Tuesday, July 19, 2011

'ಚಕ್ಕುಲಿ ಅಜ್ಜ'ನ ನೆನಪಿನಲ್ಲಿ..

ತಲೆಂಗಳ ಗೋಪಾಲಕೃಷ್ಣ ಭಟ್ - ಯಕ್ಷಗಾನ ಹಿಮ್ಮೇಳದ ಮೇರು. 'ಚಕ್ಕುಲಿ ಅಜ್ಜ' ಎಂಬುದು ಪ್ರೀತಿಯ ನಾಮ. ಇವರ ಮನಸ್ಸನ್ನು ಅರಿತು ಚೆಂಡೆ-ಮದ್ದಳೆಗಳೇ ಇವರಿಗೆ ಬಾಗುತ್ತಿದ್ದುವು, ಬಳುಕುತ್ತಿದ್ದುವು! ನಾಲ್ಕು ದಶಕಗಳ ರಂಗಾನುಭವ. ಜೂನ್ 24ರಂದು ಅಜ್ಜ ವಿಧಿವಶ. ನೆನಪುಗಳ ಕೆಲವು ಎಳೆಗಳು ಅವರಿಗೆ ಸಲ್ಲಿಸುವ ಶೃದ್ಧಾಂಜಲಿ.

ಮೇ ಕೊನೆಯ ವಾರ ಇರಬೇಕು, ತಲೆಂಗಳ ಗೋಪಾಲಕೃಷ್ಣ ಭಟ್ಟರು ಕಚೇರಿಗೆ ಬಂದಿದ್ದರು. ಶುದ್ಧ ಬಿಳಿ ಉಡುಪು, ಹೆಗಲಲ್ಲಿ ಝರಿ ಶಾಲು,ಚೀಲ. ನೀಟ್ ಆದ ಉಡುಪು. ಯಾವುದೋ ಕೆಲಸದಲ್ಲಿ ಮಗ್ನನಾಗಿದ್ದೆ. 'ಸ್ವಲ್ಪ ಮಾತನಾಡಲು ಉಂಟು, ಒಳಗೆ ಬರಬಹುದಾ,' ಎಂಬ ಧ್ವನಿಯನ್ನು ಕೇಳಿಯೂ ಕೇಳದಂತಿದ್ದೆ.

ಕಾರಣ ಇಲ್ಲದಿಲ್ಲ. ಎಷ್ಟೋ ಸಲ ಅವರೊಡನೆ ಮಾತನಾಡಿದಾಗ, 'ಹಿಂಸೆ'ಯ ಭಾವ ಕಾಡುತ್ತಿತ್ತು. ಅವರ ನಡವಳಿಕೆ, ನಿಯಂತ್ರಣಗಳಿಲ್ಲದ ವರ್ತನೆಗಳಿಂದ ಸಾಧ್ಯವಾದಷ್ಟೂ ದೂರವಿರುತ್ತಿದ್ದೆ. ಅವರನ್ನು ಬಲ್ಲ ಬಹುತೇಕ ಕಲಾವಿದರೂ ಈ 'ಹಿಂಸೆ'ಯನ್ನು ಅನುಭವಿಸಿದವರೇ!

ಕಚೇರಿಗೆ ಬಂದವರು 'ಇಂದು ಸರಿ ಇದ್ದೇನೆ ಮಾರಾಯ' ಎನ್ನುತ್ತಾ ಮಾತಿಗೆಳೆದರು. ಹೌದಲ್ಲಾ.. ಅಂದು ಹೊಸ ಭಟ್ಟರಾಗಿ ಕಂಡರು. 'ಯಕ್ಷಗಾನ ಹುಟ್ಟುವಾಗಲೇ ಬಂದದ್ದು. ನನ್ನ ಗ್ರಹಚಾರ ಸರಿಯಿಲ್ಲ. ನೋಡೋಣ, ತೆಂಕಿನ ಪ್ರಸಿದ್ಧ ಚೆಂಡೆ ವಾದಕರು ನನ್ನ ಮುಂದೆ ಚೆಂಡೆ ಹಿಡಿದು ನಿಲ್ಲಲಿ ನೋಡೋಣ. ಸವಾಲಿಗೆ ಸವಾಲ್. ಏನು ಮಾಡೋಣ. ಚೌಕಿಗೆ ಹೋದಾಗ ಎಲ್ಲರೂ ಡೋಂಗಿ ಮಾಡುವವರೇ,' ಮನಬಿಚ್ಚಿ ಮಾತನಾಡುತ್ತಾ ಹೋದರು.

'ನನ್ನ ತಂದೆಯವರ ಹೆಸರಿನ ಯಕ್ಷಗಾನ ಕೇಂದ್ರವೊಂದರ ಸ್ಥಾಪನೆ ನನ್ನ ಕನಸು. ಅದಿನ್ನೂ ಪೂರೈಸಿಲ್ಲ. ಹಣ ಹೊಂದಿಸಲು ನಾನು ಬಡವ. ಉಳ್ಳವರಲ್ಲಿ ಹೋದರೆ ಹತ್ತೋ ಐವತ್ತೋ ಕಿಸೆಗೆ ಹಾಕ್ತಾರೆ. ನನ್ನ ವಿಚಾರವನ್ನು ಕೇಳುವಷ್ಟೂ ಅವರಿಗೆ ಪುರಸೊತ್ತಿಲ್ಲ. ಅವರಲ್ಲಿ ಭಿಕ್ಷೆ ಕೇಳಲು ಹೋದಂತೆ ವರ್ತಿಸುತ್ತಾರೆ' ಹೀಗೆ ಒಂದಷ್ಟು ಹೊತ್ತು ಕಳೆದು, 'ಐವತ್ತು ರೂಪಾಯಿ ಬೇಕಿತ್ತು. ನಾಳೆ ಕೊಡ್ತೇನೆ,' ಎಂದರು. ಅವರ ಈ ಸ್ವಭಾವದ ಪರಿಚಯವಿದ್ದ ನಾನು 'ಅಸಹನೆ'ಯಿಂದಲೇ ಕೊಟ್ಟಿದ್ದೆ. ಆದರೆ ಅವರ ಹೇಳಿದಂತೆ ಮರುದಿವಸ ಹಣವನ್ನು ತಂದೂ ಕೊಟ್ಟರು. ಅಂದೂ ಕೂಡಾ ತುಂಬಾ ಹೊತ್ತು ಹಿರಿಯ ಕಲಾವಿದರ ಒಡನಾಟವನ್ನು ನೆನಪಿಸಿಕೊಂಡರು.

ಅಂದಿನ ಅವರ ಸ್ವಭಾವ ಬಹಳ ವಿಚಿತ್ರವಾಗಿ ಕಂಡಿತು. 'ಹೆಚ್ಚು ಮಂಡೆಬಿಸಿ ಆದರೆ ಏನು ಮಾಡೋದು ಮಾರಾಯ, ಹೊಟ್ಟೆಗೆ ಹಾಕಿದಾಗ ಕಡಿಮೆಯಾಗುತ್ತದೆ,' ವಿನೋದಕ್ಕೆ ಒಮ್ಮೆ ಹೇಳಿದ್ದರು. ಹಾಗಾಗಿ ಎಷ್ಟೋ ಸಲ ಅವರು ಅವರಾಗಿಯೇ ಇರುವುದಿಲ್ಲ. ಯಕ್ಷಗಾನ ಬದುಕಿನಲ್ಲಿ ಏನೋ ನಿರೀಕ್ಷೆಯನ್ನಿಟ್ಟುಕೊಂಡ ಭಟ್ಟರು, ಅದನ್ನು ಸಾಧಿಸಲಾಗುತ್ತಿಲ್ಲವಲ್ಲಾ ಎಂಬ ಕೊರಗು ಅವರನ್ನು 'ಮಂಡೆಬಿಸಿ' ಮಾಡಿತ್ತು ಎಂಬುದು ಅವರ ಪ್ರತಿಭೆಯನ್ನು ಅರಿತ ಮಂದಿಗೆ ಗೊತ್ತು.

ಸಹಜವಾಗಿ ಇಂತಹ ಹೊತ್ತಲ್ಲಿ ಯಾರನ್ನೂ ಸಮಾಜ, ಸ್ನೇಹಿತರು, ಬಂಧುಗಳು ಹತ್ತಿರ ಸೇರಿಸಿಕೊಳ್ಳುವುದಿಲ್ಲ. 'ತಲೆಂಗಳ ಚೆಂಡೆ ಹೆಗಲಿಗೇರಿಕೊಂಡರೆ ಸಾಕು, ಅದ್ಭುತ ಕೈಚಳಕ, ಅವರೊಬ್ಬ ಚೆಂಡೆಯ ಗಂಡುಗಲಿ,' ಅವರ ಸುದ್ದಿ ಮಾತನಾಡುವಾಗಲೆಲ್ಲಾ ಬರುವ ಹೊಗಳಿಕೆಯ ಮಾತು. ಆದರೆ ಅದೇ ತಲೆಂಗಳ 'ತಾನು ತಾನಾಗಿಯೇ ಇರದಿದ್ದಾಗ' ಒಳ್ಳೆಯ ರೀತಿಯಿಂದ ಮಾತನಾಡಿಸುವವರು ಎಷ್ಟು ಮಂದಿ ಇದ್ದರು? ಅವರು ಕೇಳುತ್ತಿರಲಿಲ್ಲ ಎಂಬುದು ಬೇರೆ ಮಾತು.

ತನ್ನ ಸಂಕಲ್ಪಿತ ಯಕ್ಷಗಾನ ಕೇಂದ್ರ, ತಂದೆಯವರ ಪ್ರಸಂಗ ಪುಸ್ತಕದ ಪ್ರಕಟಣೆ, ಯಕ್ಷಗಾನ ಪ್ರದರ್ಶನ.. ಹೀಗೆ ಕೆಲವು ವರ್ಷ ಕರಪತ್ರಗಳನ್ನು ಮುದ್ರಿಸಿ ಹಂಚುತ್ತಿದ್ದರು. ಆದರೆ ಕರಪತ್ರದಲ್ಲಿ ಮುದ್ರಿಸಿದಂತೆ ಕಲಾಪವನ್ನು ಅವರಿಗೆ ನಡೆಸಲು ತ್ರಾಸಪಡುತ್ತಿದ್ದರು.
ಆಸಕ್ತಿ ಹುಚ್ಚೆದ್ದು ಕುಣಿದಾಗ ಆಟ ಮಾಡುವ ಉಮೇದು. ಕರಪತ್ರಗಳನ್ನು ಅಚ್ಚು ಹಾಕಿಸಿ, ಪ್ರತಿಯೊಬ್ಬರನ್ನು ಭೇಟಿ ಮಾಡುತ್ತಿದ್ದರು. ವೇಷ ಮಾಡದವರಿಗೂ 'ನಿಮಗೊಂದು ವೇಷ ಉಂಟು' ಎನ್ನುತ್ತಾ ಒತ್ತಾಯಿಸುತ್ತಿದ್ದರು. ಕಲಾವಿದರನ್ನೂ ಗೊತ್ತು ಮಾಡುತ್ತಿದ್ದರು. ಆದರೆ ಆಟ ಆದುದು ಒಂದೋ ಎರಡೋ ಅಷ್ಟೇ. 'ಈಚೆಗೆ ಚಕ್ಕುಲಿ ಅಜ್ಜನ ಆಟದಲ್ಲಿ ವೇಷ ಮಾಡಿದ್ದೆ. ಹಿರಿಯ ಕಲಾವಿದರಲ್ವಾ. ಅವರ ಸೋಲಿಗೆ ನಾವು ಕಾರಣವಾಗಬಾರದು,' ತಲೆಂಗಳದವರನ್ನು ಹತ್ತಿರದಿಂದ ಬಲ್ಲ ಅರ್ಯಾಪಿನ ವೆಂಕಟೇಶ ಮಯ್ಯರು ಹೇಳುತ್ತಾರೆ.
ಅವರ ಚೆಂಡೆ ವೈಭವದ ಅಡಕ ತಟ್ಟೆಯಾಗಿತ್ತು. 'ಇದಾ, ನಿನಗೊಂದು ಇರಲಿ, ಪೈಸೆ ಬೇಡ' ಎನ್ನುತ್ತಾ ಸಿಡಿ ಕೊಟ್ಟಿದ್ದರು. ವಾರ ಕಳೆದು 'ಹೇಂಗಿದ್ದು' ಅಂತ ಹಿಮ್ಮಾಹಿತಿ ಪಡೆಯಲು ಮರೆಯಲಿಲ್ಲ. ತಲೆಂಗಳದವರ ಪ್ರತಿಭೆ ಎಲ್ಲವೂ ಅದರಲ್ಲಿ ಅನಾವರಣಗೊಳ್ಳದಿದ್ದರೂ, ಅವರ ಕೈಚಳಕಕ್ಕೆ ಸಾಕ್ಷಿಯಾಗಿದೆ.

ಎಷ್ಟೋ ಚೌಕಿಯಲ್ಲಿ ಚಕ್ಕುಲಿ ಅಜ್ಜನನ್ನು ಕೆರಳಿಸಿ, ಅವರು ಕೆರಳುವುದನ್ನು ನೋಡುತ್ತಾ 'ಸಂತೋಷ ಪಡುವ' ಪತನಸುಖಿಗಳ ಪರಿಚಯವಿದೆ. ಈ ರೀತಿ ಕೆರಳಿದಾಗ ಅದು ತಕ್ಷಣಕ್ಕೆ ಶಮನವಾಗುತ್ತಿರಲಿಲ್ಲ! ಆಟ ಉಂಟು ಅಂತ ಗೊತ್ತಾದರೆ ಸಾಕು, ಅಜ್ಜನಿಗೆ ಕರೆ ಬೇಡ. ನೇರವಾಗಿ ಚೆಂಡೆ-ಮದ್ದಳೆಗಳ ಹತ್ತಿರ ಹೋಗುತ್ತಿದ್ದರು. ಕಿರಿಕಿರಿಯಾಗುವಷ್ಟೂ ವಾಚಾಳಿಯಾಗುತ್ತಿದ್ದರು. ಒಂದರ್ಧ ಗಂಟೆ ಅಷ್ಟೇ. ಮತ್ತೆ ಅವರ ಪಾಡಿಗೆ ಹೋಗುತ್ತಿದ್ದರು. ಇಲ್ಲ, ಪ್ರದರ್ಶನ ನೋಡುತ್ತಿದ್ದರು.

ಒಮ್ಮೆ ಯಾವುದೋ ಚೌಕಿಯಲ್ಲಿ ಅವರಿಗೆ ಅವಮಾನವಾಗಿತ್ತು. ರಾದ್ದಾಂತ ಎಬ್ಬಿಸಿದ್ದರು. 'ನಿಮ್ಮ ಯಾರ ಸಹವಾಸವೂ ಬೇಡ. ನಾನು ಅಡುಗೆಗೆ ಹೋದರೆ ದಿವಸಕ್ಕೆ ಐನೂರು ರೂಪಾಯಿ ಸಂಪಾದಿಸ್ತೇನೆ' ಎಂದು ಏರು ಸ್ಥಾಯಿಯಲ್ಲಿ ಹೇಳಿದ್ದರು.

ಯಕ್ಷಗಾನ ರಂಗದಲ್ಲಿ ತಲೆಂಗಳ ಎಷ್ಟು ದೊಡ್ಡವರೋ, ಸೂಪಜ್ಞರಾಗಿಯೂ ಅಷ್ಟೇ ದೊಡ್ಡವರು. ಯಾರದ್ದೇ ಹಂಗಿಲ್ಲದೆ ಬದುಕುವ, ಯಕ್ಷಗಾನ ರಂಗವನ್ನು ತನ್ನ ವಿದ್ವತ್ತಿನಿಂದ ಮೆರೆಸುವ ಎಲ್ಲಾ ಸಂಪನ್ಮೂಲಗಳು ಅವರಲ್ಲಿದ್ದರೂ 'ವಿಜಯಲಕ್ಷೀ' ಅವರಿಗೆ ಒಲಿಯಲಿಲ್ಲ. ಧನಲಕ್ಷ್ಮೀ ಹತ್ತಿರ ಸುಳಿಯಲಿಲ್ಲ.

ತನಗೆ ಅಂಟಿಕೊಂಡ ವಿಕಾರಗಳೇನೇ ಇರಲಿ. ಅದರಿಂದ ಕಳಚಿಕೊಳ್ಳಲೂ ಅವರಿಗೆ ಗೊತ್ತಿತ್ತು. ಅಂಟಿಸಿಕೊಳ್ಳಲೂ ಗೊತ್ತಿತ್ತು! ಯೋಗವಿದ್ದವರಿಗೆ ಯೋಗ್ಯತೆಯಿಲ್ಲ. ಯೋಗ್ಯತೆಯಿದ್ದವರಿಗೆ ಯೋಗವಿರುವುದಿಲ್ಲ!

ಯಕ್ಷಗಾನದ ಸ್ಟೇಜ್ನಲ್ಲಿ 'ಗಟ್ಟಿ ಪೆಟ್ಟಿನ' ನಾದ ಇನ್ನು ಕೇಳುವುದಿಲ್ಲ, ಎನ್ನುತ್ತಾ ಕಲಾವಿದ ರಾಜರತ್ನಂ ಅಜ್ಜನ ಚೆಂಡೆ ವಾದನ, ಶ್ರುತಿ ಜ್ಞಾನ, ರಂಗ ಜಾಣ್ಮೆಗಳನ್ನು ಅವರ ಉತ್ತರಕ್ರಿಯೆಯ ಸಂದರ್ಭದಲ್ಲಿ ನೆನಪಿಸಿಕೊಂಡರು.

2 comments:

  1. A National Festival of Yakshagana at Delhi

    Even though Yakshagana emerged as a unique art form today, it has multiple existences in Karnataka. Doddata, Sannata, Moodalapaya and Paduvalapaya are its regional variations. Moodalapaaya is performed in northern parts of Karnataka and Paduvalapaya is popular in coastal Karnataka which includes the districts of Dakshina Kannada, Udupi, Shimoga, Chikkamagalur, Coorg and in the adjoining areas like Kasaragodu of Kerala State. The coastal Yakshagana again has two main variations called tenku tittu ( ie Southern style) and Badagu Tittu ( Northern style). Both styles have a night long stage performances with music, dance, costumes and dialogues. Talamaddale is another form, which has only spoken world. However after Dr. Shivaram Karanth, nobody has tried to popularize this art form in National or International level. UNESCO Has recognized Kuttiyatam as ‘intangible Cultural Heritage ‘ but not Yakshagana.

    In this context, Karnataka Yakshagana Academy, Bangalore and Academy of Tenkutittu Yakshagana Delhi is organizing a four day festival at Delhi from August 4-7 to popularize few variants of Yakshagana at National level. .Many local cultural organizations are also geared up for this grand event. The festival will be inaugurated on August 4th at 6.30 am at Delhi Karnataka Sangha Auditorium ( Rao Tularam Marg,, RK Purma Sector -12, New Delhi-23, Ph: 26109615). Honorable minister for corporate affairs, Mr. Veerappa Moily has kindly agreed to inaugurate the festival. Noted Yakshagana artist and President of Karnataka Yakshagana Academy Mr. Kuble Sundara Rao will preside over the function.

    Demos and Performances: Various performances and Demonstrations have been arranged at various places at Delhi as part of the festival. There will be performances at Delhi Karnataka Sangha on 4,6th and 7th evening which includes A talamaddale (Oral performance), a musical Shrikrishna Parijata and mythical episodes performed in both Northern and Southern styles. Lecture demonstrations have been arranged at National School of Drama on August 5th, 10.-1 pm) and at the Department of Modern Indian Languages, Delhi University on August 5th,. 3-6 pm.

    Noted artists of Yakshagana, Mr. Chittani Ramachandra Hegade, Keshva Kolagi, Puttige Raghuram Holla, Padyana Shankaranarayana Bhat, Dr. Kolyur Ramachandra Rao, Surikumer Govinda Bhat and many others are participating in these four days festival.

    The festival concludes on August 7th evening wherein Dr. VS Acharya, Honorable minister for Higher Education , Government of Karnataka will be giving concluding remarks.
    For details contact 9811628627, 9312573336, 9811733378

    ReplyDelete
  2. ತಲೆಂಗಳ ಗೋಪಾಲ ಕೃಷ್ಣ, ( ಚಕ್ಕುಲಿ) ತೆಂಕಿ ಹಿಮ್ಮೇಳ ದ ಅನ್ವರ್ಥ ನಾಮ
    "ಚೆಂಡೆ ” ಅಂದರೆ ಇವರು"


    ತಲೆಂಗಳ ಚಕ್ಕುಲಿ ಭಾಗವತರ ಮಗ ಇವರು ಎಂದು ನಾನು ತಿಳಕೊಂಡಿದ್ದೆ. ಇವರನ್ನ
    ಚಕ್ಕುಲಿ ಚೆಂಡೆ... ಅನ್ನುವುದನ್ನ ಕೇಳಿದ್ದೆ. ಚೆಂಡೆಗೆ ತನ್ನ ತಲೆಯ ಮೇಲಿನಿಂದ
    ಕೋಲಿನಲ್ಲಿ ಬಾರಿಸುವಾಗ ಮುಚ್ಚಿಗೆ ಒಡೆದು ಹೋಯಿತೋ ಎಂಬಂತೆ ನಮ್ಮನ್ನ ಭ್ರಮೆ
    ತಳ್ಳುವ ನುಡಿಗಾರ ಇವರು ಎಂದು ನನಗನಿಸಿತ್ತು.

    ಹವ್ಯಾಸಿ ಚೆಂಡೆ ವಾದನ ಕಾರ ಡಾ. ಪ್ರಕಾಶ್ ಬಂಗಾರಡ್ಕ ಇವರ ಶಿಷ್ಯ ಎಂದು ಏನೂ
    ಅಳುಕಿಲ್ಲದೆ ಹೆಮ್ಮೆಯಿಂದ ಹೇಳುತ್ತಾರೆ.. ನಮ್ಮ ಮಣಿಲಾ ಮನೆಯವರು ಯಕ್ಷಾಗಾನ
    ತಾಳಮದ್ದೆಲೆ, ಬಯಲಾಟ ’ ಹುಚ್ಚಿ" ನವರು ಎಂದು ತಿಳಿದ ಇವರು ನಮ್ಮ ಮಣಿಲಾ ಸಂಸ್ಥೆಗೆ
    ನಮ್ಮ ಸಂಸ್ಥೆ ಸ್ಥಾಪಕ ನಮ್ಮಣ್ಣ ಶ್ರೀ ಸುಬ್ಬಣ್ಣ ಶಾಸ್ತ್ರಿಗಳೂ ವ್ಯವಹಾರದಲ್ಲಿ
    ಇರುವಾಗಲೇ ಅಗಾಗ್ಗೆ ಬಂದು ಅಡಿಕೆ ಶ್ರೀ ನಾ. ಕಾರಂತರು ತಮ್ಮ ಬ್ಲಾಗಲ್ಲಿ
    ವಿವರಿಸಿದ ದೃಶ್ಯ ವನ್ನು ನಮ್ಮ ಧರ್ಭೆ ಅಂಗಡಿ ಯಲ್ಲಿ ನನ್ನೆದುರು ಬಹುಷಃ 1981
    ರಿಂದಲೇ ಮಾಡುತ್ತಿದ್ದರು.. ಅದನ್ನ ಮೊನ್ನೆ ಮೊನ್ನೆ ಯವರೆಗೆ ನಾನೂ
    ಅನುಭವಿಸುತ್ತಿದ್ದೆ.

    ನಮ್ಮಲ್ಲಿ ಸಾಮಾನ್ಯ ವಾಗೆ ಮಳೆ ಗಾಲದಲ್ಲಿ ಒಂದು ಮಣ್ಣು ಮೆತ್ತಿದ ಕವರ್
    ನಲ್ಲಿ " ಗೌರವ ಪ್ರವೇಶ " ಎಂಬ ಕಾರ್ಡ್ ನೊಂದಿಗೆ ಒಂದು ನೋಟೀಸು. ಅದರಲ್ಲಿ
    ಪ್ರಸಿದ್ದ ಕಲಾವಿದರ ಕೂಡುವಿಕೆಯ " ಆಟ " . ನನ್ನ ಮೆಚ್ಚಿಗೆ ಯಾ ಕಲಾವಿದರು
    ಭಾಗವತರನ್ನ ತಿಳಿದಿರುವ ಅವರನ್ನು ನನಗೆ ತೋರಿಸಿ ಅವರ ನನಸಾಗದ ಯಕ್ಶಗಾನ ತರಬೇತಿ
    ತರಗತಿ ಯ ಸ್ಥಾಪನೆಯ ಕನಸನ್ನ ಬಿಚ್ಚಿ ಗೌರವ ಧನ ಪಡೆಯುತ್ತಿದ್ದರು.

    ಮಳೆಗಾಲ ದಲ್ಲಿ ನೋಟೀಸು ಕವರ್ ಇಲ್ಲದೆ ಬಂದರೆ ಹಿಂದಿನ ದಿನ ಗಳಲ್ಲಿ ಚೌಕಿ
    ವಿವಾದ ವನ್ನ ತನ್ನ ನಿಲುವನ್ನೆ ಸರಿ ಎಂದು ತಲೆ ಬುಡ ತಿಳೀಯದ ನನ್ನಲ್ಲಿ ವಾದ
    ಮಂಡಿಸಿ ನನ್ನ ಗ್ರಾಹಕರಿಗೆ ನಾನೇ ಇವರ ಎದುರುವಾದಿ ಎಂಬಂತೆ ಇವರ ಸ್ವರ ಏರಿದಾಗ ನಾನು
    ಭಯ ಪಟ್ಟು ಗೋಪಾಲಣ್ಣಾ ಊಟ ಆತಾ ಎಂದು ಮಾತು ಬದಲಾಯಿಸಿದರೆ..." "ಉದಿಯಪ್ಪಾಗಾಣ
    ಕಾಪಿ ಚಾ ವೇ ಆಯಿದಿಲ್ಲೆ ಶಾಸ್ತ್ರಿಗಳೇ " ಎಂದು ಬೊಚ್ಹು ಬಾಯಿಯಿಂದ್ ಗೊಳ್ಳನೆ
    ನಗುತ್ತಾಅತ್ತಿತ್ತ ನೋಡಿ ಮುಖ ಹುಳ್ಳ ಹುಳ್ಳಗೆ ಮಾಡಿ ತಿಂಡಿ ಬಯಸುವ ಮಕ್ಕಳಂತೆ
    ಕಂಡು ನನ್ನಿಂದ ಊಟ ದ ವ್ಯವಸ್ಥೆ ಯನ್ನ ನಿರೀಕ್ಷಿಸುತ್ತಿದ್ದರು.

    ಆ ವ್ಯವಸ್ಥೆ ಆದೋಡನೆ.. "ನಿಂಗಳ ಮಗ ಸಧ್ಯ ವೇಷ ಎಲ್ಲಿಯಾದರೂ ಮಾಡಿದನಾ...
    ನಿಂಗಳ ಮಗನ ಗುರು ಶ್ರೀಧರ ಭಂಡಾರಿ ಲಾಯಿಕ ಕಲುಶುಗು.. ಅವಂಗೆ ತಾಳ ಜ್ನಾನ ಇದ್ದು..
    ನಿಂಗೊ ಒಂದು ಕೆಲ್ಸ ಮಾಡಿ ಅವಂಗೆ :ಚೆಂಡೆ : ರಜ ರಜ ಕಲಿಸಿ.. ನಿಂಗೊಗೆ ಅಕ್ಕು
    ಹೇಳೀದ್ರೆ ಆನೇ ನಿಂಗಳ ಮನೆಗೆ ಬಂದು ಕಲುಶುವೆ. " ಎಂದು ಆಗಾಗ ಈ ವಿಚಾರದಲ್ಲಿ
    ನಮ್ಮೋಳಗೆ ಮಾತುಕತೆ. ಅನೇಕ ವರ್ಷ ನಡೆಯುತ್ತಿತ್ತು.

    ನನ್ನ ಮಗ ಶಿವಶಂಕರ,(ಶಿ.ಶ) ಒಂದೊಮ್ಮ್ಬೆ ಚೆಂಡೆ ಕಲಿಯಲು ಬೊಳುವಾರಿನಲ್ಲಿ
    ಯಾರೊಂದಿಗೋ ಹೊರಟ. ಒಂದೆರಡು ತಿಂಗಳೂ ಹೋದ. ನಂತರ ಸಮಯ ಹೊಂದಾಣಿಕೆ, ಓದು ಎಂದು
    ಮುಂದುವರಿಸಲಿಲ್ಲಾ.



    ತಲೆಂಗಳ ದವರು ಬಂದಿದ್ದಾಗ ನಾನು ಹೇಳೀದೆ. " ಛೇ... ನಾನು ಕಲಿಸುತ್ತೇನೆ
    ಹೇಳಿದ್ದೆ... ನೀವ್ಯಾಕೆ ಗಡಿ ಬಿಡಿ ಮಾಡಿದ್ದು... ಈ ತಾಳ ಜ್ನಾನ ಇಲ್ಲ್ಲದ್ದ
    ಅರ್ಧರ್ದ ಗೊಂತಿಪ್ಪರೋತ್ತರೆ ಕಳ್ಸಡಿ.. ಕೈ ಕೂದರೆ ಮತ್ತೆಕಷ್ಟ. ತಿದ್ದುಲೆ ಬಾರೀ
    ಬಂಗ. ಅವ ಬರಲಿ ಮನಗೆ ಬೈಕಿದ್ದಲ್ಲಾದ ಎನಗೆ ಪೈಸೆ ಕೊಡುದು ಬೇಡಾ. ಇಲ್ಲದ್ದರೆ
    ಆನೇ ಬತ್ತೆ ನಿಂಗಳ ಮನೆಗೆ.. ಎಂದು.. ಊಟ ಆಯಿದಿಲ್ಲೆ... !! ... ಮುಂದೆ...
    ಗೊತ್ತಾಯಿತಲ್ಲಾ

    ಬಹುಶಃ ಜುಲೈ ಇರಬೇಕು.. ನಾನು ನನ್ನ ಕಾರ್ಯಾಗಾರ ಕ್ಕೆ ಬಂದಿದ್ದಾಗ ನನ್ನ
    ಕಛೇರಿಯಲ್ಲಿ ಒಂದು ಸುಂದರ ಹಲಸಿನ ಮರದ ಚೆಂಡೆ ಕುತ್ತಿ ಇತ್ತು. ನನ್ನ ಸಹಾಯಕ
    ಹೇಳಿದ.. " ಚೆಂಡೆ ಭಟ್ರು ಬಂದಿದ್ದರು.. ಈ ಚೆಂಡೆ ಕುತ್ತಿ ನಿಮ್ಮ ಮಗನಿಗಂತೆ..
    ಅವರು ಮಾತ್ನಾಡಲು ಬರ್ತಾರಂತೆ(!). ಜಾಗ್ರತೆ ಯಲ್ಲಿ ತೆಗೆದಿರಿಸ ಬೇಕಂತೆ" ನನಗೆ
    ಆಶ್ಚರ್ಯ ಆಯಿತು.

    ಎರಡು ದಿನ ದ ನಂತರ "ಸುದ್ದಿ" ಪತ್ರಿಕೆ ನೋಡಿದೆ. ತೆಂಕು ತಿಟ್ಟಿನ
    ಇತಿಹಾಸದ ಒಂದು ಮೈ ನವಿರೇಳಿಸುವ ಚೆಂಡೆ ಸದ್ದು ಅಡಗಿತು. ಚಕ್ಕುಲಿ ಚಿಂಡೆ..ಯ
    ಗೋಪಾಲಣ್ಣ ಇನ್ನು ನಮ್ಮ ಅಂಗಡಿಗೆ ಗೌರವ್ ಪ್ರವೇಶ.. ಟಿಕೇಟು... ಊಟ ಆಗಿಲ್ಲಾ
    ಎಂದು ಬರುವುದಿಲ್ಲಾ.. ನಾನು ನೀಡಿದ್ದು ಅವರಿಗೆ ತೃಣ..

    ನನಗೆ,,, ನನ್ನ ಮಗನಿಗೆಂದು ನೀಡಿದ "ಚೆಂಡೆ ಕುತ್ತಿ" ಗೆ ಮೌಲ್ಯ...!!!!





    ಈಗ ನಮ್ಮ ಮಕ್ಕಳು ಮನ ಅರಳಿಸುವ ಭಾರತೀಯ ಸಂಸ್ಕೃತಿ ಯನ್ನ , ಕಲೆ ಯನ್ನ
    ತುಚ್ಚೀಕರಿಸಿ ಪಾಶ್ಚ್ಯಾತ್ಯ ಸಂಸ್ಕೃತಿ ಯ ಕೆರಳಿಸುವ ಹುಚ್ಚನ್ನೂ ಕಲಿಯದೆ
    ಅತಂತ್ರವಾಗುತ್ತಿರುವದನ್ನ . ನೋಡುತ್ತಾ ರಾಜ ಕಾರಣಿಗಳ ಪುರಾಣ ಕತೆ , ದೇಶ ಭಕ್ತರ
    ಜೀವನ ಚರಿತ್ರೆ ಎಂದು " ಸಂಸ್ಕಾರ ಶಿಕ್ಶಣ" ವೆಂಬ ಪ್ಯಾಶನೇಬಲ್ ಏಂಟಿ ಬಯೊಟಿಕ್
    ಔಷಧ ವನ್ನು ಭಾಷಣಗಳೂ.. ಕಾರ್ಯಾಗಾರ” ವೆಂದು ಮಕ್ಕಳ ತಲೆ ತಿನ್ನುವದನ್ನ ಎಲ್ಲ ಕಡೆ
    ಕಾಣುತ್ತೇವೆ.



    ಕೇವಲ.... ಯಕ್ಷಗಾನ ಕಲಿಸಿ... ಸಾಕು..! ಅದು ಕಲೆ ಗಳಲ್ಲಿ " ಕುಬೇರ.."
    ಅಲ್ಲಿ ಎಲ್ಲ ಇದೆ.



    ಮಣಿಲಾ ಮಹಾದೇವ ಶಾಸ್ತ್ರಿ..
    *
    chakrakodi mahadeva shastry , manila
    +9109448152824

    ReplyDelete