(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)
ಪೈಗಳು ಬಂದರೆ ಸುರತ್ಕಲ್ ಮೇಳ ಬಂದಂತೆ :
ವರದರಾಯ ಪೈಗಳ ಮೇಳದ ನಿರ್ವಹಣೆಯು ಜಾಣ್ಮೆಯಿಂದ ಕೂಡಿತ್ತು. ದುಬಾರಿ ಖರ್ಚುಗಳಿಲ್ಲ. ಅಡುಗೆಗೆ ಸಾಧ್ಯವಾದಷ್ಟೂ ಸ್ಥಳೀಯ ತರಕಾರಿಗಳ ಅವಲಂಬನೆ. ಮೇಳವು ಊರಿನಿಂದ ಊರಿಗೆ ಹೋಗುವಾಗ ಆ ಊರಿನ ಪಾರಂಪರಿಕ ತರಕಾರಿಗಳು ಯಾವುದಿದೆಯೋ ಅದರತ್ತ ಒಲವು. ಕಿಲೋಗಟ್ಟಲೆ ಖರೀದಿಯಲ್ಲ. ಒಂದೆಡೆ ಹರಿವೆ, ಬಸಳೆ ಮೊದಲಾದ ಸೊಪ್ಪುಗಳನ್ನು ಬುಟ್ಟಿಯಲ್ಲಿಟ್ಟು ಹೆಂಗಸರು ಮಾರುತ್ತಾರೆ ಎಂದಿಟ್ಟುಕೊಳ್ಳಿ. ಸೊಪ್ಪುಗಳು ತಾಜಾ ಆಗಿದ್ದರೆ ಅವರಲ್ಲಿದ್ದ ಎಲ್ಲಾ ಸೊಪ್ಪುಗಳನ್ನು ಖರೀದಿಸುತ್ತಾರೆ.
ಎಲ್ಲೆಲ್ಲಿ ಸಂತೆ ನಡೆಯುವುದೋ ಅ ಜಾಗವೆಲ್ಲಾ ಪೈಗಳಿಗೆ ಪರಿಚಿತ. ಸಂತೆ ಆಗುವಲ್ಲಿ ಸುರತ್ಕಲ್ ಮೇಳದ ಆಟ ಖಚಿತ! ಅಂದು ಟೆಂಟ್ ಹೌಸ್ಫುಲ್. ಪೈಗಳು ಹಗಲು ಸಂತೆಯಲ್ಲೆಲ್ಲಾ ತಿರುಗಾಡಿ ಮೂರ್ನಾಲ್ಕು ದಿವಸಕ್ಕೆ ಬೇಕಾಗುವಷ್ಟು ತರಕಾರಿ ಖರೀದಿ ಮಾಡುತ್ತಿದ್ದರು. ಇದರಿಂದಾಗಿ ಸಂತೆಯ ವ್ಯಾಪಾರಿಗಳಿಗೆ ಚಿರಪರಿಚಿತರು. ಪೈಗಳು ಬಂದರೆ ಸುರತ್ಕಲ್ ಮೇಳ ಬಂತು ಎಂದು ಆಡಿಕೊಳ್ಳುತ್ತಿದ್ದರು.
ಮೇಳಕ್ಕೆ ಇಳಿ ಲೆಕ್ಕ : ನಾನು ಪುತ್ತೂರು ಬಿಡಾರದಲ್ಲಿದ್ದ ವಾಸವಾಗಿದ್ದ ಸಮಯ. ಅಂದು ಮಾಣಿಯಲ್ಲಿ ಮೇಳದ ಆಟ. ಪೈಗಳು ಸುರತ್ಕಲ್ಲಿಗೆ ಹೋಗಿ ಸಂಜೆ ಬರುವವರಿದ್ದರು. ಸಂಜೆ ಏಳು ಏಳುವರೆ ಗಂಟೆ ಆಗಿರಬಹುದು. ಪುತ್ತೂರು ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ ಮಾಣಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆ. ಅಷ್ಟರಲ್ಲಿ ಮಂಗಳೂರು ಕಡೆಯಿಂದ ಬರುವ ಬಸ್ಸಿನಲ್ಲಿ ಪೈಗಳು ಬಂದಿಳಿದರು. ಬಹುಶಃ ಬಸ್ಸಲ್ಲಿ ಗಾಢ ನಿದ್ದೆಯಲ್ಲಿದ್ದಿರಬೇಕು. ಇಳಿದವರೇ ‘ಗಣಪಣ್ಣ.. ಇಲ್ಲಿ ಎಂತ ಎಂದರು. ಆಶ್ಚರ್ಯವಾಯಿತು. ಓ.. ಇದು ಮಾಣಿಯಲ್ವಾ... ಪುತ್ತೂರಾ.. ಎಂದರು. ನಂತರ ಗಡಿಬಿಡಿಯಲ್ಲಿ ಬಾಡಿಗೆಗೆ ಕಾರನ್ನು ಗೊತ್ತುಮಾಡಿ ಆಟದ ಜಾಗಕ್ಕೆ ಹೋದೆವು.
ಇಂತಹ ಪ್ರಕರಣಗಳು ಆಗಾಗ್ಗೆ ಆಗುತ್ತಿದ್ದುವು. ಹಣಕಾಸಿನ ಲೆಕ್ಕಾಚಾರದ ವಿಚಾರಗಳಲ್ಲೂ ಎಡವಟ್ಟು ಆಗುತ್ತಿದ್ದುವು. ಅದು ಉದ್ದೇಶಪೂರ್ವಕವಾಗಿ ಆಗುವುದಲ್ಲ. ವಯಸ್ಸಿನ ಪ್ರಭಾವ. ಪೈಗಳ ದೇಹ ಮಾಗಿದಂತೆ ಮನಸ್ಸೂ ಮಾಗುತ್ತಿದ್ದುವು. ಆ ಹೊತ್ತಲ್ಲಿ ಮೇಳದ ಕಲೆಕ್ಷನ್ ಕೂಡಾ ಕಡಿಮೆಯಾಗಿತ್ತು. ರಂಗಕ್ಕೆ ತುಳುಪ್ರಸಂಗಗಳು ಬಂದುವು. ಬಲಿಯೇಂದ್ರ, ಸರ್ಪಸತ್ತಿಗೆಯಂತಹ ಪ್ರಸಂಗವೇನೋ ಹಿಟ್ ಆಯಿತು. ಉಳಿದ ಪ್ರಸಂಗಗಳಿಂದ ಹೇಳುವಂತಹ ಗಳಿಕೆ ಇದ್ದಿರಲಿಲ್ಲ. ಅಲ್ಲಿಂದಲ್ಲಿಗೆ ಸರಿದೂಗಿಸಿಕೊಂಡು ಮೇಳ ನಡೆಸುತ್ತಿದ್ದರು.
ದಿನದಿಂದ ದಿನಕ್ಕೆ ಪೈಗಳಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿತ್ತು. ಆಗಾಗ್ಗೆ ಆರೋಗ್ಯವೂ ಕೈಕೊಡುತ್ತಿತ್ತು. ಒಂದು ದಿವಸ ಧೈರ್ಯವಾಗಿ ‘ಮೇಳ ನಿಲ್ಲಿಸುವ ಧನಿಗಳೇ’ ಎಂದು ಸಲಹೆ ನೀಡಿದೆ. ಯಾಕೆಂದರೆ ಆಗಲೇ ಅವರು ಆರ್ಥಿಕವಾಗಿ ಇಳಿಹೆಜ್ಜೆಯನ್ನಿಟ್ಟಿದ್ದರು. ಇನ್ನಷ್ಟು ಸೋಲಬಾರದು. ‘ಹೌದು ಗಣಪಣ್ಣ, ಮೇಳ ನಿಲ್ಲಿಸಿದರೆ ನೀವೆಲ್ಲಾ ಎಲ್ಲಿಗೆ ಹೋಗುವುದು?’ ಈ ಉತ್ತರ ಕೇಳಿ ನಿಜಕ್ಕೂ ದಂಗಾಗಿದ್ದೆ. ಅಂದು ಅವರು ನನ್ನ ಪಾಲಿಗೆ ಕಲಾವಿದರನ್ನು ಸಾಕುವ, ಅವರಿಗೆ ಉದ್ಯೋಗವನ್ನು ಕೊಡುವ ಸಹೃದಯಿಯಾಗಿ ಕಂಡರು. ಪತ್ತನಾಜೆಯ ಮೂರ್ನಾಲ್ಕು ತಿಂಗಳ ಮೊದಲೇ ಮೇಳದ ನಿಲುಗಡೆಯನ್ನು ಘೋಷಿಸಿದರು.
ಸುರತ್ಕಲ್ ಮೇಳದ ಕೊನೆಯ ದಿನ. ಯಕ್ಷಗಾನದ ಇತಿಹಾಸದಲ್ಲಿ ಹೊಸ ಹಾದಿಯನ್ನು ಕ್ರಮಿಸಿದ ಮೇಳವೊಂದು ನಿಲುಗಡೆಗೊಳ್ಳುತ್ತಿರುವುದು ಸಂತೋಷದ ವಿಷಯವಾಗಿರಲಿಲ್ಲ. ಎಲ್ಲರಲ್ಲೂ ಆತಂಕ. ಸಾಕಿ ಸಲಹಿದ ಮನೆಯಿಂದ ಹೊರ ಹೋಗುವ ವಿಷಾದದ ಕ್ಷಣ. ಮೊದಲೇ ನಿಲುಗಡೆಯ ವಿಚಾರ ತಿಳಿಸಿದುದರಿಂದ ಕೆಲವು ಕಲಾವಿದರು ಬೇರೆ ವ್ಯವಸ್ಥೆ ಮಾಡಿಕೊಂಡಿದ್ದರು.
ಪೈಗಳಿಂದ ಒಂದಷ್ಟು ಮಂದಿ ಕಲಾವಿದರು ಸಾಲ ತೆಕ್ಕೊಂಡಿದ್ದರು. ಬಹುತೇಕರು ಸಾಲವನ್ನು ಲೆಕ್ಕ ಚುಕ್ತಾ ಮಾಡಲು ಮುಂದಾದಾಗ ಪ್ರೀತಿಯಿಂದ ಮನ್ನಾ ಮಾಡಿದ್ದರು. ಇಪ್ಪತ್ತಾರು ವರುಷಗಳ ಕಾಲ ಅನ್ನಕೊಟ್ಟ ಮೇಳಕ್ಕೆ ಅಂದು ವಿದಾಯ ಹೇಳಿದೆ. ಭಾರವಾದ ಹೃದಯದಿಂದ ಮನೆ ಸೇರಿದೆ. ತಿರುಗಾಟಕ್ಕೆ ಮೇಳಗಳು ಸಿಗಬಹುದು. ಆದರೆ ಸುರತ್ಕಲ್ ಮೇಳದಂತಹ ಮೇಳ ಮತ್ತು ಪೈಗಳಂತಹ ಧನಿಗಳು ಸಿಗಬಹುದೇ? ಎನ್ನುವ ದುಗುಡ.
ಮೇಳ ಬಿಟ್ಟ ಬಳಿಕವೂ ಪೈಗಳೊಂದಿಗೆ ಸಂಪರ್ಕವಿತ್ತು. ಪ್ರತಿ ವರುಷ ನವರಾತ್ರಿ ಪೂಜೆಗೆ ಅಂಚೆ ಕಾರ್ಡು ಬರೆಯುತ್ತಿದ್ದರು. ಈ ಮಧ್ಯೆ ಸುಮಾರು ನೂರರಷ್ಟು ಕೈಬರೆಹದ ಪ್ರಸಂಗ ಪುಸ್ತಕಗಳನ್ನು ಮೇಳ ಬಿಡುವಾಗ ಪ್ರಮಾದದಿಂದ ಬಿಟ್ಟು ಬಂದಿದ್ದೆ. ಅವು ಎಲ್ಲಿ ಹೋದವೋ ಗೊತ್ತಿಲ್ಲ. ಸುರತ್ಕಲ್ ಮೇಳದ ತಿರುಗಾಟವು ತಾರಾಮೌಲ್ಯ ತಂದುಕೊಟ್ಟಿತು. ಸಮಾಜ ಗುರುತಿಸುವಂತೆ ಮಾಡಿತು.
No comments:
Post a Comment