Wednesday, November 19, 2014

ಮರ್ಕಂಜ-ರೆಂಜಾಳದಲ್ಲಿ : ಕೀರಿಕ್ಕಾಡು-ದಾಸರಬೈಲು ನೆನಪು


            ಕಾಲ ಓಡುತ್ತಿದ್ದಂತೆ ಕಾಲಘಟ್ಟಗಳು ಇತಿಹಾಸದೊಳಗೆ ಅವಿತುಕೊಳ್ಳುತ್ತವೆ. ಅದರ ಸೃಷ್ಟಿಗೆ ಕಾರಣನಾದ ವ್ಯಕ್ತಿ ಎಂದೂ ಅಜ್ಞಾತನಾಗಿರುತ್ತಾನೆ. ಕಾಲಾಂತರದಲ್ಲಿ  ಮತ್ತೆ ಇತಿಹಾಸವನ್ನು ಕೆದಕಿದಾಗ ವ್ಯಕ್ತಿಯೂ, ಕಾಲಘಟ್ಟವೂ ಮಹತ್ತನ್ನು ಪಡೆಯುತ್ತದೆ.
           ಮಾಸ್ತರ್ ಕೀರಿಕ್ಕಾಡು ವಿಷ್ಣು ಭಟ್ಟರು ಬಾಳಿದ ಕಾಲಘಟ್ಟದಲ್ಲಿ ಸೌಕರ್ಯಗಳಿರಲಿಲ್ಲ. ಬೆರಳ ತುದಿಯಲ್ಲಿ ಪ್ರಪಂಚವನ್ನು ಕಾಣುವ ವ್ಯವಸ್ಥೆಯಿರಲಿಲ್ಲ. ಆದರೆ ತನ್ನ ಬೌದ್ಧಿಕ ಗಟ್ಟಿತನದಿಂದ ಹೊಸ ಪ್ರಪಂಚವೊಂದನ್ನು ಹಳ್ಳಿಯಲ್ಲಿ ಸೃಷ್ಟಿಸುವ ಸಾಮಥ್ರ್ಯ ಅವರಿಗಿತ್ತು. ಹಾಗಾಗಿಯೇ ಬದುಕು, ಬಾಳಿದ ದಿನಮಾನಗಳು, ರಚಿತವಾದ ಸಾಹಿತ್ಯಗಳು ನಿತ್ಯ ನೂತನ.  
            ಕಾಸರಗೋಡು-ಕರ್ನಾಾಟಕದ ಸಂಧಿಗ್ರಾಮ ದೇಲಂಪಾಡಿ. ಇಲ್ಲಿನ ಬನಾರಿ ಅಂದು ತೀರಾ ಹಳ್ಳಿ. ಈಗಲೂ ಕೂಡಾ. ಬದುಕನ್ನು ಕಟ್ಟಿಕೊಳ್ಳಲು ಆಗಮಿಸಿದ ವಿಷ್ಣು ಭಟ್ಟರು ತನ್ನ ಬದುಕಿನೊಂದಿಗೆ ಹಳ್ಳಿಯನ್ನು ಕಟ್ಟಿದರು. ಅಕ್ಷರ ವಂಚಿತ ಮನಸ್ಸುಗಳಲ್ಲಿ ಅಕ್ಷರಗಳನ್ನು ಕೆತ್ತಿದರು. ಅಕ್ಷರಕ್ಕೆ ಗೌರವ ತಂದರು.  ಸಂಸ್ಕಾರವನ್ನು ಅನುಷ್ಠಾನಿಸುತ್ತಾ ಕಲಿಸಿದರು.
            ಮನೆಯಲ್ಲೇ ಯಕ್ಷಗಾನದ ಕಲಿಕೆ. ಜತೆಗೆ ಆಟ, ಊಟ. ಬಿಡುವಿನಲ್ಲಿ ದುಡಿಮೆ. ಪೌರಾಣಿಕ ವಿಚಾರಗಳ ಪ್ರಸ್ತುತಿಯಲ್ಲಿ ಪಾತ್ರಗಳ ಗುಣ-ಸ್ವಭಾವಗಳ ದರ್ಶನ. ರಾತ್ರಿ, ಹಗಲೆನ್ನದೆ ಶಿಷ್ಯರನ್ನು ರೂಪಿಸುವ ಕಾಯಕ. ವಿಕಾರಗಳಿಗೆ ಆಕಾರ ಕೊಡುವ ಬದಲು, ಆಕಾರದ ಮೂಲಕ ವಿಕಾರಗಳನ್ನು ದೂರವಿಡುವ ಕಠಿಣ ಅಲಿಖಿತ ಪಠ್ಯ. ತಪ್ಪಿದಾಗ ಸಾತ್ವಿಕ ಶಿಕ್ಷೆ. ಸಾಲದಾದಾಗ ತನಗೆ ತಾನೇ 'ಉಪವಾಸ'ದ ಮೂಲಕ ಶಿಕ್ಷೆಯನ್ನು ಆವಾಹಿಸಿಕೊಳ್ಳುತ್ತಿದ್ದರು. ಪರಿಣಾಮ, ಮಣ್ಣಿನ ಮುದ್ದೆಗಳಲ್ಲಿ ಸಂಚಲನ. ರೂಪು ಕಂಡುಕೊಳ್ಳಲು ಸ್ವ-ಯತ್ನ. 
             ಯಕ್ಷಗಾನದ ಒಂದೊಂದು ಪಾತ್ರಗಳನ್ನು ಶಿಷ್ಯರೊಳಗೆ ಕಂಡರು. ಅವುಗಳು ನಲಿಯುವುದನ್ನು,  ಮಾತನಾಡುವುದನ್ನು ನೋಡಿದರು. ಉರುಹೊಡೆದ ವಾಕ್ಯಗಳಲ್ಲಿ ಜೀವಂತಿಕೆ ಗುರುತಿಸಿದರು. ಪಾತ್ರಗಳು ಸ್ವರ ಎಬ್ಬಿಸಿದರೆ ಸಾಲದು, ಅವು ಕುಣಿದು ಮಾತನಾಡಬೇಕು. ಇದಕ್ಕಾಗಿ ನಾಟ್ಯ ತರಗತಿಗಳ ಆಯೋಜನೆ. ಯಕ್ಷಗಾನ ನಾಟಕ ತಂಡದ ಮೂಲಕ ಪ್ರದರ್ಶನ. ಐದರ ದಶಕದ ಸುಮಾರಿಗೆ ಸುಪುಷ್ಟವಾದ ಯಕ್ಷಗಾನ ತಂಡವು ಹೊರ ಊರುಗಳಲ್ಲಿಯೂ ಪ್ರದರ್ಶನ ನೀಡಿತು.
               ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘವು ಕೀರಿಕ್ಕಾಡು ಮಾಸ್ತರರ ಮೆದುಳಮರಿ. ಇದು ಮನಸ್ಸುಗಳನ್ನು ಪುನರ್ ಸೃಷ್ಟಿಸಿದ ತಾಣ. ತನ್ನೆಲ್ಲಾ ಸಾಹಿತ್ಯ ರಚನೆಗಳಿಗೆ ಸ್ಫೂರ್ತಿಯನ್ನು ಪಡೆದುಕೊಂಡ ನೆಲ. ಎಪ್ಪತ್ತಕ್ಕೂ ಮಿಕ್ಕಿ ಪ್ರಸಂಗಗಳು ರಚನೆಯಾಗುವುದರ ಹಿಂದೆ ಸಂಘದ ಚೆಂಡೆ-ಮದ್ದಳೆಗಳ ಸದ್ದಿದೆ. ಹಳ್ಳಿಗೆ ಮರುಜೀವ ಕೊಟ್ಟ ಸಂತೃಪ್ತಿಯಿದೆ. ಯಕ್ಷಗಾನ ಅರ್ಥಧಾರಿಯಾಗಿ ನಾಡಿನಲ್ಲೆಲ್ಲಾ ಓಡಾಡಿದ ಗಟ್ಟಿ ಅನುಭವವಿದೆ. ಹಲವು ವಿದ್ವಾಂಸರೊಂದಿಗಿನ ಒಡನಾಟದ ನಂಟಿದೆ.
               ಒಬ್ಬ ಕಲಾವಿದನಾಗಿ ತನ್ನ ಬದುಕನ್ನು ಕಲಾತ್ಮಕವನ್ನಾಗಿ ಮಾಡಿಕೊಂಡರು.  ಅದರ ನೆರಳಿನಡಿ ಹಳ್ಳಿಯ ಜೀವನಕ್ಕೂ ಕಲಾಸ್ಪರ್ಶ ಮಾಡಿದರು. ಸರಳವಾಗಿದ್ದು, ಸಹಜ ಜೀವನವನ್ನು ಒಪ್ಪಿಕೊಂಡರು, ಅಪ್ಪಿಕೊಂಡರು. ತನ್ನ ಬೌದ್ಧಿಕ ಪ್ರಖರತೆ, ವ್ಯಕ್ತಿತ್ವಗಳಿಂದಾಗಿ ಬನಾರಿಯು ನೂರಾರು ವಿದ್ವಾಂಸರನ್ನು ಸೆಳೆಯಿತು.  ಸಾಹಿತ್ಯ ಸುಧೆಯನ್ನು, ಕಲಾಮೃತವನ್ನು ಸವಿಯಲು ಕಾಯುವ ಮನಸ್ಸುಗಳಿಗಂದು ಹಬ್ಬ.
               ಪ್ರಸ್ತುತ ಕೀರಿಕ್ಕಾಡು ಜನ್ಮಶತಮಾನೋತ್ಸವ ವರ್ಷ. ವನಮಾಲ ಕೇಶವ ಭಟ್, ಡಾ.ರಮಾನಂದ ಬನಾರಿ, ಡಾ.ವಿಶ್ವವಿನೋದ ಬನಾರಿ.. ಕೀರಿಕ್ಕಾಡು ವಿಷ್ಣು ಭಟ್ಟರ ಚಿರಂಜೀವಿಗಳು. ತೀರ್ಥರೂಪರ ಯಕ್ಷ ಕಾಣ್ಕೆಗೆ ನಿರಂತರ ಬೆಳಕನ್ನೊಡ್ಡುವವರು. ಆ ಬೆಳಕು ಬನಾರಿಗೆ ಸೀಮಿತವಾಗಬಾರದು, ನಾಲ್ದೆಸೆ ಹಬ್ಬಬೇಕೆನ್ನುವ ದೂರನಿರೀಕ್ಷೆ. ಕೀರಿಕ್ಕಾಡು ಜನ್ಮಶತಮಾನೋತ್ಸವ ಸಂಭ್ರಮವು ಕನ್ನಾಡಿದ ವಿವಿದೆಡೆ ಆಚರಿಸಲ್ಪಟ್ಟಿದೆ.
ದಾಸರಬೈಲು ಚನಿಯ ನಾಯ್ಕ್ : 
ಯಕ್ಷಗಾನ ಕ್ಷೇತ್ರದಲ್ಲಿ 'ದಾಸರಬೈಲು' ಎಂದೇ ಖ್ಯಾತಿ. ಸುಳ್ಯ ತಾಲೂಕಿನ ಮರ್ಕಂಜದವರು. ಜಾತಿಯ ಬಲವಿಲ್ಲ. ಆರ್ಥಿಕವಾಗಿ ಸದೃಢರಲ್ಲ. ಸ್ವಾಭಿಮಾನದ ಬದುಕು.  ಜೀವನದ ಬಹುಪಾಲು ಕಾಲ್ನಡಿಗೆಯ ಪಯಣ. ಶಾರೀರ ಬಲದಿಂದಲೇ ಯಕ್ಷರಾತ್ರಿಗಳನ್ನು ಸಾಕ್ಷಾತ್ಕರಿಸಿದ ಭಾಗವತ ಚನಿಯರು ಎಲ್ಲಾ ಜಾತಿ, ವರ್ಗ, ಅಂತಸ್ತುಗಳನ್ನು ಮೀರಿ ನಿಂತು ಮನೆ-ಮನಗಳನ್ನು ಗೆದ್ದವರು.
              ಭಾಗವತ ಅಜ್ಜನಗದ್ದೆ ಗಣಪಯ್ಯ ಭಾಗವತರ ಕರಕಮಲಸಂಜಾತ. ಕಡತೋಕ ಮಂಜುನಾಥ ಭಾಗವತರ ಒಡನಾಡಿ. ಶ್ರೀ ಧರ್ಮಸ್ಥಳ ಮೇಳದಲ್ಲಿ ಅಲ್ಪ ತಿರುಗಾಟ. ಬಳಿಕ ಹಲವು ಮೇಳಗಳಲ್ಲಿ ವ್ಯವಸಾಯ. ಭಾಗವತ ಎಂದಾಕ್ಷಣ ಚನಿಯರೇ ನೆನಪಾಗುವಷ್ಟು ಊರಿದ ಭಾಗವತಿಕೆಯ ಛಾಪು. ಜಾಗಟೆ ಹಿಡಿದು ರಂಗದಲ್ಲಿ ಕುಳಿತಾಕ್ಷಣ ಪ್ರಕಟವಾಗುವ ಅವ್ಯಕ್ತ ರಂಗಶಿಸ್ತು.  ಪಾತ್ರವೇ ಪದ್ಯವಾಗುವ  ಅದ್ಭುತ ಕಂಠ. ಸ್ಪಷ್ಟ-ನಿಖರ ಶಬ್ದಗಳು. ಪದ್ಯಗಳ ಮಟ್ಟುಗಳ ಖಚಿತ ಜ್ಞಾನ.  ಹಾಡಿದಷ್ಟೂ ದಿವಸ ಪೌರಾಣಿಕ ಪ್ರಸಂಗಗಳ ಪದ್ಯಗಳು ಎಲ್ಲೂ ಮರುಗಿಲ್ಲ! ಪ್ರಜ್ಞೆ ತಪ್ಪಿಲ್ಲ!
                ಸರಳ ಬದುಕು. ಸುಂದರ ವ್ಯಕ್ತಿತ್ವ. ಮಿತ ಭಾಷಿ. ಇತರರು ಗೇಲಿ ಮಾಡಿದರೂ ಹಚ್ಚಿಕೊಳ್ಳದ ಸೌಜನ್ಯ. ಸಂಸಾರವನ್ನು ಮರೆಯದ ಗೃಹಸ್ಥ. ಹಲವು ಮನಸ್ಸುಗಳ ಒಡನಾಟ. ಬಡತನವೇ ಕಾರಣವಾಗಿ ಆಕಾರ-ವಿಕಾರಗಳನ್ನು ಸಮಚಿತ್ತದಿಂದ ಸ್ವೀಕರಿಸಿದ ಯಕ್ಷ ಶ್ರೀಮಂತ. ಆಟ-ಕೂಟಗಳಲ್ಲಿ ಲಭ್ಯವಾದ ಸಂಭಾವನೆಯನ್ನು ಮನೆಗೆ ಹೋದ ಬಳಿಕವೇ ಎಣಿಸುವ ಬದ್ಧತೆ. ಸಂಭಾವನೆಗಾಗಿ ಎಂದೂ ಕಾಲ್ಕೆರೆಯದ ಸ್ವ-ನಿಯಂತ್ರಣ.  ಒಬ್ಬ ಕಲಾವಿದನಿಗೆ ಇಷ್ಟು ಗುಣಗಳು ಸಾಕಲ್ವಾ.                                                                                                      
                ಹಳ್ಳಿಯ ಸೊಬಗನ್ನು ನಾಡಿಗೆ ತೋರಿಸಿದ ಕಲಾ ಪ್ರಖರತೆಗಳಿಗೆ ನವೆಂಬರ್ 1, 2014, ಶನಿವಾರ, ಅಪರಾಹ್ನ ಮರ್ಕಂಜ-ರೆಂಜಾಳ ದೇವಸ್ಥಾನದಲ್ಲಿ ನಮನ. ಹಿರಿಯ ಚೇತನಗಳ ಸ್ಮರಣೆ.

No comments:

Post a Comment