(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)
ಆಪ್ತತೆಯ ಬಿಗು : ಶೇಣಿಯವರ
ಒಡನಾಟವಾದ ಬಳಿಕ ವರದರಾಯ ಪೈಗಳೊಂದಿಗೆ ಆಪ್ತತೆ ಬಿಗುವಾಯಿತು. ಶೇಣಿಯವರಿಗೆ ಹತ್ತಿರ ಎನ್ನುವ ಕಾರಣವೂ ಇದ್ದೀತೇನೋ. ಊಟ, ತಿಂಡಿ, ನಿದ್ದೆ, ಮಾತುಕತೆ ಎಲ್ಲವೂ ಜತೆಜತೆಗೆ ಆಗುತ್ತಿತ್ತು. ಯಜಮಾನರು ಮೇಳದಲ್ಲೇ ವಾಸ ಮಾಡುತ್ತಿದ್ದರು. ಎಲ್ಲಾ ಕಲಾವಿದರೂ ಜತೆಯಾಗಿ ಉಣ್ಣಬೇಕೆಂಬ ಅಲಿಖಿತ ನಿಯಮವಿತ್ತು. ಪಂಕ್ತಿಯ ಆರಂಭದಲ್ಲಿ ಯಜಮಾನರು, ಬಳಿಕ ಶೇಣಿಯವರು, ನಂತರ ಅಗರಿಯವರು, ಅವರ ನಂತರ ನಾನು. ಮತ್ತೆ ಉಳಿದ ಕಲಾವಿದರು. ಊಟಕ್ಕೆ ಯಜಮಾನರಿಗೆ ಮಜ್ಜಿಗೆ, ಮೊಸರು ಬೇಕು. ಅವರು ಬಳಸಿ ಉಳಿದುದನ್ನು ಇತರರಿಗೂ ಹಂಚುತ್ತಿದ್ದರು.
ಮೇಳದಲ್ಲಿ
ಶೇಣಿಯವರಿದ್ದಾಗ ಅವರಿಗೆ ನಿತ್ಯ ಎರಡು ದಿನಪತ್ರಿಕೆ ಮತ್ತು ಒಂದು ಸೀಯಾಳ ಖಾಯಂ ಅವರು
ರಜೆಯಾದರೆ ಆ ದಿವಸದ ಬಾಬ್ತು ಐವತ್ತು ರೂಪಾಯಿ ವಿಶೇಷ ಗೌರವವಾಗಿ ಅವರಿಗೆ ಸಲ್ಲುತ್ತಿತ್ತು. ಇದು ಶೇಣಿಯವರಿಗೆ
ಯಜಮಾನರ ಗೌರವ. ಶೇಣಿಯವರ ನಿವೃತ್ತಿಯ
ಬಳಿಕ ಈ ಗೌರವಕ್ಕೆ ನಾನು ಭಾಜನನಾದೆ. ಯಜಮಾನರ ಮನೆಯಿರುವುದು ಸುರತ್ಕಲ್ಲಿ. ಸನಿಹದಲ್ಲಿ ಆಟವಿದ್ದರೆ ಮಾತ್ರ ಅವರು ಮನೆಗೆ ಹೋದಾರು. ಮಿಕ್ಕಂತೆ ಮೇಳದಲ್ಲೇ ಬಿಡಾರ. ‘ಯಜಮಾನನಾದವನು ಮೇಳದಲ್ಲೇ ಇರಬೇಕು, ಕಲಾವಿದರೊಂದಿಗೆ ಬೆರೆಯಬೇಕು’ ಎನ್ನುವ ಸಂದೇಶವನ್ನು ಅನುಷ್ಠಾನದಿಂದ ಮಾಡಿ ತೋರಿಸಿದವರು ವರದರಾಯ ಪೈಗಳು. ಬೇರೆ ಮೇಳಗಳಲ್ಲಿ ದನಿಗಳು ಬಿಡಾರದಲ್ಲಿ ಇರುವುದಿಲ್ಲ. ಅವರ ಬದಲಿಗೆ ವ್ಯವಸ್ಥಾಪಕರಿರುತ್ತಾರೆ.
ವರದರಾಯ
ಪೈಗಳಿಗೆ ಬಾಯಿರುಚಿ ಅಧಿಕ. ಆಲುಗಡ್ಡೆ, ನೀರುಳ್ಳಿ ಅಡುಗೆಯಲ್ಲಿ ಬೇಕೇಬೇಕು. ಅವರ ಬಾಯಿರುಚಿಯಿಂದಾಗಿ ಉಳಿದ ಕಲಾವಿದರಿಗೂ ಸ್ವಾದಿಷ್ಟ ಭೋಜನದ ಭಾಗ್ಯ! ಹೋದಲ್ಲೇ ಸ್ನಾನ. ನದಿಯೋ, ಬಾವಿಯೋ, ಕೆರೆಯನ್ನೋ ಆಶ್ರಯಿಸಬೇಕು. ಆಗಿನ ಚಳಿಗಾಲದ ಚಳಿ ಇದೆಯಲ್ಲಾ, ಅದನ್ನು ಸಹಿಸುವುದೇ ಸವಾಲು. ವರದರಾಯ ಪೈಗಳಿಗೆ ಸ್ನಾನಕ್ಕೆ ಬಿಸಿನೀರು ಬೇಕು. ಮೇಳ ಹೋದಲ್ಲಿ ಬಿಸಿನೀರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳುವುದು
ತ್ರಾಸ. ಅದಕ್ಕೊಂದು ಉಪಾಯ ಕಂಡುಹಿಡಿದರು - ಮೇಳದಲ್ಲಿ ಜನರೇಟರ್ ಹೇಗೂ ಇದೆ. ಆಗೆಲ್ಲಾ ನೀರನ್ನು ಫೀಡ್ ಮಾಡಿ, ನಂತರ ಜನರೇಟರ್ ಚಾಲೂ ಮಾಡುವ ವ್ಯವಸ್ಥೆ. ಚಾಲೂ ಆಗುವಾಗ ಈ ನೀರು ಬಿಸಿಯಾಗಿ ಹೊರಬರುತ್ತದೆ. ಆ ನೀರನ್ನು ಸಂಗ್ರಹಿಸಿ ಸ್ನಾನಕ್ಕೆ ಬಳಸುತ್ತಿದ್ದರು. ಬಿಸಿನೀರು ಉಳಿದರೆ, ಣಪಣ್ಣ, ನೀವು ಸ್ನಾನ ಮಾಡಿ’ ಎನ್ನುತ್ತಿದ್ದರು. ಹಾಗಾಗಿ ಯಜಮಾನರಿಂದಾಗಿ ಬಿಸಿನೀರಿನ ಸ್ನಾನದ ಭಾಗ್ಯ ನನಗೂ ಒದಗಿತ್ತು.
ಬದ್ಧತೆಯ ಮೇಳ : ವರದರಾಯ
ಪೈಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದವರು. ಸಮಯಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದರು. ರಾತ್ರಿ ಎಂಟೂವರೆಗೆ ಚೌಕಿ ಪೂಜೆ ಆಗಲೇಬೇಕು. ಒಂಭತ್ತು ಗಂಟೆಯಿಂದ ಕಟ್ಟುವೇಷ, ನಿತ್ಯವೇಷಗಳ ಕುಣಿತ. ಹತ್ತು ಗಂಟೆಗೆ ಹತ್ತು ನಿಮಿಷ ಇರುವಾಗಲೇ
‘ಅಂಬುರುಹದಳನೇತ್ರೆ...’ ಆಗಿ ಪ್ರಸಂಗ
ಶುರು ಆಗಲೇಬೇಕು.
ಕಲೆಕ್ಷನ್ ಕಡಿಮೆಯಾದರೂ ಚಿಂತಿಲ್ಲ; ದೇವರಿಗೆ ಹೂ, ಹಣ್ಣಹಂಪಲುಗಳು ಖಾಯಂ ಇರಲೇಬೇಕು. ಸ್ವತಃ ಪೈಗಳೇ ದೇವರಿಗೆ ಅಲಂಕಾರ ಮಾಡುತ್ತಿದ್ದರು. ಅಗರಿ ರಘುರಾಮ ಭಾಗವತರು ತೆಂಗಿನಕಾಯಿ ಒಡೆದು ಪೂಜೆಯ ಕೈಂಕರ್ಯ ಮಾಡುತ್ತಿದ್ದರು. ಆರತಿ ಬೆಳಗಲು ಮೇಳದ ಬೇರೊಬ್ಬರಿಗೆ ವಹಿಸಿ, ತಾನು ‘ಗಜಮುಖದವಗೆ.’. ಸ್ತುತಿ ಪದ್ಯಕ್ಕೆ ಹೋಗುತ್ತಿದ್ದರು. ಚೌಕಿ ಪೂಜೆ ಮುಗಿಸಿ, ರಂಗಸ್ಥಳಕ್ಕೆ ಬಂದು ಜಾಗಟೆಯನ್ನು ಸಂಗೀತಗಾರನಿಗೆ ಕೊಡುತ್ತಿದ್ದರು. ಇದು ಅಗರಿಯವರ ಶಿಸ್ತು.
No comments:
Post a Comment