ಮಿಜಾರು ಅಣ್ಣಪ್ಪರೊಂದಿಗೆ ಡಾ.ಕೋಳ್ಯೂರು ರಾಮಚಂದ್ರ ರಾವ್ (ಹಳೆ ಜೋಡಿ)
ಹಾಸ್ಯ ಎಂದರೆ ನಕ್ಕು-ನಗಿಸುವುದಲ್ಲ. ಒಂದೊಂದು ಪದದಲ್ಲೂ ಗ್ರಹಿಕೆಯ 'ನವುರು' ಸುಪ್ತವಾಗಿರುತ್ತದೆ. ಆ ಪದದೊಳಗಿನ ಆಂತರ್ಯಕ್ಕೆ ಹಾಸ್ಯಗಾರ ಭಾವದ ಸ್ಪರ್ಶ ನೀಡಿದಾಗ ಕೇಳುಗರೊಳಗೆ ಹಾಸ್ಯರಸ ಉತ್ಪನ್ನವಾಗುತ್ತದೆ. ಅಂತಹ ಪದಗಳನ್ನು ತನ್ನದಾಗಿಸಿಕೊಂಡಾಗಲೇ ಹಾಸ್ಯಗಾರ ರಂಗದಲ್ಲಿ ಯಶ ಕಾಣುತ್ತಾನೆ. ಅವುಗಳು ಮತ್ತೆ ಮತ್ತೆ ಉಚ್ಛರಿಸಲ್ಪಟ್ಟಾಗ ಸನ್ನಿವೇಶಕ್ಕೆ ತಕ್ಕಂತೆ ಭಾವಸ್ಫುರಣವಾಗುತ್ತದೆ.
ಉಡುಪಿಯ ಕಾರ್ಯಾಗಾರವೊಂದರಲ್ಲಿ ಹಾಸ್ಯಗಾರ್ ಮಿಜಾರು ಅಣ್ಣಪ್ಪರು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ಮಧ್ಯೆ ಹಾದು ಹೋದ ವಿಚಾರಗಳು. ಎರಡು ದಶಕವಾಗಿರಬಹುದು. ಅಣ್ಣಪ್ಪರ ಇಂತಹ ವಿಚಾರಗಳನ್ನು ಮುಂದಿಟ್ಟು ರಂಗಾಭಿವ್ಯಕ್ತಿಯನ್ನು ನೆನಪಿಸಿಕೊಂಡಾಗ ಬದ್ಧತೆಯ ವಿಚಾರದ ಅನುಷ್ಠಾನಕ್ಕೆ ಬದ್ಧರಾಗಿರುವುದು ಸ್ಪಷ್ಟವಾಗುತ್ತದೆ.
ಮಿಜಾರು ಅಣ್ಣಪ್ಪರು ರಂಗಕ್ಕೆ ಬಂದರೆ ಸಾಕು, ಮಾತಿಗೆ ಪ್ರೇಕ್ಷಕರು ಹತ್ತು ಕಿವಿಯಾಗುತ್ತಾರೆ! ರಂಗದ ಚೌಕಟ್ಟಿನಲ್ಲಿ ಪಾತ್ರಗಳಿಗೆ ಸಹಜ ನೈಜತೆ. ತಾನು ನಗದೆ ನಗಿಸುವ ತಾಕತ್ತು. ಪದಗಳನ್ನು ಒಡೆಯುವ ಜಾಣ್ಮೆ. ಸಂಭಾಷಣೆಯಲ್ಲಿ ಸುಭಗತೆ. ದೇಸಿ ಸೊಗಸಿನ ಗಾದೆಗಳು, ಬದುಕಿನೊಳಗೆ ಮಿಳಿತವಾದ ನಾಣ್ಣುಡಿಗಳು.. ಅಣ್ಣಪ್ಪ ಹಾಸ್ಯಗಾರರ ಹಾಸ್ಯಕ್ಕೆ ಮೆರುಗನ್ನು ತಂದಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಕುಟುಂಬ ಸಹಿತ ಹಾಸ್ಯವನ್ನು ಅನುಭವಿಸಲು ಸಾಧ್ಯವಾಗುವಂತಹ ಸರಕನ್ನು ರಂಗದಲ್ಲಿ ಮೊಗೆಮೊಗೆದು ನೀಡಿದ್ದಾರೆ.
ಅಣ್ಣಪ್ಪರದು ನೈಜ ಹಾಸ್ಯ. ಅಸಾಧಾರಣ ಪ್ರತಿಭೆ. ಮುಖವರ್ಣಿಕೆಯಲ್ಲಿ ಕ್ಷಿಪ್ರತೆ, ಬಣ್ಣಗಾರಿಕೆಯ ಸೊಗಸು. ಬಾಹುಕ ಪಾತ್ರವನ್ನು ಚೆನ್ನಾಗಿ ಮಾಡುತ್ತಿದ್ದರು. ಅಳಿಕೆ ರಾಮಯ್ಯ ರೈಯವರ ಋತುಪರ್ಣ, ಅಣ್ಣಪ್ಪರ ಬಾಹುಕ ಒಂದು ಸಮಯದ ರಂಗದ ಜತೆಗಾರಿಕೆ ಮನೆಮಾತಾಗಿತ್ತು, ನೆನಪಿಸಿಕೊಳ್ಳುತ್ತಾರೆ ಹಾಸ್ಯಗಾರ ಪೆರುವಡಿ ನಾರಾಯಣ ಭಟ್. ಬಾಹುಕ ಪಾತ್ರಕ್ಕೆ ಹೊಸ ಹಾದಿಯನ್ನು ತೋರಿದ ಪೆರುವಡಿಯವರ ಮನದ ಮಾತು.
1970-80ರ ಕಾಲಘಟ್ಟ. ಕರ್ನಾಟಕ ಮೇಳದ ಪ್ರದರ್ಶನಗಳೆಲ್ಲಾ ಚುಂಬಕ ಶಕ್ತಿಯನ್ನು ಹೊಂದಿದ ಸಮಯ. ದಿಗ್ಗಜ ಕಲಾವಿದರ ರಂಗಾಭಿವ್ಯಕ್ತಿಗಳು ಆ ಕಾಲದ ಸಾಂಸ್ಕೃತಿಕ ಹಿರಿಮೆ. ಸಾಮಾಜಿಕವಾದ ವಿಕಾರಗಳನ್ನು ಎತ್ತಿ ತೋರಿಸಿದಾಗ ತಿದ್ದಿಕೊಳ್ಳುವ ಮನಃಸ್ಥಿತಿಯ ಸಮಾಜ. ಜಾತಿ ವಿಚಾರಗಳು ಬಂದಾಗ ಅದನ್ನು ಕಲೆಯಾಗಿ ಸ್ವೀಕರಿಸುವ ಮನೋಭಾವಗಳಿದ್ದುವು. ನೈಜ ಹಾಸ್ಯದ ಮೂಲಕ ಬದುಕಿನ ಸಂದೇಶವನ್ನು ರಂಗದ ಮೂಲಕ ನೀಡಿದ ಮಿಜಾರು ಅಣ್ಣಪ್ಪರನ್ನು ಪ್ರೇಕ್ಷಕರು ಸ್ವೀಕರಿಸಿದ ಬಗೆ ಅನನ್ಯ.
ಹಿರಿಯರಾದ - ದಾಮೋಚರ ಮಂಡೆಚ್ಚ, ಮಲ್ಪೆ ರಾಮದಾಸ ಸಾಮಗ, ಬೋಳಾರ ನಾರಾಯಣ ಶೆಟ್ಟಿ, ಅಳಿಕೆ ರಾಮಯ್ಯ ರೈ, ಅಳಿಕೆ ಲಕ್ಷ್ಮಣ ಶೆಟ್ಟಿ, ಗುಂಪೆ ರಾಮಯ್ಯ ರೈ, ಪುಳಿಂಚ ರಾಮಯ್ಯ ಶೆಟ್ಟಿ (ಈಗ ಎಲ್ಲರೂ ದಿವಂಗತರು) - ಇವರ ಪಾತ್ರಗಳು ಕಥೆಯಲ್ಲಿ ಬರುವ ಪಾತ್ರಗಳಲ್ಲ! ಸಮಾಜದ ಮಧ್ಯೆ ಇರುವ ಒಬ್ಬೊಬ್ಬ ವ್ಯಕ್ತಿಯ ಚಿತ್ರಗಳು. ಪಾತ್ರಗಳ ಮೂಲಕ ಬದುಕಿನ ವಿಕಾರವನ್ನು ತೋರಿಸಿದಾಗ ಪ್ರಾಂಜಲವಾಗಿ ಸ್ವೀಕರಿಸುವ ಸೌಜನ್ಯ, ಬೌದ್ಧಿಕತೆ ಪ್ರೇಕ್ಷಕರಲ್ಲಿದ್ದುವು. ಕೋಳ್ಯೂರು ರಾಮಚಂದ್ರ ರಾವ್, ಪುಳಿಂಚರು, ಅಣ್ಣಪ್ಪರು ಮತ್ತು ಸಾಮಗರು - ನಾಲ್ವರ ಜತೆಗಾರಿಕೆಯ ಸಂಭಾಷಣೆಗಳು ತುಳು ಭಾಷೆಯ ವೈಭವದ ಕಾಲ. ಭಾಷೆಗೆ ಮಾನ ನೀಡಿದ ಮಹನೀಯರಿವರು.
'ಕಾಡಮಲ್ಲಿಗೆ' ಪ್ರಸಂಗದ 'ಚೋಂಕ್ರ'ನ ಪಾತ್ರವೇ ಅಣ್ಣಪ್ಪರಿಗೆ ಶರಣಾಗಿದೆ! ಈ ಪಾತ್ರಾಭಿವ್ಯಕ್ತಿಯು ಜನ ಮನವನ್ನು ಹೆಚ್ಚೆಬ್ಬಿಸಿತ್ತು. 'ಬೊಳ್ಳಿಗಿಂಡೆ' ಪ್ರಸಂಗದ 'ಕೇಚು', 'ದಳವಾಯಿ ದುಗ್ಗಣ್ಣ'ದಲ್ಲಿ 'ಕಂಪಣಮೂಲ್ಯ', 'ಕೋಟಿ ಚೆನ್ನಯ್ಯ'ದಲ್ಲಿ ಪಯ್ಯಬೈದ್ಯ ಮತ್ತು ಜೋಯಿಸರು.. ಎಲ್ಲಾ ತುಳು ಪ್ರಸಂಗಗಳಲ್ಲಿ 'ಮಿಜಾರುತನ'ವನ್ನು ಮೂಡಿಸಿದ್ದಾರೆ. ದಕ್ಷಾಧ್ವರ ಪ್ರಸಂಗದ 'ಬ್ರಾಹ್ಮಣ,' ಕೃಷ್ಣ ಲೀಲೆಯ 'ವಿಜಯ', ಭೀಷ್ಮ ವಿಜಯದ 'ವೃದ್ಧ ಬ್ರಾಹ್ಮಣ'.. ಪಾತ್ರಗಳು ಅಣ್ಣಪ್ಪರಲ್ಲಿ ಗೌರವ ಪಡೆದಿವೆ.
ಮೇಳದಲ್ಲಿ ಹಾಸ್ಯಗಾರನ ಸ್ಥಾನವು ತುಂಬಾ ಜವಾಬ್ದಾರಿಯುತವಾದುದು. ಚೌಕಿಯಲ್ಲಿ ಮಾತ್ರವಲ್ಲದೆ, ರಂಗದಲ್ಲಿ ಕೂಡಾ ಆತನ ಒಂದೊಂದು ಮಾತುಗಳನ್ನು ಜನ ತೂಗಿ ನೋಡುತ್ತಾರೆ. ಪಾತ್ರಗಳು ಹಗುರ ಮಾತನಾಡಕೂಡದು. ತಿಳಿದಷ್ಟು ಶುದ್ಧಭಾಷೆಯನ್ನು ಪ್ರಯೋಗಿಸಬೇಕು. ಅಶ್ಲೀಲ ಭಾಷೆಗೆ ಆ ಕ್ಷಣಕ್ಕೆ ಜನ ನಗುತ್ತಾರೆ. ಜತೆಯಲ್ಲಿ ಯಾರು ಅಶ್ಲೀಲಕ್ಕೆ ವಾಲಿರುತ್ತಾರೋ ಅವರನ್ನು ಪ್ರತ್ಯೇಕವಾಗಿ ಪ್ರೇಕ್ಷಕರೇ ನೋಟ್ ಮಾಡುತ್ತಾರೆ, ಮಾತಿನ ಮಧ್ಯೆ ಅಣ್ಣಪ್ಪರೊಮ್ಮೆ ಹೇಳಿದ್ದರು. ಈಗಿನ ರಂಗದ ಹಾಸ್ಯಾಭಿವ್ಯಕ್ತಿಯು ಅಣ್ಣಪ್ಪರ ಈ ಮಾತನ್ನು ಅಣಕಿಸುತ್ತದೆ!
ಹಾಸ್ಯವೆಂದರೆ ಸರ್ಕಸ್ ಅಲ್ಲ. ದ್ವಂದ್ವಾರ್ಥದ ಪ್ರತಿಪಾದನೆಯಲ್ಲ. ತಾನು ನಕ್ಕು, ತಾನು ನಕ್ಕಿದ್ದನ್ನು ನೋಡಿ ಇತರರು ನಗುವುದಲ್ಲ. ಹಾಸ್ಯಕ್ಕೂ ಮಾನವಿದೆ. ಜೀವವಿದೆ. ಮನಸ್ಸನ್ನು ಓದುವ ಗುಣವಿದೆ. ಒತ್ತಡವನ್ನು ಹಗುರಗೊಳಿಸುವ ತ್ರಾಣವಿದೆ. ಅಣ್ಣಪ್ಪರು ಹಾಸ್ಯಕ್ಕೆ ಪ್ರಾಣ ಕೊಟ್ಟವರು. ಮಾನ ನೀಡಿದವರು. ಪರಿಣಾಮ, ಹಾಸ್ಯವೇ ಅಣ್ಣಪ್ಪರನ್ನು ರಂಗದಲ್ಲಿ ಮೆರೆಸಿದೆ. ಗೌರವವನ್ನು ತಂದುಕೊಟ್ಟಿದೆ.
ಮಿಜಾರು ಅಣ್ಣಪ್ಪರದು ತೊಂಭತ್ತಮೂರು ವರುಷದ ತುಂಬು ಬದುಕು. ಎಪ್ಪತ್ತು ದಶಕದ ಹತ್ತಿರ ಹತ್ತಿರ ರಂಗದ ನಂಟು. ಓದಿದ್ದು ಆರನೇ ತರಗತಿ. 1940ರಲ್ಲಿ ಕೂಡ್ಲು ಮೇಳದಿಂದ ಬಣ್ಣದ ಬದುಕು ಆರಂಭ. ಕಟೀಲು ಮೇಳದಲ್ಲಿ ಎರಡು ವರುಷ. ಮುಂದೆ ಹತ್ತು ವರುಷ ಇರಾ ಸೋಮನಾಥೇಶ್ವರ ಮೇಳದ ತಿರುಗಾಟ. ನಂತರ ಮೂವತ್ತೆಂಟು ವರುಷ ಕನರ್ಾಟಕ ಮೇಳವೊಂದರಲ್ಲೇ ಬಣ್ಣದ ಸಹವಾಸ. ಕನರ್ಾಟಕ ಮೇಳದ ನಿಲುಗಡೆಯ ನಂತರ ಪುನಃ ಕಟೀಲು ಮೇಳ.
2016, ಎಪ್ರಿಲ್ 3ರಂದು ಹಾಸ್ಯ ಚಕ್ರವತರ್ಿ ಮಿಜಾರು ಅಣ್ಣಪ್ಪರು ದೈವಾಧೀನರಾದರು. ಹೊಸ ತಲೆಮಾರಿನ ಕಲಾವಿದರು, ಅಭಿಮಾನಿಗಳು ಅಣ್ಣಪ್ಪರ ನೈಜಹಾಸ್ಯವನ್ನು ನೋಡಿದುದು ವಿರಳ. ಯಾಕೆಂದರೆ ಅವರು ರಂಗದಿಂದ ನಿವೃತ್ತಿ ಹೊಂದಿಯೇ ಎರಡು ದಶಕ ಕಳೆಯಿತು. ಅಣ್ಣಪ್ಪರು ಬದುಕಿದ್ದಾಗಲೂ, ಮರಣಿಸಿದ ಬಳಿಕವೂ ಅವರ ಹಾಸ್ಯಾಭಿವ್ಯಕ್ತಿಯು ದಂತಕಥೆಯಾಗಿ ಯಕ್ಷಲೋಕದಲ್ಲಿ ಜೀವಂತವಾಗಿರುವುದು ಇದೆಯಲ್ಲಾ, ಅದು ಅಂದಿನ ರಂಗಜೀವಂತಿಕೆಯ ಪ್ರತೀಕ.
ಮಿಜಾರು ಅಣ್ಣಪ್ಪರು ನಮ್ಮನ್ನಗಲಿದರು. ಹಾಸ್ಯ ಪಯೋಧಿಯ ನವುರು ಕಳಿಚಿತು. ಹಾಸ್ಯಕ್ಕೆ ಪ್ರಾಣವನ್ನು ನೀಡಿ ಉಸಿರಿನ ಆದ್ರ್ರತೆಯನ್ನು ಕಾಪಿಟ್ಟ ಅಣ್ಣಪ್ಪರಿಗೆ ಅಣ್ಣಪ್ಪರೇ ಸಾಟಿ. ಪಾತ್ರಗಳಿಗೆ ಹಿರಿತನದ ಛಾಪತ್ತು ಒತ್ತಿ, ಅದನ್ನು ಹಿರಿದುಗೊಳಿಸಿ, ತಾನೂ ಹಿರಿದಾಗಿ, ಕಲಾಭಿಮಾನಿಗಳ ಪಾಲಿಗೆ ಹಿರಿಯಣ್ಣನಾಗಿ ಬಾಳಿ ಬದುಕಿದ ಅಣ್ಣಪ್ಪರಿಗೆ ಅಕ್ಷರ ನಮನ.
(ಚಿತ್ರಗಳು : ಎಂ.ನಾ.ಚಂಬಲ್ತಿಮಾರ್, ಕುಂಬಳೆ)
No comments:
Post a Comment