Saturday, December 26, 2015

ಅಮೆರಿಕಾದಲ್ಲಿ ತಾಳಮದ್ದಳೆಯ ಹಸಿವು


             ಯಕ್ಷಗಾನದ ವಿದ್ವಾಂಸ, ವಿಮರ್ಶಕ, ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಅಮೇರಿಕಾ ದೇಶಕ್ಕೆ ಹೋಗಿದ್ದಾರೆ, ಮರಳಿದ್ದಾರೆ! ಇದರಲ್ಲೇನು ವಿಶೇಷ?
            ಎರಡು ತಿಂಗಳ ಖಾಸಗಿ ಪ್ರವಾಸ. ಸಮಯ, ಸಂದರ್ಭ ಸಿಕ್ಕರೆ ಸಾಹಿತ್ಯ ಉಪನ್ಯಾಸಗಳ ಒಲವಿತ್ತು. ಅಮೇರಿಕಾ ತಲಪುವಾಗ ಹತ್ತು ತಾಳಮದ್ದಳೆಗಳ ಆಯೋಜನೆಯು ಜೋಶಿಯವರಿಗೆ ಆಶ್ಚರ್ಯ ಮೂಡಿಸಿತ್ತು. ಕರಾವಳಿ ಮೂಲದ ಟೆಕ್ಸಾಸ್ನಲ್ಲಿರುವ ಪಣಂಬೂರು ವಾಸುದೇವ ಐತಾಳರ ಕ್ಷಿಪ್ರ ಆಯೋಜನೆಯ ಕಾರ್ಯಕ್ರಮ ಸರಣಿ. ಲೇಖಕ ಶ್ರೀವತ್ಸ ಜೋಷಿ, ಬಳಗದ ಹೆಗಲೆಣೆ. ಮಿಂಚಂಚೆ ಸಂಪರ್ಕದ ವ್ಯವಸ್ಥಿತ ಯಕ್ಷ ಪ್ಯಾಕೇಜ್ಗಳು!
              ತಾಳಮದ್ದಳೆ ಅಂದಾಗ ಇಲ್ಲಿನ ವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳಬೇಡಿ. ಕಡಲಾಚೆಯ ಸಂಪನ್ಮೂಲಗಳು ಮತ್ತು ತಂತ್ರಜ್ಞಾನಗಳ ಪೂರ್ಣ ಬಳಕೆ. ಯೂಟ್ಯೂಬಿನಲ್ಲಿ ಲಭ್ಯವಾಗುವ ಗುಣಮಟ್ಟದ ಕೂಟಾಟದ ಕ್ಲಿಪ್ಪಿಂಗ್ಸ್ಗಳನ್ನು  ಕಂಪ್ಯೂಗೆ ಇಳಿಸಿಕೊಂಡು ಪ್ರಸಂಗ ಪದ್ಯಗಳ ಆಯ್ಕೆ. ಬೇಕಾದ ಪದ್ಯಗಳನ್ನು ಪ್ರತ್ಯೇಕವಾಗಿ ಮುದ್ರಿಸಿಕೊಂಡು ಜೋಡಣೆ. ಇದನ್ನು ನಿರ್ವಹಿಸಲೆಂದೇ ಒಬ್ಬ ನಿರ್ವಾಹಕ. ಅರ್ಥ ಮುಗಿದಾಗ ಗುಂಡಿ ಒತ್ತಿದರಾಯಿತು, 'ಇ-ಭಾಗವತಿಕೆ'ಯ ನಿರಾಕಾರ ಸೊಗಸಿನ ಸಾಕಾರ. ಎರಡು ಎರಡೂವರೆ ಗಂಟೆಗಳಿಗೆ ಹೊಂದುವಂತೆ 'ಭೀಷ್ಮ ಪರ್ವ' ಮತ್ತು 'ವಾಲಿವಧೆ' ಪ್ರಸಂಗಗಳು. 
             ಡಾ.ಜೋಶಿಯವರಿಗೆ ಭೀಷ್ಮ, ವಾಲಿ ಪಾತ್ರಗಳು. ಮಿಕ್ಕಂತೆ ಅರ್ಥಗಾರಿಕೆಯ ಸ್ಪರ್ಶವುಳ್ಳ  ಸ್ಥಳೀಯರು! ಒಂದೆಡೆ ವಾಲಿವಧೆ ಪ್ರಸಂಗದಲ್ಲಿ 'ತಾರೆ'ಯ ಅರ್ಥವನ್ನು ಮಹಿಳೆಯೋರ್ವರು ನಿರ್ವಹಿಸಿದ್ದರು. ಬಾಲ್ಯದಲ್ಲಿ ಯಕ್ಷಗಾನದೊಂದಿಗೆ ಬೆಳೆದು ಉದ್ಯೋಗ ನಿಮಿತ್ತ ವಿದೇಶದಲ್ಲಿರುವ ಬಂಧುಗಳು ಪ್ರೇಕ್ಷಕರು. ಸರಣಿ ನಿಗದಿ ಆಗುತ್ತಿರುವಾಗಲೇ ಟೊರೆಂಟೋದಲ್ಲಿರುವ ಯಕ್ಷಗಾನದ ಮೇಳವು ಜತೆ ಸೇರಿತು. "ಬಹುಶಃ ಇದು ವಿಶ್ವದಲ್ಲಿಯೇ ಪ್ರಥಮವೇನೋ. ನನಗೂ ಅಲ್ಲೊಂದು ಮೇಳವಿದೆ ಅಂತ ಗೊತ್ತಿರಲಿಲ್ಲ. ವಿದೇಶದಲ್ಲಿ ಮೇಳ ಕಟ್ಟಿದ ನವೀನ ಹೆಗಡೆ, ರಘು ಕಟ್ಟಿನಕೆರೆ ಇವರ ಕೆಲಸ ಶ್ಲಾಘನೀಯ" ಎನ್ನುತ್ತಾರೆ ಡಾ.ಜೋಶಿ.
              ವಾಶಿಂಗ್ಟನ್ನ ಆಲ್ಬನಿನ ಭಕ್ತಾಂಜನೇಯ ದೇವಸ್ಥಾನದಲ್ಲಿ ಪೂರ್ಣ ಪ್ರಮಾಣದ - ಹಿಮ್ಮೇಳ ಸಹಿತ -  ತಾಳಮದ್ದಳೆ. ಪ್ರಸಂಗ 'ಭರತಾಗಮನ.' ಜೋಶಿಯವರ ರಾಮ. ದೇವಳದ ಮುಖ್ಯ ಅರ್ಚಕ, ವಿದ್ವಾನ್ ಬಾಲಕೃಷ್ಣ ಭಟ್ಟರ 'ಭರತ'ನ ಪಾತ್ರ. ಯಾರಿಗೆಲ್ಲಾ ಸರಣಿಗೆ ಬರಲಾಗಲಿಲ್ಲವೋ ಅವರೆಲ್ಲಾ ಜೋಶಿಯವರನ್ನು ಖಾಸಗಿಯಾಗಿ ಮನೆಗೆ ಆಹ್ವಾನಿಸುತ್ತಿದ್ದರು. ನನ್ನ ಶಾಲಾ ಸಹಪಾಠಿಗಳ ಕುಟುಂಬ, ಅವರ ಸಂಬಂಧಿಕರು, ಮಗಳಂದಿರ ಆಪ್ತ ವರ್ತುುಲ... ಹೀಗೆ ಪ್ರತಿ ದಿನ ಒಂದಲ್ಲ ಒಂದು ಮನೆಯಲ್ಲಿ ತುಂಬು ಆತಿಥ್ಯ. ಆವರಿಸಿಕೊಳ್ಳುವ ಆಪ್ತತೆ. ಬಹುತೇಕ ಮನೆಗಳಲ್ಲಿ ಕನ್ನಡದ ಸಂಸ್ಕೃತಿ ಜೀವಂತವಾಗಿದೆ, ಎನ್ನುತ್ತಾ ವಿದೇಶ ನೆಲದ ಅನುಭವವನ್ನು ಜೋಶಿ ಕಟ್ಟಿಕೊಡುತ್ತಾರೆ, ನಾವು ಇಲ್ಲಿ ಕುಳಿತು ವಿದೇಶವನ್ನು ಹಳಿಯುತ್ತೇವೆ. ನಾವು ಏನನ್ನು, ಎಷ್ಟನ್ನು ತಿಳಿದುಕೊಂಡಿದ್ದೇವೋ ಅದಕ್ಕಿಂತ ಭಿನ್ನವಾದ ಬದುಕು ಅಲ್ಲಿದೆ.
                ನಮ್ಮೂರಿನಲ್ಲಿ ಯಾವುದೇ ಕಾರ್ಯಕ್ರಮವಿರಲಿ, ಧ್ವನಿವರ್ಧಕ ವ್ಯವಸ್ಥೆ ಭೀಕರ! ಹೈ ವಾಲ್ಯೂಮ್ನಿಂದ ಬಹುತೇಕರ ಕಿವಿ ಸ್ತಬ್ಧವಾಗಿದೆ! ಈ ಹಿನ್ನೆಲೆಯಲ್ಲಿ ಅಲ್ಲಿನ ಧ್ವನಿವರ್ಧಕದ ವ್ಯವಸ್ಥೆ ಶ್ಲಾಘನೀಯ. ಹೆಚ್ಚಿನವರು ಇಲೆಕ್ಟ್ರಾನಿಕ್ ಇಂಜಿನಿಯರ್ಗಳು. ಅವರಿಗೆ ಧ್ವನಿವರ್ಧಕದ ಬಳಕೆಯ ಜ್ಞಾನವಿದೆ. ಅದರ ಅಳವಡಿಕೆ, ನಿರ್ವಹಣೆಯ ವಿಧಾನ, ವಿಕಾರವಾಗಿ ಬೊಬ್ಬಿಡದ 'ಕೆಣಿ'ಗಳನ್ನು ನಾವು ಅಲ್ಲಿಂದ ಕಲಿಯಬೇಕಾದುದು ಬೇಕಾದಷ್ಟಿದೆ. ಪ್ರೇಕ್ಷಕರ ಶ್ರವಣ ಶಕ್ತಿಯನ್ನು ಕಾರ್ಯಕ್ರಮಗಳು ಕಸಿದುಕೊಳ್ಳುವುದಿಲ್ಲ!
                ತಾಳಮದ್ದಳೆಯನ್ನು ಹೇಗೆ ಅನುಭವಿಸುತ್ತಾರೆ? ಜೋಶಿ ಹೇಳುತ್ತಾರೆ,  ಏನಿಲ್ಲವೆಂದರೂ ಐವತ್ತರಿಂದ ನೂರು ಮಂದಿಯ ಉಪಸ್ಥಿತಿ ಖಾಯಂ. ಅವರಿಗೆ ತಾಳಮದ್ದಳೆಯನ್ನು ಕೇಳಲು ಹಸಿವಿದೆ. ಶೈಕ್ಷಣಿಕವಾಗಿ ಗಟ್ಟಿಯಾದ ವಿಮರ್ಶಕರು. ಕೊನೆಗೆ ಪ್ರಶ್ನೋತ್ತರ. ತಾಳಮದ್ದಳೆಯನ್ನು ಕೇವಲ ಕೌತುಕವಾಗಿ ನೋಡುವುದಲ್ಲ. ಅದನ್ನು ಅನುಭವಿಸುತ್ತಾರೆ. ಅಲ್ಲಿ ರಸಿಕತೆ ಪ್ರೌಢವಾಗಿದೆ. ಮಾತುಮಾತಿಗೆ ನಗುವುದು, ಚಪ್ಪಾಳೆಗಳು ಇಲ್ಲವೇ ಇಲ್ಲ! ಒಂದು ಕಲೆಯಾಗಿ ಸ್ವೀಕರಿಸಿದ್ದಾರೆ.
ಆಗಸ್ಟ್ 29 ರಿಂದ ಸೆಪ್ಟೆಂಬರ್19ರ ತನಕ ಸೈಂಟ್ ಲೂವಿಸ್, ಚಿಕಾಗೋ, ಮೇರಿಲ್ಯಾಂಡ್, ಸನ್ಜೋಸ್, ಬರ್ಕ್ಲೀ, ಹೂಸ್ಟನ್, ಮೈಮಿ.. ಗಳಲ್ಲಿ ತಾಳಮದ್ದಳೆ. ಕಾರ್ಯಕ್ರಮದ ಆರಂಭಕ್ಕೆ ಔಚಿತ್ಯದ ಕುರಿತು ಸಂಘಟಕರಿಂದ ಮಾತು. ನಂತರ ಕೂಟ. ಕೊನೆಗೆ 'ನೀವು ಊರಿಗೆ ಮರಳಿದಾಗ ಯಕ್ಷಗಾನಕ್ಕೆ ನೀಡಬಹುದಾದ ಪ್ರೋತ್ಸಾಹ'ದ ಟಿಪ್ಗಳ ಪ್ರಸ್ತುತಿ. ವ್ಯವಸ್ಥಿತವಾದ ಆಯೋಜನೆ.
                ಕೂಟಗಳಲ್ಲದೆ ಮಂಕುತಿಮ್ಮನ ಕಗ್ಗ, ಗಣೇಶ ಮತ್ತು ಗುರು.. ಈ ವಿಚಾರಗಳ ಉಪನ್ಯಾಸ. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಕಾರ್ಯಕ್ರಮವನ್ನು ಸಂಸ್ಕೃತ ವಿದ್ವಾಂಸ ಪ್ರೊ.ರಾಬರ್ಫ಼್ ಗೋಲ್ಡ್ಮನ್ ಸಂಘಟಿಸಿದ್ದರು. 1970ರ ಸುಮಾರಿಗೆ ಇದೇ ವಿವಿಯ ವಿದ್ಯಾರ್ಥಿನಿ ಮಾರ್ತಾ ಆಸ್ಟನ್ ಸಿಕೋರಾ ಕನ್ನಾಡಿಗೆ ಬಂದಿದ್ದರು. ಯಕ್ಷಗಾನದ ವಿಶೇಷ ಅಧ್ಯಯನ ಮಾಡಿದ್ದು ಗಮನೀಯ. ಸರಣಿಯ ಕೆಲವು ಕಾರ್ಯಕ್ರಮಗಳಲ್ಲಿ ಮಾರ್ತಾ ಉಪಸ್ಥಿತರಿದ್ದುದು ಗಮನಾರ್ಹ.
ಒಟ್ಟೂ ಸರಣಿ ಕೂಟದ ಪುಳಕವನ್ನು ಹೊತ್ತು ತಂದ ಜೋಶಿ ಹೇಳುವುದು ಹೀಗೆ : "ಹತ್ತೋ ಇಪ್ಪತ್ತು ವರುಷದ ಹಿಂದೆ ಹೋಗಬೇಕಿತ್ತು. ಯಕ್ಷಗಾನ, ಕರಾವಳಿ ಮತ್ತು ಅಲ್ಲಿನ ಮನಸ್ಸುಗಳನ್ನು ಒಂದುಗೂಡಿಸುವ ಚಿಕ್ಕ ಹೆಜ್ಜೆಯೂರಬಹುದಿತ್ತು ಅನ್ನಿಸುತ್ತದೆ. ಏನು ಮಾಡಲಿ, ಕಾಲ ಮಿಂಚಿಹೋಯಿತು. ಒಂದೆಡೆ ಸಮೃದ್ಧ ಕಲಾ ಮಜಲು, ಇನ್ನೊಂದೆಡೆ ಅದು ಬೇಕೆಂಬ ಹಪಾಹಪಿ - ಈ ಎರಡೂ ದಡಗಳನ್ನು ಸೇರಿಸಬಹುದಿತ್ತು!"
                ಮಂಗಳೂರು, ಮೂಡುಬಿದಿರೆ, ಕಾರ್ಕಳ.. ಮೊದಲಾದ ಪ್ರದೇಶಗಳಲ್ಲಿದ್ದ ಈಗ ಅಲ್ಲಿನವರಾದ ಆಪ್ತರ, ಬಂಧುಗಳ ಭೇಟಿ. ಚಿಕಾಗೋದಲ್ಲಿ ಹಿರಿಮಗಳು ಶ್ವೇತಾ ಸೂರ್ಯನಾರಾಯಣ,  ವರ್ಜೀನಿಯಾದಲ್ಲಿ ಕಿರಿ ಮಗಳು ಸ್ವಾತಿ ಕಾರ್ತಿಕ್ ಕುಟುಂಬ ವಾಸ್ತವ್ಯವಿದೆ. ಅವರೊಂದಿಗೆ ಕಳೆಯಲು ಜೋಶಿ ಮೊದಲ ಬಾರಿಗೆ ಅಮೇರಿಕಾಕ್ಕೆ ಹೋಗಿದ್ದರು. ಆದರೆ ಯಕ್ಷಗಾನವು ಅಲ್ಲೂ ಅವರನ್ನು ಕಾಲಯಾಪನೆಗೆ ಬಿಟ್ಟಿಲ್ಲ!  "ನನ್ನ ನಿರೀಕ್ಷೆಗೂ ಮೀರಿದ ಗೌರವ, ಊಹಿಸದ ರೀತಿಯ ಸ್ಪಂದನ. ಇದೆಲ್ಲ ಬೆಳೆದು ನಿಂತ ಯಕ್ಷಗಾನ ಕಲೆಗೆ ಸಂದ ಮಾನ. ನಾನು ಅದರ ಪ್ರತಿನಿಧಿಯಷ್ಟೇ. ಕಲೆಯನ್ನು ಪ್ರೀತಿಸುವ ಅಪ್ಪಟ ಸಹೃದಯರ ಋಣವನ್ನು ಹೇಗೆ ತೀರಿಸಲಿ," ಎನ್ನುವಾಗ ಭಾವುಕರಾಗುತ್ತಾರೆ.
              ಪ್ರವಾಸ ಮುಗಿಸಿ ಮರಳಿದಾಗ ಕಂಪ್ಯೂನಲ್ಲಿ ರಾಶಿ ರಾಶಿ ಮಿಂಚಂಚೆಗಳು. ಕಾರ್ಯಕ್ರಮದ ಹಿಮ್ಮಾಹಿತಿಗಳು. "ನನಗೊಂದು ಹೊಸ ಅನುಭವ. ವಿದೇಶಿ ಬಂಧುಗಳ ಕೃತಜ್ಞತೆಯ ಭಾರವನ್ನು ಹೊತ್ತು ದೇಶಕ್ಕೆ ಮರಳಿದ್ದೇನೆ. ಇನ್ನೊಂದೆರಡು ತಿಂಗಳು ಇರುತ್ತಿದ್ದರೆ ಕೂಟಗಳ, ಸಂಪರ್ಕಗಳ ಸಂಖ್ಯೆ ಹಿರಿದಾಗುತ್ತಿತ್ತು," ಎನ್ನುತ್ತಾ ಮಾತುಕತೆಗೆ ಮುಕ್ತಾಯ ಹಾಡುತ್ತಾರೆ, "ಆಟವೇ ಮಾತ್ರ ಒಂದು ಫಾರ್ಮ್ ಅಲ್ಲ, ತಾಳಮದ್ದಳೆಯೂ ಒಂದು ಫಾರ್ಮ್ ಎಂದು ತಿಳಿಸಲು ಈ ಟೂರ್ನಿಂದ ಸಾಧ್ಯವಾಯಿತು."

(ಪ್ರಜಾವಾಣಿ-ದಧಿಗಿಣತೋ ಅಂಕಣ/೨೬-೧೨-೨೦೧೫)


Monday, December 21, 2015

ಸೊಂಟತ್ರಾಣದ ವೇಗವು ಪಾತ್ರದ ವೇಗವಲ್ಲ!

             ಕಾಲಮಿತಿಯ ಪ್ರದರ್ಶನಗಳಿಗೆ ಮನಸ್ಸು ಒಗ್ಗಿಹೋಗಿದೆ. ಮೂನಾಲ್ಕು ಗಂಟೆಗಳ ಪ್ರಸಂಗಗಳು ಒಂದೂವರೆ ಗಂಟೆಗೆ ಇಳಿದಿವೆ. ಪಾತ್ರ, ಪ್ರಸಂಗಗಳು ವೇಗವನ್ನು ಹೆಚ್ಚಿಸಿಕೊಂಡಿವೆ. ನೋಡುಗನೂ ವೇಗಕ್ಕೆ ಟ್ಯೂನ್ ಆಗುತ್ತಾ ಇದ್ದಾನೆ! ಕಣ್ಣುರೆಪ್ಪೆ ಮುಚ್ಚಿ ಮುಗಿಯುವುದರೊಳಗೆ ಸನ್ನಿವೇಶಗಳು ಹಾರಿ ಬಿಡುತ್ತವೆ. ಪಾತ್ರದ ರಸಗಳು, ಅದಕ್ಕೆ ತಕ್ಕುದಾದ ಭಾವಗಳು ನೋಡುಗನ ಮನದೊಳಗೆ ಇಳಿಯುವ ಮೊದಲೇ ಪ್ರಸಂಗ ಮುಗಿದುಹೋಗುತ್ತವೆ! ಆಟ ಮುಗಿಸಿ ಮರಳಿದಾಗ ನನ್ನೊಳಗೆ ಆಟದ ಗುಂಗು ರಿಂಗಣ ಹಾಕದೆ ಅಳಿದುಬಿಟ್ಟಿದೆ. ಈ ಸಮಸ್ಯೆಗೆ ಕಲಾವಿದ ಹೇಳಬಹುದು, 'ಆಟ ನೋಡಲು ಗೊತ್ತಿಲ್ಲ.!' ವಿಮರ್ಶಕ ಹೇಳಬಹುದು, 'ನಿಮಗೆ ರಸಪ್ರಜ್ಞೆಯಿಲ್ಲ.!' ಮೇಳದ ಯಜಮಾನ ಹೇಳಬಹುದು, 'ಕಾಲಮಿತಿ ಅಲ್ವೋ, ಅನಿವಾರ್ಯ.!' ಹೀಗೆ ಸಮರ್ಥನೆಗಳ ಮಹಾಪೂರಗಳು ನನ್ನೊಳಗೆ ಇಳಿಯದ ರಸಗುಂಗಿಗೆ ಉತ್ತರವಾಗಲಾರದು.
              ಸಂದುಹೋದ ಹಿಮ್ಮೇಳ ಕಲಾವಿದರ ವಾದನಗಳ ರೋಚಕತೆಗಳನ್ನು  ಕರ್ಣಾಕರ್ಣಿಕೆಯಾಗಿ ಕೇಳಿ ಆನಂದ ಪಟ್ಟಿದ್ದೇವೆ. ಬೆರಗಾಗಿದ್ದೇವೆ. ಈ ರೋಚಕಗಳೆಲ್ಲಾ ಭೂತಕಾಲದ ಸಜೀವ ಕಥನಗಳು. ಕಾಲದ ಅಲಿಖಿತ ದಾಖಲೆಗಳು. ಅದರಲ್ಲಿ ವರ್ತಮಾನದ ನೆರಳಿದೆ. ಉದಾಃ 'ಪಾಂಡವಾಶ್ವಮೇಧ' ಪ್ರಸಂಗ ಎಂದಿಟ್ಟುಕೊಳ್ಳೋಣ. ದೂರದ ಶ್ರೋತೃ ಚೆಂಡೆ ವಾದನದ ನಾದವನ್ನಾಲಿಸಿ 'ಇದು ಇಂತಹ ವೇಷದ ಪ್ರವೇಶ' ಎಂದು ತಿಳಿಯುತ್ತಿದ್ದ. ಚೆಂಡೆಯ ನಾದ ಮತ್ತು ಕಾಲದ ಲೆಕ್ಕಾಚಾರದಿಂದ ದೂರದ ಶ್ರೋತೃ ಪಾತ್ರವನ್ನು ಗ್ರಹಿಸುತ್ತಾನೆ ಎಂದಾದರೆ ಅದು ಚೆಂಡೆ ವಾದಕರ ಬೌದ್ಧಿಕ ಗಟ್ಟಿತನ ಮತ್ತು ಜಾಣ್ಮೆ ಆದರೂ ಅಲ್ಲಿ ಎದ್ದು ಕಾಣುವುದು - 'ಕಾಲ ಪ್ರಮಾಣದ ನುಡಿತಗಳು'.
                ಕಾಲಪ್ರಮಾಣವನ್ನು ಕಾಲಮಿತಿಯು ನುಂಗಿದೆ. ಕಥಾರಂಭದಲ್ಲೇ ನಾಲ್ಕನೇ ಕಾಲದ ಓಟ. ದೇವೇಂದ್ರ, ಇಂದ್ರಜಿತು, ಹಿರಣ್ಯಾಕ್ಷ, ರಕ್ತಬೀಜ.. ಪಾತ್ರಗಳ ರಂಗನಡೆಗಳ ಒಂದೇ ರೀತಿ ಕಾಣುತ್ತವೆ.  ಹಿಮ್ಮೇಳ ಭಾಷಾವಿದ ಪದ್ಯಾಣ ಶಂಕರನಾರಾಯಣ ಭಟ್ ಒಮ್ಮೆ ವಿಷಾದದಿಂದ ಹೇಳಿದ್ದರು -  "ಕಾಲಪ್ರಮಾಣಕ್ಕೆ ಅನುಗುಣವಾಗಿಯೇ ಪಾತ್ರಗಳು ರಂಗಪ್ರವೇಶ ಮಾಡಬೇಕು. ಒಂದೊಂದು ಪಾತ್ರಕ್ಕೆ ಒಂದೊಂದು ವೇಗ. ಕಾಲಪ್ರಮಾಣಗಳ ನಿರ್ವಹಣೆಯು ಪ್ರೇಕ್ಷಕರ ಮೇಲೆ ಗಣನೀಯ ಪರಿಣಾಮ ಕೊಡುತ್ತದೆ. ಇಂದು ಒಬ್ಬೊಬ್ಬ ಕಲಾವಿದನ ಪಾತ್ರದಲ್ಲಿ ಒಂದೊಂದು ವೇಗ. ಅವರ ಕುಣಿತಕ್ಕೆ ಸರಿಯಾಗಿ ಚೆಂಡೆ ಬಾರಿಸದಿದ್ದರೆ ಚೆಂಡೆ ಬಾರಿಸಲು ಬರುವುದಿಲ್ಲ ಎನ್ನುವ ಅಪವಾದ ಎದುರಿಸಬೇಕಾಗುತ್ತದೆ..!"
               ಹಾಗಿದ್ದರೆ ಪಾತ್ರಗಳ ವೇಗದ ಪ್ರಮಾಣ ಹೇಗೆ ಮತ್ತು ಎಷ್ಟು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಚಿಕ್ಕಯತ್ನವೊಂದು ಪುತ್ತೂರಿನಲ್ಲಿ ನಡೆಯಿತು. ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 'ಆಂಜನೇಯ 47' ಕಾರ್ಯಕ್ರಮದಲ್ಲಿ ಭಾಗವತ ಪ್ರಸಾದ್ ಬಲಿಪ ನಿರದೇಶನದಲ್ಲಿ ಪ್ರಾತ್ಯಕ್ಷಿಕೆ ಜರುಗಿತ್ತು. ಶ್ರೀಗಳಾದ ಕುಮಾರ ಸುಬ್ರಹ್ಮಣ್ಯ ವಳಕುಂಜ, ಪುಂಡಿಕಾಯಿ ರಾಜೇಂದ್ರ ಹಿಮ್ಮೇಳದಲ್ಲಿ ಸಹಕರಿಸಿದ್ದರು. ಯಕ್ಷಗುರು ದಿವಾಣ ಶಿವಶಂಕರ ಭಟ್ಟರು ವೇಷ ತೊಡದೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಸುಮಾರು ಒಂದೂವರೆ ಗಂಟೆಗಳ ಲಂಬಿಸಿದ ಪ್ರಾತ್ಯಕ್ಷಿಕೆಯಲ್ಲಿ ವಿವಿಧ ತಾಳ, ಮಟ್ಟು ಮತ್ತು ಪಾತ್ರಗಳ ವೇಗಗಳನ್ನು ಪ್ರಸ್ತುತಪಡಿಸಲಾಗಿತ್ತು.
               ಅಭಿಮನ್ಯು ಕಾಳಗ ಪ್ರಸಂಗ. ಧರ್ಮರಾಯ ಚಿಂತೆಯಲ್ಲಿರುವಾಗ ಅಭಿಮನ್ಯುವಿನ ಪ್ರವೇಶ. ಮೂರನಾಲ್ಕು ಏರು ಪದ್ಯಗಳು. ಪುಂಡುವೇಷವಾದ್ದರಿಂದ ಸಹಜವಾಗಿ ಹಿಮ್ಮೇಳ, ಮುಮ್ಮೇಳಗಳು ಈ ಹಂತದಿಂದ ವೇಗ ಪಡೆದುಕೊಳ್ಳುತ್ತದೆ. ಪ್ರಸಾದ ಬಲಿಪ ಹೇಳುತ್ತಾರೆ, "ಇಡೀ ಪ್ರಸಂಗದಲ್ಲಿ ಅಭಿಮನ್ಯುವಿಗೆ ಬಹುತೇಕ ವೀರ ರಸದ ಪದ್ಯಗಳಿವೆ. ಪದ್ಯಗಳ ಮೂಲಕ ಪಾತ್ರದ ವೇಗಗಳ ವ್ಯತ್ಯಾಸಗಳನ್ನು ಹಿಂದಿನವರು ಮಾಡಿದ್ದರು. ಕಲಾವಿದ ಪದ್ಯಗಳ ವೇಗಕ್ಕೆ ಸರಿಯಾಗಿ ಹೆಜ್ಜೆ ಹಾಕಿದರೆ ರಂಗ ಸೊಬಗು ಜಾಸ್ತಿ.  ನಿತ್ರಾಣನಾಗಲಾರ! ಮುಖ್ಯವಾಗಿ ಗಮನಿಸಬೇಕಾದುದು - ಕಲಾವಿದನ ಸೊಂಟತ್ರಾಣದ ವೇಗವು ಪಾತ್ರದ ವೇಗವಲ್ಲ, ಪ್ರಸಂಗದ ವೇಗವೂ ಅಲ್ಲ."
                ದೇವೇಂದ್ರನ ಪ್ರವೇಶಕ್ಕೂ, ಇಂದ್ರಜಿತುವಿನ ಪ್ರವೇಶಕ್ಕೂ ವ್ಯತ್ಯಾಸವಿದೆ. ರಂಗಕ್ರಿಯೆಗಳಲ್ಲೂ ಬದಲಾವಣೆಯಿದೆ. ಅಭಿಮನ್ಯು, ಬಬ್ರುವಾಹನ.. ಪಾತ್ರಗಳ ನಡೆಗಳು ವಿಭಿನ್ನ. ಕಲಾವಿದನಿಗೆ ತಾಳಗತಿಯ ಜ್ಞಾನವಿದ್ದರೆ ಕಾಲಪ್ರಮಾಣದ ಕುಣಿತಗಳಿಂದ ರಂಗಕ್ಕೆ ನ್ಯಾಯ ಸಲ್ಲಿಸಬಹುದು. ಸಮಯ ಇಲ್ಲವೆಂದು ಗತಿಯನ್ನು ಬೇಕಾದಂತೆ ಬದಲಿಸಿದರೆ ಅಧೋಗತಿ! ಡಾ.ಜೋಷಿಯವರು ಮಾತಿಗೆ ಸಿಕ್ಕಾಗ ಹೇಳಿದ ಮಾತು ನೆನಪಾಯಿತು, "ಎಷ್ಟು ದೊಡ್ಡ ಪ್ರಸಂಗವಾದರೂ ಕಿರಿದು ಗೊಳಿಸಬಹುದು. ಕಿರಿದುಗೊಳಿಸುವುದೆಂದರೆ ಸನ್ನಿವೇಶವನ್ನೇ ಕಟ್ ಮಾಡುವುದಲ್ಲ. ಪಾತ್ರಕ್ಕೆ ಗರಿಷ್ಠ ಅವಕಾಶವನ್ನು ನೀಡುತ್ತಾ ಪದ್ಯಗಳನ್ನು ಸೀಮಿತಗೊಳಿಸಿದರೆ ಆಯಿತು. ಹೇಳುವಂತಹ ಪದ್ಯ, ಅದರ ನಡೆ, ಕುಣಿತದ ಪ್ರಮಾಣಗಳಲ್ಲಿ ವೈವಿಧ್ಯತೆಯನ್ನು ತರಬಹುದು."
              ರಂಗದಿಂದ ಮರೆತುಹೋಗುತ್ತಿರುವ ಚೌತಾಳ, ಘಂಟಾರವ ಮಟ್ಟು, ಆದಿ ತಾಳದ ಪದ್ಯಗಳು ಕಾಲಪ್ರಮಾಣದಲ್ಲಿ ಪ್ರಸ್ತುತಪಡಿಸಿದಾದ ಸಿಗುವ ರಸಸುಖ ಶಬ್ದಕ್ಕೆ ನಿಲುಕದ್ದು. ಪ್ರಸಾದ್ ಬಲಿಪರು ಮೂರು ನಮೂನೆಯ ತಿತ್ತಿತೈಗಳನ್ನು ಹಾಡಿನ ಮೂಲಕ ತೋರಿಸಿದರು. ತಿತ್ತಿತೈ ತಾಳದ ಒಂದನೇ ಅಕ್ಷರ,  ಎರಡನೇ ಮತ್ತು ಮೂರನೇ ಅಕ್ಷರದಿಂದ ಪದ್ಯಗಳನ್ನು ಎತ್ತುಗಡೆ ಮಾಡುವ ಅಪರೂಪದ ಕ್ರಮ ಗಮನಸೆಳೆಯಿತು. ಬಣ್ಣದ ವೇಷವೊಂದು ರಂಗ ಪ್ರವೇಶ ಮಾಡುವಾಗ ತೆರೆಯ ಹಿಂದೆ ಕುಣಿಯವ ಕುಣಿತದ ವೈವಿಧ್ಯಗಳನ್ನು ತೆರೆಯಿಲ್ಲದೆ ಪ್ರಸ್ತುತಪಡಿಸಲಾಗಿತ್ತು.
              ಪ್ರಾತ್ಯಕ್ಷಿಕೆ ಮುಗಿದು ವಾರ ಕಳೆದರೂ ಪ್ರಸಾದ ಬಲಿಪರ ಹಾಡುಗಳು ನನ್ನೊಳಗೆ ಯಾಕೆ ರಿಂಗಣ ಇನ್ನೂ ಹಾಕುತ್ತಿವೆ? ಹೀಗೆಂದರೆ ಅಹಂಕಾರವಾದೀತೇನೋ? ರಂಗದಲ್ಲಿ ಪಾತ್ರಗಳ ಕಾಲಪ್ರಮಾಣದ ನಡೆಗಳೇ ರಸಾವಿಷ್ಕಾರದ ಮೂಲಬೀಜ ಎಂದರೆ ತಪ್ಪಾದೀತೇ? ರಸಗಳಿಗನುಗುಣವಾದ ನಡೆಗಳನ್ನು ಪದ್ಯಗಳೇ ಅಜ್ಞಾತವಾಗಿ ಸೂಚಿಸುವಾಗ ಅದನ್ನು ನೋಡುವ ಸೂಕ್ಷ್ಮ ಮನಸ್ಸನ್ನು ಸಜ್ಜುಗೊಳಿಸಬೇಕಾದ ಹಾದಿಯಲ್ಲಿದ್ದೇವೆ. ರಸಗಳನ್ನು ಕಟ್ಟಿಕೊಡದ ಪಾತ್ರವು ರಂಗದಲ್ಲಿ ವಿಜೃಂಭಿಸಬಹುದು. ಚಪ್ಪಾಳೆಗಳ ಮಾಲೆಗಳನ್ನು ಪಡೆಯಬಹುದು. ಅಭಿಮಾನಿಗಳ ಸಂತೋಷವನ್ನು ಇಮ್ಮಡಿಗೊಳಿಸಬಹುದು. ಆದರೆ ಯಕ್ಷಗಾನದ ಒಲವು ಗಳಿಸಲಾರದು.

(ಚಿತ್ರ : ಮುರಳಿ ರಾಯರಮನೆ)
ಪ್ರಜಾವಾಣಿ/ದಧಿಗಿಣತೋ/19-12-2015


Wednesday, December 16, 2015

ಕಾಲಕ್ಕೆ ಸವಾಲೊಡ್ಡಿದ ಮೇಳದ ಬದುಕು


            ಯಕ್ಷಗಾನದ ಮೇಳವೊಂದರ ಯಜಮಾನನಿಗೆ ಸಾಮಾಜಿಕವಾಗಿ ದೊಡ್ಡ ಸ್ಥಾನಮಾನ. ಶತಮಾನದೀಚೆಗೆ ಸಾಗಿಬಂದ ಹಲವು ಮೇಳಗಳು ಹೊಸ ಇತಿಹಾಸಗಳನ್ನು ಸೃಷ್ಟಿಸಿವೆ. ಪ್ರಬುದ್ಧ ಕಲಾವಿದರನ್ನು ರೂಪುಗೊಳಿಸಿವೆ.  ಕಲೆಯನ್ನು ಸಮೃದ್ಧಗೊಳಿಸಿವೆ. ಆದರೆ ಯಜಮಾನನ ಮುಖದಲ್ಲಿ ನಗು ಬಿಡಿ, ಕಿರುನಗುವನ್ನು ಮೂಡಿಸಿದ ಮೇಳಗಳು ತೀರಾ ವಿರಳ. ಕೀರ್ತಿಶೇಷ ಡಾ.ಶೇಣಿಯವರು ಒಂದೆಡೆ ಉಲ್ಲೇಖಿಸಿದ್ದರು, "ಮೇಳಗಳ ಯಜಮಾನನಾದರೆ ಬದುಕಿನ ಸುಖ ನೆಮ್ಮದಿಯು ಬಲಿಯಾದಂತೆ!" ಅವರ ಸ್ವಾನುಭವ ಕೂಡಾ.
           ಅರುವತ್ತೈದರ ಕೆ.ಎಚ್.ದಾಸಪ್ಪ ರೈಗಳ ಕಲಾ ಯಾನ ಮತ್ತು ಮೇಳದ ಅನುಭವಗಳಿಗೆ ಕಿವಿಯಾಗುವ ಸಂದರ್ಭ ಒದಗಿತ್ತು. ಅವರು ಮಾತು ನಿಲ್ಲಿಸಿದಾಗ ನನಗನ್ನಿಸಿತು - ಅಬ್ಬಾ.. ಗೆಲುವಿನ ರೇಖೆ ಯಾವಾಗಲೂ ಚಿಕ್ಕದು! ಕಲಾವಿದನಾಗಿ ರೈಗಳದು ದೊಡ್ಡ ಹೆಸರು. ಕೀರ್ತಿಕಾಮಿನಿ ಅಪ್ಪಿದ, ಒಪ್ಪಿದ ಕಾಲಘಟ್ಟವು ಅವರ ಪಾತ್ರ ವೈಭವಗಳ ದಿನಮಾನಗಳು. ತುಳು, ಕನ್ನಡ ಎರಡರಲ್ಲೂ ಸಮಾನವಾದ ಛಾಪು ಒತ್ತಿದ ದಾಸಪ್ಪ ರೈಗಳ ಮೇಳದ ಬದುಕು ಮೇಲ್ನೋಟಕ್ಕೆ ಸುಂದರ ಹೂ. ಆ ಹೂವಿನಲ್ಲಿ ಮಾಧುರ್ಯವಿತ್ತು. ಸೆಳೆತವಿತ್ತು. ಉತ್ತಮ ನೋಟವಿತ್ತು. ಆದರೆ ತಾಳಿಕೆ ಕಡಿಮೆ.
           1965ನೇ ಇಸವಿ. ಮಂಗಳೂರಿನ ನೆಹರೂ ಮೈದಾನಿನಲ್ಲಿ ಕರ್ನಾಟಕ ಯಕ್ಷಗಾನ ನಾಟಕ ಸಭಾದ ಸೀನ್ಸೀನರಿ ಯಕ್ಷಗಾನ. ಟೆಂಟ್ ಬದಲಿಗೆ ಮುಳಿಹುಲ್ಲಿನ ಸೂರು. ದಿನಂಪ್ರತಿ ಆಟ. ಕಲಾವಿದ ಕೆ.ಎನ್.ಬಾಬು ರೈಗಳ ಮೂಲಕ ಬಣ್ಣದ ನಂಟು. 'ಕಾಂತಾಬಾರೆ ಬೂದಾಬಾರೆ' ಪ್ರಸಂಗದ ಮೂಲಕ ರಂಗಪ್ರವೇಶ. ಹಿರಿಯ ಕಲಾವಿದರ ಕೋಪ-ತಾಪ, ಪ್ರಸನ್ನತೆ-ಪ್ರಶಾಂತತೆ, ಸಿಡುಕು-ಮಂದಹಾಸಗಳ  ಜತೆ ಬದುಕು. ಸುಮಾರು ಎಂಟು ವರುಷ ತಿರುಗಾಟ. ಆಗ ಮೂರು ದಿವಸಕ್ಕೆ ಮೂರು ರೂಪಾಯಿ ಸಂಬಳ!
           ನಾಲ್ಕು ವರುಷ ಕೌಟುಂಬಿಕ ಏಳುಬೀಳುಗಳಿಂದಾಗಿ ಮೇಳದ ಜೀವನಕ್ಕೆ ವಿದಾಯ. ಬದುಕಿಗಾಗಿ ಹೋಟೆಲ್ ಆರಂಭ. ಜತೆಗೆ ರಾಜಕೀಯ ಸ್ಪರ್ಶ. ಸಾರ್ವಜನಿಕ ಒಡನಾಟ. ನಿತ್ಯ ಓಡಾಟ-ತಿರುಗಾಟ. ಹೋಟೆಲ್ ವ್ಯಾಪಾರ ಕೈಕೊಟ್ಟಿತು. 1977ರ ಬಳಿಕ ಪುನಃ ಮೇಳದ ಸಹವಾಸ. ವೇಷಗಾರಿಕೆಯೊಂದಿಗೆ ಹೆಚ್ಚುವರಿಯಾಗಿ ವ್ಯವಸ್ಥಾಪಕ ಜವಾಬ್ದಾರಿ. ವೈಯಕ್ತಿಕ ಪ್ರತಿಷ್ಠೆ, ಭಿನ್ನಾಭಿಪ್ರಾಯ, ಮತ್ಸರ ಮೊದಲಾದ ಸಾಮಾಜಿಕ ಸಮಸ್ಯೆಗಳಿಂದ ರೋಸಿ ಮೇಳ ಬಿಟ್ಟರು. ಮುಂದೆ ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳದಿಂದ ತಿರುಗಾಟ. ಮೇಳದ ಜವಾಬ್ದಾರಿಯ ಭಾರ. ದಿನಗಳು ಸರಿಯುತ್ತಿದ್ದಂತೆ ಸ್ವಂತ ಮೇಳ ಮಾಡುವ ಯೋಚನೆಗೆ ಶ್ರೀಕಾರ.
              ಸ್ವಂತದ್ದಾದ ಕುಂಬಳೆ ಮೇಳದ ಕನಸು. ಕೈಯಲ್ಲಿದ್ದ ಮೂಲ ಬಂಡವಾಳ ನಾಲ್ಕಂಕೆಯನ್ನು ಮೀರದ ಮೊತ್ತ. ಅಭಿಮಾನಿಗಳ ಸಹಕಾರ. ಬ್ಯಾಂಕಿನ ಸಾಲ. ಮೇಳದ ವೈಭವ ಸಂಪನ್ನತೆಯು ನಾಲ್ದೆಸೆ ಪ್ರಚಾರವಾಯಿತು. ಇನ್ನೇನು ಕ್ಲಿಕ್ ಆಯಿತು ಎನ್ನುವಾಗ ಚೋರಶಿಖಾಮಣಿ 'ರಿಪ್ಪನ್ ಚಂದ್ರನ್ ಕಾಟ' ಶುರುವಾಗಬೇಕೇ? ಎಲ್ಲೆಲ್ಲೂ ಗೊಂದಲ. ಟೆಂಟ್ ಊರಲಾಗದ ಸ್ಥಿತಿ. ಹೇಗೋ ಮೇಳದ ನಿಭಾವಣೆ. ಮೊದಲ ವರುಷದ ತಿರುಗಾಟ ಮುಗಿಯಿತು.
            ಎರಡನೇ ವರುಷದಿಂದ ಮೇಳವು ದಾಸಪ್ಪ ರೈಗಳಿಗೆ ಅನುಕೂಲವಾಗಿ ವರ್ತಿಸಲಿಲ್ಲ. ಅಪಘಾತಗಳ ಮಾಲೆ. ಆರ್ಥಿಕ ಕಷ್ಟ-ನಷ್ಟ. ಮೇಳ ನಿರ್ವಹಣೆಗಾಗಿ ಕೂಡಿಟ್ಟ ಹಣ ಕರಗಿತು. "ನನ್ನ ಹೆಂಡತಿಯ ಕುತ್ತಿಗೆಯಲ್ಲಿ ನಾಲ್ಕೂವರೆ ಪವಿನ ಚಿನ್ನದ ಕರಿಮಣಿ ಸರ ಇತ್ತು. ಗಂಡ ಇರುವಲ್ಲಿಯವರೆಗೆ ಅದನ್ನು ತೆಗೆಯುವುದಿಲ್ಲ ಎಂದು ಹಠ ಹಡಿದಿದ್ದಳು. ಅವಳನ್ನು ಸಮಾಧಾನ ಪಡಿಸಿ ತೆಗೆದುಕೊಂಡು ಬಂದು ಹಣದ ವ್ಯವಸ್ಥೆ ಮಾಡಿಕೊಂಡೆ. ಅವಳಿಗೆ ಮುನ್ನೂರು ರೂಪಾಯಿಗಳ ಸರ ತೆಗೆದುಕೊಟ್ಟೆ," ಎನ್ನುವಾಗ ದಾಸಪ್ಪಣ್ಣದ ಕಣ್ಣಲ್ಲಿ ಕಣ್ಣೀರು ಜಿನುಗಿತು.
             ಏನು ಮಾಡಿದರೂ ಕಷ್ಟ ಪರಂಪರೆಗೆ ನಿಲುಗಡೆಯಿರಲಿಲ್ಲ. ಮನೆಯಲ್ಲಿ ಊಟಕ್ಕೆ ತತ್ವಾರವಾಯಿತು. "ಆಟದ ಯಜಮಾನನ ಮನೆಯಾಗಿದ್ದ ನನ್ನ ಮನೆಯಲ್ಲಿ ಎಲ್ಲರಿಗೂ ಊಟ ಕೊಡುತ್ತಿದ್ದೆ. ಆದರೆ ಆ ದಿವಸಗಳಲ್ಲಿ ನನಗೇ ಊಟಕ್ಕೆ ಗತಿಯಿಲ್ಲದಾಯ್ತು. ಹಾಲು ತರಲು ತೊಂದರೆಯಾಗಿ ಹಾಲಿನ ಹುಡಿ ಬಳಸುತ್ತಿದ್ದೆ..." ಸಂದು ಹೋದ ದಿವಸಗಳನ್ನು ನೆನಪಿಸಿಕೊಳ್ಳುತ್ತಾರೆ. ಅರುವತ್ತೈದು ಮಂದಿ ಸದಸ್ಯರಿದ್ದ  ಮೇಳದಲ್ಲಿ ಸಂಖ್ಯೆ ಏಳಕ್ಕೆ ಇಳಿದಾಗ ಮೇಳ ನಿಲ್ಲಿಸುವ ಯೋಚನೆಗೆ ಕಾಲವೂ ಸ್ಪಂದಿಸಿತು. ಹೆಸರಿನೊಂದಿಗೆ 'ಮೇಳದ ಯಜಮಾನ' ಎನ್ನುವ ಹೆಸರು ಹೊಸೆಯಿತಷ್ಟೇ ವಿನಾ ಬದಕು ಹಸನಾಗಲಿಲ್ಲ.
             ಹದಿನೆಂಟು ವರುಷ ಕರ್ನಾಟಕ ಮೇಳ, ಎಂಟು ವರುಷ ಕದ್ರಿ ಮೇಳ, ಆರು ವರುಷ ಸ್ವಂತದ್ದಾದ ಕುಂಬಳೆ ಮೇಳ, ಹತ್ತು ವರುಷ ಮಂಗಳಾದೇವಿ ಮೇಳ.. ಹೀಗೆ ಸುಮಾರು ನಲವತ್ತೆರಡು ವರುಷಗಳ ಸೇವೆ. ಪ್ರಕೃತ ನಿವೃತ್ತ. ಕೋಟಿ ಚೆನ್ನಯ್ಯ ಪ್ರಸಂಗದ 'ಕೋಟಿ', ಕಾಂತಾಬಾರೆ, ದೇವುಪೂಂಜ, ಕೋಡ್ದಬ್ಬು, ಕೋಡ್ಯರಾಳ್ವ... ಹೀಗೆ ತುಳು ಪ್ರಸಂಗಗಳ ಪ್ರಮುಖ ಪಾತ್ರಗಳು ರೈಗಳಲ್ಲಿ ಮರುಹುಟ್ಟು ಪಡೆದಿವೆ. 2014ರಲ್ಲಿ ತನ್ನ ವೃತ್ತಿ ಬದುಕಿನ ಚಿನ್ನದ ಹಬ್ಬವನ್ನು ಪುತ್ತೂರಿನಲ್ಲಿ ಅದ್ದೂರಿಯಾಗಿ ಅಚರಿಸಿದ್ದಾರೆ. ಆ ಸಂದರ್ಭದಲ್ಲಿ ಜೀವನಗಾಥೆ 'ಸ್ವರ್ಣ ಯಕ್ಷದಾ' (ಸಂ.ರಾಜೇಶ್ ಬೆಜ್ಜಂಗಳ) ಕೃತಿಯು ಅನಾವರಣಗೊಂಡಿತ್ತು.
           ದಾಸಪ್ಪಣ್ಣದ ಕಲಾ ಜೀವನಕ್ಕೆ ಕಿವಿಯಾಗುತ್ತಿದ್ದಂತೆ ನಳ, ಹರಿಶ್ಚಂದ್ರಾದಿಗಳ ಕತೆ ನೆನಪಾಯಿತು. ಸತ್ಯಕ್ಕಾಗಿ ಈ ಮಹಾತ್ಮರು ಎಷ್ಟೊಂದು ಕಷ್ಟ ಪಟ್ಟರು ಅಲ್ವಾ. ಆದರೆ ಬದುಕು ಮತ್ತು ಕಲೆಯ ಉತ್ಕರ್ಷಕ್ಕಾಗಿ ಪಣತೊಟ್ಟ ದಾಸಪ್ಪಣ್ಣನ ಪಾಲಿಗೆ ಕಾಲ ಎಷ್ಟು ಕಟುವಾಗಿತ್ತು! ಕಷ್ಟದ ಬದುಕನ್ನು ಎದೆಯುಬ್ಬಿಸಿ ಸೈರಿಸಿ ಕಾಲವೇ ನಿಬ್ಬೆರಗಾಗುವಂತೆ ಮಾಡಿದ ದಾಸಪ್ಪ ರೈಗಳು ಹಲವು ಪುರಸ್ಕಾರ, ಸಂಮಾನ, ಪ್ರಶಸ್ತಿಗಳಿಂದ ಪುರಸ್ಕೃತರು.
            ಈಗ 'ಬೊಳ್ಳಿಂಬಳ ಪ್ರಶಸ್ತಿ'ಯ ಸರದಿ. ಪ್ರಶಸ್ತಿಯನ್ನು 'ಪಾಣಾಜೆ ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ'ವು ಆಯೋಜಿಸಿದೆ. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್.ಓಕುಣ್ಣಾಯರ ಹಿರಿತನದಲ್ಲಿ ನೀಡುವ ಈ ಪ್ರಶಸ್ತಿಯು ದಶಂಬರ 13ರಂದು ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ ನಡೆದ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 'ಶ್ರೀ ಆಂಜನೇಯ 47' ಸಮಾರಂಭದಲ್ಲಿ ರೈಗಳಿಗೆ ಪ್ರದಾನ ಮಾಡಲಾಯಿತು.  
(ಚಿತ್ರ : ಫೇಸ್ ಬುಕ್)

Friday, December 4, 2015

'ಪಾತಾಳ ಪ್ರಶಸ್ತಿ' ಪುರಸ್ಕೃತ ಹಳುವಳ್ಳಿ ಗಣೇಶ ಭಟ್


           2003. ಮೂಡುಬಿದಿರೆಯ ಸಾರ್ವಜನಿಕ ಬಯಲಾಟ ಸಮಿತಿಯ ಐವತ್ತನೇ ವರುಷದ ಶ್ರೀ ಕಟೀಲು ಮೇಳದ ಆಟ. ಸುವರ್ಣ ಸಂಭ್ರಮದ ನೆನಪಿಗಾಗಿ 'ಚಿನ್ನದ ಕಿರೀಟ' ಸಮರ್ಪಣೆ. ಮೇಳದಲ್ಲಿ ಹಳುವಳ್ಳಿ ಗಣೇಶ ಭಟ್ಟರು ಶ್ರೀದೇವಿ ಪಾತ್ರಧಾರಿ. ಮೊದಲ ಬಾರಿಗೆ ಚಿನ್ನದ ಕಿರೀಟವನ್ನು ತೊಟ್ಟು ಪಾತ್ರವನ್ನು ಮಾಡಿದ ಹಿರಿಮೆ ಇವರದು. ಆ ದಿವಸವನ್ನು ಜ್ಞಾಪಿಸಿಕೊಂಡಾಗ ಭಟ್ಟರು ಭಾವುಕರಾಗುತ್ತಾರೆ. ಪುಳಕಗೊಳ್ಳುತ್ತಾರೆ. ಬದುಕಿನ ಮಹೋನ್ನತ ಕ್ಷಣವೆಂದು ಖುಷಿ ಪಡುತ್ತಾರೆ.
            ಹಳುವಳ್ಳಿಯವರ ಶ್ರೀದೇವಿ ಪಾತ್ರವು ಬಿಗುವನ್ನು ಬಿಟ್ಟುಕೊಡದ, ಗಾಂಭೀರ್ಯವನ್ನು ಕಾಪಾಡಿಕೊಂಡ ಅಭಿವ್ಯಕ್ತಿ. ಅಗ್ಗದ ಪ್ರಚಾರಕ್ಕಾಗಿ ಪಾತ್ರವನ್ನು ಹಗುರ ಮಾಡುವ ಜಾಯಮಾನದವರಲ್ಲ. ಪ್ರಸಂಗದಲ್ಲಿ ದೇವಿ ಉದ್ಭವದ ಸಂದರ್ಭದಲ್ಲಿ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸುವ ಹಲವಾರು ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಕಲಾಭಿಮಾನಿಗಳ ಭಾವನೆಗೆ ಎಂದೂ ಧಕ್ಕೆ ತಂದವರಲ್ಲ. ಇಪ್ಪತ್ತು ವರುಷದ ಕಟೀಲು ಮೇಳದ ವ್ಯವಸಾಯದಲ್ಲಿ ಶ್ರೀ ದೇವಿ ಮಹಾತ್ಮೆ ಮತ್ತು ಶ್ರೀದೇವಿ ಲಲಿತೋಪಾಖ್ಯಾನ ಪ್ರಸಂಗವಿದ್ದಾಗ ನಾನು ಎಂದೂ ರಜೆ ಮಾಡಿದ್ದಿಲ್ಲ, ಅವರ ವೃತ್ತಿಬದ್ಧತೆಗೆ ಮಾದರಿಯಿದು.
           ಶ್ರೀ ಧರ್ಮಸ್ಥಳ ಮೇಳದಿಂದ ಬಣ್ಣದ ಬದುಕು ಅರಂಭ. ಒಂದು ವರುಷದ ತಿರುಗಾಟದ ಬಳಿಕ ಎರಡು ದಶಕ ಸುಂಕದಕಟ್ಟೆ ಮೇಳದ ಅನುಭವ. ನಂತರದ ಎರಡು ದಶಕ ಶ್ರೀಕಟೀಲು ಮೇಳದ ವ್ಯವಸಾಯ. ಸುಂಕದಕಟ್ಟೆ ಮೇಳದಲ್ಲಿ ವಿವಿಧ ಪಾತ್ರಗಳ ನಿರ್ವಹಣೆ. ಸ್ತ್ರೀ ಪಾತ್ರದಿಂದ ಬಣ್ಣದ ವೇಷದ ವರೆಗಿನ ಅವಕಾಶ. ಮೇಳದಲ್ಲಿದ್ದ ಭಾಗವತ ಪುತ್ತಿಗೆ ತಿಮ್ಮಪ್ಪ ರೈಗಳು ಇವರಿಗೆ ವಿವಿಧ ಬಗೆಯ ಪಾತ್ರಗಳನ್ನು ನೀಡಿ ಬೆಳೆಸಿದ್ದಾರೆ. ಹಾಗಾಗಿ ಎಲ್ಲಾ ಬಗೆಯ ವೇಷಗಳು ಹಳುವಳ್ಳಿಯವರಲ್ಲಿ ಗೆದ್ದಿವೆ. ಇಂದು ಶ್ರೀ ದೇವಿ ಪಾತ್ರ ಮಾಡಿದರೆ, ನಾಳೆ ಶುಂಭನಿಗೂ ಸಿದ್ಧ, ನಾಡಿದ್ದು ಹೆಣ್ಣು ಬಣ್ಣಕ್ಕೂ ಸೈ!
            ಗಣೇಶ ಭಟ್ಟರು ಓದಿದ್ದು ಎಸ್.ಎಸ್.ಎಲ್.ಸಿ. ವರೆಗೆ. ಬಾಲ್ಯದಲ್ಲೇ ಯಕ್ಷಗಾನದ ತುಡಿತ. ತನ್ನೂರು ಕಳಸಕ್ಕೆ ಬಂದಿದ್ದ ಧರ್ಮಸ್ಥಳ ಮೇಳದತ್ತ ಸೆಳೆತ. ಪಾತಾಳ ವೆಂಕಟ್ರಮಣ ಭಟ್, ಕೆ.ಗೋವಿಂದ ಭಟ್, ಕುಂಬಳ ಸುಂದರ ರಾಯರ ವೇಷಗಳತ್ತ ಆಸಕ್ತ. ಮೇಳದ ಕಲಾವಿದನಾಗಬೇಕೇಂಬ ಹಪಾಹಪಿ. ತೆಂಕುತಿಟ್ಟಿನ ನಾಟ್ಯವನ್ನು ಗೋವಿಂದ ಭಟ್ ಮತ್ತು ಪಡ್ರೆ ಚಂದು ಅವರಲ್ಲಿ ಕಲಿತರೆ, ಬಡಗಿನ ನಾಟ್ಯಕ್ಕೆ ವಿಶ್ವನಾಥ ಜೋಯಿಸ್ ಗುರು. ಎರಡೂ ತಿಟ್ಟುಗಳ ಅನುಭವ. ಒಂದು ತಿಟ್ಟಿನ ಗತಿಯನ್ನು ಇನ್ನೊಂದು ತಿಟ್ಟಿಗೆ ಮಿಳಿತ ಗೊಳಿಸದ ಎಚ್ಚರ.
               ಸ್ತ್ರೀವೇಷ, ಪುಂಡು ವೇಷ, ರಾಜ ವೇಷ, ಬಣ್ಣದ ವೇಷ, ಪೋಷಕ ಪಾತ್ರಗಳು... ಹೀಗೆ ಯಕ್ಷಗಾನದ ಎಲ್ಲಾ ವಿಧದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶ್ರೀರಾಮ, ಕೃಷ್ಣ, ವಿಷ್ಣು, ಸಂಜಯ, ಶುಂಭ, ದಶರಥ, ದಾಕ್ಷಾಯಿಣಿ, ಕಯಾದು, ಅಂಬೆ, ಕಿನ್ನಿದಾರು, ಚಂದ್ರಮತಿ... ಹೀಗೆ ಭಿನ್ನ ಸ್ವಭಾವದ ಪಾತ್ರಗಳು. ಶ್ರೀ ದೇವಿ ಮಹಾತ್ಮೆಯು 'ಶ್ರೀದೇವಿ' ಪಾತ್ರವು ಅವರಿಗೆ ತಾರಾಮೌಲ್ಯ ತಂದಿತ್ತ ಪಾತ್ರ.
             ಮೇಳದ ಕಲಾವಿದನಾಗಬೇಕೆಂಬು ಆಸೆಯಿತ್ತು. ಅದು ಈಡೇರಿದೆ. ಈಗ ವಯಸ್ಸಾಯಿತು. ಇನ್ನು ಸ್ತ್ರೀಪಾತ್ರ ಮಾಡಬಾರದು. ನಾನೇ ಹಿಂದೆ ಸರಿದೆ. ಪ್ರೇಕ್ಷಕರು ಮೊದಲು ನನ್ನ ಶ್ರೀದೇವಿ ಪಾತ್ರವನ್ನು ಮೆಚ್ಚಿಕೊಂಡಿದ್ದರು, ಒಪ್ಪಿಕೊಂಡಿದ್ದರು. ಅವರ ಅಭಿಮಾನವು ಶಾಶ್ವತವಾಗಿರಬೇಕು, ಎನ್ನುತ್ತಾರೆ.
               "ಕಳಸದ ಹಳುವಳ್ಳಿಯ ತಂಬಿಕುಡಿಗೆಯ ಇವರ ಮನೆ ಕಲಾವಿದರಿಗೆ ಆಶ್ರಯ. ಆ ಭಾಗಕ್ಕೆ ಯಾವುದೇ ಮೇಳ ಬರಲಿ, ವಾಸ್ತವ್ಯಕ್ಕೆ ಇವರದು ತೆರೆದ ಮನೆ-ಮನ. ಆಟ, ಕೂಟಗಳಿಗೆ ಮೊದಲಾದ್ಯತೆ. ಈ ಮನೆಯಲ್ಲಿ ಊಟ ಮಾಡದೇ ಇದ್ದ ಕಲಾವಿದರು ಕಡಿಮೆ. ಇವರ ಚಾವಡಿ ತುಂಬಾ ಕಂಬಳಿ, ಹಾಸಿಗೆ. ಹೊತ್ತು ಹೊತ್ತಿಗೆ ಮೃಷ್ಟಾನ್ನ ಭೋಜನ, ಕಳೆದ ಕಾಲದ ದಿನಮಾನವನ್ನು ನೆನಪಿಸಿಕೊಳ್ಳುತ್ತಾರೆ" ಪಾತಾಳ ವೆಂಕಟ್ರಮಣ ಭಟ್ಟರು.
                 ಐವತ್ತೊಂಭರ ಹರೆಯದ ಗಣೇಶ ಭಟ್ಟರು ಯಕ್ಷಗಾನದೊಂದಿಗೆ ಕೃಷಿಯೂ ಪ್ರಿಯ ವೃತ್ತಿ. ತನ್ನ ಅನುಪಸ್ಥಿತಿಯಲ್ಲಿ ಮಡದಿ ಸೀತಾಲಕ್ಷ್ಮೀ ಹೆಗಲೆಣೆ. ಶಶಿಧರ್, ಶಾಂಭವಿ - ಇಬ್ಬರು ಮಕ್ಕಳು. ಮೇಳದ ತಿರುಗಾಟ, ಪಾತ್ರಕ್ಕೆ ಸಿಕ್ಕ ಜನ ಸ್ವೀಕೃತಿ, ತಾರಾಮೌಲ್ಯಗಳಿಂದ ಸಂತೃಪ್ತ.  ಅನ್ನ, ಆಶ್ರಯ ನೀಡಿದ ಮೇಳಕ್ಕೆ ನಿಷ್ಠನಾದ ಹಳುವಳ್ಳಿಯವರು ನೂರಾರು ಸಂಮಾನ, ಪುರಸ್ಕಾರಗಳನ್ನು ಪಡೆದಿದ್ದಾರೆ. ಈಗ 'ಪಾತಾಳ ಪ್ರಶಸ್ತಿ' ಅರಸಿ ಬಂದಿದೆ.
             ದಶಂಬರ್ 5ರಂದು ಸಂಜೆ 7 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಧರ್ಮದಶರ್ಿ ಹರಿಕೃಷ್ಣ ಪುನರೂರು ಅಧ್ಯಕ್ಷರಾಗಿರುವ 'ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ-ಎಡನೀರು' ಪ್ರಶಸ್ತಿಯನ್ನು ಆಯೋಜಿಸಿದೆ.