ಪದ್ಯಾಣರ ಸ್ವಗತ – (ಎಸಳು 11)
ಒಲಿಯಿತು ಒಲುಮೆ
ದಿನ ಪೂರ್ತಿ ತರಗತಿ. ಛತ್ರದಲ್ಲಿ ಮಧ್ಯಾಹ್ನದೂಟ. ಬೆಳಗ್ಗೆ ಗಂಜಿಯೂಟ. ವಿದ್ಯಾರ್ಥಿಗಳೇ ತಂತಮ್ಮ ಪಾಳಿಯಲ್ಲಿ ಸ್ವಯಂ ಆಗಿ ಅಡುಗೆ ಮಾಡಬೇಕಾಗಿತ್ತು. ತರಗತಿಗೆ ಸೇರಿ ಒಂದು ವಾರವಾಯಿತಷ್ಟೇ. ಮಾಂಬಾಡಿ ಗುರುಗಳ (ಮಾಂಬಾಡಿ ಅಜ್ಜ) ಸ್ನೇಹವಾಯಿತು! ಅವರ ವಯಸ್ಸು ಸುಮಾರು ಎಪ್ಪತ್ತು, ನನ್ನ ವಯಸ್ಸು ಹದಿನಾಲ್ಕು! ಸ್ನೇಹಕ್ಕೆ ಕಾರಣ ಏನು ಗೊತ್ತೇ. ಅಜ್ಜನಿಗೆ ಕೃಷ್ಣಾ ನಶ್ಯ ಸೇದುವ ಅಭ್ಯಾಸವಿತ್ತು. ಅವರಿಗೆ ಬೇಕಾದಷ್ಟು ಒದಗಿಸುತ್ತಿದ್ದೆ. ತರಗತಿ ಆರಂಭವಾಗುವಾಗ ಮೊದಲ ವಿದ್ಯಾರ್ಥಿಯಾಗಿ ಹಾಜರಿರುತ್ತಿದ್ದೆ. ಅವರೊಂದಿಗೇ ಕಾಫಿ, ತಿಂಡಿ, ನಿದ್ದೆ. ಹೀಗೆ ವಿವಿಧ ರೀತಿಯಲ್ಲಿ ಗುರುಗಳ ಸೇವೆ ಮಾಡಿದ್ದೆ. ಅವರು ಸುಪ್ರೀತರಾಗುತ್ತಿದ್ದರು. ಅವರ ಒಲುಮೆಯ ಶಿಷ್ಯನಾದೆ.
ಮೂರುವರೆ ತಿಂಗಳಲ್ಲಿ ಪ್ರಾಥಮಿಕ ಪಾಠ ಮುಗಿಯಿತು. ‘ಎಲ್ಲಾ ಹೇಳಿಕೊಟ್ಟಿದೆ ಮಾರಾಯ’ ಎಂದು ಆಶೀರ್ವದಿಸಿದರು. ಆ ವರುಷದ ತರಬೇತಿ ಅವಧಿಯ ಕೊನೆಯ ದಿನದ ಪ್ರದರ್ಶನ. ಕಲಿತುದನ್ನು ಪ್ರತ್ಯಕ್ಷವಾಗಿ ತೋರಿಸುವ ವ್ಯವಸ್ಥೆ. ಪ್ರಸಂಗ - ಪುರುಷಾತಿಕ್ರಮಣ. ಪೂಜ್ಯ ಹೆಗ್ಗಡೆಯವರು ಸಹಿತ ಅವರ ಕುಟುಂಬದ ಉಪಸ್ಥಿತಿ. ನೂರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತವೃಂದ ನೆರೆದಿದ್ದರು.
ಮೊದಲು ಜಾಗಟೆ ಹಿಡಿಯಲು ನನಗೆ ಅವಕಾಶ. ಮುಂದಿನ ಆಸನದಲ್ಲಿ ವಿರಾಜಮಾನರಾಗಿದ್ದ ಹೆಗ್ಗಡೆಯವರು, ಗುರುಗಳು, ಪ್ರೇಕ್ಷಕರನ್ನು ನೋಡಿ ಹೆದರಿ ಮುದ್ದೆಯಾಗಿದ್ದೆ. ಬೆವರಿ ಕಂಗಾಲಾಗಿದ್ದೆ. ಚೌಕಿ ಪೂಜೆ ಮುಗಿದು, ರಂಗಸ್ಥಳಕ್ಕೆ ಪ್ರವೇಶ. ಏನಾಯಿತೋ ಏನೋ.. ಗುರುಗಳು ಹೇಳಿಕೊಟ್ಟದ್ದು ಒಂದು ಕ್ಷಣ ಮರೆತುಹೋಯಿತು. ಅಂಬುರುಹದಳನೇತ್ರೆ... ಈ ಭಾಮಿನಿಯನ್ನು ನಾಲ್ಕು ಉಸಿರಿನಲ್ಲಿ ಹೇಳುವ ಬದಲು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ್ದೆ. ಗುರುಗಳು ಎಲ್ಲಿಂದ ಬಂದರೋ ಗೊತ್ತಿಲ್ಲ, ತಲೆಗೊಂದು ಕುಟ್ಟಿ ಹಾಕಿ ನಾಲ್ಕು ಉಸಿರಲ್ಲಿ ಪುನಃ ಹೇಳಿಸಿದರು. ಸರಿಯಾಗಿಯೇ ಹೇಳಿದೆ. ಕುಟ್ಟಿ ಪ್ರಯೋಗವು ಪ್ರೇಕ್ಷಕರಿಗೆ ಮೋಜು ಆಗಿದ್ದಿರಬೇಕು. ಮುಂದೆ ವೇಷಗಳ ಪ್ರವೇಶ, ರಂಗಕ್ರಮದಲ್ಲಿ ತಪ್ಪಿದಾಗ ಕುರಿಯ ಶಾಸ್ತ್ರಿಗಳು ಪುನಃ ಮಾಡಿಸಿ, ತಿದ್ದುತ್ತಿದ್ದರು.
ತರಬೇತಿ ಮುಗಿದು ಮನೆಯತ್ತ ಮುಖ ಮಾಡುವ ದಿನ. ಹೆಗ್ಗಡೆಯವರ ಅಮ್ಮ ಇಪ್ಪತ್ತು ರೂಪಾಯಿ ಉಡುಗೊರೆ ನೀಡಿದ್ದರು. ಶಾಲಾ ಕಲಿಕೆಯ ಪೋಕ್ರಿ ದಿನಮಾನಗಳು ಮರೆತುಹೋಯಿತು. ಹೊಸ ಪರಿಸರದಲ್ಲಿ ಬೆಳೆದು ಮನುಷ್ಯನಾಗಿದ್ದೆ. ಮಾಂಬಾಡಿ ಗುರುಗಳು, ಆರಂಭದ ಸಂದರ್ಶನದಲ್ಲೇ ಪೈಲ್ ಮಾಡಿದಾಗ ‘ನೀನು ಮನೆಗೆ ಹೋಗುತ್ತಿದ್ದರೆ, ನಿನ್ನಂತಹ ಶಿಷ್ಯನನ್ನು ಕಳೆದುಕೊಳ್ಳುತ್ತಿದ್ದೆ. ಅಲ್ಲದೆ ನಿನಗೂ ನಷ್ಟವಾಗುತ್ತಿತ್ತು,’ ಎಂದಿದ್ದರು. ಈ ಭಾಮಿನಿಯನ್ನು ಹೇಳುವಾಗ ಇಂದಿಗೂ ಗುರುಗಳು ನೆನಪಾಗುತ್ತಾರೆ.
ಕಲಿಕೆ ತಂದ ಬದಲಾವಣೆ
ಮೂರುವರೆ ತಿಂಗಳ ಬಳಿಕ ಮನೆ ಸೇರಿದೆ. ಬದಲಾದ ಜೀವನ ಶೈಲಿಯನ್ನು ಗಮನಿಸಿದ ಮನೆಯವರು ನಿಬ್ಬೆರಗಾದರು. ಹಳೆಯ ಘಟನೆಗಳನ್ನೆಲ್ಲಾ ಮರೆತಿದ್ದರು. ಆರಂಭಕ್ಕೆ ಶಾಲೆಗೆ ಚಕ್ಕರ್ ಹಾಕಿದ ಕಾರಣ ಬೇಸರವಾಗಿದ್ದಿರಬೇಕು. ಆದರೆ ಯಕ್ಷಗಾನವನ್ನಾದರೂ ಕಲಿತನಲ್ಲಾ ಎನ್ನುವ ಸಮಾಧಾನ, ಸಂತೋಷ ಅವರ ಮುಗುಳ್ನಗುವಿನಲ್ಲಿ ವ್ಯಕ್ತವಾಗುತ್ತಿತ್ತು. ನಮ್ಮಿಬ್ಬೊರೊಳಗೆ ಮಾತು ಕಡಿಮೆ. ಮೌನವಾಗಿ ಮಾತನಾಡಿದ್ದೇವೆ! ಧರ್ಮಸ್ಥಳದಿಂದ ಬಂದ ಬಳಿಕವೇ ಮೌನದಲ್ಲೂ ಮಾತಿದೆ ಎಂದು ತಿಳಿಯಿತು.
ನಾನು ಧರ್ಮಸ್ಥಳಕ್ಕೆ ಹೋಗುವ ಹೊತ್ತಿಗೆ ಮನೆ ಭಸ್ಮವಾಗಿತ್ತಲ್ಲಾ. ಅದು ಗುಳಿಗನ ಉಪದ್ರ..! ಅಬ್ಬಾ... ಗುಳಿಗನ ಕಾರ್ನಿಕವೇ... ಆತ ಸಾಮಾನ್ಯನಲ್ಲ... ಇದು ಸತ್ಯ ಮಾರಾಯ್ರೆ. ಯಾವಾಗ ಮನೆ ಭಸ್ಮವಾಯಿತೋ.. ಅಲ್ಲಿಂದ ಬದುಕಿನಲ್ಲಿ ಶುಕ್ರದೆಸೆ ಆರಂಭ! ಕೃಷಿ ಉತ್ಪತ್ತಿ ಹೆಚ್ಚಾಯಿತು. ತಂದೆ ಸಾಲ ಕೊಟ್ಟಿದ್ದರಲ್ಲ.. ಅವರೆಲ್ಲಾ ಅನುಕಂಪದಿಂದ ಮರುಪಾವತಿ ಮಾಡಿಯೇಬಿಟ್ಟರು.
ಗುರುಗಳು ಪ್ರತಿನಿತ್ಯ ಹಾಡುಗಳನ್ನು ಸಾಧನೆ ಮಾಡಬೇಕು ಹೇಳಿದ್ದರು. ಬೆಳಿಗ್ಗೆ,
ಸಂಜೆ ಅಭ್ಯಾಸ ಮಾಡುತ್ತಿದ್ದೆ. ಅಭ್ಯಾಸಕ್ಕೆ ಕುಳಿತುಕೊಳ್ಳುವಾಗಲೆಲ್ಲಾ ಯಾವುದೇ ಕೆಲಸಗಳಿದ್ದರೂ ಅದನ್ನು
ಬದಿಗೊತ್ತಿ ತಂದೆಯವರು ಅತ್ತಿತ್ತ ಸುಳಿಯುವ ನೆಪದಲ್ಲಿ
ಆಲಿಸುತ್ತಿದ್ದರು. ಹಾಡುವಾಗ ಅಕ್ಷರ ವ್ಯತ್ಯಾಸವಾದರೆ ತಿದ್ದುತ್ತಿದ್ದರು. ನನ್ನ ಆಸಕ್ತಿಗೆ ಸ್ಪಂದಿಸುತ್ತಿರುವ
ಅಪ್ಪನ ಮನಸ್ಸನ್ನು ಅರ್ಥಮಾಡಿಕೊಳ್ಳದೆ ಹೋದೆನಲ್ಲಾ ಎಂಬ ಖೇದವೂ ಜತೆಜತೆಗೆ ಆಗುತ್ತಿತ್ತು. ಛೇ.. ಅವರಿಗೆ
ಎಷ್ಟೊಂದು ಕಷ್ಟ, ಮಾನಸಿಕ ಹಿಂಸೆ ನೀಡಿದ್ದೆ.
(ಚಿತ್ರಕೃಪೆ : ಮಧುಸೂದನ ಅಲೆವೂರಾಯ)
No comments:
Post a Comment