ಯಕ್ಷಗಾನ ಆಟಗಳಲ್ಲಿ ರಂಗ ಸುಖದ ಪದರ ಯಾಕೆ ತೆಳುವಾಗಿದೆ?, ಹವ್ಯಾಸಿಯಾಗಿ ವೇಷಮಾಡುವ ಖಯಾಲಿಯ ನನ್ನನ್ನು ಆಗಾಗ್ಗೆ ಕಾಡುವ ಪ್ರಶ್ನೆ. ವೇಷವೋ, ಕಲಾವಿದನೋ, ಹಿಮ್ಮೇಳವೋ... ಅರ್ಥವಾಗದೆ ಅರ್ಥವನ್ನು ಹುಡುಕುತ್ತಿದ್ದೇನೆ! ಅರ್ಥ ಆಗದೇ ಇರುವುದು ನನ್ನ ದೌರ್ಬಲ್ಯ! ಮಿತಿ, ಮನಃಸ್ಥಿತಿ. ಬಹುತೇಕ ಸಂದರ್ಭಗಳಲ್ಲಿ ಪಾತ್ರದ ಬದಲು ವೇಷಧಾರಿಯೇ ಕಣ್ಮುಂದೆ ಕಾಣುತ್ತಿರುತ್ತಾರೆ. ಪೌರಾಣಿಕ ಲೋಕವನ್ನು ರಂಗವು ಕಟ್ಟಿಕೊಡುವಲ್ಲಿ ಸೊರಗುತ್ತಿದ್ದರೂ ಆಟವು 'ರೈಸುತ್ತಿದೆ'!
ಪುತ್ತೂರಿನ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎಡನೀರು ಮಠಾಧೀಶ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ 'ಚಾತುರ್ಮಾಸ್ಯ ವೃತಾಚರಣೆ'. ಈ ಸಂದರ್ಭದಲ್ಲಿ - 27-7-2016- ಮಂಟಪ ಪ್ರಭಾಕರ ಉಪಾಧ್ಯರ 'ಮೋಹ ಮೇನಕೆ' ಪ್ರದರ್ಶನ. ಎರಡು ಗಂಟೆಗಳ ಕೌಶಿಕ ಚರಿತ್ರೆ ಆಖ್ಯಾನ. ಪ್ರದರ್ಶನ ಮುಗಿದಾಗ ಕೆಲವು ಚೋದ್ಯಗಳಿಗೆ ಉತ್ತರ ಸಿಕ್ಕಿತ್ತು.
ರಂಗವನ್ನು ವೀಕ್ಷಿಸುತ್ತಾ ಹೋದಂತೆ ನಮಗರಿವಿಲ್ಲದೆ ಭಾವದೊಳಗಿಳಿಯುವುದೇ ರಂಗಸುಖ. ಪಾತ್ರವೊಂದರ ನಿರ್ವಹಣೆಯಲ್ಲಿ ಸೂಕ್ಷ್ಮ ಸಂಗತಿಗಳು ಕ್ಷಿಪ್ರವಾಗಿ ಹಾದುಹೋದಾಗ ಬುದ್ಧಿ ಚುರುಕಾಗುತ್ತದೆ. ಏಕಾಗ್ರತೆಯತ್ತ ವಾಲುತ್ತೇವೆ. ಆವಾಗಲೇ ಭಾವಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವ ಅರ್ಹತೆ ಬಂದುಬಿಡುತ್ತದೆ. ಯಾವಾಗ ಅರ್ಹತೆ ಬಂತೋ ಆಗ ರಂಗಸುಖದ ಬಾಗಿಲು ತೆರೆದುಕೊಳ್ಳುತ್ತದೆ. ಅನುಭವಿಸಲು ಮನಸ್ಸು ಸಜ್ಜಾಗುತ್ತದೆ.
ಮಂಟಪ ತಂಡದ 'ಮೋಹ ಮೇನಕೆ'ಯು ರಂಗಸುಖವನ್ನು ಕೊಡುವ ಬಗೆಯಿದು. ಕುಣಿತಗಳ ಲಂಬನವಿಲ್ಲ. ಭಾವಾಭಿವ್ಯಕ್ತಿಗೆ ಒತ್ತು. ರಸಭಂಗ ವಿಚಾರಗಳ ನುಸುಳುವಿಕೆಯಿಲ್ಲ. ತ್ರಿವುಡೆ ತಾಳಗಳ ಪದ್ಯಗಳು ಬಂದಾಗ ಹಿಮ್ಮೇಳ ಗೆಜಲುವುದಿಲ್ಲ! ಮದ್ದಳೆ, ಚೆಂಡೆಗಳು ಅನಗತ್ಯವಾಗಿ ಸದ್ದುಮಾಡುವುದಿಲ್ಲ. ವೈಯಕ್ತಿಕ ವಿಚಾರಗಳ ಹಿಂಸೆಯಿಲ್ಲ. ಪ್ರೇಕ್ಷಕರನ್ನು ನಗಿಸಲೇಬೇಕೆಂಬ ಹಠವಿಲ್ಲ. ಸನ್ನಿವೇಶ ಪೋಷಣೆಗೆ ಪೂರಕವಾಗುವಂತಹ ಪಾತ್ರಗಳ ಆಯ್ಕೆ.
ರಂಗಸುಖದ ಅನುಭವ ಹೇಳುವಾಗ ಇಷ್ಟು ಹೇಳಲೇಬೇಕಲ್ವಾ. ಇದೇನೂ ಹೊಗಳಿಕೆಯಲ್ಲ. ಕೌಶಿಕ, ಮೇನಕೆ, ಮನ್ಮಥ, ವಸಂತ, ನಾರದ, ಕಣ್ವ ಪಾತ್ರಗಳು ರಂಗವನ್ನು ಗೆದ್ದಿವೆ. ಇಲ್ಲಿ ಮನದೊಳಿಗೆ ಸ್ಥಾಪಿಸಲ್ಪಟ್ಟ 'ರೈಸುವಿಕೆ' ಇಲ್ಲದಿರಬಹುದು. ಆದರೆ ಪಾತ್ರವೊಂದರ ಪೂರ್ತಿ ಚಿತ್ರಣವನ್ನು ಕೊಡುವಲ್ಲಿ ಮಂಟಪರ ಮೇನಕೆಯು ಸುಪುಷ್ಟವಾಗಿತ್ತು. ಭಾವಕ್ಕೂ ಭಾಷೆಯಿದೆ. ಆ ಭಾಷೆಗೂ ಶಿಷ್ಟತೆಯಿದೆ. ಶಿಸ್ತಿನ ಆವರಣವಿದೆ. ಪೌರಾಣಿಕ ಎನ್ನುವ ಪ್ರಜ್ಞೆಯಿದೆ.
ಮೇನಕೆ ವೇಶ್ಯೆಯಲ್ಲ. ಕೌಶಿಕ ಕಾಮಾಂಧನಲ್ಲ. ಕೌಶಿಕನನ್ನು ಒಲಿಸಿಕೊಳ್ಳುವುದು ಮೇನಕೆಗೆ ಅಷ್ಟು ಸುಲಭವಲ್ಲ. ಈ ಪ್ರಜ್ಞೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ, ಎನ್ನುತ್ತಾರೆ ಮಂಟಪರು. ಶೃಂಗಾರ ಸನ್ನಿವೇಶದಲ್ಲಿ ವಿಶ್ವಾಮಿತ್ರ-ಮೇನಕೆ ಸನ್ನಿವೇಶವು ಬಹುಕಡೆ ತಲೆ ತಗ್ಗಿಸುವಷ್ಟು ಅಗ್ಗವಾಗಿ ಸಂಭಾಷಣೆ ಲಂಬಿತವಾಗುತ್ತದೆ. ಅಶ್ಲೀಲದ ಸೋಂಕಿಲ್ಲದೆ ಮಂಟಪರು ಮೇನಕೆಯನ್ನು ಕಡೆದಿದ್ದಾರೆ. ಹಾಗಾದರೆ ಆಶ್ಲೀಲ ಇಲ್ಲವೋ? ಭಾವದಲ್ಲಿದೆ, ಮಾತಿನಲ್ಲಿಲ್ಲ. ಅದು ನಂನಮ್ಮ ಗ್ರಹಿಕೆಗೆ ಬಿಟ್ಟ ವಿಚಾರ.
ರಂಗದ ಸೂಕ್ಷ್ಮ ಸಂಗತಿಗಳತ್ತ ಎಚ್ಚರ ವಹಿಸಿದ್ದಾರೆ. ಉದಾ: ಕೌಶಿಕ-ಮೇನಕೆಯರ 'ಶಿಶು'. ಬೊಂಬೆಯೊಂದಕ್ಕೆ ಆಶ್ರಮದ ಮಗು ಎಂದು ಬಿಂಬಿಸಲು ತೊಡಿಸಿದ ವಸ್ತ್ರ. ಇದು ನಿರ್ಜೀವ ಗೊಂಬೆಯೆನ್ನುವುದು ಮರೆತುಹೋಗುತ್ತದೆ. ಮಗುವನ್ನು ಮುದ್ದಿಸಿ ಆಡಿಸುವ ತಾಯಿಯ ಚರ್ಯೆ ನಿಜ ಬದುಕಿನ ಕನ್ನಡಿ. ಇನ್ನೊಂದು ಶಿಶುವನ್ನು ಅಗಲುವ ಸಂದರ್ಭ. ಮೈಮೇಲಿನ ಒಡವೆ ತೆಗೆದು ಮಗುವಿನ ಮೇಲಿಡುತ್ತಾ, ಕಾಲ್ಗಜ್ಜೆಯನ್ನು ಬಿಚ್ಚಲು ತೊಡಗಿದಾಗ, 'ತಾನು ದೇವಲೋಕದ ಗಣಿಕೆ' ಪ್ರಜ್ಞೆಯ ಅಭಿವ್ಯಕ್ತಿ ಇಡೀ ಪ್ರದರ್ಶನದ ಹೈಲೈಟ್. ದುಃಖ, ಕರುಣ ರಸದ ಸಂದರ್ಭದಲ್ಲಿ ಹಿಮ್ಮೇಳದ ನವಿರಾದ ನಾದಸ್ಪಂದನ. ಹಿಮ್ಮೇಳ ಕಲಾವಿದರೂ 'ಒಂದು ಪಾತ್ರವಾಗಿ' ಕಂಡುದು ಇಷ್ಟವಾಯಿತು. ಹೀಗೆ ಪಾತ್ರವಾದಾಗ ಪ್ರೇಕ್ಷಕರ ಸಾಲಿನ ಪಿಸುದನಿಯೂ ಏಕಾಗ್ರತೆಗೆ ತೊಡಕುಂಟುಮಾಡುತ್ತದೆ.
ಅಭಿವ್ಯಕ್ತಿಯಲ್ಲಿ ಬರುವ, ಒದಗುವ, ಒದಗಬಹುದಾದ ಚಿಕ್ಕ ಚಿಕ್ಕ ಸಂಗತಿಗಳನ್ನು ಕ್ಷಿಪ್ರವಾಗಿ ಅಭಿವ್ಯಕ್ತಿಗೊಳಿಸುವ ಕಾರಣದಿಂದಲೋ ಏನೋ ರಂಗದಾಚೆಗೆ ನಮ್ಮ ದೃಷ್ಟಿಗಳು ಹರಿಯುವುದಿಲ್ಲ. ರಂಗದಾಚೆಗೆ ದೃಷ್ಟಿ ಸರಿಯುತ್ತದೆ ಎಂತಾದರೆ ದೃಷ್ಟಿ ದೋಷವಲ್ಲ. ರಂಗವು ನಮ್ಮ ದೃಷ್ಟಿಯನ್ನು ಸೆರೆಹಿಡಿಯಲು ಸೋತಿದೆ ಎಂದರ್ಥ. ಮೋಹ ಮೇನಕೆಯು ನೂರಿಪ್ಪತ್ತು ನಿಮಿಷ ದೃಷ್ಟಿಯನ್ನು ಸೆರೆಹಿಡಿದಿದೆ. ಹಾಗಾಗಿಯೇ ರಂಗಸುಖದ ಅನುಭವ. ಮೋಹದ ವಿವಿಧ ಸ್ತರಗಳ ಪ್ರಸ್ತುತಿಯು ಪ್ರಸಂಗದ ಸೂಕ್ಷ್ಮ ಆಶಯವನ್ನು ಬಿಂಬಿಸಿತು.
ಮಂಟಪ ಪ್ರಭಾಕರ ಉಪಾಧ್ಯ ಮತ್ತು ಎ.ಪಿ.ಪಾಠಕರ ನಿರ್ದೇಶನ. ನಿರ್ದೇಶನವೆಂದರೆ 'ಎಷ್ಟು ಪದ್ಯ ಹಾಡಬೇಕು, ಎಷ್ಟು ಕುಣಿಯಬೇಕು, ಎಷ್ಟು ಹೊತ್ತಿಗೆ ಮುಗಿಸಬೇಕು, ಎಂದಲ್ಲ. ಇಡೀ ಕಥಾನಕವನ್ನು ಯೋಜಿತ ಸಮಯದಲ್ಲಿ ಹಿಡಿದಿಡುವ ಎಡಿಟಿಂಗ್, ಫ್ರೇಮಿಂಗ್, ಸಂಕ್ಷಿಪ್ತ ಅರ್ಥಗಾರಿಕೆ, ಪದ್ಯಗಳು, ಯಾವ ಪದ್ಯಕ್ಕೆ ಎಷ್ಟು ಅಭಿನಯ.. ಇತ್ಯಾದಿ ಅಂಶಗಳು ನಿರ್ದೇಶನ ವ್ಯಾಪ್ತಿಗೆ ಬರುತ್ತದೆ. 'ನಿರ್ದೆೇಶನ ಗಟ್ಟಿಯಾಗಿದ್ದರೆ ಪ್ರದರ್ಶನವೂ ಪರಿಣಾಮಕಾರಿ' ಎನ್ನುವುದನ್ನು ಮೋಹಮೇನಕೆ ತೋರಿಸಿಕೊಟ್ಟಿತು.
ಮೋಹಮೇನಕೆಯನ್ನು ವೀಕ್ಷಿಸಿದ ಕಲಾವಿದೆ ಪದ್ಮಾ ಕೆ.ಆರ್.ಆಚಾರ್ಯರ ಅಭಿಮತ - " ಮಂಟಪರು ಅವರ ಪ್ರಾಯವನ್ನೂ ಮರೆತು, ಪಾತ್ರವಾಗುವ ರೀತಿ, ಬಳುಕುವ ಬಳ್ಳಿಯಾಗಿ, ಅಭಿನಯದೊಡತಿಯಾಗಿ ಪ್ರೇಕ್ಷರ ಮೆಚ್ಚುಗೆಗೆ ಪಾತ್ರವಾಗುವ ಬಗೆಯನ್ನು ನೋಡಿಯೇ ಅನುಭವಿಸಬೇಕು. ಪಾತ್ರದಲ್ಲಿ ತಲ್ಲೀನರಾಗುವ ಬಗೆಯಂತೂ ಅನನ್ಯ."
ಹಿಮ್ಮೇಳದಲ್ಲಿ ಅನಂತ ಪದ್ಮನಾಭ ಪಾಠಕ್ (ಭಾಗವತಿಕೆ), ದೇವದಾಸ್ ರಾವ್ (ಮದ್ದಳೆ), ಗುರುರಾಜ ಐತಾಳ್ (ಚೆಂಡೆ), ಮಂಟಪ ಉಪಾಧ್ಯ, ಪ್ರಶಾಂತವರ್ಧನ್, ಮಂಜು ಹವ್ಯಕ, ವಿನಯ ಭಟ್ - ವೇಷಧಾರಿಗಳು. ಧಾರವಾಡದ ದಿವಾಕರ ಹೆಗಡೆಯವರಿಂದ ಪದ್ಯ ರಚನೆ. ಇದು ಎಪ್ಪತ್ತನಾಲ್ಕನೇ ಪ್ರದರ್ಶನ. ಏಕವ್ಯಕ್ತಿಯಿಂದ ಯುಗಳದತ್ತ ಹೆಜ್ಜೆಯೂರಿದ ಮಂಟಪರಿಂದ ಈಗ ಪೂರ್ಣ ಪ್ರಮಾಣದ ಪ್ರದರ್ಶನ.
ಸಮಕಾಲೀನ ಯಕ್ಷಗಾನವು ಮಂಟಪರನ್ನು ಒಪ್ಪದಿರಬಹುದು. ಒಪ್ಪಬೇಕೆಂಬ ಆಗ್ರಹ ಅವರಿಗಿಲ್ಲ ಬಿಡಿ. ರಂಗ ನಿರ್ದೇಶನದ ಅಗತ್ಯವನ್ನು ಹಲವು ದಶಕಗಳಿಂದ ಮಾತನಾಡುತ್ತಾ ಬಂದಿದ್ದೇವೆ. ಈಗಲೂ ಮಾತನಾಡುತ್ತೇವೆ. ಮುಂದೆಯೂ ಮತನಾಡದೆ ಬಿಡುವುದಿಲ್ಲ! ಕನಿಷ್ಠ ನಮಗೆ ನಾವೇ ನಿರ್ದೇಶಕರಾದರೆ ಬಹುತೇಕ ರಂಗ ಸನ್ನಿವೇಶಗಳನ್ನು ಜನರ ಮನದೊಳಗೆ ಇಳಿಯುವಂತೆ ಮಾಡಬಹುದು.
(ಚಿತ್ರಗಳು: ಮುರಳಿ ರಾಯರಮನೆ)
No comments:
Post a Comment