(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ)
ಜನರು ನನ್ನನ್ನು ತಿರಸ್ಕರಿಸಲಿಲ್ಲ :-
ಸುರತ್ಕಲ್ ಮಹಮ್ಮಾಯಿ ಮೇಳದಲ್ಲಿ ಪೌರಾಣಿಕ ಪ್ರದರ್ಶನಗಳ ಯಶಸ್ಸುಗಳು ಯಕ್ಷಗಾನ ಕಂಡ ಉತ್ತುಂಗ ದಿನಮಾನಗಳು. ಪಕ್ವ ಹಿಮ್ಮೇಳ, ಶೇಣಿ-ತೆಕ್ಕಟ್ಟೆಯವರಂತಹ ದಿಗ್ಗಜಗಳು, ಪ್ರತಿಭಾವಂತ ಕಲಾವಿದರಿದ್ದ ಮೇಳದ ಪ್ರದರ್ಶನಗಳೆಲ್ಲಾ ಮನೆಮಾತು.
ಆಗಲೇ ‘ಕೋಟಿಚೆನ್ನಯ, ಕಾಂತಾಬಾರೆ ಬೂದಾಬಾರೆ, ತುಳುನಾಡ ಸಿರಿ..’ ಪ್ರಸಂಗಗಳ ಪ್ರದರ್ಶನಗಳು ಜನಪ್ರಿಯವಾಗಿದ್ದುವು. ತುಳು ಮಣ್ಣಿನ ಸಂಸ್ಕೃತಿ ಮತ್ತು ಅಪ್ಪಟ ತುಳು ಭಾಷೆಯ ಸೊಗಸನ್ನು ರಂಗದಲ್ಲಿ ಕಾಣಬಹುದಿತ್ತು. ಕಾರಣಿಕ ಪುರುಷರ ಕಥಾನಕವುಳ್ಳ ಪ್ರಸಂಗಗಳು ಹಿಟ್ ಆಗಿದ್ದುವು. ನೂರಾರು ಮಂದಿ ಹಿರಿಯ ಕಲಾವಿದರು ಪಾತ್ರಗಳಿಗೆ ಉಸಿರು ಕೊಟ್ಟರು.
ಬೈಂದೂರಿನ ಅಂಬಾಗಿಲಿನಲ್ಲಿ ಬೈದರ್ಕಳ ನೇಮೋತ್ಸವವು ಅದ್ದೂರಿಯಿಂದ ನಡೆಯುತ್ತಿದೆ. ಸುರತ್ಕಲ್ ಮೇಳವು ಅಲ್ಲಿ ಏಳೆಂಟು ವರುಷ ಕೋಟಿ ಚೆನ್ನಯ ಪ್ರಸಂಗವೊಂದನ್ನೇ ಪ್ರದರ್ಶಿಸಿತ್ತು. ಹೌಸ್ ಫುಲ್... ಕೊನೆಗೆ ಟೆಂಟಿನೊಳಗೆ ಜಾಗವಿಲ್ಲದ ಸ್ಥಿತಿಯು ಉಂಟಾಗಿತ್ತು. ಕಾರಣಿಕ ಪುರುಷರ ಕಥಾನಕಗಳನ್ನು ಭಾವುಕ ಜನ ಸ್ವೀಕರಿಸಿದ ಬಗೆ ಅನನ್ಯ.
ಕಾಲ ಸರಿದಂತೆ ಮನಃಸ್ಥಿತಿಗಳು ಬದಲಾಗುವುದು ಸಹಜ. ತುಳು ಭಾಷೆ, ಪ್ರಾದೇಶಿಕ ಕಥಾನಕವುಳ್ಳ ಪ್ರಸಂಗಗಳು ರಂಗವೇರಿದ್ದುವು. ಆಡುಭಾಷೆಯ ಸೊಗಸನ್ನು ಅನುಭವಿಸಲು ಪ್ರೇಕ್ಷಕರು ಕಾತರರಾಗಿದ್ದರು. ಅಭಿಮಾನಿಗಳ ಆಸಕ್ತಿಗಳನ್ನು ಮೇಳಗಳು ಮನಗಂಡವು. ಹೊಸ ಪ್ರಸಂಗಗಳು ತಯಾರಾದುವು. ನಿತ್ಯ ಜೀವನದ ಘಟನೆಗಳೇ ರಂಗದಲ್ಲಿ ಮರುಸೃಷ್ಟಿಗೊಂಡಾಗ ಖುಷಿಯಿಂದ ಪ್ರೋತ್ಸಾಹಿಸಿದರು.
ಇಂತಹ ಸನ್ನಿವೇಶದಲ್ಲಿ ಸುರತ್ಕಲ್ ಮೇಳದ ಯಜಮಾನರು ತನ್ನ ನಿಲುವನ್ನು ಬದಲಿಸಿಕೊಂಡರು. ಜನಮನ ಮುಟ್ಟುವ ತುಳು ಪ್ರಸಂಗಗಳನ್ನು ಆಯ್ದುಕೊಂಡರು. ಹೊಸ ಹೊಸ ಆಕರ್ಷಕ ಸನ್ನಿವೇಶಗಳು ರೂಪುಗೊಂಡವು. ನೃತ್ಯ ವೈವಿಧ್ಯಗಳನ್ನು ತರಬೇಕಾಯಿತು. ಸಭಿಕರಿಗೆ ಬೋರ್ ಆಗದಂತೆ ದೃಶ್ಯಗಳನ್ನು ಹೊಸೆಯಬೇಕಾಗಿತ್ತು. ಈ ಬದಲಾವಣೆಗೆ ಅಗರಿ ರಘುರಾಮ ಭಾಗವತರ ಪೂರ್ತಿ ಸಹಕಾರವಿತ್ತು. ಅಗತ್ಯ ಬಿದ್ದಾಗ ಪದ್ಯಗಳನ್ನು ಬರೆದುಕೊಡುತ್ತಿದ್ದರು.
ಹೊಸ ಪ್ರಸಂಗಗಳು ಕೈಗೆ ಬಂದಾಗ ಕೆ.ವಿ.ಪೈಗಳು ಸಮಾಲೋಚನೆ
ಮಾಡುತ್ತಿದ್ದರು. ಕಥೆಯಲ್ಲಿ ತಿರುಳು ಇದೆಯಾ? ವಿಶೇಷ ಆಕರ್ಷಣೆಯನ್ನು ಹೇಗೆ ಹೊಂದಿಸಬಹುದು? ಯಾವುದೆಲ್ಲ ಸನ್ನಿವೇಶಗಳಿಗೆ ಹಾಸ್ಯಗಾರರನ್ನು
ಬಳಸಿಕೊಳ್ಳಬಹುದು? ಪರಿಣಾಮ ಕೊಡದ ದೃಶ್ಯಗಳನ್ನು ಹೇಗೆ ಹೃಸ್ವಗೊಳಿಸಬಹುದು? ಹೀಗೆ ಅವರ ಯೋಚನೆಗಳು
ಮೇಳದ ಒಟ್ಟೂ ಪ್ರದರ್ಶನಗಳನ್ನು ಯಶದತ್ತ ಒಯ್ದಿವೆ. ‘ಕಲೆಕ್ಷನ್ ಆಗಬೇಡ್ವಾ ಗಣಪಣ್ಣ. ಗಿಮಿಕ್ ಬೇಕು.
ಅದರಲ್ಲಿ ಅಶ್ಲೀಲತೆ ಇರಕೂಡದು. ಪ್ರೇಕ್ಷಕರು ಕುಟುಂಬ ಸಹಿತವಾಗಿ ಆಟವನ್ನು ನೋಡುವಂತಾಗಬೇಕು. ಯಾರೂ ಮೂಗುಮುರಿಯಕೂಡದು.’ ಎನ್ನುತ್ತಿದ್ದರು.
ಕಾಲಮಿತಿ : ಹೊಸನಗರ ಮೇಳ ಸೇರುವ ಹೊತ್ತಿಗೆ ಪ್ರೇಕ್ಷಕರ ಬದಲಾದ ಆಸಕ್ತಿಯ ಮಗ್ಗುಲನ್ನು ಗಮನಿಸಿದೆ. ಸಾಮಾಜಿಕ ಬದಲಾವಣೆ ಮತ್ತು ಜೀವನಶೈಲಿಯಲ್ಲಾದ ಮಾರ್ಪಾಟುಗಳು ರಂಗದ ಮೇಲೂ ಪರಿಣಾಮ ಬೀರಿತು. ಇಂತಹ ವರ್ಗವು ಕಾಲಮಿತಿಯನ್ನು ಅಪೇಕ್ಷಿಸಿತು. ಪ್ರಸಂಗಗಳನ್ನು ನಾಲ್ಕೈದು ಗಂಟೆಗೆ ಹೃಸ್ವಗೊಳಿಸಿದಾಗ ಹಿತವಾಯಿತು. ನಗರ ಪ್ರದೇಶಕ್ಕೆ ಕಾಲಮಿತಿ ಹೊಂದಿಕೊಂಡಿತು.
ಕಾಲಮಿತಿಯಲ್ಲಿ ಪ್ರಸಂಗದ ಪರಿಷ್ಕರಣೆ (ಎಡಿಟಿಂಗ್) ಮುಖ್ಯ. ಲಂಬಿಸುವ ಸನ್ನಿವೇಶಗಳನ್ನು ಕಿರಿದುಗೊಳಿಸುವುದು, ಪಾತ್ರವೊಂದಕ್ಕೆ ಐದಾರು ಪದ್ಯಗಳಿದ್ದರೆ ಎರಡೋ ಮೂರಕ್ಕೆ ಇಳಿಸುವುದು, ಪ್ರಸ್ತುತಿಯಲ್ಲಿ ವೇಗದ ಪೋಣಿಕೆ.. ಹೀಗೆ ಒಟ್ಟೂ ಪ್ರದರ್ಶನವನ್ನು ಕಥೆಗೆ, ಯಕ್ಷಗಾನದ ಚೌಕಟ್ಟಿಗೆ ಲೋಪವುಂಟಾಗದಂತೆ ಪ್ರದರ್ಶಿಸಿದೆವು. ಯಜಮಾನರಾದ ಟಿ. ಶ್ಯಾಮ ಭಟ್ಟರ ಮಾರ್ಗದರ್ಶನ.
ಪ್ರಸಿದ್ಧ ಪ್ರಸಂಗಗಳನ್ನು ಹೊಸ ರೂಪದಲ್ಲಿ ಕೊಡುವ ಯತ್ನವನ್ನು ಹೊಸನಗರ ಮೇಳ ಮಾಡಿದೆ. ಪ್ರದರ್ಶನ ಪೂರ್ವದಲ್ಲಿ ಪ್ರಾಕ್ಟೀಸ್ ಮಾಡಿ, ಕಾಲಮಿತಿಗೆ ಹೊಂದುವಂತೆ ಸಿದ್ಧಮಾಡುವ ಮೇಳದ ವ್ಯವಸ್ಥೆಯು ಪ್ರಸಂಗಗಳ ಯಶಸ್ಸಿಗೆ ಕಾರಣವಾಗಿದೆ. ಕಾಲಮಿತಿಯಲ್ಲಿ ನೃತ್ಯ, ಮಾತು, ಭಾಗವತಿಕೆ, ಚೆಂಡೆ-ಮದ್ದಳೆಯ ವೈಭವೀಕರಣಕ್ಕೆ ಬೇಕಾದಷ್ಟು ಸಮಯವನ್ನು ಹೊಂದಿಸಿಕೊಂಡು ಇಡೀ ಕಥಾನಕವನ್ನು ಮುಗಿಸುವುದು ನಿಜಕ್ಕೂ ಸವಾಲೇ ಸರಿ.
ಚಿತ್ರ : ಎಲ್.ಎನ್.ಭಟ್, ಸಾಗರ
No comments:
Post a Comment