Thursday, August 20, 2020

‘ಪದಯಾನ’ - ಪದ್ಯಾಣರ ಸ್ವಗತ – (ಎಸಳು 25)

(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)

ಮಂಗಳಾದೇವಿ-ಕರ್ನಾಟಕ -ಮಂಗಳಾದೇವಿ -

          ಮಂಗಳಾದೇವಿ ಮೇಳದಲ್ಲಿದ್ದ ಪ್ರಧಾನ ಭಾಗವತ ನಾರಾಯಣ ಶಬರಾಯರು ಕಿಶನ್ ಹೆಗಡೆಯವರದ್ದೇ ಆದ ಕರ್ನಾಟಕ ಮೇಳಕ್ಕೆ ನಿಯುಕ್ತಿಗೊಂಡಿದ್ದರು. ಆ ವರುಷ ಮಂಗಳಾದೇವಿ ಮೇಳದಲ್ಲಿ ‘ನೀಲಾವರದ ನೀಲಾಂಬರಿ’ ಪ್ರಸಂಗ. ಉತ್ತಮ ಸೆಟ್ಟಿಂಗ್. ಒಳ್ಳೆಯ ಕಥೆ. ಉಡುಪಿ ಪ್ರದೇಶದಲ್ಲಿ ಜನಪ್ರಿಯತೆ ಪಡೆದ ಪ್ರಸಂಗ ಮತ್ತು ಪ್ರದರ್ಶನ. ಯಜಮಾನರ ಗಲ್ಲಾಪೆಟ್ಟಿಗೆಯನ್ನು ತುಂಬಿಸಿದ ಪ್ರಸಂಗ! ಕೋಲಾಟ, ಜಾನಪದ ನೃತ್ಯದಂತಹ ವಿಶೇಷ ಆಕರ್ಷಣೆಯ ಸನ್ನಿವೇಶಗಳನ್ನು ಪೋಣಿಸಿದ್ದೆವು. ಒಮ್ಮೆಯಲ್ಲ, ಹತ್ತಾರು ಬಾರಿ ನೋಡಿ ಖುಷಿಪಟ್ಟ ಅಭಿಮಾನಿಗಳಿದ್ದರು. ಮೇಳಕ್ಕೂ, ನನಗೂ ಕೀರ್ತಿಯನ್ನು ತರಲು ಕಾರಣರಾದ ಕಿಶನ್ ಹೆಗಡೆಯವರಿಗೆ ನಮೋನಮಃ

          ಮುಂದಿನ ವರುಷ ಸಾಲಿಗ್ರಾಮ ಮೇಳಕ್ಕೆ ಭಾಗವತರಾಗಿ ನಾರಾಯಣ ಶಬರಾಯರ ನಿಯುಕ್ತಿ. ಕರ್ನಾಟಕ ಮೇಳಕ್ಕೆ ಭಾಗವತರ ಕೊರತೆಯುಂಟಾಯಿತು. ಕಿಶನ್ ಹೆಗಡೆಯವರ ಕೋರಿಕೆಯಂತೆ ನಾನು ಕರ್ನಾಟಕ ಮೇಳದ ಭಾಗವತನಾದೆ. ಆ ತಿರುಗಾಟದ ಪ್ರಸಂಗ ‘ಮಾಂಕಾಳಿ ಅಪ್ಪೆ.’ ಪ್ರಸಂಗ ಹಿಟ್ ಆಯಿತು. ಹೋದೆಡೆಯಲ್ಲಿ ಜನಸ್ವೀಕಾರ. ವಿವಿಧ ಸನ್ನಿವೇಶಗಳಿಗೆ ಆಕರ್ಷಕ ನೋಟದ ಸ್ಪರ್ಶ ನೀಡಿ ಪ್ರಸಂಗವನ್ನು ಜನಮನಕ್ಕೆ ಒಯ್ದಿದ್ದೇನೆ ಎನ್ನುವ ಖುಷಿಯಿದೆ. ಒಂದು ಕಾಲಘಟ್ಟದಲ್ಲಿ ಕರ್ನಾಟಕ ಮೇಳದ ಆಟ, ಹಿಮ್ಮೇಳ-ಮುಮ್ಮೇಳಗಳು ವೈಭವ ಪಡೆದಿದ್ದುವು. ಅಂತಹ ಮೇಳದಲ್ಲಿ ಭಾಗವತಿಕೆ ಮಾಡುವುದು ಹೆಮ್ಮೆ ಮತ್ತು ಅಭಿಮಾನ. ದಾಮೋದರ ಮಂಡೆಚ್ಚರಂತಹ ಹಿರಿಯ ಭಾಗವತರು ಕುಳಿತು ಹಾಡಿದ ಪಡಿಮಂಚದಲ್ಲಿ ಕುಳಿತು ಹಾಡುವ ಯೋಗ ಪ್ರಾಪ್ತಿಸಿತು.

          ಮೇಳ ಅಂದರೆ ಯಜಮಾನರುಗಳಿಗೆ ತಲೆನೋವು ಸಹಜ. ಅದರಲ್ಲೂ ಮೂರ್ನಾಲ್ಕು ಮೇಳಗಳ ಜವಾಬ್ದಾರಿಯಿದ್ದ ಕಿಶನ್ ಹೆಗಡೆಯವರಿಗೆ ಹೇಗಾದೀತು? ಮೂರನೇ ವರುಷದ ನನ್ನ ತಿರುಗಾಟ ಪುನಃ ಮಂಗಳಾದೇವಿ ಮೇಳದಿಂದಾಯಿತು. ಸುರತ್ಕಲ್ ಮೇಳದ ಬಳಿಕ ಮೂರು ವರುಷ ಕಿಶನ್ ಹೆಗ್ಡೆಯವರು ಯಕ್ಷಾಸರೆ ನೀಡಿದ್ದರು. ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.

          ಒಂದು ದಿನ. ಟಿ.ಶ್ಯಾಮ ಭಟ್ಟರಿಂದ ಬುಲಾವ್. ಹೊಸದಾಗಿ ರೂಪುಗೊಳ್ಳುವ ಶ್ರೀ ಎಡನೀರು ಮೇಳಕ್ಕೆ ಭಾಗವತರಾಗಿ ಬರುವಂತೆ ಆಹ್ವಾನ. ಛೇ... ಕಿಶನ್ ಹೆಗಡೆಯವರನ್ನು ಆರ್ಧದಲ್ಲೇ ಕೈಬಿಟ್ಟಂತೆ ಆಗದೇ? ಅವರು ನನ್ನನ್ನು ನಂಬಿದ್ದಾರೆ, ನಾನು ಅವರನ್ನು ನಂಬಿದ್ದೇನೆ. ಹೇಳಲಾಗದ ನೋವು, ತೊಳಲಾಟ, ಸಂದಿಗ್ಧ. ಶ್ಯಾಮ ಭಟ್ಟರ ಮಾತೆಂದರೆ ಆಯಿತು, ಒಲ್ಲದ ಮನಸ್ಸಿನಿಂದ ಹೆಗಡೆಯವರು ಒಪ್ಪಿಗೆ ಕೊಟ್ಟರು, ಕಳುಹಿಸಿಕೊಟ್ಟರು. 

ಹೊಸ ಮೇಳಗಳಲ್ಲಿ ದಿಗ್ವಿಜಯ : ಹೊಸ ಮೇಳ ಹೊರಡುವ ಸುದ್ದಿ ಯಕ್ಷಾಭಿಮಾನಿಗಳಲ್ಲಿ ಸಂಚಲನ ಮೂಡಿಸಿದ ಕಾಲಘಟ್ಟ. ವೇಷಭೂಷಣ, ರಂಗಸ್ಥಳ.. ಎಲ್ಲಾ ವ್ಯವಸ್ಥೆಗಳೂ ಹೊಸತು. ಪೂಜ್ಯ ಎಡನೀರು ಶ್ರೀಗಳ ಆಶೀರ್ವಾದ. ಟಿ.ಶ್ಯಾಮ ಭಟ್ಟರ ಸಮರ್ಥ ನಾಯಕತ್ವ. ಗಟ್ಟಿ ಹಿಮ್ಮೇಳ, ಮುಮ್ಮೇಳ. ಯಕ್ಷಗಾನ ಪರಿಭಾಷೆಯಲ್ಲಿ ಗಜ ಸೆಟ್.

          ಹಿಮ್ಮೇಳದಲ್ಲಿ ಮೂರು ಮಂದಿ ಭಾಗವತರು. ದಿನೇಶ ಅಮ್ಮಣ್ಣಾಯರು, ನಾರಾಯಣ ಶಬರಾಯರು, ಮತ್ತು ನಾನು. ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಪದ್ಮನಾಭ ಉಪಾಧ್ಯಾಯರು ಚೆಂಡೆ-ಮದ್ದಳೆಗೆ. ತೆಂಕಿನ ಅನುಭವಿ ಕಲಾವಿದರ ಸಮ್ಮಿಲನ. ಕಲಾವಿದರ ತುಂಬು ಒಗ್ಗಟ್ಟು. ಉತ್ತಮ ವ್ಯವಸ್ಥೆ. ಶ್ರೀಮಠದ ಜಯರಾಮ ಮಂಜತ್ತಾಯರ ನಿರ್ವಹಣೆ. ಎರಡು ವರುಷ ಮೇಳದ ದಿಗ್ವಿಜಯ. ಇತ್ತ ಕಾಸರಗೋಡಿನಿಂದ ಅತ್ತ ಅಂಕೋಲದ ತನಕ. ಪೂಜ್ಯ ಸ್ವಾಮೀಜಿಯವರ ಅಭಿಮಾನಿಗಳು, ಶಿಷ್ಯರು ಭಟ್ಕಳ, ಶಿರಸಿ, ಅಂಕೋಲಗಳಲ್ಲಿರುವುದರಿಂದ  'ಶ್ರೀ ಸ್ವಾಮೀಜಿ ಮೇಳ' ಎಂದೇ ಖ್ಯಾತವಾಗಿತ್ತು.

 

No comments:

Post a Comment