Friday, June 8, 2012

ಹಿರಿಯ 'ಚೌಕಿ' ಕಲಾವಿದ - ಕೂಡ್ಲು ಶಂಭು ಬಲ್ಯಾಯ

ಹವ್ಯಾಸಿ ತಂಡಗಳ ಪ್ರದರ್ಶನಗಳ ಹಿಂದೆ ನೇಪಥ್ಯ ಕಲಾವಿದರ ದುಡಿಮೆ ಅಜ್ಞಾತ. ತೆರೆಮರೆಯಲ್ಲಿದ್ದು ದೇವತೆಗಳನ್ನು, ದಾನವರನ್ನು ಸೃಷ್ಟಿಸುವ ಸುಭಲಿಗರು. ಪ್ರದರ್ಶನದ ಯಶಸ್ಸಿನ ಹಿಂದೆ 'ಚೌಕಿ ಕೆಲಸ'ದ ಸಾರಥ್ಯ ಹೊತ್ತ ಕರ್ಮಿಗಳ ಜವಾಬ್ದಾರಿ ಹಿರಿದು. ಒಮ್ಮೆ ಚೌಕಿ ಪ್ರವೇಶಿಸಿದರೆ ಸಾಕು, ಮತ್ತೆಲ್ಲವೂ ಅಲೌಕಿಕ ಸಂಬಂಧ!

ಕೂಡ್ಲು ಶಂಭು ಬಲ್ಯಾಯರು (ಶಂಭಣ್ಣ) ಹಿರಿಯ ನೇಪಥ್ಯ ಕಲಾವಿದ. ಮೇ 16 ರಂದು ಅವರ ಮರಣ ವಾರ್ತೆ ಕೇಳಿದಾಗ ಒಡನಾಟದ ಕ್ಷಣಗಳು ಮಿಂಚಿ ಮರೆಯಾದುವು. ಕಾಸರಗೋಡು ಪರಿಸರದ ಒಂದು ಕಾಲಘಟ್ಟದ ಯಕ್ಷಗಾನ ಆಟಗಳ ಸುದ್ದಿ ಮಾತನಾಡುವಾಗ ಬಲ್ಯಾಯರನ್ನು ಮರೆಯುವಂತಿಲ್ಲ.

ಚೌಕಿಯ ದುಡಿಮೆಗಾರರೂ ಕಲಾವಿದರು. 'ಡ್ರೆಸ್ ಕಟ್ಟುವವರು, ಚೌಕಿಯವರು' ಎಂಬುದು ಅಡ್ಡ ಹೆಸರು. ಯಾರೋ ಬಂದು ಚೌಕಿಯ ಕೆಲಸವನ್ನು ಮಾಡಲಾಗುವುದಿಲ್ಲ. ವೇಷಗಳಿಗೆ ಡ್ರೆಸ್ ಕಟ್ಟುವವನಿಗೆ ಯಾವ ವೇಷ ಎಷ್ಟು ಹೊತ್ತಿಗೆ ರಂಗಪ್ರವೇಶಿಸಬೇಕು ಎನ್ನುವ ಅರಿವು ಬೇಕು. ಇದಕ್ಕಾಗಿ ಪುರಾಣ ಜ್ಞಾನ ಬೇಕು. ರಂಗದ ಪರಿಕಲ್ಪನೆ ಬೇಕು. ವೇಷಧಾರಿಯಾದರೆ ಕೆಲಸ ಸುಲಭವಾಗುತ್ತದೆ, ಹಿಂದೊಮ್ಮೆ ಮಾತಿಗೆ ಸಿಕ್ಕಾಗ ಆಡಿದ್ದ ಶಂಭಣ್ಣನ ಮಾತು ಮರೆತು ಬಿಡುವಂತಹುದಲ್ಲ. ನಡೆಯುತ್ತಿದ್ದ ಆಟಗಳ ಚೌಕಿಯಲ್ಲಿ ಈ ಕಾರಣದಿಂದಾಗಿ 'ಶಂಭಣ್ಣ'ನಿಗೆ ಬೇಡಿಕೆ.

ವೃತ್ತಿ ಕಲಾವಿದರಿಗೆ ವೇಷಭೂಷಣಗಳನ್ನು ವ್ಯವಸ್ಥೆ ಮಾಡಿಟ್ಟರಾಯಿತು, ಸ್ವತಃ ತೊಟ್ಟುಕೊಳ್ಳುತ್ತಾರೆ. ಹವ್ಯಾಸಿಗಳಿಗೆ ಅಸಾಧ್ಯ. ಬಣ್ಣ ಹಾಕುವಲ್ಲಿಂದ ಡ್ರೆಸ್ ಕಟ್ಟುವ ವರೆಗೆ ಅವಲಂಬನೆ ಬೇಕು. ಇಂತಹ ಹೊತ್ತಲ್ಲಿ ವೈಯಕ್ತಿಕವಾದ ವಿಕಾರಗಳಿಗೆ ಬಲಿಯಾಗುವುದು ನೇಪಥ್ಯ ಕರ್ಮಿಗಳು. 'ಡ್ರೆಸ್ ಸರಿಯಿಲ್ಲ, ಕಿರೀಟ ಮಸುಕಾಗಿದೆ. ಗೆಜ್ಜೆಯ ಹಗ್ಗಗಳು ಕಿರಿದಾಗಿದೆ..' ಮೊದಲಾದ ಗೊಣಗಾಟಗಳಿಗೆ ಮೌನದಿಂದಲೇ ಉತ್ತರ ಕೊಡಬೇಕಾದ ಸ್ಥಿತಿ. ಶಂಭಣ್ಣ 'ವೈವಿಧ್ಯಮಯ' ಗೊಣಗಾಟಗಳನ್ನು ನೋಡಿ, ಮೌನವಾಗಿದ್ದು, ಅನುಭವಿಸಿದ ಕಲಾವಿದ.

ತನ್ನ ಹದಿಮೂರನೆಯ ವಯಸ್ಸಿನಲ್ಲಿ ಬಣ್ಣ ಹಚ್ಚಿದ ಬಲ್ಯಾಯರು ಮಧೂರು ಮೇಳದಿಂದ ಅಲ್ಪ ಕಾಲದ ತಿರುಗಾಟ ಮಾಡಿದ್ದರು. ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯ ಮೂಲಕ ಮುಂದಿನ ವ್ಯವಸಾಯ. ಮಾಳಂಗಾಯ ಕೃಷ್ಣ ಭಟ್, ವೇದಮೂರ್ತಿ ವೆಂಕಟ್ರಮಣ ಭಟ್.. ಇವರ ಒಡನಾಟದಿಂದ ಮಣ್ಣಿನ ಮುದ್ದೆ ಮೂರ್ತಿಯಾಯಿತು. ಡಾ.ಶೇಣಿಯವರ ವ್ಯವಸ್ಥಾಪಕತ್ವದ ಕೂಡ್ಲು ಮೇಳದಿಂದಾಗಿ ಶಿಲ್ಪಕ್ಕೆ ಚಲನೆ ಬಂತು. ಪೂರ್ವರಂಗದ ಅಭ್ಯಾಸ. ಸಣ್ಣಪುಟ್ಟ ಪಾತ್ರಗಳ ನಿರ್ವಹಣೆ. ಡಾ.ಶೇಣಿಯವರ 'ಬಪ್ಪಬ್ಯಾರಿ' ಪಾತ್ರದ ಜತೆ ಶಂಭು ಬಲ್ಯಾಯರದ್ದು 'ಉಸ್ಮಾನ್' ಹಲವಾಗಿವೆ. ಮೂರರ ತನಕ ಶಾಲಾಭ್ಯಾಸದ ಶಂಭಣ್ಣ ಮೇಳದಲ್ಲಿ ಕಲಿತುದೇ ಹೆಚ್ಚು. ವೈಯಕ್ತಿಕ ಅನನುಕೂಲಗಳಿಂದ ಮೇಳ ತಿರುಗಾಟಕ್ಕೆ ನಿಲುಗಡೆ. ಬದುಕಿಗಾಗಿ ನೇಯ್ಗೆ ವೃತ್ತಿ. ರಾತ್ರಿ ಹಾಸ್ಯ ಕಲಾವಿದನಾಗಿ ಭಾಗಿ. ಆದರೆ ಅವರನ್ನು ನೇಪಥ್ಯ ಕರ್ಮಿಯಾಗಿ ಯಕ್ಷಗಾನ ಸ್ವೀಕರಿಸಿದೆ. ಮೇಳ ಅನುಭವಗಳ ನೇರ ಅನುಭವ ಹವ್ಯಾಸಿ ಕ್ಷೇತ್ರಕ್ಕೆ ಪ್ರಾಪ್ತವಾಗಿದೆ.

ಶಂಭಣ್ಣ ಚೌಕಿಯ ನಿರ್ವಹಣೆಯಲ್ಲಿದ್ದರೆ ಚೌಕಿ ಪ್ರವೇಶದಲ್ಲಿಯೇ ಗೋಚರವಾಗುತ್ತದೆ. ಅಷ್ಟೊಂದು ಒಪ್ಪ-ಓರಣ. ಚಿಟ್ಟೆಪಟ್ಟಿ, ಗೆಜ್ಜೆ, ಇಜಾರು, ಸಾಕ್ಸ್, .. ಎಲ್ಲೆಲ್ಲಿರಬೇಕೋ ಅಲ್ಲಲ್ಲಿರುತ್ತಿತ್ತು. ಹುಡುಕುವ ಪ್ರಮೇಯ ಬರುತ್ತಿರಲಿಲ್ಲ. ಕಿರೀಟ ಶಿರದಲ್ಲಿ ಆಧರಿಸಿ ನಿಲ್ಲಲು 'ಚಿಟ್ಟೆಪಟ್ಟಿ' ಕಟ್ಟಬೇಕು. ಅದು ಹೆಚ್ಚು ಬಿಗಿಯಾದರೆ, ವೇಷವು ಚೌಕಿಯಲ್ಲೇ ಪ್ರದರ್ಶನ ಮುಗಿಸುತ್ತದೆ! ಸಡಿಲವಾದರೆ ರಂಗ ಪ್ರವೇಶಿಸುವಾಗಲೇ ಕಿರೀಟ ಕರದೊಳಗೆ! ಈ ಬಿಗಿಯ ಸಮನ್ವಯ ಶಂಭಣ್ಣನಿಗೆ ಕರತಲಾಮಲಕ. ಈ ಸೂಕ್ಷ್ಮ ಗೊತ್ತಿದ್ದ ಕಲಾವಿದರು ಶಂಭಣ್ಣನಲ್ಲಿಯೇ ಚಿಟ್ಟಿಪಟ್ಟಿ ಕಟ್ಟಿಸಲು ಕಾಯುತ್ತಿದ್ದ ದಿವಸಗಳಿದ್ದುವು.

ಮೇಳದಲ್ಲಿ ನಿರ್ವಹಿಸುತ್ತಿದ್ದ ಕೆಲವು ಪಾತ್ರಗಳು ಅವರಿಗೆ ನೆನಪಾದರೆ ಸಾಕು, ಸಂಘಟಕರಲ್ಲಿ ವಿನಂತಿಸಿ ಪಾತ್ರಗಳನ್ನೂ ಮಾಡುತ್ತಿದ್ದರು. ಗಿರಿಜಾ ಕಲ್ಯಾಣ ಪ್ರಸಂಗದ 'ಭೈರಾಗಿ', ಇಂದ್ರ್ರಜಿತು ಕಾಳಗದ 'ಜಾಂಬವ' ಪಾತ್ರಗಳು ಮಾಸ್ಟರ್ಪೀಸ್! ಈ ಪ್ರಸಂಗಗಳಿದ್ದರೆ ಪಾತ್ರಗಳು ಅವರಿಗೇ ಮೀಸಲು. ಒಂದು ವೇಳೆ ಪಾತ್ರ ನಿರ್ವಹಿಸಲು ಅವಕಾಶ ಕೊಟ್ಟಿಲ್ಲ ಅಂತಾದರೆ ಕೆರಳಿದ ಘಟನೆಗಳೂ ಇವೆ! ಚಿಕ್ಕಪುಟ್ಟ ಪಾತ್ರಗಳಿಗೆ ಕಲಾವಿದರು ಕೈಕೊಟ್ಟರೆ ಆ ಜಾಗವನ್ನು ಚೌಕಿಯ ಕೆಲಸದ ಜತೆಜತೆಗೆ ಶಂಭಣ್ಣ ಸರಿದೂಗಿಸಿದ್ದೂ ಉಂಟು.

ಶಂಭಣ್ಣ ಯಕ್ಷಗಾನದಿಂದ ಹೆಚ್ಚು ಪಡೆಯಲಿಲ್ಲ. ಆರ್ಥಿಕವಾಗಿ ಶ್ರೀಮಂತರಲ್ಲ. ಅಹಂಕಾರ ದರ್ಪಗಳಿರಲಿಲ್ಲ. ಬಡತನದ ಬದುಕು. ಬದುಕಿನಲ್ಲಿ ಭಯ - ಭಕ್ತಿಯ ಸಮನ್ವಯದ ಪಾಕ. ರಂಗವನ್ನು ಆರಾಧಿಸುವ ವ್ಯಕ್ತಿತ್ವ. ಚೌಕಿಯ ಯಾವ ಕೆಲಸವನ್ನು 'ಆಗದು' ಎಂದು ದೂರವಿರುತ್ತಿರಲಿಲ್ಲ. ಸಂಘಟಕರ ಎದುರು ತನಗೆ ನೀಡಿದ ಸಂಭಾವನೆಯ ಕವರನ್ನು ಶಂಭಣ್ಣ ಎಂದೂ ಒಡೆದು ನೋಡಿದವರಲ್ಲ! ಬದುಕಿನ ಉತ್ತರಾಪಥದಲ್ಲಿ ಅವರ ಶ್ರವಣಶಕ್ತಿ ಮೊಟಕಾಗಿತ್ತು. 'ತೊಂದರೆಯಿಲ್ಲ, ಯಾರು ಏನು ಹೇಳಿದರೂ ಕೇಳುವುದಿಲ್ಲ. ಚೌಕಿಯಲ್ಲಿ ಹಾಗಿರುವುದು ಒಳ್ಳೆಯದಲ್ವಾ' ವಿನೋದವಾಗಿ ಹೇಳಿದ ಅವರ ಮಾತಿನ ಹಿಂದೆ ಖೇದವಿದೆಯಲ್ವಾ.

ಕೂಡ್ಲು ಗೋಪಾಲಕೃಷ್ಣ ದೇವರ ಪರಮ ಭಕ್ತ. ವಾರ್ಶಿಕ ಮಹೋತ್ಸವದಂದು ದೇವರೆದುದು ಕೃಷ್ಣ ವೇಷತೊಟ್ಟು ಕುಣಿದರೆ ಇಹವನ್ನು ಮರೆಯುತ್ತಿದ್ದರು! ಕಾಸರಗೋಡು ಜಿಲ್ಲೆಯ ಕೂಡ್ಲು ಎಂಬಲ್ಲಿ ವಾಸ. ಪತ್ನಿ ಗಿರಿಜಾ. ಮೂವರು ಗಂಡು, ಮೂವರು ಹೆಣ್ಣುಮಕ್ಕಳು. ಮಧೂರು ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘ, ಶ್ರೀ ಮಲ್ಲ ಮೇಳಗಳಿಗೆ ಶಂಭು ಬಲ್ಯಾಯರು ಖಾಯಂ ನೇಪಥ್ಯ ಕಲಾವಿದರಾಗಿದ್ದರು. ಬದುಕಿನ ಕೊನೆಯ ವರ್ಷಗಳಲ್ಲಿ ಶಾರೀರಿಕ ಅಸೌಖ್ಯತೆಯಿಂದಾಗಿ ಚೌಕಿಯಿಂದ ದೂರವಿದ್ದ ಶಂಭು ಬಲ್ಯಾಯರು 'ಯಕ್ಷಗಾನದ ಚೌಕಿಗೆ ಮಾನ' ತಂದ ಕಲಾವಿದ. ಅಗಲಿದ ಚೇತನಕ್ಕೆ ಅಕ್ಷರ ನಮನ.

No comments:

Post a Comment