(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)
ಯಕ್ಷಭೀಷ್ಮನ ಮಡಿಲಲ್ಲಿ....
ಸುರತ್ಕಲ್ ಮೇಳದ ಆರಂಭದ ದಿನಮಾನಗಳತ್ತ ಹೊರಳುತ್ತಿದ್ದೇನೆ.
ಒಂದು ಕಾಲಘಟ್ಟದಲ್ಲಿ ಬದುಕಿನ ಪಥ ಕಾಣದೆ ಎಲ್ಲೋ ಕಳೆದುಹೋಗುತ್ತಿದ್ದೆ. ಸುರತ್ಕಲ್ ಮೇಳವು ಆಸರೆಯಾಯಿತು. ಇದು ಹೊಟ್ಟೆಪಾಡಿನ ವಿಷಯವಲ್ಲ. ತಿಂದುಂಡು ಮಲಗಲು ಮನೆಯಿದೆ. ಅಪ್ಪನಲ್ಲಿ ಕೇಳಿದರೆ ಕಾಸೂ ಸಿಗುತ್ತಿತ್ತು.
ನಾನು ಸುರತ್ಕಲ್ ಮೇಳದಲ್ಲಿ ‘ಸಂಗೀತಗಾರ’ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಿದ್ದ ದಿನಮಾನಗಳಿದ್ದುವು. ಮೇಳದ ಬದುಕು ಯಾವಾಗ ಬದುಕಿಗೆ ಅಂಟಿತೋ, ಅಂದಿನಿಂದ ‘ಮೇಲ್ನೋಟಕ್ಕೆ ಕಾಣುವುದು ಮಾತ್ರ ಯಕ್ಷಗಾನವಲ್ಲ, ಇದಕ್ಕೂ ಆಳವಿದೆ, ಎತ್ತರವಿದೆ’ ಎಂಬ ಅರಿವು ಮೂಡುತ್ತಾ ಬಂತು.
ಸಂಗೀತಗಾರನಿಗೆ ಗುರುಮುಖೇನ ಕಲಿತ ಹಾಡುಗಳು, ತಾಳಗಳು, ರಾಗಗಳ ಪ್ರಸ್ತುತಿಗಳಿಗೆ ಅವಕಾಶವಿಲ್ಲ. ಸಂಗೀತಗಾರನ ವ್ಯಾಪ್ತಿ ಎಷ್ಟೋ ಅಷ್ಟರಲ್ಲೇ ತೃಪ್ತಿಪಡಬೇಕು. ನನ್ನ ಪಾಲಿನ ಕರ್ತವ್ಯವನ್ನು ಶ್ರದ್ಧೆಯಿಂದ ನಿಭಾಯಿಸುತ್ತಿದ್ದೆ. ಹಿರಿಯ ಭಾಗವತರಾದ ಅಗರಿಯವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ‘ಈತ ಪ್ರಸಂಗಕ್ಕೂ ಹೇಳಿಯಾನು’ ಎಂದು ಅವರಿಗೆ ಮನದಟ್ಟಾದ ಬಳಿಕವೇ ಪ್ರಸಂಗಗಳಿಗೆ ಪದ್ಯ ಹೇಳಲು ಅವಕಾಶ ಮಾಡಿಕೊಟ್ಟರು. ಯಕ್ಷಗಾನದ ಹೊರತು ಅನ್ಯ ಯೋಚನೆ, ಚಿಂತೆಗಳಿರಲ್ಲ. ಕಲಾವಿದರೊಂದಿಗೆ ಎಷ್ಟು ಬೇಕೋ ಅಷ್ಟೇ ಒಡನಾಟ. ಅವರ ಸ್ವಭಾವ, ಗುಣಗಳ ಪರಿಚಯವಿಲ್ಲ. ಕಲಾವಿದರ ರಂಗಾಭಿವ್ಯಕ್ತಿ, ತಾರಾಮೌಲ್ಯ, ಬೌದ್ಧಿಕ ಹರವವನ್ನು ತಿಳಿಯುವಷ್ಟು ಜ್ಞಾನವಿದ್ದಿರಲಿಲ್ಲ.
ಆಗ ಶೇಣಿ ಗೋಪಾಲಕೃಷ್ಣ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಬಣ್ಣದ ಮಾಲಿಂಗ, ಕೊಕ್ಕಡ ಈಶ್ವರ ಭಟ್, ಮಧೂರು ಗಣಪತಿ ರಾವ್.. ಮೊದಲಾದ ಕಲಾವಿದರಿಂದ ಮೇಳ ಸಂಪನ್ನವಾಗಿತ್ತು.. ‘ಎಲ್ಲರಂತೆ ಇವರೂ ಕಲಾವಿದರು’ ಎಂದಷ್ಟೇ ತಿಳಿದಿದ್ದೆ. ಐದು ವರುಷ ಹೀಗೆ ಕಳೆಯಿತು.
ರಾಗಗಳ ಸೊಗಸುಗಾರಿಕೆ : ನನ್ನ ಶ್ರದ್ಧೆ ಮತ್ತು ಪದ್ಯದ ಸೊಗಸುಗಾರಿಕೆಯನ್ನು ನೋಡಿಯೇ ಇರಬೇಕು, ಅಗರಿ ರಘುರಾಮ ಭಾಗವತರು ಹೆಚ್ಚೆಚ್ಚು ಪ್ರಸಂಗಗಳ ಪದ್ಯಗಳನ್ನು ಹೇಳಲು ಅನುವು ಮಾಡಿಕೊಟ್ಟರು. ರಾಗಜ್ಞಾನವನ್ನು ಅರಿತ ಮೇಳದ ಯಜಮಾನ ವರದರಾಯ ಪೈಗಳು ಅಗರಿಯವರನ್ನು ಒಲಿಸಿದ್ದಿರಬೇಕು. ಹೀಗೆ ಅವಕಾಶ ಸಿಕ್ಕಾಗ ಶೇಣಿಯವರ ವೇಷಗಳಿಗೆ ಪದ್ಯ ಹೇಳುವ ಸಂದರ್ಭಗಳು ಒದಗಿದುವು. ಉದಾ: ತಿರುಪತಿ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಅವರ ‘ಮಾಧವ ಭಟ್ಟ’ ಪಾತ್ರ. ಇದರ ಪದ್ಯಗಳನ್ನು ನನಗೆ ತೋಚಿದಂತೆ ರಾಗಸಂಯೋಜಿಸಿ ಹೇಳುತ್ತಿದ್ದೆ.
ಒಂದೆರಡು ದಿವಸ ಯಾವ ಪ್ರತಿಕ್ರಿಯೆಯನ್ನೂ ಶೇಣಿಯವರು ಹೇಳಲಿಲ್ಲ. ಒಂದಿವಸ ಹಗಲು ಅವರು ವಿಶ್ರಾಂತಿ ಪಡೆಯುವ ಚಾಪೆಯಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ಭಯ, ಭಕ್ತಿಯಿಂದ ಹೆದರಿ ಮುದುಡಿ ಕುಳಿತೆ. ಹಿಂದಿನ ಆಟಗಳಲ್ಲಿ ಹಾಡಿದ ಪದ್ಯವನ್ನು ಹೇಳಿಸಿದರು. ಬಳಸಿದ ರಾಗಗಳಿಗೆ ಬದಲಿ ರಾಗಗಳನ್ನು ಹಾಕಿ ಹಾಡಿ ತೋರಿಸಿದರು. ನಿಜಕ್ಕೂ ಅಚ್ಚರಿಯಾಯಿತು – ಹೀಗೂ ಉಂಟೇ - ವೇಷಧಾರಿಗೆ ಹಾಡಲು ಬರುತ್ತದಾ?
ಅವರಿಗೆ ತಾಳ, ರಾಗ, ರಂಗಮಾಹಿತಿ, ಯಾವ ಪಾತ್ರಗಳ ದುಃಖಕ್ಕೆ ಯಾವ ರಾಗದಲ್ಲಿ ಹಾಡಬೇಕು ಎನ್ನುವ ಜ್ಞಾನ ಅಪಾರವಾಗಿತ್ತು. ಕೆಲವೊಂದು ಪಾತ್ರಗಳ ಪದ್ಯಗಳಿಗೆ ಹೇಗೆ ಮತ್ತು ಯಾವ ರಾಗದಲ್ಲಿ ಹೇಳಬೇಕೆನ್ನುವ ಪಾಠವನ್ನು ಮಾಡಿದರು. ಆಗ ಇಪ್ಪತ್ತಕ್ಕೂ ಮಿಕ್ಕಿ ರಾಗಗಳು ಸಲೀಸಾಗಿ ಬರುತ್ತಿದ್ದುವು. ಶೇಣಿಯವರು ಹೇಗೆ ಪಾಠ ಮಾಡಿದರೋ ಅಂದು ರಾತ್ರಿಯ ಪ್ರದರ್ಶನದಲ್ಲಿ ಹಾಡಿ ಒಪ್ಪಿಸುತ್ತಿದ್ದೆ. ಒಂದೇ ವಾರದಲ್ಲಿ ಶೇಣಿಯವರ ಪಾತ್ರಗಳ ಪದ್ಯಗಳು ಹಿಡಿತಕ್ಕೆ ಬಂದುವು. ಪ್ರಶಂಸಿಸಿದ್ದರು ಕೂಡಾ.
ಕೆಲವು ದಿವಸ ಕಳೆದಿತ್ತಷ್ಟೇ. ಅಂದು ‘ರಾವಣ ವಧೆ’ ಪ್ರಸಂಗ. ಶೇಣಿಯವರದು ರಾವಣನ ಪಾತ್ರ. ಪ್ರಸಂಗದಲ್ಲೊಂದು ಸಂದರ್ಭದಲ್ಲಿ ‘ಹರನೇ ಶಂಕರನೇ. ಎನ್ನುವ ಪದ್ಯವನ್ನು ಶುಭಪಂತುರಾವಳಿ ರಾಗದಲ್ಲಿ ಹೇಳುತ್ತಿದ್ದೆ. ನಾಲ್ಕೈದು ದಿವಸ ಸಹಿಸಿದರು! ಇದನ್ನು ‘ಆನಂದಭೈರವಿ’ ರಾಗದಲ್ಲಿ ಹೇಳುವುದರಿಂದ ಪರಿಣಾಮ ಹೆಚ್ಚು ಎಂದರು. ಶೇಣಿಯವರ ದೃಷ್ಟಿಯಲ್ಲಿ ಅದು ಲಂಕೇಶ್ವರನಿಗೆ ದುಃಖ ಭಾವವಲ್ಲ. ಅವನಿಗಿರುವುದು ಚಿಂತೆ. ದುಃಖದ ಸ್ಥಾಯಿಭಾವ ಬೇರೆ. ಚಿಂತೆಯದ್ದು ಬೇರೆ. ಅವರು ಸೂಚಿಸಿದ ಆನಂದ ಭೈರವಿ ರಾಗ ಕ್ಲಿಕ್ ಆಯಿತು. ಈಗಲೂ ಇದನ್ನು ಹಾಡುವಾಗ ಶೇಣಿಯವರು ನೆನಪಾಗುತ್ತಾರೆ.
ಮಾಗಧ ವಧೆ ಪ್ರಸಂಗ. ಅವರ ‘ಮಾಗಧ’ ಜನಪ್ರಿಯ. ಭೇರಿಯ ಶಬ್ದವನ್ನಾಲಿಸಿದ ಮಾಗಧನ ಚಿತ್ರಣ ಪರಿಣಾಮಕಾರಿ. ಅಬ್ಬಾ.. ಗ್ರಹಿಸಿದರೆ ಮೈಜುಂ ಎನ್ನುತ್ತದೆ. ‘ತಿಳಿಯದಾದಿರೆ..’ ಪದ್ಯಗಳನ್ನು ಮಾಂಡು ರಾಗದಲ್ಲಿ ಎತ್ತುಗಡೆ ಮಾಡುತ್ತಾ, ವಿವಿಧ ರೀತಿಯಲ್ಲಿ ಹಾಡಿಸಿದ್ದರು. ಪಾತ್ರದ ಸ್ವಭಾವವನ್ನು ಹಾಡಿನ ಮೂಲಕವೂ ತೋರಿಸುವ ಜಾಣ್ಮೆ ಅದ್ಭುತ. ನನ್ನ ಭಾಗವತಿಕೆಯನ್ನು ಎತ್ತರಿಸಿದ ಕೀರ್ತಿ ಶೇಣಿಯವರಿಗೆ ಸಲ್ಲಬೇಕು.
No comments:
Post a Comment