Friday, August 28, 2020

‘ಪದಯಾನ’ದಿಂದ - ಪದ್ಯಾಣರ ಸ್ವಗತ – (ಎಸಳು 33)


  (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ)

ಹೂವಿನ ಹಾದಿ :

          ನಾನೀಗ ಮೊದಲಿನ ‘ಪದ್ಯಾಣ’ ಅಲ್ಲ!

ವಯಸ್ಸಾಯಿತು. ಅರುವತ್ತು ಮೀರಿತು. ಹಿಂದಿನಂತೆ ಹಾಡಲು ಸಾಧ್ಯವಾ? ಅಭಿಮಾನಿಗಳಿಗೂ ಗೊತ್ತಿದೆ. ಜನರು ನನ್ನ ಹಾಡುಗಾರಿಕೆಯನ್ನು ತಿರಸ್ಕರಿಸಲಿಲ್ಲ, ದಿಟ.

          ಅರುವತ್ತರ ಹೊಸ್ತಿಲಲ್ಲಿ ನಿಂತು ನೋಡುತ್ತೇನೆ. ಸಾಗಿ ಬಂದ ದಾರಿಯಲ್ಲಿ ಕಲ್ಲುಮುಳ್ಳುಗಳು. ಅವೆಲ್ಲವನ್ನು ಕಲಾದೇವಿ ತೊಲಗಿಸಿದ್ದಾಳೆ. ಹಾದಿಗೆ ಹೂವನ್ನು ಹರಡಿದ್ದಾಳೆ. ಹೂವಿನ ಹಾದಿಯನ್ನು ತೋರಿದ್ದಾಳೆ. ಬದುಕನ್ನು ಹೂ ಮಾಡಿದ್ದಾಳೆ.

          ಶಾಲಾ ದಾಖಲಾತಿಯಲ್ಲಿ ಎಂಟನೇ ತರಗತಿ ತನಕ ದಾಖಲೆಯಿದೆ. ಹೆಚ್ಚು ಕಲಿಯಲಿಲ್ಲ, ಕಲಿಯಲಾಗಲಿಲ್ಲ. ಕಲಿಯಬೇಕಿತ್ತು. ಇದರಿಂದಾಗಿ ಭಾಷಾ ಸಮಸ್ಯೆ ಎದುರಾಗಿವೆ. ಪ್ರತಿಷ್ಠಿತರ ಮಧ್ಯೆ ಕಾಣಿಸಿಕೊಳ್ಳಲು ಮುಜುಗರವಾಗುತ್ತಿತ್ತು.

          ಹೀಗಿದ್ದೂ ದೇಶದ ರಾಜಧಾನಿಗೆ ಕುಟುಂಬ ಸಹಿತ ಪ್ರವಾಸ ಹೋಗಿದ್ದೇನೆ. ವಿದೇಶಕ್ಕೂ ಹಾರಿದ್ದೇನೆ. ಭಾಗವತಿಕೆ ಮಾಡಿದ್ದೇನೆ. ಜನರ ಮನವನ್ನು ಗೆದ್ದಿದ್ದೇನೆ. ಪದವಿ ಪಡೆದ ಪ್ರಮಾಣ ಪತ್ರವೇ ಬದುಕಿನ ಯಶ  ಎಂದು ತಿಳಿಯುತ್ತಿದ್ದರೆ ವಿದೇಶಕ್ಕೆ ಸುಲಭವಾಗಿ ಹೋಗಬಹುದಿತ್ತು. ಆದರೆ ಅಲ್ಲಿನವರ ಮನ ಗೆಲ್ಲಲು ಸಾಧ್ಯವಾಗುತ್ತಿತ್ತೇ. ಅವರ ಮನಸ್ಸಿನೊಳಗೆ ಇಳಿದು ತೆಂಕುತಿಟ್ಟು ಯಕ್ಷಗಾನದ  ಧ್ವಜವನ್ನು ಊರಲು ಆಗುತ್ತಿತ್ತೇ? ಅದೆಲ್ಲವೂ ಕಲಾ ದೇವಿ ಒದಗಿಸಿದ್ದಾಳೆ.

          ಶೈಕ್ಷಣಿಕ ಅರ್ಹತೆ ಇಲ್ಲವೆಂದು ಗೇಲಿ ಮಾಡಿದವರೆಷ್ಟೋ? ಅವಮಾನಿಸಿದ್ದಾರೆ. ವ್ಯಂಗ್ಯವಾಡಿದ್ದಾರೆ. ಹಗುರವಾಗಿ ಮಾತನಾಡಿದ್ದಾರೆ. ಬದುಕನ್ನು ಕೆದಕಿದ್ದಾರೆ. ಅದರೊಳಗೆ ಇಣುಕಿದ್ದಾರೆ. ಇಂತಹ ಹೊತ್ತಲ್ಲಿ ನಿರ್ಲಿಪ್ತವಾಗಿರಲು ಕಲೆ ಕಲಿಸಿದೆ. ಲೋಕದ ಡೊಂಕನ್ನು ತಿದ್ದಲು ನಾನಾರು?

          ಯಕ್ಷಯಾನದಲ್ಲಿ ಹಾದುಹೋದ ಅಭಿಮಾನಿಗಳ ಸಂಖ್ಯೆ ಅಗಣಿತ. ಮಾನ-ಸಂಮಾನಗಳು ಅರಸಿ ಬಂದುವು. ಪ್ರಶಸ್ತಿಗಳು ಮುಡಿಗೇರಿದುವು. ಹುಟ್ಟೂರಿನ ಬಂಧುಗಳು ಸನ್ಮಾನಿಸಿದರು. ‘ಆತ ನಮ್ಮವ’ನೆಂದು ಸ್ವೀಕರಿಸಿದರು. ಓರ್ವ ಕಲಾವಿದನಿಗೆ ಇನ್ನೇನು ಬೇಕು?

          ಬದುಕು ಶಾಶ್ವತವಲ್ಲ. ಆಯಷ್ಯ ಕ್ಷೀಣಿಸುತ್ತಿದೆ. ಮೊದಲಿನಂತೆ ಹಾಡಲು ಸಾಧ್ಯವಾ? ನಿರೀಕ್ಷೆ ತಪ್ಪಲ್ಲ. ಯತ್ನಿಸುತ್ತಿದ್ದೇನೆ. ಮಿತಿ ಗೊತ್ತಿದೆ. ಅದರೊಳಗೆ ಸಂಚರಿಸುತ್ತಿದ್ದೇನೆ. ಸಂಯಮದಿಂದ ನೋಡುತ್ತಿದ್ದೇನೆ. ಎರಡು ದಶಕದ ಹಿಂದಿನ ‘ಪದ್ಯಾಣ ಧ್ವನಿ’ಯನ್ನು ಹೇಗೆ ಸ್ವೀಕರಿಸಿದ್ದಾರೋ, ಅದೇ ಸ್ವೀಕೃತಿಯು ಈಗಿದೆ ಎನ್ನಲು ಹರ್ಷವಾಗುತ್ತಿದೆ. ಪದ್ಯಾಣ ಹೆಸರಿಗೆ ಶೋಭೆ ತಂದಕೊಟ್ಟ ಗುರು ಮಾಂಬಾಡಿ ನಾರಾಯಣ ಭಾಗವತರಿಗೆ ನಮೋನಮಃ

          ಕಳೆದು ಹೋಗುತ್ತಿದ್ದ ಬದುಕಿಗೆ ಆಸರೆಯಾದವರು ಟಿ. ಶ್ಯಾಮ ಭಟ್ಟರು. ‘ನನ್ನ ಗಣಪಣ್ಣ’ ಎಂದು ತಮ್ಮನಾಗಿಯೋ, ಬಂಧುವಾಗಿಯೋ ಸ್ವೀಕರಿಸಿದವರು. ಮುಕ್ತವಾಗಿ ಮಾತನಾಡುವವರು. ಕಷ್ಟಸುಖಗಳಿಗೆ ಸ್ಪಂದಿಸಿದವರು. ಕಣ್ಣೀರನ್ನು ಒರೆಸಿದವರು. ವಿಷಾದದ ಹೊತ್ತಲ್ಲಿ ಧೈರ್ಯತುಂಬಿದವರು. ಬೆಳಕಿನ ಬದುಕಿನಲ್ಲಿ ಧುತ್ತೆಂದು ಕತ್ತಲೆ ಆವರಿಸಿದಾಗ ದೀವಿಗೆ ಹಿಡಿದವರು. ನನ್ನ ಪಾಲಿನ ಆಪದ್ಭಂದು.

          ನನ್ನ ಕಲಾಯಾನದ ಮುಖ್ಯ ಉಸಿರು - ಮಡದಿ ಶೀಲಾಶಂಕರಿ. ಅಳುವನ್ನು ನುಂಗಿ ಯಕ್ಷಗಾನಕ್ಕೆ ಗಂಡನನ್ನು ಬಿಟ್ಟುಕೊಟ್ಟ ತ್ಯಾಗಮಯಿ. ಇದು ಉತ್ಪ್ರೇಕ್ಷೆಯಲ್ಲ. ಮನೆ ವ್ಯವಹಾರಗಳನ್ನು, ಮಕ್ಕಳ ಏಳ್ಗೆಯನ್ನು ಗಂಡಾಗಿ ನಿಂತು ನಿರ್ವಹಿಸಿದ್ದಾಳೆ. ತಂದೆಯ ಸ್ಥಾನದ ಶೂನ್ಯತೆಯು ಮಕ್ಕಳಲ್ಲಿ ಅಂಕುರಿಸದಂತೆ ಎಚ್ಚರ ವಹಿಸಿದ್ದಾಳೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಸಹಿಸಿದ್ದಾಳೆ. ಸಹಿಸುತ್ತಾ ಅಭಿಮಾನವನ್ನು ಆವಾಹಿಸಿಕೊಂಡಿದ್ದಾಳೆ. ಪದಯಾನದ ಎರಡು ಗಾಲಿಗಳಲ್ಲಿ ಒಂದು ನಾನು, ಮತ್ತೊಂದು ಅವಳು. 

          ಮಕ್ಕಳು ಓದಿದ್ದಾರೆ. ಶೈಕ್ಷಣಿಕವಾಗಿ ಗಟ್ಟಿಯಾಗಿದ್ದಾರೆ. ವೃತ್ತಿಯನ್ನೂ ಆಯ್ಕೆ ಮಾಡಿಕೊಂಡಿದ್ದಾರೆ. ತಂದೆಯ ವೃತ್ತಿಯನ್ನು ಹಳಿಯದ ಮಕ್ಕಳನ್ನು ಪಡೆದ ನಾನು ಭಾಗ್ಯಶಾಲಿ. ಇಬ್ಬರು ಮಗಂದಿರಿಗೂ ಯಕ್ಷಗಾನವೆಂದರೆ ಪ್ರೀತಿ, ಒಲವು. ಸಹೋದರರು, ಕುಟುಂಬಸ್ಥರೆಲ್ಲರೂ ಯಕ್ಷಯಾನದಲ್ಲಿ ಕೈಜೋಡಿಸಿದ್ದಾರೆ. ಎಲ್ಲರ ಪ್ರೀತಿ, ವಿಶ್ವಾಸ ಮತ್ತು ತ್ಯಾಗದ ಫಲವಾಗಿ ನಿಮ್ಮ ಗಣಪ ಹೀಗೆ ಇದ್ದಾನೆ ನೋಡಿ.

No comments:

Post a Comment