Friday, September 2, 2016

ಗಾನಾಮೃತದಲ್ಲಿ ಮಿಳಿತವಾದ ಯಕ್ಷಗಾನ!


              ಯಕ್ಷಗಾನದಲ್ಲಿ 'ಗಾನ ವೈಭವ' ಈಚೆಗಿನ ಭರಾಟೆ. ಮೊದಲಿತ್ತು, ಶುಭ ಸಮಾರಂಭಗಳಂದು ತಾಳಮದ್ದಳೆ, ವಿಮರ್ಶೆ. ಅದು ಬದುಕಿನೊಂದಿಗೆ ಮಿಳಿತವಾದ ಕಲಾಪ. ಈಗ ಹಾಗಲ್ಲ, 'ಅಂಜಾಯ್' ಮನಃಸ್ಥಿತಿ. ಹೀಗಾದಾಗ ಅದರಿಂದ ಸಿಗಬಹುದಾದ ರಸಾಸ್ವಾದನೆಯಿಂದ ವಂಚಿತರಾಗುತ್ತೇವೆ. ರಂಗದ ಒಂದೊಂದು ಅಂಗದಲ್ಲಿ ಸುಖ ಪಡುವ, ಖುಷಿ ಪಡುವ ಪ್ರಕ್ರಿಯೆ. ಅದೂ ಆನಂದದ ರಸ ಸೃಷ್ಟಿಯಾಗಿ ನಮ್ಮೊಳಗೆ ಇಳಿದರೆ ಮಾತ್ರ..!
               ಈಚೆಗೆ (ಮೇ ತಿಂಗಳು) ಪುತ್ತೂರು ತಾಲೂಕಿನ ಕಾವು ಬರೆಕರೆ ಡಾ.ಪಟ್ಟಾಜೆ ಗಣೇಶ ಭಟ್ಟರಲ್ಲಿ 'ಯಕ್ಷಾರಾಧನಾ' ಜರುಗಿತು. ಪದ್ಯಾಣ ಗಣಪತಿ ಭಟ್, ಪ್ರಸಾದ ಬಲಿಪ, ಪ್ರಫುಲ್ಲಚಂದ್ರ  ನೆಲ್ಯಾಡಿ, ತೆಂಕಬೈಲು ಮುರಳಿ ಶಾಸ್ತ್ರಿ - ನಾಲ್ವರು ಭಾಗವತರು.  ಇಲ್ಲಿ 'ಗಾನ ವೈಭವ' ಇರಲಿಲ್ಲ! ಬದಲಿಗೆ 'ಗಾನಾಮೃತದ ಉಣಿಕೆ'ಯಿತ್ತು. ರಸ ವೈಭವಗಳ ಸಂಪನ್ನತೆಯಿತ್ತು. ಪದ್ಯಗಳ ಪ್ರಸ್ತುತಿಯಲ್ಲಿ ಯಕ್ಷಗಾನವಿತ್ತು. ಆಯೋಜನರ ಉದ್ದೇಶವೂ ಅದೇ. ಪದ್ಯಾಣ ಶಂಕರನಾರಾಯಣ ಭಟ್, ಬೊಳಿಂಜಡ್ಕ ಗುರುಪ್ರಸಾದ್, ಪಡ್ರೆ ಶ್ರೀಧರ, ಕೊಂಕಣಾಜೆ ಚಂದ್ರಶೇಖರ್ .. ಇವರ ಹಿಮ್ಮೇಳ ಸಾಥ್.
                  ಸುಮಾರು ಎರಡೂವರೆ ಗಂಟೆ ಜರುಗಿದ ಗಾನಾಮೃತದಲ್ಲಿ ಡಾ.ಪಟ್ಟಾಜೆ ಗಣೇಶ ಭಟ್ಟರು ರಚಿಸಿದ ಪ್ರಸಂಗಗಳ ಹಾಡುಗಳು. ಮೊದಲೇ ಎಲ್ಲರಿಗೂ ಪದ್ಯಗಳ ವಿವರಗಳನ್ನು ನೀಡಲಾಗಿತ್ತು. ಎಲ್ಲಾ ಭಾಗವತರು ಆಯೋಜಕರ ಉದ್ದೇಶವನ್ನು ಅರ್ಥಮಾಡಿಕೊಂಡಿದ್ದರು. ಪದ್ಯವೊಂದರ ಬಂಧದೊಳಗೆ ಎಷ್ಟು ಲಂಬಿಸಬೇಕೋ ಅಷ್ಟೇ ಲಂಬನೆಯು ಕಾರ್ಯಕ್ರಮದ ಧನಾಂಶ. ಚಪ್ಪಾಳೆಗಾಗಿ ಹಾಡು ಇದ್ದಿರಲಿಲ್ಲ. ಬದಲಿಗೆ ಹಾಡಿನ ಮೋಹ, ಲಾಲಿತ್ಯ, ಸೊಗಸುಗಳಿಗೆ ಚಪ್ಪಾಳೆಯಿತ್ತು.  ಹಳೆ ಮಟ್ಟುಗಳು ಹಾಡಿನಲ್ಲಿ ಇಣುಕಿದಾಗ ಪ್ರೋತ್ಸಾಹದ ಸಿಂಚನ.
                ಈಚೆಗೆ ಜಾಲತಾಣದಲ್ಲಿ ಒಂದು ಉಲ್ಲೇಖ ಇತ್ತು - ಕಲಾಭಿಮಾನಿಗಳನ್ನು ತೃಪ್ತಿ ಪಡಿಸುವುದು ಕಲಾವಿದರ ಹೊಣೆ!  ಯಾರನ್ನಾದರೂ ತೃಪ್ತಿ ಪಡಿಸಲು ಸಾಧ್ಯವೇ? ತನ್ನ ಆಸಕ್ತಿಗಳನ್ನು ರಂಗದಲ್ಲಿ, ಕಲಾವಿದರಲ್ಲಿ ನಿರೀಕ್ಷಿಸಿದರೆ ಅವರಿಂದ ನೀಡಲು ಸಾಧ್ಯವೇ? ರಂಗದಲ್ಲಾಗುವ ಕ್ಷಣಗಳು ತನ್ನ ತೃಪ್ತಿಯಷ್ಟು - ರಂಗದ ಮಿತಿಯಲ್ಲಿ - ಏರಿದಾಗ ಸಂತೋಷ ಪಡಬಹುದಲ್ಲವೇ? ನಾಟಕದಂತೆ ಯಕ್ಷರಂಗವು ಸಿದ್ಧರಸವನ್ನು ಕೊಡುವುದಿಲ್ಲವಲ್ಲಾ. ಇದಕ್ಕಾಗಿ ಕಲಾವಿದರಿಗೆ ಒತ್ತಡ, ಪೀಡನೆ ಸಾಧುವಲ್ಲ.
                 ಕಲಾವಿದರಿಗೂ ಸಂದಿಗ್ಧ. ಅಭಿಮಾನಿಗಳ ಪ್ರೀತಿಯ ಒತ್ತಡವನ್ನು ಸ್ವೀಕರಿಸಬೇಕು. ಅವರ ಅಪೇಕ್ಷೆಯಂತೆ ಹಾಡಬೇಕು. ಅವರು ಹೇಳಿದ ಪದ್ಯವನ್ನು, ರಾಗವನ್ನು ಪ್ರಸ್ತುತಪಡಿಸಬೇಕು, ಲಂಬಿಸಬೇಕು. ಒಂದಷ್ಟು ಹೊತ್ತು ಯಕ್ಷಗಾನವನ್ನು ಮರೆಯಬೇಕು! ಹೀಗಾಗದಿದ್ದರೆ ಕಲೆ, ಕಲಾವಿದರ ಸಾಮಥ್ರ್ಯವನ್ನು ತನ್ನ ಮಿತಿಯೊಳಗೆ ವಿಮರ್ಶಿಸುತ್ತಾರೆ, ಕ್ಷಮತೆಯನ್ನು ನಿರ್ಧರಿಸಿಬಿಡುತ್ತಾರೆ. ಇಂತಹ 'ತೀರ್ಪುುಗಳು' ರಂಗಕ್ಕೆ ಅಪಾಯಕಾರಿ. ಕಲಾವಿದರ ಬೆಳವಣಿಗೆಗೆ ತೊಂದರೆ.
              ಗಾನವೈಭವಗಳ ಕುರಿತು ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿಯವರು ಹೇಳಿದ ನೆನಪು, ವೇಷ, ನಾಟ್ಯ, ಸಭಾಲಕ್ಷಣ.. ಇವುಗಳೆಲ್ಲಾ ಸೇರಿ ಆಟವಾಗುತ್ತದೆ. ಅದರ ಒಂದೊಂದು ತುಂಡು ತೆಗೆದು 'ವೈಭವ' ಮಾಡುತ್ತೇವೆ. ಅದು ಹೇಗಾಗ್ತದೆ? ಇದು ವೈಭವ ಆದರೆ ಅದು ಅಲ್ವಾ. ಸಾಂಪ್ರದಾಯಿಕ ಕಲೆಯ ಮರ್ಮವರಿಯದೆ, ಅದರ ಬಳಕೆಯ ರಹಸ್ಯವನ್ನು ತಿಳಿಯದೆ ಹಿಗ್ಗಾಮುಗ್ಗಾ ಎಳೆದರೆ..? ಹಾಗಾಗಬಾರದು. ಅರ್ಥದಲ್ಲೂ ಹಾಗೆನೇ. ಎರಡು ಪಾತ್ರಗಳ ಸಂವಾದಗಳು ತಾಳಮದ್ದಳೆ ರೂಪದಲ್ಲಿ ಆಗುತ್ತಿವೆ. ಜತೆಗೆ ಏಕವ್ಯಕ್ತಿ ರಂಗ ಪ್ರವೇಶಿಸಿತು. ಇವೆಲ್ಲಾ ಪ್ರಾತ್ಯಕ್ಷಿಕೆಗಳು. ಪ್ರದರ್ಶನಗಳಲ್ಲ. ಆದರೆ ಪ್ರಾತ್ಯಕ್ಷಿಕೆಗಳು ಪ್ರದರ್ಶನಗಳಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಕುರಿತು ಮಾತನಾಡಿದರೆ ನಮಗೆ ಗೊತ್ತಿಲ್ಲ ಅಂತ ಸ್ಥಾಪಿತವಾಗುತ್ತದೆ.
               ಈಚೆಗೆ ಯಾವುದೇ ಕಾರ್ಯಕ್ರಮಗಳ ಮಧ್ಯೆ 'ಗಾನ ವೈಭವ' ಪೋಣಿತವಾಗುತ್ತಿದೆ. ಐದಾರು ಮಂದಿ ಭಾಗವತರು, ಮೂರ್ನಾಲ್ಕು ಮಂದಿ ಹಿಮ್ಮೇಳ ಕಲಾವಿದರು, ನಿರೂಪಣೆಗೆಂದೇ ಪ್ರತ್ಯೇಕ (!) ವ್ಯವಸ್ಥೆ, ಅದಕ್ಕೆ ಪೂರಕವಾದ ಧ್ವನಿವರ್ಧಕ... ಹೀಗೆ ಒಟ್ಟೂ ಪ್ರತ್ಯೇಕ ವ್ಯವಸ್ಥೆ. ಸಂಘಟಕರು ಹೊಂದಾಣಿಸಿಕೊಳ್ಳುತ್ತಾರೆ ಬಿಡಿ. ಗಾನವೈಭವಕ್ಕೆಂದೇ ಪದ್ಯಗಳನ್ನು ಒಟ್ಟುಸೇರಿಸಿದ ಸ್ವ-ಬರೆಹದ ಹಾಡುಗಳು ಭಾಗವತರಲ್ಲಿವೆ. ಕೆಲವೊಮ್ಮೆ ಯಕ್ಷಸಾಕ್ಷರ ಸಂಘಟಕರು ತಾವೇ ಹಾಡುಗಳನ್ನು ಆಯ್ಕೆ ಮಾಡಿ ಕೊಡವುದೂ ಇದೆ.
               ಗಾನವೈಭವಗಳು ನಿಜಾರ್ಥದ ರಸವೈಭವಗಳಾಗಬೇಕು. ಅದು ಪ್ರೇಕ್ಷಕರೊಳಗೆ ಇಳಿಯಬೇಕು. ಅವರ ಅನುಭವವಾಗಬೇಕು. ಆಗ ಆನಂದದ ಹೊನಲಿನ ಆರಂಭ. ಮತ್ತೆಯಷ್ಟೇ ಚಪ್ಪಾಳೆ. ಇದಾವುದರತ್ತ ಲಕ್ಷ್ಯ ಇಲ್ಲದೆ - ಬೇಕಾಗದ - ಚಪ್ಪಾಳೆ, ಶಿಳ್ಳಿನಲ್ಲಿ ಕಲಾವಿದರನ್ನು ತೋಯಿಸುವ ಅಭಿಮಾನಿಗಳು, ಪ್ರೇಕ್ಷಕರು, ಸಂಘಟಕರು ಒಂದು ಕ್ಷಣ ನಿಂತು ಯೋಚಿಸಿ. ಗಾನದ ಮೂಲಕ ರಸ ಸೃಷ್ಟಿಯಾಗುವುದು ಸುಲಭದ ಕೆಲಸವಲ್ಲ. ಅದು ಕಲಾವಿದರ ಅನುಭವದ ಅಡಿಗಟ್ಟಿನ ಮೇಲಿದೆ. ಯಕ್ಷಗಾನದ ಚೌಕಟ್ಟಿನಲ್ಲಿದ್ದರೆ ಮಾತ್ರ ಗಾನವು ರಸವಾಗಲು ಸಾಧ್ಯ. ಇದು ಸಂಗೀತ ಕಛೇರಿ ಅಲ್ಲವಲ್ಲಾ! ಹಾಗಾಗಿ ಕಲಾವಿದರನ್ನು ಯಕ್ಷಗಾನದ ಚೌಕಟ್ಟಿನಲ್ಲಿರಲು ಬಿಡಿ. ಇದು ಆಕ್ಷೇಪ ಅಲ್ಲ. ಕೋರಿಕೆ.
              ಆರಂಭದಲ್ಲಿ ಉಲ್ಲೇಖಿಸಿದ್ದೇನಲ್ಲಾ, ಬರೆಕರೆಯ ಗಾನಾಮೃತದಲ್ಲಿ ಎಲ್ಲಾ ಭಾಗವತರೂ ಅತ್ಯುತ್ತಮವಾಗಿ ರಾಗ, ಲಯಗಳನ್ನು ಕಾಪಾಡಿಕೊಂಡಿದ್ದಾರೆ. ಪ್ರೇಕ್ಷಕರ ಚಪ್ಪಾಳೆಗೆ ಯಾರೂ ಕಾದು ಕೂರಲಿಲ್ಲ. ಆದರೆ ಹಾಡಿಗೆಲ್ಲಾ ಚಪ್ಪಾಳೆಯ ಪ್ರಶಂಸೆ ಬಂದಿರುವುದು ಪ್ರಸ್ತುತಿಯ ವೈಭವದಿಂದ. ಪದ್ಯಾಣ ಗಣಪತಿ ಭಟ್ ಮತ್ತು ಪದ್ಯಾಣ ಶಂಕರನಾರಾಯಣ ಭಟ್ಟರು ಗಾನಾಮೃತವನ್ನು ತಮ್ಮ ಅನುಭವದ ಪಕ್ವತೆಯಿಂದ ಮುನ್ನಡೆಸಿದ ರೀತಿ ಅನನ್ಯ.
                ಪಟ್ಟಾಜೆ ಗಣೇಶ ಭಟ್ಟರ ಬಗ್ಗೆ ಒಂದು ಮಾತು ಹೇಳಲೇಬೇಕು. ಗಂಧರ್ವಕನ್ಯೆ, ನೈಮಿಷಾರಣ್ಯ, ಪಾಂಚಜನ್ಯ, ಶತ್ರುದಮನ, ಪಾರ್ವತೀ ಪ್ರತಿಜ್ಞೆ, ನಾಗಮಣಿ ಮಾಣಿಕ್ಯ, ಹಂಸಡಿಭಿಕೋಪಾಖ್ಯಾನ, ಕಾವು ಕ್ಷೇತ್ರ ಮಹಾತ್ಮೆ, ಉದಯ ಚಂದ್ರಿಕಾ.. ಹೀಗೆ ಒಂಭತ್ತು ಪ್ರಸಂಗಗಳನ್ನು ರಚಿಸಿದ್ದಾರೆ. ಕೆಲವು ಪ್ರದರ್ಶನಗಳಾಗಿವೆ. ಹಿಂದೊಮ್ಮೆ ಇವರ ಪ್ರಸಂಗಗಳಿಂದ ಉದ್ಧರಿಸಿದ ಪದ್ಯಗಳ ಗಾನಾಮೃತ ಜರುಗಿತ್ತು. ಇದು ಎರಡನೇ ಬಾರಿ. ಉತ್ತಮ ಆಯೋಜನೆ. ಗಾನವೈಭವ ಯಾ ಗಾನಾಮೃತದಲ್ಲಿ ಯಕ್ಷಗಾನವೂ ಮಿಳಿತವಾದರೆ ಅದರ ಸೊಗಸು ಅನನ್ಯ ಎನ್ನುವುದರ ಸಂದೇಶವನ್ನು ಭಟ್ಟರ ಹಳ್ಳಿ  ಮನೆ ಸಾರಿದೆ.
(ಪ್ರಜಾವಾಣಿ-ದಧಿಗಿಣತೋ ಅಂಕಣ)

1 comment:

  1. ಈ ಕಾರ್ಯಕ್ರಮದ ಉತ್ತಮ ಕ್ವಾಲಿಟಿಯ ಸಂಪೂರ್ಣ ಧ್ವನಿಮುದ್ರಣ ಈ ಲಿಂಕಿನಲ್ಲಿ ಲಭ್ಯವಿದೆ.

    http://yakshadhwani.blogspot.in/2016/05/blog-post.html

    ReplyDelete