Saturday, August 22, 2020

‘ಪದಯಾನ’ - ಪದ್ಯಾಣರ ಸ್ವಗತ – (ಎಸಳು 27)

 (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)

‘ಪದಯಾನ’ - ಪದ್ಯಾಣರ ಸ್ವಗತ – (ಎಸಳು 27)         

ಕೈಕೊಟ್ಟ ಶಾರೀರ  :

          ಎಳೆಂಟು ವರುಷವಾಯಿತು. ಎಲ್ಲಿ ನೋಡಿದರೂ ಮೇಳದ ಆಟದ್ದೇ ಸುದ್ದಿ. ಕಲಾವಿದರಿಗೆ ವ್ಯಾಪಕ ಗೌರವ. ಯಾಕೋ.... ನನ್ನ ಶಾರೀರವು ನನ್ನ ನಿಯಂತ್ರಣದಿಂದ ದೂರವಾಗುವ ಅನುಭವವಾಗುತ್ತಾ ಬಂತು. ಗ್ರಹಿಸಿದಂತೆ ಪದ್ಯದಆರೋಹಣ, ಅವರೋಹಣಕ್ಕೆ ತೊಂದರೆಯಾಗುತ್ತಿತ್ತು, ತ್ರಾಸಪಡಬೇಕಾಗಿ ಬಂತು. ಕೆಲವೊಂದು ಪದ್ಯಗಳನ್ನು ಹಾಡುತ್ತಿರುವಾಗ ‘ಸೋಲುವ’ ಭಾವ ಕಾಡುತ್ತಿತ್ತು. ದಿನೇದಿನೇ ಕುಸಿತದ ಅನುಭವ! ರಾಗಸಂಚಾರಗಳಲ್ಲಿಯೂ ವ್ಯತ್ಯಾಸಗಳಾಗುತ್ತಿದ್ದುವು. ನನ್ನ ಈ ಗೊಂದಲವನ್ನು ಹಲವರು ಗಮನಿಸಿದ್ದಾರೆ, ರಂಗದ ಒದ್ದಾಟವನ್ನು ಗುರುತಿಸಿದ್ದಾರೆ. ರವಿಚಂದ್ರನೂ ಆಗಾಗ್ಗೆ ಹೇಳುತ್ತಿದ್ದ.  ಆ ವರುಷದ ತಿರುಗಾಟ ಮುಗಿಯಿತು. ಸ್ವರ ಕೈಕೊಟ್ಟುದರಿಂದ ಅಧೀರನಾಗಿದ್ದೆ. ವಿಘ್ನಸಂತೋಷಿಗಳ ಹಗುರ ಮಾತುಗಳಿಗೂ ಕಿವಿಯಾದೆ!

          ಬೆಳ್ಳಾರೆಯ ಖ್ಯಾತ ವೈದ್ಯ ಡಾ.ಶಶಿಧರ ಪಡೀಲ್ ಅವರಿಂದ ಪರೀಕ್ಷೆ ಮಾಡಿಸಿದೆ. “ನೀವು ಒಂದೋ ಪದ್ಯ ಹೇಳುವುದನ್ನು ನಿಲ್ಲಿಸಬೇಕು. ಇಲ್ಲಾ.. ವೀಳ್ಯ ಮೆಲ್ಲುವುದನ್ನು ನಿಲ್ಲಿಸಬೇಕು.” ಎಂಬ ಸಲಹೆ ನೀಡುತ್ತಾ, “ದಿನವಿಡೀ ವೀಳ್ಯ ಮೆಲ್ಲುತ್ತಾ ಮೆಲ್ಲುತ್ತಾ ಸಹಜವಾದ ‘ಜೊಲ್ಲುರಸ ಉತ್ಪಾದನೆಯು ಕ್ಷೀಣಿಸಿದ್ದರಿಂದ ಸ್ವರಕ್ಕೆ ಸಮಸ್ಯೆಯಾಗಿದೆ.” ಎಂದರು. ವೈದ್ಯರ ಸೂಚನೆಯಿಂದ ಕಂಗಾಲಾದೆ. ಭಾಗವತಿಕೆ ಬಿಡುವುದೆಂದರೆ ಆಟದಿಂದ ದೂರ ಸರಿದಂತೆ ಅಲ್ವಾ.. ವೀಳ್ಯ ಹಾಕುವುದು ಬಿಟ್ಟರೆ ... ದೇವರೇ ಗತಿ!

          ವೈದ್ಯರ ಸೂಚನೆಯು ಮನದಲ್ಲಿ ಗುಂಯ್ಗುಡುತ್ತಿತ್ತು. ಅರ್ಥವಾಗುವ ಹಾಗೇ ವೈದ್ಯಕೀಯ ವಿವರಗಳನ್ನು ಹೇಳಿದ್ದರು.  ಆ ಸಂದರ್ಭದಲ್ಲಿ ‘ಮಂಡೆಬಿಸಿ’ಯಲ್ಲಿ ಎಂದಿಗಿಂತ ಹೆಚ್ಚೇ ವೀಳ್ಯ ಮೆಲ್ಲುತ್ತಿದ್ದೆ! ಆಗಲೇ ವರುಷಕ್ಕಾಗುವಷ್ಟು ಐದಾರು ಕಿಲೋ ‘ಕುಣಿಯ ಹೊಗೆಸೊಪ್ಪು’ ತಂದಿರಿಸಿದ್ದೆ. ದಿನಕ್ಕೆ ಏನಿಲ್ಲವೆಂದರೂ ಇಪ್ಪತ್ತು ಬಾರಿ ವೀಳ್ಯ ಆಪೋಶನ! ವೈದ್ಯರ ಮಾತು ನೆನಪಾಗುವಾಗಲೆಲ್ಲ ಕುಣಿಯ ಹೊಗೆಸೊಪ್ಪು ಅಣಕಿಸುತ್ತಿತ್ತು.

          ಎಲೆ-ಅಡಿಕೆ ತಿಂದುದು ಸ್ವರಕ್ಕೆ ಕಂಟಕವಾಯಿತಲ್ಲಾ. ಬಿಟ್ಟುಬಿಡುವುದೇ ಲೇಸು, ಒಂದು ಶುಭ ಬೆಳಗಿನಲ್ಲಿ ಭೀಷಣ ಪ್ರತಿಜ್ಞೆ ಮಾಡಿದೆ. ಈ ಪ್ರತಿಜ್ಞೆಗೆ ಸಾಕ್ಷಿ ಅನ್ಯರಿಲ್ಲ! ನಾನೇ... ಶೀಲಾಳಿಗೆ ಗೊತ್ತಿಲ್ಲ, ಹೇಳಿಲ್ಲ.  ಕುಣಿಯ ಹೊಗೆಸೊಪ್ಪನ್ನು ಕಣಿವೆಗೆ ಬಿಸಾಡಲೇ? ಸಾವಿರಾರು ರೂಪಾಯಿ ನಷ್ಟ. ಏನು ಮಾಡೋಣ. ಹೊಗೆಸೊಪ್ಪನ್ನು ದಾನ ಮಾಡಲು ಮನಮಾಡಿದೆ. ಸ್ನೇಹಿತ ಭಾಗವತರುಗಳಿಗೆ, ಕಲಾವಿದರಿಗೆ, ಆಪ್ತರಿಗೆ ಹಂಚಿದೆ. ಒಂದೇ ವಾರದಲ್ಲಿ ಹೊಗೆಸೊಪ್ಪಿನ ವಿಲೆವಾರಿಯಾಯಿತು. ಊಟ ಆದ್ರೂ ಬಿಡಬಲ್ಲೆ. ಹೊಗೆಸೊಪ್ಪು ಬಿಡೆ - ಅಲಿಖಿತ ಘೋಷಣೆ ಮಡದಿಗೆ ಗೊತ್ತು. ನನ್ನ ವಿಲೇವಾರಿ ಕಾರ್ಯಕ್ರಮ ಯಾಕೆ ಅವಳಿಗೆ ಗೊತ್ತಾಗಲಿಲ್ಲ? ಪ್ರತಿಕ್ರಿಯೆಗಾಗಿ ಒಂದು ಕಣ್ಣು ಅವಳ ಮೇಲೆ ನೆಟ್ಟಿತ್ತು!

          “ಎಲೆ-ಅಡಿಕೆ ಹಾಕುವುದು ಬಿಟ್ಟೆ. ಈ ಪೆಟ್ಟಿಗೆ ನಿನಗಾಯಿತು,” ಎಂದು ಮಡದಿ ಶೀಲಾಳಿಗೆ ನೀಡಿದಾಗ ಮುಗುಳ್ನಕ್ಕಳು. ಅಂದಿ ಕ್ಷಣವನ್ನು ಅವಳೇ ಹೇಳಿದರೆ ಚಂದ..!         

           “ಏನೋ ನನ್ನಲ್ಲಿ ಅಡಗಿಸುತ್ತಾರೆ ಎಂಬ ಗುಮಾನಿಯಿತ್ತು.  ನಾನಾಗಿ ಅವರಲ್ಲಿ ಕೇಳಲಿಲ್ಲ. ಹಾಗೆ ಕೇಳುವುದು ಅವರಿಗೆ ಇಷ್ಟವಾಗದ ವಿಷಯ. ಆ ದಿವಸ ಅಡಿಕೆ, ವೀಳ್ಯದೆಲೆ, ಸುಣ್ಣ, ಹೊಗೆಸೊಪ್ಪು.. ಹಾಕಿಡುವ ಎಲೆಪೆಟ್ಟಿಗೆಯನ್ನು ತೊಳೆದು ಶುಚಿಗೊಳಿಸಿ, ಇದು ನಿನಗೆ, ಎಂತಾದರೂ ಹಾಕಿಡಲು ಆದೀತು ಎಂದು ನೀಡಿದರು. ಸ್ವಲ್ಪ ಹೊತ್ತಲ್ಲಿ ಹೊಗೆಸೊಪ್ಪು, ಸುಣ್ಣ ತುಂಬಿಸುವ ಚಿಕ್ಕ ಕರಡಿಗೆಯೂ ಶುಚಿಯಾಯಿತು. ನಾನು ವೀಳ್ಯ, ಬೀಡಿ ಎಲ್ಲವೂ ಬಿಟ್ಟೆ ಎಂದು ಕಣ್ಣುಮಿಟುಕಿಸಿದರು. ಟೆನ್ಶನ್ನಿನ ದ್ಯೋತಕವಾದ ಉಗುರು ಕಚ್ಚುವಿಕೆಯ ವೇಗ ಹೆಚ್ಚಾಗುತ್ತಿತ್ತು! ಮನೆಯ ಒಳಗೆ, ಹೊರಗೆ ಶತಪಥ ಹಾಕುತ್ತಿದ್ದರು. ವಾರವಾಗುವಾಗ ಸರಿಹೋಯಿತು.

(ಯಕ್ಷಚಿತ್ರ : ಕೃಷ್ಣಕುಮಾರ್)

 

 

No comments:

Post a Comment