Friday, September 2, 2016

ಸಾಂಸ್ಕೃತಿಕ ಬಾಗಿಲನ್ನು ತೆರೆದ ಸಿರಿಬಾಗಿಲು


               ಕಾರಣಿಕ ಪುರುಷ 'ಜಗಜಟ್ಟಿ ಬಾಚ'ನ ಬದುಕಿನ ಸುತ್ತ ದಂತಕಥೆಗಳಿದ್ದುವು. ಐತಿಹ್ಯಗಳಿರಲಿಲ್ಲ. ಸಿರಿಬಾಗಿಲು ವೆಂಕಪ್ಪಯ್ಯನವರು ಐತಿಹಾಸಿಕ ದಾಖಲೆಯ ಹಿಂದೆ ಬಿದ್ದರು. ನಿರಂತರ ಓಡಾಟ, ಸಂಪರ್ಕ. ಕೊನೆಗೆ ಮಾಯಿಪ್ಪಾಡಿ ಅರಮನೆಯಲ್ಲಿನ ಒಂದು ದಾಖಲೆಯಲ್ಲಿ ಬಾಚ ಪತ್ತೆಯಾದ. ಅದನ್ನು ದಾಖಲಿಸಿದರು. ಜನರ ಮುಂದೆ ಪ್ರಸ್ತುತಪಡಿಸಿದರು. ಅಜ್ಞಾತವಾಗಿದ್ದ ಬಾಚ ಜನರ ಮನದಲ್ಲಿ ನೆಲೆಯಾದ.
             1960-70ರ ಆಜೂಬಾಜು.  ವೆಂಕಪ್ಪಯ್ಯನವರ ದಾಖಲಾತಿಯ ಪರಿಣಾಮವಾಗಿ ಕೇರಳ ಸರಕಾರವು ಬಾಚನ ಕತೆಯನ್ನು ಶಾಲಾ ಪಠ್ಯದಲ್ಲಿ ಸೇರಿಸಿತು. ವಿದ್ಯಾರ್ಥಿಗಳಿಗೂ ಬಾಚ ಪರಿಚಿತನಾದ. ಆತನ ಸಾಹಸಗಾಥೆಯ ರೋಚಕತೆಯು ಬದುಕಿಗೆ ಒಂದು ಮಾದರಿಯಾಯಿತು. ಒಂದು ಪ್ರದೇಶಕ್ಕೆ ಸೀಮಿತವಾದ ಬಾಚನ ಶಕ್ತಿ, ಸಾಹಸಗಳ ಗಾಥೆ ವಿಸ್ತೃತವಾಯಿತು.
              ವೆಂಕಪ್ಪಯ್ಯನವರ ಚಿರಂಜೀವಿ, ಸಿರಿಬಾಗಿಲು ರಾಮಕೃಷ್ಣ ಮಯ್ಯ. ಶ್ರೀ ಧರ್ಮಸ್ಥಳ ಮೇಳದ ಭಾಗವತ. ತನ್ನ ತಂದೆಯವರು ಸಂಗ್ರಹಿಸಿದ ಕಥೆಯನ್ನು ಆಧರಿಸಿದ ಯಕ್ಷಗಾನ ಪ್ರದರ್ಶನಕ್ಕೆ ಮನಮಾಡಿದರು. ಕವಿ ಮಧೂರು ವೆಂಕಟಕೃಷ್ಣರು ಹಾಡು ರಚಿಸಿದರು. ಕಾಸರಗೋಡು ಜಿಲ್ಲೆಯ ಪುಳ್ಕೂರು ಮಹಾದೇವ ದೇವರ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ 'ಜಗಜಟ್ಟಿ ಬಾಚ' ಯಕ್ಷಗಾನ ರಂಗವೇರಿದುದು ಇತಿಹಾಸ.
                ಸಿರಿಬಾಗಿಲು ವೆಂಕಪ್ಪಯ್ಯ ಓರ್ವ ಸಾಹಿತ್ಯಗಾರ, ಚರಿತ್ರಾಕಾರ. ಸದಾ ಅಧ್ಯಯನಶೀಲತೆ ಅವರಿಗೆ ಪ್ರೀತಿ. 'ಮಹಾಭಾರತ ನೀತಿ ಕಥೆಗಳು, ತುಳುನಾಡ ಕೇಸರಿ, ಮಹಾಯೋಗಿ ನಿತ್ಯಾನಂದ, ಬಾಲಕಥಾಮೃತ' ಮೊದಲಾದ ಕೃತಿಗಳ ರಚಯಿತರು. ಕಾಸರಗೋಡು ನೆಲದಲ್ಲಿ ಕನ್ನಡಪರವಾದ ದನಿಯನ್ನು ಎಬ್ಬಿಸಿದವರಲ್ಲಿ ಪ್ರಮುಖರು.
                ವೆಂಕಪ್ಪಯ್ಯನವರ ಕುರಿತು ಮುಳಿಯಾರು ಸುಬ್ರಹ್ಮಣ್ಯ ಹೊಳ್ಳರು ಒಂದೆಡೆ ದಾಖಲಿಸುತ್ತಾರೆ, ಕಾಸರಗೋಡು ಜಿಲ್ಲೆ ಕಂಡ ಓರ್ವ ಐತಿಹ್ಯಕಾರರಾಗಿಯೂ ಗುರುತಿಸಲ್ಪಟ್ಟವರು. ಆರರ ದಶಕದದಲ್ಲಿ ಪ್ರಾದೇಶಿಕ ಜಾನಪದ ಆಧ್ಯಯನ ನಡೆಸುವ ಕಾಲಘಟ್ಟದಲ್ಲಿ ಬೇಕಲ ರಾಮ ನಾಯಕರಂತೆ ಇವರು ಓರ್ವ ಐತಿಹ್ಯ ಸಂಗ್ರಹಕಾರರಾಗಿ, ಚರಿತ್ರಾಕಾರರಾಗಿ, ಸಾಹಿತಿಯಾಗಿ ತಮ್ಮ ಪ್ರವೃತ್ತಿಯನ್ನು ಬೆಳೆಸಿಕೊಂಡು ಕಾಸರಗೋಡಿನ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕಾಸರಗೋಡು ಕರ್ನಾಟಕ ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು.
                ವೆಂಕಪ್ಪಯ್ಯನವರು ಅಂಚೆ ಮಾಸ್ತರರಾಗಿದ್ದರು. ಪ್ರಾಮಾಣಿಕತೆ, ಶಿಸ್ತಿಗೆ ಅಂಚೆ ಇಲಾಖೆಯು ಹೇಗೆ ಮಾದರಿಯೋ, ಅದೇ ವಾತಾವರಣದಲ್ಲಿ ಬೆಳೆದರು. ಊರಿನ ಜನರ ಮೆಚ್ಚಿನ ಅಂಚೆ ಮಾಸ್ತರರಾದರು. ತಮ್ಮ ಚೀಲದಲ್ಲಿ ಖಾಯಂ ಆಗಿ ಅಂಚೆ ಕಾರ್ಡು, ಸ್ಟಾಂಪುಗಳು, ರೆವಿನ್ಯೂ ಸ್ಟಾಂಪ್ಗಳ ಸಂಗ್ರಹ ಇರುತ್ತಿತ್ತು. ಯಾರಾದರೂ ಕೇಳಿದರೆ ತಕ್ಷಣ ಒದಗಿಸುವ ಉದ್ದೇಶ. ಊರಿನ ಮೇಲಿನ ಪ್ರೀತಿ.
                  ವೆಂಕಪ್ಪಯ್ಯನವರು ಗತಿಸಿ (ಜನನ 11-9-1930. ಮರಣ 25-1-1978) ಸುಮಾರು ನಾಲ್ಕು ದಶಕದ ಹತ್ತಿರವಾಯಿತು. ಅವರ ನೆನಪಿಗಾಗಿ ಕಾಸರಗೋಡಿನಲ್ಲಿ 'ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರತಿಷ್ಠಾನ (ರಿ)' ರೂಪುಗೊಂಡಿದೆ. ಕಳೆದ ಮೂರು ವರುಷಗಳಿಂದ ಸಕ್ರಿಯ. ರಂಗದಿಂದ ಮರೆಯಾದ 'ಪೂರ್ವರಂಗ'ದ ಪುನಶ್ಚೇತನ, ತಾಳಮದ್ದಳೆ ಕೂಟಗಳು, ಪ್ರದರ್ಶನಗಳು, ಪ್ರಾತ್ಯಕ್ಷಿಕೆಗಳು, ಗಾನವೈಭವ, ವಿದ್ಯಾಥರ್ಿಗಳಿಗೆ ತರಬೇತಿ..ಹೀಗೆ ವಿವಿಧ ಕಾರ್ಯಹೂರಣವನ್ನು ಹೊಂದಿದೆ.
                 ಕಳೆದ ವರುಷ 'ದೇಶಮಂಗಲ ಕೃಷ್ಣ ಕಾರಂತ ಜನ್ಮಶತಮಾನೋತ್ಸವ'ವನ್ನು ಅದ್ದೂರಿಯಿಂದ ಪ್ರತಿಷ್ಠಾನವು ಆಚರಿಸಿತು. 'ಯಕ್ಷಪೂರ್ಣಿಮಾ' ಎನ್ನವ ಹೆಸರಿನಲ್ಲಿ ತಾಳಮದ್ದಳೆಯ ಸರಣಿಯನ್ನು ಆಯೋಜಿಸಿತ್ತು. ಸಾಧಕರನ್ನು ಗೌರವಿಸಿತ್ತು. ಪ್ರತಿಷ್ಠಾನವು ಪ್ರತೀ ವರುಷ ಯಕ್ಷಗಾನ ಕ್ಷೇತ್ರದ ಹಿರಿಯರಿಗೆ ಪ್ರಶಸ್ತಿಯನ್ನು, ಗೌರವವನ್ನು ಸಲ್ಲಿಸುವ ಪರಿಪಾಠ ಹಾಕಿಕೊಂಡಿದೆ.  'ಯಕ್ಷಶ್ರೀಕರ' - ವೆಂಕಪ್ಪಯ್ಯನರ ನೆನಪಿನ ಸರಣಿ ತಾಳಮದ್ದಳೆ. ಅದೀಗ ಸಮಾರೋಪದ ಹಂತದಲ್ಲಿದೆ.
                  ಓರ್ವ ಕಲಾವಿದರಾಗಿದ್ದುಕೊಂಡು ರಾಮಕೃಷ್ಣ ಮಯ್ಯರು ತನ್ನ ತೀರ್ಥರೂಪದ ನೆನಪಿನಲ್ಲಿ ಪ್ರತಿಷ್ಠಾನವನ್ನು ಹುಟ್ಟುಹಾಕಿ, ಚಿಕ್ಕಚಿಕ್ಕ ಹೆಜ್ಜೆಯೂರುತ್ತಾ ತಮ್ಮ ಮಿತಿಯಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ. ತಮ್ಮ ಗಳಿಕೆಯ ಬಹು ಪಾಲನ್ನು ಇದಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಇವರ ಆಶಯವನ್ನು ಅರ್ಥಮಾಡಿಕೊಂಡ ಸ್ನೇಹಿತರು, ದಾನಿಗಳು ಸ್ಪಂದಿಸುತ್ತಿದ್ದಾರೆ. ಪತ್ರಕರ್ತ ವೀಜಿ ಕಾಸರಗೋಡು, ಕೃಷ್ಣಪ್ರಸಾದ್ ಅಡಿಗ.. ಹೀಗೆ ಆಪ್ತ ಸ್ನೇಹಿತರ ಬೆಂಬಲವಿದೆ.
                'ಯಕ್ಷಶ್ರೀಕರ' ಸರಣಿ ತಾಳಮದ್ದಳೆಯ ಸಮಾರೋಪ ಸಮಾರಂಭವು ಮೇ 21ರಂದು ಕಾಸರಗೋಡಿನ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಜರುಗಲಿದೆ. ಪೂವಾಹ್ನ ಒಂಭತ್ತೂವರೆಯಿಂದ ಕಾರ್ಯಕ್ರಮ ಸಂಪನ್ನ. ಈ ಬಾರಿಯ 'ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿ'ಯು ಹಿರಿಯ ಕಲಾವಿದ, ವೇಷಧಾರಿ ಅಡ್ಕ ಗೋಪಾಲಕೃಷ್ಣ ಭಟ್ಟರಿಗೆ ಪ್ರದಾನವಾಗಲಿದೆ. ಅಡ್ಕರು ಕಳೆದ ವಾರವಷ್ಟೇ ಸಹಸ್ರಚಂದ್ರ ದರ್ಶನದ ಸಂಭ್ರಮವನ್ನು ಹಂಚಿಕೊಂಡಿದ್ದರು. 'ಅಡ್ಕ ವಚೋಹಾಸ' ಎನ್ನುವ ಗೌರವ ಗ್ರಂಥವನ್ನು ಕುಟುಂಬಿಕರು, ಅಭಿಮಾನಿಗಳು ಸಮರ್ಪಿಸಿದ್ದಾರೆ. ಈಗ ಪ್ರತಿಷ್ಠಾನದ ಗೌರವದ ಬಾಗಿನ.
                ಕಳೆದ ವರುಷಗಳಲ್ಲಿ - ವೆಂಕಟರಾಜ ಪುಣಿಂಚಿತ್ತಾಯ, ಎಂ.ವಿ.ಭಟ್ ಮಧುರಕಾನನ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಡಾ.ಸತೀಶ ರೈ ಬೆಳ್ಳಿಪ್ಪಾಡಿ, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ಎ.ವಿ.ಶ್ಯಾನುಭಾಗ್, ಪುತ್ತಿಗೆ ರಘುರಾಮ ಹೊಳ್ಳ, ಕುರಿಯ ಗಣಪತಿ ಶಾಸ್ತ್ರಿ - ಇವರಿಗೆ ಪ್ರತಿಷ್ಠಾನವು ಪ್ರಶಸ್ತಿಯನ್ನು ಪ್ರದಾನಿಸಿತ್ತು. ಅಲ್ಲದೆ ಕಾಸರಗೋಡು ವೆಂಕಟಕೃಷ್ಣಯ್ಯ ಇವರಿಗೆ ಮರಣೋತ್ತರ ಪ್ರಶಸ್ತಿಯನ್ನೂ ನೀಡಿತ್ತು.
                 ಹಿರಿಯರನ್ನು ನೆನಪಿಸುವ, ಕಲಾವಿದರನ್ನು ಗೌರವಿಸುವ, ಕಲೆಯನ್ನು ಆದರಿಸುವ ಪ್ರತಿಷ್ಠಾನದ ಕಾರ್ಯಹೂರಣವು ಸದುದ್ದೇಶದಿಂದ ಕೂಡಿದೆ. ಹಾಗಾಗಿಯೇ ಜನಸ್ವೀಕೃತಿ ಪಡೆದಿದೆ. ಜನಾದರಣೆ ಹೊಂದಿದೆ.


No comments:

Post a Comment