Tuesday, February 14, 2012

’ಕಲಾವಿದರನ್ನು ಗೌರವಿಸುವುದು ಸಮಾಜದ ಧರ್ಮ’: ಎಡನೀರು ಶ್ರೀಗಳು

"ಯಕ್ಷಗಾನದ ಪೌರಾಣಿಕ ಸ್ತ್ರೀಪಾತ್ರಗಳ ವೈಭವಕ್ಕೆ ಕೊಕ್ಕಡ ಈಶ್ವರ ಭಟ್ಟರದು ಪ್ರತ್ಯೇಕ ಕೊಡುಗೆಯಿದೆ. ಇಂತಹ ಅನುಭವಿ ಮತ್ತು ಕಲೆಗಾಗಿಯೇ ಬದುಕನ್ನು ಸವೆಸಿದ ಕಲಾವಿದರನ್ನು ಗೌರವಿಸುವುದು ಸಮಾಜದ ಧರ್ಮ. ನಮ್ಮ ಮಠವು ಯಕ್ಷಗಾನ ಮಾತ್ರವಲ್ಲ, ಎಲ್ಲಾ ಕಲೆಗಳನ್ನು ಗೌರವಿಸುತ್ತದೆ, ಪ್ರದರ್ಶನ ಏರ್ಪಡಿಸುತ್ತದೆ, ಎಂದು ಶ್ರೀ ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಹೇಳಿದರು.

ಅವರು ಫೆ.13ರಂದು ಎಡನೀರಿನಲ್ಲಿ ಜರುಗಿದ ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನದ ವಾರ್ಶಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸ್ತ್ರೀಪಾತ್ರಧಾರಿ ಶ್ರೀ ಕೊಕ್ಕಡ ಈಶ್ವರ ಭಟ್ಟರಿಗೆ ಈ ಸಾಲಿನ 'ಪಾತಾಳ ಪ್ರಶಸ್ತಿ'ಯನ್ನು ಪ್ರದಾನಿಸಿ ಆಶೀರ್ವಚನ ನೀಡಿದರು. ಪ್ರಶಸ್ತಿಯು ಶಾಲು, ಹಾರ, ಫಲಪುಪ್ಪ, ಪ್ರಸಸ್ತಿ ಪತ್ರ, ಸ್ಮರಣಿಕೆ ಮತ್ತು ರೂಪಾಯಿ ಐದು ಸಾವಿರ ರೂಪಾಯಿಯ ಒಳಗೊಂಡಿತ್ತು.

ಸಮಾರಂಭದ ಅಧ್ಯಕ್ಷತೆಯನ್ನು ಕಾಸರಗೋಡು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಶ್ರೀ ಐ.ವಿ.ಭಟ್ ವಹಿಸಿದ್ದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾದ ಪ್ರೊ: ಎಂ.ಎಲ್.ಸಾಮಗ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಮಾಲತೀ ಶ್ರೀಧರ್, ಹಿರಿಯ ಸ್ತ್ರೀಪಾತ್ರಧಾರಿ ಶ್ರೀ ಪಾತಾಳ ವೆಂಕಟ್ರಮಣ ಭಟ್ ಉಪಸ್ಥಿತರಿದ್ದರು.

ಪಾತಾಳ ಯಕ್ಷ ಪ್ರತಿಷ್ಠಾನದ ಅಧ್ಯಕ್ಷರಾದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅತಿಥಿಗಳಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಶ್ರೀ ಶ್ರೀರಾಮ ಪಾತಾಳ ಸ್ಮರಣಿಕೆ ನೀಡಿದರು. ಪತ್ರಕರ್ತ, ಕಲಾವಿದ ಶ್ರೀ ನಾ. ಕಾರಂತ ಪೆರಾಜೆ ಪ್ರಶಸ್ತಿಯ ಗುಣಕಥನ ಫಲಕವನ್ನು ವಾಚಿಸಿದರು. ಶ್ರೀಮಠದ ಶ್ರೀ ರಾಜೇಂದ್ರ ಕಲ್ಲೂರಾಯರು ವಂದಿಸಿದರು. ವೇದಮೂರ್ತಿ ಶ್ರೀ ಪೋಳ್ಯ ಅನಂತೇಶ್ವರ ಭಟ್ಟರಿಂದ ವೇದಪಠಣದೊಂದಿಗೆ ಆರಂಭಗೊಂಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರತಿಷ್ಠಾನದ ಡಾ.ಬಿ.ಎನ್.ಮಹಾಲಿಂಗ ಭಟ್ ನಿರ್ವಹಿಸಿದರು.

Sunday, February 12, 2012

'ಪಾತಾಳ ಪ್ರಶಸ್ತಿ' ಪುರಸ್ಕೃತ ಕೊಕ್ಕಡ ಈಶ್ವರ ಭಟ್

'ರಂಗದಲ್ಲಿ ಕಸುಬು ಮಾಡುವ ಕಲಾವಿದನಿಗೆ ತನ್ನ ಪಾತ್ರ ನಿರ್ವಹಣೆಯಲ್ಲಿ 'ತೃಪ್ತಿ' ಬೇಕು. ಸ್ತ್ರೀಪಾತ್ರಗಳಿಗೆ ರಂಗದಲ್ಲಿ ಅವಕಾಶ ಹೆಚ್ಚಿದ್ದಾಗ ಕಸುಬಿನಲ್ಲಿ ತೃಪ್ತಿ ಸಹಜವಾಗಿ ಬರುತ್ತದೆ. ಬೆಳಗ್ಗಿನವರೆಗೆ ಆಗಾಗ್ಗೆ ಬಂದು ಮರೆಯಾಗುವ ಸ್ತ್ರೀಪಾತ್ರಗಳು ರಂಗದಲ್ಲಿ ಮೆರೆಯುವುದಿಲ್ಲ. ಆತನಿಂದ ಉತ್ತಮ ಅಭಿವ್ಯಕ್ತಿಯನ್ನು ನಿರೀಕ್ಷಿಸುವಂತಿಲ್ಲ. ಕಲಾವಿದನನ್ನು ಪ್ರೇಕ್ಷಕ ಬಹುಬೇಗ ಮರೆಯುತ್ತಾನೆ,' ಎಂದು ಹಿರಿಯ ಸ್ತ್ರೀ ಪಾತ್ರಧಾರಿ ಕೊಕ್ಕಡ ಈಶ್ವರ ಭಟ್ ಕಳೆದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾರೆ.

ಎಪ್ಪತ್ತೆರಡು ಹರೆಯದ ಈಶ್ವರ ಭಟ್ಟರು ಐವತ್ತು ವರ್ಷಕ್ಕೂ ಮಿಕ್ಕಿ ರಂಗದಲ್ಲಿ ತರುಣಿಯಾಗಿದ್ದಾರೆ. 'ಮೋಹಿನಿ'ಯಿಂದ 'ಚಂದ್ರಮತಿ' ತನಕ. ಒಂದು ಕಾಲಘಟ್ಟದ ಪ್ರದರ್ಶನಗಳನ್ನು ನೆನಪಿಸಿಕೊಂಡಾಗ ನಿವೃತ್ತಿಯಾಗುವಲ್ಲಿಯ ತನಕವೂ ಇವರ ಪಾತ್ರಾಭಿವ್ಯಕ್ತಿಯಲ್ಲಿ 'ಪಾತ್ರದ ಹಿರಿತನ'ದ ಗಟ್ಟಿತನವಿದ್ದುದನ್ನು ಗಮನಿಸಬಹುದು. ಗಟ್ಟಿ ಸಂಪನ್ಮೂಲವನ್ನು ಹೊಂದಿದ ಗಟ್ಟಿಗರ ಮಧ್ಯದಲ್ಲಿ ಬೆಳೆದ ಪರಿಣಾಮ; ಈಗಲೂ ಕೊಕ್ಕಡದವರನ್ನು ನೆನಪಿಸಿಕೊಡರೆ ಸಾಕು, 'ದಾಕ್ಷಾಯಿಣಿ, ಮಾಯಾ ಶೂರ್ಪನಖಿ' ಪಾತ್ರಗಳು ಮಿಂಚುತ್ತವೆ.

ಓದಿದ್ದು ಆರನೇ ತರಗತಿ. ಕುಡಾಣ ಗೋಪಾಲಕೃಷ್ಣ ಭಟ್ಟರಿಂದ ನಾಟ್ಯಾಭ್ಯಾಸ. ಒಂದಷ್ಟು ಕಾಲ ಭರತನಾಟ್ಯದ ಕಲಿಕೆ. ಮಧ್ಯೆ ಬಡಗುತಿಟ್ಟಿನ ಹೆಜ್ಜೆಗಳ ಅಭ್ಯಾಸ. ಮುಂದೆ ಕೆರೆಮನೆ ಮೇಳದಲ್ಲಿ ಒಂದು ವರುಷದ ತಿರುಗಾಟ. ಬಡಗು ಹಜ್ಜೆಗಳಿಗೆ ದಯಾನಂದ ನಾನೂರು ಮತ್ತು ಮೊಳಹಳ್ಳಿ ಕೃಷ್ಣ ಇವರಿಗೆ ಗುರು.

ಭಟ್ಟರ ತಂದೆ ಮಹಾಲಿಂಗ ಭಟ್. ತಾಯಿ ಪರಮೇಶ್ವರಿ. ಅಳಿಕೆ ಸನಿಹದ ಮುಳಿಯದಲ್ಲಿ ಹುಟ್ಟು. ಕಡೆಂಗೋಡ್ಲಿನಲ್ಲಿ ಬದುಕು. ಆರನೇ ತರಗತಿ ತನಕ ಶಾಲಾಭ್ಯಾಸ. ಪುತ್ತೂರಿನ ಪೆರುವಡಿಯವರ ನೂಜಿ ಮನೆಯಲ್ಲಿ ಮಿಕ್ಕ ಯಕ್ಷಗಾನದ ವಿವಿಧಾಂಗಗಳ ಆರ್ಜನೆ.

ಪೆರುವಡಿ ಕೃಷ್ಣ ಭಟ್ಟರ ಸಾರಥ್ಯದ ಮೂಲ್ಕಿ ಮೇಳದಲ್ಲಿ 'ಬಾಲಕೃಷ್ಣ' ಪಾತ್ರದ ಮೂಲಕ ಬಣ್ಣದ ಮೊದಲ ಹೆಜ್ಜೆ. ಮೂಲ್ಕಿಯೂ ಸೇರಿದಂತೆ ಕೂಡ್ಲು, ಸುರತ್ಕಲ್, ಕದ್ರಿ, ಕುಂಬಳೆ, ಸಾಲಿಗ್ರಾಮ, ಶಿರಸಿ, ಇಡಗುಂಜಿ, ಎಡನೀರು ಮೇಳಗಳಲ್ಲಿ ವ್ಯವಸಾಯ.

ಚಂದ್ರಮತಿ, ಶಾರದೆ, ಚಿತ್ರಾಂಗದೆ, ದ್ರೌಪದಿ, ಸುಭದ್ರೆ, ಪ್ರಭಾವತಿ, ಮಾಯಾ ಶೂರ್ಪನಖಿ, ಮಾಯಾಹಿಡಿಂಬಿ, ಮೋಹಿನಿ.. ಹೀಗೆ ಸಾಲು ಸಾಲು ಪಾತ್ರಗಳು ಭಟ್ಟರ ನೆಚ್ಚಿನವುಗಳು. ಖ್ಯಾತಿ ತಂದವುಗಳು. ಕೂಡ್ಲು ಮೇಳದಲ್ಲಿ ಆಡುತ್ತಿದ್ದ 'ಶ್ರೀದೇವಿ ಲಲಿತೋಪಾಖ್ಯಾನ' ಪ್ರಸಂಗದ 'ಶ್ರೀಲಲಿತೆ' ಪಾತ್ರವು ಈಶ್ವರ ಭಟ್ಟರಿಗೆ ತಾರಾಮೌಲ್ಯ ತಂದಿತ್ತು.

ವೈಯಾರದ ನಾಟ್ಯ, ನಯನಾಜೂಕಿನ ಅಭಿವ್ಯಕ್ತಿ. ಮನಮೋಹಕ ಚಿತ್ರ. ಪಾತ್ರಕ್ಕನುಚಿತವಾದ ಸಂಭಾಷಣೆ ಇವರದು. 'ಮೂಲ್ಕಿ ಮೇಳದಲ್ಲಿ ನನ್ನ ಬಾಹುಕ, ಪಾಪಣ್ಣ ಪಾತ್ರಗಳಿಗೆ ಈಶ್ವರ ಭಟ್ಟರು ದಮಯಂತಿಯಾಗಿ, ಗುಣಸುಂದರಿಯಾಗಿ ಸಾಥಿ ನೀಡಿದ್ದಾರೆ. ಉತ್ತಮ ಹೆಸರು ಪಡೆದಿದ್ದಾರೆ. ಮೇಳಕ್ಕೂ ಹೆಸರು ತಂದಿದ್ದಾರೆ' ಎಂದು ಈಶ್ವರ ಭಟ್ಟರ ತಿರುಗಾಟದ ಕ್ಷಣವನ್ನು ನೆನಪಿಸಿಕೊಂಡರು, ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್.

'ಕಲಾವಿದನಿಗೆ ದುಡ್ಡು ಮುಖ್ಯ ಹೌದು. ಜತೆಗೆ ಅಭಿಮಾನವೂ ಕೂಡಾ. ರಂಗದಲ್ಲಿ ಸರಿಯಾದ ಅಭಿವ್ಯಕ್ತಿಗೆ ಅವಕಾಶವಿಲ್ಲದೇ ಹೋದಾಗ ಅಭಿಮಾನಿಗಳಿಗೆ ಮುಖ ತೋರಿಸಲು ನಾಚಿಕೆಯಾಗುತ್ತದೆ,' ಮಾತಿನ ಮಧ್ಯೆಯಿರುವ ಅವರ ನೋವು ಅರ್ಥವಾಗಲು ಕಷ್ಟಪಡಬೇಕಿಲ್ಲ.

ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಮಾನ, ಕೆರೆಮನೆ ಶಂಭು ಹೆಗಡೆ ಜಯಂತಿ ಸಂಮಾನ, ಮಂಗಳೂರು ಹವ್ಯಕ ಸಭಾ, ಶ್ರೀ ಎಡನೀರು ಮಠ, ಕಲಾರಂಗ ಉಡುಪಿ.. ಹೀಗೆ ಹಲವು ಪ್ರತಿಷ್ಠಿತ ಪುರಸ್ಕಾರಗಳು ಈಶ್ವರ ಭಟ್ಟರ ಕಲಾ ಸೇವೆಗೆ ಸಂದ ಮಾನಗಳು.

ಪ್ರಸ್ತುತ ಕೊಕ್ಕಡ-ಪಟ್ರಮೆ ಸಮೀಪದ ಹೆನ್ನಳದಲ್ಲಿ ವಾಸ. ಪತ್ನಿ ಶಕುಂತಳೆ. ಮೂವರು ಮಕ್ಕಳು. ಕಡೆಂಗೋಡ್ಲು ನನಗೆ ಬಾಲ್ಯವನ್ನು ಕೊಟ್ಟದ್ದರಿಂದ ಈ ಊರು ನನ್ನ ಹೆಸರಿನೊಂದಿಗೆ ಹೊಸೆಯಬೇಕಿತ್ತು. ಈಗ ಕೊಕ್ಕಡ ಸಮೀಪವಿರುವುದರಿಂದಲೋ ಏನೋ ನಾನೀಗ ಕೊಕ್ಕಡ ಈಶ್ವರ ಭಟ್.

ಈಶ್ವರ ಭಟ್ಟರ ಕಲಾ ಸೇವೆಗೆ ಈಗ 'ಪಾತಾಳ ಪ್ರಶಸ್ತಿ'ಯ ಗರಿ. ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಗೌರವಾಧ್ಯಕ್ಷರಾಗಿರುವ 'ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ'ದಿಂದ ಫೆಬ್ರವರಿ 13ರಂದು ರಾತ್ರಿ 8 ಗಂಟೆಗೆ ಶ್ರೀ ಎಡನೀರು ಮಠದ ಶ್ರೀಕೃಷ್ಣ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ.

Monday, January 9, 2012

ಮೂರು ಪ್ರಸಂಗವೂ, ಏಳು ಮಂದಿ ಕಲಾವಿದರೂ..!

ಕಾಲು ಶತಮಾನದ ಹಿಂದೆ. 'ಚೌಡೇಶ್ವರಿ ಮೇಳ'ವು ಸುಳ್ಯ-ಕೊಡಗು ವ್ಯಾಪ್ತಿಯಲ್ಲಿ ಖ್ಯಾತಿ. ಬಹುತೇಕ ಹವ್ಯಾಸಿ ಕಲಾವಿದರು. ಅಪ್ಪಟ ಭಾಗವತ ಕೀರ್ತಿಶೇಷ ದಾಸರಬೈಲು ಚನಿಯ ನಾಯ್ಕರ ನಿರ್ದೇಶನ. ಆ ತಂಡದಲ್ಲಿ ಈಗ ನಮ್ಮೊಂದಿಗಿಲ್ಲದ ಹಾಸ್ಯಗಾರ ಪ್ಯಾರ್ ನಾವೂರು ಇದ್ದರು.

ಆ ಭಾಗಕ್ಕೆ ಆಟಕ್ಕೆ ಬಂದಾಗಲೆಲ್ಲಾ ಭಾಗವತ ಚನಿಯ ನಾಯ್ಕರು ಬಿಡುವಿದ್ದಾಗ ನಮ್ಮಲ್ಲಿಗೆ ಬರುತ್ತಿದ್ದರು. ಒಂದು ದಿವಸ ಮಡಿಕೇರಿ ಹತ್ತಿರದ ಹಳ್ಳಿಯೊಂದರ ಆಟ ಮುಗಿಸಿ ಮನೆಗೆ ಬರುವಾಗಲೇ ಅವರ ಮೂಡ್ ಔಟ್ ಆಗಿತ್ತು! 'ಎಂಚಿನ ಸಾವುದ ಆಟ. ಯಕ್ಷಗಾನ ಪಂಡ ಗೊತ್ತಿಜ್ಜಿ. ಸಾಕೋ ಸಾಕಾಂಡ್' (ನಾಯ್ಕರು ಹೆಚ್ಚಾಗಿ ತುಳುವಿನಲ್ಲಿ ಸಂಭಾಷಿಸುತ್ತಿದ್ದರು.)

ಅಜಾತ ಶತ್ರುವಾಗಿದ್ದ ನಾಯ್ಕರು ಅಂದು ಯಾಕೆ ಅಸಹನೆಗೊಂಡಿದ್ದರು. 'ಭಾಗವತರೆ, ದೂರದ ಆಟ. ಸಂಭಾವನೆಗೆ ತೊಂದರೆಯಾಯಿತಾ' ಅಂತ ಮಾತಿಗಿಳಿದೆ. 'ಕವರ್ ಏರೆಗ್ ಬೋಡು. ಯಾನೇ ಕೊರ್ತುವೆ! ಅಕ್ಲೆಗ್ ಯಕ್ಷಗಾನ, ನಾಟಕ, ಕೋರಿಕಟ್ಟ ಪೂರಾ ಒಂಜೇ, ಯಕ್ಷಗಾನದ ಮರ್ಯಾದಿ ಪೋಂಡ್...', ಅವರ ಅಸಹನೆ ಕಡಿಮೆಯಾದಂತಿಲ್ಲ. ಸ್ನಾನ, ಕಾಫಿ ಮುಗಿಸಿ, ಅವರಿಗೆ ನಿದ್ರಿಸಲು ವ್ಯವಸ್ಥೆ ಮಾಡುತ್ತಿದ್ದಂತೆ, 'ಅವು ಎಂಚಿನ ಪಂನ್ಡಾ...' ಅಂತ ನಿನ್ನೆಯ ಆಟದ ಕತೆಗೆ ಮುಂದಾದರು.

ಮಡಿಕೇರಿ ಸನಿಹದ ಹಳ್ಳಿಯೊಂದರಲ್ಲಿ ಚೌಡೇಶ್ವರಿ ಮೇಳದ ಆಟ. ಏಳು ಮಂದಿ ವೇಷಕ್ಕಾದರೆ, ಹಿಮ್ಮೇಳಕ್ಕೆ ಮೂರು ಮಂದಿ. ಹೆಚ್ಚು ವೇಷ ಇರುವ ದೇವಿ ಮಹಾತ್ಮೆಯಂತಹ ಪ್ರಸಂಗ ಹೊರತು ಪಡಿಸಿ ಉಳಿದ ಪ್ರಸಂಗಗಳಿಗೆ ಸೂಕ್ತವಾಗುವಂತಹ ವೇಷಭೂಷಣ. ಅಂದು ವೀಳ್ಯ ಕೊಟ್ಟವರು ನಿಗದಿಪಡಿಸಿದ ಪ್ರಸಂಗ - 'ಶ್ವೇತಕುಮಾರ ಚರಿತ್ರೆ'.

ಸಮಯಕ್ಕೆ ಸರಿಯಾಗಿ ಕಲಾವಿದರ ದಂಡು ಆಟದ ಜಾಗ ತಲುಪಿತು. ವೀಳ್ಯಕೊಟ್ಟವರಿಂದ ಸ್ವಾಗತ. ಉಪಾಹಾರ-ಭೋಜನ ವ್ಯವಸ್ಥೆ. ನಾಲ್ಕು ಕಂಬದ ರಂಗವೇದಿಕೆ. ಗ್ಯಾಸ್ಲೈಟ್ ಬೆಳಕು. ಸಂಜೆಯಾದಂತೆ ಮೈಕಾಸುರನ ಅಟ್ಟಹಾಸ. ಚೌಕಿ ತೆರೆದುಕೊಂಡಿತು. ಪಾತ್ರ ಹಂಚೋಣವಾಯಿತು. ಎಂಟು ಗಂಟೆಯಿಂದ ಹನ್ನೆರಡು ಗಂಟೆ ತನಕ ಪ್ರದರ್ಶನ.

ಒಮ್ಮೆ ಚೌಕಿ ತೆರೆದುಕೊಂಡರೆ ಆಯಿತು, ಮತ್ತೆ ಭಾಗವತ ಚನಿಯ ನಾಯ್ಕರು ದೇವರ ಪೆಟ್ಟಿಗೆಯ ಸನಿಹವೇ ಕುಳಿತುಕೊಳ್ಳುತ್ತಿರುವುದು ಜಾಯಮಾನ. ಭಾಗವತನ ಲಕ್ಷಣವೂ ಹೌದೆನ್ನಿ. ಆಟ ಶುರುವಾಗಲು ಹಸಿರು ನಿಶಾನೆ ಸಿಕ್ಕಿತು.
ಚೌಕಿ ಪೂಜೆ, ಪೀಠಿಕೆ. ಪ್ರಸಂಗ ಶುರುವಾಯಿತು. ಅಷ್ಟರಲ್ಲಿ ಚೌಕಿಗೆ 'ನಿಶೆ ಏರಿಸಿಕೊಂಡ' ಹತ್ತಾರು ಮಂದಿಯ ದಂಡು ನುಗ್ಗಿತು. ಆ ತಂಡದಲ್ಲಿ ವೀಳ್ಯ ನೀಡಿದ ವ್ಯಕ್ತಿಯೂ ಇದ್ದ! 'ನಿಮ್ಮದು ಎಂತಹ ಪ್ರಸಂಗ. ನಮಗೆ ಮಹಿಷಾಸುರ ಬರುವ ಪ್ರಸಂಗವೇ ಆಗಬೇಕು' ಎನ್ನಬೇಕೆ!

ಚೌಕಿಯಲ್ಲಿ ಗೊಂದಲ. ಉತ್ತರ ಕಾಣದ ಕ್ಷಣಗಳು. ಕಾರಣ ನಿಗದಿಯಾಗಿದ್ದ ಪ್ರಸಂಗಕ್ಕೆ ಎಲ್ಲಾ ಕಲಾವಿದರೂ ತಯಾರಾಗಿದ್ದರು. ಹೊಸ ಪ್ರಸಂಗಕ್ಕೆ ಅಣಿಯಾಗಲು ಅವಕಾಶವಿಲ್ಲ. ಕಲಾವಿದರಿಗೆ ಅಷ್ಟು ಸುಲಭವೂ ಅಲ್ಲ. ಅಲ್ಲದೆ, ಪ್ರಸಂಗ ಪುಸ್ತಕವೂ ಇಲ್ಲ. ಏನು ಮಾಡೋಣ?

ಸರಿ, ಅವರನ್ನು ಹಾಸ್ಯಗಾರರಾದ ಪ್ಯಾರ್ ನಾವೂರು ಸಮಾಧಾನಪಡಿಸಿ ಸಾಗಹಾಕಿದರು. ಆಟ ಮುಂದುವರಿದು ಒಂದು ಗಂಟೆಯಾಗಿರಬಹುದು, ಇನ್ನೊಂದು ತಂಡ ಚೌಕಿಗೆ ನುಗ್ಗಿತು. ಅವರಿಗೆ 'ತ್ರಿಜನ್ಮ ಮೋಕ್ಷ' ಪ್ರಸಂಗವೇ ಆಗಬೇಕಂತೆ. ಎರಡೂ ತಂಡಗಳ ಬೇಡಿಕೆಯ ಮುಂದೆ ಮೇಳದ ಕಲಾವಿದರು ಕಂಗಾಲು.

ರಂಗ ಪ್ರವೇಶ ಮಾಡಿದ ಪಾತ್ರಗಳು ಚೌಕಿಗೆ ಬಂದುವು. ಮುಂದಿನ ವೇಷ ಪ್ರವೇಶ ಮಾಡೋಣ ಅಂದರೆ ಚೌಕಿ ಗೊಂದಲದ ಗೂಡಾಗಿತ್ತು. ಪ್ರೇಕ್ಷಕರಲ್ಲೂ ಗುಲ್ಲು, ಶಿಳ್ಳೆ ಜೋರಾಯಿತು. 'ಐವತ್ತು ರೂಪಾಯಿ ಕೊಟ್ಟಿದ್ದೇನೆ. ಆಟ ಯಾಕೆ ನಿಲ್ಲಿಸಿದ್ರಿ' ಎನ್ನುತ್ತಾ ಒಬ್ಬರು ಚೌಕಿಗೆ ನುಗ್ಗಲು ಪ್ರಯತ್ನಿಸುತ್ತಿದ್ದಂತೆ, 'ನಾನು ಇನ್ನೂರು ರೂಪಾಯಿ ಕೊಟ್ಟಿದ್ದೇನೆ' ಎಂದರು ಇನ್ನೊಬ್ಬರು..!

ಪರಿಸ್ಥಿತಿ ಕೈಮೀರುವ ಲಕ್ಷಣ ಕಂಡು ಬಂತು. 'ನಿಮಗೆ ಮಹಿಷಾಸುರ, ಹಿರಣ್ಯಾಕ್ಷ, ಹಿರಣ್ಯಕಶಿಪು ಸ್ಟೇಜ್ಗೆ ಬರಬೇಕಲ್ವಾ. ಬರುತ್ತದೆ. ನೀವೆಲ್ಲಾ ಹೋಗಿ. ಆಟ ಶುರುಮಾಡೋಣ' ಎನ್ನುವ ಧೈರ್ಯ ನೀಡಿದ ಚನಿಯ ನಾಯ್ಕರು; ವೀಳ್ಯ ಹಾಕಿ, ಮುಂಡಾಸು, ಶಾಲು ಏರಿಸಿ, ಜಾಗಟೆಯೊಂದಿಗೆ ರಂಗಕ್ಕೆ ಬರಲು ಸಿದ್ಧರಾದರು.

ಮರುದಿವಸದ ಆಟ ಮಹಿಷ ಮರ್ದಿನಿ. ಅದಕ್ಕಾಗಿ ಮಹಿಷಾಸುರ ಪಾತ್ರದ ಕೊಂಬು ಕ್ಯಾಂಪ್ನಲ್ಲಿತ್ತು. ಶ್ವೇತಕುಮಾರ ಪ್ರಸಂಗದ 'ಕರಾಳನೇತ್ರೆ' ರಾಕ್ಷಸಿಯ ಪಾತ್ರಕ್ಕೆ ಕೊಂಬು ಬಿಗಿಯಲಾಯಿತು. 'ತ್ರಿಲೋಕ ಸುಂದರಿ' ಪಾತ್ರಕ್ಕೆ ಸಿದ್ಧರಾದವರಿಗೆ ಶ್ರೀದೇವಿ ಪಾತ್ರ ಆವಾಹನೆಯಾಯಿತು. ಹಿರಣ್ಯಾಕ್ಷ ಅಲ್ವಾ, ದುರ್ಜಯನ ಪಾತ್ರ ಮಾಡುವಾತ 'ಹಿರಣ್ಯಾಕ್ಷ'ನಾದ. ಮತ್ಯಾರೋ ಹಿರಣ್ಯಕಶಿಪು, ನರಸಿಂಹನಾದರು. ಪಾತ್ರಗಳ ಪಕ್ಷಾಂತರ!

ಪಡಿಮಂಚವನ್ನೇರಿದ ಭಾಗವತರು 'ಶ್ವೇತಕುಮಾರ' ಪ್ರಸಂಗವನ್ನು ಸ್ವಲ್ಪ ಮುಂದುವರಿಸುತ್ತಾ, 'ಮಹಿಷಾಸುರನ' ಪ್ರವೇಶಕ್ಕೆ ಅಣಿಯಾದರು. ಸೂಟೆ, ಮುಳಿಹುಲ್ಲು.. ಅಬ್ಬರ ಜೋರಾಗಿಯೇ ಇತ್ತು. 'ಸ್ವಲ್ಪ ನಿಧಾನಕ್ಕೆ ರಂಗಕ್ಕೆ ಬಂದರೆ ಸಾಕು. ಅವರೆಲ್ಲಾ ಕುಣಿದು ಕುಪ್ಪಳಿಸಲಿ' ಎಂದು ವೇಷಧಾರಿಗೆ ಸೂಚನೆ ಕೊಟ್ಟರು. ಅಂದಿನ ಮಹಿಷಾಸುರನಿಗೆ ಏನಿಲ್ಲವೆಂದರೂ ರಂಗವೇದಿಕೆ ತಲುಪಲು ಮುಕ್ಕಾಲು ಗಂಟೆ.

ರಂಗದಲ್ಲಿ ಮಹಿಷಾಸುರನ ಅಬ್ಬರ. ಕುಣಿತ. ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ. ಇವರು ಸಂತೋಷದ ಪರಾಕಾಷ್ಠೆಗೇರುತ್ತಲೇ ಭಾಗವತರು, 'ದೇವಿ ಮತ್ತು ಮಹಿಷಾಸುರ' ಯುದ್ಧ ಪದ್ಯಗಳನ್ನು ಎತ್ತುಗಡೆ ಮಾಡಿ ಮಹಿಷಾಸುರನನ್ನು ಕೊಂದೇ ಬಿಟ್ಟರು! ದೇವಿ ಪಾತ್ರಧಾರಿಗೆ ಹೂವಿನ ಮಾಲೆ, ಮಹಿಷಾಸುರನಿಗೆ ವಿಶೇಷ ಆತಿಥ್ಯ! ಚಳಿಯ ಊರಲ್ವಾ..! ಏನಂತೀರಿ?

ಸರಿ, ಹಿರಣ್ಯಾಕ್ಷನ ಪ್ರವೇಶ. ದೇವಿ ಪಾತ್ರ ಮಾಡಿದರು ಅಷ್ಟಭುಜವನ್ನು ಕಳಚಿಕೊಂಡು, ಹಿರಣ್ಯಾಕ್ಷನ ಮುಂದೆ ಪ್ರ್ರತ್ಯಕ್ಷ. ಬಳಿಕ ಹಿರಣ್ಯಕಶಿಪು. ಅಂತೂ ಮಧ್ಯರಾತ್ರಿಯಾಗುವಾಗ ಆಟಕ್ಕೆ ಮಂಗಳ. ಸ್ವಲ್ಪ ಹೆಚ್ಚೆ ವೀಳ್ಯವೂ ಸಿಕ್ಕಿತು.

'ನಾವು ಹೇಳಿದ ಪ್ರಸಂಗವೇ ಆಯಿತಲ್ಲಾ' ಎಂಬ ಸಂತೋಷ ಒಂದು ವರ್ಗಕ್ಕಾದರೆ, 'ನಮ್ಮದೂ ಪ್ರದರ್ಶನವಾಯಿತಲ್ಲಾ' ಎನ್ನುವುದು ಇನ್ನೊಂದು ತಂಡದ ಖುಷಿ. ಆದರೆ ಕಲಾವಿದರಿಗೆ ಬೇಸರವಾಗಿತ್ತು. 'ಯಕ್ಷಗಾನದ ಪರಂಪರೆಗೆ ನಾವು ಅನ್ಯಾಯ ಮಾಡಿದೆವು' ಎಂಬ ಕೊರಗು.

ಆಟದ ಕತೆಯನ್ನು ಹೇಳಿದ ಚನಿಯ ನಾಯ್ಕರಲ್ಲೂ ಮನಶ್ಶಾಂತಿಯಿರಲಿಲ್ಲ. 'ಹೇಗೂ ಆಯ್ತಲ್ಲಾ, ನಿದ್ದೆ ಮಾಡಿ. ಸಂಜೆಯ ಆಟಕ್ಕೆ ಹೋಗಬೇಡ್ವಾ' ಎಂದರು ನನ್ನಮ್ಮ.

'ನನ್ನ ಯಕ್ಷಗಾನದ ಬದುಕಿನಲ್ಲಿ ಇಂತಹ ಅವಸ್ಥೆ ಅದುದೇ ಇಲ್ಲ. ಮುಂದೆಯೂ ಹೀಗಾಗದಿರಲಿ' ಎನ್ನುತ್ತಾ ನಿದ್ದೆಗೆ ಜಾರಲು ಪ್ರಯತ್ನಿಸಿದರು.

Tuesday, January 3, 2012

ಒಂದು ಆಟದ ಸುತ್ತ.. ..

'ಯಕ್ಷಗಾನ ಜಾನಪದ ಕಲೆಯಲ್ಲ. ಅದೊಂದು ಆರಾಧನಾ ಕಲೆ' ಎಂದು ಕೀರ್ತಿಶೇಷ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರು ಸೋದಾಹರಣವಾಗಿ ಹೇಳುತ್ತಿದ್ದರು. ಅವರ ಹೇಳಿಕೆಗಳನ್ನು ದಿನಗಟ್ಟಲೆ ಚರ್ಚೆ ಮಾಡಬಹುದಾದರೂ, 'ಅರಾಧನೆ ಕಲೆ' ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಅದಕ್ಕೆ ಪೂರಕವಾಗಿ ಇಂದಿನ ವರೆಗೂ ಯಕ್ಷಗಾನವನ್ನು ಆರಾಧಿಸುವಂತಹ ಸಾಕಷ್ಟು ಉಪಾಧಿಗಳು ಸಿಗುತ್ತವೆ.

ಶೇಣಿಯವರ ಮಾತನ್ನು ನೆನಪಿಸಿಕೊಳ್ಳುತ್ತಿದ್ದಂತೆ ಮೂರು ದಶಕದ ಹಿಂದಿನ ನನ್ನೂರಿನ ಯಕ್ಷಗಾನ ವಾತಾವರಣ ಮಿಂಚಿ ಮರೆಯಾಯಿತು. ನಾನಿನ್ನೂ ಬಣ್ಣದ ಲೋಕದ ಸಮೀಪಕ್ಕೆ ಬಂದಿರಲಿಲ್ಲ. ಈಗ ದಿವಂಗತರಾಗಿರುವ ಪ್ರಕಾಶ್ಚಂದ್ರ ರಾವ್ ಬಾಯಾರು ಗರಡಿಯಲ್ಲಿ ಪಳಗಿದ ತಂಡ ಸಿದ್ಧವಾಗಿತ್ತು. 'ನಮ್ಮೂರಲ್ಲಿ ಯಕ್ಷಗಾನ ತರಬೇತಿ ನಡೆಯುತ್ತಿದೆ. ನಮ್ಮ ಯುವಕರು ವೇಷ ಹಾಕ್ತಾರೆ' ಎಂಬ ಸಂಭ್ರಮ ಕಲಾವಿದರಿಗೆ ಮಾತ್ರವಲ್ಲ, ಇಡೀ ಊರಿಗೆ ಖುಷಿಕೊಟ್ಟಿತ್ತು.

ಹೋಟೆಲ್ಗಳಲ್ಲಿ, ಗೂಡಂಗಡಿಗಳಲ್ಲಿ, ಶಾಲೆಗಳಲ್ಲಿ, ಕಟ್ಟಪುಣಿಗಳಲ್ಲಿ ಮುಖತಃ ಸಿಕ್ಕಾಗಲೆಲ್ಲಾ ಇದರದ್ದೇ ಸುದ್ದಿ. ನಾಟ್ಯ ಕಲಿವ/ಕಲಿತವರು ಸಿಕ್ಕರಂತೂ ಮುಗಿಯಿತು, 'ಹೇಗಾಯಿತು, ಎಲ್ಲಿಯ ವರೆಗೆ ಮುಟ್ಟಿತು, ಆಟ ಯಾವಾಗ' ಎಂಬ ಪ್ರಶ್ನೆಗಳು. ನಾಟ್ಯ ಕಲಿಸುವ ಗುರುಗಳು ಮುಖಾಮುಖಿಯಾದಾಗ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದರು. ಆತಿಥ್ಯ ನೀಡುತ್ತಿದ್ದರು. 'ಇವರೆಲ್ಲಾ ತುಂಬ ಮುಜುಗರ ಕೊಟ್ಟಿದ್ದಾರೆ' ಎಂದು ನಂತರದ ದಿನಗಳಲ್ಲಿ ಪ್ರಕಾಶ್ಚಂದ್ರರು ಹೇಳಿದ್ದುಂಟು.

'ದೇವಿ ಮಹಾತ್ಮೆ' ಪ್ರಸಂಗ ಎಂದು ನಿಶ್ಚಯವಾಯತು. ಪ್ರಸಂಗದ ಹೆಸರು ಕೇಳಿದಾಗಲೇ ಕಲಾವಿದರು ಕಂಗಾಲಾಗಿದ್ದರು! ಕುತೂಹಲ-ಕಾತರ. ಸರಕಾರದ ಮಂತ್ರಿಮಂಡಲ ವಿಸ್ತರಣೆ ಅಂತ ಘೋಷಿಸಿದಾಗ ಉಂಟಾಗುತ್ತದಲ್ಲಾ ಅಂತಹ ಟೆನ್ಶನ್! 'ಮಹಿಷಾಸುರ ಯಾರು ಮಾರಾಯ್ರೆ, ದೇವಿ ಯಾರು, ಚಂಡ-ಮುಂಡ ಪಾತ್ರ ಯಾರಿಗೆ, ರಕ್ತಬೀಜ ಯಾರು ಮಾಡ್ತಾರೆ?' ಮೊದಲಾದ ಚೋದ್ಯಗಳಿಗೆ ತಂತಮ್ಮಲ್ಲೇ ಉತ್ತರವಿರುತ್ತಿತ್ತು.

ಸರಿ, ಪಾತ್ರ ಹಂಚುವಿಕೆಯೂ ನಡೆಯಿತು. ಸಂಭಾಷಣೆ ಹಸ್ತಪ್ರತಿಗಳು ಕೈ ಸೇರಿದ್ದುವು. ಕಂಠಪಾಠ ನಡೆಯುತ್ತಿತ್ತು. ಪ್ರಾಕ್ಟೀಸ್ ಆಗುತ್ತಿತ್ತು. ಕೊನೆಗೆ ಸ್ಟೇಜ್ ಪ್ರಾಕ್ಟೀಸ್. ಕರ ಪತ್ರ ಅಚ್ಚಾಯಿತು. ಊರಿಗೆ ಊರೇ 'ದೇವಿ ಮಹಾತ್ಮೆ' ಆಟಕ್ಕೆ ತೆರೆದುಕೊಳ್ಳುತ್ತಾ ಬಂತು. ಪ್ರದರ್ಶನದ ದಿವಸ. 'ದೇವಿ ಮಹಾತ್ಮೆ ಪ್ರಸಂಗವಲ್ವಾ. ಎಲ್ಲರೂ ಶುದ್ಧದಲ್ಲಿ ಇರಬೇಕು' ಎಂದು ಹಿರಿಯರೊಬ್ಬರ ಕಟ್ಟಾಜ್ಞೆ. ಹಿರಿಯರ ಮಾತು ಅಂದರೆ ಮುಗಿಯಿತು. ಕಟ್ಟುನಿಟ್ಟಾಗಿ ಪಾಲಿಸಲ್ಪಡುತ್ತಿತ್ತು.

'ಶುದ್ಧವಾಗಿರುವುದು ಹೇಗೆ? ಮುಖ್ಯವಾಗಿ ಮಹಿಷಾಸುರ, ದೇವಿ, ಚಂಡ-ಮುಂಡ, ರಕ್ತಬೀಜ ಪಾತ್ರ ಮಾಡುವ ಕಲಾವಿದರು ದೇವಸ್ಥಾನದಲ್ಲಿ ಪವಿತ್ರವಾದ 'ಕಲಶ ಸ್ನಾನ' ಮಾಡಿದರು. ದೇವರಿಗೆ ವಿಶೇಷ ಪೂಜೆ. ಅರ್ಚಕರಿಂದ ಪ್ರಾರ್ಥನೆ. ಪ್ರಸಾದ ವಿತರಣೆ. ಆ ಹೊತ್ತಲ್ಲಿ ಕಲಾವಿದನ ಮನೆಯವರೆಲ್ಲಾ ಹಾಜರ್. ಅವರಿಂದಲೂ ಪ್ರತ್ಯೇಕ ಹರಕೆ.

'ಮಹಿಷಾಸುರ ಮತ್ತು ದೇವಿ ಪಾತ್ರವನ್ನು ಮಾಡುವ ಕಲಾವಿದರು ಆಟ ಮುಗಿಯುವಲ್ಲಿಯ ತನಕ ಜತೆಗೆ ಓಡಾಡಬಾರದು' ಹಿರಿಯರಿಂದ ಇನ್ನೊಂದು ಬಾಂಬ್! ಸ್ವಲ್ಪ ಮಟ್ಟಿಗೆ ಈ ಆದೇಶ ಪಾಲನೆಯಾದರೂ, ಚೌಕಿಯಲ್ಲಿ ಒಂದಾಗಬೇಡ್ವೇ! ರಂಗಸ್ಥಳವನ್ನು ಕಲಾವಿದರೆಲ್ಲಾ ಸೇರಿ ರಚಿಸಿದರು. ಮಹಿಷಾಸುರನ ಪ್ರವೇಶ ಎಲ್ಲಿಂದ, ಹೇಗೆ, ಎಷ್ಟು ಹೊತ್ತಿಗೆ ಎಂಬೆಲ್ಲಾ 'ತಾಂತ್ರಿಕ ಅಂಶ'ವನ್ನು ಭಾಗವತರಿಂದ ಪಡೆದದ್ದಾಯ್ತು. ಪ್ರವೇಶ ಮಾಡುವ ದಾರಿಯನ್ನು ವಿಶೇಷ ಆಸ್ಥೆಯಿಂದ ಕ್ಲೀನ್ ಮಾಡಿದ್ದೂ ಆಯಿತು.

ಸೂರ್ಯಾಸ್ತವಾಗುತ್ತಿದ್ದಂತೆ ಯಕ್ಷಗಾನ ಲೋಕ ತೆರೆದುಕೊಳ್ಳಲು ಆರಂಭ. ಕೆಲವರು ಮೈಕ್ ಬಿಗಿಯುತ್ತಿದ್ದರು. ಹತ್ತಾರು ಗ್ಯಾಸ್ಲೈಟ್ಗಳು ಕಾಯಕಲ್ಪ ಹೊಂದುತ್ತಿದ್ದುವು. ಚೌಕಿ ಸಿದ್ಧತೆಯಾಗುತ್ತಿತ್ತು. 'ದೇವಿ' ಕುಳಿತುಕೊಳ್ಳಲು ಉಯ್ಯಾಲೆಯ ಹಗ್ಗ ಎಷ್ಟು ಗಟ್ಟಿಯಿರಬೇಕು ಎಂಬುದಕ್ಕೆ ಕಲಾವಿದನನ್ನೇ ಕೂರಿಸಿ ಧಾರಣ ಶಕ್ತಿಯನ್ನು ಪರೀಕ್ಷಿಸಿಯಾಗಿತ್ತು! 'ಎಂತ ಮಾಡಿ ಬಿಟ್ರಿ.. ಈಗಲೇ ಅವನನ್ನು ಕುಳ್ಳಿರಿಸುವುದಾ.. ಸೊಯ ಇಲ್ವಾ.. ಮತ್ತೇ ಏನಾದರೂ ಆಗ್ಬೇಕು.. ನೋಡಿ' ಹಿರಿಯರಿಂದ ಬೈಗುಳ ಸುರಿಮಳೆ. ಇಷ್ಟು ಹೊತ್ತಿಗೆ ಕಲಾವಿದರ ಮೈಯಲ್ಲಿ ಪಾತ್ರಗಳು ಆವೇಶವಾಗಲು ಶುರು ಮಾಡಿದ್ದುವು!

'ಗಜಮುಖನೆ ಗಣಪತಿಯೆ ನಿನಗೆ ವಂದನೆ' ಮೈಕ್ನಲ್ಲಿ ಹಾಡು ಬರುತ್ತಿದ್ದಂತೆ ಸುತ್ತುಮುತ್ತಲಿನ ಮನೆಗಳಲ್ಲಿ ಹೈಅಲರ್ಟ್! 'ಮೈಕ್ ಕೇಳ್ತಾ ಇದೆ. ಇನ್ನೂ ಹೊರಟು ಆಗಿಲ್ವಾ.. ಬೇಗ ತಯಾರಾಗಿ' ಮನೆ ಮನೆಯಲ್ಲಿ ಅವಸರ-ಸಂಭ್ರಮ. ಇತ್ತ ಪ್ರದರ್ಶನ ಆಗುವಲ್ಲಿ 'ಸೋಜಿ ಅಂಗಡಿ' (ಈಗ ಮಾಯವಾಗಿದೆ), ಬೀಡಾ-ಬೀಡಿ ಅಂಗಡಿ, ಚಹ ಹೋಟೆಲ್..ಗಳಿಗೆ ಜೀವ ಬರಲಾರಂಭಿಸಿತು. ಐದು ಗಂಟೆಗೆ ಐಸ್ಕ್ಯಾಂಡಿಯವನು ರೆಡಿ. ಅವನ ಸುತ್ತ ಮಕ್ಕಳ ಗಡಣ. ಮಕ್ಕಳಲ್ಲಿದ್ದ ಪುಡಿಕಾಸುಗಳು ನೀರಾಗಿ ಹೊಟ್ಟೆಗಳಿದುವು.

ಗಂಟೆ ಒಂಭತ್ತೂವರೆಯಾಯಿತು. 'ದೇವರ ಮುಂದೆ ಕುಣಿಯಲು ವೇಷ ರೆಡಿಯಾಯ್ತಾ, ಏನು ಮಾಡ್ತೀರಿ' ಎನ್ನುತ್ತಾ ಹಿರಿಯರು ಚೌಕಿಗೆ ನುಗ್ಗಿ, ಹಿಮ್ಮೆಳದವರನ್ನು-ವೇಷಗಳನ್ನು ಹೊರಡಿಸಿದರು. ದೇವರ ಮುಂದೆ ವೇಷಗಳು ಕುಣಿಯುತ್ತಿದ್ದಂತೆ, 'ದೇವರೇ ನಮ್ಮ ಮುಂದೆ ಕುಣಿಯುತ್ತಿದ್ದಾರೆ' ಎಂಬ ಭಾವ ಎಲ್ಲರಲ್ಲಿರುತ್ತಿತ್ತು. ತೀರ್ಥಪ್ರಸಾದದ ಸೇವನೆಯ ಬಳಿಕ, 'ಪುನಃ ಪ್ರಾರ್ಥನೆ ಮಾಡಿಕೊಂಡು' ಚೌಕಿಗೆ ಮರುಪ್ರಯಾಣ.

ಕಿಕ್ಕಿರಿದ ಜನಸಂದಣಿ. ವೇಷಗಳೆಲ್ಲಾ ಚೌಕಿಯಲ್ಲಿ ತಯಾರಾಗುತ್ತಿದ್ದುವು. ಸಂಬಂಧಿಕರು ಚೌಕಿಯಲ್ಲಿ ಇಣುಕಿ ಇಣುಕಿ ನೋಡುತ್ತಿದ್ದರು. 'ಓ.. ಇಂತಹವನ ವೇಷ ಆಯಿತು, ಇವನದು ಆಗುತ್ತಾ ಉಂಟಷ್ಟೇ.. ಅವನಿಗೆ ಚಹ ಬೇಕೋ ಏನೋ.. ನಿಂಬೆ ಶರಬತ್ ಬೇಕಾಗಬಹುದಾ..' ಎಂಬ ಚಡಪಡಿಕೆ, ಕಾತರಗಳು ಚೌಕಿಯ ಹೊರಗಿನ ನೋಟ.

ಚೌಕಿಯಲ್ಲಿ ಪೂಜೆ. ಗಪ್ಚಿಪ್, ಗದ್ದಲವಿಲ್ಲ. 'ಮೈಕ್ ಆಫ್ ಮಾಡಿ' ಹಿರಿಯರ ಬುಲಾವ್. ಕಲಾವಿದರೆಲ್ಲೂ ಭಯ-ಭಕ್ತಿಯಿಂದ ಕೈಮುಗಿದು 'ತನ್ನ ವೇಷ ಒಳ್ಳೆಯದಾಗಲಿ' ಎಂದು ಹರಕೆ ಹೇಳಿಕೊಳ್ಳುತ್ತಿದ್ದರು. ಆಟ ಶುರುವಾಯಿತು. ಚೆಂಡೆಯ ಸದ್ದಿನೊಂದಿಗೆ 'ದೇವಿ ಮಹಾತ್ಮೆ'ಯ ಪೌರಾಣಿಕ ಲೋಕ ನಾಲ್ಕು ಕಂಬದ ಮಧ್ಯೆ ಅನಾವರಣಗೊಂಡಿತು. ಯಾವ್ಯಾವ ಪಾತ್ರಗಳ ಬಗ್ಗೆ ಭಯ-ಆತಂಕಗಳಿದ್ದುವೋ ಅವೆಲ್ಲಾ ಸುಲಲಿತವಾಗಿ ನಿರ್ವಹಿಸಲ್ಪಟ್ಟಿತ್ತು. ಮಧು-ಕೈಟಭ, ಮಹಿಷಾಸುರ, ಚಂಡ, ಮುಂಡ, ರಕ್ತಬೀಜ, ಶುಂಭ, ನಿಶುಂಭ ಪಾತ್ರಗಳ ವಧೆಯಾಗುವಾಗ ಕಡಿದ ಕುಂಬಳಕಾಯಿ ಹೋಳುಗಳು ಮರುದಿನವಿಡೀ ಆಟಕ್ಕೆ ಸಾಕ್ಷಿಯಾಗಿದ್ದುವು.

ಕೆಲವರ ಪಾತ್ರಗಳು ಮಧ್ಯೆ ಮಧ್ಯೆ ಮುಗಿದುಹೋಗುತ್ತಿತ್ತು. ಅವರೆಲ್ಲಾ ಮುಖದ ಬಣ್ಣವನ್ನು ಸ್ವಲ್ಪ ಉಳಿಸಿಕೊಂಡು, ತನ್ನ ಬಂಧುಗಳ-ಸ್ನೇಹಿತರ ಗಡಣದೊಂದಿಗೆ 'ಪಾತ್ರದ ಯಶಸ್ಸಿನ' ಕುರಿತು ಹರಟೆ ನಡೆಸುತ್ತಿದ್ದರು. ಪಾತ್ರವಾದ ಬಳಿಕವೂ 'ಅಬ್ಬಾ.. ದೇವರು ಕೈಬಿಟ್ಟಿಲ್ಲ. ಏನೂ ತೊಂದರೆಯಾಗಿಲ್ಲ. ಆಯಾಸವಾಗಿಲ್ಲ.' ಎಂಬ ಭಯ-ಭಕ್ತಿ. ಆಟ ಮುಗಿಸಿದ ಮರುದಿವಸ ಜರುಗಿದ ಪ್ರದರ್ಶನದ ಪೋಸ್ಟ್ಮಾಟಂ. ಹೊಗಳಿಕೆಗಳ ಸುರಿಮಳೆ. ಮನೆಮನೆಯಲ್ಲಿ ಆಟದ-ಕಲಾವಿದರ ವಿಮರ್ಶೆ.. ನಂತರದ ದಿವಸಗಳಲ್ಲಿ ಕಲಾವಿದರು ಸಿಕ್ಕಿದಾಗಲೆಲ್ಲಾ ಅವರಿಗೆ ಪ್ರತ್ಯೇಕ ಮಣೆ. ಬಹುತೇಕ ಎಲ್ಲಾ ಊರುಗಳಲ್ಲೂ ಯಕ್ಷಗಾನದ ಪ್ರದರ್ಶನದ ಸುತ್ತ ಇಂತಹ ಸುಂದರ ಅನುಭವವಿರುತ್ತಿತ್ತು.

ಈ ರೀತಿಯ ಭಕ್ತಿ-ಶೃದ್ಧೆಯ ವಾತಾವರಣ ಯಕ್ಷಗಾನ ಕ್ಷೇತ್ರದಲ್ಲಿ ಎಲ್ಲಿದೆ? ಹುಡುಕಿದರೆ ಅಲ್ಲೋ-ಇಲ್ಲೋ ಅಷ್ಟೇ. ಆಗ ಸಾಂಸ್ಕೃತಿಕ ಆಯ್ಕೆ ಬೇರೆ ಇರಲಿಲ್ಲ ಎಂಬುದು ಸರಿ. ಆದರೆ ಯಕ್ಷಗಾನವನ್ನು 'ದೈವೀ ಕಲೆ'ಯಾಗಿ ಸ್ವೀಕರಿಸಿದ್ದರಲ್ಲಾ, ಅದರ ಹಿಂದಿರುವ ಭಾವನೆಗಳಿಗೆ ಭಾಷೆಯನ್ನು ಬರೆಯಲಾಗುವುದಿಲ್ಲ. ಅವೆಲ್ಲಾ ಅನುಭವ ಜನ್ಯ. ಅದರಲ್ಲಿ ಸುಖವಿತ್ತು, ನೆಮ್ಮದಿಯಿತ್ತು, ಆನಂದಗಳಿದ್ದುವು. 'ನಮ್ಮೂರಲ್ಲೂ ಯಕ್ಷಗಾನ ಬೆಳೆಯಬೇಕೆಂಬ' ಆಶಯವಿತ್ತು. ಹಾಗಾಗಿಯೇ 'ಗಂಡು ಕಲೆ' ಉಳಿದುಕೊಂಡಿದೆ.

ಈಗ 'ಪ್ರದರ್ಶನ ರೈಸಬೇಕು' ಎಂಬ ಮಾನದಂಡದಂತೆ ಯಶಸ್ಸು. ಸ್ಥಾನ-ಮಾನ. ಹೊಗಳಿಕೆ. 'ಕೆಟ್ಟ ಅಭಿವ್ಯಕ್ತಿಯಾದರೂ ಹೊಗಳಲೇ ಬೇಕು' ಎಂಬ ಅಲಿಖಿತ ಶಾಸನ!

Monday, December 26, 2011

ಡಾ.ವೆಂಕಟರಾಜ ಪುಣಿಂಚಿತ್ತಾಯರಿಗೆ 'ಬೊಳ್ಳಿಂಬಳ ಪ್ರಶಸ್ತಿ'

ಪಾಣಾಜೆಯ 'ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ'ವು ವಾರ್ಶಿಕವಾಗಿ ನೀಡುವ 'ಬೊಳ್ಳಿಂಬಳ ಪ್ರಶಸ್ತಿ'ಗೆ ಈ ಸಾರಿ ಹಿರಿಯ ವಿದ್ವಾಂಸ, ಸಂಶೋಧಕ ಡಾ.ವೆಂಕಟರಾಜ ಪುಣಿಂಚಿತ್ತಾಯರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಐದು ಸಾವಿರ ರೂಪಾಯಿ ನಗದು ಪುರಸ್ಕಾರ, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ.

ದಶಂಬರ 25ರಂದು ಸಂಜೆ ಗಂಟೆ 4ಕ್ಕೆ ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ ಜರಗುವ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವದಂದು ಪ್ರಶಸ್ತಿ ಪ್ರದಾನ ನಡೆಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಕುಂಬಳೆ ಸುಂದರ ರಾವ್ ಪ್ರಶಸ್ತಿ ಪ್ರದಾನ ಮಾಡಿದರು.

ಒಂದು ವಿಶ್ವವಿದ್ಯಾನಿಲಯವು ಒಂದು ಭಾಷೆಯ ಕುರಿತು ಏನೆಲ್ಲಾ ಮಾಡಬಹುದೋ, ಅದನ್ನು ಏಕಾಂಗಿಯಾಗಿ ಪುಣಿಂಚಿತ್ತಾಯರು ತುಳು ಭಾಷೆಯ ಬಗ್ಗೆ ಮಾಡಿದ್ದಾರೆ. 'ತುಳುವಿನಲ್ಲಿ ಶಿಷ್ಟ ಸಾಹಿತ್ಯ ಪರಂಪರೆಯೇ ಇದ್ದಿರಲಿಲ್ಲ ಎಂಬ ವಾದವನ್ನು ಅಲ್ಲಗೆಳೆದು, ನಾಲ್ಕು ಅತೀ ಪ್ರಾಚೀನ ತಾಡವಾಲೆ ಗ್ರಂಥಗಳನ್ನು ಪತ್ತೆ ಮಾಡಿ; ಅವುಗಳನ್ನು ಕನ್ನಡಕ್ಕೆ ಲಿಪ್ಯಂತರಗೊಳಿಸಿ ವಿಸ್ತಾರವಾದ ಪೀಠಿಕೆ, ಅಡಿಟಿಪ್ಪಣಿ, ಅರ್ಥಕೋಶದೊಂದಿಗೆ ಸಂಪಾದಿಸುವ ಮೂಲಕ ತುಳು ಭಾಷೆಗೆ ಭಾರತದ ಇತರ ಇಪ್ಪತ್ತು ಭಾಷೆಯಲ್ಲಿ ಸಮಾನ ಸ್ಥಾನವನ್ನು ಒದಗಿಸಿಕೊಟ್ಟ ಸಾಧನೆ ಪುಣಿಂಚಿತ್ತಾಯರದು.

ನೂರಾರು ಪಾಡ್ದನ ಸಂಗ್ರಹ, ಜಾನಪದ ರಾಮಾಯಣದ ಲಿಪಿಗಾರಿಕೆ, ದೈವಾರಾಧನೆ ಕುರಿತು ಬರೆಹ, ಕನ್ನಡ ತುಳು ಕವನ ಸಂಗ್ರಹ, ಯಕ್ಷಗಾನ ಕಲಾವಿದ ಅಲ್ಲದೆ ಕನ್ನಡ ಸಾಹಿತ್ಯ, ಸಂಸ್ಕೃತ, ಮಲೆಯಾಳ, ಹಿಂದಿ ಭಾಷೆಗಳಲ್ಲಿ ಖಚಿತ ಅನುಭವ. ನಾಟಕ, ಶಿಶುಗೀತೆ, ಧ್ವನಿಸುರುಳಿಗಳ ಸಾಹಿತ್ಯಗಳು, ಗಿಡಮೂಲಿಕೆಗಳ ಅರ್ಥಕೋಶ, ಎಪ್ಪತ್ತೈದಕ್ಕೂ ಮಿಕ್ಕಿ ಸಂಶೋಧನಾ ಬರೆಹಗಳು.. ಹೀಗೆ ಪುಣಿಂಚಿತ್ತಾಯರ ಕುರಿತು ಮೊಗೆದಷ್ಟೂ ತುಂಬುವ ಸಂಪತ್ತು.

ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ದೇರಾಜೆ ಪ್ರಶಸ್ತಿ, ದ್ರಾವಿಡಿಯನ್ ಯುನಿವರ್ಸಿಟಿ ಕುಪ್ಪಂ ಇದರ ಬೆಸ್ಟ್ ರೀಸರ್ಚ್ ಅವಾರ್ಡ್ ಪುರಸ್ಕಾರ.. ಹೀಗೇ ಪ್ರಶಸ್ತಿಗಳ ಸರಮಾಲೆ. ಈ ಮಾಲೆಗೆ ಈಗ 'ಬೊಳ್ಳಿಂಬಳ ಪ್ರಶಸ್ತಿ'ಯ ಗರಿ.

ಹಿರಿಯ ಕಲಾವಿದ, ಅಧ್ಯಾಪಕ ಬಿ.ಎಸ್.ಓಕುಣ್ಣಾಯರು ತನ್ನ ತೀರ್ಥರೂಪದ ನೆನಪಿಗಾಗಿ 'ಬೊಳ್ಳಿಂಬಳ ಪ್ರಶಸ್ತಿ'ಯನ್ನು ಸ್ಥಾಪಿಸಿದ್ದು, ಈ ಹಿಂದಿನ ಸಾಲಿನಲ್ಲಿ ಹಿರಿಯ ಕಲಾವಿದರಾದ ಕೆ.ವಿ.ಗಣಪಯ್ಯ, ಎಡಮಂಗಲ ಎನ್.ಆರ್.ಚಂದ್ರ, ಬೆಟ್ಟಂಪಾಡಿ ಪಿ.ಸದಾಶಿವ ಭಟ್ - ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಇದೇ ವೇದಿಕೆಯಲ್ಲಿ ಶ್ರಿ ಆಂಜನೇಯ ಯಕ್ಷಗಾನ ಕಲಾ ಸಂಘದ ಸಂಮಾನವನ್ನು ಹಿರಿಯ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯ ಮತ್ತು ಕಲಾವಿದ ರಾಜರತ್ನಂ ಅವರಿಗೆ ಗೌರವಪೂರ್ವಕವಾಗಿ ಸಲ್ಲಿಸಲಾಯಿತು.

Thursday, December 1, 2011

ಬೊಂಬೆಗಳೂ ಮಾತನಾಡುತ್ತವೆ!

'ಬೊಂಬೆ'ಗೆ ಮಾತಿಲ್ಲ. ಭಾವನೆಯಿಲ್ಲ. ಚಲನೆಯಿಲ್ಲ. ಆದರೆ ರೂಪವಿದೆ, ಆಯವಿದೆ, ಆಕಾರವಿದೆ. ಅದು ಮಾತನಾಡಿದರೆ ಬೊಂಬೆಯಲ್ಲ. (ಗೊಂಬೆ = ಬೊಂಬೆ)

ಆ ಒಂದು ದಿನ. ಬೊಂಬೆಗಳು ಮಾತನಾಡಿದುವು. ಕುಣಿದುವು, ಕೈಕಾಲುಗಳನ್ನಾಡಿಸಿದುವು. ಭಾವನೆಗಳೇ ಭಾಷೆಗಳಾದುವು. ಅದು ಸಭಾಭವನ ಪೂರ್ತಿ ಆವರಿಸಿತು. ಮತ್ತೆ ಮತ್ತೆ ಕಾಡಲು ಶುರುವಾಯಿತು. 'ಬೊಂಬೆಗಳಾದ ನಮಗೇ ಮಾತು ಬರುತ್ತವೆ. ನೀವು ಮಾತನಾಡಿದರೂ ಬದುಕಿನಲ್ಲಿ ಕೆಲವೊಂದು ಸಲ ನಮ್ಮಂತೆ ಆಗುತ್ತೀರಲ್ಲಾ' ಎಂದು ಅಣಕಿಸಿದಂತೆ ಭಾಸವಾಯಿತು.

ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಬೊಂಬೆಗಳು ಮಾತನಾಡುತ್ತಿದ್ದಾಗ (೧೫-೧೧-೨೦೧೧) ಒಂಭೈನೂರ ಐವತ್ತು ವಿದ್ಯಾರ್ಥಿಗಳು ನಿಜಕ್ಕೂ ಬೊಂಬೆಗಳಾದರು! ಚಿಕ್ಕ ವೇದಿಕೆಯಲ್ಲಿ ಹಾದು ಹೋಗುವ ಅವುಗಳ ಕಾರುಬಾರು ಕ್ಷಣಕ್ಷಣಕ್ಕೂ ಏರುಗತಿಗೆ ಬದಲಾಗುತ್ತಿತ್ತು. ಒಂದು ಘಂಟೆಯಲ್ಲಿ ಇಡೀ ಪೌರಾಣಿಕ ಬದುಕನ್ನು ಕಟ್ಟಿಕೊಟ್ಟಿತ್ತು. 'ಕಲೆಗೆ ಜಾತಿ, ಭಾಷೆ, ಅಂತಸ್ತಿನ ಬಂಧನವಿಲ್ಲ' ಎಂಬುದನ್ನು ಸಾರಿತ್ತು.

ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ) ಇವರು 'ನರಕಾಸುರ ವಧೆ' ಎಂಬ ಯಕ್ಷಗಾನ ಪ್ರಸಂಗವನ್ನು ಬೊಂಬೆಗಳಿಂದಲೇ ಆಡಿಸಿದರು. ನಿರ್ದೇಶಕರಾದ ಕೆ.ವಿ.ರಮೇಶ್ ಮತ್ತು ಸಹೋದರರ ಭಾವನೆಗಳಂತೆ ಕಿರು ವೇದಿಕೆಯಲ್ಲಿ ಕುಣಿದ ಚಿಕ್ಕ ಗೊಂಬೆಗಳು ನರಕಾಸುರ, ಕೃಷ್ಣ, ದೇವೇಂದ್ರ, ಸತ್ಯಭಾಮೆಗಳಾಗಿ ಕಾಣಿಸಿಕೊಂಡವು.

ಬೊಂಬೆಯಾಟ ಸಂಘಕ್ಕೆ ಈಗ ಮೂವತ್ತರ ಹರೆಯ. ಮೂವತ್ತು ಶಾಲೆಗಳಲ್ಲಿ ಬೊಂಬೆಯಾಟವನ್ನು ಆಡುವುದರ ಮೂಲಕ ವಿದ್ಯಾರ್ಥಿಗಳಿಗೆ ಕಳೆದುಹೋಗುತ್ತಿರುವ ಕಲೆಯೊಂದನ್ನು ಪರಿಚಯಿಸುವ ಉದ್ದೇಶ. ಪುತ್ತೂರಿನ ಫಿಲೋಮಿನಾದಲ್ಲಾದುದು ಇಪ್ಪತ್ತೆರಡನೇ ಪ್ರಯೋಗ. ಮುಂದಿನ ಜನವರಿಯಲ್ಲಿ ರಾಜಧಾನಿಯಲ್ಲಿ ಸಮಾರೋಪ. ಮೂವತ್ತು ಪ್ರದರ್ಶನಗಳಿಗೆ ಇನ್ಫೋಸಿಸ್ ಸಾರಥ್ಯ.

'ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ' ಶೀರ್ಶಿಕೆಯನ್ನು ಮುಂದಿಟ್ಟು ಅಭಿಯಾನದ ಅಖಾಡಕ್ಕಿಳಿದವರು ನಿವೃತ್ತ ಅಧ್ಯಾಪಕ, ಸಹೃದಯಿ ಎಂ.ವಿ.ಭಟ್ ಮಧುರಂಗಾನ. ಅವರು ಬೊಂಬೆಯಾಟ ತಂಡವನ್ನು ಹತ್ತಿರದಿಂದ ಬಲ್ಲವರು. ಅವರು ಒಂದೆಡೆ ಬರೆಯುತ್ತಾರೆ :
ಬೊಂಬೆಯಾಟ ಸಂಘದ ಸಾಧನೆ ಅತ್ಯದ್ಭುತ. ಸದ್ದುಗದ್ದಲವಿಲ್ಲದ ಮೌನ ಕ್ರಾಂತಿ. ಎರಡು ಸಾವಿರಕ್ಕೂ ಮಿಕ್ಕಿ ಪ್ರದರ್ಶನ ನೀಡಿದೆ.

ಕಲಾ ಮೇಳಗಳಲ್ಲಿ, ಜಾನಪದ ಮೇಳಗಳಲ್ಲಿ ಭಾಗವಹಿಸಿದೆ. ಕೇರಳ, ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳಲ್ಲಿ ಸಂಚರಿಸಿವೆ. ಪಾಕಿಸ್ತಾನದ ಲಾಹೋರ್, ದುಬೈ, ಪ್ರಾನ್ಸಿನ ಪ್ಯಾರಿಸ್, ಯುರೋಪಿನ ಜೆಕೋಸ್ಲೋವಾಕಿಯಾದ ಫ್ರಾಗ್ನಲ್ಲಿ ಬೊಂಬೆಗಳು ಕುಣಿದಿವೆ. ಆಕಾಶವಾಣಿ, ದೂರದರ್ಶನ, ಮಾಧ್ಯಮಗಳಿಂದ ಹೊಗಳಿಸಿಕೊಂಡಿದೆ. ನಮ್ಮ ಕನ್ನಾಡಿನ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.

ತಂಡದ ನಾಯಕ ಕೆ.ವಿ.ರಮೇಶ್ ಅವರಿಗೆ ಬೊಂಬೆಯಾಟ ಉಸಿರು. ಜೀವನದ ಭಾಗ. ಅದೊಂದು ಸಂಸ್ಕೃತಿ. 'ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆ. ಮುಂದಿನ ಜನರೇಶನ್ಗೆ ಇಂತಹುದೊಂದು ಕಲಾಪ್ರಕಾರವಿದೆ ಎಂಬ ಅರಿವು ಉಂಟಾಗಲಿ ಎಂಬುದಕ್ಕಾಗಿ ಶಾಲೆಗಳಿಗೆ ಹೊರಟಿದ್ದೇವೆ' ಎನ್ನುತ್ತಾರೆ.

ರಮೇಶ್ ಕಳಕಳಿಯ ಹಿಂದೆ ಉದ್ದೇಶವೂ ಇದೆ - '1900ರ ಸುಮಾರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವತ್ತು ಬೊಂಬೆಯಾಟ ತಂಡಗಳಿದ್ದುವಂತೆ. 1981ರಲ್ಲಿ ಎಂಟಕ್ಕೆ ಇಳಿಯಿತು. 2010ರಲ್ಲಿ ಕೇವಲ ಎರಡು. ಒಂದು ಬಡಗಿನ ಉಪ್ಪಿನಕುದ್ರು ಭಾಸ್ಕರ ಕೊಗ್ಗ ಕಾಮತರ ತಂಡ. ಮತ್ತೊಂದು ಕಾಸರಗೋಡಿನದು..' ರಮೇಶ್ ಮಾತನಾಡುತ್ತಿದ್ದಾಗ ಸಾಂಸ್ಕೃತಿಕ ಪಲ್ಲಟವೊಂದರ ಚಿತ್ರ ಕಣ್ಮುಂದೆ ಹಾದು ಹೋಗುತ್ತದೆ.

'ಬೊಂಬೆಯಾಟದ ಸಂಘ ಏಳುಗಳೊಂದಿಗೆ ಬೀಳುಗಳನ್ನೂ ಅನುಭವಿಸಿದೆ. ಬೊಂಬೆಗಳ ತಯಾರಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದೆ. ಪ್ರಯಾಣ ಮತ್ತು ಪ್ರದರ್ಶನಗಳಿಗಾಗಿ ಲೆಕ್ಕಕ್ಕೆ ಸಿಗದಷ್ಟು ಖರ್ಚು ಮಾಡಿದೆ. ಸಾಲಸೋಲಗಳಿಂದ ಸೊರಗಿದೆ. ಆದರೆ ಬಳಲಿ ಕುಳಿತಿಲ್ಲ. ನಿರಾಶೆಯಿಂದ ಕೈಬಿಟ್ಟಿಲ. ಇನ್ನೂ ಉತ್ಸಾಹದಲ್ಲಿದೆ' ಎನ್ನುತ್ತಾರೆ ಎಂ.ವಿ.ಭಟ್.

'ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ'ಯ ಸಂಕಲ್ಪ ರಮೇಶರ ಮುಂದೆ ಸ್ಪಷ್ಟವಾಗಿದೆ. ಕೇರಳ ಮತ್ತು ಕರ್ನಟಕದ ಐವತ್ತು ಸಾವಿರ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಉದ್ದೇಶ. ಈ ಯೋಜನೆಗೆ ಹೆಗಲೆಣೆಯಾಗಿ ನಿಂತವರು ಇನ್ಫೋಸಿಸ್ ಫೌಂಡೇಶನ್ನ ಮುಖ್ಯಸ್ಥೆ ಸುಧಾಮೂರ್ತಿಯವರು. 'ಅವರ ಈ ಕೊಡುಗೆಯಿಂದ ಅಳಿವಿನಂಚಿನಲ್ಲಿರುವ ಒಂದು ಪ್ರಾಚೀನ ಜಾನಪದ ಕಲೆಯನ್ನು ಪುನಶ್ಚೇತನಗೊಳಿಸಿದಂತಾಗಿದೆ. ಮುಂದಿನ ತಲೆಮಾರಿಗೆ ಈ ವಿಶಿಷ್ಟ ಕಲೆಯನ್ನು ಪರಿಚಯಿಸಿದಂತಾಗಿದೆ' ಎಂಬ ಖುಷಿ ರಮೇಶರಿಗಿದೆ.

ರಮೇಶ್ ಅವರ ಮುಂದೆ ಹಲವು ಕನಸುಗಳಿವೆ. ಬೊಂಬೆಯಾಟದ ರಂಗಮಂದಿರ, ಬೊಂಬೆ ನಿರ್ಮಾಣ ಶಾಲೆ, ಸಾವಿರ ಬೊಂಬೆಗಳ ಒಂದು ಮ್ಯೂಸಿಯಂ, ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿದ ಒಂದು ಗ್ರಂಥಾಲಯ.. ನಿಕಟ ಭವಿಷ್ಯದ ಯೋಜನೆ-ಯೋಚನೆ. ಕಲೆ, ಭಾಷೆ, ಸಂಸ್ಕೃತಿಯನ್ನು ಪ್ರೀತಿಸುವ ಮನಸ್ಸುಗಳು 'ಮನಸ್ಸು ಮಾಡಿದರೆ' ಕಷ್ಟವೇನಿಲ್ಲ.

ಫಿಲೋಮಿನಾ ಪ್ರೌಢಶಾಲೆಯಲ್ಲಿ ಪ್ರದರ್ಶನದ ಬಳಿಕ ವಿದ್ಯಾರ್ಥಿಗಳ ಎದುರಿಗೆ ಬೊಂಬೆಗಳನ್ನು ತಂದರು. ಬೆರಳುಗಳ ಮೂಲಕ ಕುಣಿಸಿದರು. ಒಂದಿಬ್ಬರು ವಿದ್ಯಾರ್ಥಿಗಳನ್ನು ವೇದಿಕೆಗೆ ಬರಹೇಳಿ ಅವರ ಕೈಯಲ್ಲಿ ಬೊಂಬೆಗಳನ್ನು ಕೊಟ್ಟರು. ಅಧ್ಯಾಪಿಕೆಯರ ಕೈಗೂ ನೀಡಿದರು. ಪ್ರದರ್ಶನ ಮುಗಿಸಿ ಹೊರಡುವಾಗ ಎಲ್ಲರ ಮನದಲ್ಲೂ ಗೊಂಬೆಗಳೇ ಆವರಿಸಿದ್ದುವು.

ಪ್ರತಿ ಪ್ರದರ್ಶನದಲ್ಲಿ ಚಿಕ್ಕ ಸಭಾ ಕಾರ್ಯಕ್ರಮ. ಒಬ್ಬರು ಉದ್ಘಾಟಕರು. ಇನ್ನೊಬ್ಬರು ಮುಖ್ಯ ಅತಿಥಿಗಳು. ಮತ್ತೊಬ್ಬರು ಅತಿಥೇಯರು. ಯಾರಿಗೂ ಮಾತಿಗೆ ಅವಕಾಶವಿಲ್ಲ. ಯಕ್ಷಗಾನ ಬೊಂಬೆಯ ಕೈಯಲ್ಲಿರುವ ದೀಪವನ್ನು ಉದ್ಘಾಟಕರು ದೀಪದಲ್ಲಿರುವ ಬತ್ತಿಗೆ ಸೋಕಿಸಿದರಾಯಿತು. ಅಲ್ಲಿಗೆ ಉದ್ಘಾಟನಾ ಸಮಾರಂಭಕ್ಕೆ ಮುಕ್ತಾಯ. ಅತಿಥಿಗಳಿಗೆ ಸ್ಮರಣಿಕೆ, ಶಾಲು. ಗೌರವದ ಸ್ವಾಗತ-ಧನ್ಯವಾದ. ಈ ರೀತಿಯ ಚಿಕ್ಕ ಸಮಾರಂಭವು ಕಾಲದ ಆವಶ್ಯಕತೆ.

ಹಾಂ.. ಒಂದು ವಿಷಯ ಮರೆತುಬಿಟ್ಟೆ. ರಮೇಶರ ಬೊಂಬೆಯಾಟ ಸಂಘದ ಬೊಂಬೆಗಳಿವೆಯಲ್ಲಾ, ಇವುಗಳು ವಿಶ್ವದಲ್ಲೇ ಅತೀ ಸುಂದರ ಮತ್ತು ಅತಿ ಚಿಕ್ಕ ಗೊಂಬೆಗಳು ಎಂಬ ಖ್ಯಾತಿ ಪಡೆದಿವೆ.

Monday, October 31, 2011

ನಂದಿದ ಶತಮಾನದ ಧ್ವನಿ

ತೆಂಕು ಮತ್ತು ಬಡಗು ತಿಟ್ಟುಗಳ ಸವ್ಯಸಾಚಿ ಭಾಗವತ ಕಡತೋಕ ಮಂಜುನಾಥ ಭಾಗವತರು ವಿಧಿವಶರಾದರು. ಅಗಲಿದ ಚೇತನಕ್ಕೆ ಅಕ್ಷರ ನಮನ.

'ಕಡತೋಕ' ಎಂದರೆ ಸಾಕು, ಧರ್ಮಸ್ಥಳ ಮೇಳವೇ ಕಣ್ಣಮುಂದೆ ನಿಲ್ಲುತ್ತದೆ. ಇವರ ಹಾಡುಗಾರಿಕೆ ಒಂದು ಕಾಲಘಟ್ಟದ ಅದ್ಭುತ! ಶತಮಾನದ ಧ್ವನಿ. ಕಾಳಿಂಗ ನಾವುಡರ ಮಿಂಚಿನ ಸಂಚಾರದ ಸಮಯದಲ್ಲೂ ಕಡತೋಕ ಭಾಗವತರು ಸರಿಸಾಟಿಯಾಗಿ ಯಕ್ಷಗಾನ ರಂಗದಲ್ಲಿ ನಿಂತವರು. ಧರ್ಮಸ್ಥಳ ಮೇಳದ ಯಕ್ಷಗಾನ ವೈಭವಗಳ ದಿನಗಳ ಕುರಿತು ಮಾತನಾಡುವಾಗ ಕಡತೋಕರನ್ನು ಬಿಟ್ಟು ಮಾತನಾಡಲು ಸಾಧ್ಯವಿಲ್ಲ. ತನ್ನ ಹಾಡುಗಾರಿಕೆ ಮೂಲಕ ಪ್ರಸಂಗಗಳಿಗೆ, ಪಾತ್ರಕ್ಕೆ, ಪಾತ್ರಧಾರಿಗಳಿಗೆ ಹೊಸ 'ಸೃಷ್ಟಿ'ಯನ್ನು, 'ದೃಷ್ಟಿ'ಯನ್ನು ನೀಡಿದ ಅಸಾಮಾನ್ಯ. ಕಡತೋಕರು ರಂಗದಲ್ಲಿ ಜಾಗಟೆ ಹಿಡಿದಷ್ಟು ದಿವಸ ಅವರೇ ತ್ರಿವಿಕ್ರಮ.
ಶ್ರೀ ಧರ್ಮಸ್ಥಳ ಮೇಳದ ಮುಮ್ಮೇಳ, ಕಡತೋಕರ ಸಾರಥ್ಯದಲ್ಲಿ ಹಿಮ್ಮೇಳ, ಮುಗಿಬೀಳುವ ಪ್ರೇಕ್ಷಕ ವರ್ಗ..ಅದ್ದೂರಿ.. ಇವೆಲ್ಲ ಯಕ್ಷಗಾನದ ವೈಭವದ ದಿನಗಳು. "ಮಾತಿಗೆ" ಸಾಂಸ್ಕೃತಿಕವಾದ ಮೌಲ್ಯವನ್ನು ಕೊಟ್ಟ ದಿನಮಾನಗಳು. ಕಡತೋಕರು ಇಂದು ದೈಹಿಕವಾಗಿ ಅಗಲಿದ್ದಾರೆ. ಮಾನಸಿಕವಾಗಿ ಜೀವಂತ.