Saturday, August 1, 2020

ಪದ್ಯಾಣರ ಸ್ವಗತ – (ಎಸಳು 6)


  (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ) 

ತಂದೆಯವರು ಕಷ್ಟಪಟ್ಟು ಸಂಪಾದಿಸಿದ ಅಡಿಕೆ, ತೆಂಗಿನಕಾಯಿ, ಕಾಳುಮೆಣಸು ಸಂಗ್ರಹವು ಅಟ್ಟದಲ್ಲಿತ್ತು. ಹೊಗೆ ತಾಗಿದ ಮುಳಿ ಹುಲ್ಲಿನ ಸೂರು. ಒಂದರ್ಧ ಗಂಟೆಯಲ್ಲಿ ಉರಿದು ಭಸ್ಮವಾಗಿತ್ತು. ಕೆರೆಕ್ಕೋಡಿ ಶ್ರಾದ್ಧಕ್ಕೆ ಬಂದವರೆಲ್ಲಾ ಬೆಂಕಿ ನಂದಿಸಲು ಹರಸಾಹಸ ಮಾಡುತ್ತಿದ್ದರು. ಗೋಳ್ತಜೆ ಮನೆಗೆ ಬೆಂಕಿಬಿತ್ತು ಎಂದು ಪ್ರಚಾರವಾಯಿತು. ಜನ ಸೇರಿದರು. ನೀರು ಹಾಕಿ ನಂದಿಸಲು ಯತ್ನಿಸುತ್ತಿದ್ದರು. ಅಲ್ಲಿಂದಿಲ್ಲಿಂದ ಸಿಕ್ಕಾ ಸಿಕ್ಕಾ ಪಾತ್ರೆ, ಕೊಡಪಾನಗಳಲ್ಲಿ ನೀರು ತಂದು ಸುರಿಯುತ್ತಿದ್ದರು.

ಅವಿರತ ದುಡಿಮೆಯಿಂದಾಗಿ ಆಗಷ್ಟೇ ತಂದೆಯವರು ಸಾಲಗಳಿಂದ ಮುಕ್ತರಾಗಿದ್ದರು. ಆಪತ್ಕಾಲಕ್ಕೆಂದು ಇಪ್ಪತ್ತೈದು ಖಂಡಿ ಅಡಿಕೆ, ಕಾಳುಮೆಣಸನ್ನು ಅಟ್ಟದಲ್ಲಿ ಸಂಗ್ರಹಿಸಿಟ್ಟಿದ್ದರು. ಎಲ್ಲವನ್ನು ಅಗ್ನಿ ಸ್ವಾಹಾ ಮಾಡಿದ್ದ. ಅಪ್ಪ ಬಸ್ಸಿಳಿದು ಬರುತ್ತಿದ್ದಂತೆ ಇಷ್ಟೆಲ್ಲ ಅನಾಹುತ ನಡೆದುಹೋಗಿತ್ತು. ಕಣ್ಣ ಮುಂದೆಯೇ ಕನಸಿನ ಬದುಕು ಭಸ್ಮವಾದಾಗ ದುಃಖಿಸಿದರಂತೆ. ಅಮ್ಮನಲ್ಲಿ ನೋವನ್ನು ಹಂಚಿಕೊಂಡಿದ್ದರಂತೆ - ಮತ್ತೆ ತಿಳಿಯಿತು.

ಮನೆಯೇನೋ ಭಸ್ಮವಾಯಿತು. ಮನೆಗೆ ಬರುವಂತಿಲ್ಲ. ಅಪ್ಪ ನೋಡಿದರೆ ಪೆಟ್ಟು ಗ್ಯಾರಂಟಿ! ಮನೆಯ ಹತ್ತಿರದ ಗುಡ್ಡೆಯಲ್ಲಿ ಬಿದಿರಿನ ಹಿಂಡ್ಲು ದಟ್ಟವಾಗಿ ಬೆಳೆದಿತ್ತು. ಅದರೊಳಗೆ ಮೂರು ಹಗಲು, ಮೂರು ರಾತ್ರಿ ಕಳೆದಿದ್ದೆ. ಶನೀಶ್ವರ ಮಹಾತ್ಮೆ ಪ್ರಸಂಗದ ಈಶ್ವರನಂತೆ..!

ಮಗ ಹಸಿದಿರಬಾರದು ಎಂದು ಅಮ್ಮ ಹೊತ್ತಿಗೆ ಸರಿಯಾಗಿ ಊಟ, ತಿಂಡಿಗಳನ್ನು ಒದಗಿಸುತ್ತಿದ್ದಳು. ಮನೆ ಉರಿದ ತಲೆಬಿಸಿಯಲ್ಲಿ ಕುಟುಂಬದ ವಿಚಾರಗಳನ್ನು ಅಪ್ಪ ಮರೆತಿದ್ದಿರಬೇಕು. ಮೂರು ದಿವಸ ಪೆಟ್ಟು ಬೀಳುವುದು ತಪ್ಪಿತಲ್ಲಾ... ಆ ಖುಷಿಯಲ್ಲಿ ನಾನಿದ್ದೆ.

ವಾಸಕ್ಕೆ ಮನೆಯೊಂದು ಬೇಕಲ್ವಾ. ಒಕ್ಕಲು ಬೊಮ್ಮಣ‍್ಣ  ಗೌಡರು ಕಟ್ಟಿದ ಮನೆಯೊಂದಿತ್ತು. ಹೊಸ ಮನೆ ಆಗುವಲ್ಲಿಯ ತನಕ ಅಲ್ಲಿ ವಾಸ. ಈ ಸಂದರ್ಭದಲ್ಲಿ ತಂದೆಗೆ ಹೆಗಲೆಣೆಯಾಗಿ ಸಹಕರಿಸಿದವರು ಬೆಟ್ಟ ಈಶ್ವರ ಭಟ್ಟರು. ಶಾಲೆಯಿಂದ ಪತ್ರ ಬಂದುದು ತಂದೆಗೆ ಗೊತ್ತಾಗಿತ್ತು. ಅದರ ಹಿಂದಿನ ಸತ್ಯ ಗೊತ್ತಿರಲಿಲ್ಲ. ತಂದೆಯ ಎದುರು ಸುಳಿಯದಂತೆ ಎಚ್ಚರ ವಹಿಸುತ್ತಿದ್ದೆ.

ದಿನ ಸರಿಯುತ್ತಿತ್ತು. ಅಮ್ಮನಿಗೆ ಚಿಂತೆ. ನಾನು ಶಾಲೆಗೆ ಹೋಗದೆ ಮನೆಯಲ್ಲಿ ಕುಳಿತರೆ ಮುಂದಿನ ಭವಿಷ್ಯದತ್ತ ಚಿಂತಿತರಾಗಿದ್ದರು. ಮನೆಗೂ ಬೇಡ, ಶಾಲೆಗೂ ಬೇಡ. ಅಮ್ಮನ ದುಗುಡವನ್ನು ಅರ್ಥಮಾಡಿಕೊಳ್ಳದ ಮನಃಸ್ಥಿತಿ ರೂಪುಗೊಂಡಿತ್ತು.

ಈ ಮಧ್ಯೆ ಒಂದು ಘಟನೆ ನಡೆಯಿತು. ಅದನ್ನು ಅಣ್ಣ ನಾರಾಯಣ ಭಟ್ ಹೇಳಲಿ, ಅಲ್ವಾ....

“ಗಣಪತಿ ಯಾರ ಅಂಕೆಗೂ ಸಿಗುತ್ತಿರಲಿಲ್ಲ. ತಾನು ನಡೆದದ್ದೇ ದಾರಿ. ಯೋಚಿಸಿದ್ದೇ ವಿಚಾರ. ಮಾತನಾಡಿದ್ದೇ ಮಾತು - ಎನ್ನುವಂತಹ ಸ್ವಭಾವ. ಪುಟ್ಟಪರ್ತಿ  ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ದರ್ಶನಕ್ಕೆ ಅಪ್ಪ, ಅಮ್ಮನೊಂದಿಗೆ ತೆರಳಿದ್ದೆವು. ಸ್ವಾಮಿಯ ದರ್ಶನವಾಯಿತು. ಅಪ್ಪನ ಮುಖವನ್ನು ನೋಡುತ್ತಾ, ‘ನಿಮಗೆ ದುರಾಭ್ಯಾಸವಿದೆ. ಮನಃಶ್ಶಾಂತಿಯಿಲ್ಲ. ಮಕ್ಕಳ ಬಗ್ಗೆ ಚಿಂತೆಯಿದೆ. ಸದ್ಯದಲ್ಲೇ ಎಲ್ಲವೂ ಪರಿಹಾರವಾಗುತ್ತದೆ’ ಎಂದು ಆಶೀರ್ವದಿಸಿದರು. ತಂದೆಯವರಿಗೆ ಕುತೂಹಲ. ‘ನನಗೆ ದುರಾಭ್ಯಾಸವಿದೆ’ ಎಂದು ಸ್ವಾಮೀಜಿಗೆ ಹೇಳಿದವರಾರು? ಮಕ್ಕಳ ದುಃಸ್ಥಿತಿ ಹೇಗೆ ಗೊತ್ತಾಯಿತು? ಈ ಪ್ರಶ್ನೆಗಳಿಗೆ ಉತ್ತರ ಸಿಗದೆ ಕಂಗಾಲಾದರು. ‘ಅಲೌಕಿಕವಾದ ಒಂದು ಶಕ್ತಿಯಿದೆ’ ಎನ್ನುವುದು ಖಾತ್ರಿಯಾಯಿತು. ‘ಇನ್ನು ಮುಂದೆ ಬೀಡಿ ಸೇದುವುದಿಲ್ಲ,’ ಪ್ರತಿಜ್ಞೆ ಮಾಡಿದರು. ಅಲ್ಲಿಂದ ಸಾಯಿಭಕ್ತರಾದರು. ಪುಟ್ಟಪರ್ತಿಯ ಘಟನೆಯ ಬಳಿಕ ಮನೆಯ ವಾತಾವಾರಣ ಬದಲಾಯಿತು. ಅದೇ ಹೊತ್ತಿಗೆ....

No comments:

Post a Comment