(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)
ಶೇಣಿ ಯುಗ : ಶೇಣಿಯವರ ಒಡನಾಟವನ್ನು ನೆನಪಿಸುತ್ತಾ ಕಾಳಿಂಗ ನಾವಡರತ್ತ ಹೊರಳಿದೆ ಅಲ್ವಾ. ಮಣಿಪಾಲದ ಘಟನೆಯ ಬಳಿಕ ಶೇಣಿಯವರು ನಾವಡರ ಪದ್ಯಗಳಿಗೆ ತಲೆದೂಗುತ್ತಿದ್ದರು. ಹಲವು ಧ್ವನಿಸುರುಳಿಗಳಲ್ಲಿ ಭಾಗವಹಿಸಿದ್ದರು. ನಾವಡರ ಶಾರೀರವು ರಾಗಗಳ ಏರಿಳಿತಕ್ಕೆ ಸೂಕ್ತವಾಗಿದೆ ಎಂದು ಶೇಣಿಯವರು ಹೇಳುತ್ತಿದ್ದರು.
ರಾಗ ಸಂಚಾರವು ಪಂಚಮಕ್ಕೆ ಹೋಗಿ ಮತ್ತೆ ಇಳಿಯುವ ಶೈಲಿಯು ಶೇಣಿಯವರಿಗೆ ಇಷ್ಟವಾಗುತ್ತಿತ್ತು. ಆಟ, ಕೂಟಗಳಲ್ಲಿ ಹಾಡುವಾಗ ಜತೆಗೆ ಸ್ವರ ಸೇರಿಸುತ್ತಿದ್ದರು. ಇದು ಅವರ ಅರ್ಥಗಾರಿಕೆಗೆ ಬಂಗಾರದ ಕವಚ ತೊಡಿಸಿದಂತೆ ಸುಂದರವಾಗಿ ಕಾಣುತ್ತಿತ್ತು. ಪಂಚಮಕ್ಕೆ ಹೋಗುವ, ಇಳಿಯುವ ಶೈಲಿ ಇದೆಯಲ್ಲಾ ಇದೇ ಪದ್ಯಾಣ ಶೈಲಿ - ಶೇಣಿಯವರ ಪ್ರಶಂಸೆಯೂ ಹೌದು. ವಾಸ್ತವವೂ ಹೌದು.
ಆರಂಭದ ದಿವಸಗಳಲ್ಲಿ ಸಾಮ, ದೇವಗಾಂಧಾರ ರಾಗಗಳು ಕೈಕೊಡುತ್ತಿದ್ದುವು. ಶೇಣಿಯವರು ರಂಗದಲ್ಲೇ ತಾನು ಹೇಳುತ್ತಾ, ಹೇಳಿಸಿ ಸರಿಪಡಿಸುತ್ತಿದ್ದರು. ಪದ್ಯಗಳಲ್ಲಿರುವ ಸಾಹಿತ್ಯಗಳನ್ನು ತಿದ್ದಿದ್ದರು. ಹಾಡುವಾಗ ಸಾಹಿತ್ಯ ಸ್ಪಷ್ಟತೆ ಬೇಕು ಎಂದು ಪ್ರತಿಪಾದಿಸುತ್ತಿದ್ದರು.
ರಂಗದಲ್ಲಿ ಅರ್ಥಗಾರಿಕೆಗೂ ಕಿವಿಯಾಗುತ್ತಿದ್ದೆ. ಇಂದೊಂದು ರೀತಿಯ ರಾವಣನಾದರೆ, ನಾಳೆ ಮತ್ತೊಂದು ರೂಪದ ರಾವಣ. ಹಾಗಾಗಿ ಅರ್ಥಗಾರಿಕೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ‘ರಾಜಾ ಯಯಾತಿ’ ಪ್ರಸಂಗದಲ್ಲಿ ಅವರದು ಎರಡನೇ ಭಾಗದ ಯಯಾತಿ, ‘ಕಡುಗಲಿ ಕುಮಾರ ರಾಮ’ದಲ್ಲಿ ಅವರ ತುಘಲಕ್ ಪಾತ್ರವು ರಂಗಕ್ಕೆ ಬರುವಾಗ ಮಧ್ಯರಾತ್ರಿ ಮೀರುತ್ತಿದ್ದುವು. ಆಗ ಅಗರಿ ರಘುರಾಮ ಭಾಗವತರ ಸರದಿ. ನಾನು ಮದ್ದಳೆಯಲ್ಲೋ, ಚಕ್ರತಾಳದಲ್ಲಿದ್ದುಕೊಂಡು ಅರ್ಥಗಳನ್ನು ಕೇಳುತ್ತಿದ್ದೆ.
ಎಲ್ಲಾ ಪ್ರಸಂಗಗಳಿಗಳ ರಂಗನಡೆಗಳ ಕಲಿಕೆಗೆ ಶೇಣಿ,
ತೆಕ್ಕಟ್ಟೆಯವರೇ ನಿರ್ದೇಶಕರು. ಹೊಸ ಪ್ರಸಂಗಗಳು ಸಿಕ್ಕರೆ
ಸಮಾಲೋಚನೆ ಮಾಡುತ್ತಿದ್ದರು. ಅವರ ಮನೋಧರ್ಮವೂ ನನ್ನ
ಮನೋಧರ್ಮವೂ ಮಿಳಿತವಾದುದರಿಂದಲೇ ಶೇಣಿಯವರು ಬಹಳವಾಗಿ ಒಲವು ಇರಿಸಿದ್ದರು ಎಂದು ನಂಬಿದ್ದೇನೆ. ಹಾಗಾಗಿ
ಅವರು ಭಾಗವಹಿಸುವ ಬಹುತೇಕ ತಾಳಮದ್ದಳೆಗಳಿಗೆ ಅವಕಾಶ ಬಂತು. ಅವರೂ ಮಾಡಿಕೊಟ್ಟರು. ಸಂಘಟಕರು ಬಯಸಿದರು.
ಹೀಗಾಗಿ ಒಂದು ಕಾಲಘಟ್ಟದ ತಾಳಮದ್ದಳೆ, ಆಟ ತಿರುಗಾಟಗಳು ಶೇಣಿ ಯುಗವಾಗಿತ್ತು.
ಮೇಳಕ್ಕೆ ತಾರಾಮೌಲ್ಯ ತಂದಿತ್ತ ಬಪ್ಪ: ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಪ್ರಸಂಗವು ಮೇಳಕ್ಕೆ ಸೇರುವಾಗಲೇ ಪ್ರಸಿದ್ಧವಾಗಿತ್ತು. ಎಲ್ಲಿ ನೋಡಿದರೂ ಸುರತ್ಕಲ್ ಮೇಳದ ಆಟದ ಸುದ್ದಿ. ಶೇಣಿಯವರ ‘ಬಪ್ಪ’ ಪಾತ್ರವನ್ನು ಜನ ಸ್ವೀಕರಿಸಿದ್ದರು. ಮುಸ್ಲಿಂ ಬಂಧುಗಳು ಮೆಚ್ಚಿಕೊಂಡಿದ್ದರು. ಎಂದರೆ ಪಾತ್ರಾಭಿವ್ಯಕ್ತಿಯ ಗಾಢತೆ ಅರ್ಥವಾದೀತು.
ಬಣಕಲ್ನಲ್ಲೊಂದು ಘಟನೆ. ಆಗ ‘ಶಬರಿಮಲೆ ಕ್ಷೇತ್ರ ಮಹಾತ್ಮೆ’ ಪ್ರಸಂಗವೂ ಖ್ಯಾತಿ. ಅದರಲ್ಲಿ ಬರುವ ‘ಅಬ್ಬು, ಶೇಕು’ ಪಾತ್ರಗಳು ಕಲಾವಿದರಿಗೆ ಲಹರಿ ಹೆಚ್ಚಾಗಿ ಔಚಿತ್ಯದ ಎಲ್ಲೆಯನ್ನೂ ಮೀರುವುದಿತ್ತು. ಈ ಸುದ್ದಿ ಮುಸ್ಲಿಂ ಬಂಧುಗಳ ಕಿವಿಗೆ ಯಾರೋ ಸುರಿದಿದ್ದರು. ಪ್ರಸಂಗದಲ್ಲಿ ನಮ್ಮನ್ನು ಗೇಲಿ ಮಾಡುತ್ತಾರೆ, ಮುಖ್ಯಸ್ಥರಿಗೆ ದೂರನ್ನೂ ನೀಡಿದ್ದರಂತೆ.
ಅಂದು ಮಧಾಹ್ನ ಹತ್ತಾರು ಮಂದಿ ಬಿಡಾರಕ್ಕೆ ಬಂದೇ ಬಿಟ್ಟರು. ಇಂದು ಆಟ ಆಡಲು ಬಿಡುವುದಿಲ್ಲ. ನಮ್ಮನ್ನು ಗೇಲಿ ಮಾಡುತ್ತೀರಿ - ಬೆದರಿಕೆ ಹಾಕಿದರು. ಹಾಗೇನಿಲ್ಲ. ಇಂದು ಬಂದು ಆಟ ನೋಡಿ, ದನಿಗಳು ಸಮಜಾಯಿಷಿ ಕೊಟ್ಟರು ಏನಾದರೂ ಗೇಲಿ, ತಮಾಶೆ, ನಿಂದೆ ಮಾಡಿದರೆ ಪರಿಣಾಮ ನೆಟ್ಟಗಾಗದು, ಪುನಃ ಎಚ್ಚರಿಸಿದರು. ಮೇಳದ ದನಿಗಳು ಶೇಣಿಯವರಿಗೆ ತಿಳಿಸಿದಾಗ ಅಷ್ಟೇ ಅಲ್ವಾ ಎಂದರು. ಇವರ ಉತ್ತರದಿಂದ ಯಜಮಾನರ ರಕ್ತದೊತ್ತಡ ಏರತೊಡಗಿತು, ಏನಾದರೂ ಹೆಚ್ಚುಕಮ್ಮಿ ಆದರೆ?
ವಿಷಯ ನಾಲ್ದಸೆ ಹರಡಿತು. ಅಂದಿನ ಆಟದಲ್ಲಿ ಟೆಂಟ್ ತುಂಬಿತ್ತು ಕೂಡಾ. ನಾನು ಮದ್ದಲೆ ನುಡಿಸಲು ಕುಳಿತಿದ್ದೆ. ಅಗರಿಯವರ ಭಾಗವತಿಕೆ. ಎರಡೂವರೆ ಗಂಟೆಯಾಗುವಾಗ ಸುಮಾರು ಅರುವತ್ತು ಮಂದಿ ಟೆಂಟಿನೊಳಗೆ ಆಗಮಿಸಿದರು. ಮೊದಲೇ ಟಿಕೇಟ್ ತೆಗೆದು ಆಸನವನ್ನು ಕಾದಿರಿಸಿದ್ದರು. ಎಲ್ಲರ ಮುಖದಲ್ಲಿ ಅಸಹನೆಯ ಮನೋಭಾವವನ್ನು ಗಮನಿಸಿದೆ.
ಸರಿಯಾಗಿ ಮೂರು ಗಂಟೆಗೆ ಅಗರಿಯವರು ;ಬಪ್ಪನೆಂಬರೋರ್ವ ಮುಸಲ್ಮಾನ ವ್ಯಾಪಾರಿಯು..’ ಪದ್ಯ ಎತ್ತುಗಡೆ ಮಾಡಿದರು. ಶೇಣಿಯವರ ‘ಬಪ್ಪ’ ಪಾತ್ರದ ಪ್ರವೇಶ. ಅವರ ವೇಷಗಾರಿಕೆಯು ಥೇಟ್ ಧರ್ಮಿಷ್ಟ ಮುಸ್ಲಿಂ ಗುರುವೊಬ್ಬರನ್ನು ನೆನಪಿಸುತ್ತಿತ್ತು. ಅಂದು ಅವರು ಸಮುದಾಯಕ್ಕೆ ಬೇಸರ ಆಗದಂತೆ ಪ್ರಸ್ತುತ ಪಡಿಸಿದ ರೀತಿ ಅನನ್ಯ. ಪವಿತ್ರ ಗ್ರಂಥ ಕುರಾನನ್ನು ಉಲ್ಲೇಖಿಸಿದ ಧರ್ಮಸೂಕ್ಷ್ಮದ ವಿಚಾರಗಳು ಬಪ್ಪನ ಪಾತ್ರವನ್ನು ಎತ್ತರಕ್ಕೇರಿಸಿತ್ತು. ಶಾಸ್ತ್ರೀಯವಾದ ಪಾಟ್ನ್ನು ಹೇಳಿದ್ದರು. ಶಾಸ್ತ್ರಗಳನ್ನು ಓದಿದ, ಬೌದ್ಧಿಕ ಗಟ್ಟಿತನವನ್ನು ಹೊಂದಿದ, ಸಾತ್ವಿಕ ಧಾರ್ಮಾನುಯಾಯಿ ಬಪ್ಪನ ಪಾತ್ರದ ನಿರ್ವಹಣೆಗೆ ಮುಸ್ಲಿಂ ಬಂಧುಗಳು ತಲೆದೂಗಿದರು.
ಪಾತ್ರ ಮುಗಿದು ಶೇಣಿಯವರು ಚೌಕಿಗೆ ನಿರ್ಗಮಿಸಿದರು. ಆಟ ನೋಡುತ್ತಿದ್ದ ಮುಸ್ಲಿಂ ಬಾಂಧವರು ಚೌಕಿಗೆ ಬಂದು ಶೇಣಿಯವರನ್ನು ಅಭಿನಂದಿಸಿದರು. ಕೈ ಕುಲುಕಿದರು. ಕೆಲವರು ಆಶೀರ್ವಾದ ಬೇಡಿದರು. ಹಿರಿಯರು ಹರಸಿದರು. ‘ನಮಗೆ ಇದೆಲ್ಲಾ ಗೊತ್ತಿಲ್ಲ. ನೀವು ಎಲ್ಲಿ ಕಲಿತಿರಿ. ನಮ್ಮ ಧರ್ಮಗ್ರಂಥವನ್ನು ಎಲ್ಲಿ ಅಭ್ಯಾಸ ಮಾಡಿದಿರಿ,’ ತಂಡದ ಮುಖ್ಯಸ್ಥರು ಹೇಳಿದಾಗ ಶೇಣಿಯವರ ಕಣ್ಣಂಚಲ್ಲಿ ಆನಂದದ ಬಾಷ್ಟ. ಶೇಣಿಯವರಿಗೆ ಬಹುಮಾನವನ್ನು ನೀಡಿ, ‘ಯಾರದ್ದೋ ಮಾತನ್ನು ಕೇಳಿ ತಪ್ಪಾಗಿ ಅರ್ಥ ಮಾಡಿಕೊಂಡೆವು’ ಎಂದು ಹೇಳಿ ಪುನಃ ಶೇಣಿಯವರ ಕೈಕುಲುಕಿ ತೆರಳಿದರು.
ಇದು ಶೇಣಿಯವರ ತಾಕತ್ತು. ಆಪತ್ತು ಎರಗಿದಾಗ ಶಾಸ್ತ್ರಾಧಾರಗಳನ್ನು ಮುಂದಿಟ್ಟು ಮಂಡಿಸುವ ಕ್ರಮ ಇದೆಯಲ್ಲಾ, ಶೇಣಿಯವರಿಗೆ ಮಾತ್ರ ಸಾಧ್ಯ. ನಂತರದ ದಿವಸಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಟೆಂಟಿನ ಒಳಗಡೆ ಪ್ರತ್ಯೇಕ ಕುಳತುಕೊಳ್ಳುವ ವ್ಯವಸ್ಥೆ ಮಾಡಿ ಬಪ್ಪನ ಪಾತ್ರವನ್ನು ತೋರಿಸಲಾಗಿತ್ತು.
No comments:
Post a Comment