Thursday, January 28, 2016

ಕಾಫಿ ನಾಡಲ್ಲರಳಿದ ಪಾಪಣ್ಣ

              ಯಕ್ಷಗಾನ ರಂಗದಲ್ಲಿ 'ಪಾಪಣ್ಣ' ಪಾತ್ರವನ್ನು ನೆನಪಿಸಿಕೊಂಡರೆ ಥಟ್ಟನೆ ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ಕಣ್ಣ ಮುಂದೆ ಬರುತ್ತಾರೆ. ಇವರು 'ಪಾಪಣ್ಣ'ನನ್ನು ಕಡೆದ ಶಿಲ್ಪಿ. ಜೀವ ಕೊಟ್ಟ ಮಾಂತ್ರಿಕ. 'ಪಾಪಣ್ಣ ವಿಜಯ' ಪ್ರಸಂಗವು ಭಟ್ಟರನ್ನು ಎತ್ತರಕ್ಕೇರಿಸಿ ತಾನೂ ಎತ್ತರಕ್ಕೆ ಏರಿದೆ.  ಪಾತ್ರವೇ ಭಟ್ಟರಿಗೆ 'ಪಾಪಣ್ಣ ಭಟ್ರು' ಎನ್ನುವ ಅಭಿದಾನ ನೀಡಿದೆ.
ನಾರಾಯಣ ಭಟ್ಟರ ಯಜಮಾನಿಕೆಯಲ್ಲಿ ಸುಮಾರು ಆರರ ದಶಕದಲ್ಲಿ ಮೂಲ್ಕಿ ಮೇಳ ವಿಜೃಂಭಿಸುತ್ತಿತ್ತು. ಭದ್ರಾಯು ಚರಿತ್ರೆ, ಜಲಂಧರ ಕಾಳಗ, ವಜ್ರಬಾಹು ಕಾಳಗ, ವಿದ್ಯುನ್ಮತಿ ಕಲ್ಯಾಣ, ಕುಮಾರ ವಿಜಯ, ನಳಚರಿತ್ರೆ, ಹರಿಶ್ಚಂದ್ರ.. ಪ್ರಸಂಗಗಳಿಂದ ಟೆಂಟ್ ಫುಲ್! ಉದ್ಧಾಮ ಕಲಾವಿದರ ತಂಡಕ್ಕೆ ಅಭಿಮಾನದ ಹೊನಲಿನ ಸಮೃದ್ಧತೆ. ಆಗಲೇ ಪೆರುವಡಿ ಭಟ್ಟರಿಗೆ ನಳಚರಿತ್ರೆಯ 'ಬಾಹುಕ' ಪಾತ್ರವು ಒಲಿದಿತ್ತು.
             ಪಾದೆಕಲ್ಲು ಛತ್ರದ ವೆಂಕಟ್ರಮಣ ಭಟ್ಟರು ಮೂಲ್ಕಿ ಮೇಳಕ್ಕಾಗಿಯೇ 'ಪಾಪಣ್ಣ ವಿಜಯ' ಪ್ರಸಂಗವನ್ನು ರಚಿಸಿದ್ದರು. ಮೇಳದ ಕಲಾವಿದರಿಗೆ ಹೊಂದುವಂತಹ ಪಾತ್ರಸೃಷ್ಟಿಗಳು ಪ್ರಸಂಗದಲ್ಲಿದ್ದುವು. ಪರಿಣಾಮಕಾರಿಯಾದ ರಸಭಾವಗಳಿದ್ದುವು. 'ಕಾಲ್ಪನಿಕ ಪ್ರಸಂಗ' ಎನ್ನುವ ಮುಜುಗರ ಒಂದೆಡೆ. ಜನಸ್ವೀಕೃತಿಯಾದೀತೇ ಎಂಬ ಭಯ ಇನ್ನೊಂದೆಡೆ. ಪೌರಾಣಿಕ ವಾತಾವರಣದ ಮಧ್ಯೆ ಪಾಪಣ್ಣ ಗೆಲ್ಲಬಹುದೇ ಎನ್ನುವ ಆತಂಕ. ಸ್ವಲ್ಪ ದಿವಸ ಮೀನಮೇಷದಿಂದಲೇ ದಿನ ಸಂದಿತು.
             ಪಾಪಣ್ಣನ ಪಾತ್ರ ರಚನೆಯು ಫಕ್ಕನೆ ನೋಡುವಾಗ 'ಬಾಹುಕ'ನನ್ನು ನೆನಪಿಸುತ್ತದೆ. ಆದರೆ ಬಾಹುಕನ ಗುಣ-ಸ್ವಭಾವ ಬೇರೆ, ಪಾಪಣ್ಣನ ಚಿತ್ರಣವೇ ಬೇರೆ. ಸನ್ನಿವೇಶದಿಂದ ಸನ್ನಿವೇಶಕ್ಕೆ ಕುತೂಹಲ ಮೂಡಿಸುವ ಪ್ರಸಂಗದ ಪ್ರದರ್ಶನಕ್ಕೆ ಪೆರುವೋಡಿಯವರು ಉತ್ಸುಕರಾದರು. ಮೇಳದಲ್ಲಿ ಏನಾದರೂ ಹೊಸತನ್ನು ರೂಪಿಸಬೇಕು, ಜನರ ಒಲವನ್ನು ಪಡೆಯಬೇಕೆನ್ನುವ ತುಡಿತವಿತ್ತು. ಅದಕ್ಕೆ ಈ ಪ್ರಸಂಗ ನೀರೆರೆದು ಪೋಷಿಸಿತು.
               ಮೂಲ್ಕಿ ಮೇಳವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಟೆಂಟ್ ಊರಿನ ಸಮಯ. ಮೊದಲ ಪ್ರದರ್ಶನಕ್ಕೆ ಕೊಪ್ಪದ 'ಕುದ್ರೆಗುಂಡಿ ಎಸ್ಟೇಟ್'ನ್ನು ಆರಿಸಿಕೊಂಡರು. 'ಒಂದು ವೇಳೆ ಪ್ರದರ್ಶನ ಕೈಕೊಟ್ಟರೆ ಇದೇ ಮೊದಲು, ಇದೇ ಕೊನೆ ಎನ್ನುವ ನಿರ್ಧಾರಕ್ಕೆ ಬರಬಹುದಲ್ಲಾ. ಜತೆಗೆ ಊರಿನಲ್ಲಿ ಕಾಲ್ಪನಿಕ ಪ್ರಸಂಗವನ್ನು ಆಡಲು ಭಯ. ಆಗ ಪ್ರೇಕ್ಷಕರೂ ವಿಮರ್ಶಕರಾಗಿದ್ದರು ನೋಡಿ. ಹಾಗಾಗಿ ಕೊಪ್ಪವು ಸೂಕ್ತ ಜಾಗ ಅಂತ ಅಲ್ಲಿ ಮೊದಲ ಪ್ರದರ್ಶನ ಮಾಡಿದೆವು, ಆ ದಿವಸಗಳನ್ನು ನಾರಾಯಣ ಭಟ್ ಜ್ಞಾಪಿಸಿಕೊಳ್ಳುತ್ತಾರೆ.
                  ಪೆರವೋಡಿಯವರ 'ಪಾಪಣ್ಣ', ಪಾತಾಳ ವೆಂಕಟ್ರಮಣ ಭಟ್ಟರ 'ಗುಣಸುಂದರಿ', ಗುಂಪೆ ರಾಮಯ್ಯ ರೈಗಳ 'ಉಗ್ರಸೇನ', ಪುತ್ತೂರು ನಾರಾಯಣ ಹೆಗಡೆ ಮತ್ತು ಎಂಪೆಕಟ್ಟೆ ರಾಮಯ್ಯ ರೈಗಳ 'ದುಮರ್ುಖ-ದುರ್ಮತಿ', ಮಧೂರು ಗಣಪತಿ ರಾಯರ 'ಚಂದ್ರಸೇನ', ಚಂದ್ರಗಿರಿ ಅಂಬು ಅವರ 'ಕರಡಿ' ಪಾತ್ರಗಳು ಜನಮೆಚ್ಚುಗೆ ಪಡೆದುವು. ಅಂಬು ಅವರು ಕರಡಿ ಪಾತ್ರವನ್ನು ಮುಖವರ್ಣಿಕೆ, ವೇಷಭೂಷಣ ತೊಟ್ಟು ಅಂದವಾಗಿ ಮಾಡಿದ್ದರು. ಕೃತಕ ಮುಖವಾಡದ ಬದಲಿಗೆ ವೇಷತೊಟ್ಟೇ ಪ್ರಾಣಿಪಾತ್ರಗಳನ್ನು ಮಾಡಿದರೆ ಅದು ಯಕ್ಷಗಾನವಾಗಿ ಕಾಣುತ್ತದೆ, ಎನ್ನುತ್ತಾರೆ.
                  ಬಾಹುಕನಂತೆ ಮುಖವರ್ಣಿಕೆ, ಅಭಿನಯ ಅಗಬಾರದು ಎನ್ನುವ ಎಚ್ಚರವಿತ್ತು. 'ಪಾಪಣ್ಣ'ನ ಪೂರ್ವರೂಪ ರಾಜಕುಮಾರನದ್ದೆಂಬ ಹಿನ್ನೆಲೆಯಲ್ಲಿ ಹಾಸ್ಯರಸ ತರುತ್ತಿರಲಿಲ್ಲ. ಗಂಭೀರವಾದ ಅಭಿವ್ಯಕ್ತಿ. ಆರಂಭದಲ್ಲಿ ಪಾತಾಳರು ’ಗುಣಸುಂದರಿ’ಯಾದರೆ ನಂತರದ ವರುಷಗಳಲ್ಲಿ ಕೊಕ್ಕಡ ಈಶ್ವರ ಭಟ್ಟರು ಪಾಪಣ್ಣದ ಹೆಂಡತಿಯಾದರು. ಈ ಜತೆಗಾರಿಕೆ ಪ್ರಸಂಗವನ್ನು ಹಲವು ವರುಷ ಜೀವಂತವಾಗಿಟ್ಟಿತು. ಈಗಲೂ ಇವರಿಬ್ಬರ ರಂಗ ಕಾಂಬಿನೇಶನ್ ಮಾತಿಗೆ ವಿಷಯ.
                    ಪಾಪಣ್ಣ ಪ್ರದರ್ಶನದ ಒಂದು ಘಟನೆಯನ್ನು ಅವರೇ ಹೇಳಬೇಕು : ರಂಗದಲ್ಲಿ ಬಿಕ್ಷು ಪಾತ್ರಗಳನ್ನು ಮಾಡಿದಾಗ ಪಾತ್ರವು ಪ್ರೇಕ್ಷಕರ ಮಧ್ಯೆ ಹೋಗಿ ಬೇಡುವುದು ಹಿಂದಿನಿಂದಲೇ ಬಂದ ಪದ್ಧತಿ. ಈ ಕ್ರಮವನ್ನು ಮಡದಿ ಸಾವಿತ್ರಿ ಆಕ್ಷೇಪಿಸಿದ್ದಳು. ಜತೆಗೆ ಮೇಳದ ಯಜಮಾನ ಎಂಬ ನೆಲೆಯಲ್ಲಿ ನನಗೂ ರುಚಿಸುತ್ತಿರಲಿಲ್ಲ. ಇಂತಹ ಪಾತ್ರಗಳನ್ನು ಮಾಡಿದಾಗ ಪ್ರೇಕ್ಷಕರೇ ರಂಗಕ್ಕೆ ನಾಣ್ಯಗಳನ್ನು ಚೆಲ್ಲುತ್ತಿದ್ದರು. ಕೆಲವರು ರಂಗಕ್ಕೆ ಬಂದು ಕೈಗಿಡುತ್ತಿದ್ದರು. ಹೆಚ್ಚೆಂದರೆ ನೂರು ರೂಪಾಯಿ ಸಂಗ್ರಹ ಆದುದೂ ಇದೆ. ಇದನ್ನು ಹಿಮ್ಮೇಳದವರಿಗೆ, ಸಹ ಭಿಕ್ಷು ಪಾತ್ರಧಾರಿಗಳಿಗೆ ಹಂಚುತ್ತಿದ್ದೆ. ಕೆಲವೊಮ್ಮೆ ಎಲ್ಲರಿಗೂ ಸಿಹಿ ತಿನ್ನಿಸುತ್ತಲೂ ಇದ್ದೆ..
                  'ಪಾಪಣ್ಣ'ನ ಮುಖವರ್ಣಿಕೆ ನೋಡುವಾಗ ನಿಕೃಷ್ಟ! ಮೈಯೆಲ್ಲಾ ಹುಣ್ಣಾಗಿ ರಕ್ತ ಸೋರುವಂತಹ ಬಣ್ಣಗಾರಿಕೆ. ಕಪ್ಪು ಬಣ್ಣದ ಡ್ರೆಸ್. ಮುಖವೂ ವಿಚಿತ್ರ. ಕೈಯ ಬೆರಳೆಲ್ಲವೂ ಮುರುಟಿದಂತೆ ತೋರಿಸಬೇಕು. ಕುಂಟುತ್ತಾ ನಡೆಯುವ ಸಾಹಸ. ನಾರಾಯಣ ಭಟ್ಟರು ಪಾಪಣ್ಣನಾಗಿ ರಂಗದಲ್ಲಿರುವ ತನಕ ಈ ಎಲ್ಲಾ ಪಾತ್ರ ಗುಣಗಳು ಸಡಿಲವಾಗಲು ಬಿಡುತ್ತಿರಲಿಲ್ಲ. ರಂಗನಡೆ, ಮಾತುಗಳು ಸಹಜವೆಂಬಂತೆ ಚಿತ್ರಿಸುತ್ತಿದ್ದರು. ಅವರೊಂದಿಗೆ ಹಲವು ಬಾರಿ 'ಗುಣಸುಂದರಿ'ಯಾಗಿ ಪಾತ್ರವಹಿಸಿದ ಸಂದರ್ಭ ನನಗೂ ಪ್ರಾಪ್ತವಾಗಿತ್ತು. ಅಭಿವ್ಯಕ್ತಿಯನ್ನು ಮರೆತು ಪಾತ್ರೋಚಿತ ನಡೆಗಳಿಗೆ ಎಷ್ಟೋ ಬಾರಿ ರಂಗದಲ್ಲಿ ದಂಗಾಗಿದ್ದೆ.
                 "ನಾರಾಯಣ ಭಟ್ಟರ ’ಪಾಪಣ್ಣ’ ಮತ್ತು ಕೊಕ್ಕಡ ಈಶ್ವರ ಭಟ್ಟರ ’ಗುಣಸುಂದರಿ’ ಪಾತ್ರಗಳನ್ನು ನೋಡಿದಾಗ ಇವರಿಗಾಗಿಯೇ ಬರೆಯಲ್ಪಟ್ಟ ಪ್ರಸಂಗವೆಂದು ಕೆಲವು ಭಾವಿಸಿದ್ದುಂಟು," ಎಂದು ಬ್ರಹ್ಮಾವರದ ಎಚ್.ಸುಬ್ಬಣ್ಣ ಭಟ್ ಉಲ್ಲೇಖಿಸುತ್ತಾರೆ. "ಪಾಪಣ್ಣ ಪಾತ್ರಕ್ಕೆ ರೂಪದಾನ, ಪ್ರಾಣದಾನ ನೀಡಿದ್ದು ಪೆರುವೋಡಿಯವರೇ. ಆ ವೇಷಕಲ್ಪನೆ, ಬಣ್ಣಗಾರಿಕೆ, ಅಭಿನಯಗಳು ಅವರ ಪ್ರತಿಭೆಯ ಕಣ್ಣಲ್ಲಿ ಮೂಡಿದ್ದು," ಎಂದು ಕೀರ್ತಿಶೇಷ ಮಧೂರು ಗಣಪತಿ ರಾಯರು ಒಂದೆಡೆ ಹೇಳಿದ್ದರು.
                ಹವ್ಯಾಸಿ ಮತ್ತು ವೃತ್ತಿ ರಂಗಗಳಿಗೆ ಈ ಪ್ರಸಂಗ ಒಗ್ಗುತ್ತದೆ. ಪ್ರೇಕ್ಷಕರನ್ನು ಸೆರೆಹಿಡಿದು, ಅವರೊಳಗೆ ಚಿಂತನೆಯನ್ನು ಇಳಿಬಿಡುವ ಪ್ರಸಂಗವು ಈಗಲೂ ಜೀವಂತ. ಕಾಫಿಯ ಪರಿಮಳದ ನಡುವೆ ಅರಳಿದ ಪಾಪಣ್ಣ ಮತ್ತೆಂದೂ ಮುದುಡಿಲ್ಲ. ಅರಳುತ್ತಲೇ ಇದ್ದಾನೆ. ಅದು ಪ್ರಸಂಗದ ಗಟ್ಟಿತನ.

(ಪ್ರಜಾವಾಣಿ-ದಧಿಗಿಣತೋ ಅಂಕಣದಲ್ಲಿ ಪ್ರಕಟ 23-1-2016)Monday, January 11, 2016

ಮಾತಿನ ಲೋಕದ ಮೆಲುಕು

            ಯಕ್ಷಗಾನದ ಪೂರ್ಣಾವತಾರಿ ಸೂರಿಕುಮೇರು ಗೋವಿಂದ ಭಟ್ಟರು ಆರು ದಶಕದ ಯಕ್ಷಗಾನದ ಇತಿಹಾಸಕ್ಕೆ ಸಾಕ್ಷಿಯಾಗುತ್ತಾರೆ. ಅವರೊಂದಿಗೆ ಸ್ವಲ್ಪ ಹೊತ್ತು :-
           1953-54 ಇಸವಿಯ ಆಜೂಬಾಜು. ಕಲಾಭಿಮಾನಿ ಕಾಂದಿಲ ವೆಂಕಟ್ರಾಯರ ಯಜಮಾನಿಕೆಯಲ್ಲಿ ಕೂಡ್ಲು ಮೇಳ ಸಂಪನ್ನವಾಗಿತ್ತು. ರಂಗದಲ್ಲಿ ಮಾತುಗಾರಿಕೆಯನ್ನು ಅಪೇಕ್ಷಿಸಿದ ಕಾಲಘಟ್ಟವದು. ಮೇಳಕ್ಕೆ ಹರಿದಾಸ್ ಮಲ್ಪೆ ಶಂಕರನಾರಾಯಣ ಸಾಮಗರು ಸೇರ್ಪಡೆಗೊಂಡರು. ಅವರ ಅರ್ಥಗಾರಿಕೆ ಆಗ  ಮನೆಮಾತು. ಮೇಳಕ್ಕೆ ಕಲೆಕ್ಷನ್ ಹೆಚ್ಚಾಯಿತು. ಅದೇ ಸಮಯಕ್ಕೆ ಶೇಣಿ ಗೋಪಾಲಕೃಷ್ಣ ಭಟ್ಟರ ಪ್ರವೇಶವಾಗಿತ್ತು. 'ನನಗೆ ಕುಣಿತ ಗೊತ್ತಿಲ್ಲ, ಬಣ್ಣಗಾರಿಕೆ ಗೊತ್ತಿಲ್ಲ' ಅಂತ ಶೇಣಿಯವರು ಹೇಳಿದರೂ ಕೇಳಲಿಲ್ಲ. ಬಳಿಕ ಮಲ್ಪೆ ರಾಮದಾಸ ಸಾಮಗರನ್ನು ರಂಗಕ್ಕೆ ತಂದರು. ಆಗ 'ಆಟ ನೋಡುವ' ಪ್ರೇಕ್ಷಕರಲ್ಲಿ ಬೌದ್ಧಿಕತೆಯಿತ್ತು. ವಿಮರ್ಶಿಸುವ ಗುಣವಿತ್ತು. ಹರಿದಾಸರುಗಳ ಪ್ರವೇಶದಿಂದ ಯಜಮಾನರ ಆರ್ಥಿಕ ಸ್ಥಿತಿ ಸುಧಾರಿಸಿತು. ಎಲ್ಲಾ ವರ್ಗದ ಜನ ಬರಲು ಶುರು ಮಾಡಿದರು.
             1967-68. ಮಾತುಗಾರಿಕೆಯನ್ನು ಪ್ರೀತಿಸಿದ ಪ್ರೇಕ್ಷಕರ ನಂತರದ ಪೀಳಿಗೆಗೆ ಮಾತುಗಾರಿಕೆ ದೀರ್ಘ ಅಂತ ಅನ್ನಿಸಿತು. ಅವರ ಮನಃಸ್ಥಿತಿಗೆ 'ಬೋರ್' ಆಯಿತು! ಹಿರಿಯರಿಂದ ಬೌದ್ಧಿಕ ಸಂಪತ್ತು ಹೇಳುವಷ್ಟು ಕಿರಿಯರಿಗೆ ವರ್ಗಾವಣೆಯಾಗಲಿಲ್ಲ. 'ಯಕ್ಷಗಾನ ನಾಶವಾಯಿತು' ಎಂಬಲ್ಲಿಗೆ ಬಂತು! ಪ್ರೇಕ್ಷಕರು ಬದಲಾವಣೆ ಬಯಸಿದರು.  ಇರಾ ಸೋಮನಾಥೇಶ್ವರ ಯಕ್ಷಗಾನ ನಾಟಕ ಮಂಡಳಿಯವರು ಮೊದಲ ಬಾರಿಗೆ ಹೆಜಮಾಡಿಯಲ್ಲಿ 'ಕೋಟಿ ಚೆನ್ನಯ' ತುಳು ಆಖ್ಯಾನವನ್ನು ಪ್ರದರ್ಶಿಸಿದರು. ಎರಡು ವರುಷ ಜಯಭೇರಿ ಬಾರಿಸಿತು. ನಂತರ ಪಾಡ್ದನ ಆಧಾರಿತ ತುಳು ಪ್ರಸಂಗಗಳು ರಚನೆಯಾದುವು. ಪ್ರೇಕ್ಷಕರ ಒಲವು ಗಳಿಸಿತು.
          1956 ಇರಬೇಕು, ಕಲ್ಲಾಡಿ ಕೊರಗ ಶೆಟ್ಟರು ಎರಡು ಮೇಳ ಮಾಡಿದ್ರು. ಒಂದು ಮೇಳವನ್ನು ವಿಠಲ ಶೆಟ್ಟರಿಗೆ ಬಿಟ್ಟು ಕೊಟ್ಟರು. ಕೊರಗ ಶೆಟ್ಟರು ಹೊಸ ಸೆಟ್ ಮಾಡಿದ್ರು. ಆ ಕಾಲಕ್ಕೆ ವೀರಭದ್ರ ನಾಯಕರು, ರಾಮದಾಸ ಸಾಮಗರು.. ಮೇಳದಲ್ಲಿ ಮುಖ್ಯ ಕಲಾವಿದರು. ಒಂದೇ ಕಡೆ ವಾರ, ಹದಿನೈದು ದಿವಸಗಳ ಟೆಂಟ್ ಪ್ರದರ್ಶನಗಳಾಗುತ್ತಿದ್ದುವು.
           1995-96 - 'ಮಾತು ಹೆಚ್ಚಾಯಿತು' ಎನ್ನುವವರು ಕಡಿಮೆಯಾದರು. 'ಕುಣಿತ ಹೆಚ್ಚಾಯಿತು' ಕೂಗು ಎದ್ದಿತು. ಈಗ....! ಕಲಾವಿದರು ಚೆನ್ನಾಗಿ ಕುಣಿಯುತ್ತಾರೆ. 'ನೀನು ಏನು ಕುಣಿಯುತ್ತಿ' ಎಂದು ಕೇಳಿದರೆ ಹೇಳಲು ಕಷ್ಟವಾಗಬಹುದೇನೋ? ಮೊದಲು 'ತಾನೇನು ಕುಣಿಯುತ್ತೇನೆ' ಎನ್ನುವ ಜ್ಞಾನ ಕುಣಿಯುವವನಿಗೆ ಗೊತ್ತಿತ್ತು. ಶಾಸ್ತ್ರವು ಬೆಳೆದು ಬಂದದ್ದೇ ಹಾಗೆ ಅಲ್ವಾ. ಶಾಸ್ತ್ರೀಯವಾದ ಆಧಾರ ಇಲ್ಲ ಅಂತ ವಾದ ಶುರುವಾಯಿತು. ಹೇಗೆ ಬೇಕಿದ್ದರೂ ಮಾಡಬಹುದು. ಈಗ ಹೇಗೆ ಮಾಡ್ತಿ ಅಂತ ಕೇಳುವ ಹಾಗಿಲ್ಲ. ಅವನವನಿಗೆ ಖುಷಿ ಬಂದ ಹಾಗೆ ರಂಗದಲ್ಲಿ ನಡೆಯುತ್ತದೆ.
            ವೇಷಕ್ಕೆ 'ಇದಮಿತ್ಥಂ' ಎನ್ನುವ ತೀರ್ಮಾನ ಮೊದಲಿನಿಂದಲೂ ಇಲ್ಲ. 'ಇದು ಬಣ್ಣದ ವೇಷ' ಅಂತ  ಒಬ್ಬರು ಮಾಡಿದರು. ಅವರನ್ನು ಇತರರು ಅನುಕರಿಸಿದರು. ಅವರವರ ಜ್ಞಾನದಂತೆ ಅಭಿವೃದ್ಧಿಪಡಿಸಿದರು. ನಾಟ್ಯ ಶಾಸ್ತ್ರವನ್ನು ಯಾರೂ ನೋಡಿದವರಿಲ್ಲ. ನೋಡಿ ಹೀಗೆ ಆಗಬೇಕು ಎಂದು ಹೇಳಿದವರಿಲ್ಲ. ಹಾಗಾದರೆ ಶಾಸ್ತ್ರ ಎಂದಿನಿಂದ ಆರಂಭ ಆಯಿತು? ಆರಂಭ ಕಾಲದಲ್ಲಿ ಜನಪದದಲ್ಲಿ ಇದ್ದಂತಹ ನೃತ್ಯ ವಿಶೇಷ, ಮಾತು, ಅಭಿನಯಗಳನ್ನು ಶಾಸ್ತ್ರಕಾರ ಒಂದು ಸ್ವರೂಪಕ್ಕೆ ತಂದಿರಬಹುದು. ಗ್ರಾಮ್ಯವಾದ ಕಲೆಗೆ ಆಕಾರ ಕೊಡುವ, ಜನಜೀವನವನ್ನು ತಿದ್ದುವುದಕ್ಕೆ ಗ್ರಾಮ್ಯಧರ್ಮಕ್ಕೆ ಸುಂದರತೆ ಕೊಟ್ಟಿದ್ದಿರಬೇಕು.
              ಆಗ ಒಂದೆರಡು ವಾಕ್ಯದ ಅರ್ಥಗಾರಿಕೆಯಷ್ಟೇ. ಪದ್ಯದಲ್ಲಿರುವ ಭಾವಾರ್ಥ ಹೇಳಿದರೆ ಹೆಚ್ಚು. ಕ್ರಮೇಣ ಕುರಿಯ ಶಾಸ್ತ್ರಿಗಳಂತಹ ಪ್ರತಿಭಾ ಸಂಪನ್ನರು, ಪ್ರಜ್ಞಾವಂತರು ರಂಗ ಪ್ರವೇಶಿಸಿದರು. ವಿದ್ಯಾವಂತ ಪ್ರೇಕ್ಷಕರು ಸಿದ್ಧರಾದರು. ಅರ್ಥಗಾರಿಕೆಯಲ್ಲಿ ಸುಧಾರಣೆಯಾಯಿತು. ಹಿರಿಯ ಬಲಿಪ ನಾರಾಯಣ ಭಾಗವತರು (ಈಗಿನ ಬಲಿಪ ನಾರಾಯಣ ಭಾಗವತರ ಅಜ್ಜ) 'ಮಾತಿನಲ್ಲಿ ಸ್ಪಷ್ಟತೆ ಬೇಕು. ರಂಗಸ್ಥಳದಲ್ಲಿ ಹಗುರವಾಗಿ ಮಾತನಾಡಕೂಡದು' ಎಂದು ಎಚ್ಚರಿಸುತ್ತಿದ್ದರು. ಕಲಾವಿದರಿಗೆ ಅರ್ಥ, ಸನ್ನಿವೇಶಗಳ ಪಾಠ ಮಾಡುತ್ತಿದ್ದರು. ಕಲಾವಿದರು ಒಪ್ಪಿಕೊಂಡಿದ್ದರು ಕೂಡಾ. ಕ್ರಮೇಣ ಭಾಗವತರಲ್ಲಿ ಅರ್ಥವನ್ನು ಕೇಳಿಯೇ ರಂಗಪ್ರವೇಶ ಮಾಡುವ ಪರಿಪಾಠ ಬಂತು. ಈಗಿನ ಭಾಗವತರುಗಳಿಗೂ ಕಲಾವಿದರು 'ಕೇಳಿದರೆ' ಹೇಳಲು ಗೊತ್ತು!
              ಶೇಣಿ, ಸಾಮಗರು ರಂಗಪ್ರವೇಶಿಸಿದ ಬಳಿಕ ಅವರ ಜತೆಗಿದ್ದ ಕಲಾವಿದರು ಅನಿವಾರ್ಯವಾಗಿ ಅರ್ಥ ಕಲಿಯಲು ಶುರು ಮಾಡಿದರು. ಅರ್ಥಗಾರಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಭೆಯಿಂದ ಪ್ರತಿಕ್ರಿಯೆ ಬರುತ್ತಿತ್ತು. ಅದನ್ನು ಯಾರೂ ಆಕ್ಷೇಪಿಸುತ್ತಿರಲಿಲ್ಲ. ಅಂದರೆ ಪ್ರೇಕ್ಷಕರಿಗೂ ಪುರಾಣ, ಪ್ರಸಂಗದ ಜ್ಞಾನವಿತ್ತು. ರಂಗವನ್ನು ಪ್ರೇಕ್ಷಕರು ಗಮನಿಸುತ್ತಾ ಇರುತ್ತಾರೆ. ಆದರೆ ಈಗ ನೋಡಿ.. ಎಷ್ಟೊಂದು ಬದಲಾಗಿದೆ. ಕಲಾವಿದ ಪ್ರೇಕ್ಷಕರ ಕುರಿತು ಗಮನವೇ ಕೊಡುವುದಿಲ್ಲ! ಯಾಕೆಂದರೆ ಅವನ ಅಭಿಮಾನಿಗಳು ತೃಪ್ತರಾಗುವಷ್ಟು ಮಾತ್ರ ಅಭಿವ್ಯಕ್ತಿ ಮಾಡುತ್ತಾನೆ! ಇದು ಪ್ರೇಕ್ಷಕರ ಕುರಿತಾದ ಅಸಡ್ಡೆ ಅಲ್ಲ.
              ಈಗ ಪೂರ್ಣಪ್ರಮಾಣದ ಪ್ರೇಕ್ಷಕರು ತೀರಾ ಕಡಿಮೆ. ಹೊಸತಾಗಿ ಆಸಕ್ತಿ ರೂಢಿಸಿಕೊಂಡ ಪ್ರೇಕ್ಷಕರಿದ್ದಾರಲ್ಲಾ, ಅವರ ಅಭಿರುಚಿಗಳೇ ಬೇರೆ.  ಅವರಿಗೆ ಬೇಗ ಆಟ ಮುಗಿಯಬೇಕು. ರಾತ್ರಿಯಿಡೀ ನಿದ್ರೆಗೆಡುವುದು ಸಾಧ್ಯವಿಲ್ಲ. ಜೀವನದಲ್ಲಿ ಬೇರೆ ಬೇರೆ ವ್ಯವಹಾರಗಳಿವೆ. ಒತ್ತಡವಿದೆ. ಕೂಡುಕುಟುಂಬಗಳೆಲ್ಲಾ ಛಿದ್ರವಾದುವು. ಕುಟುಂಬಗಳು ಬೇರೆಯಾದುವು. ಮನೆಯಲ್ಲಿರುವುದು ಗಂಡ, ಹೆಂಡತಿ, ಎರಡು ಮಕ್ಕಳು ಮಾತ್ರ.... ಹೀಗೆ ಕೌಟುಂಬಿಕ ಸಮಸ್ಯೆಗಳು. ಯಕ್ಷಗಾನದ ಆಸಕ್ತಿಗಳಿಗೆ ಈಗಿನ ಜೀವನ ವಿಧಾನವು ಸ್ಪಂದಿಸುವುದಿಲ್ಲ.
(ಚಿತ್ರ : ಮಹೇಶ್ಕೃಷ್ಣ ತೇಜಸ್ವಿ)


Wednesday, January 6, 2016

ಅಯ್ಯಪ್ಪ ಆಖ್ಯಾನಕ್ಕೆ ಅರ್ಧ ಶತಮಾನ

              ಜನವರಿ 14. ಮಕರ ಸಂಕ್ರಮಣ. ಕೇರಳದ ಶಬರಿಮಲೆಯ ಅಯ್ಯಪ್ಪ ಸನ್ನಿಧಾನದಲ್ಲಿ ಪೂಜಾ ವೈಭವ. ಕ್ಷೇತ್ರ ಸಂದರ್ಶನಕ್ಕೆ ಪೂರ್ವಭಾವಿಯಾಗಿ ವೃತಧಾರಿಗಳಾಗುವುದು ಪದ್ಧತಿ. ದೇಶಾದ್ಯಂತ ವೃತಧಾರಿ ಅಯ್ಯಪ್ಪ ಭಕ್ತರು ಜೀವನ ಬದ್ಧತೆಯನ್ನು ರೂಢಿಸಿಕೊಂಡು ಶಬರಿಮಲೆ ಯಾತ್ರೆ ಹೊರಡುತ್ತಾರೆ. ಇದಕ್ಕೆ ಮುನ್ನ ಧಾರ್ಮಿಕ, ಬೌದ್ಧಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಊರಿನಲ್ಲಿ ಜರುಗಿಸುವುದು ವಾಡಿಕೆ.
            ಇಂತಹ ಸಂದರ್ಭಗಳಲ್ಲಿ 'ಶ್ರೀ ಶಬರಿಮಲೆ ಕ್ಷೇತ್ರ ಮಹಾತ್ಮೆ' ಎನ್ನುವ ಯಕ್ಷಗಾನ ಪ್ರಸಂಗವನ್ನು ಯಕ್ಷಗಾನಪ್ರಿಯ ಭಕ್ತರು ವ್ಯವಸ್ಥೆಗೊಳಿಸುತ್ತಾರೆ.  ಹವ್ಯಾಸಿ, ವೃತ್ತಿ ಮೇಳಗಳಲ್ಲಿ ಜನಪ್ರಿಯವಾದ ಯಕ್ಷಗಾನ ಪ್ರಸಂಗವಿದು. ಧರ್ಮ ಸಮನ್ವಯ, ಬಾಂಧವ್ಯಗಳ ಸಂದೇಶ ಸಾರುವ ಈ ಆಖ್ಯಾನಕ್ಕೆ ಶ್ರೀ ಧರ್ಮಸ್ಥಳ ಮೇಳವು 1964-65ರಲ್ಲಿ ಶ್ರೀಕಾರ ಬರೆಯಿತು. ಐವತ್ತು ವರುಷಗಳಲ್ಲಿ ಸಾವಿರಾರು ಪ್ರದರ್ಶನವನ್ನು ಪ್ರಸಂಗ ಅನುಭವಿಸಿದೆ. ಸುಳ್ಯದಲ್ಲಿ ಜರುಗಿದ ಮೊದಲ ಪ್ರದರ್ಶನ, ಜನಸ್ವೀಕೃತಿ, ಕಲಾಸ್ವೀಕೃತಿ ಮತ್ತು ಪ್ರಸಂಗ ವೈಭವವನ್ನು ಹಿರಿಯ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಯವರ ಮಾತಲ್ಲಿ ಕೇಳೋಣ :
            ಕದಿರುದ್ಯಾವರ ವಾಸುದೇವ ನಾಯ್ಕ್ ಎನ್ನುವ ಕವಿ 'ಶಬರಿಮಲೆ ಕ್ಷೇತ್ರ ಮಹಾತ್ಮೆ' ಪ್ರಸಂಗವನ್ನು ರಚಿಸಿದ್ದರು. ಆಗಿನ ಧರ್ಮಾಧಿಕಾರಿ ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರು ಪ್ರಸಂಗವನ್ನು ಓದಿ, ಅಧ್ಯಯನ ಮಾಡಿ ಒಪ್ಪಿಗೆ ನೀಡಿದ್ದರು. ನಾರಾಯಣ ಕಾಮತ್ ಆಗ ಮೇಳದ ವ್ಯವಸ್ಥಾಪಕರಾಗಿದ್ದರು. ಕಡತೋಕ ಮಂಜುನಾಥ ಭಾಗವತರು  ಮತ್ತು  ಪುತ್ತೂರು ನಾರಾಯಣ ಹೆಗ್ಡೆಯವರು ಪ್ರಸಂಗದ ಸನ್ನಿವೇಶ, ಪದ್ಯಗಳು, ವೇಷಭೂಷಣ, ರಂಗನಡೆಗಳ ಕುರಿತು ನಿರ್ದೇಶನ ಮಾಡಿದ್ದರು. ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಮೊದಲ ಪ್ರದರ್ಶನ ಜರುಗಿತ್ತು.
            'ಭಸ್ಮಾಸುರ ಮೋಹಿನಿ' ಪ್ರಸಂಗ ಆಗಲೇ ಚಾಲ್ತಿಯಲ್ಲಿತ್ತು. 'ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ' ಪ್ರಸಂಗವೂ ಮನೆಮಾತಾಗಿತ್ತು. ಹಾಗಾಗಿ ನಾಟಕೀಯ ಮತ್ತು ಸಮಸಾಮಯಿಕ ವ್ಯಕ್ತಿ ಪಾತ್ರಗಳನ್ನು ಚಿತ್ರಿಸಲು ಕಷ್ಟವಾಗಲಿಲ್ಲ. ರಾತ್ರಿ ಒಂದು ಗಂಟೆಯ ತನಕ 'ಭಸ್ಮಾಸುರ ಮೋಹಿನಿ' ಪ್ರಸಂಗ. ನಂತರ 'ಶಬರಿಮಲೆ ಕ್ಷೇತ್ರ ಮಹಾತ್ಮೆ' ಪ್ರಸಂಗ. ಟೆಂಟ್ನೊಳಗೆ ಜರುಗಿದ ಮೊದಲ ಪ್ರದರ್ಶನವೇ ಜಯಭೇರಿ. ಎಲ್ಲಾ ಕಲಾವಿದರ ಶ್ರಮ, ಸಮಾಲೋಚನೆ, ಅಧ್ಯಯನದ ಫಲವಾಗಿ ಪ್ರಸಂಗ ಜನಮನ್ನಣೆ ಪಡೆಯಿತು.
              ಧರ್ಮಸ್ಥಳ ಮೇಳವೆಂದರೆ ನಂ.1 ವೈಭವದ ಮೇಳ. ಭಾಗವತಿಕೆಯಲ್ಲಿ ಕಡತೋಕ ಮಂಜುನಾಥರು ಮತ್ತು ದೇರಣ್ಣ ರೈ. ಪಾತ್ರಧಾರಿಗಳು ಕೂಡಾ ಗಟ್ಟಿಗರೇ. ಕುಂಬಳೆ ಸುಂದರ ರಾವ್ (ಈಶ್ವರ), ಪುತ್ತೂರು ನಾರಾಯಣ ಹೆಗ್ಡೆ (ಭಸ್ಮಾಸುರ), ಪಾತಾಳ ವೆಂಕಟ್ರಮಣ ಭಟ್ (ಮೋಹಿನಿ ಮತ್ತು ಅಯ್ಯಪ್ಪ), ಮೂಡಬಿದ್ರೆ ಮಾಧವ ಶೆಟ್ಟಿ (ಕೇತಕಿ ವರ್ಮ), ಕೋಟ ವೈಕುಂಠ (ಸುಮುಖಿ), ಶ್ರೀಧರ ಭಂಡಾರಿ (ಮಣಿಕಂಠ), ಎಂಪೆಕಟ್ಟೆ ರಾಮಯ್ಯ ರೈ (ವಾವರ), ವಿಟ್ಲ ಗೋಪಾಲಕೃಷ್ಣ ಜೋಶಿ (ಕೇಳು ಪಂಡಿತ), ಚಂದ್ರಗಿರಿ ಅಂಬು (ಶಬರಾಸುರ), ಪಕಳಕುಂಜ ಕೃಷ್ಣ ನಾಯ್ಕ್ (ಕುಂಭ), ಕಡಬ ಸಾಂತಪ್ಪ ಮತ್ತು ಶೀನ ಆಚಾರ್ (ಅಬ್ಬು, ಸೇಕು)... ’ಕೇತಕಿವರ್ಮ ಮತ್ತು ಶಬರಾಸುರ’ ಪಾತ್ರಗಳು ಒಂದು ಸನ್ನಿವೇಶದಲ್ಲಿ ಮಲೆಯಾಳ ಭಾಷೆಯಲ್ಲೇ ಸಂಭಾಷಣೆ ನಡೆಸಿದುದು ನೆನಪಿದೆ. ಇಬ್ಬರು ಕಲಾವಿದರು ಮಲೆಯಾಳ ಭಾಷೆಯನ್ನು ಪ್ರಬುದ್ಧವಾಗಿ ಮಾತನಾಡಬಲ್ಲವರಾಗಿದ್ದರು.
            ಎಂಪೆಕಟ್ಟೆಯವರ 'ವಾವರ' ಪಾತ್ರವು ತುಂಬಾ ಪರಿಣಾಮಕಾರಿಯಾಗಿ ಮೂಡಿ ಬರುತ್ತಿತ್ತು. ಆ ಬಳಿಕ ಅದೇ ದಾರಿಯನ್ನು ಉಳಿದವರೂ ಕ್ರಮಿಸಿದರು. ಆ ಪ್ರಸಂಗದಲ್ಲಿ 'ಮಣಿಕಂಠ' ಪಾತ್ರವನ್ನು ನಾನು ಮಾಡುತ್ತಿದ್ದೆ. ಸಭೆಯ ಮಧ್ಯದಲ್ಲಿ ಹುಲಿಯನ್ನೇರಿ ಪ್ರವೇಶ ಮಾಡುವಾಗ ಖುಷಿಯಿಂದ ಪ್ರೇಕ್ಷಕರು ಎತ್ತಿ ಆಡಿಸಿದ ಆ ಕ್ಷಣಗಳನ್ನು ಹೇಗೆ ಮರೆಯಲಿ? ಮುಸ್ಲಿಂ ಬಂಧುಗಳು ಕೂಡಾ ಪ್ರಸಂಗವನ್ನು ಇಷ್ಟಪಟ್ಟಿದ್ದರು. ಪ್ರಸಂಗದ ಎಲ್ಲಾ ಪದ್ಯಗಳು ಕಂಠಪಾಠವಾಗಿತ್ತು.
            ವಿಟ್ಲ ಜೋಷಿಯವರ 'ಕೇಳುಪಂಡಿತ' ಪಾತ್ರವು ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತು. ಪ್ರಸಂಗದ ಕೊನೆಗೆ ಅಯ್ಯಪ್ಪ ಮತ್ತು ಕೇಳುಪಂಡಿತ ಯುದ್ಧದ ಸಂದರ್ಭದ ಚಿತ್ರಣಕ್ಕೆ ಪ್ರೇಕ್ಷಕರು ನಿಬ್ಬೆರಗಾಗುತ್ತಿದ್ದರು. ರಬ್ಬರ್ ಚೆಂಡನ್ನು ಸ್ವಲ್ಪ ಕೊರೆದು, ಅದರೊಳಗೆ ಕೆಂಪು ಬಣ್ಣದ ನೀರನ್ನು ತುಂಬಿಸಿ, ತನ್ನನ್ನು ತಾನೇ ಕೊಂದುಕೊಳ್ಳುವ ಸಂದರ್ಭದಲ್ಲಿ ಆ ಚೆಂಡನ್ನು ಹಣೆಗೆ ಜೋಷಿಯವರು ಹೊಡೆದುಕೊಳ್ಳುತ್ತಿದ್ದರು. ಚೆಂಡಿನೊಳಗಿದ್ದ ಕೆಂಪು ವರ್ಣವು ಇಡೀ ಶರೀರವನ್ನು ವ್ಯಾಪಿಸಿ ರಕ್ತಮಯವಾದಂತೆ ಭಾಸವಾಗುತ್ತಿತ್ತು.
             ಕೆಲವು ವರುಷಗಳ ಬಳಿಕ ನನ್ನ ತೀರ್ಥರೂಪರ ಸುಬ್ರಹ್ಮಣ್ಯ ಮೇಳ ಸೇರಿದೆ. ಪದ್ಯಗಳು ಹೇಗೂ ಕಂಠಸ್ಥವಾಗಿದ್ದುವಲ್ಲಾ. ಅದನ್ನು ಲಿಪೀಕರಿಸಿದೆ. ಈ ಪ್ರಸಂಗವು ಭಾಗಮಂಡಲದಲ್ಲಿ ಪ್ರದರ್ಶಿತವಾಯಿತು. ಆಗ ನಾರಂಪಾಡಿ ಸುಬ್ಬಯ್ಯ ಶೆಟ್ಟರು ಮೇಳದಲ್ಲಿದ್ದರು. ಸುಮುಖಿಗೆ ದುರ್ಬೋಧೆ ಮಾಡುವ 'ದುರ್ಮುುಖಿ' ಎನ್ನುವ ಪಾತ್ರವನ್ನು ಹೊಸತಾಗಿ ಸೇರ್ಪಡೆ ಮಾಡಲಾಯಿತು. ಕೈಕೆಯಿ-ಮಂಥರೆಯ ಸಂಭಾಷಣೆಯ ಮಾದರಿಯಂತೆ ದೃಶ್ಯ ಸಂಯೋಜನೆ. ಅದು ತುಂಬಾ ಕ್ಲಿಕ್ ಆಯಿತು. ಆಗ ಸುಮುಖಿ ಪಾತ್ರವನ್ನು ಪೊಳಲಿ ಲೋಕಯ್ಯ ಮತ್ತು ದುರ್ಮುುಖಿ ಪಾತ್ರವನ್ನು ಬೆಳಾಲು ಈಶ್ವರ ಆಚಾರಿ ನಿರ್ವಹಿಸಿದ್ದರು. ಆಗ ಮೇಳದಲ್ಲಿ ಕಳಿಯೂರು ನಾರಾಯಣ ಆಚಾರ್ ಭಾಗವತರು.
              ಭಾವೈಕ್ಯದ ಸಂದೇಶವನ್ನು ಸಾರುವ 'ಶ್ರೀ ಶಬರಿಮಲೆ ಕ್ಷೇತ್ರ ಮಹಾತ್ಮೆ' ಪ್ರಸಂಗವು ಸಾರ್ವಕಾಲಿಕವಾಗಿ ಪ್ರದರ್ಶನ ಮಾಡಬಹುದಾದ ಗಟ್ಟಿ ಹೂರಣವನ್ನು ತನ್ನೊಡಲಲ್ಲಿ ತುಂಬಿಕೊಂಡಿದೆ. ಕಳೆದ ಎರಡು ದಶಕದೀಚೆಗೆ ಈ ಪ್ರಸಂಗದ ಪದ್ಯಗಳು ಅಲ್ಲಿಲ್ಲಿ ತಿರುಚಿದಂತೆ ಭಾಸವಾಗುತ್ತಿದೆ. ಕೆಲವು ಮೂಲ ಪದ್ಯಗಳೇ ಮಾಯವಾಗಿವೆ. ಪಾತ್ರಗಳು ಸಂದೇಶ ಕೊಡಲು ಹಿಂಜರಿಯುತ್ತಿವೆ! ಪಾತ್ರ ಸೌಂದರ್ಯ ಅಭಿವ್ಯಕ್ತಿ ಮರೆತು ನಗಿಸುವುದೇ ಉದ್ದೇಶವಾಗಿದೆ. ಪ್ರಸಂಗವು ಐವತ್ತು ವರುಷಗಳನ್ನು ಪೂರೈಸಿದೆ. ಮೊದಲ ಪ್ರದರ್ಶನದಲ್ಲಿ ವೇಷ ಮಾಡಿದ್ದೇನೆಂಬ ಹೆಮ್ಮೆ ಮತ್ತು ಖುಷಿಯಿದೆ.
 (ಚಿತ್ರ : ಸಂದೀಪ್ ಫೊಟೋಗ್ರಫಿ / ಸಾಂದರ್ಭಿಕ ಚಿತ್ರ)