Friday, September 2, 2016

ಅಡ್ಕರ ವಚೋಹಾಸಕ್ಕೆ ಸಹಸ್ರಚಂದ್ರದ ಮೆರುಗು



            ಒಂದು ಕಾಲಘಟ್ಟದ ತಾಳಮದ್ದಳೆಯ ಅರ್ಥಗಾರಿಕೆಯ 'ಮಾದರಿ'ಯು ಅಡ್ಕ ಗೋಪಾಲಕೃಷ್ಣರ ಬಳಿ ನಿಂತಿದೆ! ಅದು ಅವರನ್ನು ಕಾಡುತ್ತಿದೆ. ಎಂಭತ್ತಮೂರು ವಯಸ್ಸು ಎನ್ನುವುದನ್ನು ಮರೆಸುತ್ತದೆ. ಸಹಸ್ರಚಂದ್ರ ದರ್ಶನದ ಪುಳಕದೊಳಗೆ ಮಿಂದು ಸಂಭ್ರಮಿಸುತ್ತಿದೆ.
             ಆ ಮಾದರಿಯೇಕೆ ತಟಸ್ಥ? ವಯೋಸಹಜವಾಗಿ ಅಡ್ಕರು ಕೂಟ, ಆಟಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಹೀಗಿದ್ದೂ ಯಾಕೆ ಅವರನ್ನು ಸುತ್ತಿಕೊಂಡಿದೆ? ಅದು ಅಡ್ಕ ಭಟ್ಟರ ಸಾಧನೆ, ತ್ಯಾಗ ಮತ್ತು ಒಂದು ಕಲೆಯನ್ನು ಸಮಾಜದೊಳಗೆ ಇಳಿಬಿಟ್ಟ ಬಗೆಗಿನ ಪರಿಣಾಮ.
              ವ್ಯಕ್ತಿಗೆ ಐವತ್ತೋ, ಅರುವತ್ತೋ ವಯಸ್ಸು ದಾಟಿದಾಗ ಸಹಜವಾಗಿ ವೃತ್ತಿಪರತೆಗೆ ಇಳಿಲೆಕ್ಕ. ಅದುವರೆಗೆ ಅಭಿಮಾನಿ ಎಂದು ಘೋಷಿಸಿಕೊಂಡವರು ಸುತ್ತುತ್ತಿರುತ್ತಾರೆ. ಬಹುಪರಾಕ್ ಅಭಿಮಾನದಲ್ಲಿ ಮುಳುಗಿಸುತ್ತಾರೆ. ಇದರಲ್ಲಿ ಪೂರ್ತಿ ಮುಳುಗಿದರೆ ಮತ್ತೆ ಎಬ್ಬಿಸಲು ಯಾರೂ ಇರುವುದಿಲ್ಲ! ಅಡ್ಕರಿಗೆ ತನ್ನ ಯಕ್ಷಯಾನದಲ್ಲಿ ಈ ಎಚ್ಚರವಿತ್ತು. ಹಾಗಾಗಿ ಎತ್ತರಕ್ಕೆ ಬೆಳೆದರು. ಹೊಸ ಮಾದರಿಯನ್ನು ಸೃಷ್ಟಿಸಿದರು.
              ಗೋಪಾಲಕೃಷ್ಣ ಭಟ್ಟರು ಅಧ್ಯಾಪಕರಾಗಿ ನಿವೃತ್ತ. ಮಾಸ್ತರಿಕೆಯನ್ನು ಗೌರವಿಸುತ್ತಿದ್ದ ಕಾಲಮಾನ. ಶಾಲೆ, ಅಧ್ಯಾಪಕ, ಶಿಕ್ಷಣ - ಈ ಮೂರನ್ನೂ ಸಮಾಜ ಪ್ರಾಂಜಲವಾಗಿ ಗೌರವಿಸುತ್ತಿತ್ತು. ಯಾವುದೇ ಪತ್ರ ವ್ಯವಹಾರ, ಸಮಸಾಮಯಿಕ ವಿಚಾರಗಳಿಗೆ ಅಧ್ಯಾಪಕರ ಅವಲಂಬನೆ. ಅಧ್ಯಾಪಕರೂ ತಮ್ಮ ಕರ್ತವ್ಯ ಎನ್ನುವ ನೆಲೆಯಲ್ಲಿ ಹಳ್ಳಿ ಮನಸ್ಸುಗಳಿಗೆ ನೀಡುವ ಗೌರವ ಇದೆಯಲ್ಲಾ - ಅದು ಹಳ್ಳಿ ಕಲಿಸಿದ, ಕಲಿಸುವ ಪಾಠ. ಆಗ ಊರಿನಲ್ಲಿರುವವರು ಅನಕ್ಷರಸ್ಥರು, ಓದು ಬಾರದವರು ಎನ್ನುವ ಯಾವುದೇ ದೊಡ್ಡಸ್ತಿಕೆಯಿಲ್ಲದ ಮಾಸ್ತರಿಕೆ. ಹಾಗಾಗಿ ಅಡ್ಕರು ಇಳಿವಯಸ್ಸಲ್ಲಿ ಒಮ್ಮೆ ಅಡ್ಡಾಡಲಿ, ಅವರ ಮುಂದೆ ಗೌರವದಿಂದ ಬಾಗುವ ಶಿಷ್ಯರು ಸಿಗುತ್ತಾರೆ.
              ಯಕ್ಷಗಾನ ಬಾಲ್ಯಾಸಕ್ತಿ. ಭಾವ ಪೆರಡಂಜಿ ಕೃಷ್ಣ ಭಟ್ಟರಿಂದ ಪ್ರಭಾವಿತ. ಮಣ್ಣಿನ ಮುದ್ದೆಯು ಎಡನೀರು ಶ್ರೀಮಠದಲ್ಲಿ ಕಲಾಶಿಲ್ಪವಾಯಿತು. ಅಲ್ಲಿನ ಆಟ, ಕೂಟ, ನಾಟಕಗಳಲ್ಲಿ ಪ್ರೇಕ್ಷಕನಾಗಿ, ಕಲಾವಿದನಾಗಿ ಭಾಗಿ. ತಾಳಮದ್ದಳೆ, ಆಟಗಳ ಸೂಕ್ಷ್ಮ ವಿಚಾರಗಳ ಮನನ. ಹಿರಿಯರ ಅರ್ಥಗಾರಿಕೆಗೆ ಕಿವಿಯಾಗುವ ಅವಕಾಶ. ಮುಂದೆ ಸಮರ್ಥ ಅರ್ಥಧಾರಿಯಾಗಿ, ವೇಷಧಾರಿಯಾಗಿ ಅರಳಿದರು. ಶೇಣಿಯವರ ಮಾತಿನ ಮೋಹದ ಬಲೆಗೆ ಸಿಲುಕಿದರು. ಅವರೊಂದಿಗೆ ಓಡಾಡಿದರು. ಅರ್ಥ ಹೇಳಿದರು. ಅವರ ಪರಮಾಪ್ತನಾದರು.
             ಅಡ್ಕರದು ಸ್ವ-ಶೈಲಿ. ಸ್ವ-ಮಾದರಿ. ಬೇಕಾದಲ್ಲಿಗೆ, ಬೇಕಾದಾಗ ಪೆಟ್ಟು, ಮಟ್ಟು, ಗುಟ್ಟು! ಎದುರಾಳಿಯ ಅರ್ಥದೊಳಗಿನ ಭಾವ, ವಾಕ್ಯ, ಪದ, ಅಕ್ಷರಗಳನ್ನು ಪೋಸ್ಟ್ಮಾರ್ಟಂ ಮಾಡುವ ಸ್ವ-ಭಾವ. ಅವರ ಅರ್ಥದ ಜಾಡಿನಲ್ಲಿ ಸಾಗುವಾಗ ಫಕ್ಕನೆ ಇದಿರರ್ಥಧಾರಿಯ ಮೇಲೆ ಏರಿದಂತೆ, ಸವಾರಿ ಮಾಡಿದಂತೆ, ಆಕ್ಸಿಡೆಂಟ್ ಮಾಡಿದಂತೆ ಅನ್ನಿಸುತ್ತದೆ. ಅಡ್ಕರ ಈ ಶೈಲಿ ಹತ್ತಿರದಿಂದ ಗೊತ್ತಿದ್ದವರಿಗೆ ಅಪಾಯವಿಲ್ಲ. ಹೊಸಬರಿಗೆ ಕಷ್ಟ.
                 ಗೋಪಾಲಕೃಷ್ಣ ಭಟ್ಟರು ಹೆಚ್ಚಾಗಿ ಖಳ ಪಾತ್ರಗಳಿಗೆ ಒಗ್ಗಿದ್ದಾರೆ. ದೈವದತ್ತವಾದ ಶರೀರ, ಶಾರೀರ, ಮಂಡನಾ ವಿಧಾನಗಳಿಂದ 'ವಾಲಿ, ಜರಾಸಂಧ, ರಾವಣ, ಶೂರ್ಪನಖಿ..' ಯಂತಹ ಪಾತ್ರಗಳು ಅವರನ್ನು ಬಿಟ್ಟು ಅಗಲಿದ್ದಿಲ್ಲ. ಮನುಷ್ಯರಂತೆ ಪೌರಾಣಿಕ ಪಾತ್ರಗಳು ಕೂಡಾ ಎಲ್ಲವನ್ನು ಎಲ್ಲಾ ಕಾಲದಲ್ಲೂ ಹೇಳವು, ಹೇಳಕೂಡದು. ಈ ವಿಚಾರದಲ್ಲಿ ಅಡ್ಕರ ಪಾತ್ರ ಪ್ರಸ್ತುತಿಗೆ ಪಾತ್ರಗಳೇ ನಿಬ್ಬೆರಗಾಗಿದ್ದುವು! ನನಗೆ ಸೌಮ್ಯ ಪಾತ್ರಗಳನ್ನು ಹೇಳಲು ಆಸೆಯಿದೆ. ಸಾಮಥ್ರ್ಯವೂ ಇದೆ. ಯಾಕೋ ಏನೋ ಯಕ್ಷಗಾನ ಕ್ಷೇತ್ರದಲ್ಲಿ ಖಳ ಪಾತ್ರಗಳಿಗೆ ಸೀಮಿತನಾದೆ.
              ಕಾಸರಗೋಡು ನೆಲದಲ್ಲಿ ಕಲೆಯನ್ನು ತನ್ನೊಳಗೆ ಇಳಿಸಿಕೊಂಡು ಕನ್ನಡಕ್ಕೆ ಕಾವು ಕೊಟ್ಟರು. ಕಾರ್ತಿಕೇಯ ಕಲಾ ನಿಲಯದ ಮೂಲಕ ಕನ್ನಡ ಕಲೆಯ ಸೊಬಗನ್ನು ಮಲೆಯಾಳಿಗಳ ಮುಂದೆ ತೆರೆದಿಟ್ಟರು. ಯಕ್ಷಗಾನದ ಸೊಬಗಿಗೆ ಕಥಕ್ಕಳಿ ನೆಲದಲ್ಲಿ ಸಿಕ್ಕ ಬೆಂಬಲ ಅನುಪಮ. ಹೋದೆಡೆಯೆಲ್ಲಾ ಮುಗಿಬೀಳುವ ಅಭಿಮಾನ. ನಾಡಿನ ದೊರೆಗಳ ಚಿತ್ತವನ್ನು ಸೆಳೆದ ಮಲೆಯಾಳ ಪ್ರದರ್ಶನವು ಯಕ್ಷಗಾನಕ್ಕೆ ಮೇಲ್ಮೆ. ಈ ಖುಷಿಯ ಜತೆಜತೆಗೆ 'ಕನ್ನಡ ಕಲೆಯನ್ನು ಮಲೆಯಾಳೀಕರಿಸಿದ' ಎಂಬ ಅಪಸ್ವರ.
            ಕಲೆಗೆ ಭಾಷೆಯ ತೊಡಕು ಏಕೆ? ಪ್ರಶ್ನಿಸುತ್ತಾರೆ. ಕಲೆಯೊಂದು ಮಾಡಬೇಕಾದುದೇನು? ಪ್ರೇಕ್ಷಕರ ಮನದೊಳಗೆ ಇಳಿದು, ಅದರ ಸೊಬಗು-ಬೆರಗಿಗೆ ಬೆರಗಾಗಿ ಕೊನೆಗೆ 'ಅದೇ ಆಗುವ' ಚಿತ್ತದ ಸ್ಥಿತಿ ಇದೆಯಲ್ಲಾ, ಅದು ಕಲೆಯ ಪರಿಣಾಮ. ಮಲೆಯಾಳ ಯಕ್ಷಗಾನವು ಕೇರಳಿಗರಿಗೆ ಈ ಭಾವವನ್ನು ಕಟ್ಟಿಕೊಟ್ಟಿತ್ತು. ಇಲ್ಲಿ ಭಾಷೆಯ ಹಂಗಿಲ್ಲ. ಕಲೆಯೊಂದನ್ನು ಕಲೆಯಾಗಿ ಸ್ವೀಕರಿಸುವ ಮನಃಸ್ಥಿತಿ ಇದ್ದಾಗ ಮಾತ್ರ ಬದುಕಿಗೆ ಸುಭಗತನ. ಎಲ್ಲಾ ಕಡೆಯೂ ಸಾಮಾಜಿಕ ಸಮಸ್ಯೆಗಳನ್ನು ಸ್ಪರ್ಶ ಮಾಡುವ ಮನೋಭಾವ ಇದ್ದವರ ಮಧ್ಯೆ ಅದನ್ನು ನಿರೀಕ್ಷಿಸುವುದು ತಪ್ಪಾದೀತಲ್ವಾ, ಎನ್ನುತ್ತಾರೆ.
              ಬದುಕಿನ ಕಾಯಕಷ್ಟವನ್ನು ಅಡ್ಕರು ಬಂದ ಹಾಗೆ ಸ್ವೀಕರಿಸಿದ್ದಾರೆ. ಕಷ್ಟಗಳ, ದುಃಖದ ಸರಮಾಲೆಯ ದೀಪ ಮೊದಮೊದಲು ಕ್ಷೀಣವಾಗಿ ಉರಿಯುತ್ತಿತ್ತು. ಸ್ವ-ದುಡಿಮೆ, ನಿರ್ದಿಷ್ಟ ಗುರಿ ಮತ್ತು ಸ್ವಾವಲಂಬಿ ಬದುಕಿನ ದೂರನಿರೀಕ್ಷೆಗಳು ಮಂದಹಾಸ ಮೂಡಿಸಿದುವು. ಸದೃಢವಾಗಿ ಹೆಜ್ಜೆಯೂರಿ ಸಾಗಿ ಬಂದ ಪಥವನ್ನು ನೋಡಿದಾಗ ವೃತ್ತಿಯ ನಿವೃತ್ತಿಯಂಚಲ್ಲಿ ನಿಂತಿದ್ದರು. ಆಗಲೇ ಯಕ್ಷಯಾನವು ಯಶಸ್ಸಿನ ಮುದ್ರೆಯೊತ್ತಿತ್ತು. ನಾಲ್ದೆಸೆಯಲ್ಲೂ ಮಾತಿನ ಸಂಮಾನಗಳ ಬಾಗಿನ.               
              ಪ್ರಾಮಾಣಿಕವಾಗಿ ತೊಡಗಿಸಿಕೊಂಡಾಗ ಕಲೆಯು ಬದುಕಿಗೆ ಪೂರಕವಾಗುತ್ತದೆ. ಸಂಸ್ಕಾರದ ಹಾದಿ ತೋರಿಸುತ್ತದೆ. ಹೇಗಿರಬೇಕು, ಹೇಗಿರಬಾರದು ಎನ್ನುವುದರ ಮಧ್ಯದ ಸರಳರೇಖೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಬದುಕಿಗೆ ಬೇಕಾಗಿರುವುದು ಇದೇ ಅಲ್ವಾ, ಎಂದಾಗ ಅಡ್ಕರಲ್ಲಿ ಆನಂದಭಾಷ್ಪ.
                 ಕಾಸರಗೋಡು ಜಿಲ್ಲೆಯ ಮುಳಿಯಾರು-ಕೋಟೂರಿನ ಅಡ್ಕ ಗೋಪಾಲಕೃಷ್ಣ ಭಟ್ಟರಿಗೆ ಈಗ ಸಹಸ್ರಚಂದ್ರ ದರ್ಶನದ ಖುಷಿ. ಈ ಸಂದರ್ಭದಲ್ಲಿ 'ಅಡ್ಕ ವಚೋಹಾಸ' ಎನ್ನುವ ಗೌರವ ಗ್ರಂಥದ ಅರ್ಪಣೆ. ಮೇ 13ರಂದು ಶುಕ್ರವಾರ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದಿನವಿಡೀ ಕಲಾಪ. ಅಡ್ಕರ ಯಕ್ಷಯಾನದ ಮೆಲುಕು, ತಾಳಮದ್ದಳೆ, ಕೃತಿ ಬಿಡುಗಡೆ, ಯಕ್ಷಗಾನದ ಪ್ರದರ್ಶನಗಳ ಸಂಪನ್ನತೆ. ಯಕ್ಷತೂಣೀರ ಸಂಪ್ರತಿಷ್ಠಾನದ ಆಯೋಜನೆ.


No comments:

Post a Comment