Thursday, June 6, 2013

ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರ ಸಪ್ತತಿ ಸಮಾರಂಭ - 'ದ್ರಷ್ಟಾರ' ಅನಾವರಣ




               "ಬದುಕಿನ ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಸದ್ಧರ್ಮ, ಪ್ರಮಾಣಿಕತೆ, ನಿಷ್ಠೆಗಳಿರಬೇಕು. ವೃತ್ತಿಯೊಂದಿಗೆ ಪ್ರವೃತ್ತಿಗಳು ಹೊಸೆದುಕೊಂಡಾಗ ಅವೆರಡೂ ಪ್ರಕಾಶಕ್ಕೆ ಬರುತ್ತವೆ. ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರು ವೃತ್ತಿಯಲ್ಲಿ ಮಂತ್ರವಾದಿಯಾಗಿ, ಪ್ರವೃತ್ತಿಯಲ್ಲಿ ಯಕ್ಷಗಾನವನ್ನು ನೆಚ್ಚಿಕೊಂಡುದರಿಂದ ಅವರ ಬದುಕು ಹಸನಾಗಿದೆ. ಇವರು ವೃತ್ತಿಧರ್ಮಕ್ಕೆ ನ್ಯಾಯವನ್ನು ನೀಡಿದ್ದಾರೆ," ಎಂದು ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

                ಅವರು ಜೂನ್ 5ರಂದು ಜನಾನುರಾಗಿ ಮಂತ್ರವಾದಿ ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರ ಸಪ್ತತಿ ಸಮಾರಂಭದಲ್ಲಿ ಅವರನ್ನು ಗೌರವಿಸಿ ಆಶೀರ್ವಚನ ನೀಡುತ್ತಾ, 'ಉತ್ತಮ ಸಂಸಾರಿಯಾದ ಉಡುಪುಮೂಲೆಯವರು ಜನರ ಸಂಕಷ್ಟವನ್ನು ಅರಿತು, ಸಮಸ್ಯೆಗಳನ್ನು ಪರಿಹರಿಸುವ ಉತ್ತಮ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ' ಎಂದರು.

               ಉಡುಪುಮೂಲೆ ರಘುರಾಮ ಭಟ್ ಮತ್ತು ನಾ. ಕಾರಂತ ಪೆರಾಜೆ ಸಂಪಾದಕತ್ವದ ಅಭಿನಂದನ ಕೃತಿ 'ದ್ರಷ್ಟಾರ'ವನ್ನು ಎಡನೀರು ಶ್ರೀಗಳು ಅನಾವರಣಗೊಳಿಸಿದರು. ಕೃತಿಯನ್ನು ಉಡುಪುಮೂಲೆಯ ಭೂಮಿಕಾ ಪ್ರಕಾಶನವು ಪ್ರಕಾಶಿಸಿತ್ತು.
              ವೇ.ಮೂ.ಪಳ್ಳತ್ತಡ್ಕ ಪರಮೇಶ್ವರ ಭಟ್, ವೇ.ಮೂ.ನೆಡುಮನೆ ಗೋಪಾಲಕೃಷ್ಣ ಭಟ್ ಮತ್ತು ವೇ.ಮೂ. ಹಿರಣ್ಯ ವೆಂಕಟೇಶ್ವರ ಭಟ್ಟರು ಸಪ್ತತಿ ಸಡಗರದಲ್ಲಿರುವ ಉಡುಪುಮೂಲೆ ದಂಪತಿಯನ್ನು ನುಡಿಹಾರದ ಮೂಲಕ ಅಭಿನಂದಿಸಿ ಹಾರೈಸಿದರು. ಮನೆಯ ಬಂಧುಗಳು ಬಾಗಿನ ಸಮರ್ಪಿಸುವ ಮೂಲಕ ಅಭಿನಂದಿಸಿದರೆ; ಡಿ.ಬಿ.ಬಾಲಕೃಷ್ಣ ಪೆರಾಜೆ, ಧರ್ಮಪಾಲ್ ಜಾದವ್, ಪಿ.ಎಸ್.ಪುಣಿಂಚಿತ್ತಾಯರು ಹಾರ, ಶಾಲು, ಹಣ್ಣುಹಂಪಲುಗಳನ್ನು ಉಡುಗೊರೆಯಾಗಿ ನೀಡಿದರು.

              ಪತ್ರಕರ್ತ, ಅಂಕಣಕಾರ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ಉಡುಪುಮೂಲೆ ರಘುರಾಮ ಭಟ್ಟರು ಪ್ರಸ್ತಾವನೆ ನುಡಿಗಳನ್ನಾಡಿದರು. ರಾಘವೇಂದ್ರ ಭಟ್, ಅನುಪಮಾ, ವಸಂತಿ ಮುರಳಿ, ಕುಸುಮಾ ರಘುರಾಮ್ ಭಟ್, ರಾಜೇಶ್ವರೀ, ಕವಿತಾ ವಿವಿಧ ಕಲಾಪವನ್ನು ನಿರ್ವಹಿಸಿದರು. ಡಾ.ಬಾಲಮುರಳಿ ಸ್ವಾಗತಿಸಿದರೆ, ಶ್ರೀಮತಿ ಲಲಿತಾ ಹರೀಶ್ ವಂದಿಸಿದರು. ಶ್ರೀಮತಿ ಉಂಡೆಮನೆ ಚಿತ್ತರಂಜಿನಿ ಪ್ರಾರ್ಥನೆಗೈದರು.

            ಸಪ್ತತಿಯ ಅಂಗವಾಗಿ ವಿವಿಧ ವೈದಿಕ ಕಾರ್ಯಕ್ರಮಗಳು ಜರುಗಿತ್ತು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಬಂಧುಗಳಿಗೆ 'ದ್ರಷ್ಟಾರ' ಅಭಿನಂದನ ಕೃತಿಯನ್ನು ಉಡುಗೊರೆಯಾಗಿ ನೀಡಲಾಯಿತು.

ಚಿತ್ರ : ಉದಯ ಕಂಬಾರ್, ವರ್ಣ ಸ್ಟುಡಿಯೋ, ಬದಿಯಡ್ಕ