Sunday, August 23, 2020

‘ಪದಯಾನ’ - ಪದ್ಯಾಣರ ಸ್ವಗತ – (ಎಸಳು 28)


(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)

     ಅಬ್ಬಾ... ವೀಳ್ಯ ಮೆಲ್ಲುವ ಚಟ ದೂರವಾಯಿತು. “ವೀಳ್ಯದೆಲೆ, ಅಡಿಕೆ ತಿನ್ನು ಮಾರಾಯ, ಆ ಹೊಗೆಸೊಪ್ಪು ತಿಂದು ಯಾಕೆ ಸಾಯ್ತಿಯಾ,” ಅಂತ ಅನೇಕರು ಮೊದಲು ಬುದ್ಧಿವಾದ ಹೇಳಿದ್ದರು. ಅದಾವುದೂ ಗಣನೆಗೆ ಬರುತ್ತಿರಲಿಲ್ಲ. ಈಗ ಅದೆಲ್ಲಾ ನೆನಪಾಗಲು ಶುರುವಾಯಿತು. ವೀಳ್ಯವನ್ನು ಓಡಿಸಿದ ಆ ದಿನ ಇದೆಯಲ್ವಾ... ಅಬ್ಬಾ... ಶತ್ರುವಿಗೂ ಬೇಡ! ಬಾಯೆಲ್ಲಾ ಸಪ್ಪೆಸಪ್ಪೆ. ತಲೆ ತಿರುಗಿದ ಅನುಭವ.. ಕುಳಿತಲ್ಲೆ ಕುಳ್ಳಿರಲಾಗದ ಸ್ಥಿತಿ.. ಯಾರು ಮಾತನಾಡಿದರೂ ಅಸಹನೆ..

          ಆ ವರುಷ ಹೇಗೋ ಕಳೆಯಿತು. ಮುಂದಿನ ತಿರುಗಾಟದಲ್ಲೂ ಭಾಗವತಿಕೆ ಕಷ್ಟವಾಯಿತು. ಬೇಕಾದ ಹಾಗೆ ನಾಲಗೆ ಮಗುಚದೆ ಸಾಹಿತ್ಯ ಅಸ್ಪಷ್ಟವಾಯಿತು.  ಬಲವಂತದಿಂದ ಹಾಡುತ್ತಾ, ಮನದಲ್ಲೇ ನೊಂದುಕೊಳ್ಳುತ್ತಾ... ದಿನಗಳು ಸರಿಯುತ್ತಿದ್ದುವು. ಕ್ರಮೇಣ ಉಚ್ಛಾರ ಸ್ಪಷ್ಟವಾಗುತ್ತಾ ಬಂತು. ಹಾಡುವುದು ನಿರಾಳವಾಯಿತು, ದಣಿವು ಕಡಿಮೆಯಾಯಿತು. ಧೈರ್ಯ ಬಂತು. ಕಪ್ಪು ಮೂರು ಶ್ರುತಿಯಲ್ಲಿ ಪದ ಹೇಳುವಷ್ಟು ತಯಾರಾದೆ!

          ನಾನು ವೀಳ್ಯಕ್ಕೆ ವಿದಾಯ ಹೇಳಿದೆ ಅಲ್ವಾ... ಈಗ ವೀಳ್ಯ ತಿನ್ನುವವರನ್ನು ನೋಡಿದರೆ ಅಲರ್ಜಿ! (ತಿರಸ್ಕಾರ ಅಲ್ಲ)  ‘ಯಾಕಪ್ಪಾ ತಿಂದು ಸಾಯ್ತಾರೆ’ ಅಂತ ಅನ್ನಿಸುತ್ತದೆ. ‘ಛೇ.. ವೀಳ್ಯ ತಿಂದು ಅಲ್ಲಲ್ಲಿ ಉಗುಳುತ್ತಾರೆ, ಗಲೀಜು ಮಾಡುತ್ತಾರೆ. ಎಂತಹ ಕೊಳಕು ಜನಗಳಪ್ಪಾ!’ ಹೂಂ... ಮೊದಲು ನಾನೂ ಹಾಗೆ ಇದ್ದೆ ಬಿಡಿ!!

ಸಂಪಾಜೆ ಯಕ್ಷೊತ್ಸವ ಸಂಭ್ರಮ :  ಮೇಳದ ಯಜಮಾನರಾದ ಟಿ.ಶ್ಯಾಮಭಟ್ಟರ ಉಸಿರು ಮತ್ತು ಮನಸ್ಸು ಪೂರ್ತಿ ಯಕ್ಷಗಾನೀಯ! ಕಲಾವಿದರ ವರ್ತನೆಗಳನ್ನು ಸಹಿಸಿಕೊಳ್ಳುವುದು ಅವರ ದೊಡ್ಡ ಗುಣ. ಕಲಾವಿದ ತಪ್ಪಿದಾಗ ಬುದ್ಧಿವಾದ ಹೇಳುತ್ತಾರೆ. ತಪ್ಪು ಮಾಡಿದಾಗ ಎಂದೂ ‘ವೇಷಕ್ಕೆ ನೀನು ಬೇಡ’ ಎಂದು ಒಂದು ದಿನವೂ ಹೇಳಿದ್ದಿಲ್ಲ. ಅವರಿಗೆ ಕೋಪ ಬರುವುದೇ ಅಪರೂಪ. ಬಂದರೆ ಮೌನ.. ದಿವ್ಯ ಮೌನ. 

          ಅಪಾರವಾದ ಪುರಾಣ ಜ್ಞಾನ ಅವರ ವಿಶೇಷತೆ. ತಮ್ಮ ವೃತ್ತಿ ಒತ್ತಡಗಳ ಮಧ್ಯೆ ಯಾವಾಗ ಅಧ್ಯಯನ ಮಾಡುತ್ತಾರೋ ಗೊತ್ತಿಲ್ಲ. ಒಮ್ಮೆ ಓದಿದರೆ ಸಾಕು, ಆಟ ಒಮ್ಮೆ ನೋಡಿದರೆ ಸಾಕು. ಗ್ರಹಿಸಿಕೊಳ್ಳುವ ಸೂಕ್ಷ್ಮಮತಿತ್ವ. ಯಾವ ಪ್ರಸಂಗವನ್ನು ಹೇಗೆ ಆಡಿಸಬೇಕು, ಯಾವ ಸನ್ನಿವೇಶವನ್ನು ಸೇರಿಸಬೇಕು, ಯಾವ ಕಲಾವಿದರಿಗೆ ಎಂತಹ ಪಾತ್ರ ಎಂಬ ಸ್ಪಷ್ಟತೆ ಅವರಿಗಿದೆ. ಹಾಗಾಗಿ ಹೊಸ ಪ್ರಸಂಗಗಳು ಮೇಳದಲ್ಲಿ ಯಶಸ್ಸಾಗಿವೆ.

          ಸಂಪಾಜೆಯ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಆಯೋಜಿಸುವ ಯಕ್ಷೊತ್ಸವದ ಇಪ್ಪತ್ತೈದರ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿತ್ತು. ಪ್ರಸಂಗ ನಿಗದಿ ಮಾಡಿದ ಬಳಿಕದ ಪಾತ್ರ, ಸನ್ನಿವೇಶ ಸಂಯೋಜನೆಗಳಿಗೆ ಶ್ಯಾಮ ಭಟ್ಟರ ಜತೆ ಸೇರಿಕೊಳ್ಳುತ್ತಿದ್ದೆ. “ಯಕ್ಷೊತ್ಸವವನ್ನು ಯಾರೂ ಮಾಡದ ರೀತಿಯಲ್ಲಿ ಆಚರಿಸಬೇಕು. ರಂಗದ ಸನ್ನಿವೇಶಗಳಲ್ಲಿ ಪರಿಷ್ಕಾರ ಮಾಡಬೇಕು,” ಎನ್ನುವ ಆಶಯವನ್ನು ಇಟ್ಟುಕೊಂಡಿದ್ದರು. ಎಲ್ಲಾ ಕಲಾವಿದರು ಶ್ಯಾಮ ಭಟ್ಟರ ಆಶಯವನ್ನು ಅರ್ಥಮಾಡಿಕೊಂಡಿದ್ದಾರೆ. ಒಂದು ಯಕ್ಷೋತ್ಸವದಲ್ಲಿ ಮೂರ್ನಾಲ್ಕು ಪ್ರಸಂಗಗಳು ಪ್ರದರ್ಶನಗಳಾಗುತ್ತಿವೆ.  ಅದರಲ್ಲಿ ಒಂದು ಪ್ರಸಂಗವು ಮೇಳದ ಮುಂದಿನ ತಿರುಗಾಟಕ್ಕಿರುವ ಪ್ರಸಂಗ.

          ಯಕ್ಷೊತ್ಸವದಲ್ಲಿ ಭಾಗವಹಿಸಿದ ಕಲಾವಿದರಿಗೆ ತುಂಬು ಆತಿಥ್ಯ, ಆಟ ನೋಡಲು ಬಂದ ಪ್ರೇಕ್ಷಕರಿಗೂ ಉಪಾಹರ, ಭೋಜನ. ಕಲಾವಿದರಿಗೆ ಕೈತುಂಬಾ ಸಂಭಾವನೆ. ಕಲಾವಿದರ ಸ್ಥಿತಿ-ಗತಿಯ ಅರಿವಿದ್ದುದರಿಂದ ಕಲಾವಿದರು ಬದುಕಿನಲ್ಲಿ ಸೋಲಬಾರದೆಂಬ ನಿಲುವು. ಯಕ್ಷೊತ್ಸವದಲ್ಲಿ ಕಲಾವಿದರ ಆಯ್ಕೆಯನ್ನು ಅವರೇ ಮಾಡುತ್ತಾರೆ. ಒಮ್ಮೆ ಅವರ ವೇಷದ ಪಟ್ಟಿಗೆ ಒಬ್ಬ ಕಲಾವಿದ ಸೇರಿಕೊಂಡರೆ ಮುಗಿಯಿತು, ಮತ್ತೆ ಪ್ರತೀ ವರುಷವೂ ಕರೆ. ಸೂರಿಕುಮೇರು ಗೋವಿಂದ ಭಟ್ಟರಂತಹ ಹಿರಿಯ ಕಲಾವಿದರಲ್ಲಿ ಪ್ರೀತಿ. ಅವರ ಸಲಹೆಯನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತಾರೆ.

          ಸಹಕಾರ ಮನೋಭಾವ ಶ್ಯಾಮ ಭಟ್ಟರ ಗುಣ. ಅದರಲ್ಲಿ ಅವರಿಗೆ ತುಂಬಾ ತೃಪ್ತಿ. ‘ಕಲಾವಿದ ಹಸಿದಿರಬಾರದು. ಸೋಲಬಾರದು’ ಎಂದು ಕೇಳಿದಾಗಲೆಲ್ಲಾ ಸಹಕಾರವನ್ನು ಮಾಡುವ ಉದಾರಿ. ಅವರ ಈ ಗುಣವನ್ನು ಕಲಾವಿದರಾದ ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು, ಗೌರವಿಸಬೇಕು.

(ಚಿತ್ರ : ಉದಯ ಕಂಬಾರ್, ನೀರ್ಚಾಲ್ )

(ಚಿತ್ರವನ್ನು ಗಮನಿಸಿ : ಶ್ರೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ಹಿರಿಯ ಸ್ತ್ರೀ ಪಾತ್ರಧಾರಿ ಶ್ರೀ ಪಾತಾಳ ವೆಂಕಟ್ರಮಣ ಭಟ್ಟರ ‘ದಿತಿ’ಯ ಪಾತ್ರ.)

 

No comments:

Post a Comment