Friday, August 21, 2020

‘ಪದಯಾನ’ ಪದ್ಯಾಣರ ಸ್ವಗತ – (ಎಸಳು 26)



 (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)         

ಹೊಸನಗರ ಮೇಳದಿಂದ....

ಹೊಸನಗರ ಮೇಳದಿಂದ ಮುಂದಿನ ತಿರುಗಾಟ. ಸುದೃಢ ಕಲಾವಿದರ ತಂಡ. ಕಾಲಮಿತಿ ಪ್ರದರ್ಶನಗಳಿಗೆ ಆದ್ಯತೆ. ಪುರಾಣ ಪ್ರಸಂಗಗಳನ್ನು ಮಾತ್ರ ಪ್ರದರ್ಶಿಸಲು ನಿರ್ಧಾರ.  ಆರಂಭದ ದಿವಸಗಳಲ್ಲಿ ನಾಲ್ಕು ಗಂಟೆಯ ಕಾಲಮಿತಿ ಆಟಕ್ಕೆ ನಾನೊಬ್ಬನೇ ಭಾಗವತ! ಪ್ರದರ್ಶನ ಪರಿಣಾಮಕಾರಿಯಾಗಬೇಕು ಎನ್ನುವುದು ಶ್ಯಾಮ ಭಟ್ಟರ ನಿಲುವು. ಅವರ ಆಶಯವನ್ನು ಕಲಾವಿದರು ಪಾಲಿಸಿದ್ದಾರೆ, ಪಾಲಿಸುತ್ತಿದ್ದಾರೆ.

          ಪ್ರಸಂಗದ ಕುರಿತು ಪ್ರತಿದಿನ ಸಮಾಲೋಚನೆ. ಪಾತ್ರಗಳ ಬದಲಾವಣೆ. ರಂಗನಿರ್ವಹಣೆಯು ಸೊರಗದಂತೆ ನಿಗಾ. ಅಭಿಮಾನಿಗಳ ಅಭಿಮಾನಕ್ಕೆ ತೊಂದರೆಯಾಗದಂತೆ ಎಚ್ಚರ. ಕೆಲವೊಮ್ಮೆ ಇಡೀ ರಾತ್ರಿಯ ಪ್ರದರ್ಶನಗಳಿಗೆ ಬೇಡಿಕೆ ಬಂದಾಗ ಅತಿಥಿ ಭಾಗವತರನ್ನು ಆಹ್ವಾನಿಸುತ್ತಿದ್ದರು. ಪಾತ್ರಹಂಚೋಣದಿಂದ ತೊಡಗಿ ಆಟ ರೈಸುವಂತೆ ಮಾಡುವ ಜವಾಬ್ದಾರಿ ನನ್ನ ಹೆಗಲೇರಿತ್ತು. ಒಂದೆರಡು ವರುಷದಲ್ಲಿ ಪ್ರಫುಲ್ಲಚಂದ್ರ ನೆಲ್ಯಾಡಿ ಸಹಭಾಗವತರಾಗಿ ಬಂದರು. ನಂತರ ಅವರು ಕಟೀಲು ಮೇಳ ಸೇರಿದರು.

          ಮಂಗಳಾದೇವಿ ಮೇಳದಿಂದ ಬಿಟ್ಟು ಬರುವಾಗ ಅಲ್ಲಿ ನನ್ನ ಶಿಷ್ಯ ರವಿಚಂದ್ರ ಕನ್ನಡಿಕಟ್ಟೆ ಮುಖ್ಯ ಭಾಗವತರು. ಹೊಸನಗರ ಮೇಳದ ನಾಲ್ಕನೇ ವರುಷದ ತಿರುಗಾಟದಲ್ಲಿ ನಾವಿಬ್ಬರೂ ಜತೆಯಾದೆವು. ಒಂದೇ ಮೇಳದಲ್ಲಿ ಗುರು-ಶಿಷ್ಯ ಸಮಾಗಮ! ಆತ ಒಳ್ಳೆಯ ಭಾಗವತ. ವೃತ್ತಿಯಲ್ಲಿ ನಿಷ್ಠೆಯಿದೆ. ಕಲಿಯಬೇಕೆಂಬ ಉತ್ಸಾಹವಿದೆ. ಪ್ರದರ್ಶನವನ್ನು ಕಳೆಗಟ್ಟಿಸುವ ಜಾಣ್ಮೆಯಿದೆ. ನನ್ನ ಕಣ್ಣಮುಂದೆಯೇ, ಒಂದೇ ಮೇಳದಲ್ಲಿ ಶಿಷ್ಯ ರವಿಯ ಬೆಳವಣಿಗೆಯನ್ನು ಗಮನಿಸುತ್ತಾ ಖುಷಿಪಡುತ್ತಿದ್ದೇನೆ.

          ಮೊದಲಿನ ವರುಷಗಳಲ್ಲಿ ಪಾತ್ರ ಹಂಚೋಣ ಮಾಡುತ್ತಿದ್ದೆ. ತುಂಬಾ ಸವಾಲಿನ ಕೆಲಸ! ಕಲಾವಿದರನ್ನು ತೃಪ್ತಿ ಪಡಿಸುವುದು ಇದೆಯಲ್ಲಾ, ಸಣ್ಣ ಕೆಲಸವಲ್ಲ! ಎಲ್ಲಾ ಕಲಾವಿದರಿಗೂ ಅರ್ಹತಗೆ ತಕ್ಕ ವೇಷ ಸಿಗಬೇಕು, ಕೆಲವೊಮ್ಮೆ ಎರಡೆರಡು ಪಾತ್ರ ಮಾಡುವಂತಹ ಸಂದರ್ಭ ಬರುವುದುಂಟು. ಇಂತಹ ಹೊತ್ತಲ್ಲಿ ಕಲಾವಿದರು ಸಹಕರಿಸದಿದ್ದರೆ ಭಾಗವತನಿಗೆ ತಲೆನೋವು.

          ನನಗೂ ವಯಸ್ಸಾಯಿತು ನೋಡಿ. ಇನ್ನೂ ಒತ್ತಡವನ್ನು ಮೈಮೇಲೆ ಎಳೆದುಕೊಳ್ಳುವುದು ಯಾಕೆ ಅಲ್ವಾ. ಎಲ್ಲಾ ಕಲಾವಿದರು ಭಾಗವತನ ನೆಲೆಯಲ್ಲೋ ಅಥವಾ ಗಣಪತಿ ಭಟ್ಟನ ಮೇಲಿನ ಪ್ರೀತಿಯಿಂದಲೋ ಗೊತ್ತಿಲ್ಲ, ಪಟ್ಟಿಯಲ್ಲಿ ಬರೆದ ವೇಷ ಮಾಡುತ್ತಿದ್ದರು! ಗೊಣಗಾಟಗಳಿದ್ದರೂ ಆಟ ಮುಗಿಯುವಾಗ ತಿಳಿಯಾಗುತ್ತಿತ್ತು. ಈ ವಿಷಯದಲ್ಲಿ ಉಂಟಾಗುತ್ತಿದ್ದ ಸಾತ್ವಿಕ ಅಸಮಾಧಾನಗಳು ಚೌಕಿಯ ಹೊರಗೆ ಹೋಗುತ್ತಿರಲಿಲ್ಲ. ಈಚೆಗಂತೂ ರವಿಚಂದ್ರ ಪಾತ್ರ ಹಂಚೋಣದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾನೆ.

          ವರುಷಕ್ಕೊಂದು ಹೊಸ ಪ್ರಸಂಗಗಳನ್ನು ಪ್ರದರ್ಶಿಸಬೇಕೆನ್ನುವುದು ಶ್ಯಾಮ ಭಟ್ಟರ ಆಶಯ. ಕನ್ಯಾಂತರಂಗ, ಪುಣ್ಯಕೋಟಿ, ರಾಮಸೇತು, ರಾಮಕಾರುಣ್ಯ, ಸುರತರಂಗಿಣಿ-ಕಾರ್ತಿಕೇಯ ಕಲ್ಯಾಣ, ಶಶಿವಂಶವಲ್ಲರಿ, ಇಕ್ಷ್ವಾಕು ವಂಶವರ್ಧನ, ಮಹರ್ಶಿ  ಅಗಸ್ತ್ಯ, ಜ್ವಾಲಾಜಾಹ್ನವಿ, ಪಾದಪ್ರತೀಕ್ಷೆ, ತಪೋನಂದನ.. ಪ್ರಸಂಗಗಳು ಹೊಸನಗರ ಮೇಳದಲ್ಲಿ ವಿಜೃಂಭಿಸಿರುವುದು ಇತಿಹಾಸ. ಮೇಳದ ಕಲಾವಿದರ ರಂಗಾಭಿವ್ಯಕ್ತಿಯ ಪರಿಚಯವಿದ್ದ ಪ್ರಸಂಗಕರ್ತರಿಗೆ ಮೊದಲ ಮಣೆ. ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ತಾರಾನಾಥ ಬಲ್ಯಾಯರಂತಹ ಸಮರ್ಥರು ಪ್ರಸಂಗ ರಚಿಸಿದ್ದಾರೆ. ಹೊಸ ಪ್ರಸಂಗವು ಒಂದು ಪ್ರದರ್ಶನ ಕಾಣುವ ವರೆಗೆ ರಂಗಜೋಡಣೆ ತ್ರಾಸ. ಮೇಳ ಹೊರಡುವ ಮೊದಲು ಟ್ರಯಲ್ ಪ್ರದರ್ಶನ. ಸ್ವತಃ ಶ್ಯಾಮ ಭಟ್ಟರು ಉಪಸ್ಥಿತರಿದ್ದು ಸೂಚನೆ, ಬದಲಾವಣೆ ಸೂಚಿಸುತ್ತಿದ್ದರು. ಒಂದಿಬ್ಬರು ಹಿರಿಯ ಕಲಾವಿದರೂ ಉಪಸ್ಥಿತರಿರುತ್ತಿದ್ದರು. ಪ್ರಸಂಗ ಪೌರಾಣಿಕವಾದರೂ ಆಕರ್ಷಣೆಯ ದೃಷ್ಟಿಯಿಂದ ಆಧುನಿಕ ಸ್ಪರ್ಶ ನೀಡುವ ಸನ್ನಿವೇಶಗಳನ್ನು ರೂಪಿಸುತ್ತಿದ್ದೆವು. ಹಾಗಾಗಿ ಇದುವರೆಗೆ ಪ್ರದರ್ಶಿಸಲ್ಪಟ್ಟ ಎಲ್ಲಾ ಪ್ರಸಂಗಗಳೂ ಟಾಪ್! ಪೌರಾಣಿಕ ಕಥೆಯೊಳಗೆ ಹೊಸ ನವೀನತೆ.

          ಮೇಳದ ಆರಂಭದ ದಿನಗಳಲ್ಲಿ ಯಜಮಾನರೇ ಹೆಚ್ಚು ನಿಗಾ ವಹಿಸುತ್ತಿದ್ದರು. ಈಗ ವ್ಯವಸ್ಥಾಪಕ ದಿವಾಕರ ಕಾರಂತರು ಅವರ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಅವರಿಗೆ ಆಟದ ರಿಸಲ್ಟ್ ಪ್ರತೀದಿನ ತಲುಪಲೇ ಬೇಕು. ಪ್ರದರ್ಶನ ಜನಮನ ತಲುಪದಿದ್ದರೆ ನೋವಾಗುತ್ತದೆ. ಯಾವುದೇ ಕಾರಣಕ್ಕೆ ಪ್ರದರ್ಶನ ನೀರಸವಾಗಕೂಡದು ಎನ್ನುತ್ತಿದ್ದರು. ಕಲೆಯ, ಕಲಾವಿದರ ಯೋಗಕ್ಷೇಮದತ್ತ ಕಾಳಜಿ ವಹಿಸುವ ಅವರ ಆಶಯವನ್ನು ಎಲ್ಲ ಕಲಾವಿದರು ಅರ್ಥಮಾಡಿಕೊಂಡಿದ್ದಾರೆ.

(ಯಕ್ಷ ಚಿತ್ರಗಳು : ಕೋಂಗೋಟ್ ರಾಧಾಕೃಷ್ಣ ಭಟ್, ನೀಲೇಶ್ವರ)

 

No comments:

Post a Comment