Tuesday, December 30, 2014

ಬಿ.ಎಸ್.ಓಕುಣ್ಣಾಯ ಸಹಸ್ರಚಂದ್ರ ದರ್ಶನ : 'ಸಾರ್ಥಕ' ಅಭಿನಂದನ ಕೃತಿ ಅನಾವರಣ

               "ಕಳೆದ ಕಾಲದ ಕಥನವನ್ನು ಅಭಿನಂದನ ಕೃತಿಗಳ ಮೂಲಕ ನೆನಪು ಮಾಡಿಕೊಳ್ಳಲು ಸಾಧ್ಯ. ಸಾಗಿ ಬಂದ ಜೀವನವನ್ನು ಮೆಲುಕು ಹಾಕುವುದರಿಂದ ವರ್ತಮಾನ ಮತ್ತು ಭವಿಷ್ಯ ಜೀವನವನ್ನು ರೂಪುಗೊಳಿಸಲು ಸಹಕಾರಿ," ಎಂದು ನಿವೃತ್ತ ಅಧ್ಯಾಪಕ ಸುರತ್ಕಲ್ಲಿನ ಪ. ಶ್ರೀರಾಮ ರಾವ್ ಹೇಳಿದರು.
            ಯಕ್ಷಗಾನ ಅರ್ಥಧಾರಿ, ನಿವೃತ್ತ ಅಧ್ಯಾಪಕ ಪಾಣಾಜೆಯ ಬಿ.ಎಸ್.ಓಕುಣ್ಣಾಯರ ಸಹಸ್ರಚಂದ್ರ ದರ್ಶನ ಸಮಾರಂಭದಲ್ಲಿ ಅಂಕಣಗಾರ ನಾ. ಕಾರಂತ ಪೆರಾಜೆ ಸಂಪಾದಕತ್ವದ 'ಸಾರ್ಥಕ' ಅಭಿನಂದನ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
           ಮಂಗಳೂರಿನ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪುತ್ತೂರಿನ ಖ್ಯಾತ ನ್ಯಾಯವಾದಿ ಸುಬ್ರಹ್ಮಣ್ಯಂ ಕೊಳತ್ತಾಯ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಮರ್ಶಕ, ಅರ್ಥಧಾರಿ ಡಾ.ಪ್ರಭಾಕರ ಜೋಶಿ ಸುಭಾಶಂಸನೆ ಮಾಡಿದರು. ಪುತ್ತೂರು ಶಿವಳ್ಳಿ ಸಂಪದದ ಅಧ್ಯಕ್ಷ ಭಾಸ್ಕರ ಬಾರ್ಯ ಅಭಿನಂದನಾ ನುಡಿಗಳನ್ನಾಡಿದರು.
             ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಗಾದಿಯನ್ನೇರಿದ್ದ ಅನುಜ್ಞಾ, ಸಿ.ಎ.ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿದ ಸ್ವಪ್ನಾ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಮುರಳೀ ಕಲ್ಲೂರಾಯ, ಸಾರ್ಥಕದ ಸಂಪಾದಕ ನಾ. ಕಾರಂತ ಪೆರಾಜೆ ಮತ್ತು ಅಭಿನಂದನ ಕೃತಿಯ ಲೇಖಕರನ್ನು ಬಿ.ಎಸ್.ಓಕುಣ್ಣಾಯ-ಸರೋಜ ದಂಪತಿಗಳು ಗೌರವಿಸಿದರು. ಪಾಣಾಜೆಯ ಬೊಳ್ಳಿಂಬಳ ಓಕುಣ್ಣಾಯ ಪ್ರತಿಷ್ಠಾನವು ಪುಸ್ತಕವನ್ನು ಪ್ರಕಾಶಿಸಿದೆ.
             ಈ ಸಂದರ್ಭದಲ್ಲಿ ಪುಂಡೂರು ದಿ.ದಾಮೋದರ ಪುಣಿಂಚಿತ್ತಾಯ ನೆನಪಿನ ಸಂಮಾನವನ್ನು ಬಿ.ಎಸ್.ಓಕುಣ್ಣಾಯ ದಂಪತಿಗಳಿಗೆ ಪ್ರದಾನಿಸಲಾಯಿತು. ರಾಜಗೋಪಾಲ ಪುಣಿಂಚಿತ್ತಾಯರು ಪ್ರಾರ್ಥನೆ ಮಾಡಿದರು. ಚಂದ್ರಶೇಖರ ಓಕುಣ್ಣಾಯ ಸ್ವಾಗತಿಸಿದರು. ಎಂ.ಶರತ್ ಕುಮಾರ್ ಶಿಬರೂರಾಯ ನಿರ್ವಹಿಸಿದರು. ನಾರಾಯಣ ಕಾರಂತ ವಂದಿಸಿದರು.  

Monday, December 29, 2014

ಪಾತಾಳರಿಗೆ 'ವಿದ್ಯಾಮಾನ್ಯ ಪ್ರಶಸ್ತಿ'

             ತೆಂಕುತಿಟ್ಟಿನ ಮೇರು ಕಲಾವಿದ ಶ್ರೀ ಪಾತಾಳ ವೆಂಕಟರಮಣ ಭಟ್ಟ್ ಇವರಿಗೆ ತ್ರತೀಯ ವರ್ಷದ ಶ್ರೀ ವಿದ್ಯಾಮಾನ್ಯ ಪ್ರಶಸ್ತಿಯನ್ನು ಪರ್ಯಾಯ ಶ್ರೀ ಕಾಣಿಯೂರು ಮಠಾಧೀಶ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಶ್ರೀ ಪಲಿಮಾರು ಮಠಾಧೀಶ ಶ್ರೀ ಶ್ರೀ ವಿದ್ಯಾಧೀಶ ಶ್ರೀಪಾದರು ಪ್ರದಾನ ಮಾಡಿದರು.
            
ಉಡುಪಿ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ| ಕೃಷ್ಣಪ್ರಸಾದ್ , ಶ್ರೀ ರಾಮದಾಸ್ ಭಟ್ಟ್, ಶ್ರೀ ಹರಿ ಅಸ್ರಣ್ಣ , ಶ್ರೀ ಉಮೇಶ್ ಶೆಟ್ಟಿ ಉಬ್ಬರಡ್ಕ, ಯಕ್ಷರಂಗಸ್ಥಳ ಸಂಸ್ಥೆಯ ಗೌರವ ಉಪಾಧ್ಯಕ್ಷ ಶ್ರೀ ಸತೀಶ್ ರಾವ್, ಅಧ್ಯಕ್ಷ ಶ್ರೀ ಪಟ್ಟಾಭಿರಾಮ ಆಚಾರ್ಯ ಉಪಸ್ಥಿತರಿದ್ದರು.

ಬಿ.ಎಸ್.ಓಕುಣ್ಣಾಯರ ಸಹಸ್ರಚಂದ್ರ ದರ್ಶನ ನೆನಪಿನ ಅಭಿನಂದನ ಕೃತಿ 'ಸಾರ್ಥಕ'

ನಿವೃತ್ತ ಅಧ್ಯಾಪಕ, ಯಕ್ಷಗಾನ ಅರ್ಥಧಾರಿ ಬೊಳ್ಳಿಂಬಳ ಸುಬ್ರಾಯ ಓಕುಣ್ಣಾಯ ಇವರ ಸಹಸ್ರಚಂದ್ರ ದರ್ಶನ ಸಮಾರಂಭ ನಿನ್ನೆ - 28-12-2014 - ಮಂಗಳೂರಿನ ಕಾವೂರು ಶ್ರೀ ಮಹಾಲಿಂಗೇಶ‍್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಓಕುಣ್ಣಾಯರ ಜೀವನ ಗಾಥಾ 'ಸಾರ್ಥಕ' ಅಭಿನಂದನ ಕೃತಿ ಅನಾವರಣಗೊಂಡಿತು. ಪುಸ್ತಕದ ಮುಖಪುಟವನ್ನು ವಿನ್ಯಾಸಿಸಿದ್ದಾರೆ - ಆರ್ವಿ ಇಂಟರ್ ಗ್ರಾಫಿಕ್ಸ್ ಇದರ ಜ್ಞಾನೇಶ್. ಚಿತ್ರವನ್ನು ಕ್ಲಿಕ್ಕಿಸಿದವರು - ಮುರಳೀ ಕಲ್ಲೂರಾಯ, ಬೆಟ್ಟಂಪಾಡಿ. ಒಟ್ಟು ನೂರು ಪುಟಗಳು. ಸಂಪಾದಕ : ನಾ. ಕಾ. ಪೆ.

Saturday, December 27, 2014

ಬಿ.ಎಸ್.ಓಕುಣ್ಣಾಯರಿಗೆ ಸಹಸ್ರಚಂದ್ರ ದರ್ಶನ

ವಿಶ್ರಾಂತ ಮುಖ್ಯೋಪಾಧ್ಯಾಯ, ಯಕ್ಷಗಾನ ಅರ್ಥಧಾರಿ, ಸಂಘಟಕ, ವಿಮರ್ಶಕ ಬೊಳ್ಳಿಂಬಳ ಸುಬ್ರಾಯ ಓಕುಣ್ಣಾಯ (ಬಿ.ಎಸ್.ಓಕುಣ್ಣಾಯ ಪಾಣಾಜೆ) ಇವರು ದಶಂಬರ 28ರಂದು ಮಂಗಳೂರಿನಲ್ಲಿ ಸಹಸ್ರಚಂದ್ರ ದರ್ಶನದ ಹರುಷವನ್ನು ಬಂಧುಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ 'ಸಾರ್ಥಕ' ಎನ್ನುವ ಅಭಿನಂದನಾ ಕೃತಿಯು ಬಿಡುಗಡೆಗೊಳ್ಳಲಿರುವುದು.

bollimbala prashasthi - ಕುಬಣೂರು ಶ‍್ರೀಧರ್ ರಾವ್ ಅವರಿಗೆ ಬೊಳ್ಳಿಂಬಳ ಪ್ರಶಸ್ತಿ ಪ್ರದಾನ

- ಪಾಣಾಜೆ (ದ.ಕ.) ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನವು ಕೊಡಮಾಡುವ ಏಳನೇ ವರುಷದ 'ಬೊಳ್ಳಿಂಬಳ ಪ್ರಶಸ್ತಿ'ಯನ್ನು (Bollimbala Award) ಖ್ಯಾತ ಯಕ್ಷಗಾನದ ಭಾಗವತ ಕುಬಣೂರು ಶ್ರೀಧರ ರಾವ್ (Kubanoor Shridhara Rao) ಅವರಿಗೆ ಪ್ರದಾನಿಸಲಾಯಿತು.
- ದಶಂಬರ 25ರಂದು ಪುತ್ತೂರಿನಲ್ಲಿ ಜರುಗಿದ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ (Sri Anjaneya Yakshagana Kala Sangha, Puttur) 46ನೇ ಸಂಭ್ರಮ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು.
- ವಿಮರ್ಶಕ ಡಾ. ಪ್ರಭಾಕರ ಜೋಶಿ ನುಡಿ ಗೌರವ ಸಮರ್ಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್.ಓಕುಣ್ಣಾಯ ಪ್ರತಿಷ್ಠಾನದ ವಿವರ ನೀಡಿದರು.
- ವೇದಿಕೆಯಲ್ಲಿದ್ದಾರೆ - ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಭಾಸ್ಕರ ಬಾರ್ಯ, ಶ್ರೀಪತಿ ಭಟ್, ಪ್ರದೀಪ್ ಕುಮಾರ್ ಕಲ್ಕೂರ್, ಎಸ್.ಎನ್.ಪಂಜಾಜೆ....

'ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನ'ದ ಆಮಂತ್ರಣ (Invitation - All India yakshagana bayalata sahithya sammelana)

yaksha chinthane - ಯಕ್ಷ ಚಿಂತನೆ

ಪುತ್ತೂರು (ದ.ಕ.ಜಿಲ್ಲೆ) ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 46ನೇ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ದಶಮಾನೋತ್ಸವ ಸಮಾರಂಭ ದಶಂಬರ 25ರಂದು ಶ್ರೀ ನಟರಾಜ ವೇದಿಕೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಜರುಗಿದ 'ಯಕ್ಷ ಚಿಂತನೆ' ಮೆದುಳಿಗೆ ಮೇವನ್ನು ನೀಡಿತು. 'ರಸ ಮತ್ತು ನವರಸ ಪ್ರತಿಪಾದನೆ' ಕುರಿತು ವಿದುಷಿ ಮನೋರಮಾ ಬಿ.ಎನ್. ಪುತ್ತೂರು ಮತ್ತು 'ತೆಂಕುತಿಟ್ಟಿನಲ್ಲಿ ಆಂಗಿಕ-ಸಾತ್ವಿಕ ಅಭಿನಯ' ಕುರಿತು ವಿದುಷಿ ಸುಮಂಗಲಾ ರತ್ನಾಕರ್, ಮಂಗಳೂರು ಇವರು ವಿಚಾರ ಪ್ರಸ್ತುತಿ ಪಡಿಸಿದರು. ಸುಮಂಗಲ ಅವರು ಯಕ್ಷಗಾನದ ಕೆಲವು ನಡೆಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ಮಿತ್ರ ಕೃಷ್ಣಪ್ರಕಾಶ್ ಉಳಿತ್ತಾಯರು ಹಿಮ್ಮೆಳ ಸಾಥ್ ನೀಡಿದರು.
- ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸ್ತ್ರೀಪಾತ್ರಧಾರಿ ಪಾತಾಳ ವೆಂಕಟ್ರಮಣ ಭಟ್ ವಹಿಸಿ, ಸಮಕಾಲೀನ ಯಕ್ಷಗಾನದ ನೃತ್ಯಗಾರಿಕೆಯತ್ತ ನೋಡ ಹರಿಸಿದರು. ತನಗೆ ಎಂಭತ್ತೆರಡು ವರುಷ ಎನ್ನುವುದನ್ನು ಮರೆತು ಬಬ್ರುವಾಹನ ಕಾಳಗ ಪ್ರಸಂಗದ 'ಅಹುದೇ ಎನ್ನಯ ರಮಣ' ಎನ್ನುವ ಪದ್ಯಕ್ಕೆ ಕುಣಿದುಬಿಟ್ಟರು

All India yakshagana-bayalata sahithya sammela_2015

ಹಿರಿಯ ಅರ್ಥಧಾರಿ, ನಿವೃತ್ತ ಅಧ್ಯಾಪಕ ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನ-2015 ಇದರ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಸಮ್ಮೇಳನವರು ಪುತ್ತೂರಿನ - ದ.ಕ. ಜಿಲ್ಲೆ - ಶ್ರೀ ನಟರಾಜ ವೇದಿಕೆಯಲ್ಲಿ ಜನವರಿ 2-4, 2015ರಂದು ಜರುಗಲಿದೆ. ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ (ರಿ) ಇವರು ಸಮ್ಮೇಳನವನ್ನು ಸಂಘಟಿಸಿದ್ದಾರೆ. ಸಂಪರ್ಕ ಸಂಖ್ಯೆ : 9448447512, Email : kskp2010@yahoo.com

Tuesday, December 23, 2014

ಕುಬಣೂರು ಭಾಗವತರಿಗೆ 'ಬೊಳ್ಳಿಂಬಳ ಪ್ರಶಸ್ತಿ'

           ಓರ್ವ ಯಕ್ಷಗಾನ ಭಾಗವತ ಪತ್ರಿಕೆಯ ಸಂಪಾದಕನಾಗುವುದು ಸಾಧ್ಯವೇ? ಕೀರ್ತಿಶೇಷ ಕಡತೋಕ ಮಂಜುನಾಥ ಭಾಗವತರು ಪತ್ರಿಕೆಯೊಂದನ್ನು ನಡೆಸಿದ್ದರು. ಕಟೀಲು ಮೇಳದ ಭಾಗವತ ಕುಬಣೂರು ಶ್ರೀಧರ ರಾವ್ (63) 'ಯಕ್ಷಪ್ರಭಾ' ಪತ್ರಿಕೆಯೊಂದನ್ನು ಪ್ರಕಾಶಿಸುತ್ತಿದ್ದಾರೆ. ಅದಕ್ಕೀಗ ವಿಂಶತಿಯ ಸಡಗರ. ಮೇಳದ ವೃತ್ತಿಯಲ್ಲಿದ್ದುಕೊಂಡೇ ಪತ್ರಿಕೆಯನ್ನೂ ನಡೆಸುತ್ತಿದ್ದಾರೆ.
           ಕುಬಣೂರು ಓದಿದ್ದು, ಮೆಕಾನಿಕಲ್ ಇಂಜಿನಿಯರಿಂಗಿನಲ್ಲಿ ಡಿಪ್ಲೋಮ. ಯಕ್ಷಗಾನದಲ್ಲಿ ವೃತ್ತಿ ಬದುಕನ್ನು ರೂಪಿಸಿಕೊಂಡರು. ಬದುಕಿಗೆ ಇಂಜಿನಿಯರಿಂಗ್ ಕಲಿಕೆ ಉಪಯೋಗಕ್ಕೆ ಬಾರದಿದ್ದರೂ, ಇಂಜಿನಿಯರಿಂಗ್ ಜಾಣ್ಮೆಯಿದೆಯಲ್ಲಾ, ಅದು ಯಕ್ಷಗಾನ ರಂಗದಲ್ಲಿ ಬಳಕೆಗೆ ಬಂತು. ಹಾಗಾಗಿಯೇ ನೋಡಿ, ಕುಬಣೂರು ಆಡಿಸುವ ಆಟಗಳಲ್ಲೆಲ್ಲಾ ಚೌಕಟ್ಟಿನೊಳಗೆ ತುಸು ವಿಭಿನ್ನತೆ. ಪ್ರತ್ಯೇಕತೆ.
          ದಕ್ಷಾಧ್ವರ, ಹಿರಣ್ಯಕಶ್ಯಪು... ಮೊದಲಾದ ಸಂವಾದ ಪ್ರಧಾನ ಪ್ರಸಂಗಗಳ ಪದ್ಯಗಳು ಅರ್ಥಧಾರಿ, ವೇಷಧಾರಿಗೆ ಸ್ಫೂರ್ತಿ ನೀಡುವಂತಾದ್ದು. ಪದ್ಯಗಳಿಗೆ ಬಳಸುವ ಸಂಗೀತಾದಿ ರಾಗಗಳ ಮಿಳಿತದ ಸೊಗಸು ಅನುಭವಿಸಲು ಗೊತ್ತಿರಬೇಕಷ್ಟೇ.
            ಶ್ರೀಧರ ರಾಯರು ಐ.ರಘುಮಾಸ್ತರರಿಂದ ಕರ್ನಾಾಟಕ ಸಂಗೀತ ಅಭ್ಯಾಸ ಮಾಡಿದ್ದರು. ಅಡ್ಕಸ್ಥಳ ರಾಮಚಂದ್ರ ಭಟ್ಟರಿಂದ ಮದ್ದಳೆವಾದನ, ಉಪ್ಪಳ ಕೃಷ್ಣ ಮಾಸ್ತರ್ ಹಾಗೂ ಬೇಕೂರು ಕೇಶವರಿಂದ ನಾಟ್ಯಾಭ್ಯಾಸ, ಟಿ.ಗೋಪಾಲಕೃಷ್ಣ ಮಯ್ಯ ಹಾಗೂ ಮಾಂಬಾಡಿ ನಾರಾಯಣ ಭಟ್ಟರಿಂದ ಯಕ್ಷಗಾನ ಭಾಗವತಿಕೆ ಕಲಿಕೆ. ಭಾಗವತನಾದವನಿಗೆ ಯಕ್ಷಗಾನದ ಸರ್ವಾಾಂಗದ ಪರಿಚಯವಿದ್ದು ಬಿಟ್ಟರೆ ಈಜಲು ಅಂಜಬೇಕಾಗಿಲ್ಲ. ಯಾರದ್ದೇ ಹಂಗಿಗೆ ಒಳಗಾಗಬೇಕಾದ್ದಿಲ್ಲ.
ಕದ್ರಿಮೇಳ, ನಂದಾವರ, ಅರುವ, ಬಪ್ಪನಾಡು, ಕದ್ರಿ, ಕಾಂತಾವರ ಹೀಗೆ ವಿವಿಧ ಮೇಳಗಳಲ್ಲಿ ವ್ಯವಸಾಯ. ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಶ್ರೀ ಕಟೀಲು ಮೇಳವೊಂದರಲ್ಲೇ ವೃತ್ತಿ. ಬದುಕಿನ ಏಳುಬೀಳುಗಳನ್ನು ಎದುರಿಸುತ್ತಾ ಒಟ್ಟು ಮೂವತ್ತಮೂರು ವರುಷಗಳ ಅನುಭವ.
              ದಾಶರಥಿ ದರ್ಶನ, ಸಾರ್ವಭೌಮ ಸಂಕರ್ಷಣ, ಮನುವಂಶವಾಹಿನಿ, ಮಹಾಸತಿ ಮಂದಾಕಿನಿ, ಕಾಂತಾವರ ಕ್ಷೇತ್ರ ಮಹಾತ್ಮೆ, ಪಟ್ಟಣ ಮಣೆ.. ಪ್ರಸಂಗಗಳ ರಚಯಿತರು. ಕೀರ್ತಿಶೇಷ ಕಲ್ಲಾಡಿ ವಿಠಲ ಶೆಟ್ಟರ ಜೀವನ ಗಾಥಾ 'ಯಕ್ಷವಿಜಯ ವಿಠಲ' ಕೃತಿಯ ಸಂಪಾದಕರು. ಯಕ್ಷಗಾನವನ್ನು ಅಕಾಡೆಮಿಕ್ ಮಟ್ಟದಲ್ಲಿ ವಿಚಾರ ಮಾಡುವ ಬೆರಳೆಣಿಕೆಯ ಕಲಾವಿದರಲ್ಲಿ ಕುಬಣೂರು ಮುಖ್ಯರಾಗುತ್ತಾರೆ.
               ಚೆಂಡೆವಾನದಲ್ಲಿ ಜುಗಲ್ಬಂದಿ, ದೇವೇಂದ್ರನ ಒಡ್ಡೋಲಗದಲ್ಲಿ ನೃತ್ಯರೂಪಕ.. ಮೊದಲಾದ ಪರಿಷ್ಕಾರಗಳು ಒಂದು ಕಾಲಘಟ್ಟದಲ್ಲಿ ಜನಸ್ವೀಕೃತಿ ಪಡೆದುದನ್ನು ಜ್ಞಾಪಿಸಿಕೊಳ್ಳುತ್ತಾರೆ. ಬಯಲಾಟ, ತಾಳಮದ್ದಳೆ ಸ್ಪರ್ಧೆಗಳಲ್ಲಿ ತೀರ್ಪುುಗಾರರಾಗಿ, ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ.
                ಹಲವಾರು ಸಂಮಾನ, ಪ್ರಶಸ್ತಿಯಿಂದ ಪುರಸ್ಕೃತರು. ಈಗ ಪಾಣಾಜೆ ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ ನೀಡುವ 'ಬೊಳ್ಳಿಂಬಳ ಪ್ರಶಸ್ತಿ'ಯು ಕುಬಣೂರು ಶ್ರೀಧರ ರಾಯರನ್ನು ಅರಸಿ ಬಂದಿದೆ. 2014 ದಶಂಬರ 25ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ ಜರಗುವ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 'ಆಂಜನೇಯ 46' ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
               ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವಾರ್ಶಿಕ 'ಯಕ್ಷಾಂಜನೇಯ ಪ್ರಶಸ್ತಿ'ಯು ಹಿರಿಯ ಅರ್ಥಧಾರಿ, ನಿವೃತ್ತ ಅಧ್ಯಾಪಕ, ವಿದ್ವಾಂಸ ಬರೆ ಕೇಶವ ಭಟ್ಟರಿಗೆ ಪ್ರಾಪ್ತವಾಗಿದೆ. ಈ ಸಂದರ್ಭದಲ್ಲಿ ಶ್ರೀ ಆಂಜನೇಯ ಯಕ್ಷಗಾನ ಮಹಿಳಾ ಸಂಘದ ದಶಮಾನವೂ ಸಂಪನ್ನವಾಗಲಿದೆ.
(ಚಿತ್ರ : ಡಾ.ಮನೋಹರ ಉಪಾಧ್ಯ)

Tuesday, December 9, 2014

ಭಾಸ್ಕರ ಜೋಶಿ ಶಿರಳಗಿಯವರಿಗೆ 'ಪಾತಾಳ ಪ್ರಶಸ್ತಿ' ಪ್ರದಾನ


                  "ಕಲಾವಿದ ಮತ್ತು ಯಜಮಾನ ಇವರೊಳಗೆ ಬಹುತೇಕ ಮೇಳಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹೊಂದಾಣಿಕೆಯ ಕೊರತೆ ಕಂಡು ಬರುತ್ತದೆ. ಇದು ಪ್ರದರ್ಶನದ ಒಟ್ಟಂದಕ್ಕೆ ತೊಂದರೆಯಾಗುತ್ತದೆ.  ಕಲಾವಿದರಲ್ಲಿ ಮೇಳದ ಯಜಮಾನನಾಗಿ ಕಷ್ಟ ಸುಖವನ್ನು ಅನುಭವಿಸಿದವರು ಕಡಿಮೆ. ಯಕ್ಷಗಾನದ ನಿಜವಾದ ಸಮಸ್ಯೆ, ಕಷ್ಟ ಅರಿವಾಗಲು ಕಲಾವಿದ ಒಮ್ಮೆಯಾದರೂ ಯಜಮಾನನಾಗಬೇಕು," ಎಂದು ಎಡನೀರು ಮಠದ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
             ಅವರು ಎಡನೀರು ಶ್ರೀಮಠದಲ್ಲಿ ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನವು ಆಯೋಜಿಸಿದ ಈ ಸಾಲಿನ 'ಪಾತಾಳ ಪ್ರಶಸ್ತಿ'ಯನ್ನು ಹಿರಿಯ ಸ್ತ್ರೀ ಪಾತ್ರಧಾರಿ ಭಾಸ್ಕರ ಜೋಶಿ ಶಿರಳಗಿಯವರಿಗೆ ಪ್ರದಾನ ಮಾಡಿ ಆಶೀರ್ವಚನ ನೀಡುತ್ತಾ, "ಶಿರಳಗಿಯವರು ಕಲಾವಿದನಾಗಿ, ಮೇಳದ ಯಜಮಾನನಾಗಿ ಸುಖ-ಕಷ್ಟಗಳನ್ನು ಸ್ವೀಕರಿಸಿದ ಕಲಾವಿದ. ಹಾಗಾಗಿ ಅವರಲ್ಲಿ ಸೌಜನ್ಯ, ಪ್ರಾಮಾಣಿಕತೆ ಮೇಳೈಸಿದೆ" ಎಂದರು.
             ಮಂಜೇಶ್ವರದ ಹಿರಿಯ ವೈದ್ಯ, ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿ, "ಕಳಪೆ ಪಾತ್ರವೊಂದನ್ನು ನೋಡಿ ಆ ಪ್ರಸಂಗವೇ ಪ್ರಯೋಜನವಿಲ್ಲ, ಆ ದೃಶ್ಯವೇ ಪ್ರಸಂಗದಲ್ಲಿ ಬೇಡ ಎನ್ನುವ ನಿರ್ಧಾರವನ್ನು ಕಲಾವಿದರು, ಸಂಘಟಕರು ಆತುರವಾಗಿ ತೆಗೆದುಕೊಳ್ಳುವುದುಂಟು. ಇದು ಪ್ರಸಂಗ, ಕವಿಗೆ ಅವಮಾನ ಮಾಡಿದಂತೆ. ಅದರ ಬದಲು ಯಾರು ಕಳಪೆ ಪಾತ್ರ ಮಾಡಿದ್ದಾನೋ, ಅವನ ಬದಲಿಗೆ ಅನುಭವಿ ಕಲಾವಿದರಿಂದ ಪಾತ್ರ ಮಾಡಿಸಿದರೆ ಪಾತ್ರದ ಘನತೆ ಉಳಿಯುತ್ತದೆ," ಎಂದರು.
            ಪೂಜ್ಯ ಶ್ರೀಗಳು ಶಿರಳಗಿ ಭಾಸ್ಕರ ಜೋಶಿಯವರಿಗೆ ಹಾರ, ಶಾಲು, ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ನಿಧಿಯೊಂದಿಗೆ 'ಪಾತಾಳ ಪ್ರಶಸ್ತಿ'ಯನ್ನು ಪ್ರದಾನಿಸಿದರು. ಕರ್ನಾಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಪ್ರೊ: ಎಂ.ಎಲ್.ಸಾಮಗರು ಶಿರಳಗಿಯವರ ಒಡನಾಟವನ್ನು ಜ್ಞಾಪಿಸಿಕೊಳ್ಳುತ್ತಾ ಅಭಿನಂದಿಸಿದರು. ಪ್ರತಿಷ್ಠಾನದ ಜತೆ ಕಾರ್ಯದರ್ಶಿ ನಾ. ಕಾರಂತ ಪೆರಾಜೆ ಪ್ರಶಸ್ತಿ ಪತ್ರವನ್ನು ವಾಚಿಸಿದರು.
              ಈ ಸಂದರ್ಭದಲ್ಲಿ ನಾ. ಕಾರಂತ ಪೆರಾಜೆಯವರು ಸಂಪಾದಿಸಿದ ಪಾತಾಳ ಪ್ರಶಸ್ತಿಯ ದಶಮಾನದ ನೆನಪು ಪುಸ್ತಿಕೆ 'ಉಪಾಯನ'ವನ್ನು ಪೂಜ್ಯ ಶ್ರೀಗಳು ಅನಾವರಣಗೊಳಿಸಿದರು.  ಹಿರಿಯ ಸ್ತ್ರೀವೇಷಧಾರಿ ಪಾತಾಳ ವೆಂಕಟ್ರಮಣ ಭಟ್, ಶ್ರೀರಾಮ ಪಾತಾಳ ಪೂಜ್ಯ ಶ್ರೀಗಳಿಗೆ ಫಲತಾಂಬೂಲ ನೀಡಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ಪ್ರತಿಷ್ಠಾನದ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಳಿಯ ಶಂಕರ ಭಟ್ ಪ್ರಸ್ತಾವನೆ ಗೈದರು. ಭಾಗವತ ರಮೇಶ ಭಟ್ ಪುತ್ತೂರು ಪ್ರಾರ್ಥನೆಗೈದರು. ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಬಿ.ಎನ್.ಮಹಾಲಿಂಗ ಭಟ್ ಬಿಲ್ಲಂಪದವು ನಿರ್ವಹಿಸಿ, ವಂದಿಸಿದರು.
                ಬಳಿಕ ಎಡನೀರು ಮೇಳದವರಿಂದ 'ಭೀಷ್ಮಾಭಿದಾನ ಮತ್ತು ಮೈಂದ-ದ್ವಿವಿದ' ಪ್ರಸಂಗಗಳ ಬಯಲಾಟ ಜರುಗಿತು.


Saturday, December 6, 2014

'ಪಾತಾಳ ಪ್ರಶಸ್ತಿ' ಪುರಸ್ಕೃತ - ಭಾಸ್ಕರ ಜೋಶಿ ಶಿರಳಗಿ


           ಅಕ್ಟೋಬರಿನಲ್ಲಿ ಉಡುಪಿ ರಾಜಾಂಗಣದಲ್ಲಿ ಚಿಟ್ಟಾಣಿ ಪಾತ್ರ ವೈಭವದ ಕ್ಷಣ. ಅಂದು 'ಚಕ್ರಚಂಡಿಕೆ' ಪ್ರಸಂಗ. ಐವತ್ತೆಂಟರ ಶಿರಳಗಿ ಭಾಸ್ಕರ ಜೋಶಿ (Bhaskara Joshi Shiralagi) ಅಕ್ಟೋಬರಿನಲ್ಲಿ ಉಡುಪಿ ರಾಜಾಂಗಣದಲ್ಲಿ ಚಿಟ್ಟಾಣಿ ಪಾತ್ರ ವೈಭವದ ಕ್ಷಣ. ಅಂದು 'ಚಕ್ರಚಂಡಿಕೆ' ಪ್ರಸಂಗ. ಐವತ್ತೆಂಟರ ಶಿರಳಗಿ ಭಾಸ್ಕರ ಜೋಶಿ ಹದಿನೆಂಟರ ಹೆಣ್ಣಾಗಿ ಕುಣಿದರು. ಚಿಟ್ಟಾಣಿಯವರೊಂದಿಗೆ ಸರಸವಾಡಿದರು. ಪ್ರಸಂಗದ ಒಂದು ಸನ್ನಿವೇಶದ ವಿನ್ಯಾಸದ ಗಟ್ಟಿತನಕ್ಕೆ ಬೆರಗಾದೆ. ಬಣ್ಣದ ಮನೆಯಲ್ಲಿ ವೇಷ ಕಳಚಿದ ಜೋಶಿ, 'ನಾಳೆ ಬೇಗ ಮನೆ ಸೇರಬೇಕ್ರಿ, ಅಡಿಕೆ ಕೊಯ್ಲು ಆಗ್ತಿದೆ. ಜನ ಸಿಕ್ತಿಲ್ಲ. ಒಟ್ಟಾರೆ ತಲೆಬಿಸಿ,' ಎಂದರು. ಆಗಷ್ಟೇ ರಂಗದಲ್ಲಿ ಅಪ್ಪಟ ಕಲಾವಿದರಾಗಿ ಕುಣಿದ ಜೋಶಿ, ಅಷ್ಟೇ ಕ್ಷಿಪ್ರವಾಗಿ 'ಕೃಷಿಕ'ರಾಗಿ ಬದಲಾಗಿದ್ದರು.
              ಜೋಶಿ ಒಂದು ಕಾಲಘಟ್ಟದಲ್ಲಿ ರಂಗದಲ್ಲಿ ಮೆರೆದ ಯಶಸ್ವಿ ನಾರಿ. ಆಕರ್ಷಕ ಸ್ವರ, ಹೆಣ್ಣಿಗೊಪ್ಪುವ ಮೈಕಟ್ಟು, ಉತ್ತಮ ಭಾಷೆ. ಚೆಲ್ಲುಚೆಲ್ಲು ಪಾತ್ರಗಳಿಂದ ಗರತಿಯ ತನಕ ಮಿತಿಮೀರದ ಅಭಿವ್ಯಕ್ತಿ. ಹಳೆ ಪ್ರಸಂಗಗಳಲ್ಲಿ ಮಿಂಚಿದಂತೆ ಹೊಸ ಪ್ರಸಂಗಗಳೂ ಹೊಸ ಪಂಚ್. ಬಡಗಿನ ಬಹುತೇಕ ಕಲಾವಿದರೊಂದಿಗೆ ರಂಗದಲ್ಲೂ, ಹೊರಗೂ ಒಡನಾಟ.
                  ಇವರದು ಕನಸು ಕಾಣುವ ಬದುಕಲ್ಲ. ವರ್ತಮಾನ ಹೇಗುಂಟೋ ಹಾಗೆ ಬದುಕನ್ನು ಕಟ್ಟಿಕೊಳ್ಳುತ್ತಾ ಬಂದವರು. ತಂದೆ ನಾರಾಯಣ ಸುಬ್ರಾಯ ಜೋಶಿಯವರ ಪೌರೋಹಿತ್ಯ ವೃತ್ತಿ ಬದುಕಿಗಾಧಾರ. ಎಸ್.ಎಸ್.ಎಲ್.ಸಿ.ತನಕ ಓದು. ಯಕ್ಷಗಾನ ನಾಟಕದ ಮೂಲಕ ರಂಗಪ್ರವೇಶ. 'ಪನ್ನದಾಸಿ' - ಪ್ರಥಮ ನಾಟಕ. ಇವರ ಸ್ತ್ರೀಪಾತ್ರಗಳ ಮೋಡಿಯು 'ಕೊಳಗಿ ಮೇಳ'ಕ್ಕೆ ಕಲಾವಿದನನ್ನಾಗಿ ರೂಪಿಸಿತು. ಹೊಸ್ತೋಟ ಮಂಜುನಾಥ ಭಾಗವತರು, ಹೆರಂಜಾಲು ವೆಂಕಟ್ರಮಣ ಇವರಿಂದ ನಾಟ್ಯಾಭ್ಯಾಸ.
                   ಮುಂದೆ ಇಡಗುಂಜಿ ಮೇಳದ ತಿರುಗಾಟವು ಹೊಸ ರಂಗ ತಂತ್ರಗಳ ಕಲಿಕೆಗೆ ತಾಣವಾಯಿತು. ಮುಂದೆ ಡಾ.ಶಿವರಾಮ ಕಾರಂತರ 'ಯಕ್ಷರಂಗ'ದ ಗರಡಿಯಲ್ಲಿ ವ್ಯವಸಾಯ. ಅವರ ಯಕ್ಷಗಾನ ಬ್ಯಾಲೆಯು ನೃತ್ಯ, ಸಂಗೀತ ಪ್ರಧಾನ. ಭಾವಾಭಿವ್ಯಕ್ತಿಗೆ ಪ್ರಾಶಸ್ತ್ಯ.  ತಂಡದಲ್ಲಿ ಸ್ತ್ರೀಪಾತ್ರವನ್ನು ಮಾಡುವ ಸ್ತ್ರೀಯರಿದ್ದರೂ ಭಾಸ್ಕರ ಜೋಶಿಯವರ ಪಾತ್ರಗಳ ಲಾಲಿತ್ಯಗಳಿಂದಾಗಿ ಸ್ತ್ರೀಪಾತ್ರಗಳ ಪಟ್ಟ ಖಾಯಂ. ದೇಶ, ವಿದೇಶಗಳಿಗೆ ಯಕ್ಷಯಾತ್ರೆ.
                  ಕಾರಂತರೊಂದಿಗಿನ ಆರು ವರುಷದ ತಿರುಗಾಟದ ಒಂದೊಂದು ಕ್ಷಣವೂ ಕಾಡುವ ನೆನಪು. ಚಿಕ್ಕ ಚಿಕ್ಕ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ. ಬಹುಶಃ ರಂಗದಲ್ಲಿ ನನಗೇನಾದರೂ ಹೆಸರು ಬಂದಿದ್ದರೆ ಅವರ ಒಡನಾಟದ ಜ್ಞಾನ ಸಂಪಾದನೆಯಿಂದ ಸಾಧ್ಯವಾಯಿತು ಎನ್ನಬಹುದು, ಎನ್ನುತ್ತಾರೆ ಭಾಸ್ಕರ ಜೋಶಿ.
                 ಸಾಲಿಗ್ರಾಮ ಮೇಳ, ಅಮೃತೇಶ್ವರಿ, ಪೆರ್ಊರು ಮೇಳಗಳಲ್ಲಿ ಯಶಸ್ವೀ ತಿರುಗಾಟ. ಇವರ ವೇಷ ವಿನ್ಯಾಸ ಕ್ಲೀನ್. ಶೃಂಗಾರ, ಕರುಣ, ವೀರ, ರೌದ್ರ ರಸಾಭಿವ್ಯಕ್ತಿಯಲ್ಲಿ ಪ್ರತ್ಯೇಕ ಛಾಪು. ಚುರುಕಿನ ನಡೆ. ಕ್ಷಿಪ್ರವಾಗಿ ಉದುರುವ ಮಾತು.  ಪ್ರಭಾವತಿ, ಮೋಹಿನಿ, ಸೈರಂಧ್ರಿ, ದಾಕ್ಷಾಯಿಣಿ.. ಪಾತ್ರಗಳು ಹೆಸರಿನೊಂದಿಗೆ ಹೊಸೆದುಬಿಟ್ಟಿದೆ.
                 ಕೆರೆಮೆನೆ ಮಹಾಬಲ ಹೆಗಡೆಯವರ ಜಮದಗ್ನಿ-ರೇಣುಕೆ' ಈಶ್ವರ-ದಾಕ್ಷಾಯಿಣಿ ಜತೆಗಾರಿಕೆ, ಬ್ರಹ್ಮಕಪಾಲ ಪ್ರಸಂಗದಲ್ಲಿ ಗೋಡೆಯವರ ಬ್ರಹ್ಮನೊಂದಿಗೆ ಶಾರದೆ, ಬಳ್ಕೂರ ಕೃಷ್ಣಯಾಜಿಯವರ ಸುಧನ್ವನೊಂದಿಗೆ ಪ್ರಭಾವತಿ, ಮಹಾಬಲ ಹೆಗಡೆಯವರ ದುಷ್ಟಬುದ್ಧಿ-ವಿಷಯೆ ಜತೆಗಾರಿಕೆಗಳು ಕಾಲದ ಕಥನಗಳು. "ಚೆಲುವೆ ಚಿತ್ರಾವತಿ ಪ್ರಸಂಗದ ಮೊದಲ ಪ್ರದರ್ಶನದಲ್ಲಿ ’ಚಿತ್ರಾವತಿ’ ಮಾಡಿದವರು ಭಾಸ್ಕರ ಜೋಶಿ. ಅವರ ಹೆಸರನ್ನು ನೆನಪಿಸಿರೆ ಸಾಕು, ಫಕ್ಕನೆ ನೆನಪಾಗುವುದು”ದಾಕ್ಷಾಯಿಣಿ’ ಪಾತ್ರ," ಇವರನ್ನು ಹತ್ತಿರದಿಂದ ಬಲ್ಲ ರಾಜಶೇಖರ ಮರಕ್ಕಿಣಿ ನೆನಪಿಸಿಕೊಳ್ಳುತ್ತಾರೆ.
                 "ಬಾಲ್ಯದಲ್ಲಿ ಒಂದು ಕನಸಿತ್ತು. ಮುಖ್ಯ ಸ್ತ್ರೀಪಾತ್ರಧಾರಿಯಾಗಬೇಕು, ಕರಪತ್ರದಲ್ಲಿ ಮುಖ್ಯ ಸ್ತ್ರೀ ಪಾತ್ರಧಾರಿ ಜಾಗದಲ್ಲಿ ನನ್ನ ಹೆಸರಿರಬೇಕು, ದಿವಸಕ್ಕೆ ಕನಿಷ್ಠ ನೂರು ರೂಪಾಯಿ ಸಂಭಾವನೆ ಸಿಗಬೇಕು. ಇವೆಲ್ಲವೂ ಈಡೇರಿದೆ. ಕನಸು ನನಸಾಗಿದೆ. ಇಳಿ ವಯಸ್ಸಿನಲ್ಲೂ ಮೇಳಗಳಿಗೆ ಬೇಡಿಕೆ ಬರುತ್ತಿದೆ. ತೋಟ, ಆಟ ಎನ್ನುತ್ತಾ ಸಮನ್ವಯ ಮಾಡಿಕೊಳ್ಳುತ್ತಿದ್ದೇನೆ," ಎನ್ನುತ್ತಾರೆ.
                  ಮೇಳಗಳ ತಿರುಗಾಟ ಮಾಡುತ್ತಿದ್ದಂತೆ ಸ್ವತಃ ಮೇಳ ಮಾಡಬೇಕೆನ್ನುವ ಕೆಟ್ಟ ತುಡಿತವೊಂದು ಅಪ್ಪಿಕೊಂಡಿತು! 'ಭುವನಗಿರಿ ಮೇಳ'ದ ಸಂಪನ್ನತೆ. ಮೂರು ವರುಷದಲ್ಲಿ ಆರು ಲಕ್ಷ ರೂಪಾಯಿ ನಷ್ಟ. ಸಾಲಗಾರನ ಪಟ್ಟ. ಸಾಲ ತೀರಿಸಲು ಪುನಃ ಮೇಳಗಳಲ್ಲಿ ಬಣ್ಣ ಹಚ್ಚುತ್ತಿದ್ದಂತೆ ಅಪಘಾತಕ್ಕೆ ಒಳಗಾದರು. ಪರಿಹಾರಕ್ಕಾಗಿ ಕೋರ್ಟು-ಕಚೇರಿ ಅಲೆದಾಟ. 'ನೀನು ಕಲಾವಿದ ಎನ್ನುವುದಕ್ಕೆ ಏನು ಪುರಾವೆ?' ಎಂದಾಗ ನಿರುತ್ತರ. ಸರಿಯಾದ ದಾಖಲೆಯಿಲ್ಲದೆ ವ್ಯಾಜ್ಯ ಕಾಗದದಲ್ಲೇ ಉಳಿಯಿತು. ರಂಗದಲ್ಲಿ ಎತ್ತರಕ್ಕೇರಿದ ಜೋಶಿಯವರ ಕಲಾ ಬದುಕಿನಲ್ಲಿನ ಕೆಲವು ಇಳಿಘಟನೆಗಳಿವು.
                 ಸಿದ್ಧಾಪುರ ತಾಲೂಕಿನ ಶಿರಳಗಿಯಲ್ಲಿ ಕೃಷಿ ಪ್ರಧಾನ ವೃತ್ತಿ. ನಿರಂತರ ದುಡಿಮೆ. ಆಲಸ್ಯ ಕಾಣದ ಕೃಷಿಕ. ಆರ್ಥಿಕವಾಗಿ ಹೇಳುವಂತಹ ಸದೃಢರಲ್ಲ. ಮಾನಸಿಕವಾಗಿ ಸಂತೃಪ್ತ. ಸಹಾಯ ಮನೋಭಾವ. ಶುದ್ಧ ಹಸ್ತರು. ನೇರ ವ್ಯವಹಾರ.  ಮೇಳಗಳ ಯಜಮಾನರಿಗೆ ಎಂದೂ ಇವರು ತಲೆನೋವಾಗಿಲ್ಲ. ಕಲಾವಿದನಲ್ಲಿ ಇರಲೇಬೇಕಾದ ಗುಣಗಳು ಜೋಶಿಯವರಲ್ಲಿ ಮಿಳಿತವಾಗಿದೆ. ಮಡದಿ ಮಾಲಿನಿ. ಸ್ಪೂರ್ತಿ, ರಘುರಾಮ ಇಬ್ಬರು ಮಕ್ಕಳು.
                ಮೂವತ್ತೈದು ವರುಷಗಳ ರಂಗಸಾಧನೆಗಾಗಿ ಈಗ 'ಪಾತಾಳ ಪ್ರಶಸ್ತಿ'ಯ ಬಾಗಿನ. ದಶಂಬರ 7ರಂದು ಎಡನೀರಿನಲ್ಲಿ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ. ಪಾತಾಳ ಯಕ್ಷ ಪ್ರತಿಷ್ಠಾನವು ನೀಡುವ ಈ ಪ್ರಶಸ್ತಿಗೆ ಈಗ ದಶಮಾನದ ಖುಷಿ. ಈ ನೆನಪಿಗಾಗಿ 'ಉಪಾಯನ' (Editor : Na. Karantha Peraje) ಎನ್ನುವ ಪುಸ್ತಿಕೆಯ ಅನಾವರಣ ನಡೆಯಲಿದೆ.