Saturday, December 4, 2010

'ಮಹಿಳಾ ಯಕ್ಷಧ್ವನಿ'ಗೆ ಐದರ ಸಡಗರ

ಪುತ್ತೂರು ಬೊಳುವಾರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘಕ್ಕೆ ಈಗ ಐದರ ಸಡಗರ. ಇಪ್ಪತ್ತೊಂದು ಮಂದಿಯ ತಂಡವು ಕನ್ನಾಡಿನಾದ್ಯಂತ ಎಂಭತ್ತಕ್ಕೂ ಮಿಕ್ಕಿ ತಾಳಮದ್ದಳೆಗಳನ್ನು ಪ್ರಸ್ತುತಪಡಿಸಿದೆ. ಒಂದು ಕಾಯಕ್ರಮದಿಂದ ಮತ್ತೊಂದಕ್ಕೆ ಗುಣಮಟ್ಟದಲ್ಲಿ 'ಬೆಳವಣಿಗೆ'ಯನ್ನು ತೋರಿಸುತ್ತಿದ್ದು, ಸಾಕಷ್ಟು ಪುರಸ್ಕಾರಗಳನ್ನು ಪಡೆದಿದ್ದಾರೆ. ತಾಳಮದ್ದಳೆಯೇ ಉಪಾಧಿಯಾಗಿ ಮನೆ-ಮನೆಗಳಲ್ಲಿ ಆರೋಗ್ಯಕರ ಬಾಂಧವ್ಯ ವೃದ್ಧಿಸಿದೆ.
’ತಾಯಿ ಮೊದಲ ಗುರು. ಮನೆಯೇ ಪಾಠಶಾಲೆ.’ ಗುರುವಿನ ಸ್ಥಾನದಲ್ಲಿರುವ ತಾಯಿ ಬದುಕಿನ ಸುಭಗತೆಯನ್ನು ರೂಢಿಸಿಕೊಳ್ಳದಿದ್ದರೆ ಮಣ್ಣಿನ ಮುದ್ದೆಯಂತಿರುವ ಮಗುವಿಗೆ ರೂಪವನ್ನು ಹೇಗೆ ಕೊಟ್ಟಾಳು? ವಾಹಿನಿಯೊಂದರಲ್ಲಿ ಮಾತಿನ ಮಧ್ಯೆ ಹಾದು ಹೋದ ಸೊಲ್ಲಿದು. ಪುತ್ತೂರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ
ಕಲಾ ಸಂಘದ ತಾಳಮದ್ದಳೆಯನ್ನು ಆಲಿಸಿದಾಗ, ಮನನಿಸಿಕೊಂಡಾಗ ಆಗಾಗ ಮಿಂಚಿ ಮರೆಯಾಗುವ ಮಾತಿದು.

ಈ ಸುಭಗತೆಯ ರೂಢನೆ ಹೇಗೆ? ಕೆಲವರಿಗಿದು ಜನ್ಮದತ್ತ. ಮತ್ತೆ ಕೆಲವರಿಗೆ ಸ್ವ-ರೂಢಿ. ಇನ್ನೂ ಕೆಲವರಿಗೆ ಸ್ವ-ಆರ್ಜನೆ. ಒಟ್ಟೂ ಫಲಿತಾಂಶ ಮನಕ್ಕೆ-ಮನೆಗೆ-ಮಗುವಿಗೆ. ಇದು ಕಾಲದ ಅನಿವಾರ್ಯತೆ.

ಕಾಲದ ವೇಗಕ್ಕೆ ಯಕ್ಷಗಾನದಂತಹ ಸಮೃದ್ಧ ಕಲೆಗಳು ಬದುಕಿನಲ್ಲಿ ಕಳೆದುಹೋಗುತ್ತಿದೆ. ಒಂದು ಕಾಲಮಾನದಲ್ಲಿ ಕಲೆಗಳು ಬದುಕಿಗಂಟದಿದ್ದರೆ, ಮತ್ತೆಂದೂ ಅವು ಹತ್ತಿರ ಸುಳಿಯವು. ಅವು ಸುಳಿಯದಿದ್ದರೆ ಬದುಕಿನಲ್ಲಿ ಸುಭಗತೆ ಎಲ್ಲಿಂದ?

ಈ ಅಜ್ಞಾತ ಸತ್ಯ ಹೇಳುವುದಕ್ಕೆ ಬಾರದು, ಬರೆಯುವುದಕ್ಕೆ ಬಾರದು. ಅನುಭವಿಸಬೇಕು, ಅನುಭವಿಸಲೇಬೇಕು. ತಾಯಿ ಯಕ್ಷಗಾನ ಆರ್ಥವನ್ನು ಹೇಳಿದಾಗ ಮಗುವಿನೊಳಗೆ ಅವ್ಯಕ್ತವಾಗಿ ಈ ಯಕ್ಷಗುಂಗಿನ ಬೀಜ ಸೇರಿಬಿಡುತ್ತದೆ, ಮೊಳಕೆಯೊಡೆಯುತ್ತದೆ. ತಾಯಿಯ ಪೋಷಣೆಯಂತೆ ಮುಂದದು ಚಿಗುರೊಡೆಯುತ್ತದೆ. ಒಮ್ಮೆ ಚಿಗುರೊಡೆದರೆ ಮತ್ತೆ ಪೋಷಣೆ ಮಾತ್ರ ಸಾಕು.

ಪುತ್ತೂರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ತಾಳಮದ್ದಳೆ ಈ ಹಿನ್ನೆಲೆಯಲ್ಲಿ ನೋಡಿದಾಗ ಅದಕ್ಕೆ ಎತ್ತರದ ಸ್ಥಾನ. ಈಗದಕ್ಕೆ ಪಂಚವರ್ಷೀಯ ಸಂಭ್ರಮ. ಐದು ವರುಷ ಪೂರ್ತಿ ಹೂವಿನದ್ದೇ ದಾರಿ. ತಾಳಮದ್ದಳೆಯ ಕುರಿತು ವಿಮರ್ಶೆಗಳು ನಡೆಯುತ್ತಿವೆ. 'ನಾನೂ ಅರ್ಥಧಾರಿಯಾಗಬೇಕು' ಎಂಬ ತುಡಿತ ಅಡುಗೆ ಮನೆಯಲ್ಲಿ ಮೊಳಕೆಯೊಡೆಯುತ್ತಿದೆ. ಇದೊಂದು ಉತ್ತಮ ಬೆಳವಣಿಗೆ. ಚೆಂಡೆ-ಮದ್ದಳೆಯ ಸದ್ದು ಹರಟೆಯಾಗುವವರೂ(!) ಕೂಡಾ, 'ಮಹಿಳೆಯರ ತಾಳಮದ್ದಳೆಯಲ್ವಾ, ಒಮ್ಮೆ ಕೇಳೋಣ' ಅನ್ನುವವರೂ ಇಲ್ಲದಿಲ್ಲ
ಮಹಿಳೆಯರ ತಂಡ ರೂಪೀಕರಣದ ರೂವಾರಿ ಹಿರಿಯ ಕಲಾವಿದ ಬರೆಪ್ಪಾಡಿ ಅನಂತಕೃಷ್ಣ ಭಟ್. ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಮತ್ತು ಕಾರ್ಯದರ್ಶಿ ಟಿ.ರಂಗನಾಥ್ ರಾವ್ ವೇಗದ ಚಾಲನೆ ನೀಡಿದರು.

ಇಲ್ಲಿ ಕಲಾವಿದೆಯರು ಉರು ಹೊಡೆದು 'ಗಿಳಿಪಾಠ' ಒಪ್ಪಿಸುವುದಲ್ಲ. ತಮಗೆ ನೀಡಿದ ಕರಡು ಅರ್ಥಗಳಿಗೆ, ತಮ್ಮ ಅಧ್ಯಯನದ ಹರಹು ಸೇರಿಸಿ ಪ್ರಸ್ತುತಿ. ಹಾಗಾಗಿ ಎರಡು ಗಂಟೆಗಳಿಗೆ ಸೀಮಿತವಾಗುತ್ತಿದ್ದ ಪ್ರದರ್ಶನವು ಮೂರೂ-ಮೂರುವರೆ ತನಕ ಲಂಬಿಸುವ ತಾಕತ್ತು ಮಹಿಳಾ ಅರ್ಥಧಾರಿಗಳಿಗಿದೆ.

ಬಹುತೇಕ ಎಲ್ಲಾ ಕಲಾವಿದೆಯರಲ್ಲಿ ಪ್ರಸಂಗ ಪುಸ್ತಕಗಳು, ಆಕರ ಗ್ರಂಥಗಳು, ಪೌರಾಣಿಕ ಪುಸ್ತಕಗಳು, ವೈಚಾರಿಕ ಪುಸ್ತಕಗಳ ಸಂಗ್ರಹದ ಆಸಕ್ತಿ ಎದ್ದು ಕಾಣುತ್ತಿದೆ. ಓದುವ ಪ್ರವೃತ್ತಿ ಆರಂಭವಾಗಿದೆ. ತಾಯಿ ಓದುತ್ತಿದ್ದಾಗ, ಮಕ್ಕಳು ಓದದೇ ಇರುತ್ತಾರೆಯೇ? ಒಂದಿಬ್ಬರು ಓದಲು ಶುರು ಮಾಡಿದಾಗ ಮಿಕ್ಕ ಸದಸ್ಯರು ಟಿವಿ ಆಫ್ ಮಾಡದೆ ಇದ್ದಾರೆಯೇ? ಒಮ್ಮೆ ಟಿವಿ ಆಫ್ ಆದರೆ ಬದುಕಿನ ಸುಭಗತೆಯ ಸ್ವಿಚ್ 'ಅನ್' ಆದಂತೆ!

'ಪಂಚವಟಿ' ಪ್ರಥಮ ಪ್ರಯೋಗದ ಪ್ರಸಂಗ. ಶ್ರೀಕೃಷ್ಣ ರಾಯಭಾರ, ಸುಧನ್ವ, ಪಟ್ಟಾಭಿಷೇಕ, ಚೂಡಾಮಣಿ, ಅತಿಕಾಯ, ಸುದರ್ಶನ.. ಹೀಗೆ ಹನ್ನೆರಡಕ್ಕೂ ಮಿಕ್ಕಿ ಪ್ರಸಂಗಗಳು. ಕನ್ನಾಡಿನಾದ್ಯಂತ ಸಂಚರಿಸಿದ ತಂಡ ಯಶಸ್ವೀ ಪ್ರದರ್ಶನ ನೀಡಿದೆ. 'ನಿಜಕ್ಕೂ ಆಶ್ಚರ್ಯವಾಗಿದೆ. ತಮ್ಮ ಕೋಮಲ ಸ್ವರವನ್ನು ಹಿಗ್ಗಾ-ಮುಗ್ಗಾ ದುಡಿಸಿಕೊಳ್ಳುವ ಪರಿ ಅನನ್ಯ' - ಧಾರವಾಡದಲ್ಲಿ ತಂಡದ ಪ್ರದರ್ಶನವನ್ನು ವೀಕ್ಷಿಸಿದ ಕಲಾವಿದ ಡಾ.ಪ್ರಕಾಶ್ ಭಟ್ ಉದ್ಘರಿಸಿದ ರೀತಿ.

ಪ್ರೇಮಲತಾ ಟಿ.ರಾವ್, ಶೋಭಿತಾ ಸತೀಶ್, ಶುಭಾ ಜೆ.ಸಿ.ಅಡಿಗ, ಪದ್ಮಾ ಕೆ.ಆರ್.ಆಚಾರ್ಯ, ವೀಣಾ ಕೊಳತ್ತಾಯ, ಉಮಾ ಡಿ. ಪ್ರಸನ್ನ.. ಹೀಗೆ ತಂಡದಲ್ಲಿ ಇಪ್ಪತ್ತೊಂದು ಮಂದಿ ಸದಸ್ಯರು. ಪ್ರಸಂಗ ಹೊಂದಿಕೊಂಡು ಕಲಾವಿದೆಯರ ಆಯ್ಕೆ. ಒಂದು ಪ್ರದರ್ಶನದಲ್ಲಿ ಒಬ್ಬರು ಕಲಾವಿದೆ ಗೈರು ಹಾಜರಾದರೆ ಇನ್ನೊಬ್ಬರು ಆ ಪಾತ್ರಕ್ಕೆ ಸಿದ್ಧರಾಗುವಷ್ಟು ಪಕ್ವತೆ. 'ಪಾತ್ರ ಚೆನ್ನಾಗಿ ಮೇಳೈಸಲಿದೆ.