Monday, August 24, 2020

‘ಪದಯಾನ’ - ಪದ್ಯಾಣರ ಸ್ವಗತ – (ಎಸಳು 29)

  (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ)

ನನ್ನ ಹಾಡಿನ ಮೊದಲ ವಿಮರ್ಶಕಿ:

          ಕಾಸರಗೋಡು ತಾಲೂಕು ಪೈವಳಿಕೆ ಗ್ರಾಮದ ಕುಂಡೇರಿ (ಕಾಂಚನ) ಮನೆತನ. ಪರಮೇಶ್ವರ ಭಟ್ಟ, ಹೊನ್ನಮ್ಮ ದಂಪತಿಗೆ ಆರು ಗಂಡು, ನಾಲ್ವರು ಹೆಣ್ಣುಮಕ್ಕಳು. ಅವರಲ್ಲಿ ಮೂರನೇಯವರು ಸಾವಿತ್ರಿ. ಅಮ್ಮ.  ತಿರುಮಲೇಶ್ವರ ಭಟ್ಟರನ್ನು 1935ರಲ್ಲಿ ವಿವಾಹವಾಗಿ ಪದ್ಯಾಣವನ್ನು ಬೆಳಗಿದರು.

          ನಾವು ಐವರು ಮಕ್ಕಳೆಂದರೆ ಅಮ್ಮನಿಗೆ ಪ್ರೀತಿ. ಮಕ್ಕಳು ಎಷ್ಟು ತಪ್ಪು ಮಾಡಿದರೂ ಮಕ್ಕಳ ಪರವಾಗಿಯೇ ಮಾತನಾಡುವವರು. ತನ್ನ ಮಕ್ಕಳು ಕೈತುಂಬಿಕೊಡುವ ಉದ್ಯೋಗದಲ್ಲಿದ್ದರೂ ಅವರು ಇಷ್ಟಪಟ್ಟದ್ದು ಆಸ್ತಿಯನ್ನಲ್ಲ, ಹಣವನ್ನಲ್ಲ! ಯಕ್ಷಗಾನವನ್ನು.

          ಆಟ, ಕೂಟ ಅಂದರೆ ಸಾಕು ಅಮ್ಮನ ಕಿವಿಯರಳುತ್ತಿತ್ತು. ಭಾಗವಹಿಸಬೇಕೆಂಬ ತುಡಿತ. ಭಾಗವಹಿಸಿದಾಗಲೆಲ್ಲಾ ಮೊದಲ ಸಾಲಿನ ಆಸನವನ್ನೇ ಆಯ್ದುಕೊಳ್ಳುತ್ತಿದ್ದರು. ರಂಗದ ಪ್ರತಿಯೊಂದು ಮಾತನ್ನೂ ಗಮನವಿಟ್ಟು ಕೇಳುತ್ತಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಕಲಾವಿದರನ್ನು ಶ್ಲಾಘಿಸಿ ಬರುತ್ತಿದ್ದರು.

          ಅಮ್ಮನಿಗೆ ರಾಗ, ತಾಳ, ಶ್ರುತಿ..ಗಳ ಜ್ಞಾನವಿತ್ತು. ಮನೆಯಲ್ಲಿ ನಿತ್ಯ ಭಜನೆ ನಡೆಯುತ್ತಿತ್ತು. ಎಲ್ಲಾ ಸದಸ್ಯರನ್ನು ದೇವರ ಕೋಣೆಯಲ್ಲಿ ಕೂರಿಸಿ ಭಜನೆ ಮಾಡುವ ಸಂಪ್ರದಾಯವಿತ್ತು. ಕೆಲವೊಂದು ಭಜನೆಯನ್ನು ಅವರೇ ಹಾಡಬೇಕು. ಅದನ್ನು ಬೇರೆಯವರು ಹಾಡುವಂತಿಲ್ಲ. ನಾನು ಬಾಲ್ಯದಲ್ಲಿ ಭಜನೆಯಲ್ಲಿ ಹಾಡುತ್ತಿದ್ದೆ. ಆದರೆ ಕೆಲವೊಮ್ಮ ಗಮನ ಸೆಳೆಯದಂತೆ ಗೈರು ಹಾಜರಾಗುತ್ತಿದ್ದೆ...

          ಅಮ್ಮನಿಗೆ ಕಲಾವಿದರೆಂದರೆ ಪ್ರೀತಿ. ಅವರು ಉಣ್ಣುವುದೆಂದರೆ ಖುಷಿ. ಅವರನ್ನು ಉಪಚರಿಸಿದಷ್ಟೂ ಕಡಿಮೆಯೇ. ಅವರವರ ಇಷ್ಟದ ತಿಂಡಿ, ಪಾನೀಯ ಮಾಡಿಕೊಡದಿದ್ದರೆ ನಿದ್ದೆ ಬಾರದು. ಕಲಾವಿದರು ಏನು ಕೇಳಿದರೂ ಕೊಡುವಂತಹ ಧಾರಾಳಿ.

          ನಾನಿದ್ದ ಮೇಳವು ಊರಿಗೆ ಬಂದಾಗ ಅಮ್ಮ ವಾರಮುಂಚಿತವಾಗಿ ಸಿದ್ಧವಾಗುತ್ತಿದ್ದರು. ಮೊದಲ ಸಾಲಿನ ಪ್ರೇಕ್ಷಕಿಯಾಗಿ ಗಮನ ಸೆಳೆಯುತ್ತಿದ್ದರು. ಅನಾರೋಗ್ಯವಿದ್ದರೂ ತೋರ್ಪಡಿಸದೆ, ಬೇಕಾದರೆ ಮುಂಚಿತವಾಗಿ ಸ್ವಲ್ಪ ಹೆಚ್ಚೇ ಔಷಧಿಯನ್ನು ಸೇವಿಸಿ ಆಟಕ್ಕೆ ಸಜ್ಜಾಗುತ್ತಿದ್ದರು. ರಾತ್ರಿಯಿಂದ ಬೆಳಗ್ಗಿನ ತನಕ ಆಟ ನೋಡಿ, ಹಗಲಿಡೀ ದುಡಿಯುವ ಹೊಣೆಯರಿತ ಗೃಹಿಣಿ. ಮರುದಿವಸ ಆಟ ಇದ್ದರೆ ಅದಕ್ಕೂ ಹಾಜರ್!

          ನಾನು ಆಟ ಕಳೆದು ನಿದ್ದೆಕಣ್ಣಿನಿಂದ ಮನೆಸೇರಿದಾಗ ಅಮ್ಮ ಜಗಲಿಯಲ್ಲಿ ಸ್ವಾಗತಕ್ಕೆ ನಿಂತಿರುತ್ತಾರೆ! ಆಟದ ಸುದ್ದಿ ಹೇಳಿದ ಬಳಿಕವೇ ವಿಶ್ರಾಂತಿ. ಪ್ರಸಂಗ ಯಾವುದು, ಯಾವ ಕಲಾವಿದರಿಂದ ಎಂತಹ ಪಾತ್ರ, ಯಾರೆಲ್ಲ ರಜೆ, ಅವರ ಬದಲಿಗೆ ಬೇರೆ ಯಾರು ಪಾತ್ರ ಮಾಡಿದ್ರು.. ಈ ವಿಷಯಗಳನ್ನೆಲ್ಲಾ ಅವರಿಗೆ ಹೇಳಲೇ ಬೇಕು. ಉದಾಸೀನ ಮಾಡಿದರೆ ಬಿಡರು. ಆಗಾಗ್ಗೆ ಬಂದು ಪ್ರಶ್ನಿಸಿ ಉತ್ತರವನ್ನು ಎಳೆಯುತ್ತಿದ್ದರು.

          ಅವರಿಗೆ ಪ್ರಸಂಗ ಮಾಹಿತಿ ಸಾಕಷ್ಟಿತ್ತು. ನಾನಿರುವ ಮೇಳದ ಆಟಕ್ಕೆ ಅಮ್ಮ ತಪ್ಪಿಸುತ್ತಿರಲಿಲ್ಲ. ಸಮಯಾವಕಾಶದ ಕೊರತೆ ಇದ್ದಾಗ ಅಥವಾ ವೇಷಧಾರಿಗಳು ಅರ್ಥವನ್ನು ಮುಂದುವರಿಸಿದಾಗ ಸಹಜವಾಗಿ ಪದ್ಯ ಹಾರಿಸಬೇಕಾಗುತ್ತದೆ. ಆಟದ ಗುಂಗಿನಲ್ಲಿ ಹಾರಿಸಿದ ಪದ್ಯಗಳು ನೆನಪಿನಲ್ಲಿರಲು ಕಷ್ಟ. ಅಮ್ಮ ಹಾಗಲ್ಲ. ಆ ಪದ್ಯವನ್ನು ಯಾಕೆ ಹಾರಿಸಿದ್ದು, ಅಷ್ಟು ಒಳ್ಳೆಯ ಪದ್ಯವನ್ನು ಹಾಡಬೇಕು, ಅದು ಇಂತಹ ರಾಗದಲ್ಲಿದ್ದರೆ ಒಳ್ಳೆಯದು...ಹೀಗೆ ವಿಮರ್ಶೆಗಳ ಸುರಿಮಳೆ. ಈ ಹಿನ್ನೆಲೆಯಲ್ಲಿ ಅಮ್ಮ ನನ್ನ ಹಾಡಿನ ಮೊದಲ ವಿಮರ್ಶಕಿ.

          ಪ್ರತಿ ವರುಷವೂ ಸಂಪಾಜೆಯಲ್ಲಿ ಯಕ್ಷೊತ್ಸವ ನಡೆಯುತ್ತಿತ್ತಷ್ಟೇ. ಅದು ನಡೆಯುವ ದಿನ ಸನ್ನಿಹಿತವಾಗುತ್ತಿದ್ದಂತೆ ಅಮ್ಮ ಬೆನ್ನು ಬಿಡರು! ಆಟದ್ದೇ ಸುದ್ದಿ. ಪ್ರಸಂಗದಿಂದ ಶುರುವಾಗಿ ಕಲಾವಿದರ ಪಾತ್ರದ ವರೆಗಿನ ಸುದ್ದಿ ಹೇಳಲೇಬೇಕು. ಯಕ್ಷೊತ್ಸವ ಮುಗಿಯುವ ತನಕ ಅವರಿಗೆ ಮಾತಿನ ಉತ್ಸಾಹ.

          ಆ ಸಮಯದಲ್ಲಿ ಆರೋಗ್ಯ ಕೈಕೊಡಬಾರದು ಎಂದು ಬಹಳ ಜಾಗ್ರತೆಯಿಂದ ಕಾಪಾಡಿಕೊಳ್ಳುತ್ತಿದ್ದರು. ಇಪ್ಪತ್ತನಾಲ್ಕು ಗಂಟೆಗಳ ಕಾಲ ಕುಳಿತುಕೊಳ್ಳಬೇಕಲ್ಲಾ. ಆ ಶಕ್ತಿ ನನ್ನಲ್ಲಿ ಉಂಟೋ, ಇಲ್ವೋ ಎನ್ನುವ ಭಯ ಕೊನೆಯ ವರುಷಗಳಲ್ಲಿ ಕಾಡುತ್ತಿತ್ತು.

          ಮನೆಗೆ ಬರುವ ಪತ್ರಿಕೆಗಳ ಮೊದಲ ಓದುಗರು. ಉದಯವಾಣಿ ಪತ್ರಿಕೆಯಲ್ಲಿ ಬರುವ ಯಕ್ಷಗಾನ ಸಂಬಂಧಿ ಪುಟವನ್ನು ಮೊದಲು ಓದುತ್ತಿದ್ದರು. ಅಂದು ಮೇಳದ ಆಟ ಎಲ್ಲಿ ಎಂದು ನೆನಪಿಟ್ಟುಕೊಳ್ಳುತ್ತಿದ್ದರು. ಯಕ್ಷಗಾನದ ಕುರಿತ ಲೇಖನಗಳನ್ನು ಆಸಕ್ತಿಯಿಂದ ಓದುತ್ತಿದ್ದರು.

          2014 ನವೆಂಬರ್ 21ರಂದು ಕಲ್ಮಡ್ಕದಲ್ಲಿ ಹೊಸನಗರ ಮೇಳದ ಪಾದ ಪ್ರತೀಕ್ಷಾ ಆಟ. ದೇಹಾರೋಗ್ಯ ಕ್ಷೀಣಿಸಿತ್ತು. ಮಗ ಕಾರ್ತಿಕೇಯ ಅವರನ್ನು ಆಟದ ಮಧ್ಯದಿಂದ ಮನೆಗೆ ಕರೆದುಕೊಂಡು ಬಂದಿದ್ದ. ಆಟ ಪೂರ್ತಿ ನೋಡಲಾಗಲಿಲ್ಲವಲ್ಲಾ ಎನ್ನುವ ಮರುಕ ಅವರಲ್ಲಿತ್ತು.

          2015, ಜನವರಿ 1ರಂದು ಸಾವಿತ್ರಿ ಅಮ್ಮ ದೈವಾಧೀನರಾದರು. ಅವರು ಮರಣಿಸುವ ಮುನ್ನಾ ದಿನ ಹೇಳಿದ ಮಾತು ಏನು ಗೊತ್ತೇ, ನನಗೆ ಪಾದ ಪ್ರತೀಕ್ಷಾ ಪ್ರಸಂಗವನ್ನು ಪೂರ್ತಿ ನೋಡಲಾಗಲಿಲ್ಲ. ಆಟ ನೋಡದೆ ಕಥೆ ಪೂರ್ತಿ  ಅರ್ಥವಾಗಲಿಲ್ಲ. ನಾನಿನ್ನು ಆ ಪ್ರಸಂಗವನ್ನು ಯಾವಾಗ ನೋಡುವುದು..?

          ಅಮ್ಮನ ಈ ಆಶೆಯನ್ನು ಪೂರೈಸಲಾಗಲಿಲ್ಲ. ಕೊರಗು ಬಾಧಿಸುತ್ತಿದೆ. ಯಕ್ಷಗಾನವನ್ನು ಮಕ್ಕಳಷ್ಟೇ ಪ್ರೀತಿಸುವ ನನ್ನಮ್ಮ ನನ್ನ ಬದುಕಿನ ರೂವಾರಿ. ಬಾಲ್ಯದ ತುಂಟಾಟವನ್ನು ಸಹಿಸಿದ ಕ್ಷಮಾಶೀಲೆ. ಮಗನ ಭವಿಷ್ಯದತ್ತ ಸ್ಪಷ್ಟ ನಿಲುವಿದ್ದ ಅಮ್ಮ, ಭಾಗವತಿಕೆಯ ಉತ್ಕರ್ಷಕ್ಕೆ ಖುಷಿ ಪಟ್ಟವಳು.

          ಅಮ್ಮನ ಕೊನೆ ಆಸೆ ಈಡೇರಿಸಲು ಅಸಾಧ್ಯವಾದರೂ, ನನ್ನ ಭಾಗವತಿಕೆಯ ಮೂಲಕ ಅವರನ್ನು ಸಂತೋಷಪಡಿಸಿದ್ದೇನೆ ಎನ್ನುವ ಸಂತೃಪ್ತಿಯಿದೆ.

 ಪದಯಾನ ಕೃತಿಯ ಸಂಪಾದಕ ನಾ. ಕಾರಂತ ಪೆರಾಜೆಯ ಬ್ಲಾಗಿನಲ್ಲೂ ಓದಬಹುದು - yakshamatu.blogspot.com

 

 

 

No comments:

Post a Comment