(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)
ಸುರತ್ಕಲ್ ಮೇಳದ ನಂಟು :
ಶ್ರೀ ಮಹಮ್ಮಾಯೀ ಕೃಪಾಪೋಶಿತ ಯಕ್ಷಗಾನ ಮಂಡಳಿ, ಸುರತ್ಕಲ್ ಮೇಳದಲ್ಲಿ ಸಂಗೀತಗಾರರಾಗಿದ್ದ ಉಜಿರೆ ವಾಸುದೇವ ಆಚಾರ್ಯರ ಸ್ಥಾನ ಬರಿದಾಗಿತ್ತು. ಬದಲಿ ಸಂಗೀತಗಾರರೊಬ್ಬರ ಹುಡುಕಾಟದಲ್ಲಿದ್ದರು. ಈ ಜವಾಬ್ದಾರಿಯು ವೇಣೂರು ಸುಂದರ ಆಚಾರ್, ಶಿವರಾಮ ಜೋಗಿಯ ಹೆಗಲಿಗೇರಿತ್ತು. ಇವರ ಮೂಲಕ ಸುರತ್ಕಲ್ ಮೇಳ ಸೇರಿದೆ. ಆಗ ಕಸ್ತೂರಿ ವಾಸುದೇವ ಪೈಗಳು ಮೇಳದ ಯಜಮಾನರಾಗಿದ್ದರು. ಅವರ ಸಹೋದರ ವರದರಾಯ ಪೈಗಳ ಮೇಳ ಉಸ್ತುವಾರಿಕೆ.
‘ಸಂಬಳ ಎಷ್ಟು ಕೊಡುತ್ತೀರಿ, ನಿತ್ಯ ವೆಚ್ಚಕ್ಕೆ ಏನು ದಾರಿ’ ಎಂದು ಯಜಮಾನರಲ್ಲಿ ಪೂರ್ವ ಮಾತುಕತೆ ಮಾಡಿಕೊಂಡಿಲ್ಲ. ‘ಮೇಳದಲ್ಲಿ ಸರ್ವೀಸ್ ಆಗದೆ ಸಂಬಳ ಕೇಳಬಾರದು’ ಇದು ತಂದೆಯವರ ನಿಲುವು. ಮೇಳದಿಂದ ದಿವಸಕ್ಕೆ ಎರಡೋ ಮೂರು ರೂಪಾಯಿ ಕೈವೆಚ್ಚಕ್ಕೆ ಸಿಗುತ್ತಿತ್ತಷ್ಟೇ. ಸಂಬಳ ಅವರು ಕೊಟ್ಟಿಲ್ಲ, ನಾನು ಕೇಳಿಲ್ಲ! ನನ್ನ ಸಂಬಳವನ್ನು ತಂದೆಯವರು ನಿಭಾಯಿಸುತ್ತಿದ್ದರು! ‘ಮೇಳಕ್ಕೆ ಹೋಗದೆ ಉದ್ಧಾರವಾಗದು’ ಎಂಬ ಅಚಲತೆ ತಂದೆಯವರಲ್ಲಿತ್ತು. ಮಗ ಬೆಳೆಯಬೇಕೆಂಬ ನೆಲೆಯಲ್ಲಿ ಸಂಬಳಕ್ಕೆ ಅವರೂ ಒತ್ತಾಯಿಸಲಿಲ್ಲ.
ಕುಂಬ್ರ, ಪುತ್ತೂರು, ಸುಳ್ಯ.. ಹೀಗೆ ಆಟವಾಗುತ್ತಿದ್ದರೂ ಮನೆಗೆ ಹೋಗುತ್ತಿರಲಿಲ್ಲ. ಆಗ ಸಾರಿಗೆ, ಫೋನ್ ಸಂಪರ್ಕ ವಿರಳ. ಪುತ್ತೂರಿಂದ ಮನೆಗೆ ಹೋಗಬೇಕಾದರೆ ಪಂಜ, ಕರಿಕ್ಕಳಕ್ಕೆ ಹೋಗಿ ನಂತರ ನಡೆದು ಕಲ್ಮಡ್ಕ ಸೇರಬೇಕು. ಇದು ತ್ರಾಸದ ಕೆಲಸ. ಮೂರ್ನಾಲ್ಕು ತಿಂಗಳಿಗೊಮ್ಮೆ ಹೋದರೂ ಒಂದು ದಿವಸವಷ್ಟೇ. ಊಟ ಮಾಡುವುದು, ಹೊರಡುವುದು! ಆಗ ನನ್ನ ಹೆಸರಿನೊಂದಿಗೆ ‘ಪದ್ಯಾಣ’ ಎನ್ನುವ ಮನೆತನದ ಹೆಸರು ಹೊಸೆದಿರಲಿಲ್ಲ.
ಎಂಟು ವರುಷದ ಬಳಿಕ ಸಂಬಳ : ಮೇಳಕ್ಕೆ ಸೇರಿದ ಆರಂಭದಲ್ಲಿ ಮೂರು ತಿಂಗಳು ಅಗರಿ ಶ್ರೀನಿವಾಸ ಭಾಗವತರಿದ್ದರು. ನಾನು ಒತ್ತು ಮದ್ದಳೆಗೆ. ಅವರು ರಂಗದಲ್ಲಿ ಒಮ್ಮೆ ಚೌತಾಳದಲ್ಲಿ ಪದ್ಯ ಹೇಳಿದರು. ನನಗೆ ಚೌತಾಳದ ಪಾಠವಾಗಿರಲಿಲ್ಲ. ಅಂದು ಹೇಗೋ ಸುಧಾರಣೆಯಾಯಿತು. ‘ಎಂತ ಬಾರಿಸುತ್ತೆ ಮಾರಾಯ’ ಗೊಣಗಾಡಿದರಷ್ಟೇ. ಕಲಿಯಬೇಕೆನ್ನುವ ಆಸೆಯಿತ್ತು. ಅನ್ಯ ಕಾರಣಗಳಿಂದ ಸಾಧ್ಯವಾಗಲಿಲ್ಲ. ನನಗೆ ಅವರ ಪದ್ಯದ ನಡೆ, ರಾಗ.. ರಂಗಸೂಕ್ಷ್ಮಗಳನ್ನು ಗ್ರಹಿಸುವ ಬೌದ್ಧಿಕಶಕ್ತಿ ಇದ್ದಿರಲಿಲ್ಲ.
ಮೂರು ತಿಂಗಳ ಬಳಿಕ ಅಗರಿ ರಘುರಾಮರು ಮುಖ್ಯ ಭಾಗವತರಾದರು. ಆಗ ನನಗೆ ಹದಿನೆಂಟೋ ಹತ್ತೊಂಭತ್ತೋ ವರುಷ ಪ್ರಾಯ. ದಿನ ಸರಿದಂತೆ ಹತ್ತಿರವಾದೆವು. ಸಂಗೀತದ ಬಳಿಕ ಒಂದು ಗಂಟೆ ಪ್ರಸಂಗದ ಪದ್ಯಗಳನ್ನು ಹೇಳಲು ಅವಕಾಶ ಕೊಡುತ್ತಿದ್ದರು. ಅವರದು ನಿಶ್ಚಿತವಾದ ನಡೆ, ರಾಗ. ಪ್ರಸಂಗದ ಪದ್ಯಗಳೆಲ್ಲಾ ಕಂಠಸ್ಥ. ರಾಗಕ್ಕಿಂತಲೂ ‘ಅಗರಿ ಮಟ್ಟು’ ಎದ್ದು ಕಾಣುತ್ತಿತ್ತು. ಯಾವುದೇ ಹೊಸ ಪ್ರಸಂಗವಿರಲಿ, ಒಂದೆರಡು ದಿನದಲ್ಲಿ ಬಾಯಿಪಾಠವಾಗಿ ಬಿಡುತ್ತಿತ್ತು.
ಮೇಳದ ತಿರುಗಾಟವು ನಾಲ್ಕೈದು ವರುಷವಾಗುವಾಗ ಜಿಗುಪ್ಸೆ ಬಂತು. ಸಂಗೀತ ಹೇಳಿ, ಒತ್ತುಮದ್ದಳೆ ಬಾರಿಸಬೇಕು. ಬೇರೆ ಸಹಾಯಕರಿಲ್ಲ. ವಿಶ್ರಾಂತಿಯಿಲ್ಲ. ಮದ್ದಳೆ ಬಾರಿಸಿ ಕೈಯೆಲ್ಲಾ ಒಡೆದು ರಕ್ತ ಜಿನುಗುತ್ತಿದ್ದರೂ ಯಾರಿಗೂ ಕರುಣೆ ಮೂಡುವುದಿಲ್ಲವಲ್ಲಾ ಎಂದೆನಿಸಿತ್ತು. ಅಜ್ಞಾತ ಮಾತ್ಸರ್ಯದ ಬಾಹುಗಳು ಹಿಂಡುತ್ತಿದ್ದುವು. ಇಲ್ಲಿದ್ದರೆ ಉದ್ಧಾರವಾಗದು. ಮೇಳದ ಸಹವಾಸವೇ ಬೇಡ, ನಿರ್ಧರಿಸಿ ಮನೆಗೆ ಮರಳಿದೆ. ‘ಹೀಗೆಲ್ಲಾ ಮಾಡಬಾರದು, ಸುಧಾರಿಸಬೇಕು,’ ತಂದೆಯವರ ಬುದ್ಧಿವಾದ. ಇದಾವುದನ್ನೂ ಕೇಳಿಯೂ ಕೇಳದಂತಿದ್ದೆ.
ಮೇಳದಲ್ಲಿ ಸಮಸ್ಯೆಯಾಯಿತು. ಸಂಗೀತಗಾರ ಇಲ್ಲದೆ ಅವ್ಯವಸ್ಥೆಯಾಯಿತು. ನನ್ನನ್ನು ಒಲಿಸಿ ಕರೆತರಲು ಕಲಾವಿದ ಪ್ರಕಾಶ್ಚಂದ್ರ ರಾವ್ ಬಾಯಾರು (ದಿ.) ಇವರನ್ನು ಯಜಮಾನರು ಮನೆಗೆ ಕಳುಹಿಸಿದರು. ‘ಏನೇ ಆಗಲಿ, ನಾವೆಲ್ಲಾ ಇದ್ದೇವೆ. ನೀವು ಬರಲೇ ಬೇಕು,’ ಎನ್ನುತ್ತಾ, ‘ಕೋಪದಲ್ಲಿ ಕುಳಿತರೆ ನಿಮಗೆ ನಷ್ಟ. ಮೇಳಕ್ಕೆ ಸಂಗೀತಗಾರ ಇನ್ನೊಬ್ಬ ಸಿಗಬಹುದು. ಆದರೆ ಸಿಕ್ಕಿದ ಅವಕಾಶವನ್ನು ಬಿಡಬಾರದು,’ ಎಂದರು. ಪ್ರಕಾಶರಿಗೆ ಪದ್ಯಾಣ ಮನೆತನ ಗೊತ್ತು. ನನ್ನ ಪ್ರತಿಭೆಯನ್ನು ಸರಿಯಾಗಿ ಗುರುತಿಸಿದ ಕಲಾವಿದ.
ಸಿಟ್ಟು ಕರಗಿತು. ಮೇಳಕ್ಕೆ ಮರಳಿದೆ. ಪ್ರಕಾಶ್ಚಂದ್ರರು ಒಂದೆರಡು ಗಂಟೆ ಮದ್ದಳೆಗೆ ಸಹಕರಿಸಿದರು. ಸ್ವಲ್ಪ ವಿಶ್ರಾಂತಿ ಸಿಕ್ಕಿ ನಿರುಮ್ಮಳವಾಯಿತು. ಯಾಕೆ ನೀವು ಬಿಟ್ಟು ಹೋದುದು ಎಂದು ಯಜಮಾನರು ಕೇಳಲಿಲ್ಲ. ನಾನು ಹೇಳಲಿಲ್ಲ. ನನ್ನ ಗೈರುಹಾಜರಿಯಲ್ಲಿ ಇಲೆಕ್ಟ್ರಿಶನ್ ಭಾಸ್ಕರ ಭಾಗವತಿಕೆ ಮಾಡಿದ್ದರಂತೆ. ಮುಂದೆ ಬೆಳ್ಳಾರೆಯಲ್ಲಿ ತಂದೆಯವರ ಬೆಂಬಲದಿಂದ ಮೇಳದ ಟಿಕೇಟ್ ಆಟವೊಂದನ್ನು ಆಡಿಸಿದ್ದೆ. ಅಗರಿ ಶ್ರೀನಿವಾಸ ಭಾಗವತರನ್ನು ಸಂಮಾನಿಸಿದ್ದೆವು. ಆ ಕಾಲದಲ್ಲಿ ಅದೊಂದು ದೊಡ್ಡ ಸುದ್ದಿ.
ಒಮ್ಮೆ ಮಂಗಳೂರಿನ ನೆಹರೂ ಮೈದಾನದಲ್ಲಿ ಆಟ. ಎಂತದ್ದೋ ಮನಸ್ತಾಪ ಕಾಡಿತ್ತು. ಇದಕ್ಕೆ ಕಲಾವಿದರ ಚೌಕಿಯ ಮಾತುಕತೆಗಳೂ ಮಿಳಿತವಾಗಿದ್ದುವು. ‘ಮೇಳ ಬಿಡ್ತೇನೆ’ ಅಂತ ಚಿಕ್ಕಪ್ಪನಿಗೆ ಕಾಗದ ಹಾಕಿದೆ. ಮಂಗಳೂರಿನ ಆಟಕ್ಕೆ ಚಿಕ್ಕಪ್ಪ ಬಂದಿದ್ದರು. ಆಟ ಮುಗಿದು ‘ನಾನು ಬಿಡ್ತೇನೆ’ ಅಂದಾಗ ದನಿಗಳು ಕೇಳಿಯೂ ಕೇಳದಂತಿದ್ದರು. ಇವರು ನನ್ನ ಚಿಕ್ಕಪ್ಪ ಎಂದು ಪರಿಚಯಿಸಿದಾಗ ದನಿಗಳು ಅಲರ್ಟ್ ಆದರು. ಚಿಕ್ಕಪ್ಪನನ್ನು ಒಲಿಸಿಕೊಂಡರು. ‘ಚೆಂದವಾಗಿ ನೋಡಿಕೊಳ್ತೇವೆ’ ಅಂತ ಆಶ್ವಾಸನೆ ನೀಡಿದರು. ಮೇಳ ಸೇರಿ ಎಂಟು ವರುಷವಾಗಿತ್ತು. ಸಂಬಳ ನಿಗದಿಯಾಯಿತು. ಆರು-ಏಳು ತಿಂಗಳಿಗೆ ಎರಡೂಕಾಲು ಸಾವಿರ ರೂಪಾಯಿ ಸಂಬಳ.
ಚಿತ್ರ : ನಟೇಶ್ ವಿಟ್ಲ
No comments:
Post a Comment