Tuesday, August 25, 2020

ವರ್ತಮಾನವನ್ನು ನೇವರಿಸಿದ ಪಲಾಂಡು!

                 'ಪಲಾಂಡು' ಅಂದರೆ ನೀರುಳ್ಳಿ. 'ಚೂತ' ಅಂದರೆ ಮಾವಿನ ಹಣ್ಣು. ಒಂದು ಔಷಧ. ಇನ್ನೊಂದು ಆಹಾರ. ಎರಡೂ ಉದರ ಸೇರಿದಾಗ ಆಹಾರ - ಔಷಧ. ಒಂದು ಗರಿಷ್ಠ, ಇನ್ನೊಂದು ಕನಿಷ್ಠ ಎನ್ನಲಾಗದು. ಎಲ್ಲದರದೂ ವಿಭಿನ್ನ ಗುಣಧರ್ಮ. ಕಂದಮೂಲಗಳು, ಫಲ-ತರಕಾರಿಗಳು ಮಾತಿಗೆ ತೊಡಗಿ, ವರ್ಗಸಂಘರ್ಷಕ್ಕೆ ಮುಂದಾದರೆ ಪರಿಣಾಮ ಅನರ್ಥ.

                ಇಂತಹ ಅನರ್ಥಕ್ಕೆ  ತಾರ್ಕಿಕ ಅಂತ್ಯ ಹಾಡುವ 'ಪಲಾಂಡು ಚರಿತ್ರೆ' ಯಕ್ಷಗಾನ ಪ್ರಸಂಗಕ್ಕೆ ಶತಮಾನದ ಇತಿಹಾಸ. ಜಾಗೃತಿ ಸಂದೇಶವನ್ನೊಳಗೊಂಡ ಹೂರಣ. ಪ್ರಸಂಗದ ಕವಿ ಕೆರೊಡಿ ಸುಬ್ಬ ರಾವ್ (1863-1928). ನೆಲದಡಿಯಲ್ಲಿ ಬೆಳೆಯುವ ಕಂದಮೂಲಗಳ  ವರ್ಗ ಮತ್ತು ನೆಲದ ಮೇಲೆ ಬೆಳೆಯುವ ತರಕಾರಿ-ಹಣ್ಣುಗಳೊಳಗಿನ ಭಿನ್ನಾಭಿಪ್ರಾಯಗಳು. ಕೊನೆಗೆ ಸಂಘರ್ಷ ಕೈಬಿಟ್ಟು ಸಸ್ವರೂಪ ಜ್ಞಾನ ಪ್ರಾಪ್ತಿ. ಬಹಳ ಸುಂದರವಾಗಿ ವರ್ತಮಾನದ ವಿದ್ಯಮಾನಗಳನ್ನು ಸ್ಪರ್ಶಿಸುತ್ತಾ ಸಾಗುವ ಕಥಾವ್ಯಾಪ್ತಿ.

                ಕಂದಮೂಲಗಳ ನಾಯಕಪಲಾಂಡು.’ ಸಸ್ಯ ಸಾಮ್ರಾಜ್ಯದ ಫಲ-ತರಕಾರಿಗಳ ಮುಖಂಡಚೂತ’. ಇವರ  ನಾಯಕತ್ವವನ್ನು ಒಪ್ಪಿದ ಅನುಯಾಯಿಗಳು. ತನ್ನ ಪ್ರಭುತ್ವವನ್ನು ಪಲಾಂಡುವಿನ ವರೆಗೂ ವಿಸ್ತರಿಸುವ ಯೋಚನೆ. ಚೂತಫಲದ ಸ್ವಾದ, ಮನ್ನಣೆ, ಸ್ವೀಕೃತಿಯ 'ಕೀರ್ತಿ  ಅಮಲು' ಚೂತನ ಚಿತ್ತವನ್ನು ಕೆಡಿಸಿತ್ತು. ಪಲಾಂಡುವಿನಲ್ಲಿಗೆ ಕುಂಬಳನ (ಕುಂಬಳಕಾಯಿ) ಮೂಲಕ 'ತನಗೆ ಶರಣಾಗಬೇಕು' ಎಂಬ ಸಂದೇಶವನ್ನು ಕಳುಹಿಸುತ್ತಾನೆ.

                ಪಲಾಂಡು ಮತ್ತು ಚೂತ ತಂತಮ್ಮ ಬಳಗದೊಂದಿಗೆ ಮುಖಾಮುಖಿ. ಎರಡೂ ವರ್ಗಗಳೊಳಗೆ  ಯುದ್ಧ. ಕಂದಮೂಲಗಳು ಹಾಗೂ ನೆಲದ ಮೇಲೆ ಬೆಳೆಯುವ ತರಕಾರಿಗಳ ಮಧ್ಯೆ ಮಾತಿನ ಸಮರ. ತಂತಮ್ಮ ಗುಣಾವಗುಣಗಳ ಪ್ರಸ್ತುತಿ. ಕೊನೆಗೆ ಚೂತ ಮತ್ತು ಪಲಾಂಡುವಿನ ಯುದ್ದ. ಕೊನೆಗೆ ಪ್ರಭುತ್ವದ ನಿರ್ಣಯಕ್ಕೆ ಶ್ರೀಕೃಷ್ಣನಲ್ಲಿಗೆ ದೂರು. ಇಬ್ಬರ ಅಭಿಪ್ರಾಯ ವ್ಯತ್ಯಾಸಗಳನ್ನು ಆಲಿಸಿದ ಶ್ರೀಕೃಷ್ಣ, 'ಮೂರು ದಿವಸ ವಿಶ್ರಮಿಸಿರಿ. ಪ್ರಭುತ್ವ ಯಾರದೆಂಬ ನಿರ್ಣಯ ಆಮೇಲೆ ಕೊಡುವೆ' ಎನ್ನುತ್ತಾನೆ.

ಮೂರು ದಿವಸದಲ್ಲಿ ಚೂತವು ರಸಾಹೀನವಾಗಿ ನೋಟ ಕಳೆದುಕೊಳ್ಳುತ್ತದೆ.  ಬೆಂಡೆ, ತೊಂಡೆ, ಹರಿವೆ, ಅಲಸಂಡೆಗಳು ಬಾಡಿವೆ. ಹಲಸು ರೂಪಕಳೆದುಕೊಂಡು ಕೊಳೆಯುವ ಹಂತಕ್ಕೆ ತಲಪಿರುತ್ತದೆ. ಆದರೆ ಪಲಾಂಡು ಮತ್ತು ಬಳಗವು ಯಾವುದೇ ತೊಂದರೆಯಿಲ್ಲದೆ ಉಸಿರಾಡುತ್ತಿದ್ದುವು. ಸುವರ್ಣಗೆಡ್ಡೆ, ಮೂಲಂಗಿಗಳು ಚಿಗುರಿ ಸುಸ್ಥಿತಿಯಲ್ಲಿದ್ದುವು.

                ನಿಸ್ತೇಜವಾದ ಚೂತದ ನಿಶ್ಚಲತ್ವವನ್ನು ಕೃಷ್ಣ ಹೋಗಲಾಡಿಸಿ ತಾತ್ವಿಕವಾದ ಅಂತ್ಯವನ್ನು ನೀಡುತ್ತಾನೆ - ತನ್ನನ್ನು ತಾನು ಬಿಟ್ಟುಕೊಡದೆ ಇತರರನ್ನು ಒಪ್ಪುವುದು ಸುಗುಣತೆ. ಹೊರಗಿನ ಸಿಪ್ಪೆ ತೆಗೆಯದ ಹೊರತು (ಚೂತ) ಒಳಗಿನ ಫಲಸಮೃದ್ಧಿ ಸಿಗುವುದಿಲ್ಲ. ಒಳಗಿರುವುದು ಕಾಠಿಣ್ಯ. ಅಂದರೆ ಗೊರಟು. ಅದು ತ್ಯಾಜ್ಯ. ಪದರವನ್ನು ಸಿಗಿಯುತ್ತಾ ಹೋದಂತೆ (ನೀರುಳ್ಳಿ) ಅಲ್ಲಿ ತ್ಯಾಜ್ಯವಿರುವುದಿಲ್ಲ. ಎಲ್ಲವೂ ಸ್ವೀಕಾರಾರ್ಹ. ಹೇಗೆ ಬೆಳೆಯಬೇಕೆಂಬುದಕ್ಕೆ ಇದು ರೂಪಕ. ಎತ್ತರಲ್ಲಿರುವುದು ಬಾಗುವುದಕ್ಕೆ (ಚೂತಕ್ಕೆ) ಮತ್ತು ಬಯಸಿದವರಿಗೆ ಸಿಗುವುದಕ್ಕೆ ಎನ್ನುವ ಅರಿವು ಬೇಕು.”. ಹೀಗೆ ಸೂಚ್ಯಾರ್ಥಗಳು ಹೊಂದಿರುವ ಮಾತುಗಳು.

ಪ್ರಸಂಗದಲ್ಲಿ ಜನಮಾನಸಕ್ಕೆ ಬೇಕಾದ ಸಂದೇಶಗಳ ರಾಶಿಯಿದೆ. ಯುದ್ಧದ ಸಂದರ್ಭದಲ್ಲಿ ಕಂದಮೂಲಗಳು, ತರಕಾರಿಗಳು ತಂತಮ್ಮ ಆಹಾರ-ಔಷಧೀಯ ಗುಣಗಳು, ದೋಷಗಳನ್ನು ಪ್ರಸ್ತುತಪಡಿಸಬಹುದು. ರಾಸಾಯನಿಕ, ಕೀಟನಾಶಕಗಳ ಮಾರಕ ಪರಿಣಾಮಗಳನ್ನು ಹೇಳಬಹುದು. ತಾಳಿಕೆ-ಬಾಳ್ವಿಕೆಗಳ ವಿವರಗಳನ್ನು ನೀಡಬಹುದು. ಆಹಾರವೇ ಔಷಧಿಯಾಗಬೇಕೆನ್ನುವ ವರ್ತಮಾನದ ಅಗತ್ಯವನ್ನು ಬಿಂಬಿಸಬಹುದು. ಕೊರೋನಾ ಸಂದರ್ಭದ ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ವಿಧಾನಗಳನ್ನು ಅರುಹಬಹುದು. ಇದಕ್ಕೆ ಸ್ವಲ್ಪ ಪೂರ್ವಸಿದ್ಧತೆ ಬೇಕು. 

                ಜರುಗಿದ ಪ್ರದರ್ಶನದಲ್ಲಿ ತುಂಬಾ ಇಷ್ಟವಾದ ಆಂಶವೆಂದರೆ ಯಕ್ಷಗಾನದ ವೇಷಭೂಷಣಗಳನ್ನು ಪಲ್ಲಟಗೊಳಿಸದಿರುವುದು ಮತ್ತು ಪಾತ್ರಗಳ ವಿನ್ಯಾಸಗಳನ್ನು ಬದಲಾಯಿಸದೇ ಇರುವುದು. ಯಕ್ಷಗಾನೀಯ ನೆಲೆಗೆ ಭಂಗ ಬಾರದ ಎಚ್ಚರ. ಕವಿಯ ಆಶಯವನ್ನು ಅನುಭವಿ ಕಲಾವಿದರು ಚೌಕಟ್ಟಿನೊಳಗೆ ಪ್ರದರ್ಶಿಸಿರುವುದು ಪಲಾಂಡು ಚರಿತ್ರೆಯ ಧನಾಂಶ. ಚೂತನ ಅಹಮಿಕೆ, ಪಲಾಂಡುವಿನ ವಿನೀತತೆ, ನಾಯಕತ್ವವನ್ನು ಒಪ್ಪಿಕೊಂಡ ಬಳಗವು ನಾಯಕನನ್ನು ಸಮರ್ಥಿಸುವ ಪರಿ.. ಇವೆಲ್ಲಾ ವರ್ತಮಾನದ ರಾಜಕಾರಣವನ್ನು ಪ್ರತಿನಿಧಿಸುತ್ತವೆ! ಬಹುಶಃ ಇನ್ನೊಂದೆರಡು ಪ್ರದರ್ಶನಗಳಾದರೆ ಕವಿಯ ಆಶಯವನ್ನು ಗಟ್ಟಿಯಾಗಿ ಪ್ರಸ್ತುತಪಡಿಸಬಹುದು.

                ಹಾಗೆಂದು ಮಿತಿಗಳೂ ಇವೆ. ಯೂಟ್ಯೂಬ್ ಚಾನೆಲ್ಗಾಗಿ ಮಾಡುವ ಪ್ರದರ್ಶನಗಳು ಎರಡು ಗಂಟೆ, ಹೆಚ್ಚೆಂದರೆ ಎರಡೂವರೆ ಗಂಟೆಯೊಳಗೆ ವ್ಯಾಪಿಸಿರಬೇಕು. ಹೆಚ್ಚು ಅವಧಿಯ ಪ್ರದರ್ಶನಕ್ಕೆ ಸ್ಮಾರ್ಟ್ ಫೋನಿನಂತಹ ಮಾಧ್ಯಮದಲ್ಲಿ ಒಲವು ಕಡಿಮೆಯಾಗಬಹುದು. ಕೊರೋನಾ ಸಂದರ್ಭದಲ್ಲಿ ನಾವು ವಹಿಸಬೇಕಾದ ಆರೋಗ್ಯದ ಎಚ್ಚರಗಳ ಒಳಸುರಿಗಳನ್ನು ಪ್ರಸಂಗದೊಳಗೆ ತರುವ ಅವಕಾಶಗಳು ಹೇರಳವಾಗಿವೆ.

                ಒಂದು ಕಡೆ ಪಲಾಂಡು ಹೇಳುತ್ತಾನೆ, “ನನ್ನನ್ನು (ನೀರುಳ್ಳಿ) ಮಿತ ಪ್ರಮಾಣದಲ್ಲಿ ಸೇವಿಸಿದರೆ ರೋಗಕಾರಕನಾಗುತ್ತೇನೆ. ನಾನು ಆಹಾರವೂ ಹೌದು. ಔಷಧಿಯೂ ಹೌದು. ನಾನು ವಿಷ್ಣು ಮತ್ತು ಪರಮೇಶ್ವರ ದೇವರಿಗೆ ಹತ್ತಿರ. ಪರಮೇಶ್ವನ ಹೆಂಡತಿ ಪರಮೇಶ್ವರೀ. ಅವಳು ಪ್ರಕೃತಿ. ವಿಷ್ಣುವಿನ ಪತ್ನಿ ಲಕ್ಷ್ಮೀ. ಅಂದರೆ ಭೂದೇವಿ. ಇವರಿಬ್ಬರೂ ನನ್ನ ಇರುವಿಕೆಗೆ ಸ್ಥಾನ ಕಲ್ಪಿಸಿದವರು.”

                ಇನ್ನೊಂದೆಡೆ ಚೂತ ಹೇಳುತ್ತಾನೆ, “ನನ್ನೊಳಗಿನ ಸಿಹಿ ಅಪಥ್ಯವಾಗುವುದಿಲ್ಲ. ಆದರೆ ಕೆಲವರಿಗೆ ಸಿಹಿಯು  ರೋಗವಾಗುವುದಿದೆ. ಇಂತಹವರು ಆಹಾರವನ್ನು ನಿಯಮಿತವಾಗಿ ಸೇವಿಸಿದರೆ ಔಷಧ ಬೇಡ. ಆಹಾರ ಸೇವನೆಯಲ್ಲಿ ಶಿಸ್ತು ಬೇಕು.” ಇದು ಮಧುಮೇಹಿಗಳ ಆಹಾರ ಶಿಸ್ತಿನತ್ತ ಒಂದು ಹೊರಳು ನೋಟ. ಬಹುಶಃ ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಇಂತಹ ವಿಚಾರಗಳು ಬಂದಾಗ ಕೇಳಿ ತಕ್ಷಣಕ್ಕೆ ಮರೆಯುತ್ತೇವೆ. ಯಕ್ಷಗಾನದ ರಂಗದಲ್ಲಿ ಪ್ರಚುರಗೊಂಡಾಗ ಮನದೊಳಗೆ ಇಳಿದು ಮನನಿಸಲು ಸಹಕಾರಿ.

                'ಪಲಾಂಡು ಚರಿತ್ರೆ'ಯನ್ನು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಆಯೋಜಿಸಿದೆ. ಹೈದರಾಬಾದಿನ ಕನ್ನಡ ನಾಟ್ಯರಂಗ (ರಿ) ಇವರ ಹೆಗಲೆಣೆ. ಕೊರೋನಾ ದಿನಮಾನಗಳಲ್ಲಿ ಇದೊಂದು ಜಾಗೃತಿ ಸಂದೇಶ. ಪ್ರತಿಷ್ಠಾನದ ಮುಖ್ಯಸ್ಥ, ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರ ಪರಿಕಲ್ಪನೆ. ಅನುಭವಿ ಕಲಾವಿದರ ಸಂಪನ್ನತೆ.

                ದೇಶಾದ್ಯಂತ ಲಾಕ್ಡೌನ್ ಆದಾಗ 'ಕೊರೋನಾಸುರ' ಪ್ರಸಂಗವನ್ನು ರೂಪಿಸಿ, ಪ್ರದರ್ಶಿಸಿ, ಮೂಲಕ ಕೊರೋನಾ ಕುರಿತ ಮುನ್ನೆಚ್ಚರಿಕೆಯನ್ನು ಬಿಂಬಿಸುವ ಯತ್ನ ಮಾಡಿದ್ದರು. ಅದು ರಾಜ್ಯಮಟ್ಟದ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಈಗಲೂ ಸಾಮಾಜಿಕ ಕಳಕಳಿಯ ಮಯ್ಯರ ಏಕವ್ಯಕ್ತಿ ಯೋಚನೆಗಳಿಗೆ ಕಲಾವಿದರು ಸಾಥ್ ಆಗಿರುವುದರಿಂದ 'ಪಾಲಂಡು ಚರಿತ್ರೆ' ಗೆದ್ದಿದೆ.

                ಸ್ವಾರಸ್ಯಕರ ಪ್ರಸಂಗ. ಚೆನ್ನಾಗಿ ಬಂದಿದೆ. ಕೊರೋನಾ ಸಂದರ್ಭದಲ್ಲಿ ನಿಮ್ಮ ಎಲ್ಲಾ ಪ್ರಯೋಗಗಳು ದೊಡ್ಡ ಪ್ರಯತ್ನ. ನಿಜವಾದ ಅರ್ಥದಲ್ಲಿ ಹಿರಿಯರಿಗೆ ಗೌರವ ಕೊಡುವ ಕೆಲಸ ಮಾಡುತ್ತಿದ್ದೀರಿ.” - ಹೀಗೆ ಹಂಪಿ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಡಾ.ವಿವೇಕ ರೈಗಳು ಸಿರಿಬಾಗಿಲು ಮಯ್ಯರ ಕೆಲಸಗಳನ್ನು ಶ್ಲಾಘಿಸಿದರು.

ಪ್ರಥಮ ಪ್ರಯೋಗ 'ಪಾಲಂಡು ಚರಿತ್ರೆ'ಯಲ್ಲಿ ಭಾಗವಹಿಸಿದ ಕಲಾವಿದರು: ಶ್ರೀಗಳಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ, ತಲ್ಪಣಾಜೆ ವೆಂಕಟ್ರಮಣ ಭಟ್ (ಭಾಗವತರು), ಅಡೂರು ಲಕ್ಷ್ಮೀನಾರಾಯಣ (ಚೆಂಡೆ) ಲಕ್ಷ್ಮೀಶ ಬೇಂದ್ರೋಡು (ಮದ್ದಳೆ), ರವಿಶಂಕರ ಶೆಟ್ಟಿ ಕೊಲ್ಲಂಗಾನ (ಚಕ್ರತಾಳ). ಪಾತ್ರಗಳು : ರಾಧಾಕೃಷ್ಣ ನಾವಡ ಮಧೂರು (ಚೂತ), ಪೆರ್ಮುದೆ ಜಯಪ್ರಕಾಶ್ ಶೆಟ್ಟಿ (ಪಲಾಂಡು ಅಥವಾ ನೀರುಳ್ಳಿ), ವಾಸುದೇವ ರಂಗಾಭಟ್ (ಶ್ರೀಕೃಷ್ಣ), ಮವ್ವಾರು ಬಾಲಕೃಷ್ಣ ಮಣಿಯಾಣಿ (ಕುಂಬಳ), ಹರೀಶ ಮಣ್ಣಾಪು (ಪನಸ ಅಥವಾ ಹಲಸು), ಮಾಧವ ನೀರ್ಚಾಲು (ಹುಣಸೆ), ಬಾಲಕೃಷ್ಣ ಸೀತಂಗೋಳಿ (ಪಾರ್ವತಿ), ಪ್ರಕಾಶ್ ನಾಯಕ್ ನೀರ್ಚಾಲು (ಸುವರ್ಣಗೆಡ್ಡೆ), ಶಿವಾನಂದ ಪೆರ್ಲ (ಈಶ್ವರ), ಶಿವರಾಜ್ ಪೆರ್ಲ (ಮೂಲಂಗಿ), ಉಪಾಸನ ಪಂಜರಿಕೆ (ಬೆಂಡೆ), ಕಿಶನ್ ನೆಲ್ಲಿಕಟ್ಟೆ (ಹರಿವೆ), ಸ್ವಸ್ತಿಕ್ ಶರ್ಮ ಪಳ್ಳತಡ್ಕ (ಗೆಣಸು), ಶ್ರೀಗಿರಿ ಅನಂತಪುರ (ಚೀನಿ). 

ಪ್ರದರ್ಶನವನ್ನು ತುಂಬಾ ವೃತ್ತಿಪರತೆಯಿಂದ ಚಿತ್ರೀಕರಣ  ಮಾಡಿದವರು :  ಶ್ರೀ ಉದಯ ಕಂಬಾರ್, ವರ್ಣ ಸ್ಟುಡಿಯೋ ನೀರ್ಚಾಲು; ಛಾಯಾಗ್ರಹಣ : ಶ್ರೀ ಶ್ಯಾಮ್ ಪ್ರಸಾದ್ ಕುಂಚಿನಡ್ಕ ಮತ್ತು ಉದಯ  ಕಂಬಾರ್.

 

 

No comments:

Post a Comment