(ಯಕ್ಷಗಾನ
ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)
ಒಂದು ದಿನ ಅಪ್ಪ ಕಲ್ಮಡ್ಕಕ್ಕೆ ಹೋಗಿದ್ದರು.
ಬರುವಾಗ ನವಭಾರತ ದಿನಪತ್ರಿಕೆ ಕಂಕುಳಲ್ಲಿತ್ತು. ಪೇಪರ್
ತರುವುದು ಅಭ್ಯಾಸ. ಅಮ್ಮನಿಗೆ ಓದುವುದು ಹವ್ಯಾಸ. ಅದರಲ್ಲೊಂದು ಸುದ್ದಿಯಿತ್ತು - ಧರ್ಮಸ್ಥಳದಲ್ಲಿ
ಯಕ್ಷಗಾನ ತರಬೇತಿ ಕೇಂದ್ರ ಆರಂಭವಾಗಲಿದೆ.
ಅಮ್ಮನೊಳಗೆ ಸುಪ್ತವಾಗಿದ್ದ ಆಶೆ
ಚಿಗುರೊಡೆಯಿತು. ಯಕ್ಷಗಾನವಾದರೂ ಕಲಿಯಲಿ ಎಂದು ಪತ್ರಿಕೆಯ ಸುದ್ದಿಯನ್ನು ತೋರಿಸಿದರು. ಇದನ್ನಾದರೂ
ಕಲಿ - ಅಮ್ಮನ ಉಪದೇಶ. ಸಂತೋಷದಿಂದ ಹೋಗಲು ಒಪ್ಪಿಕೊಂಡೆ. ಅಮ್ಮ ಖುಷಿಯಿಂದ ಮುದ್ದೆಯಾಗಿದ್ದಳು. ‘ಸಾಯಿಬಾಬಾರವರು
ಅನುಗ್ರಹಿಸಿದರು’ ಎನ್ನುವ ಸಂತೋಷ. ಕಾಕತಾಳೀಯವಾಗಿ ಒದಗಿದ ಅವಕಾಶ. ಪುಟ್ಟಪರ್ತಿಯಲ್ಲಿ ಸ್ವಾಮಿಯ ಅನುಗ್ರಹದ
ಬೆನ್ನಲ್ಲೇ ಧರ್ಮಸ್ಥಳದತ್ತ ಮುಖಮಾಡುವ ಬದಲಾದ ಮನಸ್ಸು. ಅಮ್ಮ ಹತ್ತು ರೂಪಾಯಿ ನೀಡಿ ಮನಸಾ ಆಶೀರ್ವದಿಸಿ
ಕಳುಹಿಸಿಕೊಟ್ಟರು.
ನವಭಾರತ ಪತ್ರಿಕೆಯನ್ನು ಊರಿನ ಕೆಲವು
ಆಸಕ್ತರು ಓದಿರಬೇಕು. ನಾನು ಧರ್ಮಸ್ಥಳಕ್ಕೆ ಹೋಗುವ
ವಿಚಾರವೂ ತಿಳಿದಿರಬೇಕು. ಗೋವಿಂದ, ಸುಬ್ಬಣ್ಣ, ನರಸಿಂಹಯ್ಯ ಜತೆ ಸೇರಿದರು. ಅಬ್ಬಾ.. ಇನ್ನು ಆರು
ತಿಂಗಳು ತೊಂದರೆಯಿಲ್ಲ. ಮನೆಯ ಚಿಂತೆಯಿಲ್ಲ, ನಿರಾಳ - ಖುಷಿ ಒಂದೆಡೆ. ಊರಿನ ಪರಿಚಯದವರು ಜತೆಗೆ ಬರ್ತಾರಲ್ಲ
ಎಂಬ ಸಂತೋಷ ಮತ್ತೊಂದೆಡೆ.
ಆಗ ಪುತ್ತೂರಿನಿಂದ ಧರ್ಮಸ್ಥಳಕ್ಕೆ
ಸರಕಾರಿ ಬಸ್ ವ್ಯವಸ್ಥೆ. ಸಮಯಕ್ಕೆ ಸರಿಯಾಗಿ ಧರ್ಮಸ್ಥಳ ತಲುಪಿದೆವು. ದಾಖಲಾತಿ ಮಾಡಿಕೊಂಡೆವು. ಮರುದಿವಸ
ಸಂದರ್ಶನ. ಮಾಂಬಾಡಿ ನಾರಾಯಣ ಭಾಗವತರು, ಕುರಿಯ ವಿಠಲ ಶಾಸ್ತ್ರಿಗಳು, ಪಡ್ರೆ ಚಂದು - ಈ ಮೂವರು ಹಿರಿಯ
ಕಲಾವಿದರು ಸಂದರ್ಶನ ಮಾಡುವ ಅಧ್ಯಾಪಕರು. ಹೆಗ್ಗಡೆಯವರ ಬೀಡಿನಲ್ಲಿ (ಹೆಗ್ಗಡೆಯವರ ಮನೆಗೆ ಬೀಡು ಎನ್ನುತ್ತಾರೆ)
ಸಂದರ್ಶನ ಏರ್ಪಾಡಾಗಿತ್ತು. ನಲವತ್ತು ಮಂದಿ ಮುಮ್ಮೇಳಕ್ಕೆ, ಆರು ಮಂದಿ ಹಿಮ್ಮೇಳ ಕಲಿಕೆಯ ಅಪೇಕ್ಷೆಯಿಂದ
ಆಗಮಿಸಿದ್ದರು.
ಒಬ್ಬೊಬ್ಬರಲ್ಲಿ ಪ್ರಶ್ನೆ ಕೇಳಿ,
ಸೂಕ್ತ ಅಭ್ಯರ್ಥಿಗಳನ್ನು ಆರಿಸುತ್ತಿದ್ದರು. ನನ್ನ ಸರದಿ ಬಂತು. ಯಕ್ಷಗಾನದಲ್ಲಿ ಯಾವ ರೀತಿಯ ಅನುಭವ
ಉಂಟು ಎಂದು ಕೇಳಿದರು. ಇಲ್ಲ ಅಂದೆ. ಒಂದು ಪದ್ಯವಾದರೂ ಹೇಳಬಹುದಾ ಎಂದಾಗ ತಲೆ ಅಲ್ಲಾಡಿಸಿದೆ. ನಾಲ್ಕು
ಮಂದಿ ಉತ್ತೀರ್ಣರಾಗಿದ್ದರೆ, ಮಿಕ್ಕ ನಾಲ್ಕು ಮಂದಿ ಅನುತ್ತೀರ್ಣ. ಅವರಲ್ಲಿ ನಾನೂ ಒಬ್ಬ. ನೀನು ಊರಿಗೆ
ಹೋಗಬಹುದು ಎಂದಿದ್ದರು.
ಛೇ.. ಎಂತಹ ಗ್ರಹಚಾರ. ಇಲ್ಲಿ ಹೀಗೆ..
ಊರಿನಲ್ಲಿ ಹಾಗೆ... ಏನು ಮಾಡೋಣ? ಸಂದರ್ಶನ ಮುಗಿಸಿ ಅಧ್ಯಾಪಕರು ತೆರಳುತ್ತಿದ್ದರು. ಅವರ ಹಿಂದಿನಿಂದ
ಹೆಜ್ಜೆ ಹಾಕಿದೆ. ಈ ಮಧ್ಯೆ ಅಮ್ಮ ಕಿವಿಯಲ್ಲಿ ಹೇಳಿದ ಮಾತು ನೆನಪಾಯಿತು - ಏನಾದರೂ ತೊಂದರೆಯಾದರೆ
ಅಪ್ಪನ ಹೆಸರನ್ನು ಹೇಳು. ಮಾಂಬಾಡಿಯವರ ಸನಿಹಕ್ಕೆ ಹೋಗಿ ಪುನಃ ಬಿನ್ನವಿಸಿದೆ. ನೀನು ಫೈಲ್ ಅಲ್ವಾ.
ಮನೆಗೆ ಹೋಗು- ಮುಖ ತಿರುಗಿಸಿದರು.
ನಾನು ಪದ್ಯಾಣ ತಿರುಮಲೇಶ್ವರ ಭಟ್ಟರ
ಮಗ ಎಂದು ಒಂದೇ ಧಮ್ಮಿನಿಂದ ಹೇಳಿದೆ. ಮಾಂಬಾಡಿಯವರು ಹಿಂತಿರುಗಿ ನೋಡಿ ಖಾತ್ರಿ ಪಡಿಸಿಕೊಂಡರು. ಮೊದಲೇ
ಹೇಳಬಹುದಿತ್ತಲ್ವಾ.. ಈಗ ಹೇಳಿ ಏನು ಪ್ರಯೋಜನ ಎಂದು ಗೊಣಗಿದರು. ಇವ ನಮ್ಮ ಪದ್ಯಾಣದವ ಕುರಿಯದವರಿಗೆ
ಪರಿಚಯ ಮಾಡಿಕೊಟ್ಟರು. ನೀನು ತಿಮ್ಮಪ್ಪನ ಮಗನಾ ಎಂದು ಶಾಸ್ತ್ರಿಯವರೂ ದನಿಗೂಡಿಸಿದರು. ಪುನಃ ಖಾವಂದರಲ್ಲಿಗೆ
ಬಂದು ವಿಚಾರ ತಿಳಿಸಿ ತರಬೇತಿಗೆ ಸೇರಿಸಿಕೊಂಡರು. ಮಾಂಬಾಡಿಯವರಿಗೆ ಪದ್ಯಾಣ ಮನೆತನವು ಹತ್ತಿರದಿಂದ
ಪರಿಚಯವಿತ್ತು. ಫೈಲ್ ಆದವ ಪಾಸ್ ಆದೆ. ಯಾವಾಗ ಧರ್ಮಸ್ಥಳಕ್ಕೆ ಕಾಲಿರಿಸಿದೆನೋ ಆ ಕ್ಷಣದಿಂದ ಪರಿವರ್ತನೆಯ
ಗಾಳಿಯೊಂದು ತೇಲಿ ನನ್ನೊಳಗೆ ಇಳಿದಿತ್ತು.
ತರಬೇತಿ ಶುರುವಾಯಿತು. ಈ ಮಧ್ಯೆ
ಅಮ್ಮನಿಂದ ಕಾಗದವೊಂದು ಬಂದಿತ್ತು - ಮನೆ ಹೊತ್ತಿ ಉರಿಯಲು ಕಾರಣ ‘ಗುಳಿಗ ಭೂತದ ಉಪದ್ರ’ ಎಂದು ಜ್ಯೋತಿಷ್ಯದಿಂದ
ತಿಳಿಯಿತಂತೆ! ದೈವಕ್ಕೆ ಬೇಕಾದ ವಿಧಿವಿಧಾನಗಳೆಲ್ಲವನ್ನೂ ಪೂರೈಸಿದ್ದೇವೆ. ಹಳೆ ಮನೆಯ ಸನಿಹ ಹೊಸ ಮನೆಯೂ
ನಿರ್ಮಾಣವಾಗಿದೆ. ಒಕ್ಕಲಾಗಿದ್ದೇವೆ. ಅಪ್ಪ ಖುಷಿಯಲ್ಲಿದ್ದಾರೆ, ಶಾಂತವಾಗಿದ್ದಾರೆ. ನೀನು ಧರ್ಮಸ್ಥಳಕ್ಕೆ
ಹೋದುದು ಅಪ್ಪನಿಗೆ ಸಮಾಧಾನ ತಂದಿದೆ. ಅಲ್ಲಾದ್ರೂ ಒಳ್ಳೆಯದಾಗಲಿ ಎಂದು ಹರಸಿದ್ದಾರೆ.
No comments:
Post a Comment