿದ ಗುರುಗಳ ಹೆಸರು ಉಲ್ಲೇಖಿತವಾಗುತ್ತದೆ, ಕೇಂದ್ರದ ಸೊಲ್ಲಿರುವುದಿಲ್ಲ.
ಬಹುತೇಕ ಯಕ್ಷಗಾನ ಕಲಿಕಾ ಕೇಂದ್ರಗಳು ಉಸಿರು ನಿಲ್ಲಿಸಿವೆ. ಕೆಲವು ಉಸಿರೆಳೆಯುತ್ತಿವೆ. ಅಲ್ಲೋ ಇಲ್ಲೋ ಬೆರಳೆಣಿಕೆಯವು ಉಸಿರಾಡುತ್ತಿವೆ. ಒಂದೆಡೆ ವಿದ್ಯಾರ್ಥಿಗಳ ಅಲಭ್ಯತೆ. ಮತ್ತೊಂದೆಡೆ ಕೇಂದ್ರದಲ್ಲಿದ್ದುಕೊಂಡು ಕಲಿಯಲು ಹಿಂದೇಟು ಹಾಕುವ ಯುವ ಮನಸ್ಸುಗಳು. ಕಾರಣ, ಅವರನ್ನು ಸುತ್ತುತ್ತಿರುವ ವ್ಯಾವಹಾರಿಕ ಪ್ರೇರಣೆ. ಒಟ್ಟಿನಲ್ಲಿ ಈಗ ಯಕ್ಷಗಾನವು ಹೊಟ್ಟೆಪಾಡಿನ ವಿಷಯವಾಗಿಲ್ಲ! ಪ್ರೀತಿ, ಬದ್ಧತೆ, ನಿಷ್ಠೆಗಳ ಕೊಂಡಿಗಳು ಸಡಿಲವಾಗುತ್ತಿವೆ.
ಗುರುಗಳ ಜತೆಗಿದ್ದುಕೊಂಡು ಕಲಿಯುವ ಕಲಿಕೆಯು ಶಿಷ್ಯನಿಗೆ ಶ್ರೀರಕ್ಷೆಯಿದ್ದಂತೆ. ಆ ಗಟ್ಟಿಯಾದ ಕಲಿಕೆ ಆತನನ್ನು ಔನ್ನತ್ಯಕ್ಕೇರಿಸುತ್ತದೆ. ಇದು ಬೌದ್ಧಿಕ ಗಟ್ಟಿತನಕ್ಕೆ ಸಹಕಾರಿ ಕೂಡಾ. ರಂಗದ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳು, ಅನುಭವ ಸಾರಾಮೃತಗಳನ್ನು ಪ್ರತ್ಯೇಕವಾಗಿ ಕಲಿಯುತ್ತೇನೆಂದರೆ ಅಸಾಧ್ಯ. ಗುರುವಿನ ಸಾಂಗತ್ಯದಲ್ಲೇ ಆರ್ಜಿಸಿಕೊಳ್ಳಬೇಕು, ಎಂದು ಹಿರಿಯ ಭಾಗವತ ಪದ್ಯಾಣ ಗಣಪತಿ ಭಟ್ ಹೇಳುತ್ತಾರೆ. ಅವರು ಗುರುಕುಲ ಪದ್ಧತಿಯಲ್ಲಿ ಬೆಳೆದು ಏರಿದವರು.
ಕಾಸರಗೋಡು (ಕೇರಳ) ಸರಕಾರಿ ಕಾಲೇಜಿನಲ್ಲಿ ೨೦೧೬ ಮಾರ್ಚ್ 1 ರಂದು ಯಕ್ಷಗಾನ ಸಂಶೋಧನಾ ಕೇಂದ್ರ ಉದ್ಘಾಟನೆಯಾಗುತ್ತಿದ್ದಾಗ ಕೇಂದ್ರಗಳ ನೆನಪುಗಳು ಒತ್ತರಿಸಿ ಬಂದುವು. ಮಲೆಯಾಳ ನೆಲದಲ್ಲಿ ಪಾರಂಪರಿಕ ಪ್ರಾಕಾರವೊಂದಕ್ಕೆ ಸಂಶೋಧನೆಯ ಸ್ಪರ್ಶ ನೀಡಿದ ಘಳಿಗೆಯು ಪತ್ರಿಕೆಯ ವರದಿಗೆ ಸೀಮಿತವಲ್ಲ. ಕಲೆಯೊಂದಿಗೆ ಮನಸ್ಸನ್ನು ಕಟ್ಟುವ ದೊಡ್ಡ ಹೆಜ್ಜೆ ಮತ್ತು ದೀಕ್ಷೆಯನ್ನು ಸ್ವೀಕರಿಸಿದ ಸಂಶೋಧನಾ ಕೇಂದ್ರದ ಹೆಗಲುಗಳ ಜವಾಬ್ದಾರಿ ಹಿರಿದು. ಯಕ್ಷಗಾನದ ಕಲಿಕಾ ಶಾಲೆಗಳು ಮುಚ್ಚಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಶಾಲೆಯಲ್ಲಿ (ಕಾಲೇಜು) ಯಕ್ಷಗಾನದ ಕೇಂದ್ರ ಶುರುವಾದುದು ಅಕಾಡೆಮಿಕ್ ನೆಲೆಯಲ್ಲಿ ಪ್ರಸ್ತುತ, ಎಂದು ವಾಸ್ತವದತ್ತ ಬೆರಳು ತೋರಿದವರು - ಕಲಾವಿದ ತಾರಾನಾಥ ಬಲ್ಯಾಯರು.
ಕಾಸರಗೋಡಿನ ಅಭಿವೃದ್ಧಿಯ ಭಾಗವಾಗಿ ಸರಕಾರಿ ಪ್ರಣೀತ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಶ್ರೀಕಾರ ಬರೆದ ಶಾಸಕ ಎನ್.ಎ.ನೆಲ್ಲಿಕುನ್ನು ಅವರ ಕಾಳಜಿ, ಶ್ರಮ ಶ್ಲಾಘ್ಯ. ಐದು ಲಕ್ಷ ರೂಪಾಯಿಯ ಮೂಲ ನೆರವಿನೊಂದಿಗೆ ಸಂಶೋಧನಾ ಕೇಂದ್ರದ ಬಾಗಿಲು ತೆರೆದಿದೆ. ಚಿಕ್ಕ ಮ್ಯೂಸಿಯಂ ರೂಪುಗೊಂಡಿದೆ. ಕಾಲೇಜು ಪ್ರಾಂಶುಪಾಲರು ಅಧ್ಯಕ್ಷರಾಗಿರುವ ಆಡಳಿತ ಮಂಡಳಿಯಿದೆ. ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಕೇಂದ್ರವು ಶೈಕ್ಷಣಿಕ ಮಾನ್ಯತೆಯನ್ನು ಪಡೆದಿದೆ. ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಸಂಚಾಲಕರಾಗಿ ನಿಯುಕ್ತಿಗೊಂಡಿದ್ದಾರೆ.
ಎಷ್ಟೋ ಸಲ ಇಂತಹ ಸರಕಾರಿ ಸಂಯೋಜಿತ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಸಹಭಾಗಿತ್ವ ಕಡಿಮೆ. ಸರಕಾರದ ವಿವಿಧ ಮುಖಗಳನ್ನು ನೋಡಿದ ಅನುಭವದಲ್ಲಿ ಜನರ ಮನಃಸ್ಥಿತಿ ಸ್ಥಾಪಿತವಾದ ದಿಕ್ಕಿನತ್ತ ಸಾಗುವುದು ಅಪರಾಧವಲ್ಲ. ಇದೆಲ್ಲಾ ಯಕ್ಷಗಾನದ ಅಭಿವೃದ್ಧಿಗೆ ಸಹಕಾರಿಯಾಗಬಹುದೇ? ಕಲಾವಿದರಿಗೆ ಪ್ರಯೋಜನವೇ? ಮುಂತಾದ ಸಿದ್ಧ ಚುಚ್ಚುಪ್ರಶ್ನೆಗಳು ರಾಚಿಕೊಳ್ಳುತ್ತವೆ, ಗರಿಕೆದರುತ್ತವೆ. ಕೇವಲ ಹಣವೊಂದನ್ನೇ ಮೂಲವಾಗಿಟ್ಟುಕೊಂಡು ಹಗುರವಾಗಿ ಕಾಣುವ, ಮಾತನಾಡುವ ಬಂಧುಗಳ ಮಾತಿನ ವರಸೆ... ಇವೆಲ್ಲವನ್ನೂ ಸಮನ್ವಯ ಗೊಳಿಸುವುದು ಸಂಚಾಲಕರ ಮುಂದಿರುವ ಸವಾಲು.
ಕಾಸರಗೋಡು ಜಿಲ್ಲೆಯ ಒಂದೊಂದು ಯಕ್ಷಗಾನ ಸಂಘಗಳು ಕೂಡಾ ಸಂಶೋಧನಾ ಕೇಂದ್ರಗಳೇ! ನಾಲ್ಕೈದು ದಶಕಗಳ ಅನುಭವದ ಹವ್ಯಾಸಿ ಸಂಘಗಳಿವೆ. ಇತಿಹಾಸ ನಿರ್ಮಿಸಿದ ಮೇಳಗಳಿವೆ. ಅಲ್ಲಿ ಗೆಜ್ಜೆ ಕಟ್ಟಿದ ಅಸಂಖ್ಯಾತ ಕಲಾವಿದರಿದ್ದಾರೆ. ವರಕವಿ ಪಾರ್ತಿಸುಬ್ಬನ ನೆಲದಲ್ಲಿ ಯಕ್ಷಗಾನವನ್ನು ಮೇರುವಿನತ್ತ ಒಯ್ದ ಹಿರಿಯರಿದ್ದಾರೆ. ಅವರ ಜಾಡಿನಲ್ಲಿ ಸಾಗುವ ಯುವ ಪೀಳಿಗೆಯಿದೆ. ಅತ್ತಿತ್ತ ಚದುರಿದ ಇವರನ್ನೆಲ್ಲಾ ಹಳಿಗೆ ತರುವ ದೊಡ್ಡ ಕೆಲಸ ಸಂಚಾಲಕರಲ್ಲಿದೆ. ಇದೆಲ್ಲಾ ಒಂದೆರಡು ವರುಷದಲ್ಲಿ ಆಗುವಂತಹುದಲ್ಲ. ಕಲಾವಿದರನ್ನು, ಅಭಿಮಾನಿಗಳನ್ನು, ಸಮಾಜವನ್ನು ಎಷ್ಟು ಬೇಗ ತೆಕ್ಕೆಯೊಳಗೆ ಸೇರಿಸಿಕೊಳ್ಳುತ್ತದೋ ಅಷ್ಟು ಕೇಂದ್ರವು ಗಟ್ಟಿಯಾಗುತ್ತದೆ.
ಕೇಂದ್ರವು ಅಕಾಡೆಮಿಕ್ ಶಿಸ್ತನ್ನು ಕಾಪಾಡಿಕೊಂಡು ಹಮ್ಮಿಕೊಳ್ಳುವ ಕಾರ್ಯಸೂಚಿಗಳು ಮೊದಲಾದ್ಯತೆಯಲ್ಲಿ ಆಗಬೇಕಾಗಿದೆ. ಯಕ್ಷಗಾನಕ್ಕೆ ಸಂಬಂಧಪಟ್ಟ ಎಲ್ಲಾ ವಿಚಾರಗಳ ಮನನ, ತಾಳಮದ್ದಳೆ, ಪ್ರದರ್ಶನ, ದಾಖಲೀಕರಣ, ಪ್ರಸಂಗ ಸಾಹಿತ್ಯ, ಕಲಾವಿದರ ಡೈರಿ, ಯಕ್ಷಗಾನ ಪತ್ರಿಕೆ, ತರಬೇತಿ ಶಿಬಿರ, ವಿಚಾರ ಸಂಕಿರಣ.. ಹೀಗೆ ಹಲವು ಯೋಜನೆಗಳು ಹಿಡಿಯೊಳಗಿವೆ. ಎಲ್ಲವೂ ಆರ್ಥಿಕತೆಯನ್ನು ಬೇಡುವ ಯೋಜನೆಗಳು. ಇಂದು ಒಂದು ಸರಕಾರವಿರುತ್ತದೆ. ಸ್ವಲ್ಪ ಸಮಯದಲ್ಲಿ ಇನ್ನೊಂದು ಆಡಳಿತ ಬರುತ್ತದೆ. ಆಗ ಸಹಾಯಧನದ ಹರಿವಿಗೆ ತೊಡಕಾಗಲೂ ಬಹುದು. ಹಾಗಾಗಿ ಸರಕಾರದ ಪಾಲುಗಾರಿಕೆಯೊಂದನ್ನೆ ನೆಚ್ಚಿಕೊಳ್ಳುವಂತಿಲ್ಲ. ಕಲಾಭಿಮಾನಿಗಳ, ಕಲಾವಿದರ, ಸಂಘಸಂಸ್ಥೆಗಳ ಮತ್ತು ಉಳ್ಳವರ ಸಹಭಾಗಿತ್ವ ಅವಶ್ಯ.
ಹಲವೆಡೆ ನೋಡುತ್ತಿದ್ದೇನೆ. ಕಲಾವಿದರನ್ನು ಮರೆತ ಯಕ್ಷಗಾನ ಸಂಬಂಧಿ ಕಾರ್ಯಕ್ರಮಗಳು ಉದ್ಘಾಟನೆಯಾಗಿ, ಸಮಾರೋಪಗೊಳ್ಳುತ್ತವೆಯಷ್ಟೇ. ಹೇಳುವಂತಹ ದಾಖಲಿತ ಫಲತಾಂಶವಿಲ್ಲ. ಹಾಗಾಗಿ ಕೇಂದ್ರವೊಂದು ಸದೃಢವಾಗಲು ಕಲಾವಿದರ ಪ್ರಾಂಜಲ ಬೆಂಬಲ, ಪ್ರೋತ್ಸಾಹ ಬೇಕು. ಕೇಂದ್ರದ ಸಂಚಾಲಕ ರತ್ನಾಕರರಿಗೆ ಯಕ್ಷಗಾನದ ಒಳಮರ್ಮ ತಿಳಿದಿರುವುದರಿಂದ ಕಷ್ಟವಾಗಲಾರದು.
ಕಾಸರಗೋಡಿನ ಯಕ್ಷಗಾನದ ಸಂಶೋಧನ ಕೇಂದ್ರವು ಈ ದಿಸೆಯಲ್ಲಿ ಅಂಬೆಗಾಲಿಕ್ಕುತ್ತಾ ಹೆಜ್ಜೆ ಊರಲಿ. ಈ ಕಾಲಕ್ಕೆ ಅಗತ್ಯವಾದ ದಾಖಲೀಕರಣದಂತಹ ಮಹತ್ವದ ಕೆಲಸಗಳನ್ನು ಪ್ರಥಮಾದ್ಯತೆಯಲ್ಲಿ ಮಾಡುವಂತಾಗಲಿ. ವೈಚಾರಿಕ ಭಿನ್ನಾಭಿಪ್ರಾಯಗಳು ವಿಷಯಕ್ಕೆ ಸೀಮಿತವಾಗಿರಲಿ. ಯಕ್ಷಗಾನಕ್ಕೆ ಬಹುಬೇಗ ಅಂಟುವ 'ಸ್ವ-ಪ್ರತಿಷ್ಠೆಗಳ ಮೇಲಾಟ'ಗಳು ಸ್ಪರ್ಶಿಸದಿರಲಿ ಎಂದು ಆಶಿಸೋಣ.
(ಪ್ರಜಾವಾಣಿ/ದಧಿಗಿಣತೋ ಅಂಕಣ)
No comments:
Post a Comment