ಜುಲೈ ತಿಂಗಳಲ್ಲಿ ಮಿತ್ರ ವಸಂತ ಶೆಟ್ಟಿ ಬೆಳ್ಳಾರೆಯವರಿಂದ ಮಿಂಚಂಚೆ - ದೆಹಲಿಯಲ್ಲಿ ಪ್ರಥಮ ಬಾರಿಗೆ ಅಹೋರಾತ್ರಿ ಯಕ್ಷಗಾನ ಪ್ರದರ್ಶನ ಜರುಗಲಿದೆ. ಸಾಲಿಗ್ರಾಮ ಮೇಳದವರಿಂದ 'ಭೀಷ್ಮ ವಿಜಯ' ಮತ್ತು 'ನಾಗಶ್ರೀ' ಪ್ರಸಂಗಗಳು. ಕಲಾವಿದರೊಂದಿಗೆ ಮುಖಾಮುಖಿ. ಕಲಾವಿದರನ್ನು ಪ್ರೇಕ್ಷಣೀಯ ಸ್ಥಳಗಳಿಗೆ ಒಯ್ಯುವ ವ್ಯವಸ್ಥೆ. ಯಥಾಸಾಧ್ಯ ಪಾರಂಪರಿಕ ಕ್ರಮಗಳಿಗೆ ಒತ್ತು. ದೆಹಲಿ ಕರ್ನಾಟಕ ಸಂಘ ಮತ್ತು ಅನ್ಯಾನ್ಯ ಸಂಸ್ಥೆಗಳ ಆಯೋಜನೆ.
ದೇಶದ ರಾಜಧಾನಿಯಲ್ಲಿರುವ ಕನ್ನಡ ಮೂಲದ ಯಕ್ಷಪ್ರಿಯರಿಗೆ ಖುಷಿಯ ಸುದ್ದಿ. ಬಾಲ್ಯದಲ್ಲಿ ನೋಡಿದ ಆಟದ ನೆನಹು. ವೃತ್ತಿ ಜಂಜಾಟ ಮತ್ತು ನಗರದ ಒತ್ತಡಗಳಿಗೆ ಒಂದು ರಾತ್ರಿ ರಿಲಾಕ್ಸ್. ಕಲಾವಿದರೊಂದಿಗೆ ಮುಖಿಮುಖಿಯ ಕಲಾಪವನ್ನು ಪೋಣಿಸಿರುವುದು ಖುಷಿಯ ಸಂಗತಿ. ನಾವೆಲ್ಲಾ ಚೌಕಿ, ರಂಗಸ್ಥಳಕ್ಕೆ ಕಲಾವಿದರನ್ನು ಸೀಮಿತಗೊಳಿಸಿದ್ದೇವೆ. ಅವರ ಮಾತಿಗೆ ಕಿವಿಯಾಗುವ ಅವಕಾಶಗಳನ್ನು ಎಷ್ಟು ಮಂದಿ ಆಯೋಜಿಸಿದ್ದಾರೆ?
ದಿನಮಾನಗಳು ಬದಲಾಗಿವೆ. ಕಲಾವಿದ ವಿದ್ಯಾವಂತನಾಗಿದ್ದಾನೆ. ಲೋಕಗಳನ್ನು ತಿಳಿಯುವ ಸಾಮಥ್ರ್ಯ ಹೊಂದಿದ್ದಾನೆ. ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಂಡಿದ್ದಾನೆ. ಅಂಗೈಗೆ ಬಗೆಬಗೆಯ ಮೊಬೈಲ್ಗಳು ಅಂಟಿವೆ. ಆತನಿಗೂ ಒಂದು ಮನಸ್ಸಿದೆ. ಆಶೆಯಿದೆ. ಕನಸಿದೆ. ದೂರದೃಷ್ಟಿಯಿದೆ. ಮನೆಮಂದಿಯಿದ್ದಾರೆ. ಅವನಿಗೂ ಏನನ್ನೋ ಹೇಳಬೇಕೆಂಬ ತುಡಿತವಿದೆ. ಅದಕ್ಕೆಲ್ಲಿ ಅವಕಾಶವಿದೆ. ಕಲಾವಿದನ ಮೇಲೆ ಹಲವು ಬಗೆಯ ನಿರೀಕ್ಷೆಯನ್ನಿಟ್ಟ 'ಅಭಿಮಾನಿ'ಗಳು ಹೊಗಳಿಕೆಯ ಕೂಪಕ್ಕೆ ತಳ್ಳುತ್ತಿದ್ದಾರೆ! ಅದರಿಂದ ಏಳಲಾಗದೆ, ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಾನೆ! ಎಬ್ಬಿಸುವವರು ಬೇಕಾಗಿದ್ದಾರೆ.
ಕಲಾವಿದನಿಗೂ ಮಿತಿಯಿದೆ. ಯಕ್ಷಗಾನದ ಹೊರತಾದ ಯೋಚನೆಗಳು ಸುಳಿಯುವುದಿಲ್ಲ. ಕಲೆಗೆ ಅಂಟಿದ ಮನಸ್ಸಿಗೆ ಬೇರೆ ವಿಚಾರಗಳು ನಂಟಾಗುವುದಿಲ್ಲ. ಅದರ ಹೊರತು ಯೋಚಿಸುವುದಕ್ಕೆ ವ್ಯವಧಾನವಿಲ್ಲ, ಪುರುಸೊತ್ತಿಲ್ಲ. ಗೊತ್ತಿಲ್ಲ! ವರ್ತಮಾನದ ಆಗುಹೋಗುಗಳಿಗೆ ಅಪ್ಡೇಟ್ ಆಗುವ ಜ್ಞಾನ ಬೇಕಾಗಿದೆ. ಹಾಗೆಂತ ಶೈಕ್ಷಣಿಕ ಹಿನ್ನೆಲೆಯ ಹಲವು ಕಲಾವಿದರು ವರ್ತಮಾನಕ್ಕೆ ಸ್ಪಂದಿಸುತ್ತಿದ್ದಾರೆ. ಇಂತಹ ಮಾತುಕತೆಯಲ್ಲಿ ವೈಚಾರಿಕ ಗಾಢತೆ ಇಲ್ಲದಿರಬಹುದು, ಕೇವಲ ಉಭಯಕುಶಲೋಪರಿಯೂ ಸಾಕು. ಸಂಘಟಕರ ಜತೆ ಮನಸ್ಸನ್ನು ಹಂಚಿಕೊಳ್ಳುವುದಕ್ಕಿದು ವೇದಿಕೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟು ನೋಡಿದಾಗ ದೆಹಲಿಯಲ್ಲಿ ಕಲಾವಿದರೊಂದಿಗೆ ಮುಖಾಮುಖಿ ಏರ್ಪಡಿಸಿದ್ದು ಉತ್ತಮ ಬೆಳವಣಿಗೆ.
1980ರ ಆಜೂಬಾಜಿನಲ್ಲಿ ಸಾಲಿಗ್ರಾಮ ಮೇಳದಲ್ಲಿ ನಾಗಶ್ರೀ ಮತ್ತು ಸಮಗ್ರ ಭೀಷ್ಮ ಪ್ರಸಂಗಗಳು ಜನಮೆಚ್ಚುಗೆ ಗಳಿಸಿತ್ತು. ಕಲಾವಿದರಿಗೂ ತಾರಾಮೌಲ್ಯ ಬಂದಿತ್ತು. ಈ ಎರಡೂ ಪ್ರಸಂಗಗಳು ದೆಹಲಿಯಲ್ಲಿ ಪ್ರದರ್ಶಿತವಾಗಿತ್ತು. ತಾರಾಮೌಲ್ಯ ಪಡೆದ ಕಲಾವಿದರ ತಂಡಗಳು ದೆಹಲಿಯಲ್ಲಿ ಪ್ರದರ್ಶನ ನೀಡಿವೆ. ಆದರೆ ಇಡೀ ಮೇಳವೊಂದು ಆಗಮಿಸಿ ರಾಷ್ಟ್ರದ ರಾಜಧಾನಿಯಲ್ಲಿ ಆಟ ಆಡಿದ್ದು, ಅದರಲ್ಲಿ ಭಾಗವಹಿಸಲು ಅವಕಾಶ ಪಡೆದುದು ತುಂಬಾ ಖುಷಿ ಪಡುವ ವಿಚಾರ, ಎಂಬ ಅನುಭವ ಹಂಚಿಕೊಳ್ಳುತ್ತಾರೆ ಕಲಾವಿದ ಶಶಿಕಾಂತ ಶೆಟ್ಟಿ ಕಾರ್ಕಳ. ಕಲಾವಿದರೊಂದಿಗೆ ಮಾತುಕತೆ ಹೊಸ ಕಾನ್ಸೆಪ್ಟ್. ದೆಹಲಿಗೆ ಬಂದ ಕಲಾವಿದರು ಮನತುಂಬಿ ಭಾವನೆಗಳನ್ನು ಹಂಚಿಕೊಂಡರು. ಎಲ್ಲರೂ ಮೇಳದ ಯಜಮಾನರ ಕುರಿತು ಗೌರವವಾಗಿ ಮಾತನಾಡಿದ್ದು ಮನ ತುಂಬಿ ಬಂತು ಎನ್ನುತ್ತಾರೆ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮತ್ತು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಸಕಾರಾಮ ಉಪ್ಪೂರು.
ಈ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರ ಹಂಚಿಕೊಳ್ಳಬೇಕೆನಿಸುತ್ತದೆ. ಕಮ್ಮಟ, ಪ್ರಾತ್ಯಕ್ಷಿಕೆ, ವಿಚಾರಗೋಷ್ಠಿಗಳು ಹಲವು ಕಾಲದಿಂದ ನಡೆಯುತ್ತಲೇ ಇವೆ. ಪ್ರಾತ್ಯಕ್ಷಿಕೆಗಳನ್ನು ಸಂಘಟಿಸುವ ವ್ಯವಸ್ಥೆಯನ್ನು ಹೊಂದಿಕೊಂಡು ಕಾರ್ಯಹೂರಣ. ಗೋಷ್ಠಿಗಳಲ್ಲಿ ಕಲಾವಿದರು ಭಾಗವಹಿಸುತ್ತಿಲ್ಲ. ಎಷ್ಟೋ ಸಂದರ್ಭದಲ್ಲಿ ಅವರಿಗೆ ವಿಚಾರವೇ ತಿಳಿದಿರುವುದಿಲ್ಲ. ತಿಳಿದಿದ್ದರೂ 'ನಮಗೆ ಅದರಲ್ಲಿ ಕಲಿಯುವುದಕ್ಕೆ ಏನಿದೆ' ಎನ್ನುವ ಉಡಾಫೆ. 'ತನಗೆ ಎಲ್ಲಾ ಕಲಿತು ಆಯಿತು' ಎನ್ನುವ ಮನಃಸ್ಥಿತಿ. ಇಂತಹ ಸನ್ನಿವೇಶದಲ್ಲಿ ಮೇಳಗಳ ಕಲಾವಿದರೊಂದಿಗೆ ಮುಖಾಮುಖಿ ಹೆಚ್ಚು ಪರಿಣಾಮಕಾರಿಯಾಗಬಹುದೇನೋ? ಒಂದೊಂದು ಮೇಳಗಳ ಕಲಾವಿದರು ಒಟ್ಟಾದರೂ ಸಾಕು.
ಪ್ರಾತ್ಯಕ್ಷಿಕೆ, ಸಂವಾದಗಳು ಇಂತಹ ತಂಡಗಳಲ್ಲಿ ಪ್ರಸ್ತುತಿಯಾಗಬೇಕು. ರಂಗದಲ್ಲದು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನವಾದೀತು ಎನ್ನುವಂತಿಲ್ಲ. ಆದರೆ ವಿಚಾರಗಳನ್ನು ಕಲಾವಿದರಿಗೆ ತಲುಪಿಸಲು ಸಹಕಾರಿ. ಹಿಂದೊಮ್ಮೆ ಪುತ್ತೂರಿನಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಮೇಳದ ಸಪ್ತಾಹ ಸಂದರ್ಭದಲ್ಲಿ ಕಲಾವಿದರೊಂದಿಗೆ ಮುಖಾಮುಖಿ ನಡೆದಿತ್ತು. ಆಸಕ್ತ ಕಲಾವಿದರು, ಅಭಿಮಾನಿಗಳು ಜತೆಗಿದ್ದರು. ಪ್ರದರ್ಶನ ಸಿದ್ಧತೆ, ಅಭಿವ್ಯಕ್ತಿ, ಪ್ರಸಂಗದ ಎಡಿಟಿಂಗ್, ಸಂಭಾಷಣೆ, ಅವಧಿಯೊಳಗೆ ಮುಗಿಸುವ ತಯಾರಿ.. ಇವೇ ಮುಂತಾದ ವಿಚಾರಗಳು ಹಾದುಹೋಗಿದ್ದುವು. ಕಲಾವಿದರ ಕಷ್ಟ-ಸುಖಗಳಿಗೆ ವೇದಿಕೆಯಾಗಿತ್ತು. ಇದೆಲ್ಲಾ ಹೊಟ್ಟೆಪಾಡಿನ ವಿಚಾರವಾದರೂ ಕಲಾವಿದ ರಂಗಕ್ಕೆ ನ್ಯಾಯ ಒದಗಿಸಬೇಕು, ಎನ್ನುವ ಕೊಂಡದಕುಳಿಯವರ ಮಾತನ್ನು ನೆನಪಿಟ್ಟುಕೊಂಡಿದ್ದೇನೆ
ಎಲ್ಲಾ ಕಲಾವಿದರೂ ಈ ಆಶಯಕ್ಕೆ ಸ್ಪಂದಿಸುವುದು ಕಷ್ಟ. ಸಹಜವಾಗಿ ಅಂಟಿರಬಹುದಾದ ಪ್ರತಿಷ್ಠೆ, ವಿಚಾರಗಳನ್ನು ಹಗುರವಾಗಿ ಕಾಣುವ ಮನಃಸ್ಥಿತಿ, ರಂಗದ ಸೀಮಿತ ಸ್ಕ್ರಿಪ್ಟಿಗೆ ಒಗ್ಗಿಕೊಂಡ ಮನಸ್ಸಿಗೆ ಹೊರ ವಿಚಾರಗಳು ಕಿರಿಕಿರಿಯಾಗುವ ಸಾಧ್ಯತೆ ನಿಚ್ಚಳ. 'ನಾನಿರುವುದು ಹೀಗೆ', 'ಬೇಕಾದರೆ ಪ್ರೇಕ್ಷಕರು ಒಪ್ಪಿಕೊಳ್ಳಲಿ, ಬಿಡಲಿ' ಎನ್ನುವ ಮನಃಸ್ಥಿತಿ. 'ತಾನು ಏನು ಮಾಡಿದರೂ ಅಭಿಮಾನಿಗಳು ಸ್ವೀಕರಿಸುತ್ತಾರೆ,' ಎಂಬ ಮಗದೊಂದು ವರ್ಗ. ಏನೇ ಇರಲಿ, ಸಮಗ್ರ ಯಕ್ಷಗಾನದ ಕಲ್ಪನೆಯ ಮನಃಸ್ಥಿತಿ ರೂಪುಗೊಳ್ಳಬೇಕಷ್ಟೇ.
ಇಂದು ಕಲಾವಿದರಿಗೆ ನೆರಳಾಗುವ ಎಷ್ಟು ವ್ಯವಸ್ಥೆಗಳಿಲ್ಲ. ಉಡುಪಿಯ ಕಲಾರಂಗ, ಪಟ್ಲ ಪೌಂಡೇಶನ್ ಮತ್ತು ತೆಂಕು-ಬಡಗು ತಿಟ್ಟಿನಲ್ಲಿರುವ ಸಂಘಗಳು ಕಲಾವಿದರ ಯೋಗಕ್ಷೇಮವನ್ನು ಹೊತ್ತಿದೆ. ಕಲಾರಂಗವು ವಾರ್ಶಿಕವಾಗಿ ಸಮಾವೇಶವನ್ನು ಏರ್ಪಡಿಸುತ್ತಿದೆ. ಇವೆಲ್ಲಾ ಸುಭಗದ ಬದುಕಿಗೆ ಸಂಬಂಧಿಸಿದ ವಿಚಾರಗಳು. ಶೈಕ್ಷಣಿಕವಾಗಿ ಪಕ್ವಗೊಳಿಸುವ, ಬುದ್ಧಿಯನ್ನು ಜಾಗೃತಗೊಳಿಸುವ, ಅರಿವನ್ನು ಹೆಚ್ಚಿಸುವ, ಜ್ಞಾನವನ್ನು ವೃದ್ಧಿಸುವ ಕಾರ್ಯಕ್ರಮಗಳು ಬೇಕಾಗಿವೆ. ಅವುಗಳ ಅನುಷ್ಠಾನವು ದೊಡ್ಡ ಸಮೂಹಕ್ಕೆ ಕಷ್ಟ. ಚಿಕ್ಕಪುಟ್ಟ ಗುಂಪುಗಳಲ್ಲಿ ಸಾಧ್ಯ. ಇದರಿಂದ ವೈಯಕ್ತಿಕವಾಗಿ ಕಲಾವಿದನೂ ಬೆಳೆಯುತ್ತಾನೆ. ರಂಗದಲ್ಲೂ ಬದಲಾವಣೆ ಕಾಣಬಹುದು. ಥಿಯರಿಗಳು ಮನಸ್ಸಿನೊಳಗೆ ಇಳಿಯುವುದು ನಿಧಾನ.
ಇವನ್ನೆಲ್ಲಾ ಬರೆಯುವುದು ಸುಲಭ ಅಂತ ಗೊತ್ತಿದೆ. ಬದಲಾವಣೆಯನ್ನು, ಸ್ವ-ಅಭಿವೃದ್ಧಿಯನ್ನು (ಆರ್ಥಿಕವಾಗಿ ಅಲ್ಲ) ಬಯಸುವ ಕಲಾವಿದರು ಖಂಡಿತವಾಗಿ ಸ್ಪಂದಿಸಿಯಾರು, ಸ್ಪಂದಿಸಬೇಕು. ಇಲ್ಲದಿದ್ದರೆ ಸಂಭಾವನೆಯ 'ಕವರಿನೊಳಗೆ' ರಂಗಬದುಕಿನ ಬಲೆ ನೇಯುತ್ತಾ ಇರುತ್ತದಷ್ಟೇ.
ದೆಹಲಿ ಕರ್ನಾಟಕ ಸಂಘವು ಕಲಾವಿದರ ಮತಿಗೆ, ಮಾತಿಗೆ, ಮನಸ್ಸಿಗೆ ಮಾನ ಕೊಟ್ಟಿದೆ. ಹೊಸ ಹಾದಿ ತೋರಿದೆ.
(ಪ್ರಜಾವಾಣಿ | ದಧಿಗಿಣತೋ ಅಂಕಣ)
No comments:
Post a Comment