Friday, September 2, 2016

ತೆರೆಮರೆಯ ಆಶುಕವಿಗೆ ಪೆರ್ಮೆಯ ಪದುಳ


               "ನನ್ನ ದುರಂತ ಮಾನಸಿ ಶೂರ್ಪನಖಾ ಎನ್ನುವ ಕಥೆಗೆ ಹದಿನೈದೇ ದಿವಸಗಳಲ್ಲಿ ಪ್ರಸಂಗ ಬರೆದಿದ್ದಾರೆ. ಅದು ಎರಡು ಪ್ರದರ್ಶನ ಆಗಿದೆ. ನಾಲ್ಕೈದು ಮಂದಿ ಭಾಗವತರು ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ. ವೇಷಧಾರಿಗಳೂ ಇಷ್ಟಪಟ್ಟಿದ್ದಾರೆ. ಅರ್ಥವಾಗುವ ಶೈಲಿಯ ಪದ್ಯಗಳನ್ನು ಹೊಸೆಯುವುದು ಶೇಡಿಗುಮ್ಮೆಯವರ ವಿಶೇಷತೆ," ಎಂದು ಹಿರಿಯ ಕಲಾವಿದ ಪೆರಡಂಜಿ ಗೋಪಾಲಕೃಷ್ಣ ಭಟ್ ಅನುಭವ ಹಂಚಿಕೊಂಡರು.
              ಕವಿ, ಪ್ರಸಂಗಕರ್ತ ಶೇಡಿಗುಮ್ಮೆ ವಾಸುದೇವ ಭಟ್ಟರು ಬರೆದ ಪ್ರಸಂಗಗಳನ್ನು ಸ್ವತಃ ರಂಗದಲ್ಲಿ ಆಡಿಸಿದ ಅನುಭವ. ಅವರ ಇನ್ನೊಂದು ಯಶಸ್ವಿ ಪ್ರಸಂಗ 'ವೀರಕೇಸರಿ ವಿಜಯ'. ಕೋಟೂರಿನ ಕಾರ್ತಿಕೇಯ ಕಲಾ ನಿಲಯದ ಆಯೋಜನೆಯಲ್ಲಿ ಪ್ರದರ್ಶಿತ. ಇದರಲ್ಲೂ ಪೆರಡಂಜಿಯವರು ವೇಷ ಮಾಡಿದ್ದಾರೆ. ಪದ್ಯಗಳ ಸೊಗಸನ್ನು ಅನುಭವಿಸಿದ್ದಾರೆ. ಈ ಪ್ರಸಂಗವು ಮೇಳಗಳಲ್ಲೂ ಪ್ರದರ್ಶಿತವಾಗಿದೆ.
            ಅವರ ಇನ್ನೊಂದು ಪ್ರಸಂಗ 'ಪೃಥುರಾಜ ವಿಜಯ'. ಹತ್ತೋ ಹದಿನೈದು ವರುಷಗಳ ಹಿಂದೆ ಕುಂಬಳೆ ಶೇಷಪ್ಪನವರ ಯಜಮಾನಿಕೆಯ ಉಪ್ಪಳ ಮೇಳದಲ್ಲಿ ಪ್ರದರ್ಶನಗೊಂಡಿತ್ತು.  ಮುಖ್ಯ ಸ್ತ್ರೀಪಾತ್ರವೊಂದನ್ನು ನಿರ್ವಹಿಸಿದ್ದೆ. ಆಗ ಮೇಳದಲ್ಲಿ ಮಧೂರಿನ ಬಾಲಚಂದ್ರ ಕಲ್ಲೂರಾಯ, ಕಕ್ಕೆಪ್ಪಾಡಿ ವಿಷ್ಣು ಭಟ್, ಮಧೂರು ಸುಂದರ ಗಟ್ಟಿ, ಸೂರಂಬೈಲು ಗೋಪಾಲಕೃಷ್ಣ ನಾಯಕ್.. ಹೀಗೆ ಕಲಾವಿದರ ತಂಡವಿತ್ತು. ಆ ಆಟಗಳಿಗೆಲ್ಲಾ ವಾಸುದೇವ ಭಟ್ಟರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದ್ದು ನೆನಪಿದೆ.
               ಸುಮಾರು ಇಪ್ಪತ್ತಕ್ಕೂ ಮಿಕ್ಕಿ ಪ್ರಸಂಗಗಳನ್ನು ಬರೆದಿದ್ದಾರೆ. ಎಲ್ಲವೂ ಚೆನ್ನಾಗಿದೆ. ಸರಳ, ಸುಲಭ ಶೈಲಿ. ಕಲಾವಿದರಿಗೆ ಅರ್ಥವಾಗುವ ಪದಬಂಧ. ಪ್ರತಿಭಾವಂತ. ಸ್ವ-ಸಂತೋಷಕ್ಕಾಗಿ ಪ್ರಸಂಗ ರಚನಾ ಕೈಂಕರ್ಯದಲ್ಲಿದ್ದಾರೆ, ಎಂದು ಅವರ ಒಡನಾಟವನ್ನು ಮತ್ತು ಕೃತಿಯನ್ನು ಹತ್ತಿರದಿಂದ ಬಲ್ಲ ಡಾ.ಉಪ್ಪಂಗಳ ಶಂಕರನಾರಾಯಣ ಭಟ್ ಹೇಳುತ್ತಾರೆ.
ವಾಸುದೇವ ಭಟ್ಟರು ಕುಂಬಳೆ ಸನಿಹದ ಶೇಡಿಗುಮ್ಮೆಯವರು.  ಅವರ ತೀರ್ಥರೂಪರು ನಾರಾಯಣ ಭಟ್, ಕಲಾಪ್ರೇಮಿ. ಅಣ್ಣ ಕೃಷ್ಣ ಭಟ್ಟರು. ಯಕ್ಷಗಾನ ಭಾಗವತರು. ಇವರಲ್ಲಿ ಬಲಿಪರು ಮತ್ತು ಪುತ್ತಿಗೆ ಜೋಯಿಸರ ಪ್ರಭಾವವಿತ್ತು.  1950ರ ಆಜೂಬಾಜು ಮುಜುಂಗಾವ್ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರಂತೆ. ವಾಸುದೇವ ಭಟ್ಟರು ಅಣ್ಣನಿಂದ ಪ್ರೇರಿತ, ಪ್ರಚೋದಿತ. ಶಾಲಾ ಕಲಿಕೆಯ ಹಂತದಲ್ಲೇ ಕವಿತ್ವದ ಸ್ಥಾಪನೆ. ಅಧ್ಯಾಪಕರಿಂದ ಶ್ಲಾಘನೆ.
         ಅಣ್ಣನಿಂದ ಭಾಗವತಿಕೆಯ ಕಲಿಕೆ. ಸಾಂಪ್ರದಾಯಿಕ ನಡೆ. ಕೂಟಾಟಗಳಲ್ಲಿ ಪ್ರೇಕ್ಷಕನಾಗಿ ಭಾಗಿ. ಸಮಯ ಸಿಕ್ಕಾಗಲೆಲ್ಲಾ ಯಕ್ಷಗಾನದ್ದೇ ಮಾತುಕತೆ, ವಿಮರ್ಶೆ. ಒಂದು ಕಾಲಘಟ್ಟದಲ್ಲಿ ಈ ಸಹೋದರರನ್ನು ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲಿ ಕಾಣಬಹುದಿತ್ತು ಎಂದು ಹಿರಿಯರು ಜ್ಞಾಪಿಸಿಕೊಳ್ಳುತ್ತಿದ್ದಾರೆ. ಮೇಳಕ್ಕೆ ಹೋದವರಲ್ಲ. ವೃತ್ತಿಪರತೆಯ ಆಸಕ್ತಿಯೂ ಇರಲಿಲ್ಲ.
1973ರಿಂದ ಹತ್ತು ವರುಷ ನಾರಾಯಣ ಮಂಗಲದ ವಿಘ್ನೇಶ್ವರ ಯಕ್ಷಗಾನ ಸಂಘ, 1980-82 ಕುಂಬಳೆ ನಿತ್ಯಾನಂದ ಮಠದ ವಿದ್ಯಾವರ್ಧಕ ಸಂಘ, 1996 ರಿಂದ 2010ರ ತನಕ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದಲ್ಲಿ ಭಾಗವತಿಕೆಯನ್ನು ಮಾಡಿದ್ದಾರೆ. ಮಾಯಿಪ್ಪಾಡಿ, ಮಧೂರು, ಕಾಸರಗೋಡು, ಕುಂಬಳೆ.. ಮೊದಲಾದೆಡೆ ಕೂಟಾಟಗಳಲ್ಲಿ ಭಾಗವಹಿಸಿದ್ದಾರೆ.
ಪ್ರಸಂಗ ರಂಚನೆಯು ವಾಸುದೇವ ಭಟ್ಟರಿಗೆ ವೃತ. ತಮ್ಮ ಹತ್ತೊಂಭತನೆಯ ವಯಸ್ಸಿನಲ್ಲಿ 'ಸುಂದೋಪಸುಂದ ಕಾಳಗ' ಪ್ರಸಂಗವನ್ನು ರಚಿಸಿದ್ದರು. ಮತ್ತೊಂದು ಪ್ರಸಿದ್ಧ ರಚನೆ 'ಭ್ರಮರವೇಣಿ ಸ್ವಯಂವರ'. ಇದು ಧರ್ಮಸ್ಥಳ ಮೇಳದಲ್ಲಿ ಪ್ರದಶರ್ಿತವಾಗಿದೆ. ಡಾ.ವೀರೇಂದ್ರ ಹೆಗ್ಗಡೆಯವರು ಮೆಚ್ಚಿಕೊಂಡಿದ್ದರು.
                 ವೀರಕೇಸರಿ ವಿಜಯ - ನಾಲ್ಕನೇ ಪ್ರಸಂಗ. ಇದರ ಕಥಾಹಂದರ ಕಾಲ್ಪನಿಕ. ಇದು ಅಚ್ಚಾಗಿದೆ. ಬಲಿಪ ನಾರಾಯಣ ಭಾಗವತರು ಮತ್ತು ಕೀತರ್ಿಶೇಷ ಪೆರ್ಲ ಕೃಷ್ಣ ಭಟ್ಟರ ಮುನ್ನುಡಿಯ ಸೇಸೆ. 1979ರಲ್ಲಿ ಪ್ರಕಟ. 'ವಾಲಿಜನ್ಮ, ಸುಲೋಚನಾ, ಗಂಗಾಭವಾನಿ, ಮಧುರ ಶೈಲೇಂದ್ರಿ, ಪ್ರದ್ಯುಮ್ನ ಚರಿತ್ರೆ, ಪೃಥುರಾಜ ವಿಜಯ, ಭಕ್ತ ಮುಚುಕುಂದ, ವಿಜಯಖಡ್ಕ ಮಹಾತ್ಮೆ, ದುರಂತ ಮಾನಸಿ ಶೂರ್ಪನಖಾ, ಶಿಶಿಲೇಶ ವೈಭವ, ತೊಡಿಕಾನ ಕ್ಷೇತ್ರ ಮಹಾತ್ಮೆ, ಕಾವೇರಿ ಮಹಾತ್ಮೆ, ಆದಿ ಚುಂಚನಗಿರಿ ಮಹಾತ್ಮೆ, ವೈಷ್ಣೋದೇವಿ ಮಹಾತ್ಮೆ..' ಪ್ರಸಂಗಗಳ ರಚಯಿತರು.
               'ಕಣಿಪುರ'ದಲ್ಲಿ ಎಸ್.ಕೆ.ಗೋಪಾಲಕೃಷ್ಣ ಭಟ್ ಬರೆಯುತ್ತಾರೆ, ಭಟ್ಟರು ಕ್ರಿಕೆಟ್ ಪ್ರಿಯರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್' ಎನ್ನುವ ಕಿರು ಪ್ರಸಂಗವನ್ನು ಬರೆದಿದ್ದಾರೆ. ಅದು 2008ರಲ್ಲಿ ಪ್ರಕಟವಾಗಿದೆ. ತಮಿಳಿನ ಸಿಲಪ್ಪದಿಕಾರಮ್ ಕಾವ್ಯವನ್ನು ಆಧರಿಸಿದ 'ಸತ್ಯರ್ಶನ', ಗುಲೇಬ ಕಾವಲಿ ಕಥೆಯನ್ನು ಆಧರಿಸಿದ 'ಮಂದಾರವತಿ ಪರಿಣಯ'ವನ್ನು ರಚಿಸಿದ್ದಾರೆ. ಇದು ಅವರ ಅಸೀಮ ಪ್ರತಿಭೆ ಮತ್ತು ಕವಿತಾ ಶಕ್ತಿಯ ದ್ಯೋತಕ ಎನ್ನುತ್ತಾರೆ. 'ಸ್ವಾತಂತ್ರ್ಯ ಸಂಗ್ರಾಮ, ಅಕ್ಷರಾಂಬಿಕಾ ಮಹಾಮೆ, ಕಾರ್ಗಿಲ್ ವಿಜಯ, ಅಪ್ಪಿಕೋ ಚಳುವಳಿ..' ಹೀಗೆ ಸಾಮಾಜಿಕ ಪ್ರಸಂಗಗಳು ಮೈತಾಳಿವೆ.
              ಪುರಾಣ ಪ್ರವಚನಕ್ಕೋಸ್ಕರ ಭಾಮಿನಿ ಷಟ್ಪದಿಯಲ್ಲಿ 'ಧ್ರುವಚರಿತ್ರೆ, ಪ್ರಹ್ಲಾದ ಚರಿತ್ರೆ, ಗಿರಿಜಾ ಕಲ್ಯಾಣ, ಅಜಾಮಿಳೋಪಾಖ್ಯಾನ'ವನ್ನು ಕೋರಿಕೆ ಮೇರೆಗೆ ರಚನೆ ಮಾಡಿದ್ದಾರೆ. ಹಿಂದಿನ ಯಕ್ಷಗಾನ ಪ್ರಸಂಗಗಳಳ ಅಪಾರ ಜ್ಞಾನ ಶೇಡಿಗುಮ್ಮೆಯವರದು. ಇವರು ಆಶುಕವಿ. ಮನೆಯವರೊಂದಿಗೆ ವಿನೋದವಾಗಿ ಹರಟುತ್ತಿರುವಾಗಲೂ ಸಂದರ್ಭಾನುಸಾರ ವಿವಿಧ ಶೈಲಿಯ ಕವಿತೆಗಳನ್ನು ಬರೆಯುವುದೂ ಅವರಿಗೆ ಆಸಕ್ತಿ!
               ತೆರೆಯ ಮರೆಯಲ್ಲಿ ಅಸಾಧಾರಣ ಕವಿತಾ ಶಕ್ತಿ ಮೆರೆದಿರುವ ವಾಸುದೇವ ಭಟ್ಟರ ಸುಂದೋಪಸುಂದರ ಕಾಳಗ, ಭ್ರಮರವೇಣಿ ಸ್ವಯಂವರ, ವಾಲಿಜನ್ಮ, ದುರಂತಮಾನಸಿ ಶೂರ್ಪನಖಾ ಈ ನಾಲ್ಕು ಪ್ರಸಂಗಗಳು ಅಚ್ಚಾಗಿ ಬಿಡುಗಡೆಗೆ ಸಿದ್ಧವಾಗಿದೆ. ಈಗವರಗೆ ಸಪ್ತತಿಯ ಸಂಭ್ರಮ, ಖುಷಿ. ಮೇ 29ರಂದು ಕುಂಬಳೆ ಶೇಡಿಕಾವು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಶೇಡಿಗುಮ್ಮೆ ವಾಸುದೇವ ಭಟ್ಟರಿಗೆ ಅಭಿನಂದನೆ ಮತ್ತು ಕೃತಿ ಬಿಡುಗಡೆ ಸಮಾರಂಭ. ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಆಯೋಜನೆ.
ಚಿತ್ರ : ಎಂ.ನಾ.ಚಂಬಲ್ತಿಮಾರ್

No comments:

Post a Comment