(ಯಕ್ಷಗಾನ
ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)
ಆಗ ಕಲ್ಮಡ್ಕದಲ್ಲಿ ಸಹಕಾರಿ ಸಂಘ - ಸೊಸೈಟಿ - ವ್ಯವಸ್ಥೆಯಿತ್ತು. ಅದರಲ್ಲಿ
ಬ್ಯಾಂಕ್ ವ್ಯವಹಾರವೂ ಇತ್ತು. ಅಜ್ಜನಿಗೆ ಬ್ಯಾಂಕಿನಲ್ಲಿ ವಿಶ್ವಾಸವಿರಲಿಲ್ಲ. ಅವರೆಂದೂ ಬ್ಯಾಂಕಿಗೆ
ಹಣ ಜಮಾವಣೆ ಮಾಡುತ್ತಿದ್ದಿರಲಿಲ್ಲ. ಮನೆಯಲ್ಲೇ ಕೂಡಿಡುತ್ತಿದ್ದರು.
ಗೋಕರ್ಣದಲ್ಲಿ ನನ್ನ ಉಪನಯನ ಜರುಗಿತು. ಗೋಳ್ತಾಜೆಯಲ್ಲಿ ದೊಡ್ಡಣ್ಣ ಮತ್ತು
ಸಣ್ಣಜ್ಜನ ಮಗ ಶಂಕರನಾರಾಯಣರ ಉಪನಯನ ಜತೆಯಾಗಿ ಜರುಗಿತು. ಅಜ್ಜ ಬದುಕಿರುವ ತನಕ ಪದ್ಯಾಣದ ಬಹುತೇಕ
ಶುಭ ಕಾರ್ಯಗಳನ್ನು ಗೋಳ್ತಾಜೆಯಲ್ಲೇ ನೆರವೇರಿಸುತ್ತಿದ್ದರು. ಕುಟುಂಬದವರು, ಆಪ್ತರೆಲ್ಲಾ ‘ಗೋಳ್ತಾಜೆಯು
ಫಸ್ಟ್ ಪದ್ಯಾಣ’. ಅಲ್ಲಿಯದು ‘ಸೆಕೆಂಡ್ ಪದ್ಯಾಣ’ ಎಂದು ವಿನೋದಕ್ಕೆ ಹೇಳುತ್ತಿದ್ದರು.
ಆಗ ತಾಳಮದ್ದಳೆಗಳ ಭರಾಟೆ ಹೆಚ್ಚು. ವಾರದ ಕೂಟ. ಸೊಸೈಟಿಯ ಮಹಡಿಯಲ್ಲಿ ಖಾಯಂ
ಕೂಟ. ಉಡುವೆಕೋಡಿ ಸುಬ್ಬಪ್ಪಯ್ಯ, ಕಂಜರ್ಪಣೆ ಗಣಪಯ್ಯ, ಕೆ.ವಿ.ಗಣಪಯ್ಯ.. ಇವರೆಲ್ಲಾ ಅರ್ಥಧಾರಿಗಳು.
ಹಾಡುಗಾರಿಕೆಗೆ ಅಜ್ಜನಗದ್ದೆ ಗಣಪಯ್ಯ ಭಾಗವತರು. ನನ್ನ ತಂದೆ ಮದ್ದಳೆಗಾರ. ಅಜ್ಜನಗದ್ದೆಯವರು ಗೈರುಹಾಜರಾದರೆ
ಅಪ್ಪನದ್ದೇ ಭಾಗವತಿಕೆ. ಶಂಕರತೋಟ ಗಣಪಯ್ಯ ಎಂಬವರಲ್ಲಿ ಜರುಗಿದ ತಾಳಮದ್ದಳೆಯಲ್ಲಿ ಅಜ್ಜ ಭಾಗವತಿಕೆ
ಮಾಡಿದ್ದರಂತೆ. ಆ ದಿವಸ ಅಜ್ಜ ಮೂವತ್ತರಿಂದ ಐವತ್ತು ಹೋಳಿಗೆ ತಿಂದಿದ್ದರಂತೆ! ನಂತರ ಬೆಳಗ್ಗಿನವರೆಗೆ
ಪದ್ಯ ಹೇಳಿದರಂತೆ. ಸಂಭಾವನೆ ತೆಗೆದುಕೊಂಡು ಅಜ್ಜ ಎಂದೂ ಭಾಗವತಿಕೆ ಮಾಡಿದ್ದಿಲ್ಲ.
ಪದ್ಯಾಣ, ತಲೆಂಗಳ, ಮಾಣಿಪ್ಪಾಡಿ ಮನೆತನಗಳು ಒಂದೇ ಕುಟುಂಬ. ಎಲ್ಲರೂ ಒಟ್ಟು
ಸೇರಿದರೆ ನಾಲ್ಕುನೂರಕ್ಕೂ ಮಿಕ್ಕಿ ಸದಸ್ಯರು! ವರುಷದಲ್ಲಿ ಒಂದಲ್ಲ ಒಂದು ವಿಧದಲ್ಲಿ ಸೂತಕಗಳು ಬಾಧಿಸುತ್ತಿದ್ದುವು.
ಮರಣ, ವೃದ್ಧಿ ಸೂತಕಗಳನ್ನು ಲೆಕ್ಕ ಹಾಕಿದರೆ ವರುಷದ ಮುನ್ನೂರ ಅರುವತ್ತೈದು ದಿವಸಗಳೂ ಸೂತಕವೇ! ಅಂದರೆ
ಅಷ್ಟು ದೊಡ್ಡ ಕುಟುಂಬ ಎಂಬರ್ಥ.
ಮನೆಯಲ್ಲಿ ಜಾತಿಯ ಕಟ್ಟುಪಾಡು ಇರಲಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವ ಸಂಸ್ಕಾರ.
ತಾಯಿಯ ಮನೆತನ ಕುಂಡೇರಿ. ವೈದಿಕ ಪರಂಪರೆಯವರು. ಕಾಂಚನ ತಿರುಮಲೇಶ್ವರ ಭಟ್, ರಾಮಚಂದ್ರ ಭಟ್, ಶಂಕರನಾರಾಯಣ
ಭಟ್, ಗಣಪತಿ ಭಟ್, ಶಂಭಟ್ಟ, ಸದಾಶಿವ ಭಟ್ಟ - ಸೋದರ ಮಾವಂದಿರು.
ಯಕ್ಷಗಾನದ ಒಲವು ಎಲ್ಲರಿಗೂ ಪಾರಂಪರಿಕವಾಗಿ ಬಂದಿತ್ತು. ನಾದದ ಗುಂಗಿನ ಬದುಕು.
ತಂದೆ ಮದ್ದಳೆ ಬಾರಿಸುವಾಗ ಜಯರಾಮನನ್ನು ಮಡಿಲಲ್ಲಿ ಕುಳ್ಳಿರಿಸಿಕೊಳ್ಳುತ್ತಿದ್ದರು. ಮದ್ದಳೆಯ ನುಡಿಗಳನ್ನು
ಕೇಳಿಯೇ ಆತ ಕಲಿತಿದ್ದ! ಮನೆಯಲ್ಲಿ ಚೆಂಡೆ, ಮದ್ದಳೆ, ಹಾರ್ಮೋನಿಯಂ, ಪ್ರಸಂಗ ಪುಸ್ತಕಗಳಿದ್ದುವು.
ಊರಿಗೆ ವಿವಿಧ ಮೇಳಗಳು ಬರುತ್ತಿತ್ತು. ಆಗ ನಮ್ಮನೆಗೆ ಕಲಾವಿದರೂ ಬರುತ್ತಿದ್ದರು.
ಎಲ್ಲರಿಗೂ ಸುಗ್ರಾಸ ಭೋಜನ. ಶಂಕರನಾರಾಯಣ ಸಾಮಗರು, ಭೀಮ ಭಟ್, ಮಾಣಂಗಾಯಿ ಕೃಷ್ಣ ಭಟ್, ಹೊಸಹಿತ್ಲು
ಮಹಾಲಿಂಗ ಭಟ್, ಮವ್ವಾರು ಕಿಟ್ಟಣ್ಣ ಭಾಗವತರು, ಕುಡಾನ
ಗೋಪಾಲಕೃಷ್ಣ ಭಟ್.. ಮೊದಲಾದ ಆಢ್ಯರೆಲ್ಲಾ ಬರುತ್ತಿದ್ದರು. ತಂದೆಗೆ ಖುಷಿ. ಎಲ್ಲರನ್ನೂ ಸಂತೋಷಪಡಿಸುತ್ತಿದ್ದರು.
ಸಂಭಾವನೆ ನೀಡಿ ಗೌರವಿಸುತ್ತಿದ್ದರು. ಅದು ಮನೆತನದ ಗೌರವ
No comments:
Post a Comment