Monday, August 3, 2020

ಪದಯಾನ’ - ಪದ್ಯಾಣರ ಸ್ವಗತ – (ಎಸಳು 8)

 (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)

ಹಿರಿದಾದ ಕುಟುಂಬ : ಸುಳ್ಯ ತಾಲೂಕಿನ ಕಲ್ಮಡ್ಕದ ಗೋಳ್ತಾಜೆಗೆ ಬರುವಾಗ ಅಜ್ಜನಿಗೆ ಅರುವತ್ತು ವರುಷ ಮೀರಿರಬಹುದು. ಕೃಷಿಯ ಹೊಣೆ ಅಪ್ಪನ ಹೆಗಲೇರಿತು. ತನುಶ್ರಮವನ್ನು ಲೆಕ್ಕಿಸದೆ ದುಡಿದರು. ಅಜ್ಜ ಹಾಕಿದ ಹಾದಿಯಲ್ಲಿ ಮುನ್ನಡೆದರು. 

ಇನ್ನೋರ್ವ ಚಿಕ್ಕಪ್ಪ ಶಂಕರನಾರಾಯಣ ಭಟ್. ಇವರು ಅವಿವಾಹಿತ. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಪದವಿ ವ್ಯಾಸಂಗ, ಸಂಗೀತಾಸಕ್ತ. ಕಾಂಚನ ಸುಬ್ರಹ್ಮಣ್ಯಂ ಅಯ್ಯರ್ ಅವರ ಶಿಷ್ಯ. ಒಂದಷ್ಟು ದಿವಸ  ಕಾಂಚನದಲ್ಲಿ, ಮತ್ತೊಂದಷ್ಟು ದಿವಸ ಮನೆಯಲ್ಲಿರುತ್ತಿದ್ದರು. ಯಾವುದೋ ಒಂದು ಮನಸ್ತಾಪವು ಅವರ ಚಿತ್ತವನ್ನು ಕೆಡಿಸಿತ್ತು. ತನ್ನ ಸಾವಿಗೆ ತಾನೇ ಕಾರಣರಾಗಿ ಇಹಲೋಕ ತ್ಯಜಿಸಿದರು. ಆಗವರು ಇಪ್ಪತ್ತೆಂಟರ ಜವ್ವನ. 

          ಮತ್ತೊಬ್ಬ ಚಿಕ್ಕಪ್ಪ ಗೋಪಾಲಕೃಷ್ಣ. ಗೋಳ್ತಾಜೆಯ ಆದಿಮನೆಯಲ್ಲಿ ವಾಸವಾಗಿದ್ದಾರೆ. ಅವರಿಗೆ ಮಹೇಶ್ ಮತ್ತು ಮಾನಸ - ಇಬ್ಬರು ಮಕ್ಕಳು. ಇವಳು ಕುಟುಂಬದ ಏಕೈಕ ಮುದ್ದಿನ ಹೆಣ್ಣು ಮಗಳು. 
          ಅಜ್ಜ ಗೋಳ್ತಜೆಯಲ್ಲಿ ಹನ್ನೆರಡು ಎಕ್ರೆ ಜಾಗ ಮೊದಲು ಮಾಡಿದ್ರಲ್ಲಾ, ಅದಕ್ಕೆ ಒತ್ತಿನ ಹದಿನಾಲ್ಕು ಎಕ್ರೆ ಜಾಗವನ್ನು ಪುನಃ ಖರೀದಿಸಿ ಕೃಷಿ ಭೂಮಿಯನ್ನು ವಿಸ್ತರಿಸಿದರು. ಹೊಸ ಜಾಗ ಖರೀದಿಗೆ ನಲವತ್ತು ಸಾವಿರ ರೂಪಾಯಿ ವೆಚ್ಚವಾಗಿತ್ತು. 
          ಒಂದೆಡೆ ಅಜ್ಜನ ಆರೋಗ್ಯ ಹದಗೆಡುತ್ತಿತ್ತು..... ಅಜ್ಜನ ದಿನ ಕಳೆಯಿತು.

                                                             *******

ನಾವು ಐವರು ಸಹೋದರರೂ ಕೃಷಿ ಹೊರತುಪಡಿಸಿ ಮಿಕ್ಕ ಕ್ಷೇತ್ರಗಳಲ್ಲಿ ಆಸಕ್ತರು. ಸಾಮಾಜಿಕವಾಗಿ ಮಾನ್ಯರು. ದೊಡ್ಡಣ್ಣ ನಾರಾಯಣ ಭಟ್ಟರು ಓದಿದ್ದು ಎಂ.ಎ. ಪದವಿ. ಚೊಕ್ಕಾಡಿ ಶಾಲೆಯಲ್ಲಿ ಅಧ್ಯಾಪಕನಾಗಿ ನಿಯುಕ್ತಿ. ನಿವೃತ್ತಿ ತನಕ ಒಂದೇ ಶಾಲೆಯಲ್ಲಿ ಸೇವೆ. 

ಪರಮೇಶ್ವರಣ್ಣ ಓದಿದ್ದು ಒಂಭತ್ತನೇ ತರಗತಿ. ಆತನಿಗೂ ಶೈಕ್ಷಣಿಕವಾಗಿ ಉನ್ನತ ನಿರೀಕ್ಷೆಯಿರಲಿಲ್ಲ. ಆಗ ಬೆಳ್ಳಾರೆಯಲ್ಲಿ ಮುದ್ರಣಾಲಯವಿರಲಿಲ್ಲ. ಅವನಲ್ಲಿ ಹೊಸ ಉದ್ಯಮದ ಪ್ರಸ್ತಾಪ ಬಂದಾಗ ಸಂತೋಷದಿಂದ ಒಪ್ಪಿದ್ದ. ಎಡನೀರು ಶ್ರೀಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿದ್ದರು. ಪರಮೇಶ್ವರಣ್ಣನಿಗೆ ಹೊಸ ಉದ್ಯಮ ಕೈಹಿಡಿಯಿತು. 

ನಾನು ಮೂರನೇಯವನು. ನನ್ನ ಬಾಲ್ಯದ ಕತೆಯನ್ನು ಕೇಳಿದಿರಲ್ಲಾ. ಹೇಳಲು ಇನ್ನೂ ಇದೆ! ನಾಲ್ಕನೆಯವನು ಗೋಪಾಲಕೃಷ್ಣ. ಚೆಸ್ ಕ್ರೀಡೆಯಲ್ಲಿ ಸಾಹಸಿ. ಅಂತಾರಾಷ್ಟ್ರೀಯ ಖ್ಯಾತಿಯ ಸಾಧಕ. ಕೃಷಿಯಲ್ಲೂ ಆಸಕ್ತ. ಕೊನೆಯವನು ಜಯರಾಮ, ಪದವೀಧರ. ಬೆಂಗಳೂರಿನಲ್ಲಿ ವಿವಿಧ ಉದ್ಯಮಗಳನ್ನು ಮಾಡಿ, ಪ್ರಕೃತ ಯಕ್ಷಗಾನವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದಾನೆ. 

 ಒಂದು ಹಂತದಲ್ಲಿ ಗೋಳ್ತಾಜೆಯ ಆಸ್ತಿಯು ಅಪ್ಪ, ಚಿಕ್ಕಪ್ಪರ ಮಧ್ಯೆ ಪಾಲಾಯಿತು. ಎಲ್ಲರೂ ಅನ್ಯೋನ್ಯವಾಗಿದ್ದೆವು. ಒಂದೇ ಮನಸ್ಸು. ಕ್ರಮೇಣ ನಾನು ಪ್ರತ್ಯೇಕ ಮನೆ ಮಾಡಿದೆ. ಮೊದಲೇ ಖರೀದಿಸಿದ ಕುಕ್ಕುಜಡ್ಕ ಜಾಗದಲ್ಲಿ ಅಣ್ಣ ವಸತಿಯನ್ನು ಸ್ಥಳಾಂತರಿಸಿದ. ಪರಮೇಶ್ವರಣ್ಣನು ಬೆಳ್ಳಾರೆಯಲ್ಲಿ ನೆಲೆಯಾದ. ಜಯರಾಮನೂ ಪುತ್ತೂರಿನ ಸನಿಹ ಮನೆ ಮಾಡಿದ. ಹಿರಿ ಮನೆಯಲ್ಲಿ ಚಿಕ್ಕಪ್ಪ ವಾಸವಾಗಿದ್ದಾರೆ. 

ಪದ್ಯಾಣದಲ್ಲಿ ಸಾವಿರ ಮುಡಿ ಭತ್ತದ ಗೇಣಿ ಬರುತ್ತಿತ್ತಲ್ಲಾ. ಅಷ್ಟು ಶ್ರೀಮಂತಿಕೆ, ಆಢ್ಯತೆ. ಗೋಳ್ತಾಜೆಗೆ ಬಂದರೂ ಅಜ್ಜ ಆಗಾಗ್ಗೆ ಪದ್ಯಾಣಕ್ಕೆ ಹೋಗಿ ಸಣ್ಣಜ್ಜನಿಗೆ ಮಾರ್ಗದರ್ಶನ ನೀಡುತ್ತಿದ್ದರು. ಅಷ್ಟು ಹೊತ್ತಿಗೆ ಉಳುವವನೇ ಹೊಲದೊಡೆಯ ಕಾನೂನು ಜ್ಯಾರಿಯಾಯಿತು. ಪದ್ಯಾಣದಲ್ಲಿದ್ದ ಕೆಲಸಗಾರರೆಲ್ಲ ಡಿಕ್ಲರೇಶನ್ ಕೊಟ್ರು. ಭೂಮಿ ಅವರ ಪಾಲಾಯಿತು. ಸಣ್ಣಜ್ಜ ಅಧೀರರಾದರು. ಪಾಲಿಗೆ ಬಂದುದು ಪಂಚಾಮೃತ ಎಂದು ಅಜ್ಜ ಸಮಾಧಾನ ಹೇಳಿದ್ದರು. 

No comments:

Post a Comment