ಬದುಕಿಗೊಂದು ನಿಶ್ಚಿತ ವೇಗವಿದೆ. ಈ ವೇಗವನ್ನು ಹಿಂದಿಕ್ಕುವ ಧಾವಂತ ಸಾಮಾಜಿಕ ಜಾಲತಾಣಗಳಿಗಿವೆ. ಅದರಲ್ಲೂ 'ವಾಟ್ಸಪ್' ತಾಣದ ವೇಗದ ಲೆಕ್ಕಣವನ್ನು 'ಬಾಹುಕ'ನೇ ಹೇಳಬೇಕು! ಹಿಡಿಯೊಳಗೆ ಅವಿತುಕೊಂಡು ಬೆರಳಿನಿಂದ ಆಟವಾಡಿಸುವ ಮಾಹಿತಿಗಳಿಗೆ 'ಲೈವ್' ಸ್ಪರ್ಶ! ಕಣ್ಣೆವೆ ತೆರೆಯುವುದರೊಳಗೆ ದೂರದೂರಿಗೆ ಸಂದೇಶ ರವಾನೆ. ಕ್ಷಿಪ್ರ ಸಂವಹನಕ್ಕೆ ಸಶಕ್ತ, ಪರಿಣಾಮಕಾರಿ ಮಾಧ್ಯಮ.
ರಾತ್ರಿಯಿಡೀ ಆಟದಲ್ಲಿ ಕುಳಿತು ಪ್ರತೀ ಸನ್ನಿವೇಶವನ್ನು ಲೈವ್ ಆಗಿ ಹರಿಯಬಿಡುವ ಕೆಲವು ಗ್ರೂಪ್ಗಳ ಸಹನಾಶಕ್ತಿಗೆ ಶರಣು. ಜತೆಗೆ ಚಿತ್ರಗಳು, ಆಡಿಯೋ ಸ್ವರಗಳು ಬೋನಸ್. ಮನೆಯಲ್ಲಿ ಹಾಯಾಗಿದ್ದವರಿಗೆ ಮೃಷ್ಟಾನ್ನ. ಸ್ಕ್ರೀನ್ ಮೇಲೆ ಬೆರಳಾಡಿಸಿದರೆ ಆಯಿತು, ಆಟದ ಸಾಕಾರತೆ! ಪ್ರಸಂಗ, ಪಾತ್ರ, ಸನ್ನಿವೇಶಗಳ ಜತೆಗೆ ಕಲಾವಿದರ ಅಭಿವ್ಯಕ್ತಿಯ ವಿಮರ್ಶೆಯೂ ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಅಭಿಮಾನದ ಹೊನಲು ಅತಿರೇಕವಾಗುವುದೂ ಇದೆ!
'ಯಕ್ಷಗಾನ ತಾಳಮದ್ದಳೆ' ವಾಟ್ಸಪ್ ಬಳಗಕ್ಕೆ ಒಂದು ವರುಷದ ಹುರುಪು. ಜುಲೈ 3ರಂದು ಮೂಡುಬಿದಿರೆಯಲ್ಲಿ ಸದಸ್ಯರ ಸಮಾವೇಶ. ಬಹ್ವಂಶ ಸದಸ್ಯರ ಉಪಸ್ಥಿತಿ. ನಿರಾಕಾರದಿಂದ ಸಾಕಾರದತ್ತ! ಪರಸ್ಪರ ಮಾತುಕತೆ, ಮುಖಾಮುಖಿ. ಸುಃಖ ದುಃಖ ವಿನಿಮಯ. ಮನಸ್ಸಿಗೆ ಮೇವನ್ನು ಒದಗಿಸುವ ವಿವಿಧ ಕಲಾಪಗಳು. ಸದಸ್ಯರಿಂದ ತಾಳಮದ್ದಳೆ. ಬೆಳಿಗ್ಗೆ 11 ರಿಂದ ರಾತ್ರಿ 10ರ ತನಕ ಲಂಬಿಸಿದ ಕಾರ್ಯಕ್ರಮ. ಇನ್ನೂ ಮೂರ್ನಾಲ್ಕು ತಾಸು ಹೃಸ್ವವಾಗಬೇಕು ಅನ್ನಿಸಿತು.
ಒಂದು ಯಕ್ಷಗಾನ ಸಂಘವು ಹೇಗೆ ಕ್ರಿಯಾಶೀಲವಾಗಿರುವುದೋ, ಅದೇ ರೀತಿ ವಾಟ್ಸಪ್ ಬಳಗವೂ ಕೂಡಾ. ವ್ಯವಸ್ಥಾಪಕರಿಗೆ (ಅಡ್ಮಿನ್) ನೂರಾರು ಸದಸ್ಯರನ್ನು ಸಮಚಿತ್ತದಿಂದ ಮುಂದೊಯ್ಯಬೇಕಾದ ಹೊಣೆ. ಆಸಕ್ತಿ ಇದ್ದವರೂ, ಅತೀ ಆಸಕ್ತಿ ಹೊಂದಿದವರು, ಪಂಡಿತರು, ಪಾಮರರು.. ಇವರೆಲ್ಲರನ್ನೂ ಸಂಭಾಳಿಸುವ ಜಾಣ್ಮೆ ಬೇಕು. ಎಲ್ಲರಿಗೂ ಎಲ್ಲವೂ ಇಷ್ಟವಾಗದು. ಇಂತಹ ಸಂದರ್ಭಗಳಲ್ಲಿ ವ್ಯವಸ್ಥಾಪಕರೊಂದಿಗೆ ಸದಸ್ಯರಿಗೂ ಸ್ವ-ನಿಯಂತ್ರಣ ಮುಖ್ಯವಾಗುತ್ತದೆ. ನಮ್ಮ ಬಹುತೇಕ ಗ್ರೂಪ್ಗಳು ಸ್ವ-ನಿಯಂತ್ರಣವನ್ನು ಹೊಂದಿಕೊಂಡಿರುವುದರಿಂದ ಸಕ್ರಿಯವಾಗಿದೆ.
ಯಕ್ಷಗಾನ ತಾಳಮದ್ದಳೆ ವಾಟ್ಸಪ್ ಬಳಗದಲ್ಲಿ ಇನ್ನೂರ ನಲವತ್ತು ಸದಸ್ಯರಿದ್ದಾರೆ. ಕಿರಿಯರಿಂದ ಹಿರಿಯರ ತನಕ ಸಂವಾದಗಳು ಉತ್ತಮವಾಗಿ ನಡೆಯುತ್ತಿದೆ. ಸಂಸ್ಕೃತ ಸೂಕ್ತಿಗಳು, ಪ್ರಸಂಗಗಳ ಜಿಜ್ಞಾಸೆಗಳು, ಸಂಶಯಗಳು, ಪುರಾಣ ವಿಚಾರಗಳತ್ತ ಕೆಲವೊಂದು ಸಂಶಯಗಳಿಗೆ ಪರಸ್ಪರ ಉತ್ತರ ಕಂಡುಕೊಳ್ಳುವ ಯತ್ನ. ಚಿಂತನಗ್ರಾಹ್ಯವಾದ ಮಾತುಕತೆಗಳು. ಮಧ್ಯೆ ಮಧ್ಯೆ ಕುಟುಕುಗಳೂ, ಚುಟುಕುಗಳೂ ಇಲ್ಲದಿಲ್ಲ! ಕೆಲವೊಮ್ಮೆ ಸಂಬಂಧಪಡದ ವಿಷಯಗಳೂ ಇವೆಯೆನ್ನಿ.
ಈಚೆಗೆ ಉಪ್ಪಿನಂಗಡಿಯಲ್ಲಿ ಯಕ್ಷ ಸಂಗಮ ವಾಟ್ಸಪ್ ಬಳಗವು ಅದ್ದೂರಿಯಾಗಿ ಬಯಲಾಟವನ್ನು ಏರ್ಪಡಿಸಿತ್ತು. ಕಿಕ್ಕಿರಿದ ಅಭಿಮಾನಿಗಳಿಗೆ ಪ್ರದರ್ಶನ ಮುದ ನೀಡಿತ್ತು. ಯಕ್ಷಗಾನ ಕಲಾವಿದರನ್ನು ಗೌರವಿಸಿತ್ತು. ಒಂದು ಸಾಮಾಜಿಕ ಜಾಲತಾಣವು ಯಕ್ಷಗಾನಕ್ಕೆ ಸಲ್ಲಿಸಬಹುದಾದ ಮಾನವನ್ನು ಸಲ್ಲಿಸಿದೆ ಎನ್ನಲು ಅಭಿಮಾನವಾಗುತ್ತದೆ. ಇಲ್ಲಿ ವಾಟ್ಸಪ್ ಬಳಗದ ಸದಸ್ಯರ ಸಕ್ರಿಯತೆ ಮೇಲ್ಮೆ ಪಡೆದಿದೆ.
'ಯಕ್ಷಮಿತ್ರ ನಮ್ಮ ವೇದಿಕೆ' ಬಳಗವು ಎರಡು ಯಕ್ಷ ಸತ್ಸಂಗವನ್ನು ಆಯೋಜಿಸಿತ್ತು. ಅದ್ದೂರಿಯಾದ ಸ್ಮರಣೀಯ ಕಲಾಪವನ್ನು ಜರುಗಿಸಿತ್ತು. ಪ್ರಸಿದ್ಧ ವೈದ್ಯ ಡಾ.ಪದ್ಮನಾಭ ಕಾಮತರ ಯೋಚನೆ. ಅದನ್ನು ಯೋಜಿಸುವ ತಂಡ. ಕಳೆದ ವರುಷ ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳನ್ನು ಸಂಮಾನಿಸಿತ್ತು. ಪ್ರದರ್ಶನಗಳು ಪರಿಣಾಮಕಾರಿಯಾಗಿದ್ದುವು. ಗುಣಮಟ್ಟದ ಚಿಂತನೆಗಳ ಗಾಢತೆಯ ವಿಸ್ತಾರವು ಆಯೋಜಕರಲ್ಲಿ ಎಷ್ಟಿದೆಯೋ ಅದರಂತೆ ಪ್ರದರ್ಶನ ಪರಿಣಾಮ ಎನ್ನುವುದಕ್ಕೆ ಯಕ್ಷಮಿತ್ರ ನಮ್ಮ ವೇದಿಕೆಯ ಎರಡೂ ಸತ್ಸಂಗಗಳು ಉದಾಹರಣೆ.
ಯಕ್ಷಗಾನ ಸಂಘವೊಂದು ರೂಪುಗೊಂಡರೆ ಅದರ ಅಂತಿಮ ಯಾತ್ರೆಯೂ ಅಂದೇ ಪರೋಕ್ಷವಾಗಿ ನಿರ್ಧಾರವಾಗಿ ಬಿಡುತ್ತದೆ! ಹಿಂದೊಮ್ಮೆ ಕುಂಬಳೆ ಸುಂದರ ರಾಯರು ಕಾರ್ಯಕ್ರಮವೊಂದರಲ್ಲಿ ಸೋದಾಹರಣವಾಗಿ ಆಡಿದ ಮಾತು. ವಿನೋದದ ಮಾತನಾದರೂ ಸತ್ಯವೂ ಕೂಡಾ! ಸಂಘದೊಳಗಿನ 'ರಾಜಕೀಯ'ಗಳು ಉದ್ದೇಶವನ್ನು ಮಸುಕುಗೊಳಿಸುತ್ತವೆ. ವೈಮನಸ್ಸನ್ನು ಹುಟ್ಟುಹಾಕುತ್ತವೆ. ನಂಜು, ಮತ್ಸರಗಳನ್ನು ತಂದು ರಾಚುತ್ತವೆ. ಇಂತಹುಗಳ ನೇರ ಪರಿಣಾಮ ವಾಟ್ಸಪ್ ಯಕ್ಷಗಾನ ತಂಡಕ್ಕಿಲ್ಲದಿದ್ದರೂ ಎಚ್ಚರವಾಗಿರುವುದು ಕ್ಷೇಮ. 'ಸ್ವ-ನಿಯಂತ್ರಣ'ವೇ ಪರಿಹಾರ.
ಗುಂಪಿನ ಆಶಯದಂತೆ ಮಾತುಕತೆ ನಡೆಯಬೇಕು. ಆಶಯದ ಆಸಕ್ತಿಯಿದ್ದವರು ಗುಂಪಿನ ಸದಸ್ಯರಾಗಿರಬೇಕು. ಬದುಕಿನಲ್ಲಿ ಕಳೆದುಹೋಗಿರುವ ಹಾಸ್ಯವನ್ನು ವಾಟ್ಸಪ್ಪಿನಲ್ಲಾದರೂ ಅನುಭವಿಸೋಣ. ಉತ್ತಮ ವಿಚಾರವಾದರೂ ಅನಪೇಕ್ಷಿತವಾದ ವಿಚಾರಗಳ ತುರುಕುವಿಕೆಗೂ ಸ್ವ-ನಿಯಂತ್ರಣ ಬೇಕು. ಯಾಕೆಂದರೆ ವಿವಿಧ ಆಶಯದಿಂದ ರೂಪುಗೊಂಡ ವಾಟ್ಸಪ್ ಬಳಗ ಸಾವಿರಾರಿವೆ. ಗುಂಪುಗಳ ಆಯುಷ್ಯ ವೃದ್ಧಿಗೆ ಸಮ್ಮನಸ್ಸು ಟಾನಿಕ್.
ಮಾಧ್ಯಮವು ಸಮಾಜಮುಖಿಯಾಗಿ ಹರಿಯಬೇಕು. ಸಾಮಾಜಿಕ ಬದ್ಧತೆಗಳನ್ನು ರೂಢಿಸಿಕೊಳ್ಳಬೇಕು. ಧನಾತ್ಮಕ ಅಂಶಗಳನ್ನು ಬಿತ್ತರಿಸಬೇಕು. ಸ್ವಾಸ್ಥ್ಯ ಕೆಡಿಸುವ, ಸಂಬಂಧಗಳನ್ನು ಹಾಳು ಮಾಡುವ ಮನಃಸ್ಥಿತಿಯಿಂದ ದೂರವಿರಬೇಕು. ಈ ಕಾಲಘಟ್ಟದಲ್ಲಿ ಇದೆಲ್ಲ ಸಾಧ್ಯವಾ? ಎನ್ನುವ ಪ್ರಶ್ನೆ ಸಹಜ. ಮಾಧ್ಯಮ ಅಂದಾಗ ಟಿವಿ, ಪತ್ರಿಕೆ ಮಾತ್ರವಲ್ಲ; ವಾಟ್ಸಪ್, ಫೇಸ್ಬುಕ್, ವೈಬ್ಸೈಟ್ ಎಲ್ಲವೂ ಈ ಸರದಿಗೆ ಸೇರುತ್ತವೆ.
ಯಕ್ಷಗಾನದ ವಾಟ್ಸಪ್ ಗುಂಪುಗಳು ಮುಖ್ಯವಾಗಿ ಒಂದು ವಿಚಾರದತ್ತ ಯೋಚಿಸಬೇಕಾಗಿದೆ. ಎಲ್ಲರ ಚಿಂತನೆಗಳು 'ಸಮಗ್ರ ಯಕ್ಷಗಾನ'ದತ್ತ ಹರಿಯಬೇಕು. ವ್ಯಕ್ತಿ ಕೇಂದ್ರಿತವಾದ ಆರಾಧನೆಯ ಬದಲು ಒಟ್ಟೂ ಕಲೆಯನ್ನು ಆರಾಧಿಸುವ ಮನಃಸ್ಥಿತಿ ರೂಪುಗೊಳ್ಳಬೇಕು. ಆಗ ಕಲೆಗೂ ಮಾನ. ಕಲಾವಿದನಿಗೂ ಕ್ಷೇಮ.
(ಸಾಂದರ್ಭಿಕ ಚಿತ್ರ : ಕೊಂಗೋಟ್ ರಾಧಾಕೃಷ್ಣ ಭಟ್)
No comments:
Post a Comment