Tuesday, July 19, 2011

'ಚಕ್ಕುಲಿ ಅಜ್ಜ'ನ ನೆನಪಿನಲ್ಲಿ..

ತಲೆಂಗಳ ಗೋಪಾಲಕೃಷ್ಣ ಭಟ್ - ಯಕ್ಷಗಾನ ಹಿಮ್ಮೇಳದ ಮೇರು. 'ಚಕ್ಕುಲಿ ಅಜ್ಜ' ಎಂಬುದು ಪ್ರೀತಿಯ ನಾಮ. ಇವರ ಮನಸ್ಸನ್ನು ಅರಿತು ಚೆಂಡೆ-ಮದ್ದಳೆಗಳೇ ಇವರಿಗೆ ಬಾಗುತ್ತಿದ್ದುವು, ಬಳುಕುತ್ತಿದ್ದುವು! ನಾಲ್ಕು ದಶಕಗಳ ರಂಗಾನುಭವ. ಜೂನ್ 24ರಂದು ಅಜ್ಜ ವಿಧಿವಶ. ನೆನಪುಗಳ ಕೆಲವು ಎಳೆಗಳು ಅವರಿಗೆ ಸಲ್ಲಿಸುವ ಶೃದ್ಧಾಂಜಲಿ.

ಮೇ ಕೊನೆಯ ವಾರ ಇರಬೇಕು, ತಲೆಂಗಳ ಗೋಪಾಲಕೃಷ್ಣ ಭಟ್ಟರು ಕಚೇರಿಗೆ ಬಂದಿದ್ದರು. ಶುದ್ಧ ಬಿಳಿ ಉಡುಪು, ಹೆಗಲಲ್ಲಿ ಝರಿ ಶಾಲು,ಚೀಲ. ನೀಟ್ ಆದ ಉಡುಪು. ಯಾವುದೋ ಕೆಲಸದಲ್ಲಿ ಮಗ್ನನಾಗಿದ್ದೆ. 'ಸ್ವಲ್ಪ ಮಾತನಾಡಲು ಉಂಟು, ಒಳಗೆ ಬರಬಹುದಾ,' ಎಂಬ ಧ್ವನಿಯನ್ನು ಕೇಳಿಯೂ ಕೇಳದಂತಿದ್ದೆ.

ಕಾರಣ ಇಲ್ಲದಿಲ್ಲ. ಎಷ್ಟೋ ಸಲ ಅವರೊಡನೆ ಮಾತನಾಡಿದಾಗ, 'ಹಿಂಸೆ'ಯ ಭಾವ ಕಾಡುತ್ತಿತ್ತು. ಅವರ ನಡವಳಿಕೆ, ನಿಯಂತ್ರಣಗಳಿಲ್ಲದ ವರ್ತನೆಗಳಿಂದ ಸಾಧ್ಯವಾದಷ್ಟೂ ದೂರವಿರುತ್ತಿದ್ದೆ. ಅವರನ್ನು ಬಲ್ಲ ಬಹುತೇಕ ಕಲಾವಿದರೂ ಈ 'ಹಿಂಸೆ'ಯನ್ನು ಅನುಭವಿಸಿದವರೇ!

ಕಚೇರಿಗೆ ಬಂದವರು 'ಇಂದು ಸರಿ ಇದ್ದೇನೆ ಮಾರಾಯ' ಎನ್ನುತ್ತಾ ಮಾತಿಗೆಳೆದರು. ಹೌದಲ್ಲಾ.. ಅಂದು ಹೊಸ ಭಟ್ಟರಾಗಿ ಕಂಡರು. 'ಯಕ್ಷಗಾನ ಹುಟ್ಟುವಾಗಲೇ ಬಂದದ್ದು. ನನ್ನ ಗ್ರಹಚಾರ ಸರಿಯಿಲ್ಲ. ನೋಡೋಣ, ತೆಂಕಿನ ಪ್ರಸಿದ್ಧ ಚೆಂಡೆ ವಾದಕರು ನನ್ನ ಮುಂದೆ ಚೆಂಡೆ ಹಿಡಿದು ನಿಲ್ಲಲಿ ನೋಡೋಣ. ಸವಾಲಿಗೆ ಸವಾಲ್. ಏನು ಮಾಡೋಣ. ಚೌಕಿಗೆ ಹೋದಾಗ ಎಲ್ಲರೂ ಡೋಂಗಿ ಮಾಡುವವರೇ,' ಮನಬಿಚ್ಚಿ ಮಾತನಾಡುತ್ತಾ ಹೋದರು.

'ನನ್ನ ತಂದೆಯವರ ಹೆಸರಿನ ಯಕ್ಷಗಾನ ಕೇಂದ್ರವೊಂದರ ಸ್ಥಾಪನೆ ನನ್ನ ಕನಸು. ಅದಿನ್ನೂ ಪೂರೈಸಿಲ್ಲ. ಹಣ ಹೊಂದಿಸಲು ನಾನು ಬಡವ. ಉಳ್ಳವರಲ್ಲಿ ಹೋದರೆ ಹತ್ತೋ ಐವತ್ತೋ ಕಿಸೆಗೆ ಹಾಕ್ತಾರೆ. ನನ್ನ ವಿಚಾರವನ್ನು ಕೇಳುವಷ್ಟೂ ಅವರಿಗೆ ಪುರಸೊತ್ತಿಲ್ಲ. ಅವರಲ್ಲಿ ಭಿಕ್ಷೆ ಕೇಳಲು ಹೋದಂತೆ ವರ್ತಿಸುತ್ತಾರೆ' ಹೀಗೆ ಒಂದಷ್ಟು ಹೊತ್ತು ಕಳೆದು, 'ಐವತ್ತು ರೂಪಾಯಿ ಬೇಕಿತ್ತು. ನಾಳೆ ಕೊಡ್ತೇನೆ,' ಎಂದರು. ಅವರ ಈ ಸ್ವಭಾವದ ಪರಿಚಯವಿದ್ದ ನಾನು 'ಅಸಹನೆ'ಯಿಂದಲೇ ಕೊಟ್ಟಿದ್ದೆ. ಆದರೆ ಅವರ ಹೇಳಿದಂತೆ ಮರುದಿವಸ ಹಣವನ್ನು ತಂದೂ ಕೊಟ್ಟರು. ಅಂದೂ ಕೂಡಾ ತುಂಬಾ ಹೊತ್ತು ಹಿರಿಯ ಕಲಾವಿದರ ಒಡನಾಟವನ್ನು ನೆನಪಿಸಿಕೊಂಡರು.

ಅಂದಿನ ಅವರ ಸ್ವಭಾವ ಬಹಳ ವಿಚಿತ್ರವಾಗಿ ಕಂಡಿತು. 'ಹೆಚ್ಚು ಮಂಡೆಬಿಸಿ ಆದರೆ ಏನು ಮಾಡೋದು ಮಾರಾಯ, ಹೊಟ್ಟೆಗೆ ಹಾಕಿದಾಗ ಕಡಿಮೆಯಾಗುತ್ತದೆ,' ವಿನೋದಕ್ಕೆ ಒಮ್ಮೆ ಹೇಳಿದ್ದರು. ಹಾಗಾಗಿ ಎಷ್ಟೋ ಸಲ ಅವರು ಅವರಾಗಿಯೇ ಇರುವುದಿಲ್ಲ. ಯಕ್ಷಗಾನ ಬದುಕಿನಲ್ಲಿ ಏನೋ ನಿರೀಕ್ಷೆಯನ್ನಿಟ್ಟುಕೊಂಡ ಭಟ್ಟರು, ಅದನ್ನು ಸಾಧಿಸಲಾಗುತ್ತಿಲ್ಲವಲ್ಲಾ ಎಂಬ ಕೊರಗು ಅವರನ್ನು 'ಮಂಡೆಬಿಸಿ' ಮಾಡಿತ್ತು ಎಂಬುದು ಅವರ ಪ್ರತಿಭೆಯನ್ನು ಅರಿತ ಮಂದಿಗೆ ಗೊತ್ತು.

ಸಹಜವಾಗಿ ಇಂತಹ ಹೊತ್ತಲ್ಲಿ ಯಾರನ್ನೂ ಸಮಾಜ, ಸ್ನೇಹಿತರು, ಬಂಧುಗಳು ಹತ್ತಿರ ಸೇರಿಸಿಕೊಳ್ಳುವುದಿಲ್ಲ. 'ತಲೆಂಗಳ ಚೆಂಡೆ ಹೆಗಲಿಗೇರಿಕೊಂಡರೆ ಸಾಕು, ಅದ್ಭುತ ಕೈಚಳಕ, ಅವರೊಬ್ಬ ಚೆಂಡೆಯ ಗಂಡುಗಲಿ,' ಅವರ ಸುದ್ದಿ ಮಾತನಾಡುವಾಗಲೆಲ್ಲಾ ಬರುವ ಹೊಗಳಿಕೆಯ ಮಾತು. ಆದರೆ ಅದೇ ತಲೆಂಗಳ 'ತಾನು ತಾನಾಗಿಯೇ ಇರದಿದ್ದಾಗ' ಒಳ್ಳೆಯ ರೀತಿಯಿಂದ ಮಾತನಾಡಿಸುವವರು ಎಷ್ಟು ಮಂದಿ ಇದ್ದರು? ಅವರು ಕೇಳುತ್ತಿರಲಿಲ್ಲ ಎಂಬುದು ಬೇರೆ ಮಾತು.

ತನ್ನ ಸಂಕಲ್ಪಿತ ಯಕ್ಷಗಾನ ಕೇಂದ್ರ, ತಂದೆಯವರ ಪ್ರಸಂಗ ಪುಸ್ತಕದ ಪ್ರಕಟಣೆ, ಯಕ್ಷಗಾನ ಪ್ರದರ್ಶನ.. ಹೀಗೆ ಕೆಲವು ವರ್ಷ ಕರಪತ್ರಗಳನ್ನು ಮುದ್ರಿಸಿ ಹಂಚುತ್ತಿದ್ದರು. ಆದರೆ ಕರಪತ್ರದಲ್ಲಿ ಮುದ್ರಿಸಿದಂತೆ ಕಲಾಪವನ್ನು ಅವರಿಗೆ ನಡೆಸಲು ತ್ರಾಸಪಡುತ್ತಿದ್ದರು.
ಆಸಕ್ತಿ ಹುಚ್ಚೆದ್ದು ಕುಣಿದಾಗ ಆಟ ಮಾಡುವ ಉಮೇದು. ಕರಪತ್ರಗಳನ್ನು ಅಚ್ಚು ಹಾಕಿಸಿ, ಪ್ರತಿಯೊಬ್ಬರನ್ನು ಭೇಟಿ ಮಾಡುತ್ತಿದ್ದರು. ವೇಷ ಮಾಡದವರಿಗೂ 'ನಿಮಗೊಂದು ವೇಷ ಉಂಟು' ಎನ್ನುತ್ತಾ ಒತ್ತಾಯಿಸುತ್ತಿದ್ದರು. ಕಲಾವಿದರನ್ನೂ ಗೊತ್ತು ಮಾಡುತ್ತಿದ್ದರು. ಆದರೆ ಆಟ ಆದುದು ಒಂದೋ ಎರಡೋ ಅಷ್ಟೇ. 'ಈಚೆಗೆ ಚಕ್ಕುಲಿ ಅಜ್ಜನ ಆಟದಲ್ಲಿ ವೇಷ ಮಾಡಿದ್ದೆ. ಹಿರಿಯ ಕಲಾವಿದರಲ್ವಾ. ಅವರ ಸೋಲಿಗೆ ನಾವು ಕಾರಣವಾಗಬಾರದು,' ತಲೆಂಗಳದವರನ್ನು ಹತ್ತಿರದಿಂದ ಬಲ್ಲ ಅರ್ಯಾಪಿನ ವೆಂಕಟೇಶ ಮಯ್ಯರು ಹೇಳುತ್ತಾರೆ.
ಅವರ ಚೆಂಡೆ ವೈಭವದ ಅಡಕ ತಟ್ಟೆಯಾಗಿತ್ತು. 'ಇದಾ, ನಿನಗೊಂದು ಇರಲಿ, ಪೈಸೆ ಬೇಡ' ಎನ್ನುತ್ತಾ ಸಿಡಿ ಕೊಟ್ಟಿದ್ದರು. ವಾರ ಕಳೆದು 'ಹೇಂಗಿದ್ದು' ಅಂತ ಹಿಮ್ಮಾಹಿತಿ ಪಡೆಯಲು ಮರೆಯಲಿಲ್ಲ. ತಲೆಂಗಳದವರ ಪ್ರತಿಭೆ ಎಲ್ಲವೂ ಅದರಲ್ಲಿ ಅನಾವರಣಗೊಳ್ಳದಿದ್ದರೂ, ಅವರ ಕೈಚಳಕಕ್ಕೆ ಸಾಕ್ಷಿಯಾಗಿದೆ.

ಎಷ್ಟೋ ಚೌಕಿಯಲ್ಲಿ ಚಕ್ಕುಲಿ ಅಜ್ಜನನ್ನು ಕೆರಳಿಸಿ, ಅವರು ಕೆರಳುವುದನ್ನು ನೋಡುತ್ತಾ 'ಸಂತೋಷ ಪಡುವ' ಪತನಸುಖಿಗಳ ಪರಿಚಯವಿದೆ. ಈ ರೀತಿ ಕೆರಳಿದಾಗ ಅದು ತಕ್ಷಣಕ್ಕೆ ಶಮನವಾಗುತ್ತಿರಲಿಲ್ಲ! ಆಟ ಉಂಟು ಅಂತ ಗೊತ್ತಾದರೆ ಸಾಕು, ಅಜ್ಜನಿಗೆ ಕರೆ ಬೇಡ. ನೇರವಾಗಿ ಚೆಂಡೆ-ಮದ್ದಳೆಗಳ ಹತ್ತಿರ ಹೋಗುತ್ತಿದ್ದರು. ಕಿರಿಕಿರಿಯಾಗುವಷ್ಟೂ ವಾಚಾಳಿಯಾಗುತ್ತಿದ್ದರು. ಒಂದರ್ಧ ಗಂಟೆ ಅಷ್ಟೇ. ಮತ್ತೆ ಅವರ ಪಾಡಿಗೆ ಹೋಗುತ್ತಿದ್ದರು. ಇಲ್ಲ, ಪ್ರದರ್ಶನ ನೋಡುತ್ತಿದ್ದರು.

ಒಮ್ಮೆ ಯಾವುದೋ ಚೌಕಿಯಲ್ಲಿ ಅವರಿಗೆ ಅವಮಾನವಾಗಿತ್ತು. ರಾದ್ದಾಂತ ಎಬ್ಬಿಸಿದ್ದರು. 'ನಿಮ್ಮ ಯಾರ ಸಹವಾಸವೂ ಬೇಡ. ನಾನು ಅಡುಗೆಗೆ ಹೋದರೆ ದಿವಸಕ್ಕೆ ಐನೂರು ರೂಪಾಯಿ ಸಂಪಾದಿಸ್ತೇನೆ' ಎಂದು ಏರು ಸ್ಥಾಯಿಯಲ್ಲಿ ಹೇಳಿದ್ದರು.

ಯಕ್ಷಗಾನ ರಂಗದಲ್ಲಿ ತಲೆಂಗಳ ಎಷ್ಟು ದೊಡ್ಡವರೋ, ಸೂಪಜ್ಞರಾಗಿಯೂ ಅಷ್ಟೇ ದೊಡ್ಡವರು. ಯಾರದ್ದೇ ಹಂಗಿಲ್ಲದೆ ಬದುಕುವ, ಯಕ್ಷಗಾನ ರಂಗವನ್ನು ತನ್ನ ವಿದ್ವತ್ತಿನಿಂದ ಮೆರೆಸುವ ಎಲ್ಲಾ ಸಂಪನ್ಮೂಲಗಳು ಅವರಲ್ಲಿದ್ದರೂ 'ವಿಜಯಲಕ್ಷೀ' ಅವರಿಗೆ ಒಲಿಯಲಿಲ್ಲ. ಧನಲಕ್ಷ್ಮೀ ಹತ್ತಿರ ಸುಳಿಯಲಿಲ್ಲ.

ತನಗೆ ಅಂಟಿಕೊಂಡ ವಿಕಾರಗಳೇನೇ ಇರಲಿ. ಅದರಿಂದ ಕಳಚಿಕೊಳ್ಳಲೂ ಅವರಿಗೆ ಗೊತ್ತಿತ್ತು. ಅಂಟಿಸಿಕೊಳ್ಳಲೂ ಗೊತ್ತಿತ್ತು! ಯೋಗವಿದ್ದವರಿಗೆ ಯೋಗ್ಯತೆಯಿಲ್ಲ. ಯೋಗ್ಯತೆಯಿದ್ದವರಿಗೆ ಯೋಗವಿರುವುದಿಲ್ಲ!

ಯಕ್ಷಗಾನದ ಸ್ಟೇಜ್ನಲ್ಲಿ 'ಗಟ್ಟಿ ಪೆಟ್ಟಿನ' ನಾದ ಇನ್ನು ಕೇಳುವುದಿಲ್ಲ, ಎನ್ನುತ್ತಾ ಕಲಾವಿದ ರಾಜರತ್ನಂ ಅಜ್ಜನ ಚೆಂಡೆ ವಾದನ, ಶ್ರುತಿ ಜ್ಞಾನ, ರಂಗ ಜಾಣ್ಮೆಗಳನ್ನು ಅವರ ಉತ್ತರಕ್ರಿಯೆಯ ಸಂದರ್ಭದಲ್ಲಿ ನೆನಪಿಸಿಕೊಂಡರು.