Friday, November 5, 2010

ವಿಂಶತಿ ಸಡಗರದಲ್ಲಿ ಸಂಪಾಜೆ ಯಕ್ಷೊತ್ಸವ

ಸಂಪಾಜೆಯಲ್ಲಿ ಪ್ರತೀ ವರುಷ ನವೆಂಬರ್ ತಿಂಗಳಲ್ಲಿ ನಡೆಯುವ ಯಕ್ಷಗಾನವು ಕಲಾಸಕ್ತರಿಗೆ, ಕಲಾವಿದರಿಗೆ, ಯಕ್ಷಪ್ರೇಮಿಗಳಿಗೆ ಹಬ್ಬ! ಇಂದು ಬೇರೆ ಬೇರೆ ಕ್ಷೇತ್ರದಲ್ಲಿ ವಿವಿಧ ಹೂರಣದ 'ಮೇಳಗಳು' ನಡೆಯುತ್ತಿವೆ. ವಿಷಯಾಧಾರಿತವಾಗಿ ಅರಿವನ್ನು ಬಿತ್ತಲು ಮೇಳಗಳು ಸಹಕಾರಿ. ಯಕ್ಷಗಾನಕ್ಕೆ ಅದರದ್ದೇ ಆದ ಮೇಳಗಳು ಇವೆ. ಸಂಪಾಜೆಯ ಕಾರ್ಯಕ್ರಮವು 'ಸಮಾವೇಶ'ದ ಕಲ್ಪನೆಯಲ್ಲಿ ಮೈದಳೆಯುತ್ತದೆ.

ತಂತಮ್ಮ ನೆಚ್ಚಿನ ಕಲಾವಿದರ ರಂಗಾಭಿವ್ಯಕ್ತಿಯನ್ನು ರಂಗದಲ್ಲಿ ನೋಡುವ ಕುತೂಹಲ, ಪೈಪೋಟಿಗೆ ಸಾಕ್ಷಿಯಾಗುವ ಕೆಲವರು, ಭಾಗವತರ ಹಾಡಿನ ರಸಾಸ್ವಾದನೆಗಾಗಿಯೇ ಬರುವವರು, ಮದ್ದಳೆ-ಚೆಂಡೆಯ ನಾದ ಕೇಳುವುದಕ್ಕಾಗಿಯೇ ಮುಗಿಬೀಳುವ ಒಂದಷ್ಟು ಮಂದಿ. ಇವರ ಮಧ್ಯೆ ಎಲ್ಲವನ್ನು ಸಮಗ್ರವಾಗಿ ಸ್ವೀಕರಿಸುವ ವಿಮರ್ಶಾ ಮನಸ್ಸುಗಳು. ಕಲಾವಿದರನ್ನು ಮಾತನಾಡಿಸಲೆಂದೇ ಬರುವ ಅಭಿಮಾನಿ ಬಳಗ - ಹೀಗೆ ಬೇರೆ ಬೇರೆ ಆಸಕ್ತಿಗಳ ಕಲಾಸಕ್ತರು ಒಂದೇ ಸೂರಿನಡಿ ಕಲೆಯುತ್ತಾರೆ. ಮನಸಾ ನಲಿಯುತ್ತಾರೆ.

ಪರಸ್ಪರ ಸಿಕ್ಕಾಗ 'ನೀವು ಸಂಪಾಜೆಗೆ ಹೋಗಿಲ್ವಾ' ಎಂಬಲ್ಲಿಂದ ಮಾತುಕತೆ ಶುರು. ಹೋಗಿಲ್ಲ ಎಂದಾದರೆ 'ನೀವೆಂತ ಜನ ಮಾರಾಯ್ರೆ. ಒಳ್ಳೆಯ ಆಟ ಮಿಸ್ ಮಾಡಿಕೊಂಡ್ರಿ' ಎಂಬ ಸಾತ್ವಿಕ ಬೈಗಳು. ಯಕ್ಷಗಾನದ ಕುರಿತಾದ ಅಭಿಮಾನ, ಪ್ರೀತಿಗಳ ಪ್ರಕಟೀಕರಣದ ಸ್ಯಾಂಪಲ್ಗಳಿವು. ಯಕ್ಷೊತ್ಸವ - ಕೇವಲ ಆಟಕ್ಕಾಗಿ ಅಟವಲ್ಲ.

ಒಂದರ್ಥದಲ್ಲಿ ಕಲಾವಿದರ 'ಮೇಳ' (ಸಮಾವೇಶ). ಪ್ರಸಂಗವನ್ನಾಧರಿಸಿ ತೆಂಕು-ಬಡಗು ತಿಟ್ಟುಗಳ 'ಕ್ವಾಲಿಟಿ' ಕಲಾವಿದರ ಸಮ್ಮಿಲನ. ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುವ, ಆತಿಥ್ಯ ನೀಡುವ, ಗೌರವಿಸುವ ಸಂಘಟಕರು ತೆರೆಮರೆಯಲ್ಲೇ ಇರುತ್ತಾರೆ. ಸಂಜೆಯಿಂದ ಆರಂಭವಾದ ಯಕ್ಷಾಗಾನೀಯ ವಾತಾವರಣ ಆರುವುದು ಮರುದಿನ ಸೂರ್ಯೋದಯದ ಬಳಿಕವೇ. ಎಂದೂ ಕೂಡಾ ಖಾಲಿ ಆಸನಗಳನ್ನು ಸಂಪಾಜೆಯ ಯಕ್ಷೊತ್ಸವ ಕಂಡದ್ದೇ ಇಲ್ಲ!

ಆರಂಭದಿಂದಲೂ ಯಕ್ಷೊತ್ಸವಕ್ಕೆ ಡಾ.ಕೀಲಾರು ಗೋಪಾಲಕೃಷ್ಣಯ್ಯ ಅವರ ಸಾರಥ್ಯ. ಅವರು ವಿಧಿವಶರಾದ ಬಳಿಕ 'ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ-ಸಂಪಾಜೆ' ಎಂಬ ಟ್ರಸ್ಟ್ ರೂಪೀಕರಣದ ಮೂಲಕ ಸಾಂಸ್ಥಿಕ ರೂಪ. ಈ ಟ್ರಸ್ಟಿನ ಮೂಲಕ ಯಕ್ಷೊತ್ಸವ. ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಮತ್ತು ಪ್ರೋತ್ಸಾಹ ರೂಪದ ದೇಣಿಗೆ ಪ್ರದಾನ. ಕಲಾವಿದರಿಗೆ, ವೈದಿಕರಿಗೆ ಸಂಮಾನ. ಜತೆಗೆ ಆರೋಗ್ಯ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ. ಆದ್ಯತೆಯ ಮೇರೆಗೆ ಸಂಘ-ಸಂಸ್ಥೆಗಳಿಗೆ ಆರ್ಥಿಕ ಸಹಕಾರ. ದೇವಸ್ಥಾನ, ಮಠ, ಮಂದಿರ, ವೃದ್ದಾಶ್ರಮ, ಅನಾಥಾಶ್ರಮಗಳ ಅಭಿವೃದ್ಧಿಯತ್ತ ಒಲವು. ಅಶಕ್ತರಿಗೆ ನೆರವು. ಯಕ್ಷಗಾನ ಸಂಬಂಧಿ ಪ್ರಕಟಣೆಗಳು. ಹೀಗೆ ಹಲವು ಕ್ಷೇತ್ರಗಳಿಗೆ ಆರ್ಥಿಕ ಅಸರೆ.

ಈ ಎಲ್ಲಾ ಆರ್ಥಿಕ ಪ್ರೋತ್ಸಾಹಗಳನ್ನು ನೀಡಿದಲ್ಲಿಗೆ ಟ್ರಸ್ಟ್ ಕೆಲಸ ಮುಗಿಯುವುದಿಲ್ಲ. ಅದರ 'ಫಾಲೋಅಪ್' ಕೂಡಾ ಜತೆಜತೆಗೆ ನಡೆಯುತ್ತದೆ. ಕೊಡಲ್ಪಟ್ಟ ದೇಣಿಗೆ ಸರಿಯಾದ ರೀತಿಯಲ್ಲಿ ವಿನಿಯೋಗವಾಗಬೇಕೆಂಬ ಕಾಳಜಿ. ಈ ಕೊಡುಗೆಗಳ ಹಿಂದೆ ಜಾತಿ-ಧರ್ಮಗಳ ಸೋಂಕಿಲ್ಲ. ಅಂತಸ್ತುಗಳ ತಾಳ-ಮೇಳವಿಲ್ಲ. ಯಾವುದೇ ರಾಜಕೀಯ-ವಶೀಲಿಗಳ ಟಚ್ ಇಲ್ಲ. ಇಲ್ಲಿರುವುದು ಕಲೆಯ ಆರಾಧನೆ ಮಾತ್ರ.

ಶೇಣಿ, ಸಾಮಗ, ನೆಡ್ಲೆ ನರಸಿಂಹ ಭಟ್.. ಮೊದಲಾದ ಹಿರಿಯರಿಂದ ಆರಂಭವಾಗಿ ಸಮಕಾಲಿನ ಸೀನಿಯರ್ ಕಲಾವಿದರ ವರೆಗೆ ನೀಡಲ್ಪಟ್ಟ ಸಂಮಾನವು 'ರಾಜ್ಯ ಪ್ರಶಸ್ತಿ'ಗಿಂತಲೂ ಮೇಲು. ಯಾಕೆಂದರೆ ಪ್ರಶಸ್ತಿ ನೀಡಿಕೆಯ ಹಿಂದೆ ಒಳ್ಳೆಯ ಸದುದ್ದೇಶವಿದೆ. ಗೌರವವಿದೆ. ಕಲಾವಿದರ ಬಗ್ಗೆ ಆದರವಿದೆ. ಸಂಮಾನವನ್ನು ಪಡೆದ ಕಲಾವಿದನಿಗೂ ಸಾರ್ಥಕ ಭಾವ.

ಟ್ರಸ್ಟಿನ ಎಲ್ಲಾ ಚಟುವಟಿಕೆಯ ಹಿಂದಿನ ರೂವಾರಿ ಡಾ.ಕೀಲಾರ್ ಅವರ ಪುತ್ರ ಕೆ.ಜಿ.ರಾಜಾರಾಂ ಭಟ್ ಮತ್ತು ಪುತ್ರಿ ಸುಮನಾ ಶ್ಯಾಂ ಭಟ್. ಟ್ರಸ್ಟಿನ ಸಲಹೆಗಾರರಾಗಿ ಟಿ. ಶ್ಯಾಮ ಭಟ್ ಒಟ್ಟೂ ವ್ಯವಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. 'ತೀರಾ ಸಂಪ್ರದಾಯವಲ್ಲದ, ಹಾಗೆಂತ ತೀರಾ ಆಧುನಿಕವಲ್ಲದ ಯಕ್ಷಗಾನವನ್ನು ವರ್ತಮಾನದಲ್ಲಿ ಹೇಗುಂಟೋ ಹಾಗೆ ಪ್ರದರ್ಶಿಸುವುದು ಆಶಯ' ಎನ್ನುತ್ತಾರೆ ಟಿ.ಶ್ಯಾಮ ಭಟ್.

ಈ ವರುಷದ ಯಕ್ಷೊತ್ಸವವು ನವೆಂಬರ್ 6, ಶನಿವಾರ ಪೂರ್ವಾಹ್ನ ಆರಂಭಗೊಂಡು, ಮರುದಿನ ಸೋರ್ಯೋದಯದ ತನಕ ನಡೆಯಲಿದೆ. ಪೂಜನೀಯ ಯತಿಗಳ ಉಪಸ್ಥಿತಿಯಲ್ಲಿ ಇಪ್ಪತ್ತನೇ ವರುಷದ ಸಮಾರಂಭದಲ್ಲಿ ಇಪ್ಪತ್ತು ಮಂದಿ ಹಿರಿಯ ಕಲಾವಿದರಿಗೆ 'ಸಾಧಕ ಪ್ರಶಸ್ತಿ', ಹನ್ನೆರಡು ಮಂದಿಗೆ 'ವಿದ್ವತ್ ಪ್ರಶಸ್ತಿ', 'ಶೇಣಿ ಪ್ರಶಸ್ತಿ', 'ವಿಂಶತಿ ಯಕ್ಷೊತ್ಸವ ಪ್ರಶಸ್ತಿ'ಗಳ ಪ್ರದಾನ ನಡೆಯಲಿದೆ.ಅಪರಾಹ್ನ ಗಂಟೆ 1ರಿಂದ 'ಬೇಡರ ಕಣ್ಣಪ್ಪ, ಸುಧನ್ವಾಜರ್ುನ, ವಿಶ್ವಾಮಿತ್ರ ಪ್ರತಾಪ, ಜ್ವಾಲಾ-ಜಾಹ್ನವಿ, ಮಹಿಷೋತ್ಪತ್ತಿ' ಯಕ್ಷಗಾನ ಪ್ರದರ್ಶನ ನಡೆಯಲಿದೆ.

'ಇದೊಂದು ಕಲೋತ್ಸವ. ಯಕ್ಷಗಾನಕ್ಕೆ ಉತ್ಸವ. ಕಮ್ಮಟ, ವಿಚಾರಗೋಷ್ಠಿಗಳ ಹಿನ್ನೆಲೆಯಲ್ಲಿ ಇಲ್ಲಿನ ಪ್ರದರ್ಶನವನ್ನು ವೀಕ್ಷಿಸಬಾರದು' - ಯಕ್ಷೊತ್ಸವ ಪ್ರದರ್ಶನವನ್ನು ವಿಮಶರ್ೆಯ ಕಣ್ಣಿಂದ ನೋಡುತ್ತಾರೆ ಉಜಿರೆ ಅಶೋಕ ಭಟ್.