Tuesday, November 12, 2013

ಹೆಮ್ಮೆಯ ಕಲೆಗೊಂದು ಹಬ್ಬ


            ಯಕ್ಷಗಾನ ಶುರುವಾಗುವಾಗ ಸಂಜೆ ಗಂಟೆ ಐದು. ಮುಗಿಯುವಾಗ ಮರುದಿವಸ ಮಧ್ಯಾಹ್ನ ಒಂದು ಮೀರಿತ್ತು! ನಾಡಿನ ಖ್ಯಾತ ಕಲಾವಿದರ ಸಮ್ಮಿಲನ. ಪೈಪೋಟಿಯ ಅಭಿವ್ಯಕ್ತಿ. ತುಳುಕಿದ ಯಕ್ಷಪ್ರೇಮಿಗಳ ಸಂದೋಹ. ತಂತಮ್ಮೊಳಗೆ ವಿಮರ್ಶೆ. ಮಾತುಕತೆ, ಜಿಜ್ಞಾಸೆ. ಉಭಯ ಜಿಲ್ಲೆಗಳೆರಡರಿಂದಲೂ ಪ್ರೋತ್ಸಾಹ. ಸಂಪಾಜೆಯ 'ಯಕ್ಷೊತ್ಸವ' ಸಂಪನ್ನವಾಗಿ ಬಸ್ಸನ್ನೇರುವಾಗ ಯಕ್ಷಗಾನದ್ದೇ ಗುಂಗು. ಛೇ.. ಮುಗಿಯಿತಲ್ಲಾ ಎನ್ನುವ ಪೆಚ್ಚುಮೋರೆ.

              ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸಾರಥ್ಯದಲ್ಲಿ ನಡೆಯುವ ಯಕ್ಷೊತ್ಸವಕ್ಕೆ ಅದೇ ಸಾಟಿ. ವರುಷದಿಂದ ವರುಷಕ್ಕೆ ಏರುಗತಿ. ಕಲಾವಿದರಿಗೂ ಪ್ರತಿಷ್ಠೆ. ಒಂದೆಡೆ ಬೆರೆಯುವ ಅವಕಾಶ. ಕಲಾಭಿಮಾನಿಗಳಿಗೂ ನೆಚ್ಚಿನ ಕಲಾವಿದರನ್ನು ಒಂದೇ ಸೂರಿನಡಿ ನೋಡುವ, ಮಾತನಾಡುವ ಹಪಾಹಪಿ. ಮೂರ್ನಾಲ್ಕು ಪ್ರಸಂಗವಿದ್ದರೂ ಸಮಯವಿಲ್ಲವೆಂದು ಕತೆಯನ್ನು ಕುಗ್ಗಿಸುವ ಜಾಯಮಾನವೇ ಇಲ್ಲ. ಪ್ರಸಂಗದ ಸಾರಸರ್ವಸ್ವದ ಸಾಕಾರ.

              ಹಬ್ಬ ಎಂದಾಕ್ಷಣ ಅಲ್ಲಿ ಗೌಜಿ, ಗಮ್ಮತ್ತು ಇರಲೇಬೇಕಲ್ವಾ. ಸಂತೋಷವೇ ಆಶಯ.  ಮನಸ್ಸಿಗೆ ಮುದ ನೀಡುವ ಹೂರಣ. ಕಲಾವಿದನ ಅರ್ಹತೆಗೆ ತಕ್ಕ ಪಾತ್ರಗಳು. ಕಲಾವಿದನಿಗೂ ಮಾನ, ಸಂಮಾನ. ಮನ ತುಂಬುವ  ಸಂಭಾವನೆ. ಹಬ್ಬವಾದ್ದರಿಂದ ಪ್ರದರ್ಶನದಲ್ಲಿ ಹೆಚ್ಚು  ಗುಣಮಟ್ಟವನ್ನು ನಿರೀಕ್ಷಿಸಲಾಗದು. ನಿರೀಕ್ಷಿಸಬಾರದು. ಅದು ಸಾಧ್ಯವೂ ಇಲ್ಲ. ಆದರೆ ಚೌಕಟ್ಟನ್ನು ಮೀರದ ಎಚ್ಚರ ಸಂಘಟಕರಲ್ಲೂ ಇದೆ, ಕಲಾವಿದರಲ್ಲೂ ಇದೆ. 

             ಯಕ್ಷ ಹಬ್ಬಕ್ಕೆ ಆಗಮಿಸಿದ ಎಲ್ಲರಿಗೂ ಹೊಟ್ಟೆ ಬಿರಿಯುವಷ್ಟು ದಾಸೋಹ. ಆಟ ಮುಗಿದರೂ ಅಡುಗೆ ಶಾಲೆಯ ಬಳಿ ಕ್ಯೂ! ಬಗೆಬಗೆಯ ತಿಂಡಿಗಳು, ಸಿಹಿ, ಕಾಫಿ, ಚಹಾ.  ಬೇಕಾದ್ದನ್ನು ಬೇಕಾದಷ್ಟು ಹೊತ್ತಿಗೆ ಸವಿಯುವ ಅವಕಾಶ ಅದು ಸಂಪಾಜೆಯ ಯಕ್ಷೊತ್ಸವದಲ್ಲಿ ಮಾತ್ರ! ಆಟದ ಸಿಹಿಯೊಂದಿಗೆ ತೆರಳಿದ ಯಕ್ಷಪ್ರೇಕ್ಷಕರು ಅಲ್ಲಿನ ವರ್ತಮಾನವನ್ನು, ಅಡುಗೆ ಮನೆಯ ವಿಶೇಷಗಳನ್ನು ಸ್ನೇಹಿತರಲ್ಲಿ, ಬಂಧುಗಳಲ್ಲಿ ಹೇಳಿಕೊಂಡಷ್ಟೂ ಅಭಿಮಾನ.

             ಪಾತ್ರ ಪರಿಚಯದ ದೊಡ್ಡ ಗಾತ್ರದ ಕರಪತ್ರವನ್ನು ಆಗಾಗ್ಗೆ ತೆರೆದು ರಂಗಕ್ಕೆ ಪ್ರವೇಶವಾಗುವ ವೇಷ, ವೇಷಧಾರಿಗಳ ಪರಿಚಯ ಮಾಡಿಕೊಳ್ಳುತ್ತಿದ್ದುದು ಗಮನಾರ್ಹ. ಇದರಿಂದಾಗಿ ಪ್ರಸಂಗವೊಂದರಲ್ಲಿ ಎಷ್ಟು ಪಾತ್ರಗಳಿವೆ ಎನ್ನುವ ಕನಿಷ್ಠ ಜ್ಞಾನವಾದರೂ ಪ್ರಾಪ್ತವಾಗುವುದು ನೇಪಥ್ಯ ಸತ್ಯ.

              ನೀವಿಂದು ಯಾರನ್ನೇ ಕೇಳಿ, 'ಪುರುಸೊತ್ತಿಲ್ಲಾ, ಮಾರಾಯ್ರೆ' ಎಂಬ ಸಿದ್ಧ ಢಾಳು ಉತ್ತರ ರಾಚುತ್ತದೆ. ಸಂಪಾಜೆಯ ಹಬ್ಬ ಇಂತಹ ಮನಸ್ಸುಗಳನ್ನು ಎರಡು ದಿವಸ ಸೆಳೆದಿದೆ. ತನ್ನಲ್ಲಿ ಸೇರಿಸಿಕೊಂಡಿದೆ. ಬ್ಯುಸಿಗೆ ಉತ್ತರ ನೀಡಿದೆ.  ಬ್ಯುಸಿಯು ಮೊಬೈಲುಗಳ ಬಳಕೆಯ ವೇಗವನ್ನು ಕಡಿಮೆಗೊಳಿಸಿದೆ. ಇದು ಉತ್ರೇಕ್ಷೆಯಲ್ಲ. ಇದು ಫೇಸ್ ಬುಕ್ಕಿನ ಕಾಲ. ಅದಕ್ಕಾಗಿ ಫೋಟೋ ಕ್ಲಿಕ್ಕಿಸುವ, ಮೊಬೈಲ್ ಫೋಟೋ ತೆಗೆವ, ಅದನ್ನು ಪೇಸ್ಬುಕ್ಕಿಗೆ ಏರಿಸಿ, ಖುಷಿ ಪಡುವವರು ತಮ್ಮ ಪಾಡಿಗೆ ತಾವಿದ್ದರು! 

           ಯಕ್ಷಾಭಿಮಾನಿಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಆಸಕ್ತಿ. ಕೆಲವರಿಗೆ ಭಾಗವತಿಕೆ ಇಷ್ಟ. ಹಲವರಿಗೆ ಪುಂಡುವೇಷ ಪ್ರಿಯ. ಸ್ತ್ರೀವೇಷವನ್ನು ಮೆಚ್ಚಿಕೊಳ್ಳುವ ಇನ್ನೊಂದು ವರ್ಗ. ಮಾತುಗಾರಿಕೆಯನ್ನು ಪ್ರೀತಿಸುವ, ಪುಂಡುವೇಷಗಳ ದಿಂಗಿಣವನ್ನು ನೋಡುವ, ದಿಂಗಿಣವನ್ನು ಲೆಕ್ಕ ಹಾಕುವ, ಹಾಸ್ಯ ರಸವನ್ನು ಸವಿಯುವ, ರಾಕ್ಷಸ ಪಾತ್ರಗಳ ಅತಿಮಾನುಷತೆಯನ್ನು ಕಣ್ತುಂಬಿಕೊಳ್ಳವ.. ಹೀಗೆ ವಿವಿಧ ವೈವಿಧ್ಯ ಮನಸ್ಸುಗಳು. ತಂತಮ್ಮ ಅಭಿಮಾನಿ ಕಲಾವಿದರು ಬಂದಾಗ ಕರತಾಡನದ ಬೆಂಬಲ. 

            ಸಂಪಾಜೆಯ ಶಾಲಾ ವಠಾರದಲ್ಲಿ ಸೀಮಿತ ಜಾಗ ವ್ಯವಸ್ಥೆ. ಇದ್ದ ಜಾಗದಲ್ಲಿ ಕುಳಿತುಕೊಳ್ಳುವ ಏರ್ಪಾವು. ಕುಳಿತಷ್ಟೇ ಜನ ನಿಂತೇ ಆಟವನ್ನು ನೋಡಿದ್ದಾರೆ. ಇಲ್ಲಿ ಗೊಣಗಾಟವಿರಲ್ಲ. ಅತೃಪ್ತಿಯಿರಲಿಲ್ಲ. ಆಟವೊಂದೇ ಜಪ-ತಪ. ನಿಜಕ್ಕೂ ಸಂಪಾಜೆ ನೆಲದ ಗುಣ.

             ಪ್ರತಿಷ್ಠಾನವು ಶಿಕ್ಷಣ, ವೈದ್ಯಕೀಯ ಚಿಕಿತ್ಸೆಗಳಿಗೆ ಆರ್ಥಿಕ ನೆರವು ನೀಡುತ್ತದೆ. ಕಲಾವಿದರನ್ನು ಸಂಮಾನಿಸುತ್ತದೆ. ಶೇಣಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಯತಿಗಳನ್ನು ಗೌರವಪೂರ್ವಕವಾಗಿ ಆಹ್ವಾನಿಸಲಾಗುತ್ತದೆ. 'ಸಂಪಾಜೆಯ ಯಕ್ಷೊತ್ಸವದಲ್ಲಿ ಪಡೆದ ಸಂಮಾನವು ಕನ್ನಾಡ ರಾಜ್ಯೋತ್ಸವ ಸಂಮಾನಕ್ಕಿಂತಲೂ ಹಿರಿದು! ತೂಕದಲ್ಲಿ, ಗೌರವದಲ್ಲಿ ಮತ್ತು ಭಾವನೆಗಳಲ್ಲಿ ಎತ್ತರದಲ್ಲಿರುವ ಪ್ರಶಸ್ತಿಯನ್ನು ಪಡೆದ ಹಿರಿಯರೆಷ್ಟೋ? ಸಾಧನೆ, ವಯಸ್ಸು, ಅರ್ಹತೆಗಳ ಆಧಾರದಲ್ಲಿ ಪ್ರಶಸ್ತಿ-ಸಂಮಾನ. 

               ಕಳೆದ ಶನಿವಾರ-ರವಿವಾರ ಯಕ್ಷೊತ್ಸವ ಜರುಗಿತು. ಹಳ್ಳಿಗಳಿಗೆ ಹೋಗಿ. ಅಲ್ಲಿ ಯಕ್ಷೊತ್ಸವದ ಗುಂಗು ಇನ್ನೂ ಆರಿಲ್ಲ. ನಿರಂತರ ಮಾತುಕತೆ, ವಿಮರ್ಶೆ. ತಂತಮ್ಮ ಅಭಿಮಾನಿ ಕಲಾವಿದರ ಅಭಿವ್ಯಕ್ತಿಯನ್ನು ಬಿಟ್ಟು ಕೊಡದ ಬಿಸಿ ಬಿಸಿ ಚರ್ಚೆ. ಯಾಕೆ ಹೇಳಿ? ಅಲ್ಲಿ ಈಗಲೂ ರಸ-ಭಾವ ತುಂಬಿದ ಮನಸ್ಸುಗಳು ಬಡವಾಗಿಲ್ಲ. ಹಾಗಾಗಿ ನಿರಂತರ ಯಕ್ಷಗಾನಗಳಾಗುತ್ತಿವೆ, ನಾಟಕಗಳಾಗುತ್ತಿವೆ. ಹಳ್ಳಿ ಸೊಗಸಿನ ಸಾಂಸ್ಕೃತಿಕ ಕಾರ್ಯಕ್ರಮಗಳಾಗುತ್ತಿವೆ.

      ಹಳ್ಳಿ ಬಿಟ್ಟು ಈಚೆಗೆ ಬನ್ನಿ, ಶುರುವಾಯಿತು, ಒತ್ತಡದ ಬದುಕು, ಮೊಬೈಲಿನ ರಿಂಗಣ., ಮಿಂಚಂಚೆಗಳ ಅಬ್ಬರ. ಜಾಲತಾಣಗಳ ಅಟ್ಟಹಾಸ!ಒತ್ತಡದ ಬದುಕಿಗೆ ಬೇಕು ಯಕ್ಷೊತ್ಸವದಂತಹ ಟಾನಿಕ್. ಯಕ್ಷಗಾನ ಕ್ಷೇತ್ರದಲ್ಲೇ ಅಪೂರ್ವವಾದ ಕಲಾಪವನ್ನು ನಡೆಸಿಕೊಡುತ್ತಿರುವ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನಕ್ಕೆ ಅಭಿನಂದನೆ.