Friday, August 14, 2020

‘ಪದಯಾನ’ - ಪದ್ಯಾಣರ ಸ್ವಗತ – (ಎಸಳು 19)


 (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)

ಗೃಹಸ್ಥನಾದೆ...........

          ನನಗಾಗ ಇಪ್ಪತ್ತೊಂಭತ್ತು ವರುಷ. ಮೇಳದ ಬದುಕಿನ ಹೊರತು ಅನ್ಯ ಯೋಚನೆಗಳಿಲ್ಲ.

          ‘ಮದುವೆ ಆಗಬೇಡ್ವೋ ಮಾರಾಯ’, ಅಮ್ಮ ಹೇಳುತ್ತಿದ್ದರು. ಆಗೆಲ್ಲಾ ಇಪ್ಪತ್ತೈದು ವರುಷದಲ್ಲೇ ವಿವಾಹವಾಗುವ ಪದ್ಧತಿಯಿತ್ತು. ತಂದೆಯವರು ಸಾಕಷ್ಟು ಕಡೆಗಳಲ್ಲಿ ಹುಡುಗಿಯನ್ನು ನೋಡಿದ್ದರು. ತಮ್ಮ ಮನೆತನಕ್ಕೆ ಹೊಂದದೆ ಕೈಬಿಟ್ಟಿದ್ದರು.

          ಕಾಸರಗೋಡು ಜಿಲ್ಲೆಯ ಕುಂಬ್ಡಾಜೆ ಗ್ರಾಮದ ಪಾತೇರಿ ಗೋಪಾಲಕೃಷ್ಣ ಭಟ್ಟರ ಮಗಳು ಶೀಲಾಶಂಕರಿಯ ಜಾತಕ ಹೊಂದಿಕೆಯಾಯಿತು. ಮೇಳದಲ್ಲಿದ್ದ ನನಗೆ ಅಪ್ಪನಿಂದ ಬುಲಾವ್. ನಾನು ಹುಡುಗಿಯನ್ನು ನೋಡಿಲ್ಲ, ಅವಳ ಮನೆಯನ್ನೂ ನೋಡಿಲ್ಲ. ಅಪ್ಪನ ಮಾತಿಗೆ ತಲೆಯಲ್ಲಾಡಿಸಿದೆ. ಗೊತ್ತುಪಡಿಸಿದ ದಿನದಂದು ಮನೆಯವರೊಂದಿಗೆ ಒಟ್ಟಾಗಿ ಪಾತೇರಿಗೆ ಹೋದೆವು. ಹುಡುಗಿಯನ್ನು ನೋಡುವ ಶಾಸ್ತ್ರ ಮುಗಿಯಿತು. ಎಲ್ಲರಿಗೂ ಒಪ್ಪಿಗೆಯಾಯಿತು. ನನಗೂ ಕೂಡಾ.

          13 ಮೇ 1984ರಂದು ವಿವಾಹ ಸಮಾರಂಭವು ಅದ್ದೂರಿಯಾಗಿ ನಡೆಯಿತು. ಸುರತ್ಕಲ್ ಮೇಳದ ಯಜಮಾನರಾದ ವರದರಾಯ ಪೈಗಳು ವಿವಾಹಕ್ಕೆ ಆಗಮಿಸಿ ಹರಸಿದ್ದರು. ಆ ಕಾಲಘಟ್ಟದಲ್ಲಿ ಮೇಳದ ಯಜಮಾನರು ಕಲಾವಿದರ ಮನೆಗೆ ಬರುವುದೆಂದರೆ ಅದು ದೊಡ್ಡ ಸುದ್ದಿ. ಎರಡು ದಿವಸದ ವಿವಾಹ ಸಂಭ್ರಮವು ಕಳೆದ ತಕ್ಷಣ ಮೇಳಕ್ಕೆ ಹೊರಟೆ!

          ನನ್ನ ಭಾಗವತಿಕೆಯನ್ನು ಹೆಣ್ಣು ಕೊಟ್ಟ ಮಾವ ಮೊದಲೇ ಕೇಳಿದ್ದರಂತೆ. ‘ಕಡುಗಲಿ ಕುಮಾರರಾಮ’ ಪ್ರಸಂಗವನ್ನು ಮೆಚ್ಚಿಕೊಂಡಿದ್ದರಂತೆ. ಇದು ಆಮೇಲೆ ತಿಳಿದ ವಿಚಾರ. ಮದುವೆ ಕಾರ್ಯಕ್ರಮ ಮುಗಿಸಿ ನಾನು ಮೇಳಕ್ಕೆ ಹೋದೆ ಅಲ್ವಾ. ಇತ್ತ ಶೀಲಾ ತವರು ಮನೆಗೆ ಹೋದಳು. ಮನೆಗೆ ಬಂದಾಗ ತಂದೆ ಹೇಳಿದ್ರು, ‘ಎಂತ ಮಾರಾಯ.. ಹೀಗೆ ಮಾಡೋದ.. ಅವಳು ತಾಯಿ ಮನೆಗೆ ಹೋಗಿದ್ದಾಳೆ. ಬೇಕಾದ್ರೆ ಕರಕೊಂಡು ಬಾ’ ಅಂದ್ರು!

          ನಾವು ಹನಿಮೂನ್ ಆಚರಿಸಲೇ ಇಲ್ಲ! ಆಟಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ಆಟ ಶುರುವಾಗಿ ಸ್ವಲ್ಪಹೊತ್ತಲ್ಲೇ ಅವಳು ನಿದ್ರಿಸುತ್ತಿದ್ದಳು. ಆಟ ಮುಗಿದ ಬಳಿಕ ಅವಳನ್ನು ಕರೆದುಕೊಂಡು ಬರುತ್ತಿದ್ದೆ. ನನಗೆ ಖುಷಿಯಾಗಲು ‘ಆಟ ಒಳ್ಳೆಯದಾಗಿದೆ’ ಎನ್ನುತ್ತಿದ್ದಳು.

          ಸ್ವಸ್ತಿಕ್ (07-10-1985) ಮತ್ತು ಕಾರ್ತಿಕೇಯ (28-5-1991) ಜನಿಸಿದರು. ನನಗೆ ವಿದ್ಯಾಭ್ಯಾಸ ಇಲ್ಲದಿದ್ದರೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಆಸೆಯಿತ್ತು. ಮಕ್ಕಳನ್ನು ಸಾಕುವ, ವಿದ್ಯಾಭ್ಯಾಸ ಕೊಡುವ ಎಲ್ಲಾ ಹೊಣೆಯನ್ನು ಶೀಲಾ ಹೊತ್ತಳು. ಮಕ್ಕಳ ಪಾಲಿಗೆ ಅಮ್ಮನೂ, ಅಪ್ಪನೂ ಅವಳೇ. ಅಮ್ಮನ ಆಸರೆಯಲ್ಲೇ ಮಕ್ಕಳಿಬ್ಬರೂ ವಿದ್ಯಾಭ್ಯಾಸ ಮಾಡಿದರು. ಈಗ ಉದ್ಯೋಗದಲ್ಲಿದ್ದಾರೆ. ನಾನು ಮಕ್ಕಳ ಶೈಕ್ಷಣಿಕ ಏಳಿಗೆಗೆ ಹೆಚ್ಚು ತಲೆಹಾಕಿದವನಲ್ಲ. ಮಕ್ಕಳಿಗೆ ಈ ವಿಚಾರ ಗೊತ್ತಿದ್ದರೂ, ನನ್ನ ಬಗ್ಗೆ ಹಗುರವಾಗಿ ನಡೆದುಕೊಂಡವರಲ್ಲ. ಮಾತನಾಡಿದವರಲ್ಲ.

          ಕೃಷಿ ನಮ್ಮ ಕುಟುಂಬದ ಮುಖ್ಯ ವೃತ್ತಿ. ಹಿರಿಯರ ಬೆವರಿನ ಶ್ರಮದಿಂದ ಗೋಳ್ತಜೆಯಲ್ಲಿ ಕೃಷಿ ಭೂಮಿ ಅಭಿವೃದ್ಧಿಗೊಂಡಿತು. ಸಹೋದರರೊಳಗೆ ಆಸ್ತಿ ಪಾಲಾಯಿತು. ನನ್ನ ಪಾಲಿನ ತೋಟವನ್ನು ನೋಡುವುದು ಮಾತ್ರ ನನ್ನ ಕೆಲಸ! ಅದರಲ್ಲಿ ಎಷ್ಟು ಖಂಡಿ ಅಡಿಕೆ ಆಗುತ್ತದೆ ಎಂದು ಶೀಲಾಳಲ್ಲಿ ಕೇಳಬೇಕಷ್ಟೆ!

          ಕೃಷಿ ಹಿನ್ನೆಲೆಯ ಅನುಭವ ಇರುವ ಶೀಲಾ ತೋಟವನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದಾಳೆ. ಈಗ ಒಂಭತ್ತು ಖಂಡಿ ಅಡಿಕೆ ಇಳುವರಿ. ನನ್ನ ಅನುಪಸ್ಥಿತಿಯು ಶೀಲಾಳಿಗೆ ತೊಂದರೆಯಾಗದಂತೆ ಮಾವ ನೋಡಿಕೊಳ್ಳುತ್ತಿದ್ದರು. ನಿಜಕ್ಕೂ ಇದು ಭಾಗ್ಯ.

          ನಮ್ಮ ನೆರೆಕರೆಯ ಬೊಮ್ಮೆಟ್ಟಿ ರಘುರಾಮ - ಇವರನ್ನು ಜ್ಞಾಪಿಸಿಕೊಳ್ಳಲೇ ಬೇಕು. ಅವರ ತಂದೆ ವೆಂಕಟ್ರಮಣ ಭಟ್. ರಘುರಾಮ ಒಂದಷ್ಟು ಸಮಯ ಕೆನಡಾದಲ್ಲಿದ್ದರು. ಅವರ ಸಂಪರ್ಕವಿರಲಿಲ್ಲ. ಅವರ ತಂದೆ ಅಸ್ವಸ್ಥರಾಗುವ ಹೊತ್ತಿಗೆ ಕೆನಡಾದಿಂದ ಕೆಲಸ ಬಿಟ್ಟು ಊರಿಗೆ ಬಂದಿದ್ದರು. ಅವರ ಪರಿಚಯವಾಯಿತು. ಹತ್ತಿರವಾದೆವು ಈಗವರು ಪೂರ್ಣಾವಧಿ ಕೃಷಿಕರು. ಕೃಷಿಯಲ್ಲಿ ಖುಷಿ ಕಾಣುತ್ತಾ ಬದ್ಧತೆಯು ಬದುಕನ್ನು ಆತುಕೊಂಡವರು.

          ನನ್ನ ಜಾಗದಲ್ಲಿ ಸುಮಾರು ಮುಕ್ಕಾಲು ಎಕ್ರೆ ಗೇರುಬೀಜದ ಗುಡ್ಡವಿತ್ತು. ಅದರಲ್ಲಿ ರಬ್ಬರ್ ಹಾಕೋಣ ಎಂದು ಸಲಹೆ ಮಾಡಿದ್ದರು. ಅದು ತುಂಬಾ ಶ್ರಮ ಪಡುವ ಕೆಲಸವಾದ್ದರಿಂದ ನಿರ್ಧಾರ  ಮಾಡಲು ಸ್ವಲ್ಪ ಉದಾಸೀನ ಮಾಡಿದೆ. ಒಂದಿವಸ ಅವರೇ ಗುಡ್ಡವನ್ನು ಸಮತಟ್ಟು ಮಾಡಿ, ರಬ್ಬರ್ ಗಿಡವನ್ನು ನೆಡಿಸಿದ್ದರು. ಖರ್ಚು ಎಷ್ಟಾಗಿರಬಹುದೆಂದು ನೀವೇ ಊಹಿಸಿ..! ರಘುರಾಮರಂತಹ ಸ್ನೇಹಿತರು, ವಿಶ್ವಾಸಿಗರು ಎಲ್ಲಿ ಸಿಗುತ್ತಾರೆ? ಅವರ ಸ್ನೇಹಪರತೆಗೆ ಶರಣು.


(ಚಿತ್ರ ಕೃಪೆ : ಯಜ್ಞ ಮಂಗಳೂರು)

 

No comments:

Post a Comment