ಕಾಸರಗೋಡು ಜಿಲ್ಲೆಯ ಎಡನೀರು ಶ್ರೀಮಠವು ಯಕ್ಷಗಾನ ಕಲಾವಿದರಿಗೆ ಮನೆ. ಯಕ್ಷಗಾನ ತಾಳಮದ್ದಳೆ, ಆಟಕ್ಕೆ ಇಲ್ಲಿ ಆರಾಧನಾ ಭಾವ. ಕಲಾರಾಧನೆ ಶ್ರೀಮಠದ ವೈಶಿಷ್ಟ್ಯ. ಅರ್ಧಶತಮಾನದೀಚೆಗೆ, ಆಚೆಗೆ ಬಾಳಿದ ಅನೇಕ ವಿದ್ವಾಂಸ ಅರ್ಥಧಾರಿಗಳ ನೆಚ್ಚಿನ ತಾಣ. ತಾಳಮದ್ದಳೆಯ ಮೂಲಕ ವಿದ್ವತ್ತಿನ ಪ್ರದರ್ಶನಕ್ಕೆ ಸುಂದರ ಅವಕಾಶ.
ಅರ್ಥಧಾರಿಗಳು ಜತೆಯಾದರೆ ಮಠದಲ್ಲಿ ತಾಳಮದ್ದಳೆ ಖಚಿತ. ಪ್ರೇಕ್ಷಕರು ಮುಖ್ಯವಲ್ಲ, ರಸಪೋಶಿತವಾದ ಪ್ರಸ್ತುತಿ ಮುಖ್ಯ. ಕೆಲವೊಮ್ಮೆ ನಾಲ್ಕೈದು ದಿವಸ ನಿರಂತರ ಕೂಟಗಳು. ಮರುದಿವಸ ಕೂಟದ ಕಟು ವಿಮರ್ಶೆ. ಎಡನೀರು ಮಠಾಧೀಶ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಸ್ವತಃ ಭಾಗವತಿಕೆ ಮಾಡುವುದು ಕಲಾವಿದರಿಗೆ ಸ್ಫೂರ್ತಿ. ಸ್ವಾಮಿಗಳಿಗೆ ತೃಪ್ತಿ.
ಹೀಗೆ ನಡೆಯುತ್ತಿದ್ದ ತಾಳಮದ್ದಳೆಗೆ ಸಪ್ತಾಹದ ಸ್ವರೂಪ ಬಂತು. ಮುಂದೆ ಶ್ರೀಗಳ ಚಾತುರ್ಮಾಸ್ಯ ಅವಧಿಯಲ್ಲಿ ಸಪ್ತಾಹವು ಪೋಣಿಕೆಯಾಯಿತು. ಪ್ರಸಂಗ, ಪದ್ಯ, ಕಲಾವಿದರರನ್ನು ಸ್ವಾಮೀಜಿ ಗೊತ್ತು ಮಾಡುತ್ತಾರೆ. ಪ್ರಸಂಗವೊಂದು ಸಹಜವಾಗಿ ಎಷ್ಟು ಲಂಬಿಸಬಹುದೋ ಅಷ್ಟರ ಲಂಬನೆಗೆ ಅವಕಾಶವಿರುವುದು ವೈಶಿಷ್ಟ್ಯ ಇಷ್ಟು ಸಮಯದೊಳಗೆ ಮುಗಿಸಬೇಕೆನ್ನುವ ಸಮಯದ ಪ್ಯಾಕೇಜ್ ಇಲ್ಲ.
ಕೀರ್ತಿಶೇಷ ಶಂಕರನಾರಾಯಣ ಸಾಮಗರು, ಡಾ.ಶೇಣಿ, ಕವಿಭೂಷಣ ವೆಂಕಪ್ಪ ಶೆಟ್ಟರು, ಸಣ್ಣ ಸಾಮಗರು, ತೆಕ್ಕಟ್ಟೆ... ಹೀಗೆ ಉದ್ಧಾಮರಿದ್ದ ಕೂಟಗಳು ಹೃಸ್ವಗೊಳ್ಳುತ್ತಿರಲಿಲ್ಲ. ಕಲಾವಿದನ ಪ್ರತಿಭೆ, ವಿದ್ವತ್ತಿಗೆ ಪೂರ್ಣ ದುಡಿತ. ಹಾಗಾಗಿ ರಾಮ-ರಾವಣ, ವಾಲಿ-ರಾಮ, ಮಾಗಧ-ಕೃಷ್ಣ... ಪಾತ್ರಗಳ ಸಂಭಾಷಣೆಗಳು ದೀರ್ಘವೆಂದು ಕಂಡುಬಂದರೂ ಅದರಲ್ಲಿ ವಿದ್ವತ್ತಿನ ಭಾರವಿದೆ. ವೈಚಾರಿಕ ವಿಸ್ತಾರವಿದೆ. ಪ್ರೇಕ್ಷಕರು ಕೂಡಾ ಆಸ್ವಾದನೆಯಲ್ಲಿ ಕಲಾವಿದರ ಮಟ್ಟಕ್ಕೆ ಏರುವುದುಂಟು!
ಬಹುಶಃ ಇದೇ ಜಾಡಿನಲ್ಲಿ ಸಾಗಿ ಬಂದ ಎಡನೀರು ಸಪ್ತಾಹವು ಎಂದೂ 'ಪ್ಯಾಕೇಜ್ ಅರ್ಥಗಾರಿಕೆ'ಗೆ ತನ್ನನ್ನು ಒಡ್ಡಿಕೊಳ್ಳಲಿಲ್ಲ. ಸ್ವತಃ ಸ್ವಾಮೀಜಿ ಹಾಡುವುದರಿಂದ ಅವ್ಯಕ್ತವಾಗಿ ಶಿಸ್ತು ಅನಾವರಣಗೊಳ್ಳುತ್ತದೆ. ಕಲಾವಿದರು ಈ ಆವರಣದ ತೆಕ್ಕೆಗೆ ತಮಗರಿವಿಲ್ಲದಂತೆ ಬಂಧಿಯಾಗುತ್ತಾರೆ. ಹಗುರ ವಿಚಾರಗಳು ಸುಳಿಯದಂತೆ ಎಚ್ಚರವಹಿಸುತ್ತಾರೆ. ಇದು ಕೂಟದ ಒಟ್ಟಂದದ ಪರೋಕ್ಷ ಒಳಸುರಿಗಳು.
ಈ ಬಾರಿ ಪುತ್ತೂರಿನ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎಡನೀರು ಶ್ರೀಗಳ ಚಾತುರ್ಮಾಸ್ಯ ವೃತಾಚರಣೆ. ಆಗಸ್ಟ್ 9 ರಿಂದ 15ರ ತನಕ ತಾಳಮದ್ದಳೆ ಸಪ್ತಾಹ ಸಂಪನ್ನವಾಗಿತ್ತು. ಭರತಾಗಮನ, ಭೀಷ್ಮ ವಿಜಯ, ಪಂಚವಟಿ, ವಾಲಿ ವಧೆ, ಭೀಷ್ಮ ಸೇನಾಧಿಪತ್ಯ-ಕರ್ಮಬಂಧ, ಸುಧನ್ವ ಮೋಕ್ಷ, ಮಾಗಧ ವಧೆ.. ಪ್ರಸಂಗಗಳು. ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ, ಕುರಿಯ ಗಣಪತಿ ಶಾಸ್ತ್ರಿ, ಜನ್ಸಾಲೆ ರಾಘವೇಂದ್ರ ಆಚಾರ್, ಸತ್ಯನಾರಾಯಣ ಪುಣಿಂಚಿತ್ತಾಯ, ರಮೇಶ ಭಟ್ ಪುತ್ತೂರು... ಸಪ್ತಾಹದಲ್ಲಿ ಭಾಗವತರಾಗಿದ್ದರು. ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಸುನಿಲ್ ಭಂಡಾರಿ, ಪಿ.ಜಿ.ಜಗನ್ನಿವಾಸ ರಾವ್, ಕೃಷ್ಣಪ್ರಕಾಶ್ ಉಳಿತ್ತಾಯ... ಚೆಂಡೆ, ಮದ್ದಳೆ ವಾದಕರಾಗಿದ್ದರು.
ಉಡುವೆಕೋಡಿ ಸುಬ್ಬಪ್ಪಯ್ಯ (ಭರತ) - ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ (ರಾಮ); ಉಜಿರೆ ಅಶೋಕ ಭಟ್ (ಭೀಷ್ಮ) - ವಿಟ್ಲ ಶಂಭು ಶರ್ಮ (ಪರಶುರಾಮ); ಎಂ.ಎಲ್.ಸಾಮಗ (ಶ್ರೀರಾಮ) - ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ (ಶೂರ್ಪನಖಿ); ವಿದ್ವಾನ್ ಮೇಲುಕೋಟೆ ಉಮಾಕಾಂತ ಭಟ್ (ವಾಲಿ) - ಹಿರಣ್ಯ (ರಾಮ)', ಬರೆ ಕೇಶವ ಭಟ್ (ಭೀಷ್ಮ) - ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ (ಕೃಷ್ಣ); ಮೇಲುಕೋಟೆ (ಸುಧನ್ವ) - ಸುಣ್ಣಂಬಳ ವಿಶ್ವೇಶ್ವರ ಭಟ್ (ಅರ್ಜುನ) - ಡಾ.ರಮಾನಂದ ಬನಾರಿ (ಕೃಷ್ಣ); ಮೇಲುಕೋಟೆ (ಮಾಗಧ) - ಬನಾರಿ (ಕೃಷ್ಣ)... 'ನೋಟ್' ಮಾಡಬಹುದಾದ ಜತೆ ಪಾತ್ರ-ಪಾತ್ರಧಾರಿಗಳು. ಅಲ್ಲದೆ ಉಳಿದ ಪಾತ್ರಧಾರಿಗಳ ಪ್ರಸ್ತುತಿಗಳು ಏಳು ದಿವಸಗಳ ತಾಳಮದ್ದಳೆಯ ಪರಿಣಾಮಗಳನ್ನು ಎತ್ತಿಹಿಡಿದಿವೆ.
ಭೀಷ್ಮ ವಿಜಯ, ಸುಧನ್ವ ಮೋಕ್ಷ, ವಾಲಿವಧೆ ಪ್ರಸಂಗಗಳು ತುಸು ಹೆಚ್ಚೇ ಲಂಬಿಸಿದ್ದುವು. ಎಷ್ಟೋ ಸಲ ಅರ್ಥಗಾರಿಕೆಯಲ್ಲಿ ನುಸುಳುವ ಹೊರಗಿನ ವಿಚಾರಗಳು, ಸೂಕ್ಷ್ಮ ಸಂಗತಿಗಳು ಜಿದ್ದಿಗೆ ಬಿದ್ದಾಗ ಸಹಜವಾಗಿ ಲಂಬನವಾಗುತ್ತದೆ. ಅದು ಅರ್ಥಧಾರಿಗಳ ವಿವೇಚನೆ, ಸಾಮಥ್ರ್ಯಕ್ಕೆ ಸಂಬಂಧಪಟ್ಟ ವಿಚಾರ. ಹಿಂದೆಲ್ಲಾ ಮನೆಗಳಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಇಂತಹ ವೈಚಾರಿಕ ಜಿದ್ದಾಜಿದ್ದಿ ಇತ್ತೆಂಬುದನ್ನು ಹಿರಿಯರು ಜ್ಞಾಪಿಸುತ್ತಾರೆ. ಎಡನೀರು ಸಪ್ತಾಹವು ಹಿಂದಿನ ತಾಳಮದ್ದಳೆಯನ್ನು ಜ್ಞಾಪಿಸುತ್ತದೆ ಎಂದಾದರೆ ಅದು ಸಾರ್ಥಕ ಅಲ್ವಾ.
ವರ್ತಮಾನದ ಮನಃಸ್ಥಿತಿಯು ಇಂತಹ ತಾಳಮದ್ದಳೆಯನ್ನು ಒಪ್ಪುವುದಿಲ್ಲ. ಎಲ್ಲದಕ್ಕೂ 'ಬ್ಯುಸಿ' ಹಣೆಪಟ್ಟಿ. ಸಮರ್ಥನೆಗಳ ಭರ. ಈಗಲೂ ರಾತ್ರಿಯಿಡೀ ತಾಳಮದ್ದಳೆ ಜರುಗಿದಾಗ ಬೆಳಗ್ಗಿನವರೆಗೆ ಆಸ್ವಾದಿಸುವ, ಮರುದಿವಸ ಚರ್ಚಿಸುವ, ವಿಮರ್ಶಿಸುವ ಪ್ರೇಕ್ಷಕರಿದ್ದಾರೆ. ಇವರನ್ನೆಲ್ಲಾ 'ಪುರುಸೊತ್ತು ಇದ್ದವರು' ಪಟ್ಟಿಗೆ ಸೇರಿಸಬೇಕಾಗಿಲ್ಲ. ಇವರಿಗೂ 'ಬ್ಯುಸಿ' ಇದೆ! ಇಂತಹ ಕಾಲಸ್ಥಿತಿಯಲ್ಲೂ ತಾಳಮದ್ದಳೆ ಲಂಬಿಸಿದಾಗ ಅದನ್ನು ಕೇಳುವ, ಅನುಭವಿಸುವ ಪ್ರೇಕ್ಷಕರನ್ನು ಎಡನೀರು ಸಪ್ತಾಹದಲ್ಲಿ ನೋಡಿದೆ. ಇವರಾರೂ ಒತ್ತಾಯಕ್ಕೆ ಕುಳಿತವರಲ್ಲ. ಹಂಗಿಗೆ ಒಳಗಾದವರಲ್ಲ. ತಾಳಮದ್ದಳೆಯನ್ನು ಕೇಳಲೆಂದೇ ಕುಳಿತವರು. ಮರುದಿವಸ ಕಟುವಾದ ವಿಮರ್ಶೆಯನ್ನೂ ಮಾಡುವವರು.
ಎಡನೀರು ಸಪ್ತಾಹಕ್ಕೆ ನಾಲ್ಕೂವರೆ ದಶಕದ ಇತಿಹಾಸವಿದೆ. ಸಂದು ಹೋದ ಮತ್ತು ಈಗ ಪ್ರಸಿದ್ಧವಾಗಿರುವ ಅನೇಕ ಮಂದಿ ಸಪ್ತಾಹದಲ್ಲಿ ಭಾಗವಹಿಸಿದ್ದಾರೆ. ಬದುಕಿಗೆ ಪೂರಕವಾದ ಸಂದೇಶಗಳನ್ನು ಯಕ್ಷಗಾನ ಪ್ರಸಂಗಗಳು ಸಾರುತ್ತವೆ. ಪ್ರಸಂಗದ ಆಶಯವನ್ನು ಅರ್ಥಧಾರಿಗಳು ಸಮಕಾಲೀನ ವಿವೇಚನೆಯೊಳಗೆ ಅದ್ದಿ ಪ್ರಸ್ತುತಪಡಿಸಿದಾಗ ಪುರಾಣದ ಆಶಯವನ್ನು ಪ್ರೇಕ್ಷಕರಿಗೆ ಕಟ್ಟಿ ಕೊಡಲು ಸಾಧ್ಯ. ಸಪ್ತಾಹದ ಎಲ್ಲಾ ಪ್ರಸಂಗಗಳ ಬಹುತೇಕ ಪಾತ್ರಗಳು ನಮ್ಮ ಆಶಯವನ್ನು ಅರ್ಥಮಾಡಿಕೊಂಡಿದ್ದಾರೆ, ಎನ್ನುವ ಧನ್ಯತೆ ಎಡನೀರು ಶ್ರೀಗಳದ್ದು.
ಎರಡು ತಿಂಗಳು ನಡೆಯುವ ಚಾತುರ್ಮಾಸ್ಯದಲ್ಲಿ ಸಪ್ತಾಹವೂ ಸೇರಿದಂತೆ ಕೂಟ, ಆಟ, ಸಂಗೀತಗಳಿಗೆ ಮಣೆ. ಕಲಾರಾಧನೆ, ಮತ್ತು ಅದರಿಂದ ಉಂಟಾಗುವ ಕಲಾನುಭವ ಮನಸ್ಸನ್ನು ಮುದಗೊಳಿಸುವ ಉಪಾಧಿ. ಪುತ್ತೂರಿನಲ್ಲಿ ಯಕ್ಷಗಾನದ ಮೂಲಕ ಕಲಾನುಭವವನ್ನು ನಿರೀಕ್ಷಿಸುವ ಸಿದ್ಧ ಪ್ರೇಕ್ಷಕರಿರುವುದು ಈ ಭಾಗದ ಸಾಂಸ್ಕೃತಿಕ ಜೀವಂತಿಕೆಗೆ ಸಾಕ್ಷಿ.
(ಚಿತ್ರ : ಲ.ನಾ.ಭಟ್, ಬೆಂಗಳೂರು)
No comments:
Post a Comment