ಪುತ್ತೂರಿನ 'ಆಶಾ ಟೈಲರ್' ಮಳಿಗೆಯ ನಾರಾಯಣ ರಾಯರಿಗೆ ಟೈಲರಿಂಗ್ ಹೊಟ್ಟೆಪಾಡು. ಕಲಾವಿದರಿಗೆ ಇವರ ಅಂಗಡಿಯು ಸಂವಾದ ಕೇಂದ್ರ. ಮೇಳದ ಯಜಮಾನರುಗಳಿಗೆ ಕಚೇರಿ. ಯಕ್ಷಾಸಕ್ತರಿಗೆ ಮಾತಿನ ವೇದಿಕೆ. ಯಕ್ಷಗಾನದ ಹಲವು ಸಂಗತಿಗಳ ಮೂಲಸ್ಥಾನ. ಏನಿದ್ದರೂ ನಾರಾಯಣ ರಾಯರದು ಕೊನೆಯ ಮಾತು. ಕೆಲವೊಮ್ಮೆ ಮೊದಲ ಮಾತು.
ಇವರು ವೇಷ ತೊಟ್ಟು ಕುಣಿವ ಕಲಾವಿದನಲ್ಲ. ಆದರೆ ಕಲಾವಿದನಿಗೆ ಪಾತ್ರ, ಪ್ರಸಂಗಗಳ ಮಾಹಿತಿ ಕೊಡುವ ಜ್ಞಾನಸಂಪನ್ನ. ಪಡಿಮಂಚವೇರಿ ಅರ್ಥ ಹೇಳುವವರಲ್ಲ. ಆದರೆ ಅರ್ಥಧಾರಿಗಿರಬೇಕಾದ ಬೌದ್ಧಿಕ ಪಕ್ವತೆಯಿದೆ. ಸಹಾಯಾರ್ಥ(!) ಆಟ ಆಡಿಸುವವರಲ್ಲ. ಆಟ ಆಡಿಸುವವರಿಗೆ ನಿರ್ದೇಶನವನ್ನು ಕೊಡಬಲ್ಲ ಅನುಭವಿ. ಯಕ್ಷಗಾನದ ಪ್ರದರ್ಶನದ ಫಲಿತಾಂಶವನ್ನು ಇವರು ಪ್ರಶಂಸಿಸಿದರೆ ಅದು ಆಗ ದೊಡ್ಡ ವಿಚಾರ.
ಒಂದು ಕಾಲಘಟ್ಟದಲ್ಲಿ ಐ.ವಿ.ಕೃಷ್ಣ ರಾಯರ ಜವುಳಿ ಮಳಿಗೆಯು ಪುತ್ತೂರಿನಲ್ಲಿ ಪ್ರಸಿದ್ಧ. ಯಕ್ಷಗಾನ ಕಲಾವಿದರ ಸಂಪರ್ಕವುಳ್ಳವರು. ಸ್ವತಃ ಕಲಾವಿದ ಕೂಡಾ. ಅವರೊಂದಿಗೆ ಬೆಳೆದ ನಾರಾಯಣ ರಾಯರಿಗೆ ಸಹಜವಾಗಿ ಯಕ್ಷಗಾನ ಅಂಟಿತು. ಮುಂದೆ ಸ್ವಂತವಾಗಿ ಮಳಿಗೆ ತೆರೆದ ಬಳಿಕ ಕಲಾವಿದರೆಲ್ಲರ ನೆಚ್ಚಿನ ಅಣ್ಣನಾದರು. ಅವರ ಮಳಿಗೆಯು ಯಕ್ಷಗಾನದ ಸಂಪರ್ಕ ಕೇಂದ್ರವಾಗಿ ರೂಪುಗೊಂಡಿತು.
ಯಕ್ಷಗಾನ ವೇಷಭೂಷಣ (ಮಣಿಸಮಾನು ರಹಿತ) ತಯಾರಿಯಲ್ಲಿ ನಾರಾಯಣ ರಾಯರದು ಸುಭಗತೆಯ ಕೈಂಕರ್ಯ. ತೆಂಕುತಿಟ್ಟಿನ ಬಹುತೇಕ ಮೇಳಗಳ ವೇಷಭೂಷಣಗಳು ಇವರಲ್ಲೇ ಸಿದ್ಧವಾದವುಗಳು. 1965ನೇ ಇಸವಿ ಇರಬೇಕು, ಶ್ರೀಧರ್ಮಸ್ಥಳ ಮೇಳಕ್ಕೆ ನಾರಾಯಣ ರಾಯರೇ ಜೌಳಿಯನ್ನು ಹೊಲಿದಿದ್ದರು. ಇವರ ಕೈಚಳಕವನ್ನು ಕಂಡು ಖಾವಂದರು ಶ್ಲಾಘಿಸಿದ್ದರಂತೆ.
ಮೂರ್ನಾಲ್ಕು ದಶಕಗಳ ಹಿಂದೆ ಒಂದು ಮೇಳಕ್ಕೆ ಬೇಕಾಗುವಷ್ಟು ವೇಷಭೂಷಣ ತಯಾರಿ ಅಂದರೆ ಸುಲಭದ ಮಾತಾಗಿರಲಿಲ್ಲ. ಹೆಚ್ಚು ಆರ್ಥಿಕ ಬಂಡವಾಳ ಬೇಡುವ ಕಾಯಕ. ಕಾಯಕಷ್ಟವನ್ನು ಲೆಕ್ಕಿಸದೆ ವೇಷಭೂಷಣ ಸಿದ್ಧಪಡಿಸಿ ನೀಡುತ್ತಿದ್ದರು. ಹೆಚ್ಚಿನ ಸಂದರ್ಭದಲ್ಲಿ 'ಪ್ರತಿಫಲ' ಶೂನ್ಯ! 'ನಾಳೆ ಕೊಡುವೆ, ನಾಡಿದ್ದು ಕೊಡುವೆ' ಎನ್ನುವ ಚಾಳಿ. 'ಇದು ಬರುವ ಹಣ ಅಲ್ಲ' ಎನ್ನುವುದು ಅವರಿಗೂ ಗೊತ್ತು. ಹಾಗೆಂತ ಎಂದೂ ಯಾರಲ್ಲೂ ನಿಷ್ಠುರ ಮಾಡಿಕೊಂಡವರಲ್ಲ.
ಕೆಲವೊಮ್ಮೆ ಗ್ರಾಹಕರಿಗೆ ಅನುಕೂಲವಾಗಲಿ ಎಂದು ಪ್ಯಾಂಟ್, ಶರ್ಟ್ ಪೀಸ್ಗಳನ್ನು ಖರೀದಿಸಿಡುತ್ತಿದ್ದರು. ಈ ವ್ಯವಸ್ಥೆಯು ಕಲಾವಿದರಿಗೆ ಬಟ್ಟೆ ಖರೀದಿಗೆ ಜವುಳಿ ಅಂಗಡಿ ಅಲೆಯುವುದನ್ನು ತಪ್ಪಿಸಿತ್ತು. ತಮ್ಮ ಅಳತೆಗೆ ಅಂಗಿಯೋ, ಪ್ಯಾಂಟು ಹೊಲಿಸಿ, ಕೊನೆಗೆ 'ಲೆಕ್ಕಕ್ಕೆ ಬರೆಯಿರಿ' ಎಂದು ಒಯ್ದವರು ಎಷ್ಟೋ ಮಂದಿ! ಹೀಗೆ 'ಲೆಕ್ಕಕ್ಕೆ ಬರೆದ' ಪುಸ್ತಕದಲ್ಲಿ ಬರೆಯಲು ಜಾಗವೇ ಇಲ! ವಿಧವಿಧದ ತೊಂದರೆಯನ್ನು ಅನುಭವಿಸಿದ ಸ್ಥಿತಪ್ರಜ್ಞ.
ಪುತ್ತೂರಿಗೆ ಯಾರೇ ಕಲಾವಿದರು ಬರಲಿ, ನಾರಾಯಣ ರಾಯರನ್ನು ಭೇಟಿ ಮಾಡದೆ ಪ್ರಯಾಣ ಮುಗಿಯುತ್ತಿರಲಿಲ್ಲ. ದಿನವಿಡೀ ಅವರ ಸಮಯ, ತಲೆಯನ್ನು ತಿನ್ನದೆ (!) ಸಮಾಧಾನವಿಲ್ಲ. ಇಂತಹವರಿಗೆ ಉಪಾಹಾರ, ಭೋಜನದ ಗೊಣಗಾಟವಿಲ್ಲದ ಆತಿಥ್ಯ. ಯಕ್ಷಗಾನ ಸುದ್ದಿಗೆ ಕಿವಿಯಾಗುತ್ತಾ, ದನಿಯಾಗುತ್ತಾ ಅಪ್ಡೇಟ್ ಆಗುತ್ತಿದ್ದರು. ಬಾಕಿಯುಳಿದ ಟೈಲರಿಂಗ್ ಕೆಲಸವನ್ನು ರಾತ್ರಿ ಪೂರೈಸಿ ಗ್ರಾಹಕರ ಒಲವು ಗಳಿಸಿದ್ದರು. ಇಷ್ಟೆಲ್ಲ ಯಕ್ಷಗಾನದ ಗುಂಗು ಅಂಟಿಸಿಕೊಂಡರೂ ಬದುಕಿನಲ್ಲಿ ಬದ್ಧತೆಯಿತ್ತು. ಹೊಲಿಗೆ ಯಂತ್ರದ ಗಾಲಿಯು ತಿರುಗಿದಾಗ ಮಾತ್ರ ಹೊಟ್ಟೆ ತಂಪಾಗುತ್ತದೆ ಎನ್ನುವ ಸ್ಪಷ್ಟ ಅರಿವಿತ್ತು.
ನಾರಾಯಣ ರಾಯರು ಉದಾರಿ, ನಿಗರ್ವಿ. ಬಡತನವನ್ನು ಅನುಭವಿಸಿದ ಅನುಭವ. ಶ್ರೀಧರ ಭಂಡಾರಿಯವರು ಒಂದು ಘಟನೆಯನ್ನು ಜ್ಞಾಪಿಸಿಕೊಂಡರು - ನನಗೆ 1965ನೇ ಇಸವಿಯಲ್ಲೊಮ್ಮೆ ಮುಂಬಯಿಗೆ ಹೋಗುವ ಸಂದರ್ಭ ಬಂದಿತ್ತು. ಆಧುನಿಕ ಪ್ಯಾಂಟ್, ಷರ್ಟ್ ಹೊಲಿಸಲು ಆರ್ಥಿಕ ಅಡಚಣೆ. ಹಾಗೆಂತೆ ಹೋಗದಿರಲೂ ಸಾಧ್ಯವಿಲ್ಲ. ನಾರಾಯಣ ರಾಯರಿಗೆ ವಿಚಾರ ಗೊತ್ತಾಗಿ ಎರಡು ಜತೆ ಪೈಜಾಮ್ ಹೊಲಿದು ನನ್ನ ಮುಂಬಯಿ ಪ್ರವಾಸಕ್ಕೆ ಅನುವು ಮಾಡಿಕೊಟ್ಟ ಉದಾರಿ.
ಕಲಾವಿದ ದಾಸಪ್ಪ ರೈ ಅವರೊಂದಿಗೆ ನಿಕಟ ಸಂಪರ್ಕ, ಸಂಬಂಧ ಹೊಂದಿದ್ದರು. ಒಂದು ಜೋಡಾಟದ ಘಟನೆ. ದಾಸಪ್ಪ ರೈಗಳ ಕುಂಬಳೆ ಮೇಳಕ್ಕೂ, ಶ್ರೀಧರ ಭಂಡಾರಿಗಳ ಪುತ್ತೂರು ಮೇಳಕ್ಕೂ ಮಂಗಳೂರಿನಲ್ಲಿ ಜೋಡಾಟ. ನಾಗೇಶ್ ರಾಯರ ಆಯೋಜನೆ. ನಾರಾಯಣ ರಾಯರು ಉಸ್ತುವಾರಿ ಜವಾಬ್ದಾರಿಯೊಂದಿಗೆ ಮುಖ್ಯಸ್ಥನ ಜಾಗವನ್ನೂ ತುಂಬಿದ್ದರು. ಒಂದು ಹಂತದಲ್ಲಿ ಚೆಂಡೆವಾದಕರೊಂದಿಗೆ ಜುಗಲ್ಬಂಧಿ ತಾರಕಕ್ಕೇರಿದಾಗ ನಾರಾಯಣ ರಾಯರು ಮಧ್ಯಪ್ರವೇಶಿಸಿ ಪ್ರಕಟರಣವನ್ನು ತಿಳಿಗಿಳಿಸಿದ ಘಟನೆಯು ಅವರ ವ್ಯಕ್ತಿತ್ವಕ್ಕೆ ಕನ್ನಡಿ.
ಎಲ್ಲಾ ಕಲಾವಿದರಿಗೂ ಒಂದೇ ರೀತಿಯ ಆತಿಥ್ಯ. ತೀರಾ ಹತ್ತಿರದವರನ್ನು ಹೊರತು ಪಡಿಸಿದರೆ ಮಿಕ್ಕವರಲ್ಲಿ ವ್ಯವಹಾರ ಅಷ್ಟಕ್ಕಷ್ಟೇ. ಕಲಾವಿದನ ವ್ಯಾವಹಾರಿಕ ದೌರ್ಬಲ್ಯಗಳ ಹತ್ತಿರದ ಪರಿಚಯವಿದ್ದುದರಿಂದ ಹೆಚ್ಚು ಈ ಅಂತರದ ವ್ಯಾಪ್ತಿ ಕಲಾವಿದನಿಗೆ ಅರಿಯದಂತೆ ಜಾಣ್ಮೆಯಿಂದ ವ್ಯವಹರಿಸುತ್ತಿದ್ದರು. ರಂಗ, ಕಲಾವಿದರೊಳಗಿನ ಅನೇಕ ಸಮಸ್ಯೆಗಳಿಗೆ ಪರಿಹಾರದ ಹಾದಿಯನ್ನು ತೋರಿದ್ದರು. ಬಹುತೇಕ ಮೇಳಗಳಿಗೆ ಕಲಾವಿದರನ್ನು ಗೊತ್ತು ಮಾಡುವ, ನಿರ್ಧಾರ ಮಾಡುವ ಅಜ್ಞಾತ ಕೆಲಸಗಳು ಆಶಾ ಟೈಲರ್ ಮಳಿಗೆಯಲ್ಲಿ ನಡೆಯುತ್ತಿದ್ದುವು!
ಭರತನಾಟ್ಯ, ಭೂತಾರಾಧನೆ ಮತ್ತು ದೇವಸ್ಥಾನಕ್ಕೆ ಸಂಬಂಧಪಟ್ಟ ಕಲಾತ್ಮಕ ಹೊಲಿಗೆಗಳಲ್ಲಿ ನಾರಾಯಣ ರಾಯರ ಅನುಭವ ಹಿರಿದು. ದೇವಳದ ಪಕ್ಕೆ ನಿಶಾನಿ, ಪುಷ್ಪಕನ್ನಡಿ, ದಂಡಮಾಲೆ, ಹಸ್ತ ಕೊಡೆ, ಮಕರ ತೋರಣಗಳ ತಯಾರಿಗೆ ರಾಯರಿಗೆ ರಾಯರೇ ಸಾಟಿ. ಪುತ್ತೂರು ಬ್ರಹ್ಮರಥದ ಧ್ವಜಗಳನ್ನು ಸ್ವತಃ ಹೊಲಿದಿದ್ದರು. ಒಂದರ್ಥದಲ್ಲಿ ಇವರು 'ದೇವದರ್ಜಿ’.
ನಾರಾಯಣ ರಾಯರಿಗೆ ಈಗ ಎಂಭತ್ತೊಂದರ ಹರೆಯ. ಮಹಾಲಿಂಗೇಶ್ವರ ದೇವಳದ ಸನಿಹ, ಮುಖ್ಯರಸ್ತೆಗೆ ತಾಗಿಕೊಂಡಿರುವ 'ಆಶಾ ಟೈಲರ್' ಅಂಗಡಿಗೆ ಈಗ ಕಲಾವಿದರು ಬರುತ್ತಿಲ್ಲ! ಕಾರಣ, ಅಲ್ಲಿ ನಾರಾಯಣ ರಾಯರಿಲ್ಲ. ದೇಹ ಮಾಗಿದೆ. ಮಕ್ಕಳಾದ ಕುಮಾರಸ್ವಾಮಿ, ಕಿಶೋರ್ ಕುಮಾರ್, ಪ್ರಶಾಂತ್ ಇವರೊಂದಿಗೆ ವಿಶ್ರಾಂತಿಯಲ್ಲಿದ್ದಾರೆ. ಒಂದೊಂದು ರೂಪಾಯಿಯನ್ನು ಉಳಿಸಿ, ಬೆಳೆಸಿ ರೂಪಿಸಿದ ಕುಟುಂಬದ ಏಳ್ಗೆಯನ್ನು ಕಣ್ತುಂಬ ನೋಡಿ ಅನುಭವಿಸಲು ಯಾಕೋ ನೆನಪು ಕೈಕೊಡುತ್ತಿದೆ. ಆಗೊಮ್ಮೆ ಈಗೊಮ್ಮೆ ಬರುವ ಆಪ್ತರು ಹೊರತುಪಡಿಸಿದರೆ ಮಿಕ್ಕೆಲ್ಲಾ ಸಂಪರ್ಕಗಳು ದೂರ, ಬಹುದೂರ. ತನ್ನ ಸಂಪರ್ಕದಲ್ಲಿದ್ದ, ಪ್ರಯೋಜನ ಪಡೆದವರನ್ನು ಅವರ ಕಣ್ಣುಗಳು ಅರಸುತ್ತಿವೆ.
ನಾರಾಯಣ ರಾಯರ ನಿಕಟ ಬಂಧು ಪುತ್ತೂರು ಗೋಪಾಲಕೃಷ್ಣಯ್ಯ (ಗೋಪಣ್ಣ). ಯಕ್ಷಗಾನದ ಚೆಂಡೆಗೆ ನಾದದ ಭಾಷೆಯ ಶ್ರೀಕಾರ ಬರೆದವರು. ಅವರ ಚಿರಂಜೀವಿ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ್ ರಾವ್. ಇವರು ೨೦೧೬ ಜುಲೈ 2ರಂದು ಬಪ್ಪಳಿಗೆಯ ತನ್ನ 'ಅಗ್ರಹಾರ'ದಲ್ಲಿ ತಂದೆಯವರ ನೆನಪಿನಲ್ಲಿ ನಾರಾಯಣ ರಾಯರನ್ನು ಗೌರವಿಸಲಿದ್ದಾರೆ.
(Prajavani/Dadhiginatho/1-7-2016)
No comments:
Post a Comment