(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)
ಹವ್ಯಾಸಿ ಮದ್ಲೆಗಾರ :
‘ಯಕ್ಷಗಾನದ ಪ್ರಾಥಮಿಕ ಪಾಠಗಳನ್ನು ಕಲಿತಾಯಿತಲ್ವಾ.. ಹವ್ಯಾಸಿ ಆಟ, ಕೂಟ ಸಿಕ್ಕರೆ ಹೋಗು. ಅಭ್ಯಾಸಕ್ಕೂ ಒಳ್ಳೆಯದು’ ಎಂದಿದ್ದರು ತಂದೆ. ಕಲ್ಮಡ್ಕದ ಕಾರ್ಯಕ್ರಮಗಳಿಗೆ ಆಗ ಭಾಗವತ ದಾಸರಬೈಲು ಚನಿಯ ನಾಯ್ಕರು ಆಗಮಿಸುತ್ತಿದ್ದರು. ಅವರಲ್ಲಿ ನನ್ನ ಕಲಿಕೆಯ ಗಾಥೆಯನ್ನು ತಂದೆಯವರು ಹೇಳಿದರು. ನಾಯ್ಕರು ಖುಷಿ ಪಟ್ಟರು. ಚೆಂಡೆ, ಮದ್ದಳೆಯ ನುಡಿತಕ್ಕೆ ಅವರಿಗೆ ಸಾಥ್ ಆದೆ. ಮನೆತನವನ್ನು ಗೌರವಿಸುವ ಸಂಸ್ಕಾರ ನಾಯ್ಕರದು. ಎಳೆಯವನಾದ ನನ್ನಲ್ಲೂ ಗೌರವ ಭಾವ ತೋರುತ್ತಿದ್ದಾಗ ಮುಜುಗರವಾಗುತ್ತಿತ್ತು.
ಚನಿಯ ನಾಯ್ಕರು ಸುಳ್ಯ ತಾಲೂಕಿನ ಮರ್ಕಂಜದವರು. ಸಂಪಾಜೆ, ಸುಳ್ಯ, ಈಶ್ವರಮಂಗಲ, ಸುಳ್ಯಪದವು, ಅಡೂರು.. ಹೀಗೆ ಈ ಪ್ರದೇಶ ವ್ಯಾಪ್ತಿಯಲ್ಲಿ ನಾಯ್ಕರದೇ ಭಾಗವತಿಕೆಯ ಪ್ರಾಬಲ್ಯ. ಇವರಿಗೆ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಡತೋಕ ಮಂಜುನಾಥ ಭಾಗವತರೊಂದಿಗೆ ಒಡನಾಟವಿತ್ತು. ಮೇಳದಲ್ಲಿ ಸಂಗೀತಗಾರನಾಗಿ ಸ್ವಲ್ಪ ಕಾಲ ತಿರುಗಾಟ ಮಾಡಿದ್ದರು. ಪ್ರಸಂಗಗಳ ಹಿಡಿತ ಚೆನ್ನಾಗಿತ್ತು. ರಂಗದಲ್ಲಿ ಅದ್ಭುತವಾಗಿ ಹಾಡುತ್ತಿದ್ದರು. ಬಿಗಿಯಾದ ಲಯ, ತಾಳಗಳ ಗಟ್ಟಿ, ಸಾಹಿತ್ಯ ಸ್ಪಷ್ಟತೆ, ಕಾಲ ಪ್ರಮಾಣ, ವೇಷವನ್ನು ಮೆರೆಸುವ ತಾಕತ್ತು ಹಾಡಿನಲ್ಲಿತ್ತು. ಅವರೊಂದಿಗೆ ಭಾಗವಹಿಸುವ ಅವಕಾಶ ಪ್ರಾಪ್ತವಾದುದು ರಂಗದ ಪ್ರತ್ಯಕ್ಷ ಕಲಿಕೆಗೆ ಪೂರಕವಾಯಿತು.
ಪೆರಾಜೆ, ಪೆರ್ನಾಜೆ..ಗಳಲ್ಲಿ ನಿರಂತರ ಆಟಗಳಾಗುತ್ತಿದ್ದುವು. ದೇವಿಮಹಾತ್ಮೆ, ದಕ್ಷಯಜ್ಞ, ಬ್ರಹ್ಮಕಪಾಲ.. ಪ್ರಸಂಗಗಳು ಪರಿಣಾಮಕಾರಿಯಾಗಿ ಪ್ರದರ್ಶಿತವಾಗುತ್ತಿದ್ದುವು. ಚನಿಯರು ಆಟ ಆಡಿಸುವ ಕ್ರಮವನ್ನು ಮದ್ದಳೆಗಾರನಾಗಿ, ಚೆಂಡೆವಾದಕನಾಗಿ ಅನುಸರಿಸುತ್ತಿದ್ದೆ. ಯಾರದ್ದೇ ನಕಲು ಅಲ್ಲದ ಭಾಗವತಿಕೆಯ ಕ್ರಮ ತುಂಬಾ ಇಷ್ಟವಾಗಿತ್ತು. ಎಷ್ಟೋ ವಿಚಾರಗಳನ್ನು ಅವರಿಂದ ಕಲಿತೆ. ನಾಯ್ಕರ ಸಿಂಹೇಂದ್ರಮಧ್ಯಮ ರಾಗ ಜನಪ್ರಿಯ. ಈ ಹಾಡಿಗೆ ಪ್ರಭಾವಿತನಾಗಿದ್ದೆ. ಅವರ ಹಾಡನ್ನು ಕೇಳಿ ಕೇಳಿಯೇ ರಾಗವನ್ನು ಕಲಿತೆ. ಅವರು ತಿದ್ದಿದರು. ಇದನ್ನು ಸರಸ್ವತಿ ರಾಗವೆಂದೂ ಕರೆಯುತ್ತಾರೆ.
1972-73ನೇ ಇಸವಿ ಇರಬೇಕು. ಹವ್ಯಾಸಿ ಕಲಾವಿದರಿದ್ದ ಚೌಡೇಶ್ವರಿ ಮೇಳ ಕಾಲಾವಧಿಯ ತಿರುಗಾಟ ಮಾಡುತ್ತಿತ್ತು. ಪೆರಾಜೆಯಲ್ಲೂ ಪೂರ್ಣ ಪ್ರದರ್ಶನ ನೀಡುವ ಕಲಾವಿದರ ತಂಡವಿತ್ತು. ಇಲ್ಲೆಲ್ಲಾ ಚನಿಯ ನಾಯ್ಕರೊಂದಿಗೆ ಭಾಗವಹಿಸುತ್ತಿದ್ದೆ. ಸೀಮಿತ ಆಟಗಳು. ಆಟದಿಂದ ಬಂದ ಬಳಿಕ ಚನಿಯರು ರಂಗದಲ್ಲಿ ಹಾಡಿದ್ದ ಹೊಸ ರಾಗಗಳನ್ನು ಅಭ್ಯಾಸ ಮಾಡುತ್ತಿದ್ದೆ. ಇತ್ತ ಪ್ರಸಂಗಕರ್ತ ಮಧುಕುಮಾರ್ ಭಾಗವತರಾಗಿ ಪಂಜ, ಏನೆಕಲ್ಲು, ಸುಬ್ರಹ್ಮಣ್ಯ, ಗುತ್ತಿಗಾರು, ಕಡಬ.. ದಲ್ಲೆಲ್ಲಾ ಪ್ರಸಿದ್ಧರು. ಅವರೊಂದಿಗೂ ಚೆಂಡೆ, ಮದ್ದಳೆ ವಾದಕನಾಗಿದ್ದೆ. ವಾರದಲ್ಲಿ ಒಂದೆರಡು ಆಟಗಳು ಖಾಯಂ ಸಿಗುತ್ತಿದ್ದುವು.
ಆಗ ಸಂಭಾವನೆ ಏಳು ರೂಪಾಯಿ! ಇದರಲ್ಲಿ ಅರ್ಧ ಪ್ರಯಾಣ ವೆಚ್ಚಕ್ಕೆ ಬೇಕು. ಹಣದ ಮೋಹದಿಂದ ಹೋದುದಲ್ಲ, ಕಲಿಯಬೇಕೆಂಬ ತುಡಿತ. ಮುಂದೆ ಹತ್ತು ರೂಪಾಯಿಗೆ ಭಡ್ತಿ ಪಡೆದಿದ್ದೆ. ಆಟ ಮುಗಿಸಿ ಮನೆಗೆ ಬಂದಾಗ ‘ಏನಾದ್ರೂ ಕೊಟ್ಟಿದ್ದವಾ’ ತಂದೆ ನಗುತ್ತಾ ಕೇಳುತ್ತಿದ್ದರು. ಉಳಿಕೆ ಹಣವನ್ನು ತಂದೆಯಲ್ಲಿ ಕೊಡುತ್ತಿದ್ದೆ. ಅದನ್ನು ಅವರು ವೆಚ್ಚ ಮಾಡದೆ ‘ನನ್ನ ಹೆಸರಿನಲ್ಲಿ’ ತೆಗೆದಿರಿಸುತ್ತಿದ್ದರು. ಇವನಲ್ಲಿ ಇದ್ದರೆ ಬೀಡಿ ಎಳೆದರೆ.. ಆತಂಕವೂ ಇತ್ತು! ಬೀಡಿ ಸೇದುವಿಕೆಯನ್ನು ಬಿಟ್ಟಿದ್ದಾನೆ ಹೌದು, ಮತ್ತೆ ಶುರು ಮಾಡಿದರೆ..? ಅಮ್ಮ ಈ ವಿಚಾರಗಳಿಗೆ ತಲೆಹಾಕುತ್ತಿರಲಿಲ್ಲ. ಆಟ ಹೇಗಾಯ್ತು, ಚೆಂಡೆ ಬಾರಿಸಿದ್ದಾ, ಮದ್ದಳೆ ನುಡಿಸಿದ್ದಾ.. ಎಂದಷ್ಟೇ ಕೇಳುತ್ತಿದ್ದರು.
ಆಟದಲ್ಲಿ ಊಟ, ತಿಂಡಿಯದೇ ಸಮಸ್ಯೆ. ಪೆರಾಜೆಯಂತಹ ಪ್ರದೇಶದಲ್ಲಿ ಹೋಟೆಲು ಕೂಡಾ ಇರಲಿಲ್ಲ. ಆಟಕ್ಕೆ ಹೊರಡುವಾಗ ಅಮ್ಮ ತಿಂಡಿಯ ಬುತ್ತಿ ಕೊಡುತ್ತಿದ್ದರು. ಚನಿಯ ನಾಯ್ಕರು, ಮಧುಕುಮಾರ್ ಸಂಘಟಕರಲ್ಲಿ ಹೇಳಿ ವ್ಯವಸ್ಥೆ ಮಾಡುತ್ತಿದ್ದರು. ಇಡೀ ರಾತ್ರಿ ಹಿಮ್ಮೇಳದಲ್ಲಿ ತೊಡಗಿಸಿಕೊಳ್ಳಬೇಕಾದುದರಿಂದ ಅನುಕಂಪದಿಂದಲಾದರೂ ಹೊಟ್ಟೆ ತಂಪಾಗುತ್ತಿತ್ತು.
No comments:
Post a Comment