ನಾಲ್ಕು ದಶಕಕ್ಕೂ ಮೀರಿದ ಯಕ್ಷ ಯಾನ. ಯಕ್ಷಗುರು ಮಾಂಬಾಡಿ ನಾರಾಯಣ ಭಟ್ಟರ ಶಿಷ್ಯ. ಶೇಣಿ, ಸಾಮಗರಂತಹ ಉದ್ಧಾಮರ ಮಾರ್ಗದರ್ಶನ. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು, ದಿವಾಣ ಭೀಮ ಭಟ್ಟ ಮೊದಲಾದ ಪ್ರಚಂಡ ಹಿರಿಯರೊಂದಿಗೆ ಹದವಾದ ನಾದಪಾಕ. ಅಗರಿಯವರ ರಂಗ ನಿರ್ದೇಶನದ ಉತ್ತರಾಧಿಕಾರಿ. ಸುರತ್ಕಲ್ ಮೇಳಕ್ಕೆ ಶಾರೀರ ಬಲದಿಂದ ಮಾನ-ಸಂಮಾನವನ್ನು ಒದಗಿಸಿಕೊಟ್ಟವರು. ಬದ್ಧತೆಯ ಬದುಕಿಗೆ ಗೌರವ ತಂದವರು.
ಇದು ಭಾಗವತ ಪದ್ಯಾಣ ಗಣಪತಿ ಭಟ್ಟರ (Padyana Ganapathi Bhat) ಗುಣ-ಕಥನ. ಯಕ್ಷಗಾನಕ್ಕೆ ಪೂರ್ತಿ ಸಮರ್ಪಿತ. ಬದುಕು ಸಮರ್ಪಿತವಾಗದ್ದಿರೆ ವಶವಾಗುವುದೆಂತು? ಗಣಪತಿ ಭಟ್ಟರು ರಂಗಕ್ಕೆ ಶರಣಾಗಿದ್ದಾರೆ. ಶರಣಾಗುವುದು ಇವರಿಗೆ ಸ್ವ-ಭಾವ. ಶರಣಾಗತನನ್ನು ಮೇಲೆತ್ತುವುದು ರಂಗದ ಭಾವ. ಹಾಗಾಗಿ ನೋಡಿ, ಹಲವು ಶೈಲಿ, ಮಟ್ಟುಗಳ ಮಧ್ಯೆ 'ಸ್ವ-ಶೈಲಿ'ಯ ರೂಪೀಕರಣ. ಬಲಿಪ, ಕಡತೋಕ, ಅಗರಿ.. ಯಂತಹ ಪ್ರಸಿದ್ಧ ಶೈಲಿಗಳ ಸಾಲಿಗೆ ಪದ್ಯಾಣ ಶೈಲಿಯ ಪೋಣಿಕೆ.
ಪೋಣಿಕೆಯಾದ ಸುವರ್ಣ ಪುಷ್ಪ ಬಾಡಿಲ್ಲ, ಬಾಡುವುದಿಲ್ಲ. ಬಾಡಿದರೆ ಸುವರ್ಣವಾಗುವುದು ಹೇಗೆ? ಸುವರ್ಣದಂತೆ ಕೋರೈಸದ, ಆದರೆ ಮನಸೆಳೆಯುವ, ಮನದೊಳಗೆ ಇಳಿಯುವ, ಇಳಿದು ಪರಿಣಾಮ ಬೀರುವ ಪದ್ಯಾಣರ ಹಾಡಿನ ನಾದತೆಯು ಅನ್ಯಾದೃಶ. ಆ ನಾದಕ್ಕೊಂದು ಮನಸ್ಸಿದೆ. ಭಾಷೆಯಿದೆ. ಹಾಗಾಗಿ ನೋಡಿ, ಪದ್ಯಾಣರು ಹಾಡಿದರೆಂದರೆ ಭಾವ ನಲಿಯುತ್ತದೆ. ಒಂದು ಭಾಗವತಿಕೆ ಇಷ್ಟು ಪರಿಣಾಮ ನೀಡಿದರೆ ಸಾಕಲ್ವಾ.
ಬಾಲಕ ಗಣಪತಿ, ಮನೆಗೆ ಭಾರ! ಶಾಲೆಗೆ ಬಾರ. ಉತ್ತಮಿಕೆ ದೂರ. ತನಗೆ ತಾನೇ ಭಾರ! ಇದು ಧರ್ಮಸ್ಥಳದಲ್ಲಿ ಹಗುರವಾಯಿತು. ಗುರು ಮಾಂಬಾಡಿಯವರು ಹದಗೊಳಿಸಿದರು. ಮನದೊಳಗೆ ಯಕ್ಷಗಾನವನ್ನು ಇಳಿಸಿದರು. ಅದು ರೂಪು ಪಡೆಯಿತು. ರೂಪಕ್ಕೆ ಚೆಲುವು ಕೊಟ್ಟರು. ಸೊಗಸು ಹೊಸೆಯಿತು. ಮೂರುವರೆ ತಿಂಗಳ ಕಲಿಕೆಯಲ್ಲಿ 'ಭರವಸೆ'ಯೊಂದು ಚಿಗುರಿತು. ಅದು ಸಸಿಯಾಗಿ ಹೆಮ್ಮರವಾಯಿತು.
ಪದ್ಯಾಣ ಪುಟ್ಟುನಾರಾಯಣ ಭಾಗವತರ ಮೊಮ್ಮಗ ಗಣಪತಿ ಭಟ್. ತಂದೆ ತಿರುಮಲೇಶ್ವರ ಭಟ್. ಪದ್ಯಾಣದಿಂದ ಕಲ್ಮಡ್ಕದ ಗೋಳ್ತಾಜೆಯಲ್ಲಿ ವಸತಿ. ಮನೆಯೊಳಗೊಂದು ಭರವಸೆಯ ಸಸಿ ಮೊಳಕೆಯೊಡೆಯುವುದು ಯಕ್ಷಗಾನದ ಸಂಕಲ್ಪ. ಅದು ಇಡೀ ಕುಟುಂಬದ ಯಕ್ಷಾರಾಧನೆಯ ಫಲ. ಹಿರಿಯರ ಹರಕೆ.
ಸುರತ್ಕಲ್ ಮೇಳದಿಂದ ನಾದದ ಬದುಕು. ಹೊಟ್ಟೆಪಾಡಿಗಲ್ಲವೇ ಅಲ್ಲ. ಸಮಯ ಕೊಲ್ಲಲಂತೂ ಅಲ್ಲ. ಮಾಂಬಾಡಿಯವರು ಮನದೊಳಗೆ ಇಳಿಸಿದ ಕಲೆಯ ತೇವ ಆರಬಾರದಲ್ಲಾ. ಆ ತೇವವೇ ತನ್ನ ಬದುಕಿನ ಅಮೃತವೆಂದು ಮನದಟ್ಟಾಯಿತು. ಅಗರಿ ರಘುರಾಮ ಭಾಗವತರು ಹಸಿದ ಗಣಪತಿ ಭಟ್ಟರಿಗೆ ಬಡಿಸುತ್ತಾ ಬಂದರು. ಜಾಗೃತೆಯಿಂದ ಉಂಡರು. ಆದರೆ ಮುಕ್ಕಲಿಲ್ಲ! ಉಂಡದ್ದೆಲ್ಲಾ ಅಮೃತವಾಗುವಂತೆ ಯತ್ನಿಸಿದರು. ಸಾಧಿಸಿದರು.
ಯಕ್ಷಾಗಾನ ಭೀಷ್ಮ ಶೇಣಿ ಗೋಪಾಲಕೃಷ್ಣರ ನಲ್ಮೆಯ ಭಾಗವತರಾದರು. ರಾಗ, ತಾಳ, ಲಯ, ಭಾವದ ಭಾಷೆ, ಭಾಷೆಯ ಲಯ, ಪಾತ್ರದೊಳಗಿನ ಮನಸ್ಸು, ಮನಸ್ಸು ಸ್ಫುರಿಸುವ ರಸ.. ಛೇ... ಒಂದೇ, ಎರಡೇ.. ಶೇಣಿಯವರು ಮೊಗೆಮೊಗೆದು ಕೊಟ್ಟರು. ಆಪೋಶನ ಮಾಡಿದರು. ಹಾಗಾಗಿ ನೋಡಿ, ಪದ್ಯಾಣರಲ್ಲಿ ಐವತ್ತಕ್ಕೂ ಮಿಕ್ಕಿ ರಾಗಗಳು ರಸಸೃಷ್ಟಿ ಮಾಡುತ್ತವೆ!
ಮಾಂಬಾಡಿಯವರು ಯಕ್ಷಾಕ್ಷರ ಕಲಿಸಿದರು. ಅಗರಿಯವರು ಪದ ಜೋಡಿಸಲು ಹೇಳಿಕೊಟ್ಟರು. ವಾಕ್ಯವಾಗಿಸುವ ಜಾಣ್ಮೆಯನ್ನು ಶೇಣಿಯವರಿಂದ ಆರ್ಜಿಸಿದರು. ಅಕ್ಷರವಾಗಿ, ಪದವಾಗಿ, ವಾಕ್ಯವಾಗಿ ಒಂದು ಕಾಲಘಟ್ಟದ ಯಕ್ಷ ಧ್ವನಿಯಾಗಿ ಹೊರಹೊಮ್ಮಿದರು. ಅವರ ಚಿಕ್ಕಪ್ಪ ಪದ್ಯಾಣ ಶಂಕರನಾರಾಯಣ ಭಟ್ ಮನತುಂಬಿ ಹೇಳುತ್ತಾರೆ, ಗಣಪತಿ ಭಟ್ಟರು ಪದ್ಯಾಣ ಮನೆತನಕ್ಕೆ ಹೆಸರು ತಂದಿದ್ದಾರೆ. ಅಲ್ಲಿಂದ ಹೆಸರಿನೊಂದಿಗೆ ಊರು ಹೊಸೆಯಿತು. ಆ ಊರು ಯಕ್ಷಗಾನ ಪದಕೋಶದೊಳಗೆ ನುಸುಳಿತು. ಭಾಗವತಿಕೆಗೆ ಅನ್ವರ್ಥನಾಮವಾಯಿತು.
ಪದ್ಯಾಣ ಮತ್ತು ಸುರತ್ಕಲ್ ಮೇಳ - ಎರಡನ್ನೂ ಬಿಡಿಬಿಡಿಯಾಗಿ ನೋಡುವಂತಿಲ್ಲ. ಮಿಳಿತವಾದ ಪದಗಳು. ರಾಜಾಯಯಾತಿ, ನಾಟ್ಯರಾಣಿ ಶಾಂತಲಾ, ಕಡುಗಲಿ ಕುಮಾರ ರಾಮ, ಸತಿ ಶೀಲವತಿ, ಪಾಪಣ್ಣ ವಿಜಯ.. ಮೊದಲಾದ ಭಾವಸ್ಪರ್ಶದ, ಮನಸ್ಪರ್ಶದ ಕಥಾನಕಗಳ ಯಶದ ಹಿಂದೆ ಪದ್ಯಾಣದ ಅಜ್ಞಾತ 'ಕೆಣಿ'ಯಿದೆ. ಆಧುನಿಕ ಪ್ರಸಂಗಗಳಿಗೆ ಪೌರಾಣಿಕದ ಅಚ್ಚಿನಲ್ಲಿ ಹೊಸ ವಿನ್ಯಾಸ ನೀಡಿದ ಮೇಳದ ಎಲ್ಲಾ ಕಲಾವಿದರ ಶ್ರಮ. ಸುರತ್ಕಲ್ ಮೇಳ ಹೋದಲ್ಲೆಲ್ಲಾ ಟೆಂಟ್ ಭರ್ತಿ. ಕೋಶವೂ ಭರ್ತಿ. ಮುಗಿ ಬೀಳುವ ಪ್ರೇಕ್ಷಕರು.
ಸುರತ್ಕಲ್ ಮೇಳದ ತಿರುಗಾಟವು ಸುವರ್ಣ ದಿನಮಾನಗಳು. ರಂಗದಲ್ಲಿ ವಿಜೃಂಭಿಸುತ್ತಿರುವ ಹೊಸ ಶೈಲಿಯೊಂದು ಪದ್ಯಾಣರನ್ನು ರಂಗಕ್ಕೆ ಅನಿವಾರ್ಯ ಮಾಡಿಬಿಟ್ಟಿತು. ಇದು ನಿಜಾರ್ಥದ ಅದ್ಭುತ. ಮಂಗಳಾದೇವಿ, ಕರ್ನಾಟಕ, ಎಡನೀರು ಮೇಳಗಳ ತಿರುಗಾಟ. ಬಳಿಕ ಹತ್ತು ವರುಷ ಹೊಸನಗರ ಮೇಳದಲ್ಲಿ ವ್ಯವಸಾಯ.
ಮಾತಿಗೆ ಸಿಕ್ಕಾಗ ಹೇಳಿದರು, ನಾನೀಗ ಮೊದಲಿನ ಪದ್ಯಾಣ ಅಲ್ಲ! ವಯಸ್ಸಾಯಿತು. ಅರುವತ್ತು ಮೀರಿತು. ಹಿಂದಿನಂತೆ ಹಾಡಲು ಸಾಧ್ಯವಾ? ಅಭಿಮಾನಿಗಳಿಗೂ ಗೊತ್ತಿದೆ. ಜನರು ನನ್ನ ಹಾಡುಗಾರಿಕೆಯನ್ನು ತಿರಸ್ಕರಿಸಲಿಲ್ಲ ದಿಟ. ಪದ್ಯಾಣರಿಗೆ ವಿಶ್ವಾಸವಿದೆ. ರಂಗಕ್ಕೆ ಎಷ್ಟೇ ಆಧುನಿಕತೆ ಬಂದರೂ ಅದರ ಮಧ್ಯೆ ಪದ್ಯಾಣ ಶೈಲಿ ಈಗಲೂ ವಿಜೃಂಭಿಸುವುದಕ್ಕೆ ಕಾರಣವೇನು? ಗಟ್ಟಿಗರ ಮಧ್ಯೆ ಗಟ್ಟಿಯಾಗಿ ಬೆಳೆದ ಬೌದ್ಧಿಕತೆ. ರಂಗಾನುಭವ.
ಈಗಲೂ ಆ ಸ್ವರಕ್ಕೆ ಮಹತ್ತಿದೆ. ಬಲಿಪರು, ಅಗರಿಯವರಂತೆ 'ಪಾರಂಪರಿಕ'ವಾದ ಯಕ್ಷ ಶೈಕ್ಷಣಿಕ ಹಿನ್ನೆಲೆಯಿದೆ. ರಂಗದಲ್ಲಿ ಗಳಿಸಿದ ಅನುಭವ ಇದೆಯಲ್ಲಾ, ಅದು ಒಂದು ವಿಶ್ವವಿದ್ಯಾನಿಲಯದ ಕಲಿಕೆಗೆ ಸಮ. ಪದ್ಯಾಣರು ಈಗಲೂ ಮುಂಚೂಣಿಯಲ್ಲಿದ್ದಾರೆ.
ಪದ್ಯಾಣರಿಗೆ ಅರುವತ್ತರ ಸಂಭ್ರಮ. ತನ್ನ ಪದಯಾನದತ್ತ ಒಂದು ತಾಣದಲ್ಲಿ ನಿಂತು ಹಿಂತಿರುಗಿ ನೋಡುವ ಕಾಲಘಟ್ಟ. ಒಂದೊಂದು ಕಾಲಘಟ್ಟದಲ್ಲಿ ಎಲ್ಲರೂ ಸಂತೋಷದಿಂದ ನಿಲ್ಲುತ್ತಾರೆ. 'ಸಂಭ್ರಮ, ವೈಭವ'ಗಳನ್ನು ಹಂಚುತ್ತಾರೆ. ಆದರೆ ಯಾರೂ ಸಾಗಿ ಬಂದ ಪಥವನ್ನು ಹಿಂತಿರುಗಿ ನೋಡುವುದಿಲ್ಲ. ಪದ್ಯಾಣರು ನೋಡಿದ್ದಾರೆ. ನೋಡುತ್ತಿದ್ದಾರೆ. ಅವರ ಸುತ್ತ ನಾದಗಳು ಸುತ್ತಿವೆ, ಸುತ್ತುತ್ತಿವೆ. ಶೈಲಿಯೊಳಗೆ ನಾಲ್ಕು ದಶಕಗಳ ಕಾಲ ಸಕ್ರಿಯವಾಗಿದ್ದ ನಾದಗಳು, ಗಣಪಣ್ಣ ನಿಂತಾಗ ದಿಗಿಲುಗೊಂಡಿವೆ! ಅವಕ್ಕೆ ಸಮಾಧಾನ ಹೇಳಿದ್ದಾರೆ ಬಿಡಿ.
ಒಂದು ಕೀಟಲೆ ಪ್ರಶ್ನೆ ಎಸೆದೆ - 'ನಿಮ್ಮ ಪದ್ಯ ಆಧುನಿಕಗೊಂಡಿದೆ, ಹೌದೇ?'. ಹೌದು, ಒಪ್ಪಿಕೊಳ್ಳುತ್ತೇನೆ. ಮೇಳದ ಹಿತದೃಷ್ಟಿಯ ಮುಂದೆ ಸ್ವಂತದ್ದಾದ ಕಾಮಿತಗಳು ಗೌಣ. ಒಬ್ಬನೇ ಮೆರೆಯಬೇಕು ಎನ್ನುವ ಜಾಯಮಾನ ನನ್ನಲ್ಲಿಲ್ಲ. ನಾವು ಮೇಳವನ್ನು ಒಪ್ಪಿದ್ದೇವೆ. ನಮ್ಮನ್ನು ಮೇಳ ಒಪ್ಪಿದೆ. ಜನರು ಒಪ್ಪಿದ್ದಾರೆ. ಒಪ್ಪಿತ ಬದುಕಿನಲ್ಲಿ ಆಗಬೇಕಾದುದು ಏನು? ಪ್ರದರ್ಶನ ಕಳೆಗಟ್ಟಬೇಕು. ಅಭಿಮಾನಿಗಳ ಆಕ್ಷೇಪ ಸಹಜ. ಆದರೆ ಹತ್ತು ಪದ್ಯದಲ್ಲಿ ಎರಡು ಪದ್ಯವನ್ನಾದರೂ ಹಳೆ ಶೈಲಿಯಲ್ಲಿ ಹೇಳದೆ ಬಿಡುವುದಿಲ್ಲ!
ಪದ್ಯಾಣ ಗಣಪತಿ ಭಟ್ಟರು ಅರ್ಥಪೂರ್ಣವಾಗಿ ಅರುವತ್ತರ ಖುಷಿಯನ್ನು ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಅವರ ಅಭಿಮಾನಿಗಳು 'ಪದಯಾನ' ಎನ್ನುವ ಸಮಿತಿಯನ್ನು ರೂಪುಗೊಳಿಸಿದ್ದಾರೆ. ೨೦೧೬ ಜೂನ್ 4, 5ರಂದು ಮಂಗಳೂರಿನ ಪುರಭವನದಲ್ಲಿ ದಿನಪೂರ್ತಿ ಕಾರ್ಯಕ್ರಮ. ಪದ್ಯಾಣರಿಗೆ ಗೌರವಾರ್ಪಣೆ, 'ಪದಯಾನ' ಗೌರವ ಗ್ರಂಥ ಸಮರ್ಪಣೆ. ಸಾಕ್ಷ್ಯಚಿತ್ರ ಅನಾವರಣ. ತಾಳಮದ್ದಳೆ, ಗಾನವೈಭವ, ನೃತ್ಯ ವೈಭವ, ಪ್ರದರ್ಶನಗಳು.
ಈ ಸಂದರ್ಭದಲ್ಲಿ ಪದ್ಯಾಣ ಕುಟುಂಬವು ತನ್ನ ಅಜ್ಜ ಪುಟ್ಟು ನಾರಾಯಣ ಭಾಗವತರ ನೆನಪಿನಲ್ಲಿ 'ಪದ್ಯಾಣ ಪ್ರಶಸ್ತಿ'ಯನ್ನು ಸ್ಥಾಪಿಸಿದೆ. ಅದರ ಮೊದಲ ಪ್ರಶಸ್ತಿಯನ್ನು ಅಗರಿ ರಘುರಾಮ ಭಾಗವತರಿಗೆ ಪ್ರದಾನಿಸಲಿದ್ದಾರೆ.
(udayavani/kalaavihar)
No comments:
Post a Comment