Sunday, July 19, 2015

ಸ್ತ್ರೀಪಾತ್ರಕ್ಕೆ ರಂಗಭಾಷೆ ನೀಡಿದ ಕಲಾ ಸಂಶೋಧಕ

 ಪಾತಾಳರ ಶ್ರಮದಿಂದ ರೂಪುಗೊಂಡ ವೇಷವಿನ್ಯಾಸದ ಮಾದರಿ - 
ಪುತ್ತೂರು ಬೊಳ್ವಾರಿನ ಎಂ.ಎನ್. (ದಿ.) ಅವರ ಕೈಚಳಕ.
 ವಯ್ಯಾರಿ ಪಾತಾಳ


           
              ಪಾತಾಳ ವೆಂಕಟ್ರಮಣ ಭಟ್ಟರನ್ನು ಡಿ.ವಿ.ಜಿ.ಯವರ 'ಅಂತಃಪುರ ಗೀತೆ' ಸೆಳೆದ (1958) ಕಾಲಘಟ್ಟ. ಅಲ್ಲಿನ ವಿಭಿನ್ನ ಪಾತ್ರಗಳನ್ನು ಯಕ್ಷಗಾನ ಕಣ್ಣಿಂದ ನೋಡಿದರು. ತನ್ನ ಪಾತ್ರವನ್ನು ಆವಾಹಿಸಿಕೊಂಡರು. ಯಕ್ಷಗಾನದ ಸ್ತ್ರೀವೇಷಕ್ಕೆ ಪ್ರತ್ಯೇಕವಾದ ನಿಲುವು, ನಡೆಗಳು ಬೇಕೆಂಬುದು ಸ್ಪಷ್ಟವಾಯಿತು. ಮನೆಯ ಹೆಣ್ಮಕ್ಕಳಂತೆ ಕಂಡು ಬರುತ್ತಿದ್ದ ಪಾತ್ರಗಳನ್ನು ಬದಲಾಯಿಸಬೇಕೆಂಬ ನಿರ್ಧಾಾರ.  ಡಾ. ಶಿವರಾಮ ಕಾರಂತರ 'ಯಕ್ಷಗಾನ ಬ್ಯಾಲೆ'ಯಿಂದಲೂ ಪ್ರೇರಿತ.
            ಸ್ತ್ರೀ ವೇಷದ ವೇಷಭೂಷಣಗಳ ತಯಾರಿಗೆ ಮೊದಲಾದ್ಯತೆ. ಕಣ್ಣಮುಂದೆ ಮಾದರಿಗಳಿರಲಿಲ್ಲ. ಹಿರಿಯರನ್ನು ಮಾತನಾಡಿಸಿದರೆ ಪರಂಪರೆಯನ್ನು ಮುಂದಿಡುತ್ತಾರೆ. ಹಾಗಿದ್ದರೆ ಸ್ತ್ರೀ ಪಾತ್ರಕ್ಕೆ ಯಾಕೆ ಪರಂಪರೆ ಇಲ್ಲ? ಯಾಕದು ಅವಗಣನೆಯಾಯಿತು? ಪುರುಷ ಪಾತ್ರಗಳ ಸ್ವಭಾವಕ್ಕೆ ತಕ್ಕಂತೆ, ವರ್ಣ-ವೇಷಗಳ ವ್ಯತ್ಯಾಸದಂತೆ ಸ್ತ್ರೀಪಾತ್ರಗಳಿಗೂ ಗುರುತರ ವೇಷಭೂಷಣ ಬೇಡವೇ? - ಬಿಸಿರಕ್ತದ ಪಾತಾಳರೊಳಗೆ ಎದ್ದ ಬಿಸಿ ಚಿಂತನೆಗಳು.
           ಅಂತಃಪುರ ಗೀತೆಯಲ್ಲಿ ಪ್ರಸ್ತುತಿಯಾಗಿರುವ ಶಿಲ್ಪಗಳು ಬೇಲೂರಿನ ಶಿಲಾಬಾಲಿಕೆಯನ್ನು ಹೋಲುತ್ತಿದ್ದುವು. ಅಷ್ಟಿಷ್ಟು ಕೂಡಿಟ್ಟ ಹಣದೊಂದಿಗೆ ಬೇಲೂರಿಗೆ ಪಯಣ. ಹೊಸ ಊರು. ಯಾರದ್ದೇ ಪರಿಚಯವಿಲ್ಲ. ಮನದಲ್ಲಿ ಸ್ಪಷ್ಟ ನಿಲುವಿತ್ತು, ಆದರೆ ರೂಪವಿರಲಿಲ್ಲ. ಶಿಲೆಗಳ ಅಂದ, ಬಾಗುಬಳುಕುಗಳನ್ನು ಮನನ ಮಾಡಿದರು. ಮನಃತುಂಬಿಕೊಂಡರು. ಶಿಲೆಯು ತೊಟ್ಟ ಆಭರಣಗಳು ಆಳಂಗದ ಅಳತೆಗಿಂತ ದೊಡ್ಡದಾಗಿದ್ದುವು. ಅದು ಶಿಲ್ಪ ಸೌಂದರ್ಯವಲ್ವಾ. ಯಕ್ಷಗಾನದ ವೇಷದ ಅಳತೆಗೆ ತಕ್ಕಂತೆ ಕಿರಿದುಗೊಳಿಸಿದರಾಯಿತು, ಬೇಲೂರಿನಲ್ಲಿ ಪಾತಾಳರ ಉದ್ದೇಶವನ್ನರಿತ ಕಲಾವಿದ ಲಕ್ಷ್ಮಣ ಆಚಾರ್ ಸಲಹೆ..
               ಡಾಬು, ತೋಳುಕಟ್ಟು, ಕೊರಳ ಆಭರಣಗಳು, ಶಿರೋಭೂಷಣಗಳ ಮಾದರಿಗಳ ನೀಲನಕ್ಷೆ ಸಿದ್ಧವಾಯಿತು. ಪರಿಚಿತ ಕಲಾವಿದ ಬ್ರಹ್ಮಾವರದ ಸುಬ್ಬಣ್ಣ ಭಟ್ಟರಲ್ಲಿ ವಿನ್ಯಾಸಗಳನ್ನು ತಯಾರಿಸಿಕೊಡುವಂತೆ ಮನವಿ.  ವಾರಗಟ್ಟಲೆ ನಿಂತು ಅಭ್ಯಾಸ ಮಾಡುತ್ತಿದ್ದಾಗ ಶಿಲ್ಪಗಳ ಅಂಗಭಂಗಿಗಳು, ದೇಹದ ಬಾಗುಗಳು, ಕಣ್ಣಿನ ನೋಟಗಳು ಪಾತಾಳರನ್ನು ಸೆಳೆದಿದ್ದುವು. ಮನೆಗೆ ಬಂದು  ಏಕಾಂತದಲ್ಲಿ ಅಭ್ಯಾಸ ಮಾಡಿದರು. ನನ್ನ ಆಸಕ್ತಿಯು ಆಗಿನ ಪೂಜ್ಯ ಖಾವಂದರಿಗೆ ಖುಷಿಯಾಗಿತ್ತು. ಎಲ್ಲಾ ವೆಚ್ಚಗಳನ್ನು ಅವರೇ ಭರಿಸಿದ್ದರು. ಪ್ರವಾಸಕ್ಕೆ ಹೋಗುವಾಗಲೆಲ್ಲಾ ನನ್ನ ವೇಷಗಳಿಗೆ ಹೊಂದುವ ಪರಿಕರಗಳು ಸಿಕ್ಕರೆ ತಂದು ಕೊಡುತ್ತಿದ್ದರು, ಆ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.
               ವೇಷಭೂಷಣಕ್ಕೇನೋ ಆಯ ಬಂತು. ಮುಖವರ್ಣಿಕೆಯೂ ಬದಲಾಗಬೇಡವೇ? ಅದು  ಚಂದವಾದರೆ ಮಾತ್ರ ವೇಷ ಆಕರ್ಷಕ. ವೇಷಭೂಷಣಗಳಿಗೆ ಹೊಂದುತ್ತದೆ. ಈ ಯೋಚನೆಯಲ್ಲಿದ್ದಾಗ ವಿಟ್ಲದ ಬಾಬು ಮಾಸ್ತರರ ಬಣ್ಣದ ಬಿನ್ನಾಣಗಳು ಸೆಳೆದುವು. ಅವರು ಪರದೆ ವಿನ್ಯಾಸದಲ್ಲಿ ಪರಿಣತ. ಪಾತಾಳರ ಕಲಿಕೆಯ ಹಸಿವನ್ನು ಅರಿತರು. ಕಲಾವಿದನೊಳಗೆ ಹುದುಗಿದ್ದ ಕಲೆಯ ಸ್ಫುರಣದಲ್ಲಿ ಭವಿಷ್ಯವನ್ನು ಕಂಡರು.
                  ಬಣ್ಣಗಳ ಸಂಯೋಜನೆಯೂ ಒಂದು ವಿಜ್ಞಾನ, ಜತೆಗಿದ್ದು ಕಲಿಯಬೇಕಾದ ಕಾಯಕ. ಪಾತಾಳರು ಬಾಬು ಮಾಸ್ತರರೊಂದಿಗಿದ್ದು ವಿವಿಧ ಬಣ್ಣಗಳ ಸಂಯೋಗವನ್ನು ಕಲಿಯುತ್ತಾ ಬಂದರು. ಹಾಗಾಗಿ ನೋಡಿ, ಪಾತಾಳರ ವೇಷ ಸಿದ್ಧವಾಗಲು ಏನಿಲ್ಲವೆಂದರೂ ಮೂರರಿಂದ ನಾಲ್ಕು ಗಂಟೆ ಬೇಕು! ಧರ್ಮಸ್ಥಳ ಮೇಳದ ಆಗಿನ ಅವರ ಒಡನಾಡಿಗಳು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ.
               ಮೇನಕೆ, ಮಾಯಾ ಶೂರ್ಪನಖಿ, ಮಾಯಾ ಅಜಮುಖಿ, ಮೋಹಿನಿ... ಪಾತ್ರಗಳೆಲ್ಲಾ ಶೃಂಗಾರ ಸ್ವಭಾವದವು. ಗುಣಗಳಲ್ಲಿ ವಿಭಿನ್ನ. ಬಣ್ಣಗಳಿಗೂ ಭಾಷೆಯಿದೆ, ಭಾವವಿದೆ. ಮುಖವರ್ಣಿಕೆಗಳಲ್ಲಿ ವಿವಿಧ ವರ್ಣಗಳ ಟಚ್ಅಪ್ ಕೊಡುವುದರಿಂದ ಆಯಾಯ ಪಾತ್ರಗಳ ಗುಣ ಅಭಿವ್ಯಕ್ತಿಯಲ್ಲಿ ಮಾತ್ರವಲ್ಲ, ಮೇಕಪ್ಪಿನಲ್ಲೂ ಕಾಣತೊಡಗಿತು. ಲಾಸ್ಯ, ಲಯಗಳು ರಂಗದಲ್ಲಿ ಅಭಿವ್ಯಕ್ತಿಸುತ್ತಾ ಹೋದಂತೆ ಹಿಡಿತಕ್ಕೆ ಬಂತು. ಮಂಗಳೂರಿನ ಮಾಸ್ಟರ್ ವಿಠಲ ಶೆಟ್ಟರಲ್ಲಿ ಕಲಿತ ಭರತನಾಟ್ಯದ ಹೆಜ್ಜೆಗಳು ಯಕ್ಷಗಾನದ ಹೆಜ್ಜೆಗೆ ಸುಭಗತನವನ್ನು ತಂದಿತ್ತಿತು.
               ಪಾತಾಳರ ಅನುಭವ ನೋಡಿ, "ಗೌರವದ ಪಾತ್ರಗಳಿಗೆ ಹುಬ್ಬಿನ ಮೇಲೆ ಮಕರಿಕಾ ಪಾತ್ರ ಬಿಡಿಸುತ್ತಿದ್ದೆ. ತಿಲಕವು ಅವರವರ ಮುಖದ ಆಕಾರಕ್ಕೆ ತಕ್ಕಂತಿರಬೇಕು. ಗರತಿ ಪಾತ್ರಗಳಿಗೆ ಉರುಟು ತಿಲಕ, ಗೌರಿ ಪಾತ್ರಕ್ಕೆ ಸಣ್ಣ ಅರ್ಧಚಂದ್ರ, ದೇವಿ ಪಾತ್ರಕ್ಕೆ ಹಣೆ ತುಂಬ ಬರುವಂತೆ ಅರ್ಧಚಂದ್ರ. ಮುಖದಲ್ಲಿ ಎಷ್ಟು ಕುಸುರಿಯೋ, ಅಷ್ಟೇ ಅಲಂಕಾರಕ್ಕೂ ಆದ್ಯತೆ. ಈ ಎಲ್ಲಾ ವ್ಯವಸ್ಥೆ(ಅವಸ್ಥೆ)ಗಳನ್ನು ನೋಡಿ ಸಹ ಕಲಾವಿದರಲ್ಲಿ ಕೆಲವರು ಬೆನ್ನು ತಟ್ಟಿದರು. ಗೇಲಿ ಮಾಡಿದವರೇ ಅಧಿಕ. ಅವರಿಂದ ನಾನು ಬೆಳೆಯುವುದಕ್ಕೆ ಸಾಧ್ಯವಾಯಿತು."
               ಪಾತಾಳರ ಪ್ರಯೋಗಗಳಿಗೆ ಶ್ರೀ ಧರ್ಮಸ್ಥಳ ಮೇಳವು ಪ್ರೋತ್ಸಾಹ ನೀಡಿತು. ಹಿಮ್ಮೇಳ ಕಲಾವಿದರು ಬೆಂಬಲಿಸಿದರು. ಯಾವಾಗ ಮುಖವರ್ಣಿಕೆ, ವೇಷಭೂಷಣಕ್ಕೆ ಹೊಸ ವಿನ್ಯಾಸ ಕೊಟ್ಟರೋ ಅಲ್ಲಿಂದ ಶೃಂಗಾರ ವೇಷ ಹೊಸ ಹಾದಿ ಹಿಡಿಯಿತು. ಥೇಟ್ ಶಿಲ್ಪವನ್ನು ಹೋಲುವ ಪಾತ್ರಗಳು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದುವು. ಪಾತ್ರಧಾರಿ ಗಂಡೋ, ಹೆಣ್ಣೋ ಎಂಬಷ್ಟು ಮಟ್ಟಿಗೆ ಚರ್ಚೆಗೆ ಗ್ರಾಸವಾಯಿತು. ಶ್ರೀ ಧರ್ಮಸ್ಥಳ ಮೇಳದಿಂದ ನಿವೃತ್ತನಾಗುವ ತನಕ ತನ್ನದೇ ವಿನ್ಯಾಸದ ವೇಷಭೂಷಣಗಳನ್ನು ತೊಡುತ್ತಿದ್ದರು.
                ಈಚೆಗೆ ಮಾತಿಗೆ ಸಿಕ್ಕರು, "ಅನುಕರಣೆಯ ಯುಗದಲ್ಲಿದ್ದೇವೆ. ಒಬ್ಬ ಕಲಾವಿದ ರಂಗದಲ್ಲಿ ಕುಣಿದರೆ ಇನ್ನೊಬ್ಬ ಅನುಕರಿಸುತ್ತಾನೆ. ಜೀವನದಲ್ಲಿ ಹೊಸತು ಏನು ಬಂದರೂ ಅದು ತಕ್ಷಣ ಅನುಕರಿಸಲ್ಪಡುತ್ತದೆ. ನಕಲಿಯ ಕಾಲ ನೋಡಿ. ಅದರೆ ನಾನಂದು ಕಷ್ಟ ಪಟ್ಟು ಮಾಡಿದ ಸ್ತ್ರೀ ಪಾತ್ರಗಳ ವೇಷಭೂಷಣಗಳು ಇವೆಯಲ್ಲಾ, ಅದು ಮಾತ್ರ ಅನುಕರಣೆಯಾಗಿಲ್ಲ. ನಕಲಿಯಾಗಿಲ್ಲ," ಪಾತಾಳರು ವಿನೋದಕ್ಕೆ ಆಡಿದರೂ ಆ ಮಾತಿನ ಹಿಂದೆ ನೋವಿತ್ತು. ಮೇಳದಿಂದ ನಿವೃತ್ತನಾಗಿ ಮೂವತ್ತನಾಲ್ಕು ವರುಷ ಸಂದರೂ ಆ ನೋವು ಆಗಾಗ್ಗೆ ಚಿಗುರಿ ವಿಷಾದದ ನೆರಳನ್ನು ಬೀರುತ್ತಿದೆ.
                   ಪಾತಾಳರಿಗೆ ಯಕ್ಷಗಾನವು ಸಾಕಷ್ಟು ಪ್ರಸಿದ್ಧಿಯನ್ನು ತಂದಿದೆ. ಪುರಸ್ಕಾರವನ್ನು ನೀಡಿದೆ. ಅದರ ಸಿಹಿ ನೆನಪಿಗೆ ತನ್ನ ಜೀವಿತದಲ್ಲೇ ಕಲಾವಿದರನ್ನು ಸಂಮಾನಿಸುವ ಆಶೆ. ಅದಕ್ಕಾಗಿ 'ಪಾತಾಳ ಯಕ್ಷ ಪ್ರತಿಷ್ಠಾನ-ಎಡನೀರು' ರೂಪೀಕರಣ. ಹತ್ತು ವರುಷದಿಂದ ಪ್ರಶಸ್ತಿ ಪ್ರದಾನ ಜರಗುತ್ತಿದೆ. ಎಲ್ಲಾ ಕಾರ್ಯಕ್ರಮಗಳಲ್ಲೂ ಪಾತಾಳರು ಭಾಗಿಯಾಗಿ ಖುಷಿಯನ್ನು ಅನುಭವಿಸಿದ್ದರು. ರಾಜ್ಯೋತ್ಸವ ಪುರಸ್ಕಾರವೂ ಪ್ರಾಪ್ತವಾಗಿದೆ.
                ಎಂಭತ್ತ ಮೂರರ ಪಾತಾಳ ವೆಂಕಟ್ರಮಣ ಭಟ್ಟರಿಗೆ ಈಗ ಬೋಳೂರು ದೋಗ್ರ ಪೂಜಾರಿ ನೆನಪಿನ ಪ್ರಶಸ್ತಿಯ ಬಾಗಿನ. 19-7-2015, ಮಂಗಳೂರು ವಿವಿಯ 'ರವೀಂದ್ರ ಕಲಾ ಕೇಂದ್ರ'ದಲ್ಲಿ ಸಂಜೆ 4-30ಕ್ಕೆ ಪ್ರಶಸ್ತಿ ಪ್ರದಾನ.
(ಪ್ರಜಾವಾಣಿಯ-ಕರಾವಳಿ-18-7-2015 ಪ್ರಕಟ)

No comments:

Post a Comment